ನಾವು ಗೆಳೆಯರು ಹೂವು ಹಣ್ಣಿಗೆ
ಚಿಗುರು ಕಾಯಿಗೆ ಚಲುವಿಗೆ
ನಾವು ಹೊಸಯುಗ ನಗೆಯ ಹುಡುಗರು
ಕಲ್ಲು ಮುಳ್ಳಿಗೆ ಕಾಡಿಗೆ

ಗಿಡದ ಹಕ್ಕಿಯ ಕಂಠ ಕಂಠಕೆ
ಸಿಹಿಯ ಸಕ್ಕರೆ ಹಂಚುವಾ
ಮುಗಿಲ ಗಲ್ಲಕೆ ಪ್ರೀತಿ ತುಂಬಿಸಿ
ಗುಡ್ಡ ಬೆಟ್ಟವ ನಗಿಸುವಾ

ಹೊಲವ ನಂಬಿಸಿ ನೆಲವ ಚುಂಬಿಸಿ
ಹಸಿರು ಹೂವು ಬೆಳೆಸುವಾ
ಹಳೆಯ ಗವಿಯಲಿ ಕೊಳೆಯ ಮಳೆಯಲಿ
ಬಿಸಿಲ ಕೋಲನು ಬೀಸುವಾ

ಎಲ್ಲಿ ಕತ್ತಲೆ ಹಾವು ಚೇಳು
ಕರಿಯ ಕಂಬಳಿ ಹಾಸಿವೆ
ಅಲ್ಲಿ ಬೆಳಕಿನ ಹೊಳೆಯ ಹರಿಸುವ
ದೀಪ ಮಾಲೆಯ ಹಚ್ಚುವಾ
*****