ಬಯಲು ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ.
ಆ ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ,
ಮುಂದೆ ಸರೋವರವ ಕಂಡೆ.
ಆ ಸರೋವರವ ಒಳಹೊಕ್ಕು ನೋಡಲು,
ಮುಂದೆ ಗಟ್ಟಿ ಬೆಟ್ಟಗಳು
ಹೋಗಬಾರದ ಆನೆಗಳು ಅಡ್ಡಲಾದವು.
ಕೋಣ ಮುಂದುವರಿದವು.
ನಾಯಿಗಳಟ್ಟಿಕೊಂಡು ಬಂದವು.
ಇರುಹು ಕಚ್ಚಿಕೊಂಡು ಬಿಡವು.
ಇದ ಕಂಡು ನಾ ಹೆದರಿಕೊಂಡು,
ಮನವೆಂಬ ಅರಸನ ಹಿಡಿದು,
ಕಟ್ಟಿಗೆ ತಂದು, ಗೊತ್ತಿಗೆ ನಿಲಿಸಿ,
ಆ ಅರಸನ ಶಕ್ತಿವಿಡಿದು,
ಆ ಸರೋವರದೊಳಗಣ ಗಟ್ಟಬೆಟ್ಟವನೆ ದಾಂಟಿ,
ಅಷ್ಟಮದವನೆ ಹಿಟ್ಟು ಗುಟ್ಟಿ,
ಕೋಡಗನ ಕೊರಳ ಮುರಿದು,
ನಾಯಿಗಳನೆ ಕೊಂದು,
ಈ ಇರುಹಿನ ಗೂಡಿಗೆ ಕಿಚ್ಚನಿಕ್ಕಿ
ನಿರ್ಮಳವಾದ ದೇಹದಲ್ಲಿ ನಿಂದು,
ಮುಂದುವರಿದು ನೋಡಲು
ಇಟ್ಟೆಡೆಯ ಬಾಗಿಲ ಕಂಡೆ.
ಆ ಇಟ್ಟೆಡೆಯ ಬಾಗಿಲ ಹೊಕ್ಕು,
ಹಿತ್ತಿಲಬಾಗಿಲ ಕದವ ತೆಗೆದು
ನೋಡಲು, ಬಟ್ಟಬಯಲಾಯಿತ್ತು.
ಆ ಬಟ್ಟಬಯಲಲ್ಲಿ ನಿಂದು,
ನಾನೆತ್ತ ಹೋದೆನೆಂದರಿಯೆನಯ್ಯ
ನಿಮ್ಮ ಪಾದವಿಡಿದು,
ಅಪ್ಪಣಪ್ರಿಯ ಚನ್ನಬಸವಣ್ಣಾ.
*****