ಸೃಷ್ಟಿಕರ್‍ತನ ವಿಸ್ಮಯದ ಆಟವೇ ಜೀವನ. ಎಷ್ಟೊಂದು ವೈವಿಧ್ಯತೆ! ಎಷ್ಟೊಂದು ಭಾವ ಸ್ಪುರಣ! ಒಂದೊಂದು ದಿನವೂ ಒಂದೊಂದು ರೀತಿ, ಒಬ್ಬೊಬ್ಬರ ಜೀವನವೂ ಒಂದೊಂದು ಬಗೆ, ಸುಖ-ದುಃಖಗಳ ಸಮ್ಮಿಲನ. ಬಹುಮುಖಿ!
ಜೀವನ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಎಲ್ಲಾ ಸುಖೀ ಸಂಸಾರಗಳು ಒಂದೇ ರೀತಿ ಕಾಣಬಹುದು. ಆದರೆ ಕಷ್ಟದ ಬೇಗೆಯಲ್ಲಿ ಸಿಲುಕಿರುವ ಸಂಸಾರಗಳು ಒಂದಕ್ಕೊಂದು ಹೋಲಿಕೆಯೇ ಬೇಗೆಯಲ್ಲಿ ಇಲ್ಲದಂತೆ ಪ್ರತ್ಯೇಕ, ಪ್ರತ್ಯೇಕವಾಗಿಯೇ ಕಾಣಿಸುತ್ತವೆ. ಯಾಕೆಂದರೆ ಕಷ್ಟಗಳು ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಕಾಡುತ್ತವೆ. ಸುಖ ದುಃಖ ಜನರ ಮೇಲೆ ಉಂಟು ಮಾಡುವ ಪರಿಣಾಮಗಳು ಬೇರ ಬೇರೆ.
ಸುಖ ಅನುಭವಿಸಲು ಹೆಚ್ಚಿನ ಮಾನಸಿಕ ಸಿದ್ಧತೆ, ಧೈರ್‍ಯ, ಮಾನಸಿಕ ಸಮತೋಲನ ಬೇಕಾಗುವುದಿಲ್ಲ. ಯಾಕೆಂದರೆ ಅಲ್ಲಿ ಸವಾಲುಗಳಿಲ್ಲ. ಅನುಭವಿಸುವುದು ಸುಲಭ. ಸುಖವನ್ನು ಸ್ವೀಕರಿಸಲು ಯಾರಿಗೂ ಕಷ್ಟವಾಗುವುದಿಲ್ಲ. ಆದರೆ ಸವಾಲುಗಳ ಹೊರೆಯನ್ನೇ ಹೊತ್ತು ಬರುವ ಕಷ್ಟಗಳನ್ನು ಎದುರಿಸಲು ಹೆಚ್ಚಿನ ಮಾನಸಿಕ ಸ್ಥೆರ್‍ಯ, ಆತ್ಮವಿಶ್ವಾಸ, ಮಾನಸಿಕ ಸಮತೋಲನ ಹಾಗೂ ಧೈರ್‍ಯ ಬೇಕು. ಇವಿಲ್ಲದಿದ್ದರೆ ಕಷ್ಟ ಬಂದಾಗ ಮನುಷ್ಯ ಬಿರುಗಾಳಿಗೆ ಸಿಕ್ಕ ಎಲೆಯಂತೆ ತತ್ತರಿಸುತ್ತಾನೆ. ಪ್ರವಾಹಕ್ಕೆ ಸಿಕ್ಕ ಹೂವಿನಂತೆ ಪುಡಿಪುಡಿಯಾಗಿ ಚಲ್ಲಾಪಿಲ್ಲಿಯಾಗಿ ಚದುರಿ ಹೋಗುತ್ತಾನೆ. ಅದಕ್ಕೇ ಹೇಳುವುದಿರಬೇಕು ‘ಸುಖವನ್ನು ನಿರೀಕ್ಷಿಸು; ದುಃಖವನ್ನು ಎದುರಿಸಲು ತಯಾರಾಗಿರು’ ಎಂದು. ಈ ಸತ್ಯವನ್ನು ಅರಿತುಕೊಂಡರೆ ಜೀವನದಲ್ಲಿ ಸಮತೋಲನವನ್ನು ಕಾದುಕೊಂಡು ಕಷ್ಟಗಳೊಡನೆ ಹೋರಾಡುವುದು ಸಾಧ್ಯವಾಗುತ್ತದೆ.
ಜೀವನವೆನ್ನುವುದು ಒಂದು ಅಗೋಚರ ವಿಸ್ಮಯ ಲೋಕ. ದಟ್ಟವಾದ ಕಾಡಿನಂತೆ. ಆಳವಾದ ಸಮುದ್ರದಂತೆ, ಅದರ ಒಳ ಹೊಕ್ಕ ಮೇಲಷ್ಟೇ ಅದರ ಪರಿಚಯ. ಅರ್‍ಧ ಮುಳುಗಿದ ಮೇಲೆ ಪ್ರವಾಹಕ್ಕೆ ಅಂಜಿ ಸುಮ್ಮನಿರಲಾಗುವುದೇ? ಬದುಕುವುದನ್ನು ಬಿಡಲಿಕ್ಕಾಗದು. ಬದುಕಲೇ ಬೇಕು. ಬದುಕ ಬೇಕೆಂದರೆ ಕೈಕಾಲು ಅಲ್ಲಾಡಿಸಿ ಈಜಿ ದಡ ಸೇರಲೇ ಬೇಕು. ಬದುಕುವುದಕ್ಕೆ ಬೇಕಾದ ಹಾಗೆ ನಮ್ಮನ್ನು ನಾವು ಸಿದ್ಧಗೊಳಿಸಿ ಕೊಂಡು ದುಃಖವನ್ನು ಎದುರಿಸಲು ಬೇಕಾದ ಮನೋಸ್ಥೈರ್‍ಯವನ್ನು ಅಳವಡಿಸಿಕೊಂಡರೆ ಸುಖ ಬಂದಾಗ ಅನುಭವಿಸಬಹುದು; ದುಃಖ ಎದುರಿಸಬೇಕಾದಾಗ ಮಾನಸಿಕ ಸಮಸ್ಥಿತಿಯನ್ನು ಕಾದುಕೊಂಡು ಜೀವಿಸಬಹುದು. ಜೀವನದಲ್ಲಿ ದುಃಖವನ್ನು ಎದುರಿಸುವ ತಯಾರಿ ಬಹಳ ಮುಖ್ಯ. ಈ ಸಿದ್ಧತೆ ಜೀವನದಲ್ಲಿ ಬಹಳ ಮುಖ್ಯವಾದರೂ ಎಷ್ಟು ಜನ ಈ ಸಿದ್ಧತೆ ಮಾಡಿಕೊಂಡಿರುತ್ತಾರೆ? ಎಲ್ಲರೂ ಬಯಸುವುದು ಸುಖವನ್ನು ಮಾತ್ರ ಕಷ್ಟ ಯಾರಿಗೂ ಬೇಡ. ಆದರೆ ಜೀವನದಲ್ಲಿ ಸದಾ ಸುಖ, ಸಂತೋಷ ಇರುವುದು ಸಾಧ್ಯವಿಲ್ಲ. ಸುಖದ ಹಿಂದೆ ದುಃಖ ಹೊಂಚು ಹಾಕುತ್ತಿರುತ್ತದೆ. ದುಃಖದ ಹಿಂದೆ ಸುಖದ ಎಳೆ ಅಡಗಿರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಜೀವನವನ್ನು ಎದುರಿಸುವುದು ಸುಲಭ.
ಇಂದಿನ ಜೀವನದ ರೀತಿಯೇ ಬದಲಾಗಿದೆ. ಯಾರಿಗೂ ಕಷ್ಟ ಬೇಕಾಗಿಲ್ಲ. ಕೈತುಂಬ ಹಣ; ಇರಲೊಂದು ಮನೆ; ಹಲವಾರು ರೀತಿಯ ಐಷರಾಮಿ ಸೌಲ್ಯಭ್ಯಗಳು; ತಮ್ಮ ಸುಖ, ಸಂತೋಷಕ್ಕೆ ಯಾವುದೇ ಅಡ್ಡಿ ಆತಂಕಗಳು ಇರಬಾರದು ಎನ್ನುವ ಸ್ವಾರ್‍ಥ. ಇಷ್ಟಿದ್ದರೆ ಲೋಕವನ್ನೇ ಮರೆಯುವ ಅಹಂಕಾರದಿಂದ ಮೆರೆಯುವುದೇ ಜಾಸ್ತಿ. ಎಲ್ಲ ರೀತಿಯ ಸೌಲಭ್ಯಗಳು ಯಾವುದೇ ಕಷ್ಟವಿಲ್ಲದೆ ಸಿಕ್ಕಿದರೆ ಅದರ ಬೆಲೆ ತಿಳಿಯುವುದಾದರೂ ಹೇಗೆ?
ಜೀವನದಲ್ಲಿ ಸುಖ-ದುಃಖ ಎರಡೂ ಬೇಕು. ಆಗಲೇ ಮನುಷ್ಯನಿಗೆ ನಿಜವಾದ ಸುಖದ ಅರ್‍ಥ ತಿಳಿಯುತ್ತದೆ. ಬರೇ ಸುಖವಿದ್ದರೂ ಜೀವನ ಬೋರ್, ಬರೇ ಕಷ್ಟವಿದ್ದರೂ ಬೋರ್, ಎರಡೂ ಇದ್ದರೆ ಜೀವನ ರಸಮಯವಾಗಿರುತ್ತದೆ. ಸುಖದಲ್ಲಿದ್ದಾಗ ಈ ಕ್ಷಣ ಹೀಗೇ ಇರಲಿ ಶಾಶ್ವತವಾಗಿರಲಿ ಎನ್ನುವ ಆಸೆ. ಕಷ್ಟ ಬಂದಾಗ ಜೀವನವೇ ಅಸಹ್ಯವೆನಿಸಿ ಈ ದಿನ ಕಳೆದು ನಾಳೆ ಯಾವಾಗ ಬರುವುದೋ ಎನ್ನುವ ನಿರೀಕ್ಷೆ. ಇವತ್ತು ಹೀಗಾದರೂ ನಾಳೆ ಎಲ್ಲವೂ ಸರಿಯಾಗಬಹುದು ಎನ್ನುವ ಈ ನಿರೀಕ್ಷೆಯಲ್ಲಿ ಜೀವನದ ಮುಂದುವರಿಕೆಯ ಲಕ್ಷಣ ಇರುತ್ತದೆ. ಈ ನಿರೀಕ್ಷೆಯೇ ಸಾಕು ಜೀವನ್ಮುಖಿಯಾಗಿಸಲು. ಎಲ್ಲಾ ಕಷ್ಟಗಳನ್ನೂ ಮೀರಿ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಜೀವಂತಿಕೆ ತುಂಬಿಸಲು. ಜೀವನದಲ್ಲಿ ಮುಂದುವರಿಕೆಯ ಜೀವಂತಿಕೆ ಇರಬೇಕಲ್ಲದೆ ನಿಂತ ನೀರಿನ ಸ್ತಬ್ಧತೆಯಲ್ಲ. ಈ ಕಾರಣಕ್ಕೇ ಇರಬೇಕು ಗಾಂಧೀಜಿ ತಮ್ಮ ಜೀವನದಲ್ಲಿದ್ದ ಸುಖವನ್ನೆಲ್ಲ ತ್ಯಜಿಸಿ ಕಷ್ಟಗಳನ್ನು ಸ್ವೀಕರಿಸಿ ತಮ್ಮ ಜೀವನಕ್ಕೊಂದು ಅರ್‍ಥ ಕೊಡಲು ಪ್ರಯತ್ನಿಸಿರುವುದು. ಅದರಿಂದಾಗಿಯೇ ಮಹಾತ್ಮನಾದದ್ದು. ಗೌತಮನೂ ಬುದ್ಧನಾಗಲು ಸಾಧ್ಯವಾದದ್ದು ಇದೇ ರೀತಿಯ ಸುಖದ ತ್ಯಾಗದಿಂದ. ಯಾರೂ ಸುಖವನ್ನು ತ್ಯಜಿಸಿ ಕಷ್ಟದ ಜೀವನಕ್ಕೆ ತಮ್ಮನ್ನು ‘ಒಡ್ಡಿಕೊಳ್ಳಲು ತಯಾರಾಗಿರುವುದಿಲ್ಲ. ಲೌಖಿಕ ಸುಖವನ್ನು ಬಾಚಿಕೊಳ್ಳುವುದರಲ್ಲೇ ಜೀವನದ ಸಂತೃಪ್ತಿಯನ್ನು ಕಂಡುಕೊಂಡಿರುವ ಇಂದಿನವರು ಯಾರೂ ಸುಖವನ್ನು ತ್ಯಜಿಸಿ ಕಷ್ಟದ ಜೀವನಕ್ಕೆ ತಮ್ಮನ್ನು ಒಡ್ಡಿಕೊಳ್ಳಲು ತಯಾರಾಗಿರುವುದಿಲ್ಲವಾದ ಕಾರಣ ತತ್ವಜ್ಞಾನಿಗಳಾಗೋದಿಲ್ಲ. ಯಾರೂ ಮಹಾತ್ಮರಾಗುತ್ತಿಲ್ಲ.
ಹಿಂದೆ ಗ್ರೀಸಿನ ಜ್ಞಾನಿ ಪೈಥಾಗೋರಸನನ್ನು ಯಾರೋ ನಿಜವಾದ ತತ್ವಜ್ಞಾನಿ ಯಾರು ಎಂದು ಕೇಳಿದರಂತೆ. ಆಗ ಅವನು ‘ಒಲಂಪಿಕ್ಸ್‌ಗೆ ಮೂರು ಗುಂಪಿನ ಜನರು ಬರುತ್ತಾರೆ. ಒಂದು ಗುಂಪಿನವರು ಆಟದಲ್ಲಿ ಭಾಗವಹಿಸಿ ಕೀರ್‍ತಿ ಸಂಪಾದಿಸುವುದಕ್ಕೆ ಬರುತ್ತಾರೆ. ಇನ್ನೊಂದು ಗುಂಪಿನವರು ಅಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸಲು ಬರುತ್ತಾರೆ. ಮೂರನೇ ಗುಂಪಿನವರು ಕೇವಲ ಆಟ ನೋಡುವುದಕ್ಕೆ ಬರುತ್ತಾರೆ. ಅವರಿಗೆ ಕೀರ್‍ತಿಯೂ ಬೇಡ ಲಾಭವೂ ಬೇಡ, ನೋಡಿ ಆನಂದ ಪಡುವುದಷ್ಟೇ ಅವರ ಇಚ್ಛೆ. ಅವರು ಅನಾಸಕ್ತ ಪ್ರೇಕ್ಷಕರು, ಅವರೇ ಜಗತ್ತಿನ ದೊಡ್ಡ ತತ್ವಜ್ಞಾನಿಗಳು.’
ಜೀವನವೆನ್ನುವ ವಿಸ್ಮಯದ ಆಟದಲ್ಲಿ ಹೀಗೆ ಅನಾಸಕ್ತ ಪ್ರೇಕ್ಷಕನಾಗುವುದು ಸಾಧ್ಯವಾದರೆ ಸುಖ-ದುಃಖ ಎರಡೂ ಒಂದೇ ಆಗುತ್ತದೆ. ಲೋಭ, ಮದ, ಮತ್ಸರ, ಸ್ವಾರ್‍ಥ, ದುರಾಸೆ, ವಂಚನೆ ಎಲ್ಲವನ್ನೂ ದೂರದಲ್ಲಿಟ್ಟು ಮನುಷ್ಯ ಮನುಷ್ಯನಾಗಿ ಉಳಿಯುತ್ತಾನೆ. ಬಾಳುವ ಆಟದಲ್ಲಿ ಯಶಸ್ಸು ಗಳಿಸುತ್ತಾನೆ. ಇದನ್ನು ತಿಳಿದುಕೊಂಡರೆ ಕಷ್ಟಗಳಿಗೆ ಹೆದರಿ ದೂರ ಸರಿಯುವ ಪ್ರಶ್ನೆಯೇ ಏಳುವುದಿಲ್ಲ. ಸುಖ ದುಃಖವನ್ನು ಸಮಚಿತ್ತದಿಂದ ಎದುರಿಸುವವನೇ ಜೀವನವೆನ್ನುವ ನಾಟಕದ ಅನಾಸಕ್ತ ಪ್ರೇಕ್ಷಕ, ಸ್ಥಿತಪ್ರಜ್ಞ, ಸುಖಿ.
ಸುಖ-ದುಃಖ ಜೀವನದ ಎರಡು ಮುಖಗಳಿದ್ದಂತೆ. ಎರಡರ ಸಮ್ಮೇಳನವೇ ಮನುಷ್ಯನಲ್ಲಿ ಮಾನವೀಯತೆಯನ್ನು ತುಂಬಲು ಸಹಕಾರಿಯಾಗುತ್ತದೆ.
*****
(ಚಿಂತನ -ಆಕಾಶವಾಣಿ; ಮಂತಣಿ)