ಏನಿದು? ಮಾಯೆ
ಸೃಷ್ಠಿಯ ಛಾಯೆ
ಎಲ್ಲಿಂದ ಎಲ್ಲಿಯವರೆಗೆ
ಹರಡಿದೆ ಜಗತ್ತಿನ ಛಾಯೆ
ಯಾರಾತ? ಎಲ್ಲಿಡಗಿಹನಾತ?
ಸೃಷ್ಠಿಯ ರಹಸ್ಯವ ತಿಳಿಸದಾತ?
ಕತ್ತೆತ್ತಿದರೆ ನೀಲಾಕಾಶ
ಅಸಂಖ್ಯ ತಾರೆಗಳ ಇತಿಹಾಸ
ಸೂರ್ಯ ಚಂದ್ರ ಗ್ರಹಗಳ ಪರಿವೇಷ
ನದಿ ಸಾಗರ ಸಂಗಮ ಸಮಾವೇಷ
ಎಲ್ಲವೂ ಗೂಡ, ನಿಗೂಢ
ಯಾವ ಶಕ್ತಿಯ ಕೈವಾಡ
ವೃಕ್ಷದೊಳಗೆ ಬೀಜವೋ
ಬೀಜದೊಳಗೆ ವೃಕ್ಷವೋ
ಮಂಜಿನ ಒಡಲಲ್ಲಿ
ಕುದಿಯುವ ವಾರಿಧಿ.
ಉರಿಯುವ ನೆರಳಲ್ಲಿ
ತಣ್ಣನೆಯ ಜಲದಿ
ಕಣ್ಣಿಗರಿವಾಗದ ಕೌತುಕ
ಸೃಷ್ಠಿದಾತನ ಕೈಚಳಕ
ಅನಂತ ಸಾಗರದೊಳಗೆ
ಮುತ್ತು ರತ್ನವ ಚೆಲ್ಲಿದ
ವಸುಂಧರೆಯ ಗರ್ಭದಿ
ಕನಕವ ಕರಗಿಸಿದ.
ಮಾನವನ ಎದೆಯೊಳಗೆ
ಅರಿಷಡ್ವರ್ಗಗಳ ತುಂಬಿಸಿ.
ಹಣ ಅಧಿಕಾರ ಕೀರ್ತಿ ಮುಂದಿರಿಸಿ
ಮಾಯಾಮೃಗವನ್ನಾಗಿಸಿ
ಆಡಿಸುವ ಸೂತ್ರಧಾರ
ಯಾರೋ ಅವನ್ಯಾರೋ
ಏನಿದು ಮಾಯೆ?
ಸೃಷ್ಠಿಯ ಛಾಯೆ.
*****