Home / ಲೇಖನ / ಇತರೆ / ವಚನ ವಿಚಾರ – ಯಾರೂ ಇಲ್ಲವೆಂದು

ವಚನ ವಿಚಾರ – ಯಾರೂ ಇಲ್ಲವೆಂದು

ಆರೂ ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು

[ಆರೂ-ಯಾರೂ, ಆಳಿಗೊಳಲುಬೇಡ-ದುಃಖಗೊಳ್ಳಬೇಡ, ಆನಂಜುವಳಲ್ಲ-ನಾನು ಹೆದರುವವಳಲ್ಲ, ಆನಿಹೆನು-ನಾನಿರುವೆನು, ಸರಿ-ಕತ್ತಿಯ ಅಲಗು, ಕರ ಕೇಡು-ಅತಿಯಾದ ಕಷ್ಟ]

ಅಕ್ಕ ಮಹಾದೇವಿಯ ವಚನ. ಈ ವಚನವನ್ನು ಯಾರಿಗೆ ಹೇಳುತ್ತಿರಬಹುದು? ತನಗೆ ತಾನೇ, ಅಥವಾ ತನ್ನನ್ನು ಪರೀಕ್ಷಿಸಲು ಬಯಸಿದ ಮತ್ತೊಬ್ಬರಿಗೆ, ಅಥವ ಚನ್ನಮಲ್ಲಿಕಾರ್ಜುನನಿಗೇ ಹೇಳುತ್ತಿದ್ದಾಳೆಯೋ ಏನೋ. ಮೂರನೆಯ ಸಾಧ್ಯತೆ ಸೂಕ್ತವೆನಿಸುತ್ತದೆ.

ನನಗೆ ಯಾರೂ ಇಲ್ಲ, ಅನಾಥಳು ಎಂದು ನಿರ್ಲಕ್ಷ್ಯ ಮಾಡಬೇಡ, ನಾನು ತರಗೆಲೆಗಳನ್ನು ತಿಂದುಕೊಂಡಿದ್ದೇನೆ. (ಮರದ ಎಲೆಗಳನ್ನೇ ತಿಂದುಕೊಂಡು ತಪಸ್ಸು ಮಾಡುವ ಕ್ರಮವೂ ಇತ್ತೆಂದು ತೋರುತ್ತದೆ. ಗಿರಿಜೆಯು ಶಿವನ ಕುರಿತು ತಪಸ್ಸು ಮಾಡಿದಾಗ ಕೆಲವು ಕಾಲ ಎಲೆಗಳನ್ನೇ ತಿಂದು ಇದ್ದಳೆಂಬ ಕಥೆ ಇದೆ). ಚೂಪಾದ ಕತ್ತಿಯ ಮೇಲೆ ಒರಗಿದ್ದೇನೆ. ಚನ್ನಮಲ್ಲಿಕಾರ್ಜುನನನ್ನು ಬಯಸಿ ನನಗೆ ನಾನೇ ಹೀಗೆ ದಂಡನೆ ಕೊಟ್ಟುಕೊಳ್ಳುತ್ತಿರುವಾಗ ಇನ್ನೇನು ಆಗಲು ಸಾಧ್ಯ. ಚನ್ನಮಲ್ಲಿಕಾರ್ಜುನ ಇನ್ನೂ ಅತಿ ಕೆಡುಕನ್ನೇನಾದರೂ ಒಡ್ಡಿದರೆ ದೇಹ, ಪ್ರಾಣ ಎರಡನ್ನೂ ಅವನಿಗೇ ಅರ್ಪಿಸಿಬಿಡುತ್ತೇನೆ.

ನನಗೆ ಇರುವುದು ಚೆನ್ನಮಲ್ಲಿಕಾರ್ಜುನ ಮಾತ್ರ ಅವನೇ ನನನ್ನು ಯಾರೂ ಇಲ್ಲವೆಂದು ನಿರ್ಲಕ್ಷ್ಯ ಮಾಡಿದರೆ ಅದೇ ಪರಮ ಕೇಡು. ಹಾಗೆ ಮಾಡಿಯಾನೇ ಎಂಬ ಆತಂಕದ ದನಿಯೂ ಇಲ್ಲಿ ಕೇಳುವುದೇ? ಹಾಗಾಗುವುದಾದರೆ ಪ್ರಾಣ, ದೇಹ ಎರಡೂ ಅವನಿಗೇ ಅರ್ಪಣೆಯಾಗಲಿ ಅನ್ನುವಾಗ ಹತಾಶೆ ಇದೆಯೋ, ಗಟ್ಟಿ ಮನಸ್ಸು ಇದೆಯೋ?
*****

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...