ಹಾಗೆ ಬೆಳೆವ ಹಲಸಿನ ಬಗೆಯ ಬಲ್ಲಿರಾ?

ಹಾ ಎಂದೊಡದು ಆನಂದವಿರಬಹುದು ಹಾ ಎಂದೊಡದು ಆಕ್ರಂದವಿರಬಹುದು ಹಾ ಎನಲಿಕ್ಕೆಡೆಗು ಹಲಸಿನೊಳುತ್ತರವಿಹುದು ಹಬ್ಬದಡುಗೆಯದೇಕೆನುವ ರುಚಿ ಹಲಸಿನೊಳಿಹುದು ಹಸಿದ ಹೊಟ್ಟೆಗೆ ಹಲಸು ಹಬ್ಬದೂಟವೆ ಹೌದು - ವಿಜ್ಞಾನೇಶ್ವರಾ *****

ಕೋಜವಾದೊಡಂ ಮೊಹರೊತ್ತಿ ತಾಜವೆನಲಿದೇನಾತುರವೋ?

ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ ಸಾವಯವವೆನುತಚ್ಚೊತ್ತಿದರೊಪ್ಪಿ ಸವಿಯುವಾಸಕ್ತಿ - ವಿಜ್ಞಾನೇಶ್ವರಾ *****

ಹಸಿದುಣುವಾರೋಗ್ಯ ಹೆಚ್ಚೊ? ಕಾಸುಣುವಡುಗೆ ಹೆಚ್ಚೊ?

ಹಸಿದು ಹಸಿಯುಣುವವರ ಕಂಡು ಮರುಗುತಲದಕೆ ಬಿಸಿ ಉಪ್ಪಡುಗೆ ರುಚಿಯನು ಕೊಟ್ಟುಪಚರಿಸಿದರೆ ಭಲೆ ಎನಬಹುದು ಹುಸಿ ಭರವಸೆಯ ಉಪ್ಪನೆಲ್ಲರಷ್ಟಷ್ಟಿಡುತಿರಲತಿಯಾಗಲದ ನು ಸರಿಪಡಿಸೆ ಸುರಿದ ನೀರತಿಯಾಗಿ ಮಿಕ್ಕಿದಡುಗೆಯ ಗಬ್ಬು ವಾಸನೆಗೆಲ್ಲರಾ ಹೊಟ್ಟೆ ತೊಳಸುತಿದೆ ಮುಂದೇನುಣುವುದೋ? - ವಿಜ್ಞಾನೇಶ್ವರಾ...

ಭೂಮಿ ಬರಡಾಗುವುದೆಂದರದು ಮತ್ತೇನು ? ಏಡ್ಸ್ ತಾನೇ ?

ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ - ವಿಜ್ಞಾನೇಶ್ವರಾ *****

ರುಚಿಯಂಕೆ ತಪ್ಪಿದರೆ ಶೌಚದಂಕೆ ತಪ್ಪದೇ?

ರುಚಿ ರುಚಿಯೆಣ್ಣೆ ಬಜ್ಜಿ ಬೋಂಡಗಳಂತೆಮ್ಮ ಬಾಚಿ ಪಿಡಿದಿರ್‍ಪ ಯಂತ್ರ ತಂತ್ರಗಳಿದರ ಔಚಿತ್ಯವನರಿತು ಬಳಸಲು ಬೇಕಷ್ಟಿಷ್ಟು ಯೋಚಿಸುತೂಟದ ಜೊತೆಯೊಳೊಂದಷ್ಟು ರುಚಿ ತಿಂಡಿಗಳನು ಹಿತಮಿತದಿ ತಿನ್ನುವಂತೆ - ವಿಜ್ಞಾನೇಶ್ವರಾ *****

ಎಂಮಾಯ್ಕೆಯಾಹಾರ ಶುದ್ಧಬುದ್ಧಿಗಾಗಬೇಡವೇ?

ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು - ವಿಜ್ಞಾನೇಶ್ವರಾ *****

ಇಂನ್ಯಾರೋ ದುಡಿದನ್ನದ ಕತ್ತಲಿನೊಳೆಷ್ಟು ದಿನ ನಿದ್ರೆಯೋ?

ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ - ವಿಜ್ಞಾನೇಶ್ವರಾ *****

ಮುಂದೇನು? ಇಂದೆಲ್ಲ ತಿಂದು ಮುಗಿಸಿದರೆ?

ಸಂತಸವೆಂದೊಡದು ಕುಂತತಿ ತಿನ್ನುವುದಲ್ಲ ಅಂತೆ ತಿನದಿರ್‍ಪವರ ಕಂಡು ಸುಖಿಸಲಳವಿಲ್ಲ ಸ್ವಂತ ದುಡಿಮೆಯು ಸಾಯುತಿರಲೆಂತು ನೋಡಿದೊಡಂ ಕಂತುತಿದೆ ನಿಶ್ಚಿತದಿ ಅನ್ನ ಮೂಲದ ಬಲವು ಚಿಂತನದ ಕೃಷಿ ದಾರಾವೃತವನಿವಾರ್‍ಯವೀ ಜಗಕೆ - ವಿಜ್ಞಾನೇಶ್ವರಾ *****

ಇದ್ದಲ್ಲೇ ಮೇಲೇರ್‍ವ ಉದ್ಯೋಗವನಂತೆ ಅಡ್ಡ ಗೊಳಿಸಿದೊಡೆಂತು?

ಸ್ವದೇಶೋ ಭುವನತ್ರಯಂ ಎಂಬಾದರ್‍ಶದಾಶಯವ ಓದಿಹರೆಲ್ಲೆಲ್ಲೂ ಮೀರುತುದ್ಯೋಗವೆನುತಲೆಯುತಿರೆ ಶುದ್ಧ ಮನ ಜೀವನವತಿ ಶೀಘ್ರ ಹಳಸುತಿದೆ ಬೋಧಗೊಳಿಸಲಿದು ಸರಳ. ಮನೆಯೊಳಿಪ್ಪಡುಗೆ ಕೆ ಡದೊಡಂ ಪಯಣಿಗನ ಜೊತೆಯನ್ನ ಬೇಗ ಹಳಸುವುದು - ವಿಜ್ಞಾನೇಶ್ವರಾ *****

ಹಕ್ಕೆಂದು ಬರಿ ರೊಕ್ಕವನೆ ಬೆಳೆದುಂಡೊಡೆಂತಕ್ಕು?

ಶಕ್ತಿಯನೆಮಗೀವ ಅನ್ನದೊಳು ನೂರಾರು ತರಹ ಯುಕ್ತದೊಳಡುಗೆ ಮಾಡಲದುವೆ ಸಾವಿರದಾರು ತರಹ ಭಕ್ತಿಯೊಳೆಮ್ಮನ್ನವನು ನಾವೆ ಬೆಳೆದೊಡದು ವರಹ ಸೊಕ್ಕಿನೊಳಲೆವುದನೆ ಉದ್ಯೋಗವೆನೆ ವ್ಯರ್‍ಥವೆಲ್ಲರ ಬರಹ ರೊಕ್ಕವೆನುತನ್ನಮೂಲವನೆ ಮುಕ್ಕಿರಲೆಲ್ಲೆಡೆ ತ್ರಾಹ - ವಿಜ್ಞಾನೇಶ್ವರಾ *****