ಮಂಜು

ಮಂಜು

ದಾದರ ಮಧ್ಯ ರೈಲ್ವೆಯ ಪೂರ್ವದಿಕ್ಕಿನಲ್ಲಿ ಸರೀ ಎದುರಿಗೆ ಶ್ರೀ ಸ್ವಾಮಿನಾರಾಯಣ ಮಂದಿರವಿದೆ. ಪ್ರಾತಃಕಾಲದ ಎಂಟು ಗಂಟೆಯ ಹೊತ್ತಿಗೆ ಪುರುಷೋತ್ತಮನ ಮೂರು ಸುಂದರ ರಜತರಂಜಿತ ಮೂರ್ತಿಗಳಿಗೆ ಅಭ್ಯಂಜನ ಮಾಡಿಸಿ ಆಕರ್ಷಕ ಹೂವುಗಳಿಂದ, ವಸ್ತ್ರಾಭರಣಗಳಿಂದ ಶೃಂಗರಿಸಿ ಭಕ್ತರ ದರ್ಶನಕ್ಕಾಗಿ ತೆರವು ಬಿಡಲಾಗುತ್ತದೆ. ತೀರಾ ಎದುರುಗಡೆಯಲ್ಲಿ ಹನುಮಾನ್ ಮಂದಿರವಿದೆ. ಪಕ್ಕದಲ್ಲಿಯೆ ಭಕ್ತರೆಲ್ಲರಿಗೆ ಅಭಯ ಹಸ್ತವನ್ನೆತ್ತಿ ಕಟ್ಟೆಯಲ್ಲಿ ಕುಳಿತಿರುವ ಶಿರಡಿ ಸಾಯಿಬಾಬಾರ ಮನ ಸೆಳೆಯುವ ಮೂರ್ತಿ, ಪ್ರತಿ ಕ್ಷಣವೂ ನಿಲ್ಮನೆಯಿಂದ ಹೊರಗೆ ಬರುವ ಸಾವಿರಾರು ಪ್ರಯಾಣಿಕರು ಬಗೆಬಗೆಯ ಬಾವಭಂಗಿಯನ್ನು ಹೊತ್ತು ಆತುರದಲ್ಲಿ ಮುಂದಿನ ಹೆಜ್ಜೆಗಳನ್ನಿಡುವ ದೃಶ್ಯದ ನಡುವಿನಿಂದ ನುಸುಳಿಕೊಂಡು ರುಯಿಯಾ ಕಾಲೇಜಿನ ಕಡೆಗೆ ಹೋಗುವ ರಸ್ತೆಯ ಎರಡೂ ಪಕ್ಕಗಳಲ್ಲಿರುವ ಬಸ್ ನಿಲ್ದಾಣಗಳಿಗೆ ಓಡುವ ಗತಿಯಲ್ಲಿ ನಡೆಯುವಾಗ ಮಂದಿರದ ಎದುರುಗಡೆಯಲ್ಲಿ ದರ್ಶನಕ್ಕಾಗಿ ನಿಂತಿರುವ, ಕೆಳಗಡೆ ದಂಡೆಯಲ್ಲಿ ಕಂಪನಿ ವಾಹನಗಳ ನಿರೀಕೆಯಲ್ಲಿ ಕುಳಿತಿರುವ ಭಕ್ತರನ್ನೂ, ಕರ್ಮಚಾರಿಗಳನ್ನೂ ನೋಡಬೇಕಾಗುತ್ತದೆ. ಬಾಬಾ, ಮಾರುತಿ ಮತ್ತು ನಾರಾಯಣ ದೇವರನೂ ಭಾವಲೋಲುಪ ಜನಜಂಗುಳಿಯ ಎಡೆಯಿಂದ ಹೇಗಾದರೂ ಇಣಿಕಿ ಒಂದು ಚೂರು ನೋಡಿ ಬಲಗೈಯನ್ನು ಹಣೆಗೆ, ಕೆನ್ನೆಗೆ-ಕಣ್ಣಿಗೆ ಎದೆಗೆ ಮುಟ್ಟಿಸಿ ಇಡೀ ದಿನದ ದುಂದುಗ ಸುಗಮವಾಗುವ ಭರವಸೆಯನ್ನು ಪಡೆಯುತ್ತ ಮುಂದೋಡುವ ಜನರಿಗೆ ವಾಹನ ಕೆಲವೊಮ್ಮೆ ಕೂಡಲೇ ಸಿಕ್ಕಿದಾಗ ಸಂತೋಷವಾಗುತ್ತದೆ. ಕೆಲವರು ದೇವರ ಮುಖವನ್ನು ಕಾಣಲು ಸಾಧ್ಯವಾಗದೇ, ಮಂದಿರದ ಒಳಹೋಗಲೂ ವೇಳೆಯಿಲ್ಲದೆ ಬಸ್ಸಿನ ಕಡೆಗೆ ಓಡುವಾಗ ಸುಂದರಿಯರ ಮೈಗೆತಾಗಿ ಸುಖದ ಉಸಿರು ಬಿಡುತ್ತ ತಾಗಿದವಳು ಹೇಗಿದ್ದಳೆಂಬ ಕಲ್ಪನೆಯಲ್ಲಿ ಬಸ್ ನಿಲ್ದಾಣಕ್ಕೆ ತಲುಪುತ್ತಾರೆ. ಸ್ವಾಮಿನಾರಾಯಣ ಮಂದಿರಕ್ಕೆ ಬಣ್ಣ ಬಣ್ಣದ ಕಾರುಗಳಿಂದ ಬಂದಿಳಿಯುವ ಶ್ರೀಮಂತ ಸ್ತ್ರೀಯರೆಲ್ಲ ಸುಂದರ ವರ್ಣಮಯ ಉಡುಪುಗಳನ್ನು ಧರಿಸಿದ ಯುವತಿಯರೂ ಪ್ರೌಢರೂ ಆಗಿರುತ್ತಾರೆ. ಕೆಲಸಕ್ಕೆ ಹೋಗುವ ಅವಸರ ಇಲ್ಲದಿದ್ದರೆ ಅವರಲ್ಲಿ ಕೆಲವರನ್ನು ಸರಿಯಾಗಿ ನೋಡಿ ಕಣ್ಣಿನಲ್ಲಿ ತುಂಬಿಸಿಕೊಂಡು ಮನಸ್ಸಿನಲ್ಲಿಯೆ ಕೆಲಹೊತ್ತು ಫ್ಲರ್ಟ ಮಾಡುವ ಪ್ರಬಲ ಇಚ್ಚೆಯಾಗುತ್ತದೆ.

ಎಂಟೂವರೆಯ ಸುಮಾರಿಗೆ ನಾನು ಸ್ಟೇಶನ್‌ನಿಂದ ಹೊರಗೆ ಬರುತ್ತೇನೆ. ಈ ಮಂದಿರಗಳ ಎದುರಿನಿಂದ ಎಲ್ಲ ದೇವರುಗಳ ಮುಖದರ್ಶನಕ್ಕಾಗಿ ಆಶೆಪಡುತ್ತ ಪ್ರಯತ್ನಿಸುತ್ತ, ಮನಸ್ಸಿನಲ್ಲಿಯೆ ವಂದಿಸುತ್ತಾ ಹೋಗುವಾಗ ನನ್ನಲ್ಲಿಯೂ ದೈವ ಭಯ ವಾಸವಾಗಿರುವುದರ ಅಲ್ಪ ಪ್ರಜ್ಞೆಯಾಗುತ್ತದೆ. ದೈವದ ಪರಮ ಭಕ್ತಳಾದ ನನ್ನ ಹೆಂಡತಿಯ ಸಹವಾಸದಿಂದ ಹುಟ್ಟಿದ ಭಾವ ಇದಾಗಿರಬಹುದು. ಸ್ವಲ್ಪವೇ ದೂರದಲ್ಲಿರುವ ಒಂದೆರಡು ಬಸ್ಸು ರೂಟುಗಳು ನಿಲ್ಲುವ ಕಟ್ಟೆಗೆ ಬರುವಾಗ ಒಬ್ಬಳು ಯುವತಿ ಸ್ವಾಮಿನಾರಾಯಣ ಮಂದಿರದ ಕಡೆಗೆ ಎದುರಿನಿಂದ ಲಗುಬಗೆಯ ಹೆಜ್ಜೆ ಇಡುತ್ತಾ ಬರುತ್ತಾಳೆ. ಪ್ರತಿದಿನವೂ ಅದೇ ವೇಗದಲ್ಲಿ, ಸುಮಾರು ಅದೇ ಹೊತ್ತಿಗೆ ಒಂಟಿಯಾಗಿ ಬರುವ ಆ ಹೆಣ್ಣು ಮರಾಠಿಯವಳೆನ್ನುವುದನ್ನು ಗ್ರಹಿಸಬಹುದಾಗಿತ್ತು. ಮೋಹಕವಾದ ಮುಖ ಮೈಕಟ್ಟು ಇರುವ ಅವಳ ದೇವರ ಕುರಿತಾದ ಆತುರ ಏಕೆಂದು ಏನೆಂದು ತಿಳಿಯುವುದು ಸುಲಭದ ಕೆಲಸವಾಗಿರಲಿಲ್ಲ. ಒಮ್ಮೊಮ್ಮೆ ನಾನು ಅವಸರದಲ್ಲಿರುವಾಗ ಅವಳು ಮಂದಿರಕ್ಕೆ ಹೋಗಿ ಮರಳಿ ಬರುವ ತನಕವೂ ಆ ನಿರ್ಜನ ಬಸ್‌ನಿಲ್ದಾಣದಲ್ಲಿ ನಿಂತುಕೊಳ್ಳುವಾಗ ಅನೇಕ ರೀತಿಯ ಭಾವಲಹರಿಗಳು ಅವಳ ಕುರಿತಾಗಿ ಮನಸ್ಸಿನಲ್ಲಿ ರೂಪುಗೊಳ್ಳದೆಯೆ ತೇಲಿ ಹೋಗುವುದು. ಬೇರೆ ಬೇರೆ ರೂಪದ ಆಕಾರದ ಹೆಣ್ಣುಗಳು ಆ ಮಾರ್ಗದಿಂದ ತಪ್ಪದೇ ಹೋಗುತ್ತಾ ಬರುತ್ತಾ ಇರುವಾಗ ನಾನು ಆಕೆಯ ಕುರಿತಾಗಿಯೇ ಏಕೆ ಲಕ್ಷ ಕೊಟ್ಟಿದ್ದೇನೆ ಎಂಬ ಸವಾಲಿಗೂ ಉತ್ತರ ಸಿಗದ ಹಾಗೆ ಅವಳ ಅಲ್ಪ ಕಾಲದ ಚಲವಲನ ನನ್ನ ಮನಸ್ಸನ್ನು ಸೆಳೆದು ಕೊಂಡುದು ಏಕೆಂದೇ ತಿಳಿಯದ ಗೊಂದಲದಲ್ಲಿ ಅವಳ ನಡವಳಿಕೆಯ ಬೇರೆ ಬೇರೆ ಚಿತ್ರಗಳು ಕಣ್ಣೆದುರು ಅಸ್ಪಷ್ಟವಾಗಿ ಬಂದು ಹೋಗುತ್ತವೆ. ನಾನು ಅವಳನ್ನು ಹೀಗೆ ಗಮನಿಸುವುದರ ಹೊಳಹು ಅವಳಿಗೆ ಆಗಿರಬಹುದೆಂದು ಯೋಚಿಸಲೂ ಆಧಾರವಿಲ್ಲದ ಸ್ಥಿತಿಯಲ್ಲಿ ನಾನಿರುವಾಗ ಒಂದು ದಿನ ಮಂದಿರದಿಂದ ಅವಳು ಹೊರ ಬಿದ್ದಾಗ ರಪ್ ರಪ್ ಎಂದು ದಪ್ಪ ಹನಿಗಳ ಮಳೆ ಆಕಾಶದಿಂದ ಸುರಿಯ ತೊಡಗಿ ಅವಳು ನಾನು ನಿಂತು ಕೊಂಡಿರುವ ಸ್ಥಳಕ್ಕೆ ಓಡಿಬರುವುದು ಕಾಣಿಸಿತು. ಅಲ್ಲಿಗೆ ಬರುವ ಒಂಟಿ ಬಸೊಂದನ್ನು ಬಿಟ್ಟು ಅವಳು ಹಾದು ಹೋಗಲಿ ಎಂದು ಆಶಿಸುತ್ತಾ ನಿಂತಿರುವ ನನಗೆ ಅವಳು ಬಂದು ಪಕ್ಕದಲ್ಲಿಯೆ ನಿಂತಾಗ ಮುಜುಗರವಾಯಿತು. ಎಂದೂ ಮಾತಾಡಿ, ನಗೆಬೀರಿ ಪರಿಚಯವಿಲ್ಲದ ನಮ್ಮಲ್ಲಿ ಅನಿರ್ವಚನೀಯವಾದೊಂದು ಮೌನ ಮೊದಲ ಕ್ಷಣಗಳಲ್ಲಿ ಉಂಟಾಯಿತು. ಅವಳನ್ನು ಕಣ್ಣೆತ್ತಿ ನೋಡಬೇಕೆಂಬ ಇಚ್ಛೆಯನ್ನು ಅದುಮುತ್ತ ಅವಳೆಡೆ ನೋಡಿದಾಗ ಅವಳು ನನ್ನನ್ನು ನೋಡಿ ಕೊಟ್ಟ ಮುಗುಳ್ನಗೆಯಿಂದ ಅವಳನ್ನು ಆ ಕ್ಷಣದಲ್ಲಿ ಹತ್ತಿರದಿಂದ ಸರಿಯಾಗಿ ನೋಡುವ ದೈರ್ಯ ಬಂದಿತು. ಕಣ್ಣೆದುರಿಂದ ಹಾಯುವಾಗ ಕಣ್ತುಂಬ ನೋಡುವ ನಿರ್ಭಿಡೆ ಹತ್ತಿರ ಬಂದು ನಿಂತಾಗ ಎಲ್ಲಿ ಹೋಗಿ ಬಿಡುತ್ತದೆ ಎಂದು ತಿಳಿಯಲಿಲ್ಲ. ನಾನೂ ಒಂದು ನಗುವನ್ನು ಅವಳಿಗೆ ತಿರುಗಿ ಕೊಟ್ಟು ಅವಳನ್ನು ಸ್ವಲ್ಪ ವಿವರವಾಗಿ ನೋಡುವ ಸ್ವಾತಂತ್ರ್ಯ ವಹಿಸಿದೆ. ಲಕ್ಷಣವಾದ ಮುಖದ ಇಳಿಜಾರಿನಿಂದ ಜಾರಿ ಆಗಲೆ ಅರ್ಧತೊಯ್ದ ಸೆರಗು ರವಕೆಯೊಳಗಿನ ಮೊಲೆಯನ್ನು ತೋಯಿಸಿ ಅವುಗಳ ಗಾತ್ರದ ಪರಿಚಯ ನೀಡುತ್ತಿತ್ತು. ‘ಮಳೆ ಒಮ್ಮೆಲೆ ಬಂತಲ್ಲ’ ಎಂದು ನಾನು ಹಿಂದಿಯಲ್ಲಿ ಹೇಳುತ್ತ ನನ್ನ ಧ್ಯಾನ ಎಲ್ಲಿದೆ ಎನ್ನುವುದರ ಸುಳಿವು ಅವಳಿಗಾಗದಂತೆ ಕಾಳಜಿ ವಹಿಸಿದೆ.
‘ಅಪರೂಪದ ಮಳೆ, ಬರಲಿ ಬಿಡಿ’ ಎಂದು ಅವಳೂ ಅಗಲವಾಗಿ ನಕ್ಕಾಗ ಅವಳ ಸುಂದರವಾದ ಹಲ್ಲುಗಳು ಕಾಣಿಸಿ ‘ನಿಮ್ಮ ಹಲ್ಲುಗಳಲ್ಲಿ ಲಿಪಸ್ಟಿಕ್ ತಾಗಿದೆ’ ಎಂದು ಮಾತು ಮುಂದುವರಿಸಿದೆ. ‘ಓ’ ಎನ್ನುತ್ತ ಅವಳು ಒಮ್ಮೆಲೆ ಪ್ರಜ್ಞೆಯಿಂದ ಹಲ್ಲು ಉಜ್ಜಿದಳು. ಅಲ್ಲಿಗೇ ಮಾತು ಮುಗಿದಂತಾದರೂ ಮಳೆ ಬರುತ್ತಿತ್ತು. ಇನ್ನೂ ನಾಲ್ಕಾರು ಜನರು ಬಂದು ಮಾಡಿನಡಿಯಲ್ಲಿ ನಿಂತರು.

‘ನೀವು ಶ್ರೀ ಸ್ವಾಮಿನಾರಾಯಣ ಭಕ್ತರೆಂದು ಕಾಣುತ್ತದೆ’. ನಾನು ಹೇಳಿದೆ. ‘ಹೌದು, ಒಂದು ರೀತಿಯಲ್ಲಿ ಭಕ್ತಿಯೆ, ಆದರೆ ಅಪೇಕ್ಷೆ ಇಲ್ಲದ ಭಕ್ತಿಯೆಂದು ಹೇಳಲಾರೆ’ ಅವಳ ಉತ್ತರ ತೀರ ಸಾಮಾನ್ಯ ಎಂದೆನಿಸಿತು.

‘ಈ ಮಂದಿರಕ್ಕೆ, ಹೆಚ್ಚು ಶ್ರೀಮಂತರೆ ಬರುವುದು. ಅವರಿಗೆ ಯಾವುದರ ಅಪೇಕ್ಷೆ’

‘ಮನುಷ್ಯನಿಗೆ ಯಾವ ಯಾವ ಬಗೆಯ ಅಪೇಕ್ಷೆಗಳಿರುತ್ತವೆ ಎಂದು ಹೇಳುವುದು ಹೇಗೆ.’

‘ಈ ಎಲ್ಲ ಬಗೆಯ ಅಪೇಕ್ಷೆಗಳನ್ನು, ದೇವರು ಪೂರೈಸುತ್ತಾನೆ ಎಂದಾದರೆ ಅಗತ್ಯ ಅವನನ್ನು ನಂಬಬೇಕು’ ನನ್ನ ಮಾತಿನ ಮರ್ಮ ಅವಳಿಗೆ ತಿಳಿಯಿತೋ ಇಲ್ಲವೋ.

‘ಕೆಲವೊಮ್ಮೆ ಯಾರಿಂದಲೂ ಆಗದ ಕಮಾಲ್ ದೇವರ ಮೇಲಿನ ವಿಶ್ವಾಸದಿಂದ ಆಗಿಬಿಡುತ್ತದೆ. ವಿಶ್ವಾಸವೆ ಅಲ್ಲವೆ ಜೀವನದ ರಹಸ್ಯ’ ಎನ್ನುತ್ತ ಅವಳು ಒಂಭತ್ತು ಹೊಡೆದ ಮಂದಿರದ ಗಂಟೆಯ ಡಣ್ ಢಣ್ ಶಬ್ದಕ್ಕೆ ಎಚ್ಚತ್ತವಳಂತೆ ‘ಅಫೀಸಿಗೆ ತಡವಾಗುತ್ತದೆ, ಮಳೆ ನಿಲ್ಲುವಂತಿಲ್ಲ. ಹತ್ತಿರವೆ ಮನೆ, ಓಡುತ್ತೇನೆ’ ಎಂದವಳೆ ಮಳೆಗೆ ತೆರವಾದಳು. ನಾನು ಅವಳು ಹೋದ ದಾರಿಯನ್ನೆ ನೋಡುತ್ತ ನಿಂತೆ. ಅವಳು ಮುಂದಿನ ಎರಡನೆಯ ಓಣಿಯಲ್ಲಿ ಮರೆಯಾದುದು ಕಾಣಿಸಿತು.

ಅವಳ ಎರಡು ಮೂರು ವಾಕ್ಯಗಳ ಮಾತುಕತೆಯಲ್ಲಿ ಏನನ್ನೂ ಹುಡುಕುವುದು ಸಾಧ್ಯವಿರಲಿಲ್ಲ. ಆದರೆ ದುಡಿಯುವುದಕ್ಕೆ ಹೋಗುವ ಅವಸರದಲ್ಲಿರುವುದೆ ಅವಳ ಮುಂಜಾನೆಯ ದೇವರ ದರ್ಶನ ಗಡಿಬಿಡಿಗೆ ಕಾರಣವೆನ್ನುವುದು ಹೊಳೆಯಿತು. ಅಂತೂ ಅವಳು ಬಹುಶಃ ಪ್ರತಿದಿನವೂ ಮಂದಿರಕ್ಕೆ ಅವಸರವಾಗಿ ಬಂದು ಹೋಗುವುದರ ಅಗತ್ಯವೇನೆಂದು ಕಲ್ಪಿಸಲು ಸಾಧ್ಯವಾಗಲಿಲ್ಲ.

ಮರುದಿನ ನಾನವಳನ್ನು ಕಾಣಲಿಲ್ಲ. ತುಂಬಾ ಹೊತ್ತು ಅಲ್ಲಿಯೇ ನಿಂತು ಅವಳಿಗಾಗಿ ಕಾದೆ. ಈ ಕಾಯುವ ಕಸಿವಿಸಿ ಮನಸ್ಸಿನಲ್ಲಿ ಉಂಟಾದುದರ ಅರಿವಿಲ್ಲದಂತೆಯೆ ಅದರ ಪ್ರಮಾಣ ಹೆಚ್ಚುತ್ತಿತ್ತು. ಅದರ ಯೋಚನೆಯನ್ನೇ ಮಾಡದೆ ನಾನು ಮಂದಿರದ ಕಡೆಗೆ ನಡೆದೆ. ಕೆಲಸಕ್ಕೆ ಹೋಗುವ ಅವಸರ ನನಗೂ ಇತ್ತು. ಆದರೂ ಅವಳನ್ನು ನೋಡದೆ ಹೋಗುವ ಇಚ್ಚೆಯಾಗಲಿಲ್ಲ. ಹಾಗೆ ಮಾಡಿದರೆ ಇಡೀ ದಿನವೆ ಅವಳ ಕುರಿತ ವಿವಿಧ ಯೋಚನೆಯಲ್ಲಿ ನಿರರ್ಥಕವಾಗಬಹುದು. ಸಾಲಂಕೃತ ದೇವರ ಮೂರ್ತಿಗಳು ಮನಸ್ಸಿಗೆ ಅಹ್ಲಾದ ಕೊಡುವಂಥವು. ಮುಂಜಾನೆಯ ಭಕ್ತರೆಲ್ಲ ಆಗಲೆ ನಿರ್‍ಗಮಿಸಿದ್ದಾರೆ. ದೇವರ ಗುಡಿಯ ಬಾಗಿಲು ಇನ್ನೂ ತೆರೆದಿದೆ. ಕೆಲವು ಎಳೆಪ್ರಾಯದ ಸ್ತ್ರೀಯರು ದಂಡೆಯಲ್ಲಿ ಕುಳಿತು ದಾದರ ನಿಲ್ದಾಣದಿಂದ ಹೊರಡುವ ಜನಸಮುದಾಯವನ್ನು ವೀಕ್ಷಿಸುತ್ತಿದ್ದಾರೆ. ಮಾರ್ಬಲ್ ಕಲ್ಲಿನ ನಯವಾದ ದಂಡೆಯಲ್ಲಿ ಕುಳಿತ ಹೆಂಗಸರಲ್ಲಿ ಅವಳು ಕಾಣಿಸಲಿಲ್ಲ. ನನ್ನ ಕಣ್ಣಗಳು ಹುಡುಕಿದುವು. ಭಗವಂತನ ಎಡಬದಿಯಲ್ಲಿ ಅನತಿದೂರ ಅವಳು ಒಬ್ಬ ತರುಣನ ಮುಖವನ್ನೇ ನೋಡುವುದು ಕಾಣಿಸಿತು. ಕೆಳದಂಡೆಯ ಹತ್ತಿರನಿಂತು ನಾನವನನ್ನು ಸರಿಯಾಗಿ ನೋಡುವ ಪ್ರಯತ್ನ ಮಾಡಿದೆ. ಅವನೊಬ್ಬ ಸುಂದರ ತರುಣ, ಉದ್ದುದ್ದ ತಲೆ ಕೂದಲೂ, ಮುಖದಲ್ಲಿ ದಪ್ಪ ಮೀಸೆ ಗಂಡು ತನದ ಲಾಂಛನವಾಗಿ ಶೋಭಿಸುತ್ತಿತ್ತು. ಅವಳ ಒಂದು ಕೈಯ ಬೆರಳುಗಳನ್ನು ತನ್ನ ಅಂಗೈಯಲ್ಲಿ ಹಾಕಿಕೊಂಡು ಅವಳ ಎತ್ತಿದ ಮುಖ ನೋಡುತ್ತಿದ್ದ. ಅವಳ ಕಣ್ಣ ಗುಂಡಿಯಲ್ಲಿ ಏನನ್ನೋ ಹುಡುಕುವ ಯತ್ನದಲ್ಲಿ ಮೂಕನಾದಂತೆ ಮಾತೇ ಮೌನವಾಗಿತ್ತು. ಆತ ಅವಳ ಪ್ರೇಮಿ ಎಂಬುದರ ಬಗ್ಗೆ ಸಂದೇಹ ಉಳಿಯಲಿಲ್ಲ. ಈವರೆಗೆ ಒಂದು ಸಾರಿಯೂ ನನ್ನ ಕಣ್ಣಿಗೆ ಬೀಳದ ಈ ಯುವಕನನ್ನು ಭೇಟಿಯಾಗಲೆಂದೇ ಓಡುತ್ತಿದ್ದುದೆ ಎಂಬ ಗುಮಾನಿಯಾಗಿ ಒಂದು ಕ್ಷಣ ಮೈಯ ಉತ್ಸಾಹ ಕುಸಿಯಿತು. ಆ ಸ್ಥಿತಿಯಲ್ಲಿಯೆ ನಾನವಳನ್ನು ಇನ್ನೊಮ್ಮೆ ನೋಡಿ ದಾದರ ಟಿ ಟಿ ಕಡೆಗೆ ನಡೆದೆ.

ನಂತರ ನಾಲ್ಕಾರು ದಿನ ನನ್ನ ರೂಟು ಬದಲಿಸಿದೆ. ದಾದರದ ಪಶ್ಚಿಮಕ್ಕೆ ಹೋಗಿ ವರ್ಲಿಯ ಬಸ್ ಹಿಡಿಯುತ್ತಿದ್ದೆ. ಆದರೂ ಅವಳೂ ನನ್ನ ಮನಸ್ಸಿನಿಂದ ಸರಿಯಲಿಲ್ಲ. ಒಂದಲ್ಲ ಒಂದು ಬಗೆಯಲ್ಲಿ ಮನಸ್ಸನ್ನು ಹೊಕ್ಕು ಅವಳ ಬಗ್ಗೆ ನಾನು ಯೋಚಿಸುವಂತೆ ಮಾಡಿದಳು. ಒಂದು ವಾರದ ನಂತರ ನಾನು ಮತ್ತೊಮ್ಮೆ ಮಂದಿರದ ಎದುರಿನಿಂದ ನಡೆದು ಬಸ್‌ ತಾಣಕ್ಕೆ ಬಂದೆ. ಅವಳ ಕುರಿತು ಚಿಂತೆಯೇನೂ ಮನಸ್ಸನ್ನು ಕಾಡುತ್ತಿದ್ದಿಲ್ಲ. ಅವಳು ಹಾದು ಹೋಗುವ ಸಮಯವೂ ಕಳೆದಿತ್ತು. ಬರುವಾಗ ನನ್ನ ದೃಷ್ಟಿ ಮಾತ್ರ ಅವರು ಅಂದು ಕುಳಿತಿದ್ದ ಮೂಲೆಗೆ ಸರಿಯದಿರಲಿಲ್ಲ. ಬಸ್‌ತಾಣದಲ್ಲಿ ಯಾರೂ ಕಾಣಿಸಲಿಲ್ಲ. ವರಳಿಯ ೧೬೧ ಬಸ್ ಹೋಗಿರಬೇಕೆಂದು ತೋರಿತು. ಆಗ ಚಪ್ಪರದ ಕಂಬಕ್ಕೆ ಒರಗಿ ಕುಳಿತಿರುವ ಆಕೆಯನ್ನು ನೋಡಿ ಆಶ್ಚರ್ಯವಾಯಿತು. ಅವಳು ನನ್ನನ್ನು ನೋಡಿ ಎದ್ದುನಿಂತು ನಗೆ ಸೂಸಿ, ‘ಹಲ್ಲುಗಳಲ್ಲಿ ಲಿಪಿಸ್ಟಿಕ್ ಇಲ್ಲ ತಾನೆ’ ಎಂದು ಕೇಳಿದಳು, ಅವಳನ್ನು ಕಂಡು ಖುಷಿಯಾಗಿದ್ದ ಮನಸ್ಸಿನ ಭಾವ ನನ್ನ ಕಣ್ಣಲ್ಲಿ ಮೂಡಿತ್ತು. ಅವಳ ನಗೆಯ ಮಾತಿನ ಸಲಿಗೆ ನನ್ನನ್ನು ಮುಖ ಅರಳಿಸಿ ನಗುವಂತೆ ಮಾಡಿತು.

‘ನೀವೇನು ಇಲ್ಲಿ ಆಫೀಸು ಇಲ್ಲವೆ, ಇಂದಿನ ಭಕ್ತಿ ಮುಗಿಯಿತೆ’ ಎಂದು ಕೇಳಿದೆ.

‘ಆಫೀಸಿಗೆ ಸಿಕ್ ಲೀವ್, ನಾನು ನಿನ್ನೆಯೂ ಇಲ್ಲಿ ಸ್ವಲ್ಪ ಹೊತ್ತು ನಿಂತಿದ್ದೆ’

‘ಮಳೆ ಬಂದಿತ್ತೆ’

‘ಮಳೆಯಿರಲಿಲ್ಲ ನಿಂತಿದ್ದು ಬಹುಶಃ ನಿಮಗಾಗಿ ಎಂದು ಕಾಣುತ್ತದೆ’. ನಾನು ಚಕಿತನಾದೆ. ಹಿಂದೆ ಒಂದೇ ಸಾರಿ ಮಾತಾಡಿದರಿಂದ ನನಗಾಗಿ ಹತ್ತು ನಿಮಿಷವಾದರೂ ಇಷ್ಟು ಚೆಲುವೆಯೊಬ್ಬಳು ಬಸ್ ತಾಣದಲ್ಲಿ ಕಂಬಕ್ಕೆ ಒರಗಿ ನಿಂತಿರುವುದನ್ನು ಒಂದು ಕ್ಷಣ ಕಲ್ಪಿಸಿಕೊಂಡೆ.

‘ನಿನ್ನೆ ನನ್ನ ಜೊತೆಯಲ್ಲಿ ಅವನೂ ಇದ್ದ, ನೀವು ಆವತ್ತು ಮಂದಿರದಲ್ಲಿ ನೋಡಿದ್ದೀರಲ್ಲ….ಅವನು.’

ಅಂದು ಅವಳು ನನ್ನನ್ನು ನೋಡಿಲ್ಲವೆಂಬ ಅನುಮಾನ ಸುಳ್ಳಾಯಿತು. ಮಾತು ಅವಳಿಂದಲೇ ಬರಲಿ ಎಂದು ನಾನು ಮಾತಾಡಲಿಲ್ಲ. ಸಲ್ಲಾಪ ಮಾಡಲು ತುಡಿಯುತ್ತಿದ್ದ ಮನಸ್ಸಿನ ಲವಲವಿಕೆಯನ್ನು ಹತೋಟಿಯಲ್ಲಿಟ್ಟುಕೊಂಡು.

‘ಅವನು ನನ್ನ ಬೋಯ್ ಫ್ರೆಂಡ್, ನೀವೂ ಹಾಗೇ ಎಣಿಸಿರಬೇಕಲ್ಲ’.

‘ಹೌದು, ಹಿ ಈಸ್ ವೆರಿಹೆಂಡಸಮ್, ನಿಮಗೆ ತಕ್ಕ ಹುಡುಗ’

‘ಥ್ಯಾಂಕ್ಸ್ ಆದರೆ…..’ ಅವಳು ಮಾತನ್ನು ಮುಂದರಿಸಲು ಅನುಮಾನಿಸಿದಳು.

‘ನಾನು ಅಪರಿಚಿತನೆಂದು ಸಂಕೋಚವೇ ಮೇಡಂ’

‘ನಾನು ಮೇಡಂ ಅಲ್ಲ…. ಮಂಜು ಕುಲಕರ್ಣಿ ಮತ್ತು ನೀವು ಅಪರಿಚಿತರೆಂಬ ಭ್ರಮೆಯೂ ಬೇಡ. ಎಷ್ಟೋ ದಿನಗಳಿಂದ ನೀವು ನನ್ನನ್ನೇ ನಿರೀಕ್ಷಿಸುವುದರ ಅರಿವು ನನಗಿದೆ. ಆದರೆ ವಿಚಿತ್ರ ಎಂದೂ ಮಾತಾಡುವ ಅವಕಾಶ ಸಿಗಲಿಲ್ಲ. ನೀವಾದರೂ ಧೈರ್ಯ ಮಾಡಿ ನನ್ನನ್ನು ಮಾತಾಡಿಸಲಿಲ್ಲ.

‘ಹಾಗಾದರೆ ಆ ದಿನದ ಮಳೆಯನ್ನು ಮೆಚ್ಚ ಬೇಕು. ನಿಮ್ಮ ಜೊತೆ ಮಾತಾಡುವ ಆಕಾಂಕ್ಷೆ ತುಂಬಾ ಇತ್ತು. ಅದಕ್ಕೆ ಅವತ್ತು ಲಿಪ್ ಸ್ಟಿಕ್ಕಿನ ಮಾತು ಸಹಜವಾಗಿ ಬಂದಿತ್ತು.’

‘ಶೇಖರ್ ಮರಾಠಿ ಮನುಷ್ಯನಲ್ಲ. ನಿಮ್ಮ ಊರಿನವನಿರಬೇಕು. ಅದಕ್ಕಾಗಿಯೇ ಈ ಸ್ಪಂದನವೇನೋ… ನಿಮಗೆ ಅಸೂಯೆಯಾಯಿತೆ?’

‘ಆಗಿದ್ದರೆ ತಪ್ಪೇನೂ ಇಲ್ಲ. ಆದರೆ ಅಸೂಯೆಯಾಗಬೇಕಾದರೆ ಏನಾದರೂ ಕಾರಣ ಬೇಕಲ್ಲ.’

‘ನನ್ನ ಹಿಂದೆ ಹಿಂದೆ ಓಣಿಯ ತನಕವೂ ನೀವು ಬಂದಿದ್ದ ನೆನಪು ನನಗಿದೆ’

ಅವಳ ಸ್ಪಷ್ಟ ಮಾತುಗಳು ನನ್ನನ್ನು ತಟ್ಟಿದವು. ಅವಳ ಕುರಿತಾದ ನನ್ನ ಆಸಕ್ತಿಯ ಸ್ವರೂಪವನ್ನು ಪ್ರಶ್ನಿಸುವಂತೆ ಅವಳು ಮಾತಾಡಿದಾಗ ನಾನು ನಿರುತ್ತರನಾದೆ.

ಮರುದಿನವೂ ನಾವು ಸ್ವಲ್ಪ ಹೊತ್ತು ಅಲ್ಲಿ ನಿಂತು ಮಾತಾಡಿದೆವು. ಆಗ ಮಂಜು ತನ್ನ ಶೇಖರನ ವಿಷಯ ತುಂಬಾ ಹೇಳಿದಳು. ಇದರಿಂದ ನಮ್ಮಿಬ್ಬರ ನಡುವಿನ ದೂರ ಕಡಿಮೆಯಾದುದು ಮಾತ್ರವಲ್ಲದೆ ನಮ್ಮ ನಡುವಿನ ಸಂಬಂಧವೂ ರೂಪ ಪಡೆಯಲು ಹವಣಿಸುತ್ತಿತ್ತು. ಅವರಿಬ್ಬರೂ ಮದುವೆಯಾಗುವುದು ತುಂಬ ಪ್ರಸ್ತುತ ಎಂದು ನಾನು ಹೇಳಿದಾಗ ಅವಳೆಂದಳು ನಾನು ಬೇಡವೆಂದಿದ್ದೇನೆ. ಅದಕ್ಕಾಗಿ ಈಗ ಒಂದು ತಿಂಗಳಿನಿಂದ ಅಂತರಯುದ್ಧ ನಡೆದಿದೆ. ಕೊನೆಗೆ ನಾನು ಕೊಟ್ಟ ಎರಡು ಕಾರಣಗಳಿಂದ ಅವನು ಅಧೀರನಾದುದು ನನ್ನ ನಿರಾಕರಣೆಗೆ ಮೂರನೆಯ ಕಾರಣವಾಗಿದೆ.’

‘ಮಂಜು, ಜೀವನದ ಇಂಥ ಘಟ್ಟದಲ್ಲಿ ತೆಗೆದು ಕೊಳ್ಳುವ ನಿರ್ಣಯ ಅತ್ಯಂತ ಮಹತ್ವದ್ದಾಗಿರುತ್ತದೆ. ನಿನ್ನ ಕಾರಣದ ಸ್ಪಷ್ಟ ಕಲ್ಪನೆಯನ್ನು ಅವನಿಗೆ ಮಾಡಿಕೊಟ್ಟು ಪರಾಮರ್ಶಿಸಿ ಹಿತಕರ ಒಪ್ಪಂದಕ್ಕೆ ಬರುವುದು ಲೇಸಲ್ಲವೆ’ ಅವಳ ಖಾಸಗಿ ಸಮಸ್ಯೆಗಳ ಕುರಿತು ಅಜ್ಞನಾಗಿದ್ದ ನಾನು ಹೇಳಿದೆ.

‘ಮೊನ್ನೆ ಅವನು ನನ್ನ ಜೊತೆಗೆ ಬಂದಿದ್ದ. ನಿನಗೆ ಪರಿಚಯಿಸಿ ಈ ವಿಷಯ ಮಾತಾಡುವ ಮನಸ್ಸಿತ್ತು. ನನಗೇಕೋ ಅದು ಸಮ್ಮತವಿರಲಿಲ್ಲ. ನಾನು ಕೊಟ್ಟ ಕಾರಣ ಭವಿಷ್ಯದ ಬದುಕಿನ ಕಲ್ಪನೆಗಿಂತಲೂ ಮಹತ್ವದ್ದು….. ನನ್ನ ಆಯಿ, ಶಾಲೆಗೆ ಹೋಗುವ ತಂಗಿ, ಕಾಲೇಜಿಗೆ ಹೋಗುವ ತಮ್ಮ ಒಂದು ಹಳೆಯ ಬಾಡಿಗೆಯ ಮನೆ ಮತ್ತು ನನ್ನ ನೌಕರಿಯ ಸಂಪಾದನೆ. ನಾನು ಮದುವೆಯಾಗಿ ಹೋದರೆ ಅವರೆಲ್ಲರ ಗತಿಯೇನು. ನನಗೆ ತಲೆನೋವು ಮತ್ತು ಮೈ‌ಉರಿಯುವ ಕಾಯಿಲೆ ಬೇರೆ ಇದೆ. ಇದು ಭವಿಷ್ಯದಲ್ಲಿ ಶೇಖರನಿಗೆ ಸಮಸ್ಯೆಯಾದರೆ…’ ಮಂಜುನ ಮನಸ್ಥಿತಿಯ ಅರ್ಥ ಈಗ ನನಗಾಯಿತು. ಅವಳ ನಿರ್ಧಾರದ ಬುಡಕಟ್ಟು ಗಟ್ಟಿಯಾಗಿರುವಂತೆನಿಸಿತು. ಅವಳು ಅಂದು ಗುಡಿಯಲ್ಲಿ ಶೇಖರನ ಕಣ್ಣಿನಲ್ಲಿ ಹುಡುಕುತ್ತಿದ್ದುದು ಏನೆಂದು ತಿಳಿಯಲು ಕಷ್ಟವಾಗಲಿಲ್ಲ. ನಾನವಳನ್ನು ಸ್ವಲ್ಪ ಹೊತ್ತು ಧ್ಯಾನ ಕೊಟ್ಟು ನೋಡಿದೆ. ಅವಳ ಅತಿ ಆಕರ್ಷಕವಾದ ವ್ಯಕ್ತಿತ್ವದಲ್ಲಿ ಒಂದು ಅಪೂರ್ವ ಮೆರಗು ಗೋಚರಿಸಿತು. ಆದರೂ ನಾನೆಂದೆ ‘ಇದೆಲ್ಲ ಟೆಂಪರರಿ ಫೇಸ್‌, ಇದಕ್ಕಾಗಿ ನಾವು ಬದುಕುವುದನ್ನು ಬಿಡಲಾಗುತ್ತದೆಯೆ, ನೀನು ಶೇಖರನ ಓಫರನ್ನು ಒಪ್ಪಿಕೊಳ್ಳು’ ನನ್ನ ಮಾತಿನಿಂದ ಅವಳಿಗೆ ಸಮಾಧಾನವಾದಂತೆ ಕಾಣಲಿಲ್ಲ. ಮುಖಭಾವದಲ್ಲಿ ಮ್ಲಾನತೆಯ ಛಾಯೆ ಹರಡಿತು. ಅಲ್ಲಿ ಇನ್ನು ನಿಂತು ಕೊಳ್ಳಲು ಮನಸ್ಸಾಗದೆ ‘ಹೋಗುತ್ತೇನೆ’ ಎಂದು ಹೋಗಿಯೆ ಬಿಟ್ಟಳು. ನಾನು ಅಲ್ಲಿಯೆ ಕೆಲಹೊತ್ತು ಯೋಚಿಸುತ್ತ ನಿಂತು ಕೊಂಡೆ. ಅವರ ಬದುಕಿನ ವ್ಯವಹಾರದಲ್ಲಿ ನನ್ನ ಪಾತ್ರವೇನೆಂದು ತಿಳಿಯಲಿಲ್ಲ. ನಾನು ಅವಳ ಕುರಿತ – ಒಂದು ಆಕರ್ಷಣೆಯಿಂದ ನುಸುಳಿ ಕೊಂಡದ್ದಕ್ಕೆ ಯಾವ ಅರ್ಥವೂ ಇರಲಿಲ್ಲ. ನನಗೆ ಅವಳಲ್ಲಿ ಅನುರಕ್ತಿ ಇದೆಯೆ ಹೇಳಲು ಬರುವುದಿಲ್ಲ. ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ಅರ್ಥಹೀನ. ಅವಳ ಮಾತುಗಳಿಂದ ಮಾತ್ರ ನನ್ನ ಅಂತಃಕರಣವನ್ನು ಹಂಚಿ ಕೊಳ್ಳಲು ಒಬ್ಬ ಆತ್ಮೀಯ ಗೆಳೆಯನ ಶೋಧ ಅವಳಿಗಿತ್ತೆಂದು ಕಂಡಿತು. ಶೇಖರ ಅವಳ ಈ ಅಭಿಲಾಶೆಯನ್ನು ಪೂರೈಸ ಬಲ್ಲನೆಂಬ ಭರವಸೆ ಅವಳಿಗಿರಲಿಲ್ಲವೊ, ಏನೋ. ಅವಳು ಮಾತನ್ನು ಮುಗಿಸದೆಯೆ ಹೀಗೆ ಹೊರಟು ಹೋಗಿ ನಾನೂ ಅದಕ್ಕೆ ಯೋಗ್ಯನಲ್ಲ ಎನ್ನುವುದನ್ನು ತೋರಿಸಿ ಕೊಟ್ಟಿದ್ದಳು. ಉದಾಸೀನ ಭಾವದಿಂದ ಅಲ್ಲಿಂದ ಕೆಲಸಕ್ಕೆ ಹೋದ ನಾನು ಮುಂದೆ ಸುಮಾರು ಒಂದು ತಿಂಗಳು ಅವಳನ್ನು ನೋಡಲಿಲ್ಲ. ಅವಳ ನೆನಪು ಪ್ರತಿದಿನ ಆಗುತ್ತಿದ್ದರೂ ಅವಳ ಬದುಕಿನಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೂ ಒಂದು ದಿನ ನಾನವಳ ಬ್ಯಾಂಕಿಗೆ ಹೋದೆ. ಅವಳು ರಜೆಯಲ್ಲಿರುವುದು ತಿಳಿಯಿತು. ನಾಲ್ಕುದಿನ ಬಿಟ್ಟು ಮತ್ತೆ ಹೋದಾಗಲೂ ಅವಳು ಇರದಿದ್ದಾಗ ಆತಂಕವುಂಟಾಯಿತು. ಅಲ್ಲಿಯೆ ಒಬ್ಬಳನ್ನು ವಿಚಾರಿಸಿದಾಗ ವಿಷಯ ತಿಳಿದು ಗರ ಬಡಿದಂತಾಯಿತು. ಒಂದು ಕ್ಷಣವೂ ಅಲ್ಲಿ ನಿಲ್ಲದೆ ನಾನು ಆಸ್ಪತ್ರೆಗೆ ಹೋದೆ. ಅವಳಿಗೆ ಎಚ್ಚರವಿತ್ತು. ನನ್ನನ್ನು ನೋಡಿ ಒಮ್ಮೆಲೆ ಮಾತು ಬರಲಿಲ್ಲ. ಮುಖದಲ್ಲಿ ನಗೆಯೂ ಮೂಡಲಿಲ್ಲ. ಕಳೆಗುಂದಿದ ಮುಖ, ಊದಿದ ಕಣ್ಣಿನಲ್ಲಿ ಹೊಳಪು ಕಾಣಲಿಲ್ಲ. ನಾನು ಸ್ಟೂಲನ್ನು ಎಳೆದು ಹತ್ತಿರ ಕುಳಿತೆ. ‘ಮಂಜು ಇದೇನು’ ಎಂಬ ನನ್ನ ಉದ್ದಾರ ಅವಳನ್ನು ತಟ್ಟಿತೋ ಎನ್ನುವಂತೆ ಅವಳು ನನ್ನ ಕೈಯನ್ನು ಎಳೆದು ಭದ್ರವಾಗಿ ಹಿಡಿದುಕೊಂಡು ಗಳಗಳನೆ ಅತ್ತಳು.

‘ಒಂದು ದಿನ ನಿನ್ನ ಅಗತ್ಯ ಬಹಳ ಬಿತ್ತು. ನೀನು ಸಿಗಲಿಲ್ಲ. ನಾನು ಮಂದಿರದಿಂದ ಹೊರಬಂದಾಗ ತಲೆ ಚಿಟ್ಟು ಹಿಡಿದಂತೆ ಗಿರ್ರನೆ ತಿರುಗಿತು. ಸಹಿಸಲಾರದೆ ನೀನು ನಿಂತು ಕೊಳ್ಳುವ ಜಾಗಕ್ಕೆ ನೀನಿರಬಹುದೆಂದು ಬಂದೆ. ನೀನಿರಲಿಲ್ಲ. ಹೊಟ್ಟೆಯಲ್ಲಿ ಭಯಂಕರ ನೋವು ಕಾಣಿಸಿ ಕೊಂಡಿತು. ಹದ ಮೀರಿದ ಹತಾಶೆ ಉಂಟಾಯಿತು. ನಿನಗಾಗಿ ಸ್ವಲ್ಪ ನಿಂತು ಕಷ್ಟಪಟ್ಟು ಮನೆ ತಲುಪಿದೆ. ಮದ್ಯಾಹ್ನದ ಮೇಲೆ ಆಯಿ ಮತ್ತು ತಮ್ಮನ ಜೊತೆ ಆಸ್ಪತ್ರೆಗೆ ಬಂದೆ. ನನ್ನ ಕೇಸಿನ ದಾಖಲು ಮೋದಲೇ ಆಗಿತ್ತಲ್ಲ. ನಾನು ನಿನಗೂ ಅದನ್ನು ಹೇಳಿರಲಿಲ್ಲ. ಎಲ್ಲವನ್ನು ಹೇಳ ಬೇಕೆಂದಿದ್ದೆ. ಸಂಕೋಚವಾಯಿತು. ಪ್ರಯೋಜನ ವಿಲ್ಲದ ವಿಷಯವನ್ನು ಯಾಕೆ ಹೇಳಲಿ ಎಂದು……’ ಅವಳಿಗೆ ಉಸಿರು ಕಟ್ಟಿದಂತಾಗಿ ಮಾತು ಕಷ್ಟವಾಯಿತು. ನಾನವಳ ಮುಖವನ್ನು ಒರಸಿ ಮಾತಾಡ ಬೇಡ ಎಂದೆ. ನನ್ನ ಕೈಯನ್ನು ಅವಳಿನ್ನೂ ಬಿಟ್ಟಿರಲಿಲ್ಲ. ‘ನೋವನ್ನು ತಡೆಯಲಾಗುವುದಿಲ್ಲ. ಸತ್ತರೆ ಮುಕ್ತಿ ಸಿಗುತ್ತಿತ್ತು’ ಎಂದು ನರಳಿದಳು. ನಾನೇನು ಮಾತಾಡಲಿ? ನನ್ನ ವಾಕ್‌ಶಕ್ತಿಯೇ ಉಡುಗಿ ಹೋಗಿತ್ತು.

ಅವಳೀಗ ಕ್ಯಾನ್ಸರ್ ರೋಗಿ ಬದುಕುವ ಲಕ್ಷಣವಿಲ್ಲ. ಮೂರು ನಾಲ್ಕು ತಿಂಗಳು ಇನ್ನೂ ಪ್ರಾಣ ಎಳೆಯ ಬೇಕಲ್ಲ ಎಂದು ಅವಳ ಕೊರಗು. ಅವಳ ಹೊಟ್ಟೆ ಶರೀರಗಳ ಕಬಳಿಸುವ ನೋವು ಯಮಯಾತನೆಯಾಗಿದೆ. ಅವಳು ಬದುಕುವ ಆಮಿಷಗಳನ್ನು ನಿರಾಕರಿಸಿದಳು. ಬದುಕು ಅವಳನ್ನು ನಿರಾಕರಿಸಿತು. ಶ್ರೀ ಸ್ವಾಮಿನಾರಾಯಣನ ಮರೆಹೊಕ್ಕದ್ದು ವ್ಯರ್ಥವಾಗಿದೆ. ಆ ಪುರುಷೋತ್ತಮ ಅವಳ ಮೊರೆಯನ್ನು ಕಿವಿಗೆ ಹಾಕಿ ಕೊಳ್ಳಲಿಲ್ಲ. ಸ್ವಲ್ಪವೇ ದಿನಗಳ ಹಿಂದೆ ನನ್ನ ಬದುಕಿಗೆ ಕದಾಚಿತ್ ಬರುವಳೋ ಎಂಬ ರೋಮಾಂಚನವನ್ನು ಹುಟ್ಟಿಸಿದ್ದ ಮಂಜರಿ ಮಂಜಿನಂತೆ ತನ್ನಲ್ಲಿ ಕರಗುವುದರ ಅರಿವೇ ಯಾರಿಗೂ ಆಗಿರಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಂಡ
Next post ಕಾವು

ಸಣ್ಣ ಕತೆ

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ಶಾಕಿಂಗ್ ಪ್ರೇಮ ಪ್ರಕರಣ

  ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…