ಬನ್ನಿ ಒಂದು ಹೃದಯವನ್ನು ತನ್ನಿ

ಬನ್ನಿ ಒಂದು ಹೃದಯವನ್ನು ತನ್ನಿ

ಇತ್ತೀಚಿನ ಎರಡು ಪತ್ರಿಕಾ ವರದಿಗಳು ಹೀಗಿವೆ:

೧. ಧಾರಾಕಾರವಾಗಿ ಸುರಿಯುತ್ತಿದ್ದ ರಕ್ತ ನಿಲ್ಲಿಸಲಾಗದೆ ಹೊಟ್ಟೆಯನ್ನು ಒತ್ತಿ ಹಿಡಿದು ಆಪದ್ಭಾಂಧವರಿಗಾಗಿ ಹಾದಿ ಕಾಯುತ್ತಿದ್ದ ಅಮಾಯಕ; ಮೂಗಿನ ಬಳಿ ಗಾಯವಾಗಿ ಕರವಸ್ತ್ರದಿಂದ ಒತ್ತಿ ಹಿಡಿದ ಇನ್ನೊಬ್ಬ ಯುವಕ.

ಈ ಯುವಕರದು ಅಳಿಸಲಾಗದ ಸ್ಥಿತಿ; ಅತ್ತರೂ ಅರಣ್ಯರೋಧನ. ಜೀವ ರಕ್ಷಣೆ ಪೊಲೀಸರು ಎದುರಿನಲ್ಲೇ ಇದ್ದರೂ ರಕ್ತ ನಿಲ್ಲಿಸಲು ಕ್ರಮ ಕೈಗೊಳ್ಳಲಾಗದ ಅಸಹಾಯಕತೆ.

ನಗರದ ಜಗಜೀವನರಾಮ ನಗರ, ಗೋರಿಪಾಳ್ಯದಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿಗೆ ಸಿಕ್ಕಿದ ಯುವಕರ ಪಾಡಿದು. ಹಗಲು ಕರ್ಪ್ಯೂ ಜಾರಿಯಲ್ಲಿದ್ದರೂ ಗುಂಪುಗಟ್ಟಿದ್ದ ಜನ. ಅವರ ಓಡಾಟಕ್ಕಿಲ್ಲದ ಅಡೆತಡೆ. ಸಂದಿಗೊಂದಿಗಳಲ್ಲಿ ಹದ್ದಿನಂತೆ ಕಾದು ಒಂಟಿಯಾಗಿ ಸಿಕ್ಕಿದವರನ್ನು ಇರಿದು ಪರಾರಿಯಾಗುವ ಗುಂಪುಗಳು. ಅವರನ್ನು ಬೆನ್ನಟ್ಟಲಾರದ ಹಸಿದ ಪೊಲೀಸರು. ಅವರ ಮೇಲಾಟದಲ್ಲಿ ನಲುಗಿದ ಜನಜೀವನ ಹೃದಯ ಕಲಕುವಂಥದು. (ದಿನಾಂಕ ೧೦-೧೦-೧೯೯೨ ಪ್ರಜಾವಾಣಿ)

೨. ಕುಟುಂಬದ ಏಕೈಕ ಆಸರೆ. ತನ್ನನ್ನೇ ಅವಲಂಬಿಸಿದ ಇನ್ನೆರಡು ಜೀವಗಳು. ಎರಡು ಹೊತ್ತು ಕೂಳಿಗಾಗಿ ದಿನವಿಡೀ ಬೆವರು ಸುರಿಸಬೇಕಾದ ಕಡು ಬಡತನ. ಈ ದಾರಿದ್ರ್ಯ ಮಧ್ಯೆ ಎರಗಿದ ಗಲಭೆಗಳು, ಕುಟುಂಬದ ಮೂರು ಮಂದಿಯ ಊಟಕ್ಕೂ ಮುಳುವಾದವು.

ಕೂಲಿ ಇಲ್ಲದೆ, ಕಾಳು ಕಡ್ಡಿಗಾಗಿ ಅಂಗಡಿ ಹೋಗದೆ, ಒಂದೆರಡು ದಿನ ಬದುಕು ಸವೆಸಲು ಆಗದ ಮನೆಯ ಸ್ಥಿತಿ. ಅಕ್ಕಿ ತರಲು ಹೊರಟ ಈ ವ್ಯಕ್ತಿ ಮನೆಗೆ ಬರುವ ಬದಲು ಆಸ್ಪತ್ರೆ ಸೇರಬೇಕಾಯಿತು…….. ಇದು ಕೇವಲ ಆತನೊಬ್ಬನ ವ್ಯಥೆಯಲ್ಲ. ನಗರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ಗಲಭೆ, ವಿಧ್ವಂಸಕ ಕೃತ್ಯಗಳಿಗೆ ಸಿಲುಕಿ ತತ್ತರಿಸಿ ಹೋಗಿರುವ ಹಲವಾರು ಕುಟುಂಬಗಳ ಕಣ್ಣೀರಿನ ಕಥೆಯ ಗೋಳೂ ಹೌದು. (ದಿನಾಂಕ ೧೦-೧೦-೧೯೯೪ ಪ್ರಜಾವಾಣಿ)

ಮೇಲಿನ ಎರಡು ವರದಿ ಭಾಗಗಳು ಭಯಾನಕ ಗೊಳ್ಳುತ್ತಿರುವ ಬದುಕನ್ನು ಸಮರ್ಥವಾಗಿ ದಾಖಲಿಸಿವೆ. ಸಂವೇದನಶೀಲವಾಗಿವೆ.

ಉರ್ದು ವಾರ್ತೆಯನ್ನು ಪ್ರಸಾರ ಮಾಡತೊಡಗಿದ ಬೆಂಗಳೂರು ದೂರದರ್ಶನದ ದೂರದೃಷ್ಟಿಯಿಲ್ಲದ ಕ್ರಮವನ್ನು ಪ್ರತಿಭಟಿಸಿ ಸಂಘಟಿತಗೊಳ್ಳುತ್ತಿದ್ದ ಕನ್ನಡ ಕಾಳಜಿಯ ಕೈ ತಪ್ಪಿ ಹೋದ ಕರಾಳ ಸನ್ನಿವೇಶವನ್ನು ಊಹಿಸಿಕೊಳ್ಳುವುದೂ ಕಷ್ಟವೆಂಬ ಅಂಶವನ್ನು ಈ ವರದಿಗಳು ಮನವರಿಕೆ ಮಾಡಿಕೊಡುತ್ತವೆ. ಉರ್ದು ವಾರ್ತೆ ಪ್ರಸಾರ ತಮಗೆ ಬೇಕೆಬೇಕೆಂದು ನಮ್ಮ ಮುಸ್ಲಿಂ ಬಂಧುಗಳು ಯಾವುದೇ ರೀತಿಯಲ್ಲಿ ಒತ್ತಾಯ ತಂದಿರಲಿಲ್ಲ. ಉರ್ದುವಾರ್ತೆಯಿಲ್ಲದಿದ್ದರೆ ತಮ್ಮ ಬೌದ್ಧಿಕ ಹಸಿವು ಹಿಂಗಿಹೋಗಿ ಕಂಗಾಲಾಗುತ್ತೇವೆಂದು ಕೋರಿಕೆ ಸಲ್ಲಿಸಿರಲಿಲ್ಲ. ಅಲ್ಪಸಂಖ್ಯಾತರಾದ ತಾವು ಉರ್ದುವಾರ್ತೆಯಿಲ್ಲದೆ ಅನಾಥ ಪ್ರಜ್ಞಾಹೀನ ಪಟ್ಟಿಗೆ ಸೇರಿದ್ದಾರೆಂದು ಕಳವಳಗೊಂಡಿರಲಿಲ್ಲ. ಅನಗತ್ಯವಾದ ಉರ್ದು ವಾರ್ತಾ ಪ್ರಸಾರವನ್ನು ಪ್ರಾರಂಭ ಮಾಡಿದ್ದಲ್ಲದೆ, ಎದುರಾದ ಪ್ರತಿಭಟನೆಯನ್ನು ಮೊದಮೊದಲು ಗಂಭೀರವಾಗಿ ಪರಿಗಣಿಸದೆ ತಪ್ಪು ಮಾಡಿದ ದೂರದರ್ಶನ ಮುಖ್ಯಸ್ಥ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮನುಷ್ಯರ ಮಾರಣ ಹೋಮಕ್ಕೆ ಅವಕಾಶ ಕೊಟ್ಟಿವೆ.

ಹೀಗೆ ಪರಿಸ್ಥಿತಿ ಕೈಮೀರಿ ಹೋಗುತ್ತದೆಂಬ ಪ್ರಜ್ಞೆ ಅಧಿಕಾರಸ್ಥಾನದಲ್ಲಿರುವ ಪ್ರಭೃತಿಗಳಿಗೆ ಮತ್ತು ನಾಯಕರಿಗೆ ಗೊತ್ತಿರಬೇಕಾಗಿತ್ತು.

ಈ ಪರಿಸ್ಥಿತಿಗೆ ಮೂಲ ಪ್ರೇರಣೆಯಾದ ಉರ್ದು ವಾರ್ತೆಯ ಪ್ರಸಾರದ ಹಿಂದೆ ಮತೀಯತೆಯ ವಾಸನೆ ಆವರಿಸಿರಲಿಲ್ಲವೆಂದು ಹೇಳಲಾಗದು. ಅದೇರೀತಿ ಉರ್ದು ವಾರ್ತಾಪ್ರಸಾರದ ವಿರೋಧದಲ್ಲಿ ಇರಬಹುದಾದ ಮತೀಯತೆಯ ವಾಸನೆಯನ್ನು ಅಲ್ಲಗಳೆಯಲಾಗದು, ನಿಜ. ಆದರೆ ಇಂಥದೊಂದು ಸನ್ನಿವೇಶವನ್ನು ನಿರ್ಮಿಸಿ ಸಮೂಹಸನ್ನಿಗೆ ಪ್ರೇರಣೆ ನೀಡಿದ ದೂರದರ್ಶನ ‘ರಾಜಕೀಯ’ ಅಮಾನವೀಯ ವಾತಾವರಣಕ್ಕೆ ಒತ್ತಾಸೆಯಾದದ್ದನ್ನು ಯಾರೂ ನಿರಾಕರಿಸಲಾಗದು.

ಈಗ ನಾವು ಎಂಥ ಭೀಕರ ಸಂದರ್ಭಕ್ಕೆ ಬಿದ್ದಿದ್ದೇವೆಂದರೆ-ಉರ್ದು ವಾರ್ತಾ ಪ್ರಸಾರ ಬೇಡವೆಂದು ಧರ್ಮ ನಿರಪೇಕ್ಷ ನೆಲೆಯ ನಿಲುವು ತಾಳಿದ ಪ್ರಾಮಾಣಿಕ ಶಕ್ತಿಗಳು ಏನೂ ಮಾಡಲಾಗದ ಸ್ಥಿತಿಗೆ ತಳ್ಳಲ್ಪಟ್ಟಿವೆ. ಉರ್ದು ವಾರ್ತೆ ಬೇಕೆ ಬೇಡವೆ ಎಂಬ ವಿಷಯ ಗೌಣವಾಗಿ ಹಿಂದೂ-ಮುಸ್ಲಿಂ ಮತೀಯ ಶಕ್ತಿಗಳು ಮುಂಚೂಣಿಗೆ ಬಂದು ನಿಂತಿವೆ. ಸಮಸ್ಯೆಯೊಂದನ್ನು ಎಷ್ಟು ಸಲೀಸಾಗಿ ಸೃಷ್ಟಿಸಬಹುದು ಮತ್ತು ಸನ್ನಿವೇಶದ ದುರ್ಲಾಭವನ್ನು ಎಷ್ಟು ಸಲೀಸಾಗಿ ಪಡೆಯಬಹುದು ಎನ್ನುವುದಕ್ಕೆ ಉರ್ದು ವಾರ್ತಾ ಪ್ರಸಾರ ಪ್ರಕರಣ ಒಂದು ಜ್ವಲಂತ ಉದಾಹರಣೆಯಾಗಿದೆ. ಮತೀಯ ಗಲಭೆಗಳು ಕಾರಣವಾಗುವಂತಹ ಸ್ವಯಂ ಘೋಷಿತ ಅಲ್ಪಸಂಖ್ಯಾತ ಸಂರಕ್ಷಣಾ ಕಾರ್ಯಕ್ರಮವಾಗಿ ಉರ್ದು ವಾರ್ತಾ ಪ್ರಸಾರವನ್ನು ಪ್ರಾರಂಭಿಸಿದವರು ಬೇಜವಾಬ್ದಾರಿತನ ಒಂದು ಕಡೆ; ಚಳುವಳಿಯ ಮುಖಂಡತ್ವಕ್ಕೆ ಇರಬೇಕಾದ ಮುನ್ನೋಟದ ಅಭಾವದಲ್ಲಿ ಹುಟ್ಟಿದ ಆಸಹಾಯಕ ಸನ್ನಿವೇಶ ಇನ್ನೊಂದು ಕಡೆಗೆ; ಎರಡರ ನಡುವೆ ನುಚ್ಚು ನೂರಾಗುತ್ತಿರುವ ಅಮಾಯಕ ಜೀವಿಗಳ ಬದುಕು ಭಯಾನಕವಾಗಿರುತ್ತಿದೆ.

ಈ ಅಮಾಯಕ ಬದುಕಿನ ಬಗ್ಗೆ ಯೋಚಿಸಲಾಗದ ಅಧಿಕಾರ ಅತ್ಯಂತ ಅಮಾನವೀಯವಾಗುತ್ತದೆ; ಅದೇ ರೀತಿ ಅಮಾಯಕರ ಬಲಿಯಿಂದ ಬೇಯುತ್ತ ಮಾನವೀಯಗೊಳ್ಳದ ಚಳುವಳಿ ಜನವಿರೋಧಿಯಾಗುತ್ತದೆ; ನಿಜವಾದ ಕನ್ನಡಾಭಿಮಾನ ಮಾನವೀಯ ನೆಲೆಯನ್ನು ಒಳಗೊಂಡೇ ಇರುತ್ತದೆ. ಸಾವಿರಾರು ವರ್ಷದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮನುಷ್ಯತ್ವದ ಅನ್ವೇಷಣೆಗಾಗಿ ನಡೆದ ಗಟ್ಟಿ ಪ್ರಯತ್ನಗಳು ಕನ್ನಡ ನಾಡು ನುಡಿಯ ಗೌರವವನ್ನು ಹೆಚ್ಚಿಸಿವೆ.

ಪಂಪನಿಂದ ಹಿಡಿದು ಇವತ್ತಿನ ಯುವ ಕವಿಗಳ ಸೃಷ್ಟಿಯವರೆಗೂ ಕನ್ನಡ ಸಾಹಿತ್ಯದ ವಿವಿಧ ನೆಲೆಗಳಲ್ಲಿ ಮಾನವೀಯತೆಯ ಗೌರವವನ್ನು ಹೆಚ್ಚಿಸಲು ಅಂತರಂಗವನ್ನು ಹೊಂದಿದೆ. ವಿವಿಧ ಕಾಲಘಟ್ಟಗಳಲ್ಲಿ ಇತಿಹಾಸದುದ್ದಕ್ಕೂ ಸಂಭವಿಸಿದ ಗಲಭೆ-ಗೋಳುಗಳ ನಡುವೆ ಅಂತಃಕರಣವನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿದೆ. ಅಂತಃಕರಣವನ್ನು ಒಳಗೊಳ್ಳದೆ ಭಾಷೆ ಮತ್ತು ಅಭಿವ್ಯಕ್ತಿಗಳು ತಂತಾನೆ ಅಮಾನವೀಯತೆಯ ಅಸ್ತ್ರವಾಗುತ್ತವೆಯೆಂಬ ಆತಂಕವನ್ನು ಕನ್ನಡ ಸಾಹಿತ್ಯದ ಪ್ರಮುಖ ಹಂತಗಳು ತೋರುತ್ತಾ ಬಂದಿವೆ. ಇಂಥ ಅಂತಃಕರಣವನ್ನು ಅಂತರ್ಗತ ಮಾಡಿಕೊಂಡಾಗಲೇ ಕನ್ನಡ ಹೋರಾಟ ಗಟ್ಟಿಯಾಗುತ್ತದೆ. ಕನ್ನಡ ಪರಂಪರೆಯ ಪ್ರಜ್ಞೆ ಬೆಳೆಯುತ್ತದೆ.

ಆದರೆ ಇವತ್ತಿನ ಸ್ಥಿತಿ ಏನಾಗಿದೆ? ಉರ್ದು ವಾರ್ತಾ ಪ್ರಸಾರದ ಪರ ಮತ್ತು ವಿರೋಧದ ತಾತ್ವಿಕ ಅಂಶಗಳು, ತರ್ಕಗಳು ಮಣ್ಣು ಪಾಲಾಗಿದೆ, ಹಿಂಸೆ ವಿಜೃಂಭಿಸಿದ. ಅಸಂಖ್ಯಾತ ಜನರು ದೈಹಿಕವಾಗಿ, ಮಾನಸಿಕವಾಗಿ ಗಾಯಗೊಂಡಿದ್ದಾರೆ. ಸರ್ಕಾರಿ ಲೆಕ್ಕದ ಪ್ರಕಾರ ಇಪ್ಪತ್ತೈದು ಜನ ಸತ್ತಿದ್ದಾರೆ. ಇವರೆಲ್ಲ ಯಾರು? ಅಮಾಯಕ ಮನುಷ್ಯರು.

ಈ ಅಮಾಯಕರಲ್ಲಿ ಅನೇಕರಿಗೆ ಉರ್ದು ವಾರ್ತಾ ಪ್ರಸಾರ ವಿಷಯವೂ ಗೊತ್ತಿರಲಾರದು; ಗೊತ್ತಿದ್ದರೂ ಅವರಿಗೆ ಪರ ಮತ್ತು ವಿರೋಧದ ನಿಲುವು ಇರಲಾರದು. ಇವರು ಹಿಂದೂ ಎಂದು ಅಹಂಕಾರ ಪಟ್ಟಿರಲಾರರು; ಮುಸ್ಲಿಮರೆಂದು ಮೆರೆದಿರಲಾರರು. ಒಟ್ಟಿನಲ್ಲಿ ಬಲಿಯಾದರು. ಬೆಂಗಳೂರು ದೂರದರ್ಶನ ಉರ್ದು ವಾರ್ತಾ ಪ್ರಸಾರ ಫಲವಾಗಿ ಹಬ್ಬಿದ ಹಿಂಸೆಯ ಹಸಿವಿಗೆ ಆಹಾರವಾದರು. ಅಷ್ಟೇ ಅಲ್ಲ, ಅವರೇ ವಾರ್ತಾ ಪ್ರಸಾರಕ್ಕೂ ವಸ್ತುವಾದರು!

ಅನೇಕ ಸಂದರ್ಭಗಳಲ್ಲಿ ಸಂಬಂಧವೇ ಇಲ್ಲದ ಸಾಮಾನ್ಯರು ಬಲಿಯಾಗಿ, ಬೀದಿ ಮೇಲೆ ಬರೆಯುವ ಬರಹಕ್ಕೆ ಯಾವ ಭಾಷೆಯಿದೆ? ಈ ನೆತ್ತರ ಭಾಷೆಗೆ ಉತ್ತರ ಕೊಡುವ ಭಾಷೆ ಯಾವುದು? ಇದು ಕನ್ನಡವಿರಬಹುದು, ಉರ್ದು ವಿರಬಹುದು, ಹಿಂದಿ, ಸಂಸ್ಕೃತ ಅಥವಾ ಇಂಗ್ಲೀಷ್ ಇರಬಹುದು. ಆದರೆ ಒಂದು ಮಾತನ್ನು ಮರೆಯಬಾರದು. ಅಕ್ಷರಗಳಷ್ಟೇ ಭಾಷೆಯಾಗುವುದಿಲ್ಲ. ಅಕ್ಷರಗಳಲ್ಲಿನ ಮನುಷ್ಯ ಮಿಡಿತ ಅವುಗಳನ್ನು ಭಾಷೆಯಾಗಿಸುತ್ತದೆ. ಮನುಷ್ಯ ಮಿಡಿತವಿಲ್ಲದ ಭಾಷೆ ಮೃಗೀಯತೆಯ ಅಸ್ತ್ರವಾಗುವ ಅಪಾಯವಿದ್ದೇ ಇರುತ್ತದೆ.

ಭಾಷೆಯ ಹೋರಾಟಗಳಿಲ್ಲದೆ ಸಾಂಸ್ಕೃತಿಕ ಪ್ರಜ್ಞೆ ಬೆಳೆಯುವುದು ಕಷ್ಟಸಾಧ್ಯವಾದ್ದರಿಂದ ಅಂಥ ಹೋರಾಟಗಳು ಅಗತ್ಯ. ಆದರೆ ಭಾಷೆಯು ಮೃಗೀಯತೆಯ ಅಸ್ತ್ರವಾಗದೆ ಮಾನವೀಯತೆಯ ಮಾಧ್ಯಮವಾಗಿ ಉಳಿಯುವಂತೆ ನೋಡಿಕೊಳ್ಳುವ ಹೊಣೆ, ಹೋರಾಟದ ಅವಿಭಾಜ್ಯ ಅಂಗವಾಗಬೇಕು. ಇದು ಎಲ್ಲಾ ಭಾಷಾ ಹೋರಾಟಗಳಿಗೆ ಸಂಬಂಧಿಸಿದ ಮಾತು.

ಆದರೆ ಇವತ್ತಿನ ಸ್ಥಿತಿ ಬೇರೆಯೇ ಆಗಿದೆ. ಭಾಷಾ ಹೋರಾಟವೇ ಗೌಣವಾಗುವಂತ ಘಟನೆಗಳು ನಡೆದು ಜನಸಾಮಾನ್ಯರು ಬೀದಿ ಬಲಿಯಾಗುತ್ತಿದ್ದಾರೆ. ಈ ಬಲಿಯ ಭಾಷೆಗೆ ಕನ್ನಡ ಪ್ರಜ್ಞೆಯೂ ಒಂದು ಬಲಿಯಾಗಬಾರದು. ಕನ್ನಡ ಉಳಿಯ ಬೇಕಾದರೆ, ಬೆಳೆಯಬೇಕಾದರೆ ಕನ್ನಡ ಭಾಷೆ ಮಾನವೀಯ ಮಿಡಿತ ಉಳಿಯಬೇಕು, ಬೆಳೆಯಬೇಕು. ಆದ್ದರಿಂದ ನಮ್ಮ ಭಾಷೆಯೊಳಗಿನ ಹೃದಯ ಬಡಿತಕ್ಕೆ ಬೀಗ ಹಾಕುವುದು ಬೇಡ; ಬಲಿ ಕೊಡುವುದು ಬೇಡ.

ಅದೇ ರೀತಿ ಉರ್ದು ಭಾಷಿಕರೂ, ಹಿಂದಿ ಭಾಷಿಕರೂ, ಇಂಗ್ಲಿಷ್ ಮತ್ತು ಸಂಸ್ಕೃತ ಪಂಡಿತರು ಆಯಾ ಭಾಷೆಯೊಳಗಿನ ಹೃದಯವನ್ನು ಬಲಿ ಕೊಡಬಾರದು. ಒಂದು ವೇಳೆ ಬಲಿಕೊಡಲು ಮುಂದಾದರೆ ಅವರ ಬಳಿ ಅವರ ಭಾಷೆಯಿರುವುದಿಲ್ಲವೆಂಬ ಎಚ್ಚರಿಕೆಯ ಮಾತು ಹೇಳುವುದು ಅಗತ್ಯ.

ಮೇಲಿನ ಎಲ್ಲ ಮಾತುಗಳಿಗೆ ಪ್ರೇರಣೆ ನೀಡಿದ್ದೂ ಅಮಾಯಕರ ಬಲಿಯಲ್ಲಿ ಬರೆದ ಭಾಷೆ. ನಮ್ಮ ಇವತ್ತಿನ ಸಂದರ್ಭದಲ್ಲಿ ಭಾಷೆ ಬಲಿಯಾಗುತ್ತಿದೆಯೋ ಅಥವಾ ಬಲಿಯ ಭಾಷೆ ಬೆಳೆಯುತ್ತದೆಯೊ ಎಂಬ ಗೊಂದಲ. ಆತಂಕ, ಅಸಹಾಯಕತೆಗಳು ಹೊಟ್ಟೆಯೊಳಗೆ ಕತ್ತಿಯಂತೆ ಕಾಡಿಸುತ್ತಿರುವಾಗ ಜನಸಾಮಾನ್ಯರ ಭಯಗ್ರಸ್ಥ ಬದುಕಿನ ಭಾಷೆಯಲ್ಲಿ, ಕಂಗೆಟ್ಟ ಕಣ್ಣುಗಳಲ್ಲಿ ಕಿತ್ತ ಕರುಳಲ್ಲಿ ಕೇಳುತ್ತಿದ್ದಾರೆ :
‘ಬನ್ನಿ ಒಂದು ಹೃದಯವನ್ನು ತನ್ನಿ’
ಹೌದು. ನಾವು ಈ ಕಿತ್ತಕರುಳಿನ ಕರೆಯನ್ನು ಕೇಳಿಯಾದರೂ ಹೃದಯವನ್ನು ಹುಡುಕಬೇಕಾಗಿದೆ. ಬನ್ನಿ ಹುಡುಕೋಣ.
*****
೨೩-೧೦-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಚ್ಚು
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…