ಸಹಜ ಸ್ಪಂದನ

ಸಹಜ ಸ್ಪಂದನ

ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ. ಗಾಡಿ ಸ್ವಲ್ಪ ಬೇಗನೇ ಬಂದುಬಿಟ್ಟಿತ್ತು. ಅಲ್ಲಿಂದ ನಾವು ಐದಾರು ಕಿಲೋಮೀಟರ್ ದೂರದ ಸೀತಾಫಲಮಂಡಿಗೆ ಬರಬೇಕು. ಆಟೋದಲ್ಲಾದರೆ ಸುಮಾರು ಅರುವತ್ತು, ಎಪ್ಪತ್ತು ರೂಪಾಯಿ. ಅದೃಷ್ಟವಶಾತ್ ಎಂ.ಎಂ.ಟಿ.ಎಸ್. ಎಂಬ ಲೋಕಲ್ ಗಾಡಿಯೊಂದು ಆ ಕೂಡಲೇ ಅತ್ತ ಹೊರಡುವುದಿತ್ತು. ನಾವದಕ್ಕೆ ನೂಕುನುಗ್ಗಲಿನಲ್ಲಿ ಟಿಕೀಟು ಕೊಂಡು ಸೀತಾಫಲಮಂಡಿಗೆ ಬಂದೆವು. ನಾವು ಕುಳಿತಿದ್ದ ಬೋಗಿ ಪ್ಲಾಟ್ಫಾರಮಿನ ಹೊರಗೆ ನಿಂತಿತು. ಇಳಿಯುವುದು ಹೇಗೆ? ಎಂ.ಎಂ.ಟಿ.ಎಸ್.ನಲ್ಲಿ ಪ್ರಯಾಣಿಸದವರಿಗೆ ಇದು ಅರ್ಥವಾಗುವುದಿಲ್ಲ. ಈ ಲೋಕಲ್ ಗಾಡಿಯ ಮೈರಚನೆ ಬಸ್ಸಿನ ಹಾಗೆ ಇರುತ್ತದೆ. ಅಗಲ ಹೆಚ್ಚು, ಉದ್ದ ಸಾಮಾನ್ಯ ಗಾಡಿಯಷ್ಟು ಇಲ್ಲ. ಆದ್ದರಿಂದ ಇದರ ಬಾಗಿಲ ಬಳಿ ಕೇವಲ ಒಂದೇ ಒಂದು ಮೆಟ್ಟಲು ಇರೋದು. ಟ್ರೇನ್ ಡ್ರೈವರ್ ಗಾಡಿಯನ್ನು ನಿಲ್ಲಿಸುವಾಗ ಎಲ್ಲಾ ಬೋಗಿಗಳೂ ಪ್ಲಾಟ್ಫಾರಮಿನಲ್ಲಿರುವಂತೆ ಜಾಗ್ರತೆ ವಹಿಸುವುದು ಅಗತ್ಯ. ಇಲ್ಲದಿದ್ದರೆ ಪ್ರಯಾಣಿಕರಿಗೆ ಕಷ್ಟವಾಗುತ್ತದೆ. ಆದರೆ ನಮ್ಮ ಗಾಡಿಯ ಡ್ರೈವರ್ ಇಲ್ಲಿ ತಪ್ಪಿದ್ದ. ಇನ್ನೂ ಬೆಳಕೊಡೆದಿರಲಿಲ್ಲ. ಕತ್ತಲು. ಈ ಗಾಡಿ ಒಂದೊಂದು ನಿಲ್ದಾಣದಲ್ಲಿ ನಿಲ್ಲುವುದು ಒಂದೆರಡು ನಿಮಿಷಗಳು ಮಾತ್ರ. ಗಾಡಿ ನಿಂತ ಕೂಡಲೇ ಇಳಿಯುವವರದು ಹತ್ತುವವರದು ನೂಕು ನುಗ್ಗಲು ಸುರುವಾಗುತ್ತದೆ. ನಾವು ಇದ್ದ ಕಡೆಯೂ ಇಳಿಯುವವರ ಆತುರ ಸುರುವಾಯಿತು. ನಮ್ಮ ಬೋಗಿ ಪ್ಲಾಟ್‌ಫಾರಮಿನ ಬಳಿ ಇಲ್ಲದ ಕಾರಣ ಸಾಮಾನುಗಳೊಂದಿಗೆ ಇಳಿಯುವುದೆಂದರೆ ಕೆಳಗೆ ಜಿಗಿದುಬಿಡುವುದೇ ಆಗಿತ್ತು. ನನ್ನ ಮಗಳು ಮೊದಲು ಹಾಗೆ ಮಾಡಿದಳು, ನಂತರ ನನ್ನ ಹೆಂಡತಿ. ಹೆಚ್ಚೇನೂ ಎತ್ತರವಿಲ್ಲದ ನನ್ನ ಹೆಂಡತಿಗೆ ಅದು ತೀರಾ ಕಷ್ಟವಾಯಿತು. ಕತ್ತಲಲ್ಲಿ ನೆಲ ಕೂಡಾ ಸರಿಯಾಗಿ ಕಾಣಿಸುತ್ತಿರಲಿಲ್ಲ. ಅಂತೂ ಇಳಿದು ಈ ಅನಿರೀಕ್ಷಿತತೆಗೆ ಬೆಚ್ಚಿ ನಿಂತಳು. ನಾನು ಕೊನೆಯವನಾಗಿದ್ದೆ. ನನಗೂ ಅದು ಸುಲಭವಾದ ಸಂಗತಿಯಾಗಿರಲಿಲ್ಲ. ಮಾತ್ರವಲ್ಲ; ಟೇನು ಆ ಕ್ಷಣವೇ ಹೊರಟುಬಿಡಬಹುದು ಎನ್ನುವ ಆತಂಕ ಬೇರೆ. ಇಂಥ ಸಂದರ್ಭದಲ್ಲಿ ನನ್ನ ಸಹಾಯಕ್ಕೆ ಬಂದವಳು ಮೊದಲೇ ಇಳಿದು ಸಾಮಾನುಗಳನ್ನು ಜೋಡಿಸುತ್ತಿದ್ದ ಒಬ್ಬಳು ಯುವತಿ. ಅವಳು ತಾನಾಗಿಯೇ ನನಗೆ ಸಹಾಯ ಹಸ್ತ ನೀಡಿದಳು. ಆದ್ದರಿಂದ ನಾನು ಬಚಾವಾದೆ.

ಡ್ರೈವರನ ಕುರಿತಾಗಿ ಸಿಟ್ಟು ಬಂದರೂ, ಅಂದು ನಾನು ಅನುಭವಿಸಿದಷ್ಟು ಅವ್ಯಕ್ತ ಮಾನಸಿಕ ಪ್ರಫುಲ್ಲತೆ ಸದ್ಯ ಇನ್ನೆಂದೂ ಅನುಭವಿಸಿಲ್ಲವೆಂದೇ ಹೇಳಬೇಕು. ಗುರುತು ಪರಿಚಯವಿರದ ಒಬ್ಬ ಹೆಣ್ಣುಮಗಳು ತನ್ನ ಕೆಲಸ ನೋಡಿಕೊಳ್ಳುವುದು ಬಿಟ್ಟು ವಯಸ್ಸಾದ ನನ್ನಂಥ ಅಪರಿಚಿತ ವ್ಯಕ್ತಿಯೊಬ್ಬನ ಸಹಾಯಕ್ಕೆ ಬಂದಳಲ್ಲ! ಆ ಕ್ಷಣದ ಸಹಜ ಸ್ಪಂದನ ಅವಳದು. ಯೋಚಿಸಿ ಮಾಡಿದುದಲ್ಲ. ನನ್ನದೇ ಮಗಳು ಇತರರಿಗೆ ಅನುಕೂಲವಾಗಲಿ ಎಂದು ದೂರ ಸರಿದಾಗಿತ್ತು. ನನ್ನ ಹೆಂಡತಿ ಆ ಕ್ಷಣದ ಆಕಸ್ಮಿಕತೆಯಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಇಂಥದರಲ್ಲಿ ಅಪರಿಚಿತಳೊಬ್ಬಳು ನನ್ನ ಸಹಾಯಕ್ಕೆ ಬಂದಳು! ಇದೊಂದು ತೀರಾ ಸಾಧಾರಣವಾದ ಘಟನೆ ನಿಜ; ಹೇಳಿಕೊಳ್ಳುವಂಥದು ಏನೂ ಇಲ್ಲ. ಆದರೆ ಈ ಸಾಧಾರಣತೆಯ ಅಸಾಧಾರಣತೆಯೇ ನನ್ನನ್ನು ಕಾಡಿದುದು. ನಾನೇ ನನ್ನ ಜೀವನದಲ್ಲಿ ಎಷ್ಟು ಜನರಿಗೆ ಹೀಗೆ ಸಹಾಯ ಹಸ್ತ ನೀಡಿದ್ದೇನೆ ಎಂದು ಯೋಚಿಸಿದರೆ ನನಗೇನೂ ತೋಚುವುದೇ ಇಲ್ಲ. ಇದರ ಅರ್ಥ ನಾವು ಯಾರೂ ಸಹಜವಾಗಿ ಸ್ಪಂದಿಸುವುದಿಲ್ಲ ಎಂದೇನೂ ಅಲ್ಲ. ಈ ಕುರಿತು ಪ್ರತಿಯೊಬ್ಬನಿಗೂ ಹೇಳಿಕೊಳ್ಳುವುದಕ್ಕೆ ಅನುಭವಗಳಿರಬಹುದು. ಯಾಕೆಂದರೆ, ಸಹಜ ಸ್ಪಂದನವೇ ಮನುಷ್ಯರ ಮೊದಲನೇ ಆಯ್ಕೆ. ಇದನ್ನೇ ನಾವು ಮನುಷ್ಯತ್ವ ಎಂದು ಕರೆಯುತ್ತೇವೆ. ಆದರೂ ಯಾವುದೋ ಒಂದು ತಡೆ ನಮ್ಮ ಮನುಷ್ಯತ್ವವನ್ನು ಪ್ರಕಟಗೊಳ್ಳದಂತೆ ಮಾಡುತ್ತದೆ. ಸಮಾಜ ಜೀವನ ಹೆಚ್ಚೆಚ್ಚು ನಗರೀಕರಣಕ್ಕೆ ಒಳಗಾಗುತ್ತಿರುವಂತೆ ಈ ತಡೆಯೂ ಜಾಸ್ತಿಯಾಗುತ್ತ ಹೋಗುತ್ತದೆ.

ಇದಕ್ಕೆ ಹಲವು ಕಾರಣಗಳಿರಬಹುದು. ಮುಖ್ಯವಾಗಿ, ಎಲ್ಲಿ ಜನನಿಬಿಡತೆ ಜಾಸ್ತಿಯಾಗಿರುತ್ತದೋ ಅಲ್ಲಿ ಮನುಷ್ಯ ತನ್ನನ್ನು ತಾನು ನೋಡಿಕೊಳ್ಳುವುದರಲ್ಲೇ ತಲ್ಲೀನನಾಗಿರುತ್ತಾನೆ. ಯಾಕೆಂದರೆ, ಅಂಥ ಸಂದರ್ಭದಲ್ಲಿ ವಸ್ತುಗಳ ಅಥವಾ ಅನುಕೂಲತೆಗಳ ಅಭಾವವಿರುತ್ತದೆ. ಆದ್ದರಿಂದ ತನಗೆ ಬೇಕಾದ್ದನ್ನು ತಾನು ಹಿಡಿದಿಡಬೇಕು ಎನ್ನುವ ಆತುರ ಪ್ರತಿಯೊಬ್ಬನಲ್ಲೂ ಕಾಣಿಸುತ್ತದೆ. ತನ್ನನ್ನು ತಾನು ನೋಡಿಕೊಳ್ಳದಿದ್ದರೆ ಇನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಯೇ ಮುಂದೆ ಬರುತ್ತದೆ. ಇಲ್ಲಿ ಚಾಲ್ತಿಯಲ್ಲಿರುವುದು ಪ್ರತಿಯೊಬ್ಬನೂ ತನ್ನ ಏಳಿಗೆಯನ್ನು ತಾನು ನೋಡಿಕೊಂಡರೆ ಇಡೀ ಸಮೂಹ ಏಳಿಗೆಯಾಗುತ್ತದೆ ಎನ್ನುವ ಸಿದ್ಧಾಂತ. ವ್ಯಕ್ತಿನಿಷ್ಠವಾದ ಈ ಸಿದ್ಧಾಂತ ಅತ್ಯಂತ ಆದಿಮಾನವ ವರ್ತನೆಯ ಮೇಲೆ ನಿಂತಿರುವುದೆನ್ನುವುದರಲ್ಲಿ ಸಂದೇಹವಿಲ್ಲ. ಯಾಕೆಂದರೆ ಹೀಗೆ ಮನುಷ್ಯ ತನ್ನ ಉನ್ನತಿಗಾಗಿ ಹೋರಾಡುತ್ತ, ಇತರರನ್ನು ಕಾಲ್ತುಳಿತಕ್ಕೆ ಸಿಕ್ಕಿಸುವುದು ಸಾಮಾನ್ಯವಾಗುತ್ತದೆ. ಇವತ್ತು ನಾವು ಎಲ್ಲೆಡೆ ಕಾಣುವುದು ಇಂಥ ‘ಕೊರಳು ಕೊಯ್ಯುವ’ ಪೈಪೋಟಿಯನ್ನೇ. ಆದ್ದರಿಂದ ಸ್ವಾರ್‍ಥವೇ ಪರಮಾರ್ಥವಾಗುತ್ತದೆ.

ಇದು ಸ್ಪರ್ಧಾತ್ಮಕ ಯುಗ ಎಂಬುದನ್ನು ನಾವು ಪ್ರಶ್ನಾತೀತವಾಗಿ ಸ್ವೀಕರಿಸಿಬಿಟ್ಟದ್ದೇವೆ. ಪ್ರತಿ ದಿನ ನಮ್ಮ ಮಕ್ಕಳಿಗೂ ಇದನ್ನು ಹೇಳುತ್ತಿದ್ದೇವೆ. ಶಾಲೆಯಲ್ಲೂ ಇದೇ ಬೋಧನೆ. ಒಳ್ಳೆಯ ಅಂಕಗಳನ್ನು ಪಡೆಯದ ವಿದ್ಯಾರ್‍ಥಿಗಳಿಗೆ ಒಳ್ಳೆಯ ವಿದ್ಯಾಸಂಸ್ಥೆಗಳಲ್ಲಿ ಜಾಗ ದೊರಕುವುದಿಲ್ಲ. ಪ್ರತಿ ವರ್ಷ ನಡೆಯುವ ಸಾಮಾನ್ಯ ಪ್ರವೇಶಾ ಪರೀಕ್ಷೆಗಳು ಇದನ್ನೇ ಸೂಚಿಸುವುದು. ಮುಂದೆ ಉದ್ಯೋಗಾವಕಾಶವೂ ಇಂಥ ಅಂಕಗಳ ಮೇಲೆಯೇ ಅವಲಂಬಿಸಿರುವುದು. ಎಲ್ಲಿ ಹುದ್ದೆಗಳಿಗಿಂತ ಅಪೇಕ್ಷಿಗಳ ಸಂಖ್ಯೆ ಜಾಸ್ತಿಯಿರುತ್ತದೋ ಅಲ್ಲಿ ಸ್ಪರ್ಧೆ ಅನಿವಾರ್ಯ ಎಂಬಂತಾಗಿದೆ. ಇಂಥ ಸ್ಪರ್ಧೆಗಳಿಗೆ ಯಾವುದೇ ಎಲ್ಲೆಗಳಿಲ್ಲ. ಇತರರಿಗೆ ಮಾಹಿತಿ ನೀಡದಿರುವುದು ಕೂಡಾ ಇದರ ಒಂದು ಭಾಗವೇ ಆಗಿದೆ. ಈ ಸರ್ಧಾಯುಗ ಇಷ್ಟೊಂದು ಕಠೋರವಾಗಿ ಸುರುವಾಗುವ ಮೊದಲೇ ಇದರ ಒಂದು ಮುನ್ಸೂಚನೆ ನನ್ನ ಸಹಪಾಠಿಯೊಬ್ಬನ ರೂಪದಲ್ಲಿ ಗೋಚರಿಸಿತ್ತು. ನಾವು ಬಿ.ಎ. ಓದುತ್ತಿದ್ದ ಸಮಯದಲ್ಲಿ ಸಹಪಾಠಿಗಳಲ್ಲಿ ಕೆಲವರು ಕಾಲೇಜಿಗೆ ಸಮೀಪದ ಮನೆಯೊಂದನ್ನು ಒಟ್ಟಿಗೇ ಬಾಡಿಗೆಗೆ ತೆಗೆದುಕೊಂಡು ಅದರ ಒಂದೊಂದು ಕೋಣೆಗಳಲ್ಲಿ ಸ್ವಲ್ಪ ಕಾಲ ವಾಸಮಾಡಿದೆವು. ನಮ್ಮೊಲ್ಲೊಬ್ಬ ಎಲ್ಲಿಂದಲೋ ಪುಸ್ತಕಗಳನ್ನು ಸಂಗ್ರಹಿಸಿ ತಂದು ತಾನೊಬ್ಬನೇ ಗುಪ್ತವಾಗಿ ಓದುತ್ತಿದ್ದ. ತಾನು ಓದಿದ ಪುಸ್ತಕಗಳ ಬಗ್ಗೆಯಾಗಲಿ, ವಿಷಯದ ಬಗ್ಗೆಯಾಗಲಿ ಆತ ಯಾರ ಜತೆಯೂ ಚಕಾರ ಎತ್ತುತ್ತಿರಲಿಲ್ಲ. ಪರೀಕ್ಷೆಯಲ್ಲಿ ತನಗೊಬ್ಬನಿಗೇ ಒಳ್ಳೆಯ ಅಂಕಗಳು ಬರಬೇಕು ಎನ್ನುವುದು ಅವನ ಆಕಾಂಕ್ಷೆಯಾಗಿತ್ತು. ನಮಗೆ ಅವನನ್ನು ಹೇಗೆ ಸ್ವೀಕರಿಸಬೇಕು ಎನ್ನುವುದೇ ತಿಳಿಯದೆ ಗೊಂದಲಕ್ಕೀಡಾದೆವು. ಪರೀಕ್ಷೆಯಲ್ಲಿ ಆತನೂ ಸೇರಿದಂತೆ ನಮಗೆ ಯಾರಿಗೂ ಒಳ್ಳೆಯ ಅಂಕಗಳು ಬರಲಿಲ್ಲ. ಇದಕ್ಕೆ ಬದಲಾಗಿ ನಾವು ಪರಸ್ಪರ ಸಹಕರಿಸಿಕೊಂಡು ಒಟ್ಟಿಗೇ ಅಭ್ಯಾಸ ಮಾಡುವುದು ಇನ್ನೊಂದು ಸಾಧ್ಯತೆಯಾಗಿತ್ತು. ಇದರಿಂದ ನಾವೆಲ್ಲರೂ ಒಟ್ಟೊಟ್ಟಿಗೆ ಬೆಳೆಯುತ್ತಿದ್ದೆವು. ಆದರೆ ಇದು ಯಾಕೋ ನಮಗೆ ಹೊಳೆಯಲಿಲ್ಲ. ಬಹುಶಃ ಮಾಹಿತಿಸ್ವಾಮ್ಯ ಕಾಪಾಡಬಯಸಿದ ನಮ್ಮ ಸಹಪಾಠಿಯ ಏಕಾಂತತೆ ಇದಕ್ಕೆ ಕಾರಣವಿದ್ದರೂ ಇರಬಹುದು. ಆತನ ಮನಸ್ಸೂ ತಾನು ಓದುತ್ತಿದ್ದ ವಿಷಯದ ಮೇಲೆ ಇದ್ದಿರಲಾರದು; ತನ್ನ ಗೌಪ್ಯವನ್ನು ಹೇಗೆ ರಕ್ಷಿಸಿಕೊಳ್ಳುವುದು ಎನ್ನುವುದೇ ಅವನ ಮನಸ್ಸನ್ನು ತುಂಬಿಕೊಂಡಿರಬೇಕು. ನಾವೆಲ್ಲರೂ ನಮ್ಮ ನಮ್ಮನ್ನು ಮರೆತು ವಿಷಯದ ಕಡೆ ಒಟ್ಟಾಗಿ ಗಮನ ನೀಡಿದ್ದರೆ ಓದಿನಲ್ಲಿ ಯಶಸ್ವಿಯಾಗುತ್ತಿದ್ದೆವು. ಒಮ್ಮೆ ನಾನು ಗ್ರೀಕ್ ಕಲಿಯುವ ಉದ್ದೇಶದಿಂದ ಒಂದು ಪುಸ್ತಕ ಕೊಂಡುಕೊಂಡೆ. ಅದನ್ನು ಕಲಿಯುವುದಕ್ಕೆ ನನ್ನಿಂದ ಆಗದೆ ಇದ್ದರೂ, ಗ್ರೀಕ್ ಕಲಿಯುವುದು ಹೇಗೆ ಎಂಬ ಬಗ್ಗೆ ಆ ಪುಸ್ತಕದ ಆರಂಭದಲ್ಲಿದ್ದ ಕೆಲವು ಮಾತುಗಳಲ್ಲಿ ಒಂದು ನನ್ನ ನೆನಪಿನಲ್ಲಿದೆ. ‘ನೀವು ಕಲಿಯುತ್ತಿರುವಾಗಲೇ ಇತರರಿಗೂ ಕಲಿಸಿ’ ಎನ್ನುವುದೇ ಆ ಮಾತು. ಈ ಮಾತಿನ ಉದ್ದೇಶ ಗ್ರೀಕ್‌ನ ಪ್ರಚಾರವಲ್ಲ; ಕಲಿಸುವುದೇ ಕಲಿಯುವ ವಿಧಾನ ಎಂಬುದನ್ನು ತಿಳಿಸುವುದು. ಅಧ್ಯಾಪಕರಾಗಿರುವವರಿಗೆಲ್ಲ ಇದರ ಸತ್ಯ ಗೊತ್ತಿರುವುದೇ. ನಾನು ಇಂಗ್ಲಿಷ್ ಸಾಹಿತ್ಯ ಓದಿ ಎಂ.ಎ. ಪದವಿ ಪಡೆದುಕೊಂಡು ಕಾಲೇಜಿನಲ್ಲಿ ಅಧ್ಯಾಪಕನಾಗಿ ಪಾಠಹೇಳಲು ಸುರುಮಾಡಿದ ನಂತರವೇ ನನಗೆ ಆ ಭಾಷೆ ಮತ್ತು ಸಾಹಿತ್ಯ ಅರ್ಥವಾಗಲು ಆರಂಭವಾದದ್ದು!

ಸ್ಪರ್ಧೆಗೆ ವಿರುದ್ಧವಾದ ಕಲ್ಪನೆ ಸಹಕಾರ. ಸಾಮೂಹಿಕ ಬೆಳವಣಿಗೆಗೆ ಸಹಕಾರವೊಂದೇ ದಾರಿ ಎನ್ನುವುದು ಮಹಾತ್ಮಾ ಗಾಂಧಿಯವರ ನಂಬಿಕೆಯಾಗಿತ್ತು. ಹಳ್ಳಿಗಳಲ್ಲಿ ಎಲ್ಲಾ ಕೃಷಿಕರ ಹತ್ತಿರವೂ ಹೊಲ ಉಳುವುದಕ್ಕೆ ಎತ್ತುಗಳು ಇರುವುದಿಲ್ಲ. ಅಂಥ ಕಡೆ ಅವರು ಎತ್ತುಗಳನ್ನು ಉಳ್ಳವರಿಂದ ಎರವಲು ಪಡೆದುಕೊಳ್ಳುವ ಸಂಪ್ರದಾಯವಿದೆ. ಹೀಗೆ ಎರವಲು ಪಡೆದದ್ದಕ್ಕೆ ಪ್ರತಿಯಾಗಿ ಅವರು ಹಿಂಡಿಯ ಖರ್ಚೆಗೆಂದು ಏನಾದರೂ ರೊಕ್ಕ ಕೊಡಬಹುದು,. ಅಥವಾ ತಾವೇ ಏನಾದರೂ ಕೂಲಿ ಮಾಡಬಹುದು. ಎತ್ತಿನ ಒಡೆಯರು ಏನನ್ನೂ ತೆಗೆದುಕೊಳ್ಳದೆಯೂ ಇರಬಹುದು. ಕೆಲವು ಕಡೆ ಭತ್ತದ ಗದ್ದೆಯುಳ್ಳವರು ಪರ್ಯಾಯ ಬೆಳೆಯಾಗಿ ತರಕಾರಿ ಬೆಳೆಸುವ ಸಂದರ್ಭದಲ್ಲಿ ಗದ್ದೆಯಿಲ್ಲದವರಿಗೂ ತಮ್ಮ ನೆಲದಲ್ಲಿ ತರಕಾರಿ ಬೆಳೆಸುವ ಅವಕಾಶ ಕೊಡುತ್ತಾರೆ. ಇದರಿಂದ ಎರಡೂ ಕಡೆಯವರಿಗೆ ಲಾಭವೆಂದು ಬೇರೆ ಹೇಳಬೇಕಾಗಿಲ್ಲ; ಸ್ವಂತ ಭೂಮಿಯಿಲ್ಲದವರಿಗೆ ತರಕಾರಿ ಬೆಳೆ, ಗದ್ದೆ ಮಾಲೀಕರಿಗೆ ತಮ್ಮ ನೆಲ ಫಲವತ್ತಾದ ಹಾಗೆ. ಸಹಕಾರಿ ತತ್ವದ ಅಗತ್ಯದ ಬಗ್ಗೆ ಸಾವಿರಾರು ಪುಸ್ತಕಗಳು ಪ್ರಕಟವಾಗಿವೆ; ಆದ್ದರಿಂದ ಈ ಕುರಿತು ಇವತ್ತು ಹೊಸದಾಗಿ ಹೇಳುವುದಕ್ಕೇನೂ ಉಳಿದಿಲ್ಲ.

ಸಹಕಾರಕ್ಕೆ ಆತಂಕ ತಂದಿರುವುದು ಇವತ್ತು ಮುಖ್ಯವಾಗಿ ಎರಡು ಸಂಗತಿಗಳು: ಪರಸ್ಪರ ಸ್ಪರ್ಧೆಯ ಮೇಲೇ ನಿಂತಿರುವ ನಮ್ಮ ಔದ್ಯಮಿಕ ಕ್ಷೇತ್ರ; ಮತ್ತು ಕಳೆದುಹೋಗುತ್ತಿರುವ ಮನುಷ್ಯವಿಶ್ವಾಸ. ನೀವು ಪರಸ್ಪರ ಪೂರಕ ವಸ್ತುಗಳನ್ನು ತಯಾರಿಸುವ ಕಂಪೆನಿಗಳಾಗಿದ್ದರೆ ಒಬ್ಬರು ಇನ್ನೊಬ್ಬರಿಗೆ ಅಗತ್ಯವಾಗಿರುತ್ತೀರಿ; ಒಂದು ವೇಳೆ ಒಂದೇ ವಸ್ತುವಿನ ತಯಾರಕರಾಗಿದ್ದರೆ-ಉದಾಹರಣೆಗೆ, ಚಾಕಲೇಟು-ಒಬ್ಬರು ಇನ್ನೊಬ್ಬರನ್ನು ಒತ್ತರಿಸಲು ಯತ್ನಿಸುತ್ತೀರಿ. ಇಂಥ ಕಡೆ ಸ್ಪರ್ಧೆ ಕೆಲವೊಮ್ಮೆ ಉಳಿವು ಅಳಿವಿನ ಪ್ರಶ್ನೆಯಾಗಿಬಿಡುವುದರಿಂದ ಇಲ್ಲಿ ಎಲ್ಲಾ ನೈತಿಕತೆಗಳೂ ಹರಾಜಾಗಿಬಿಡುತ್ತವೆ. ಒಬ್ಬನ ಚಾಕಲೇಟ್ ಉತ್ಪಾದನೆಯನ್ನು ಇನ್ನೊಬ್ಬ ಹಾಳುಮಾಡುವುದಕ್ಕೂ ಹೇಸುವುದಿಲ್ಲ! ಇಂಥ ಸ್ಪರ್ಧೆಯನ್ನು ನೋಡಿದರೆ, ಡಾರ್ವಿನ್ನ ವಿಕಾಸವಾದದಲ್ಲಿ ಅನ್ವಯಿಸುವ survival of the fittest ‘ಸಮರ್ಥನೇ ಉಳಿಯುವುದು’ ಎಂಬ ಮಾತು ಎಲ್ಲಾ ಕಡೆಯೂ ನಿಜವೇನೋ ಎನಿಸಿಬಿಡುತ್ತದೆ. ಇಲ್ಲಿ ಸಮರ್ಥ ಎಂದರೆ ಕೇವಲ ದೈಹಿಕ ಬಲ ಎಂದರ್ಥವಲ್ಲ. ಇದರಲ್ಲಿ ಬದುಕುವ ತಂತ್ರಗಳೆಲ್ಲವೂ ಸೇರಿರುತ್ತವೆ. ಮಾನವನ ಇತಿಹಾಸವನ್ನು ನೋಡಿದರೂ, ಇಂದು ಚರಿತ್ರೆಯ ಪುಸ್ತಕಗಳಲ್ಲಿ ನಮೂದಿತವಾಗಿರುವ ರಾಜಮಹಾರಾಜರುಗಳೆಲ್ಲ ನೈತಿಕವಾಗಿ ಶುದ್ಧರೇನಲ್ಲ; ಹಂತಕರೇ ಜಾಸ್ತಿ! ಆದ್ದರಿಂದಲೇ ಜೋ ಜೀತಾ ವಹೀ ಸಿಕಂದರ್ ‘ಗೆದ್ದವನೇ ದೊರೆ’ ಎಂಬ ಗಾದೆಯೂ ಬಂದುದು. ಸಾಮಾನ್ಯರ ನೀತಿಯೇ ಬೇರೆ, ರಾಜರ ನೀತಿಯೇ ಬೇರೆ ಎಂಬ ಹಾಗೆ ಹದಿನೈದನೇ ಶತಮಾನದ ಇಟಾಲಿಯನ್ ರಾಜತಂತ್ರಜ್ಞ ಮ್ಯಾಖಿಯವೆಲ್ಲಿ ಒಂದು ಪುಸ್ತಕವನ್ನೇ ಬರೆದ. ಸಾಮಾನ್ಯರ ಜೀವನದಲ್ಲಿ ಅನೀತಿಯಾದ್ದು ರಾಜರ ಜೀವನದಲ್ಲಿ ನೀತಿಯಾಗುತ್ತದೆ. ಯಾಕೆಂದರೆ, ‘ಕಪಟ’, ‘ಪ್ರಲೋಭನೆ’ ಇತ್ಯಾದಿಗಳಿಲ್ಲದಿದ್ದರೆ ರಾಜ ರಾಜನಾಗಿ ಉಳಿಯಲಾರ ಎನ್ನುವುದು ಮ್ಯಾಖಿಯವೆಲ್ಲಿಯ ವಾದ. ಇದೇ ನೀತಿಯನ್ನು ನಾವು ಚಾಣಕ್ಯನಲ್ಲೂ ಕಾಣುತ್ತೇವೆ. ವಿಚಿತ್ರವಾದ ವಿಷಯವೆಂದರೆ, ಇಂದಿನ ರಾಜಕೀಯವೂ ಇದನ್ನು ಸ್ವೀಕರಿಸಿದಂತೆ ತೋರುತ್ತದೆ! ಆದ್ದರಿಂದಲೇ ಶುದ್ಧರಾಗಿರುವವರು ರಾಜಕೀಯದಲ್ಲಿ ಉಳಿಯುವ ಹಾಗಿಲ್ಲ ಎಂಬುದನ್ನು ಎಲ್ಲರೂ ಒಪ್ಪಿಬಿಟ್ಟಿರುವುದು. ಅಂತರರಾಷ್ಟ್ರೀಯ ರಾಜಕೀಯದಲ್ಲಂತೂ ಯಾವುದು ತಮಗೆ ಒಳಿತು, ಯಾವುದು ಅಲ್ಲ ಎನ್ನುವುದೇ ರಾಷ್ಟ್ರಗಳ ಅಂತರರಾಷ್ಟ್ರೀಯ ನಿಲುವುಗಳನ್ನು ನಿರ್ಧರಿಸುವಂಥದು.

ಇದು ಸಾಮೂಹಿಕ ಮಟ್ಟದಲ್ಲಾದರೆ, ವೈಯಕ್ತಿಕ ನೆಲೆಯಲ್ಲಿ ಮನುಷ್ಯ ವಿಶ್ವಾಸ ಹೊರಟುಹೋಗುತ್ತಿದೆ. ಕೆಲವು ವರ್ಷಗಳ ಮೊದಲು, ಟ್ರೇನಿನಲ್ಲಿ ಪಯಾಣಿಸುವವರು ಪರಸ್ಪರ ಪರಿಚಯವಾಗಿ ತಂತಮ್ಮ ತಿಂಡಿ ತಿನಿಸುಗಳನ್ನು ಹಂಚಿಕೊಳ್ಳುವುದಿತ್ತು. ಇಂದು ಹಾಗೆ ಮಾಡುವುದು ಗಂಡಾಂತರಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಆ ತಿಂಡಿಯಲ್ಲಿ ನಿದ್ದೆಯ ಮದ್ದು ಹಾಕಿದ್ದು, ನೀವು ಎಚ್ಚೆತ್ತಾಗ ನಿಮ್ಮ ವಸ್ತುಗಳು ಮಾಯವಾಗಿರಬಹುದು. ವಿಮಾನ ನಿಲ್ದಾಣಗಳಲ್ಲಂತೂ ಯಾರೂ ಅಪರಿಚಿತರಿಂದ ಯಾವ ವಸ್ತುಗಳನ್ನೂ ಸ್ವೀಕರಿಸಬಾರದು ಎಂಬ ಸೂಚನೆಯಿದೆ. ಇರಿಸಲೆಂದು ನಿಮಗೆ ನೀಡಿದ ಪೊಟ್ಟಣದಲ್ಲಿ ಕೊಕೇನ್ ಇರಬಹುದು! ಪ್ರತಿ ಮನುಷ್ಯನೂ ತನ್ನ ಜೀವಿತ ಕಾಲದಲ್ಲಿ ಒಂದಲ್ಲ ಒಂದು ರೀತಿಯ ವಿಶ್ವಾಸವಂಚನೆಗೆ ಒಳಗಾಗಿಯೇ ಇರುತ್ತಾನೆ. ಆದರೂ, ಅದು ನಮ್ಮ ಮಾನವೀಯತೆಯನ್ನು ನಾಶಗೊಳಿಸಲಾರದು. ಡಾರ್ವಿನನ ವಿಕಾಸವಾದ ಏನೇ ಹೇಳಲಿ (survival of the fittest ಎಂಬೀ ಮಾತು ನಿಜವಾಗಿಯೂ ಡಾರ್ವಿನ್ ಬಳಸಿದ್ದಲ್ಲ ಎನ್ನುವುದು ಬೇರೇ ವಿಷಯ) ಅದು ಮನುಷ್ಯ ಸಂಸ್ಕೃತಿಗೆ ಅನ್ವಯಿಸುತ್ತದೆಯೆಂದು ನನಗನಿಸುವುದಿಲ್ಲ. ಒಬ್ಬಾತ ಕಷ್ಟದಲ್ಲಿದ್ದಾಗ ನಾವು ಕೈನೀಡುವುದಿದೆಯಲ್ಲ-ಆ ಸಹಜ ಸ್ಪಂದನವೇ ಮನುಷ್ಯನನ್ನು ಇತರ ಪ್ರಾಣಿಗಳಿಂದ ಬೇರ್‍ಪಡಿಸಿರುವುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೃಪ್ತಿ
Next post ಹುಡುಕ್ಕೊಂಡ್ ಹೋಯ್ತೋ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…