ಹೂವಾಗು ಹೊಳೆಯಾಗು ಹಾರು ಹಕ್ಕಿಯು ಅಗು
ಗುರುಲಿಂಗ ಜಂಗಮವ ಸಾರಿಹೇಳು
ನೋಡು ಓಡುವ ಮೋಡ ಕೂಡು ಕುಣಿಯುವ ಕಡಲು
ಶಿವತತ್ತ್ವ ಸಿದ್ಧಾಂತ ಚೆಲುವ ನೋಡ

ಯಾಕೆ ಧರ್‍ಮದ ಗುಲ್ಲು ಸಾಕೆ ಶಾಸ್ತ್ರದ ಗಲ್ಲು
ಶರಣ ಧರ್‍ಮದ ಶಿಖರ ಏರಿಬಾರಾ
ಪಾರಿವಾಳದ ತೆರದಿ ಕಡಲ ನೌಕೆಯ ಏರು
ಆತ್ಮವೀಣೆಯ ಗಾನ ಕೇಳಿ ಬಾರಾ

ಅಡ್ಡ ದೊಡ್ಡರ ಮಾತು ಹಾಳು ಮಣ್ಣಿನ ಜಿಡ್ಡು
ಭೂತಕ್ಕೆ ಪಟ್ಟವನು ಕಟ್ಟಬೇಡ
ನವಿಲ ನಾಟ್ಯವ ಮಾಡು ಕೋಗಿಲೆಯ ಕೂಗಾಗು
ಹಸಿದ ಹೊಟ್ಟೆಗೆ ಹೊಟ್ಟು ತುಂಬಬೇಡ

ಹಾರಿ ಬಾ ತೂರಿಬಾ ಏರಿಬಾ ಓ ಗೆಳೆಯ
ಗಗನ ಹಕ್ಕಿಯ ಗಾನ ಕೇಳಿಬಾರಾ
ಶಾಂತಿಯೆ ಶಿವಧರ್‍ಮ ಕರುಣೆಯೆ ಶಿವಯೋಗ
ಶರಣ ಜಂಗಮ ಶಿಖರ ಏರಿಬಾರಾ
*****