ಮುಸ್ಸಂಜೆಯ ಮಿಂಚು – ೧೧

ಮುಸ್ಸಂಜೆಯ ಮಿಂಚು – ೧೧

ಅಧ್ಯಾಯ ೧೧ ಸಂತಸದ ನಡುವಿನ ಚಿಂತೆ

ತಿಂಡಿ-ಕಾಫಿ ತಂದಿಟ್ಟು ಬಲವಂತ ಮಾಡಿದರೂ ಯಾಕೋ ತಿನ್ನಲು ಮನಸ್ಸಾಗದೆ ಬರೀ ಕಾಫಿ ಮಾತ್ರ ತೆಗೆದುಕೊಂಡಳು. ಒಳಗಿರುವ ಹಿರಿಯ ಜೀವವನ್ನು ಒಮ್ಮೆ ನೋಡಬೇಕೆಂದು ಮನಸ್ಸು ಬಯಸಿತು. ಅದನ್ನು ವ್ಯಕ್ತಪಡಿಸಿದಳು.

“ಪರ್ವಾಗಿಲ್ಲ ತನುಜಾ. ನಮ್ಮ ಅತ್ತೆ ಯಾರನ್ನೂ ಗುರುತಿಸುವುದಿಲ್ಲ. ಅವರಿರೊ ಸ್ಥಿತೀಲಿ ನೀವು ನೋಡಿದ್ರೆ ಅಸಹ್ಯಸಿಕೊಳ್ತರಿ” ಎಂದು ಏನೇನೋ ಹೇಳ್ತಾ ಇದ್ರೂ ಅತ್ತೆ ಇದ್ದ ಕಡೆ ಹೋಗಲು ಎದ್ದು ನಿಂತಾಗ ವಿಧಿ ಇಲ್ಲದೆ ಮಾಲಿನಿ ಅತ್ತೆ ಇರುವ ರೂಮಿನತ್ತ ಕರೆದೊಯ್ದಳು.

ಹಾಸಿಗೆಗೆ ಅಂಟಿಕೊಂಡು ಮಲಗಿದ್ದ ಆಕೆಯ ನೋಟ ವಿಷಾದಭರಿತವಾಗಿತ್ತು. ತನ್ನನ್ನು ನಾಳೆ-ನಾಡಿದ್ದರಲ್ಲಿ ಎಲ್ಲಿಯೋ ಅಪರಿಚಿತರ ಮಧ್ಯೆ ಬಿಟ್ಟು ಬರುವುದನ್ನು ತಿಳಿದುಕೊಂಡಂತೆ ಭಯದಿಂದ ಮುಖ ಬಿಳಿಚಿಕೊಂಡಿತ್ತು. ಕೃಶವಾಗಿದ್ದ ಆ ಶರೀರದಲ್ಲಿ ಮೂಳೆಗಳಷ್ಟೇ ಕಾಣುತ್ತಿದ್ದವು. ಅಸಹಾಯಕತೆಯ ನೋವು ಆಕೆಯಲ್ಲಿತ್ತು. ಆಕೆಯ ಸಮೀಪ ಹೋಗಿ ಹಾಸಿಗೆಯ ಮೇಲೆ ಕುಳಿತುಕೊಂಡು, ಪ್ರೀತಿಯಿಂದ ಕೃಶವಾಗಿ ಒಣಗಿದಂತಿದ್ದ ಕೈಯನ್ನು ಹಿಡಿದು-

“ಆಜ್ಜಿ ಹೇಗಿದ್ದೀರಾ?” ಕೇಳಿದಳು.

ಅಷ್ಟೊಂದು ಪ್ರೀತಿಯಿಂದ ಆಕೆಯನ್ನು ಯಾರೂ ಮಾತನಾಡಿಸಿರಲಿಲ್ಲವೇನೋ? ಕಣ್ಣುಗಳು ಅರಳಿ, ಮೊಗದಲ್ಲಿ ನಗು ತುಂಬಿತು. ಬಿಳಿಚಿ ಹೋಗಿದ್ದ ಮೊಗದಲ್ಲಿ ಜೀವಸಂಚಾರವಾಗಿ ತನುಜಾ ಹಿಡಿದಿದ್ದ ಕೈಗಳನ್ನು ಮೆಲ್ಲಗೆ ಅದುಮಿತು.

“ಅತ್ತೆ ಮಾತೇ ನಿಲ್ಲಿಸಿಬಿಟ್ಟಿದ್ದಾರೆ ತನುಜಾ. ಎರಡು ವರ್ಷವಾಗಿದೆ ಮಾತಾಡಿ. ಏನು ಕೇಳಿದರೂ ಉತ್ತರ ಕೊಡಲ್ಲ, ಹೀಗಾಗುತ್ತೆ ಅಂತ ಹೇಳಲ್ಲ. ಯಾರು, ಎಷ್ಟೇ ಮಾತನಾಡಿಸಿದರೂ ಮಾತಾಡಲ್ಲ” ಮಾಲಿನಿ ಪ್ರವರ ಒಪ್ಪಿಸಿದಳು.

ಹೆತ್ತ ಮಕ್ಕಳೇ ಹೀಗೆ ಬದುಕಿರುವಾಗಲೇ ನಡೆದುಕೊಂಡರೆ, ಯಾವ ಜೀವಕ್ಕೆ ಆಘಾತವಾಗುವುದಿಲ್ಲ? ಹೆತ್ತು, ಹೊತ್ತು, ಪ್ರೀತಿಯಿಂದ ಸಾಕಿ, ಬೆಳೆಸಿದ ಮಕ್ಕಳಿಗೆ ಈಗ ತಾನು ಬೇಡವಾಗಿದ್ದೇನೆ ಎಂಬ ಭಾವ ಕಾಡಿ, ಅಂಥ ಕೃತಘ್ನ ಮಕ್ಕಳೊಂದಿಗೆ ಮಾತೇ ಬೇಡವೆಂದು ನಿರ್ಧರಿಸಿಬಿಟ್ಟಿತ್ತೇನೋ ಪಾಪ. ಮಕ್ಕಳು ಯಾವುದೇ ಸ್ಥಿತಿಯಲ್ಲಿದ್ದರೂ ತಾಯಿಗೆ ಭಾರವಾಗುವುದಿಲ್ಲ. ಕಷ್ಟವಾಗುವುದಿಲ್ಲ. ಆದರೆ ಮಕ್ಕಳಿಗೆ ತಾಯಿ ಹೊರೆಯಾಗಿಬಿಡುತ್ತಾಳೆ. ನಿರ್ದಯರಾಗಿ ಅಟ್ಟಿಬಿಡುವ ಕಠಿಣತೆ ಬಂದುಬಿಡುತ್ತದೆ. ಪ್ರಪಂಚ ಎಷ್ಟು ವಿಚಿತ್ರ? ವಿಷಾದ ಮೂಡಿ ಮರೆಯಾಯಿತು.

ಮತ್ತೊಮ್ಮೆ ಆಜ್ಜಿಯ ಕೈ ನೇವರಿಸಿ, “ಆಜ್ಜಿ, ನಾನು ಇನ್ನೊಂದು ಸಲ ಬರ್ತಿನಿ. ಅಷ್ಟು ಹೊತ್ತಿಗೆ ನೀವು ಆರೋಗ್ಯವಂತರಾಗಿ ನನ್ನ ಜತೆ ಮಾತನಾಡೋ ಹಾಗೆ ಆಗಿರಬೇಕು. ಗೊತ್ತಾಯ್ತಾ. ಆಮೇಲೆ ನಮ್ಮ ಮನೆಗೆ ಒಂದು ಸಲ ಕರ್ಕೊಂಡು ಹೋಗೀನಿ, ಆಯ್ತಾ.”

ಭರವಸೆಯ ಬೆಳಕು ಮಿಂಚಿ ಮಾಯವಾಯಿತು. ನಸುನಗೆ ಮೊಗದ ಮೇಲೆ ಹರಡಿತು. ತೃಪ್ತಿಯಾಯಿತು ತನುಜಾಳಿಗೆ, ತಾನು ಇಲ್ಲಿಗೆ ಬಂದದ್ದಕ್ಕೂ ಸಾರ್ಥಕವಾಯಿತೆನಿಸಿ ಸಂತೋಷದಿಂದಲೇ ಮನೆಗೆ ಹೊರಟಳು. ಬಾಗಿಲವರೆಗೂ ಬೀಳ್ಕೊಟ್ಟಳು.

“ಇನ್ನೊಂದು ಸಲ ಬನ್ನಿ ತನುಜಾ, ನಿಮ್ಮನ್ನ ಸರಿಯಾಗಿ ಉಪಚರಿಸೋಕೂ ಆಗಲಿಲ್ಲ. ನಂಗೆ ಎಷ್ಟೊಂದು ಬೇಸರ ಆಗ್ತಾ ಇದೆ ಗೊತ್ತಾ?” ಬೇಸರದ ಛಾಯೆ ಸ್ಪಷ್ಟವಾಗಿತ್ತು.

ರಾತ್ರಿ ರಿತು ಬಂದೊಡನೆ ತನುಜಾ ಮಾಲಿನಿಯ ಅತ್ತೆಯ ಬಗ್ಗೆ ಎಲ್ಲವನ್ನೂ ವಿವರಿಸಿದಳು.

“ರಿತು, ನಿಮ್ಮ ಆಶ್ರಮದಲ್ಲಿ ಅಂಥವರಿಗೆ ಅವಕಾಶ ಇದೆಯಾ ?”

“ಇದೆ ಅಮ್ಮಾ ಯಾರನ್ನೂ ಅಲ್ಲಿ ನಿರಾಕರಿಸೋ ಹಾಗಿಲ್ಲ. ಇಂಥವರಿಗಾಗಿಯೇ ಸ್ಪೆಶಲ್ ರೂಮ್‌ಗಳಿವೆ, ಅಲ್ಲಿ ಒಬ್ಬಿಬ್ಬರನ್ನೂ ನೋಡಿಕೊಳ್ಳೋಕೆ, ಅವರನ್ನ ಸ್ನಾನ ಮಾಡಿಸಿ, ಕ್ಲೀನ್ ಮಾಡಿ, ಊಟ-ತಿಂಡಿ ತಿನ್ನಿಸೋ ವ್ಯವಸ್ಥೆ ಇದೆ. ಅವರನ್ನ ನೋಡ್ಕೊಳ್ಳೋ ನರ್ಸ್, ಆಯಾ ಇರುತ್ತಾರೆ. ಅವರಿಗೆ ಜಾಸ್ತಿ ಸಂಬಳ ಕೊಡ್ತಾರೆ. ಪ್ರೀತಿಯಿಂದ ನೋಡಿಕೊಳ್ಳುವಂಥವರನ್ನೇ ಅಲ್ಲಿ ಇಟ್ಟಿದ್ದಾರೆ. ಹಣ ಜಾಸ್ತಿ ಕಟ್ಟಬೇಕಾಗುತ್ತದೆ ಅಷ್ಟೇ. ನಮ್ಮ ಆಶ್ರಮದಲ್ಲೂ ಅಂಥವರು ಇದ್ದಾರೆ. ಮಲಗಿದ ಕಡೆನೇ ಎಲ್ಲಾ. ಪ್ರತಿಯೊಂದಕ್ಕೂ ಇನ್ನೊಬ್ಬರ ಆಶ್ರಯ ಬೇಕೇ ಬೇಕು. ಬೇಕಾದ್ರೆ ಮಾಲಿನಿ ಆಂಟಿ ಅತ್ತೆನೂ ಅಲ್ಲಿಗೆ ಸೇರಿಸಬಹುದು” ವಿವರಿಸಿದಳು.

“ದುಡ್ಡು ಕೊಡೋ ಚೈತನ್ಯ ಇರುವಂಥವರಾದ್ರೆ ಪರ್ವಾಗಿಲ್ಲ ನಿರ್ಗತಿಕರಾದ್ರೆ ಏನು ಮಾಡ್ತೀರಿ ರಿತು? ಕೈ-ಕಾಲು ಗಟ್ಟಿಯಾಗಿದ್ದೇನೋ ಏನಾದ್ರೂ ಕೆಲ್ಸ ಮಾಡ್ಕೊಂಡಿರುತ್ತಾರೆ. ಪಾಪ ಇಂಥವರಾಗಿ ಬಿಟ್ಟರೆ ಏನು ಮಾಡ್ತೀರಿ?” ಸಾಕಷ್ಟು ಸಂಶಯ ವ್ಯಕ್ತಪಡಿಸಿದಳು.

“ವೆಂಕಟೇಶ್ ಸರ್‌ರವರ ವಿಶಾಲ ಮನೋಭಾವನೆಯಿಂದ ನಿರ್ಗತಿಕರಾದವರಿಗೂ ವ್ಯವಸ್ಥೆ ಕಲ್ಪಿಸಿದ್ದಾರೆ ಅಮ್ಮ. ಸಾಯೋತನಕ ಉಚಿತವಾಗಿಯೇ ನೋಡಿಕೊಂಡು, ಸತ್ತ ಮೇಲೆ ಅಂತ್ಯ ಸಂಸ್ಕಾರವನ್ನು ತಮ್ಮದೇ ಖರ್ಚಿನಿಂದ ಮಾಡುತ್ತಾರೆ ಅಮ್ಮ. ಇಂಥದ್ದನ್ನೆಲ್ಲ ಸಂಭಾಳಿಕೆ ಪ್ರತಿ ತಿಂಗಳು ವೆಂಕಟೇಶ್ ಸರ್ ಜೋಳಿಗೆ ಹಿಡ್ಕೊಂಡು ಹೊರಟುಬಿಡುತ್ತಾರೆ. ಎಷ್ಟೋ ಪುಣ್ಯವಂತರು ದಾನವಾಗಿ ಹಣ, ದವಸಧಾನ್ಯ ಎಲ್ಲಾ ಕೊಡ್ತಾರೆ. ವೆಂಕಟೇಶ್ ಸರ್ ಅಂತೂ ಸ್ವಲ್ಪನೂ ಸಂಕೋಚಪಟ್ಟುಕೊಳ್ಳದೆ, ಭಿಕ್ಷುಕರಂತೆ ಅಂತ ಅಂದುಕೊಳ್ಳದೆ ಜೋಳಿಗೆ ಒಡ್ಡುತ್ತಾರೆ. ಈ ವಿಷಯ ನೆನಪಾಗಿದ್ದು ಒಳ್ಳೆಯದಾಯ್ತು. ನಾವೂ ಒಬ್ಬ ಇಂಥ ಅನಾಥ ವೃದೆಗೋ ವೃದ್ಧನಿಗೂ ಆಗುವಷ್ಟು ಖರ್ಚನ್ನ ಕೊಟ್ಟುಬಿಡೋಣ. ಬೇಕಾದರೆ ಒಂದೇ ಸಲ ಒಂದಿಷ್ಟು ದುಡ್ಡು ಕೊಟ್ಟುಬಿಟ್ಟರೆ ಅದರ ಬಡ್ಡಿಯಲ್ಲಿಯೇ ನಿರ್ವಹಿಸುತ್ತಾರೆ. ಹೀಗೆ ಎಷ್ಟೋ ಜನ ಕೊಟ್ಟಿದ್ದಾರೆ ಅಮ್ಮ. ಫಾರಿನ್ನಿಂದಲೂ ಹಣ ಕಳುಹಿಸುವವರಿದ್ದಾರೆ.”

“ಒಳ್ಳೆಯ ಕೆಲಸ ಅಂದ್ರೆ ಯಾರಾದ್ರೂ ದಾನ ಮಾಡ್ತಾರೆ ಬಿಡು. ಮನುವಿಗೂ ಹೇಳೋಣ. ಅವರೇನೂ ಬೇಡ ಅನ್ನೋಲ್ಲ” ತನುಜಾ ಭರವಸೆ ನೀಡಿದಳು.

ಮನು ಮನೆಗೆ ಬಂದೊಡನೆ ರಿತು ತನ್ನ ಬೇಡಿಕೆಯನ್ನು ತಿಳಿಸಿದಳು. ಮಗಳ ಮಾತಿಗೆ ಯಾವತ್ತೂ ಇಲ್ಲವೆನ್ನದ ಮನು ಅವಳ ಕೋರಿಕೆಯನ್ನು ನಿರಾಕರಿಸದಾದ.

“ತಗೋ ರಿತು ಹಣನಾ, ಈ ವಾರ ನಿನ್ನ ಬರ್ತ್‌ಡೇ ಅಲ್ವಾ? ಏನಾದ್ರೂ ಗಿಫ್ಟ್ ತೆಗೆದುಕೊಡೋಣ ಅಂತ ಹಣ ಡ್ರಾ ಮಾಡ್ದೆ, ನಿಂಗೆ ಗಿಫ್ಟ್‌ಗೆ ಬೇಕಾದ್ರೆ ನಾಳೆ ಹಣ ಡ್ರಾ ಮಾಡ್ತೀನಿ” ಎಂದವನೇ ಬ್ಯಾಗಿನಿಂದ ಹಣದ ಕಟ್ಟು ತೆಗೆದು ಕೊಟ್ಟೇಬಿಟ್ಟ.

“ಥ್ಯಾಂಕ್ಯೂ ಅಪ್ಪ. ಅಪ್ಪ ಅಂದ್ರೆ ಹೀಗಿರಬೇಕು. ನಂಗೇನು ಈ ಸಾರಿ ಗಿಫ್ಟ್ ಬೇಡ. ಆದ್ರೆ ಒಂದು ರಿಕ್ವೆಸ್ಟ್” ನಿಲ್ಲಿಸಿದಳು.

“ಹೇಳಮ್ಮ ಅದೇನು ಹೇಳು. ನೀನು ಏನು ಕೇಳಿದ್ರೂ ಮಾಡೋಕೆ ಸಿದ್ದವಾಗಿದೀನಿ. ಆಕಾಶನಾ ತಲೆ ಮೇಲೆ ಹೊತ್ಕೊಂಡು ನಿಂತ್ಕೋಬೇಕಾ? ನಕ್ಷತ್ರನ್ನ ಕಿತ್ಕೊಂಡು ತಂದುಕೊಡಬೇಕಾ? ಹೇಳಮ್ಮ, ಒಂದೇ ಸಲಕ್ಕೆ ಮಾಡಿಬಿಡ್ತೀನಿ” ವೀರಾವೇಶದಿಂದ ಹೇಳಿದಾಗ-

ತನುಜಾ ಅಣಕಿಸುತ್ತಾ, “ಸಾಕು, ಅಂಥ ಸಾಹಸವನ್ನು ಈ ಕುಂಟು ಕಾಲಿನಿಂದ ಮಾಡಬೇಡಿ. ಈಗಷ್ಟೇ ನಡೆಯೋಕೆ ಶುರು ಮಾಡಿದೀರಾ. ಜಾಗಿಂಗ್ ಹೋಗೋಕೆ ಈಗ ಒಂದು ಕಾಲು ಮುರ್ಕೊಂಡಿದ್ರಿ. ಈಗ ನಕ್ಷತ್ರ ತರೋಕೆ ಹೋಗಿ ಎರಡೂ ಕಾಲನ್ನ ಮುರ್ಕೊಂಡ್ರೆ ನಿಮ್ಮನ್ನ ನೋಡಿಕೊಳ್ಳೋಕೆ ಧರಣಿ ಮತ್ತೆ ಬರಬೇಕಾಗುತ್ತೆ.”

“ನೋಡಮ್ಮಾ, ರಿತು ಹೀಗೆ ಆಡಿಕೊಳ್ಳುತ್ತಾಳೆ. ನಾನು ಜೇಮ್ಸ್ ಬಾಂಡ್ನಂತೆ ಅಂತ ನೀನು ಮಾತ್ರ ಹೇಳಬೇಕು. ನನ್ನ ಹೆಂಡ್ತಿ ಹಾಗಂತ ಯಾವತ್ತೂ ಒಪ್ಪಿಕೊಳ್ಳುವುದಿಲ್ಲವಲ್ಲ. ಎಂಥ ಹೆಂಡ್ತಿನಾ ನಂಗೆ ಕರುಣಿಸಿಬಿಟ್ಟ ಆ ದೇವ್ರು” ಅಳುವಂತೆ ನಟಿಸಿದ.

“ಸಾಕು ಸಾಕು ನಿಮ್ಮ ಕೋಳಿ ಜಗಳ. ಮೊದ್ಲು ನಾ ಹೇಳೋದು ಕೇಳಿ, ಈ ಬಾರಿ ನಾನು ನನ್ನ ಬರ್ತ್‌ಡೇನಾ ನಮ್ಮ ಆಶ್ರಮದಲ್ಲಿಯೇ ಆಚರಿಸಿಕೊಳ್ಳುತ್ತೇನೆ. ನೀವಿಬ್ರೂ ಆವತ್ತು ರಜೆ ಹಾಕಿ ಇಡೀ ದಿನ ಅಲ್ಲಿ ನನ್ನ ಜತೆ ಇರಬೇಕು.”

“ಓ.ಕೆ. ಮೈ ಬೇಬಿ, ನಂಗಂತೂ ಒಪ್ಗೆ” ಮನು ಹೇಳಿದೊಡನೆ, “ಇನ್ನು ನಾನು ಬೇಡ, ಆಗೋಲ್ಲ ಅಂದ್ರೆ ಆಗುತ್ತಾ? ನಾನೂ ರಜೆ ಹಾಕ್ತಿನಿ ಸರೀನಾ?”

“ನಂಗೊತ್ತು, ನೀವು ಬೇಡ ಅನ್ನಲ್ಲ. ಅಜ್ಜಿನೂ ಅಲ್ಲಿಗೆ ಬರ್ಲಿ. ಎಲ್ಲರೂ ಸೇರಿ ಅಲ್ಲಿಯೇ ಸೆಲೆಬ್ರೇಶನ್ ಮಾಡೋಣ. ಅವತ್ತಿನ ಖರ್ಚೆಲ್ಲ ನಮ್ದೇ, ಒಂದು ಸಿಹಿ ಮಾಡಿಸಿ, ವಿಶೇಷ ಅಡುಗೆ ಮಾಡಿಸೋಣ. ಅವತ್ತಿನ ಖರ್ಚೆಲ್ಲ ವಹಿಸ್ಕೊಂಡರೆ ಅದೇ ನೀವು ನನಗೆ ಕೊಡೋ ಗಿಫ್ಟ್”.

“ಅಂದ್ರೆ ಎಷ್ಟು ಕೆ.ಜಿ. ಕೇಕ್ ಮಾಡಿಸಬೇಕು ರಿತು” ಮನು ಕೇಳಿದ.

“ಕೇಕ್ ಏನೂ ಬೇಡಪ್ಪಾ. ನಾನೇನು ಚಿಕ್ಕ ಮಗೂನೇ ಕೇಕ್ ಕಟ್ ಮಾಡೋಕೆ, ಅದಲ್ಲ ಬೇಡ.”

“ನೀನು ಹೇಗೆ ಹೇಳ್ತಿಯೋ ಕೇಕ್ ಕಟ್ ಮಾಡಿದ್ರೆ ಚೆನ್ನಾಗಿರುತ್ತಿತ್ತು. ಆಲ್ಲಿರೋರಿಗೂ ಒಂದು ಎಂಟರ್ಟೆನ್ಮೆಂಟ್ ಸಿಗ್ತಾ ಇತ್ತು. ನೀನು ಕೇಕ್ ಕಟ್ ಮಾಡಿ ಎಲ್ಲರಿಗೂ ಹಾಗೆ, ತಿನಿಸಿದ್ರೆ ಎಷ್ಟು ಸಂತೋಷಪಡ್ತಾರೆ ಗೊತ್ತಾ?”

“ಸರಿ ಸರಿ, ಆಪ್ಪ. ಈಗೇನು ನಾನು ಕೇಕ್ ಕಟ್ ಮಾಡಬೇಕು ತಾನೇ. ಮಾಡ್ತೀನಿ ಬಿಡಿ” ಒಪ್ಪಿಗೆ ಕೊಟ್ಟಳು.
* * *

ಅಂದು ಆಶ್ರಮದಲ್ಲಿ ಸಡಗರವೋ ಸಡಗರ. ತಮ್ಮ ಅಚ್ಚುಮೆಚ್ಚಿನ ರಿತುವಿನ ಹುಟ್ಟಿದ ದಿನ, ಅದರ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳಲಿದ್ದಾಳೆಂದು ಪ್ರತಿಯೊಬ್ಬರೂ ಸಂಭ್ರಮಿಸುತ್ತಿದ್ದರು. ವಯಸ್ಸಾಗಿದ್ದರೂ ಚಿಕ್ಕ ಹುಡುಗರಂತೆ, ಆಗ ತಾನೇ ಯೌವನ ಮರಳಿ ಬಂದಂತೆ ಆಶ್ರಮದ ತುಂಬಾ ಓಡಾಡುತ್ತಿದ್ದರು. ಮಕ್ಕಳ, ಮೊಮ್ಮಕ್ಕಳ ಹುಟ್ಟುಹಬ್ಬಗಳಲ್ಲಿ ಪಾಲ್ಗೊಂಡು ಅನುಭವಸ್ಥರಾಗಿದ್ದ ಪಾಂಡಪ್ಪನವರು ಕಲರ್ ಕಲರ್ ಪೇಪರ್‍ಸ್ ಕಟ್ ಮಾಡಿ, ಇಡೀ ಹಾಲ್‍ನ ತುಂಬ ಕಟ್ಟಿಸುತ್ತಿದ್ದರು. ರಿತು ಎಲ್ಲಿ ನಿಂತು ಕೇಕ್ ಕಟ್ ಮಾಡಬೇಕು? ಟೇಬಲ್ ಎಲ್ಲಿ ಇರಿಸಬೇಕು ಎಂಬುದನ್ನೆಲ್ಲ ನಿರ್ದೆಶಿಸುತ್ತಿದ್ದರು. ಇಂಥ ಸಂಭ್ರಮಗಳಲ್ಲಿ ಪಾಲ್ಗೊಂಡು ಹಲವು ವರ್‍ಷಗಳೇ ಕಳೆದು ಹೋಗಿವೆ ಪಾಂಡವನವರಿಗೆ. ವಿಧಿ ಆಟ ಆಡಿರದಿದ್ದರೆ ಪಾಂಡಪ್ಪನವರು ನೆಚ್ಚಿನ ಸೊಸೆಯೊಂದಿಗೆ, ಅಕ್ಕರೆಯ ಮೊಮ್ಮಕ್ಕಳೊಡನೆ ಇರಬೇಕಿತ್ತು. ಸೊಸೆಯೂ ಸದ್ಗುಣ ಸಂಪನ್ನೆ, ಗಂಡನ ಕೆಟ್ಟ ಗುಣಗಳನ್ನೆಲ್ಲ ಸಹಿಸಿಕೊಂಡು, ಮಾವನನ್ನು ಪ್ರೀತಿಯಿಂದ ಕಾಣುತ್ತ, ಮಕ್ಕಳಲ್ಲಿಯೇ ಸುಖವನ್ನು ಕಾಣುತ್ತಿದ್ದಳು. ದುಡಿದದ್ದೆಲ್ಲವನ್ನೂ ಕುಡಿತ, ಇಸ್ಪೀಟ್ ಗಾಗಿ ಹಾಳು ಮಾಡುತ್ತಿದ್ದ ಗಂಡನೊಡನೆ ಏಗುತ್ತ, ಮಕ್ಕಳ ಉನ್ನತಿಗಾಗಿ ಬಹುವಾಗಿ ಶ್ರಮಿಸುತ್ತಿದ್ದಳು. ಅವಳನ್ನೇ ತಾಳ್ಮೆಯಿಂದಿದ್ದರೂ ಕುಡಿದು ಬಂದು, ಹೊಡೆದು-ಬಡಿದು ಹಿಂಸಿಸುತ್ತಿದ್ದ ಗಂಡನ ಕಾಟ ತಡೆಯಲಾರದೆ, ನೆಮ್ಮದಿಯಿಂದ ಬಾಳಲು ಈ ಗಂಡ ಬಿಡಲಾರ ಎಂದುಕೊಂಡು ಮಕ್ಕಳಿಬ್ಬರನ್ನು ಬಾವಿಗೆ ತಳ್ಳಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಶಿಸ್ತಿನ ಸಿಪಾಯಿ ಆಗಿದ್ದಂಥ ತನಗೆ ಇಂಥ ಮಗ ಹುಟ್ಟುವುದೇ? ಮದುವೆ ಮಾಡಿದ್ದರು. ಕೇಂದ್ರ ಸರಕಾರದಲ್ಲಿ ಒಳ್ಳೆಯ ಕೆಲಸದಲ್ಲಿದ್ದ ಪಾಂಡಪ್ಪನವರು ಮಗಳು, ಮಗನನ್ನು ಪ್ರೀತಿಯಿಂದಲೇ ಬೆಳೆಸಿದ್ದರು. ಮಗಳನ್ನು ವಿದೇಶದಲ್ಲಿದ್ದ ಗಂಡಿಗೆ ಮದುವೆ ಮಾಡಿದ್ದರು. ಮಗ ಓದುತ್ತಿರುವಾಗಲೇ ದುರ್‍ವ್ಯಸನಗಳ ದಾಸನಾಗಿದ್ದ. ಈ ವ್ಯಸನಗಳಿಂದಲೇ ಮನೆಯನ್ನು ನರಕ ಮಾಡಿ, ಹೆಂಡತಿ, ಮಕ್ಕಳನ್ನು ತಿಂದು ಹಾಕಿದ್ದ. ಮುದ್ದು ಕಂದಮ್ಮಗಳು, ಪ್ರೀತಿಯ ಸೊಸ ಕಣ್ಮುಂದೆಯೇ ಹೆಣವಾದಾಗ ಆ ಮನೆಯಲ್ಲಿ ಇರದಾದರು. ಮಗನಿಗೆ ಹೇಳದೆ ಇಲ್ಲಿ ಬಂದು ಸೇರಿಕೊಂಡು ತನ್ನಂಥವರ ಜತೆಯಲ್ಲಿ ಬೆರೆಯುತ್ತ ತಮ್ಮ ನೋವನ್ನು ಮರೆಯಲು ಸಾಹಸಪಡುತ್ತಿದ್ದರು.

ಇವತ್ತು ರಿತುವಿನ ಹುಟ್ಟಿದ ಹಬ್ಬ ಎಂದು ತಿಳಿದೊಡನೆ ಅವರಿಗೆ ಹೊಸ ಹುರುಪು ಬಂದಂತಾಗಿತ್ತು. ಎಲ್ಲರೊಂದಿಗೆ ಸೇರಿ, ಮುಂದಾಳತ್ವ ವಹಿಸಿಕೊಂಡು ಅದೊಂದು ಮನೆಯ ಸಮಾರಂಭವೆಂಬಂತೆ ನಡೆಸಲು ಸಿದ್ದತೆ ನಡೆಸಿದ್ದರು.

ಹೊಸ ಸೀರೆ ಧರಿಸಿ, ಹಿತ-ಮಿತ ಅಲಂಕಾರದೊಂದಿಗೆ ರಿತು ಬಂದಿಳಿದಾಗ ಎಲ್ಲರೂ ಕಣ್ಣರಳಿಸಿ ನೋಡಿದರು. ತಿಳಿಗುಲಾಬಿ ಸೀರೆಯಲ್ಲಿ ರಿತು ಪುಟ್ಟ ದೇವತೆಯಂತೆ ಕಂಗೊಳಿಸುತ್ತಿದ್ದಳು. ಅವಳ ಸೌಂದರ್ಯವತಿಯೋ ಅಥವಾ ಅವಳನ್ನು ಅತಿಯಾಗಿ ಮೆಚ್ಚಿ ಅಭಿಮಾನಿಸುತ್ತಿದ್ದ ಕಂಗಳಿಗೇ ಸೌಂದರ್ಯ ಕಾಣುತ್ತಿತ್ತೋ? ಅಂತೂ ಸುರಸುಂದರಿಯಂತೆ ಕಾಣುತ್ತಿದ್ದಾಳೆ. ಅಜ್ಜಿಯನ್ನು ಕೈಹಿಡಿದುಕೊಂಡು ನಿಧಾನವಾಗಿ ಕರೆತಂದಳು. ಇಲ್ಲಾಗಿದ್ದ ಬದಲಾವಣೆಗೆ ಬೆರಗಿನಿಂದ ಸ್ಪಂದಿಸಿದ ರಿತು ತಾನು ಆಶ್ರಮಕ್ಕೆ ಬಂದಿದ್ದೆನೋ ಅಥವಾ ಯಾವುದಾದರೂ ಮದುವೆ ಛತ್ರಕ್ಕೆ ಬಂದುಬಿಟ್ಟೆನೇ ಎಂದು ಗಲಿಬಿಲಿಗೊಂಡಳು. ಹಾಗಿತ್ತು ಅಲ್ಲಿನ ಅಲಂಕಾರ. ವಾಸು ಕೂಡ ಓಡಾಡುತ್ತಿದ್ದಾನೆ. ಅಚ್ಚರಿಯಾಯಿತು ಅವಳಿಗೆ. ವೆಂಕಟೇಶ್ ಕೂಡ ಸಿದ್ದವಾಗಿ ಬಂದಿರುವುದನ್ನು ನೋಡಿ ಮುಜುಗರಪಟ್ಟಳು. ಏನಾಗಿದೆ ಇಲ್ಲಿ? ತನ್ನ ಹುಟ್ಟುಹಬ್ಬವನ್ನು ಇಲ್ಲಿರುವ ಎಲ್ಲರೊಂದಿಗೆ ಆಚರಿಸಿಕೊಂಡು ಖುಶಿಪಡಬೇಕೆಂದುಕೊಂಡರೆ, ಇವರೆಲ್ಲರೂ ಸೇರಿ ಇಷ್ಟೊಂದು ವಿಜೃಂಭಣೆಯಿಂದ ಏರ್ಪಾಡು ಮಾಡಿಕೊಂಡಿದ್ದಾರಲ್ಲ, ಇದರ ಕಲ್ಪನೆ ಕೂಡ ತನಗೆ ಬರಲೇ ಇಲ್ಲ. ಎಲ್ಲರ ಮುಂದೆ ಕೇಕ್ ಕಟ್ ಮಾಡಿಸಿ ಸಿಹಿ ಊಟ ಹಾಕಿಸಿದರೆ ಮುಗಿಯಿತು ತನ್ನ ಬರ್ತ್‌ಡೇ ಎಂದುಕೊಂಡರೆ ಏನಿದೆಲ್ಲ?

“ಬರಬೇಕು ಬರಬೇಕು ಬರ್ತ್‌ಡೇ ಬೇಬಿ, ಇವತ್ತೇ ಫಸ್ಟ್ ಈ ರೀತಿ ಇಲ್ಲಿ ಆಚರಿಸುತ್ತ ಇರುವುದು. ನಿನ್ನ ಬರ್ತ್‌ಡೇ ಮಾಡೋಕೆ ನೋಡು ಇವರೆಲ್ಲ ಎಷ್ಟೊಂದು ಉತ್ಸಾಹಿತರಾಗಿದ್ದಾರೆ. ಬಾ, ಬೇಗ ಕೇಕ್ ಕಟ್ ಮಾಡು ಬಾ” ವೆಂಕಟೇಶ್ ಮುಂದೆ ಬಂದು ಕರೆದರು.

“ಸಾರ್ ಏನಿದೆಲ್ಲ? ಏನೇನೋ ಆರೇಂಜ್‌ಮೆಂಟ್ಸ್ ಮಾಡಿಬಿಟ್ಟಿದ್ದಾರೆ. ನಾನು ನಿನ್ನೆ ಹೇಳಲೇಬಾರದಿತ್ತು. ಪಾಪ, ಇದೆಲ್ಲ ಅರೇಂಜ್ ಮಾಡೋಕೆ ಎಷ್ಟು ಕಷ್ಟಪಟ್ಟಿದ್ದಾರೆ? ನನ್ನಿಂದ ಎಷ್ಟೆಲ್ಲ ಕಷ್ಟವಾಯ್ತು.”

“ಆಯೋ, ಅಷ್ಟೆಲ್ಲ ಯಾಕಮ್ಮಾ ನೋಂದ್ಕೋತಿದ್ದೀಯಾ? ಇವತ್ತು ನಿನ್ನ ಹುಟ್ಟಿದ ಹಬ್ಬ, ಸಂತೋಷವಾಗಿ ಇರಬೇಕು ಇವತ್ತು. ನಿನ್ನ ಕಂಡ್ರೆ ಎಷ್ಟೊಂದು ಪ್ರೀತಿ ನೋಡು. ಆವರ ಮುಖದ ಮೇಲೆ ಕುಣಿಯುತ್ತಿರುವ ಸಂತೋಷ, ನೋಡು ರಿತು. ತಮ್ಮ ಮಗಳದ್ದೋ ಮೊಮ್ಮಗಳದ್ದೋ ಹುಟ್ಟಿದ ಹಬ್ಬ ಆಚರಿಸ್ತಾ ಇದ್ದೀವಿ ಅನ್ನೋ ಭಾವ ಕಾಣ್ತಾ ಇದೆ. ಇಷ್ಟೊಂದು ಸಂತೋಷ, ಆನಂದ ಈ ಆಶ್ರಮದಲ್ಲಿ ಇದೇ ಮೊದಲ ಬಾರಿ ನಾನು ನೋಡ್ತಾ ಇರುವುದು. ತಾವು ಅನಾಥರು, ತಮ್ಮವರು ಇದ್ದೂ ಇಲ್ಲದಂತೆ ಅನ್ನೋ ಭಾವವೇ ಕಾಡ್ತಾ ಇದ್ದ ಮನಸ್ಸುಗಳ ಮೇಲೆ ನೀನು ಅದೇನು ಪ್ರಭಾವ ಬೀರಿದ್ದೀಯಾ ರಿತು? ನೀನು ಬಂದು ಕೆಲವೇ ದಿನಗಳಾದ್ರೂ ಎಲ್ಲರ ಮನಸ್ಸನ್ನು ಗೆದ್ದು ಬಿಟ್ಟಿದ್ದಿಯಾ” ಹೃದಯದುಂಬಿ ವೆಂಕಟೇಶ್ ನುಡಿದಾಗ ರಿತುವಿನ ಹೃದಯ ಒಂದು ಹೂವಾದರೆ ತನುಜಾ-ಮನು ಹೆಮ್ಮೆಯಿಂದ ಮಗಳನ್ನೇ ದಿಟ್ಟಿಸಿದರು.

ತನ್ನ ಸುತ್ತ ಸುತ್ತುವರಿದ ತನ್ನವರೊಂದಿಗೆ, ಈಗ ತನ್ನವರು ಎನಿಸಿಕೊಂಡಿರುವ ಅಷ್ಟೊಂದು ಅಜ್ಜ-ಅಜ್ಜಿಯರ ನಡುವೆ ನಿಂತು ಕೇಕ್ ಕಟ್ ಮಾಡಿ ತಾನೇ ಸ್ವತಃ ತನ್ನ ಕೈಯಿಂದಲೇ ಎಲ್ಲರಿಗೂ ತಿನ್ನಿಸಿ, ಅಲ್ಲಿರುವ ಎಲ್ಲಾ ಹಿರಿಯ ಜೀವಗಳ ಶುಭ ಹಾರೈಕೆಯನ್ನು ಪಡೆದಳು. ರಿತು ಕೇಕ್ ತಿನ್ನಿಸುವಾಗ ಕೆಲವರ ಕಣ್ಣಲ್ಲಿ ಹರ್ಷದ ಕಣ್ಣೀರು ಕಾಣಿಸಿದರೆ, ಮತ್ತೆ ಕೆಲವರು ತಮ್ಮ ಕರುಳ ಕುಡಿಗಳನ್ನು ನೆನೆಸಿಕೊಂಡು ಕಣ್ಣೀರು ತರಿಸಿಕೊಂಡರು. ಆದರೆ, ಎಲ್ಲರ
ಹಾರೈಕೆಯೂ ಒಂದೇ ಆಗಿತ್ತು – ‘ರಿತು ಮೇಡಮ್ ನೂರಾರು ವರ್ಷ ಆನಂದದಿಂದ ಬಾಳಲಿ’ ಎಂಬುದು.

ವೆಂಕಟೇಶ್ ಇಂಥ ಸನ್ನಿವೇಶದಿಂದ ಪ್ರೇರಿತರಾಗಿ ತಮ್ಮ ಕೈಯಲ್ಲಿದ್ದ ಉಂಗುರವನ್ನು ತೆಗೆದು ರಿತುವಿನ ಕೈಗೆ ತೊಡಿಸಿ, “ಗಾಡ್ ಬ್ಲೆಸ್ ಯೂ ಬೇಬಿ, ಮೆನಿ ಮೆನಿ ಹ್ಯಾಪಿ ರಿರ್ಟನ್ಸ್ ಆಫ್ ದ ಡೇ” ಎಂದು ಹಾರೈಸಿದರು. ಆ ಉಂಗುರ ರಿತುವಿನ ಕೈಯಲ್ಲಿ ಮುದ್ದಾಗಿ ಕುಳಿತು, ಅದು ಅವಳಿಗಾಗಿಯೇ ಮಾಡಿಸಿದ್ದೇನೋ ಅನ್ನುವಂತಿತ್ತು. ಆ ಉಂಗುರ ಪ್ರಿಯ ಪತ್ನಿಯ ನೆನಪಿನ ಕುರುಹಾಗಿ ಸದಾ ವೆಂಕಟೇಶರ ಕಿರುಬೆರಳನ್ನು ಅಲಂಕರಿಸಿತ್ತು. ತಮ್ಮ ಇಪ್ಪತೈದನೆಯ ವಿವಾಹ ವಾರ್ಷಿಕೋತ್ಸವದ ಸವಿನೆನಪಿಗಾಗಿ ತಾವೇ ಆರಿಸಿ, ಮೆಚ್ಚಿ ಈ ವಜ್ರದ ಉಂಗುರವನ್ನು ಖರೀದಿಸಿ, ಪ್ರೀತಿಯಿಂದ ವಸುವಿನ ಬೆರಳಿಗೆ ತೊಡಿಸಿದ್ದರು. ಅದು ಅವಳು ಸಾಯುವ ತನಕ ಕೈಯಲ್ಲಿಯೇ
ಇತ್ತು. ವಸು ಸತ್ತ ಮೇಲೆ ಆಕೆಯ ಮೈಮೇಲಿದ್ದ ಎಲ್ಲಾ ಆಭರಣಗಳನ್ನು ಸೊಸೆಗೆ ಕೊಟ್ಟುಬಿಟ್ಟಿದ್ದರೂ ಆ ಉಂಗುರವನ್ನು ಮಾತ್ರ ಕೊಡಲು ಮನಸ್ಸೊಪ್ಪದೆ, ಆಕೆಯ ನೆನಪಿಗಾಗಿ ಕಿರುಬೆರಳಿಗೆ ತೊಟ್ಟುಕೊಂಡಿದ್ದರು. ಆ ಉಂಗುರ ಕೈಯಲ್ಲಿ ಇರುವಾಗೆಲ್ಲ ವಸುವೇ ತನ್ನೊಂದಿಗಿರುವಂತೆ ಭ್ರಮಿಸಿ, ಸುಖಿಸುತ್ತಿದ್ದರು. ಅಂಥ ಅಟ್ಯಾಚ್‌ಮೆಂಟ್, ಸೆಂಟಿಮೆಂಟ್ಸ್ ಇದ್ದ ಉಂಗುರವನ್ನು ಅದು ಹೇಗೆ ತಮಗರಿವಿಲ್ಲದಂತೆ ಬಿಚ್ಚಿ ರಿತುವಿನ ಕೈಗಿಟ್ಟರೋ ಏನೋ? ಪ್ರಾಯಃ ವಸುವನ್ನು ರಿತುವಿನಲ್ಲಿ ಕಾಣುತ್ತಿದ್ದದ್ದೇ ಈ ಕ್ರಿಯೆಗೆ ಕಾರಣವಾಗಿರಬಹುದು. ಒಟ್ಟಿನಲ್ಲಿ ಏನೋ ಸಂತೃಪ್ತಿಯ ಭಾವ ಕಾಡಿ ವೆಂಕಟೇಶ್ ಸಂತುಷ್ಟರಾಗಿದ್ದರು.

ತನಗ್ಯಾಕೆ ಇವರೆಲ್ಲ ಇಷ್ಟೊಂದು ಅಭಿಮಾನ, ಪ್ರೀತಿ, ಆದರ ತೋರಿಸುತ್ತಿದ್ದಾರೆ? ತಾನು ಏನು ಮಾಡಿದ್ದೀನಿ? ನನ್ನ ಕರ್ತವ್ಯ ನಾನು ಮಾಡ್ತಾ ಇದ್ದೀನಿ. ಸಂಬಳಕ್ಕೋಸ್ಕರ ಕೆಲಸ ಮಾಡ್ತಾ ಇರೋ ಸಾಮಾನ್ಯರಲ್ಲಿ ಸಾಮಾನ್ಯೆ ನಾನು. ಒಂದು ಚೂರು ಪ್ರೀತಿ ತೋರಿಸ್ತೀನಿ. ಅಕ್ಕರೆಯಿಂದ ಮಾತಾಡ್ತೀನಿ, ಯಾವಾಗಲೂ ಸಹನೆ ಕಳೆದುಕೊಳ್ಳದೆ, ಸಹಜವಾಗಿ ಅವರ ಜತೆ ಬೆರೆಯುತ್ತೇನೆ ನಿಜ. ಆದ್ರೆ ಇದೆಲ್ಲವೂ ನಾನು ಮಾಡೇಬೇಕಾದ ಕರ್ತವ್ಯ ತಾನೇ? ಅವರನ್ನ ನೋಡಿಕೊಳ್ಳೋಕೆ ತಾನೇ ನನಗೆ ಕೆಲಸ ಕೊಟ್ಟು, ಸಂಬಳ ಕೊಡ್ತಾ ಇರುವುದು. ನಾನೇನು ಫ್ರೀಯಾಗಿ ಇಲ್ಲಿಗೆ ಬಂದು ಕೆಲಸ ಮಾಡ್ತಾ ಇಲ್ಲವಲ್ಲ. ಆದ್ರೆ ಇಲ್ಲಿನ ಜನ ಅದೆಷ್ಟು ಮಮತೆ, ವಾತ್ಸಲ್ಯ ತೋರಿಸ್ತಾ ಇದ್ದಾರೆ. ಇವರ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ? ನಾನು ಏನು ಮಾಡಿದ್ರೆ ಇವರ ಋಣ ತೀರಿಸಲು ಸಾಧ್ಯ? ವೆಂಕಟೇಶ್ ಸರ್ ಅಂತೂ ತಮ್ಮ ಕೈಯಲ್ಲಿನ ಉಂಗುರವನ್ನೇ ತೊಡಿಸಿ, ಅವರ ಅಭಿಮಾನಕ್ಕೆ, ಪ್ರೀತಿಗೆ ನನ್ನ ಬಾಯಿ ಕಟ್ಟಿಹಾಕಿಬಿಟ್ಟಿದ್ದಾರೆ. ನಿಜಕ್ಕೂ ಇಷ್ಟೆಲ್ಲ ಪ್ರೀತಿ, ಅಭಿಮಾನಕ್ಕೆ ನಾನು ಅರ್ಹಳೆ? ರಿತುವಿನ ಮನ ಮೌನವಾಗಿಯೇ ಚಿಂತಿಸುತ್ತಿತ್ತು. ಎಲ್ಲರ ಮೇಲಿನ ಪ್ರೀತಿ ಇಮ್ಮಡಿಯಾಯಿತು, ತಾನು ಸಾಯುವ ತನಕ ಇಲ್ಲಿಯೇ ಕೆಲಸ ಮಾಡಿಕೊಂಡಿರಲು ನಿರ್ಧರಿಸಿಬಿಟ್ಟಳು ಆ ಕ್ಷಣದಿಂದಲೇ.

ಇದೇ ಸಂದರ್ಭದಲ್ಲಿ ‘ನಮ್ಮ ಮನೆ’ಗಾಗಿ, ಮಗಳ ಹುಟ್ಟುಹಬ್ಬದ ನೆನಪಿಗಾಗಿ ಒಬ್ಬ ವೃದ್ದರ ಖರ್ಚನ್ನು ತಾವು ಭರಿಸುವುದಾಗಿ ಮನು ಮತ್ತು ತನುಜಾ ಘೋಷಿಸಿ ಅದಕ್ಕೆ ಬೇಕಾದ ಹಣವನ್ನು ವೆಂಕಟೇಶ್‌ರವರಿಗೆ ನೀಡಿದರು. ಈ ಕಾರ್ಯದಿಂದ ಅವರ ಮನಸ್ಸು ತೃಪ್ತಿಯಿಂದ ಬೀಗಿತು. ಇಲ್ಲಿರುವವರನ್ನೆಲ್ಲ ನೋಡಿದ ರಿತುವಿನ ಅಜ್ಜಿ ಸುಂದರಮ್ಮ ಅಂತೂ ವಾರಕ್ಕೆ ಒಮ್ಮೆ ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದು, ತಾನು ಇವರೊಂದಿಗಿರಲು ಅವಕಾಶ ಕಲ್ಪಿಸಿಕೊಡಬೇಕೆಂದು ಹೇಳಿದರು. ರಿತು ಅದರ ಭಾರವನ್ನು ಹೊತ್ತಳು. ಹೊತ್ತು ಹೋದದ್ದೇ ತಿಳಿಯಲಿಲ್ಲ.

ಮಧ್ಯಾಹ್ನ ಊಟಕ್ಕೆ ತಾನೇ ನಿಂತು ಎಲ್ಲರಿಗೂ ತಾನೇ ಸ್ವತಃ ಮಾಡಿಸಿ ತಂದಿದ್ದ ಮೈಸೂರುಪಾಕನ್ನು ಬಡಿಸಿದಳು. ಪಾಯಸ, ಕೋಸಂಬರಿ, ಪಲಾವು, ಮಸಾಲೆ ವಡೆ.. ಹೀಗೆ ಅಪರೂಪದ ವಿಶೇಷ ಊಟ ಮಾಡಿದ ಎಲ್ಲರೂ ಮತ್ತೊಮ್ಮೆ ಮನಪೂರ್ವಕವಾಗಿ ಹರಸಿದರು. ಇಂಥ ಸಂತೋಷ ತಂದುಕೊಟ್ಟ ರಿತುವಿಗೆ, ಆಕೆಯ ತಂದೆ ಮನು, ತಾಯಿ ತನುಜಾಳಿಗೆ ಅಭಿನಂದಿಸಿದರು. “ಇಂಥ ಮಗಳನ್ನು ಹೆತ್ತ ಹೊಟ್ಟೆ ತಣ್ಣಗಿರಲಿ. ರಿತು ನಿಮಗೆ ಮಾತ್ರ ಮಗಳಲ್ಲ, ನಮಗೂ ಮಗಳೇ ಅಂತ ತಿಳ್ಕೊಂಡು ಬಿಟ್ಟಿದ್ದೇವೆ. ಆಕೆಯೊಂದಿಗಿದ್ದರೆ ಆಕೆ ಈ ಆಶ್ರಮದ ಮೇಲ್ವಿಚಾರಿಕೆ ಅಂತ ಅನ್ನಿಸುವುದೇ ಇಲ್ಲ. ನಮ್ಮ ಮಗಳೋ ಮೊಮ್ಮಗಳೋ ನಮ್ಮೊಂದಿಗಿದ್ದಾಳೆ, ನಮ್ಮ ಆರೈಕೆ ಮಾಡುತ್ತಿದ್ದಾಳೆ ಅಂತಲೇ ಅನಿಸುತ್ತದೆ. ಈ ಆಶ್ರಮಕ್ಕೆ ಬಂದ ಪುಟ್ಟ ದೇವತೆ ಈಕೆ” ಎಂದಲ್ಲ ಹೊಗಳಿದಾಗ ರಿತುವಿಗೆ ಕಸಿವಿಸಿ ಎನಿಸಿ, ತುಂಬಾ ಹೊಗಳುತ್ತಿದ್ದಾರೆ. ಹಾಗೇನೂ ತಾನು ಇಲ್ಲ. ದಯವಿಟ್ಟು ತನ್ನನ್ನ ‘ಹೊಗಳಿ ಹೊನ್ನ ಶೂಲಕ್ಕೇರಿಸಬೇಡಿ’ ಎಂದು ಬೇಡಿಕೊಂಡಳು.

ಆಶ್ರಮವಾಸಿಗಳ ಅಭಿಮಾನ, ರಿತುವಿನ ಸೌಜನ್ಯಕ್ಕೆ ವೆಂಕಟೇಶ್ ತಲೆದೂಗಿದರು. ಅಜ್ಜಿ ಸುಂದರಮ್ಮ ಮನು, ತನುಜಾರಿಗಂತೂ ಈ ಗಳಿಗೆ ಸಾರ್ಥಕವೆನಿಸಿ ಭಾವಪರವಶರಾದರು. ಇಷ್ಟೆಲ್ಲ ಸಂತೋಷದ ಗಳಿಗೆಯಲ್ಲೂ ರಿತುವಿನ ಮನಸ್ಸಿನ ಮೂಲೆಯಲ್ಲಿ ಅಸಮಾಧಾನ ಇಣುಕುತ್ತಿತ್ತು. ಏನೋ ಅತೃಪ್ತಿ ಕಾಡುತ್ತಿತ್ತು. ಬೆಳಗ್ಗೆ ಜಸ್ವಂತ್ ಫೋನ್ ಮಾಡಿ ವಿಶ್ ಮಾಡಿದ್ದ. ಪಾರ್ಟಿ ಎಲ್ಲೆಂದು ಕೇಳಿದ್ದ. ತಾನು ಸಡಗರದಿಂದಲೇ ಎಲ್ಲವನ್ನೂ ವಿವರಿಸಿ, ಆಶ್ರಮಕ್ಕೆ ಬರಬೇಕು ಎಂದಿದ್ದಳು. ಏಕೋ ಅನುಮಾನಿಸಿದ, “ಅಲ್ಲೆಲ್ಲ ಬರ್ತ್‌ಡೇ ಪಾರ್ಟಿನಾ?” ಎಂದು ರಾಗ ಎಳೆದಿದ್ದ. ಬರಲೇಬೇಕು ಎಂದು ಬಲವಂತಿಸಿದಾಗ ಅರೆಮನಸ್ಸಿನಿಂದಲೇ ಒಪ್ಪಿದ್ದ. ಒಂದು ಸಲ ಇಲ್ಲಿಗೆ ಬರಲಿ, ಅವನಿಗೇ ಗೊತ್ತಾಗುತ್ತೆ ಇಲ್ಲಿಯ ಮಹತ್ವ ಎಂದುಕೊಂಡಿದ್ದಳು. ಇಲ್ಲಿಯವರ ಪ್ರೀತಿ, ವಿಶ್ವಾಸ, ಸಡಗರವನ್ನು ಜಸ್ವಂತ್ ಕೂಡ ಕಾಣಬೇಕೆಂದು ಆಶಿಸಿದ್ದಳು. ಇಂದಂತೂ ಇವರೆಲ್ಲ ತೋರಿಸುತ್ತಿರುವ ಆದರ, ಅಭಿಮಾನ, ಅಷ್ಟೊಂದು ಶ್ರದ್ದೆಯಿಂದ, ಆಸಕ್ತಿಯಿಂದ ಡೆಕೊರೇಶನ್ ಮಾಡಿ ಹಬ್ಬದ ಕಳೆ ತಂದಿರುವುದು, ವೆಂಕಟೇಶ್‌ರವರ ಉಡುಗೊರೆ, ಆ ಅಭಿಮಾನ ಎಲ್ಲವನ್ನೂ ನೋಡಲು ಇಲ್ಲಿ ಈ ಕ್ಷಣ ಜಸ್ಸು ಇರಬೇಕಿತ್ತು. ಬಂದೇ ಬರುವೆನೆಂದು ಮಾತುಕೊಟ್ಟಿದ್ದ ಜಸ್ಸು ಯಾಕೆ ಬರಲಿಲ್ಲ? ನನ್ನ-ಅವನ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿದಂದಿನಿಂದ ಇಂದಿನವರೆಗೂ ಜಸ್ಸು ತನ್ನ ಯಾವ ಹುಟ್ಟಿದ ಹಬ್ಬವನ್ನೂ ಮಿಸ್ ಮಾಡಿದವನಲ್ಲ. ಪ್ರತಿಬಾರಿ ಉಡುಗೊರೆಯೊಂದಿಗೆ ಹಾಜರಿದ್ದು ಶುಭ ಹಾರೈಸುತ್ತಿದ್ದವನು ಯಾಕೆ ಹೀಗೆ ಮಾಡಿಬಿಟ್ಟನೋ? ಮನಸ್ಸೆಲ್ಲ ಅಸ್ತವ್ಯಸ್ತವಾಗಿ, ಗೆಲುವಾಗಿರಲು ಪ್ರಯತ್ನಿಸಿದಷ್ಟೂ ಸೋಲತೊಡಗಿದಳು. ತತ್‌ಕ್ಷಣವೇ ತಾನು ಇಂಥದ್ದಕ್ಕೆಲ್ಲ ಮನಸ್ಸು ಕೆಡಿಸಿಕೊಳ್ಳುವಷ್ಟು ದುರ್ಬಲಳೆ? ಇಲ್ಲ ಇಲ್ಲ. ಇದೊಂದು ಸಣ್ಣ ವಿಷಯ. ಏನು ಅನನುಕೂಲವಾಯಿತೋ? ಬರಲಾಗಲಿಲ್ಲ. ಅದಕ್ಕೇಕೆ ತಾನಿಷ್ಟು ಟೆನ್ಶನ್ ತಗೋಬೇಕು ? ಜಸ್ಸು ಬಾರದಿರುವ ವಿಷಯ ಕ್ಷುಲ್ಲಕವಾದದ್ದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಪದೇ ಪದೇ ಹೇಳಿಕೊಂಡ ಮೇಲೆಯೇ ಮನಸ್ಸು ಹಗುರವಾದದ್ದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩
Next post ಸ್ವಾತಂತ್ರ್ಯ ಹೋರಾಟದ ಹಿಂಸೆ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys