“ಪದ್ಯವನ್ನು ಬರೆವ ಚಟ ಹೆಚ್ಚಾಯ್ತು, ದುಃಸಾಧ್ಯ,
ದೈವವಶವೀ ಕವಿತೆ. ‘ಉದ್ಯಮ’ವ ಗೈಯ್ಯುವರು
ಎಲ್ಲ ಮೊದ್ದರು ಇದನು; ತಿಣಿತಿಣಿಕಿ ಬರೆಯುವರು.
ಇದರಿಂದ ನಮಗೆ ತಗಲುವ ಹಾನಿಯನವದ್ಯ.
ಕಿತ್ತು ಹಾಕಿರಿ ಕವಿಯ; ಕಾವ್ಯಧೇನುವು ವಧ್ಯ.
ಗದ್ಯವನ್ನು ಬರೆಯುವದು” ಎಂದು ನಿಶ್ಚಯಿಸುವರು
ಇಂದಿನ ವಿಮರ್‍ಶಕರು, ಕವಿಯಲ್ಲದಣ್ಣದಿರು
ಇದಕೆ ತಲೆಹಾಕುವರು: ‘ಅಹುದು ಗದ್ಯವು ಹೃದ್ಯ’.

ಕವಿಗಳರ್‍ಥವ ತಿಳಿಯದಲೆ ಹರಟುತಿಹರಿಂತು.
ಕಾವ್ಯವನು ಕೊಲ್ಲಲೆಣಿಸುತ ಗದ್ಯವನೆ ಕೊಂದು
ಬಾಳುವರು. ಪದ್ಯಗದ್ಯಗಳೆರಡು ಅನುಭವದ
ಅರ್‍ಧನಾರೀಶ್ವರನ ರೂಪಗಳು. ಉತ್ತಮರ
ಗದ್ಯಪದ್ಯಗಳೊಂದೆ. ನಮಗೆ ಬೇಕಿಹುದು ಹದ.
ಅದುವೆ ದೈವಾಯತ್ತ. ಶಬ್ದಮಯವೀ ಸಮರ.
*****