ಕಾಸು ಬರಿಸಿದ ಮರೆವಿನ ರೋಗಕ್ಕೆ ಮದ್ದುಂಟೇ?

ಕೃಷಿ ಬಿಟ್ಟನ್ನವನು ಕೊಂಡುಣುವ ಹಂಗ್ಯಾಕೋ ಖುಷಿಯೊಳುಂಡನ್ನದ ಶಕುತಿ ಎಮ್ಮೊಳಡಗಿರಲು ಕಹಿ ಮದ್ದು ವೈದ್ಯರಾಕೆಮಗೆ ರೋಗಿಯಾಗುವ ಮೊದಲು ಕಷ್ಟದೋದಿನ ಶಾಲೆಗಳಾಕೆಮ್ಮ ಮಕ್ಕಳಿಗೆ ಉಣಲರಿವ ಮೊದಲು ಕಷ್ಟ ಸುಖ ವ್ಯತ್ಯಾಸವರಿಯದೀ ರೋಗವನು ಅಲ್ಜಿಮಾರೆನ್ನುವರು - ವಿಜ್ಞಾನೇಶ್ವರಾ *****

ಇನ್ನಾರೋ ದುಡಿದುಣಿಸುವನ್ನ ಕೆಡುಕೆನಬೇಡವೇ?

ಅನುನಯದೊಳಾಲೋಚಿಸಲು ಅರಿತೀತೆಮ್ಮ ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ ಅನಾರೋಗ್ಯವನಾರಾದೊಡಂ ಬೇಕೆನಲುಂಟೇ? ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ - ವಿಜ್ಞಾನೇಶ್ವರಾ *****

ವರವಪ್ಪ ಹಲಸಿರಲು ಊರಿಗೆಂತು ಬರವಕ್ಕು?

ತರತರದಡುಗೆ ಮಾಡುವ ವರಶಕ್ತಿಯೆಮಗಿರಲು ಬರವೆಂದೇನು ಬಡ ಬಡಿಸುವುದೋ ಬೋರಿನಾಳದಿ ನೀರೆತ್ತಿ ಸೂರಪ್ಪ ಮರಗಿಡವನಳಿಸುವುದೋ? ಊರಿಗೂರೇ ಮಧುಮೇಹವಪ್ಪಂತಾ ಕಬ್ಬನಿಕ್ಕುವುದೋ? ಬರವೆನದೆಲ್ಲೆಡೆ ಬೆಳೆವ ಹಲಸಿನಡುಗೆಲ್ಲ ರೋಗಕೆ ಮದ್ದೋ- ವಿಜ್ಞಾನೇಶ್ವರಾ *****

ತಾನಾಗಿರ್‍ಪ ದರ್‍ಪ ಸಾಲದೇ? ನಾವಾಗಿ ಬೆಳೆಸಬೇಕೇ?

ವನ್ಯದ ಹಿತಮಿತವನರಿತಲ್ಲಲ್ಲೇ ಶೂಲದ ಮೊನೆಯೊಳಾಡಿದ ಬೇಟೆ ಭೋಜನ ಬಿಟ್ಟೇನಿ ದೇನಿದೆಲ್ಲ ವನ ಕಾನನ ಕಡಿದಲ್ಲಿ ಮುಸುಕಿನ ಜೋಳ ವನು ಬೆಳೆದದನು ಹದಿನಾರಕೊಂದಂಶ ಮಾಂಸಕಿಳಿಸುವಾ ಧುನಿಕ ಪಶುಪಕ್ಷಿ ಸಂಗೋಪನೆಗೆ ವಿಜ್ಞಾನವೆನ್ನುವುದೋ ? - ವಿಜ್ಞಾನೇಶ್ವರಾ *****

ಮೌಲ್ಯದನ್ನ ಉಣ್ಣದೆ ಬದುಕಿಗೆತ್ತಣ ಮೌಲ್ಯ?

ಮಸಣಕೊಯ್ದ ಹೆಣವಿದನು ಸುಟ್ಟು ಕಳೆಯೆಂದು ಮಾರುಕಟ್ಟೆಗೊಯ್ದ ಕೃಷಿ ಸರಕುಗಳನವಗಣನೆ ಮಾಡುತಲಿ ಬೆಳೆದಿಹರೆಮ್ಮ ವರ್‍ತಕರು ಮಸಣವಾಸಿಗಳವರು ಮಾರಿದಾ ಹೊಲಸು ಮ್ಹಾಲನು ತಿನುವರಲಾ ನಗರವಾಸಿಗಳು - ವಿಜ್ಞಾನೇಶ್ವರಾ *****

ಹಸಿದಮ್ಮನೆದೆಯೊಳೆಂತು ಹಾಲುದಿಸುವುದು?

ಹೊಟ್ಟೆ ಹಸಿವೊಂದೆ ದಿಟದ ಹಸಿವದನು ಹೆರರು ತಣಿಸುತಿರಲಿಂದು ಆ ಒಂದು ಹಸಿವೆ ನೂರೊಂದಾಗಿ ಭೂಗರ್‍ಭವನೆ ಹರಿದು ಮುಕ್ಕುತಿರಲಿನ್ನು ತಿನ್ನುವುದೇನು? ಹಿಂತಿರುಗಿ ದುಡಿದುಣಲು ಕಲಿಯಬೇಕಿನ್ನು - ವಿಜ್ಞಾನೇಶ್ವರಾ *****

ಹಿಟ್ಟನ್ನದ ಕಷ್ಟಕಂಜುತೆ ಗಡಿ ಬಿಟ್ಟರೇನಹುದು?

ಎಷ್ಟೆ ಗಡಿಬಿಡಿ ಇರಲಿ, ಗಡಿಬಿಡಿ ಸಾರು ಮಾ ಳ್ಪಷ್ಟಾದೊಡಂ ಅಡುಗೆಮನೆ ಕೆಲಸವೆಮಗಿರಲಿ ಲೊಟ್ಟೆ ಜಾಹೀರಿಗೆಮ್ಮ ಮನ ಜಾರದಿರಲಿ ಹೊಟ್ಟೆಯೊಳು ಬರಿ ತೊಟ್ಟೆಯಬ್ಬರವೇರದಿರಲಿ ರಟ್ಟೆಯೊಳನ್ನದಭಿಮಾನ ಆರದಿರಲಿ - ವಿಜ್ಞಾನೇಶ್ವರಾ *****

ಮಂಥನವಿಲ್ಲದದೆಂತು ಮೌಲ್ಯವರ್‍ಧನೆಯಪ್ಪುದೋ?

ಬೆಂಕಿ ಬಿಸಿಲುಪ್ಪು ಸಕ್ಕರೆಯೊಡಗೂಡಿ ಅಲಫಲಗಳಿ ನ್ನೊಂದು ರುಚಿಯೊಳುದಿಸಿ ದೀರ್‍ಘಾಯುವಪ್ಪಂತೆಮ್ಮ ಸ್ವಂತಿಕೆಯೊಡಗೂಡಿ ಗುರು ಹಿರಿಯರಾದರ್‍ಶ ಸೇರಿದರದನು ಖಂಡಿತದಿ ಮೌಲ್ಯವರ್‍ಧನೆ ಎನಬೇಕಲ್ಲದಿದೇನು ನಿಂದ್ಯ ಪರಿರಕ್ಷಕಗಳೊಡ್ಡೋಲಗಕೆ ಮೌಲ್ಯವರ್‍ಧನೆಯೆನ್ನುವುದೋ? - ವಿಜ್ಞಾನೇಶ್ವರಾ ***** ಪರಿರಕ್ಷಕ= Preservatives

ತಾಯಿ ಬೇಯುತಿರಲಿನ್ನೆಷ್ಟು ತಿನುವುದೋ? ತಾನು ಹಾಯಾಗಿ

ಕಾಯಿ ಹಲಸನೆಣ್ಣೆಯೊಳು ಕರಿದು ಮಾರಲಾ ಧನದೊಳಾ ದಾಯವೇರಿದೊಡದನು ಮೌಲ್ಯ ವರ್‍ಧನೆಯೆನುವರಲಾ? ಕಾಯ ಕಷ್ಟದ ಕೃಷಿಯ ಬಯಸದೆ, ಕೃಷಿಯ ಕಷ್ಟವ ಮಯಣವೆನ್ನದೆ, ಎಣ್ಣೆ ಸವರುತ ಮಯಣ ಕಳೆಯದೆ ನಯದೊಳುಣುವರನೋಲೈಸಿದೊಡದು ಮೌಲ್ಯವರ್‍ಧನೆಯೇಂ? - ವಿಜ್ಞಾನೇಶ್ವರಾ *****

ಹೆಚ್ಚು ಹಲಸೆನ್ನದೆ ಜೀವನಕದೆಷ್ಟು ನಷ್ಟವೋ?

ರುಚಿಯೊಳ್ ಮಾವನು ಫಲರಾಜನೆಂದೊಡೆನಬಹುದು ಯೋಚಿಸಲಾ ಪಟ್ಟ ಹಲಸಿಗಿರಬೇಕು ದಿಟದಿ ಉಚ್ಛತನವಿದಕೆ ಸಲ್ಲುವುದು ಗಾತ್ರದಲಿ ಅಡುಗೆ ಪಾತ್ರದಲಿ ಒಕ್ಕೊರಿಯೊಳಿದರಿಂದ ಮಾಡಲುಬಹುದನೇಕ ಮೇಲೋಗರವ ಅಚ್ಚರಿಯೊಳಿದುವೆ ಓಗರಕೆ ಬದಲಹುದನೇಕ ತರಹ - ವಿಜ್ಞಾನೇಶ್ವರಾ *****