ಕಗ್ಗತ್ತಲ ಭೇದಿಸಲೊಂದು ಬಿಸಿಲ ಕೋಲು
ಉಸಿರಾಡಲು ಒಂದಿಷ್ಟು ಗಾಳಿ
ಇನ್ನೇನು ಬೇಕು?

ಕಚ್ಚಲೊಂದು ಬಣ್ಣದ ಚೆಂಡು
ಚಚ್ಚಲೊಂದು ಮರದ ಕುದುರೆ
ಇನ್ನೇನು ಬೇಕು?

ಬರೆಯಲೊಂದು ಮಣಿಕಟ್ಟಿನ ಸ್ಲೇಟು
ಬತ್ತಾಸು ಕೊಳ್ಳಲು ಆರು ಕಾಸು
ಇನ್ನೇನು ಬೇಕು?

ಕಣ್ಣಿಗೆ ಹಚ್ಚಲೊಂದು ಡಬ್ಬ ಕಾಡಿಗೆ
ನವಿಲು ಬಣ್ಣದ ಲಂಗ, ಜರಿ ಅಂಚಿಗೆ
ಇನ್ನೇನು ಬೇಕು?

ಅನಿಸಿದ್ದನ್ನೆಲ್ಲಾ ಹಂಚಿಕೊಳ್ಳಲು ಗೆಳತಿಯರು
ದಿಟ್ಟಿಸಿ ನೋಡುವುದಕಷ್ಟೇ ಚಂದದ ಹುಡುಗ
ಇನ್ನೇನು ಬೇಕು?

ಹುದುಗಿಕೊಳ್ಳುವುದಕ್ಕೊಂದು ಬೆಚ್ಚನೆಯ ಎದೆ
‘ಅಮ್ಮಾ’ ಎಂದು ಕರೆಯಲು ಒಂದು ಮಗು
ಇನ್ನೇನು ಬೇಕು?

ನನ್ನದೇ ಎಂದು ನಲಿದಾಡುವುದಕ್ಕೊಂದು ಮನೆ
ಸುಳಿದಾಡುವುದಕ್ಕೊಂದು ಮಲ್ಲಿಗೆಯ ಕೈ ತೋಟ
ಇನ್ನೇನು ಬೇಕು?

ಮಗನಿಗೊಂದು ಸರ್ಕಾರಿ ನೌಕರಿ
ಮಗಳ ಬಾಳಿಸಲೊಬ್ಬ ಅಳಿಯ
ಇನ್ನೇನು ಬೇಕು?

ಮೊಮ್ಮಗಳಿಗೆ ಸಂಪತ್ತು ಕೀರ್ತಿ
ಸ್ವಂತಕ್ಕೆ ಮುಪ್ಪಿನಲ್ಲೂ ಆದರ ಗೌರವ
ಇನ್ನೇನು ಬೇಕು?

ಮಬ್ಬು ಹರಿಯಲೊಂದು ಮಿಣುಕು ದೀಪ
‘ಮತ್ತೆ ಹುಟ್ಟಿ ಬರಬೇಕು’ ಅಂಥಾ ಶಾಪ
ಇನ್ನೇನು ಬೇಕು?

ಕಗ್ಗತ್ತಲ ಭೇದಿಸಲೊಂದು…
*****