ದೊಡ್ಡವರ ವಜ್ರ

ದೊಡ್ಡವರ ವಜ್ರ

“ಹಾಕಿದುದು ಅರಮನೆಯ ಅಡಿಗಟ್ಟು ; ಕಟ್ಟಿದುದು ಗುಡಿಸಲು! ಹೀಗೇಕಾಯಿತು ? ವಿಧಾತನ ಕ್ರೂರತನವೊ , ತಂದೆಯ ಬಡತನವೊ ? ವಿಧಿಯನ್ನಲೇ ? ವಿಧಿಯು ಉದಾರಿಯು ; ಸೃಷ್ಟಿಯಲ್ಲಿ ಮೈ ಮರುಳುಗೊಳಿಸುತ್ತ, ಬಗೆಗೆ ಆನಂದ ಬೀರುತ್ತ, ಸೊಬಗಿನ ಆಗರಗಳಾಗಿ ಇರುವವುಗಳ ಸಾರವನ್ನೆಲ್ಲ ಹೀರಿ ನನ್ನನ್ನು ರೂಪಿಸಿರುವನು ಆ ವಿಧಿಯು! ಬರೇ ಮೂವತೈದು ರೂಪಾಯಿಯ ಗುಮಾಸ್ತೆಯ ಪಾಣಿಗ್ರಹಣಕ್ಕಾಗಿದ್ದರೆ, ವಿವಿಧ ವಸ್ತುಗಳ ಸೌಂದರ್ಯಸಾರದ ಎರಕದಿಂದ ಈ ಕೈಯನ್ನು ನಿರ್ಮಿಸುತ್ತಿದ್ದನೆ? ಮುಸುರೆ ತಿಕ್ಕುವ ಸೆಗಣಿಸಾರಿಸುವ ನೀರುಸೇದುವ ಬಟ್ಟೆಯೊಗೆಯುವ ಬೆರಣಿ ತಟ್ಟುವ ಕೈಗಳೇ ಇವು? ಬೆಂಕಿಯೂದಿಯೂದಿ ಹೊಗೆತುಂಬಿ ಕೆಂಪೇರಿ ಉರಿಗೊಳ್ಳುವುದಕ್ಕಾಗಿ ಈ ಕಣ್ಣುಗಳೇ? ಮನೆಗೆಲಸದಲ್ಲಿ ತೊಳಲಿ ಬಳಲಿ ಕಂದಿ ಕುಂದುವುದಕ್ಕಾಗಿ ಈ ದೇಹವನ್ನು ತಿದ್ದಿ ಮಿರುಗುಗೊಟ್ಟನೆ ಆ ವಿಧಿಯು? ಇಲ್ಲ, ಇಲ್ಲ; ಹಾಗಾದರೆ ನನ್ನನ್ನು ದಿಕ್ಕು ತಪ್ಪಿಸಿ ಕೈಹಿಡಿಸಿದುದು ಯಾವುದು? ತಂದೆಯ ಬಡತನವೇ? ಹೌದು, ತಂದೆಯ ಬಡತನ!” ಇದೀಗ ರಾಮಿಗೆ ಹಲವು ವೇಳೆ ಹೊಳೆದ ವಿಚಾರ.

ರಾಮಿಯು ರಾಮರಾಯನ ಹೆಂಡತಿ; ಆತನು ಚಂದ್ರಪುರ ಮುನ್ಸಿಫ ಕೋರ್ಟಿನ ನೌಕರ ; ಅವರ ಮನೆಯು ಆ ಪಟ್ಟಣದ ‘ಅಪ್ರಾಮುಖ್ಯ’ ಬೀದಿಯೊಂದರಲ್ಲಿ. ಆ ಬೀದಿಯಲ್ಲಿ ಮನೆಗಳಿಗೆ ಕಡಿಮೆಯಿದ್ದಿಲ್ಲ; ಜನ ಸಂಚಾರಕ್ಕೆ ಬಿಡುವಿದ್ದಿಲ್ಲ. ‘ಮೋಟರ್ ಬಸ್ಸು’ಗಳಿಗೂ ಅವುಗಳ ಸಹೋದರ ವರ್ಗದ ‘ಕಾರು ಲೋರಿ’ಗಳಿಗೂ ಇನ್ನು ಇವುಗಳ ವ್ಯವಸಾಯ ಬಂಧುಗಳಾದ ‘ಸೈಕಲ್’ ಕುದುರೆಗಾಡಿ ಮುಂತಾದ ಬಹುತರದ ವಾಹನಗಳಿಗೂ ಸಂಚಾರಕ್ಕೆ ನಿಶ್ಚಿತವಾದ ಹಾದಿಯು ಬೇರೆ ಇದ್ದರೂ ಅವುಗಳ ನಿಲ್ದಾಣಕ್ಕೆ ರಾಮರಾಯನ ಬೀದಿಯೇ ಹತ್ತಿರದ ಹಾದಿ; ಆ ಅಡ್ಡದಾರಿಯಲ್ಲಿಯೇ ಅವುಗಳ ಸವಾರಿ; ಹೀಗಿದ್ದೂ ಅದು ‘ಅಪ್ರಾಮುಖ್ಯ’ ಬೀದಿಯೆ? ಎಂದು ಆಕ್ಷೇಪಿಸಬಹುದು, ಆದರೆ ಯಾರೇನು ಮಾಡಲಿ? ಚಂದ್ರಪುರದ ಮುನಿಸಿಪಾಲಿಟಿಯ ಬೀದಿಯ ಪಟ್ಟಿಯಲ್ಲಿ ಅದು ‘ಅಪ್ರಾಮುಖ್ಯ’ ಬೀದಿಗಳ ಸಾಲಿನಲ್ಲಿ ಬಿದ್ದು ಹೋಗಿದೆ! ಹಾಗೆ ಬಿದ್ದು ಹೋದುದನ್ನು ತಿದ್ದಲಾಗುವುದೆ? ಆದುದರಿಂದ ಮುನಿಸಿಪಾಲಿಟಿಯ ತುಂಬಿದ ‘ನೀರಿನ ಲೋರಿ’ಯು ಆ ‘ಅಪ್ರಾಮುಖ್ಯ’ ಬೀದಿಗಾಗಿ ಬಂದು ತನ್ನನ್ನು ಹಗುರಮಾಡಿಕೊಳ್ಳಲಾರದು. ಆದರೂ ತಾನು ಬರಿದಾಗಿ ಹಿಂತಿರುಗುವುದಕ್ಕೆ ಅದೇ ಹತ್ತಿರದ ದಾರಿ ಎಂಬುದನ್ನು ಅದೂ ಮರೆತಿದ್ದಿಲ್ಲ.

ಇಂತಹ ದೂಳೀಗಲ್ಲಿಯಲ್ಲಿ ರಾಮ ರಾಮಿಯರ ಮೂರು ರೂಪಾಯಿ ಬಾಡಿಗೆಯ ಮನೆ, ಅದರಲ್ಲಿರುವುದು ಎರಡೇ ಕೋಣೆ – ಒಂದು ಅಡಿಗೆಗೆ; ಮತ್ತೊಂದು ಕಾಲಕ್ಷೇಪಕ್ಕೆ; ಹೊಗೆಯದೊಂದು ದೂಳಿಯದೊಂದು ಎಂದರೇ ಇದ್ದದ್ದು ಇದ್ದಂತೆ ಹೇಳಿದಂತಾಗುವುದು. ಆ ಎರಡನೆಯ ಕೋಣೆಯ ಬಾಗಿಲ ಮುಂದಿನ ಎರಡು ಮೆಟ್ಟಿಲುಗಳನ್ನಿಳಿದರೆ ಮೂರನೆಯ ಹೆಜ್ಜೆಯನ್ನಿಡಬೇಕು ಆ ಬೀದಿಯಲ್ಲಿಯೆ. ಬಾಗಿಲ ಎಡಕ್ಕೆ ಗೋಡೆಯಲ್ಲಿರುವ ಕಿಟಕಿಯಿಂದ ನೋಡಿದರೆ ಕಾಣುವುದೂ ಆ ಬೀದಿಯೆ, ಆ ಹಾದಿಯಲ್ಲಿ ಬಗೆಬಗೆಯ ವಾಹನಗಳನ್ನೇರಿ ಸಂಚರಿಸುವ ಶ್ರೀಮಂತ ಸ್ತ್ರೀಯರ ವಿಲಾಸವೈಭವಗಳನ್ನು ಕಂಡಾಗಲೆಲ್ಲ ರಾಮಿಯು ತನ್ನ ಪಾಡು ಹೀಗೇಕಾಯಿತು? ಎಂದು ನಿಟ್ಟುಸಿರುಗರೆಯುತ್ತಿದ್ದಳು.

ರಾಮಿಯು ಸುಂದರಿ; ಅವಳಂತಹ ಚಲುವೆಯು ನೋಡಸಿಗುವುದು ದುರ್ಲಭ; ರೂಪವತಿಯರು ಎಂದೆನಿಸಿಕೊಂಡವರ ಅಂದವೆಲ್ಲಿದೆಯೆಂದು ಪರಿಶೀಲಿಸಿದರೆ ಒಬ್ಬಳದು ಮೋರೆಯಲ್ಲಿ, ಮತ್ತೊಬ್ಬಳದು ಮೈಗಟ್ಟಿನ ಸೌಷ್ಠವದಲ್ಲಿ, ಇನ್ನೊಬ್ಬಳದು ಬಿಳಿಗೆಂಪಿನ ಮೈ ಬಣ್ಣದಲ್ಲಿ, ಮಗುದೊಬ್ಬಳದು ಲಜ್ಜೆಯೇ ಬಲ್ಲ ಬೆಡಗಿನಲ್ಲಿ! ಇನ್ನು ಮುಗುಳ್ನಗುವಿನ ಕಿರುಬಾಯಿಯಿಂದ, ಮಿಂಚುಗಣ್ಣಿನಿಂದ, ಮುಂಗುರುಳ ಹಣೆಯಿಂದ, ನುಣ್ಗಲ್ಲದಿಂದ, ಸುಳಿಗೆನ್ನೆಯ ಮಿರುಗಿಂದ, ಇವುಗಳೊಂದೊಂದರಿಂದಲೇ ಸುಂದರಿಯರೆಂದೆನಿಸಿಕೊಂಡವರೂ ಇರುವರು. ತೆರೆಯಂತ ಬಿದ್ದೇಳುವ ಕೊಂಕುಗೂದಲ ಸಿರಿಯಿಂದಾಗಲಿ, ಬಡನಡುವಿಂದಾಗಲಿ, ಬೆಡಗಿನ ನಡೆಯಿಂದಾಗಲಿ, ಅಲ್ಲವೇ ದುಂಡುದುಂಡಾದ ಕೈಕಾಲುಗಳಿಂದಲೋ, ಸಿಡಿದರೆ ಕೆನ್ನೀರು ಮಿಡಿಯಬಹುದೆಂಬ ಭ್ರಮೆಗೊಳಿಸುವ ತುಂಬಿದ ತನುಕಾಂತಿಯಿಂದಲೋ, ಕೊಳಲ ಮೆಲುನುಡಿಯಿಂಪಿನಿಂದಲೋ, ಓರೆನೋಟಕ್ಕೆ ಕಳೆಯೇರಿಸುವ ಹುಬ್ಬಿನ ಹಬ್ಬುಗೆಯಿಂದಲೋ, ಅವುಗಳ ನಡುವಿಂದ ಸರಕ್ಕನೆ ಜಗುಳ್ದು ಜಗ್ಗನೆದ್ದು ನೇರಾಗಿ ಮುಂದರಿದು ನಸುವರಳಿದ ತೆನಮೂಗಿಂದಲೋ, ಮನಮೋಹಿನಿಯರಾದವರು ಇರುವರು. ಹೀಗೆ ಹಲವರು ಸೌಂದರ್ಯದ ಒಂದೊಂದು ಲಕ್ಷಣದಿಂದಲೆ ಚಲುವೆಯರಾಗಿದ್ದರೆ ನಮ್ಮ ರಾಮಿಯು ಆವೆಲ್ಲವುಗಳ ಯೋಗದಿಂದಾದ ಸರ್ವಾಂಗ ಸುಂದರಿಯು. ಅವಳಲ್ಲಿ ಕೆತ್ತ ಬೇಕಾದುದಾಗಲಿ ಮೆತ್ತುವಂತಹದಾಗಲಿ ಕೀಸಿಪೂಸಿಯೊಪ್ಪೆಗೊಡತಕ್ಕುದಾಗಲಿ ಯಾವುದೂ ಉಳಿದುಹೋಗಿದ್ದಿಲ್ಲ; ಅವಳು ಚಲುವಿನ ರಾಣಿ. ಹಾಗೆಂದು ಅವಳಿಗೆ ತಿಳಿದಿತ್ತು. ಮಾತ್ರವಲ್ಲ, ಚಂದ್ರಪುರದ ಕನ್ಯಾಮಠ (ಕನ್ವೆಂಟ್) ಶಾಲೆಯಲ್ಲಿ ಆರು ವರುಷ ಓದಿದ್ದುದರಿಂದ ಮೃದುಮಧುರವಾಗಿ ಇಂಗ್ಲೀಷು ಮಾತಾಡಲು ಅವಳು ಬೆದರುತ್ತಿದ್ದಿಲ್ಲ. ಅದು ಕಾರಣ ಎಂತಹ ಸಿರಿವಂತನಿರಲಿ, ಕುಲವಂತನಿರಲಿ, ಪದವೀಧರನಿರಲಿ, ತಾನು ಆತನ ಮಡದಿಯಾಗಿ ನಡೆಯಲು ನಡುಗಬೇಕಾದ್ದಿಲ್ಲವೆಂದೂ ಅವಳಿಗೆ ನಿಶ್ಚಯವಿತ್ತು.

ತನ್ನ ತಂದೆಯು ಧನಿಕನಿರುತ್ತಿದ್ದರೆ, ತನಗಾಗಿ ಹತ್ತಾರು ಸಾವಿರ ರೂಪಾಯಿಗಳನ್ನು ವರದಕ್ಷಿಣೆಯಾಗಿ ಕೊಡಲು ಸಮರ್ಥನಿರುತ್ತಿದ್ದರೆ, ತಾನಿಂದು ಸುಂದರೋದ್ಯಾನದ ನಡುವ ಮಂಟಪದಂತೂಪ್ಪುವ ಉಪ್ಪರಿಗೆಯ ಮನೆಯಲ್ಲಿ ವಿವಿಧ ಚಿತ್ರಪಠಗಳಿಂದಲಂಕೃತವಾದ ಕಡೆಗಟ್ಟಿನ ಮೇಲೆ, ಎದುರು ಪುಪ್ಪ ಪಾತ್ರಗಳಿಂದ ಸಿಂಗರಿಸಿದ ದುಂಡು ಮೇಜನ್ನಿಟ್ಟು , ಮೆತ್ತನೆಯ ಸುಂದರಾಸನದಲ್ಲೊರಗಿ, ಮಿರುಮಿರುಗಿ ಮರೆಯುತ್ತಿದ್ದನಲ್ಲದೆ, ಈ ದೂಳಿನ ಕೋಣೆಯ ದೂಳೊರಸಾಗಿ ಹೊರಳಾಡುತ್ತಿದ್ದೆನೆ? ಎಂಬ ಯೋಚನೆಯು ಕಿಟಕಿಯಿಂದ ರಾಮಿಯು ಬೀದಿಯನ್ನು ನೋಡಿದಾಗ ಹಲವು ಸಲ ಹೊಳೆಯುತ್ತಿತ್ತು. ಏಕೆಂದರೆ, ಅವಳ ಆ ಕನ್ಯಾಮಠದ ಗೆಳತಿಯರಲ್ಲನೇಕರು ಅಂದದ ಮೋಟಾರ್ ಕಾರಿನ ಮೆದುವಾಸಿನಲ್ಲಿ ಕುಳಿತು ನೆಗ್ಗಿ ಜಗ್ಗಿ ತಲೆಯನ್ನೊಲೆದೊಲೆದು, ಮೈಯನ್ನಲುಗಿಸಿ, ಕುಲುಕಿಸಿ, ಕೊರಳ ಹಾರಗಳನ್ನುಯ್ಯಲೆಯಾಡಿಸಿ, ಸೀರೆಯ ಸೆರಗಿಂದ ಗಾಳಿಪಟವಾಡಿಸಿ, ವಿಲಾಸದ ಬಾಳಿನ ಸಿರಿಯನ್ನು ಮರೆಸುತ್ತ, ಅದೇ ಬೀದಿಯ ಹಾದಿಯಾಗಿ ಹಾದುಹೋಗುತ್ತಿದ್ದರು. ಅವರು ಕಿಟಕಿಯ ಎದುರಲ್ಲಿ ಮಿಂಚಿ ಮುಂದೆ ಸಂಚರಿಸಿದರೂ ರಾಮಿಗೆ ಅವರ ಗುರುತಾಗದೆ ಇರುತ್ತಿದ್ದಿಲ್ಲ. ಆಗ ರಾಮಿಯಲ್ಲಿ ತಾನೂ ಹಾಗಾಗಿರುತ್ತಿದ್ದರೆ ಎಂಬೊಂದು ವ್ಯಾಕುಲವು ಬಗೆಯಲ್ಲಿ ಮೂಡಿ ಕ್ಷಣದಲ್ಲಿ ಬಾಡಿ ನಿಟ್ಟುಸಿರೊಡನೆ ಇಳಿದು ಕಂಬನಿಯೊಡನೆ ಅಳಿದು ಹೋಗುತ್ತಿತ್ತು.

ಕುಲವೆಣ್ಣಾದ ರಾಮಿಯು ಬೆಲೆವೆಣ್ಣಿನಂತೆ ಹೀಗೆಲ್ಲ ಯೋಚಿಸಬಹುದೇ ಎಂದು ಆಕ್ಷೇಪಿಸುವಿರೇನು? ರಾಮಿಯ ಕನಸು ನೆನಸುಗಳೆಲ್ಲ ನಿರ್ದೋಷವಾದುವು. ಅವಳಿಗೆ ರಾಮರಾಯನಲ್ಲಿ ಅಸಂತೃಪ್ತಿಯಿದ್ದಿಲ್ಲ; ಅವಳ ‘ಇದ್ದರೆ’ ಗಳೆಲ್ಲ ರಾಮರಾಯನ ಪತ್ನಿಯಾಗಿದ್ದುಕೊಂಡೇ ಅನುಭವಕ್ಕೆ ಬಂದಿದ್ದರೆ ಎಂದಲ್ಲದೆ ಬೇರೆ ಬಗೆಯಲ್ಲಲ್ಲ. ರಾಮರಾಯನಲ್ಲಿ ಯೌವನವಿದೆ, ರೂಪವಿದೆ, ಪ್ರೇಮವಿದೆ, ಬುದ್ದಿಯಿದೆ. ಅಂತಹ ಪತಿಯಿಂದೊಡಗೂಡಿದ ತನಗೆ ಸೊಬಗಿನ ಜೀವನದ ಸೊಗಸೂ ದೊರಕಿದ್ದರೆ, ಎಂಬುದೇ ಅವಳ ‘ರೆ’ ಯ ರಹಸ್ಯ. ಚುಟುಕಿನಿಂದ ಹೇಳಲೆ? ತಾನೂ ಶ್ರೀಮಂತಳಾಗಿ, ಶ್ರೀಮಂತರ ಆಟ ಕೂಟ ಆಗುಹೋಗುಗಳಲ್ಲಿ ಸೇರಿ, ಬೆರೆದು ಮೆರೆದು, ಸ್ತ್ರೀಪುರುಷರೆನ್ನದೆಲ್ಲರನ್ನೂ ದೂರದಿಂದಲೇ ತನ್ನ ರೂಪಧನದ ಮಿರುಗಿಂದ ಬೆರಗುಗೊಳಿಸಿ, ಆ ಅನುಭವದಿಂದ ಉದ್ಭವಿಸುವ ಅದೊಂದಾನಂದವನ್ನು ಹೊಂದಬೇಕೆನ್ನುವ ಹಂಬಲೊಂದು ಲಗ್ನವಾದ ಮೇಲೆಯೂ ರಾಮಿಯನ್ನು ಬೆಂಬಿಡದೆ ಹಿಂಬಾಲಿಸಿ ಬಂದಿತ್ತು. ಆ ಆಶಾಪಾಶದ ಉರುಲಿಂದ ಕೊರಳನ್ನು ತಪ್ಪಿಸಿಕೊಳ್ಳಲು ಅವಳಿಂದಾಗಿದ್ದಿಲ್ಲ: ಆ ತೃಷೆಯನ್ನೊಮ್ಮೆ ಮನದಣಿಯೆ ನಿವಾರಿಸಿಕೊಳ್ಳುವ ಅನುಕೂಲವೂ ದೊರೆತಿದ್ದಿಲ್ಲ; ಇಷ್ಟೆ ರಾಮಿಯ ಅವ್ಯವಸ್ಥಿತ ಮನಸ್ಸಿನ ರಹಸ್ಯ. ರಾಮರಾಯನಿಗೆ ರಾಮಿಯ ಮನದೊಲವು ತಿಳಿದಿತ್ತು. ಅದಕ್ಕಾಗಿ ಅವನು ಕೃತ್ರಿಮವಾದರೂ, ಪಟ್ಟೆಯ ಬಟ್ಟೆ ಯಂತಿರುವ ಹೊಳಪಿನ ಉಡುಗೆಗಳನ್ನೇ ಅವಳಿಗೆ ತಂದು ಕೊಡುತ್ತಿದ್ದ, ಚಿನ್ನದೊಡವೆಗಳ ನಡುವೆ ಮಿರುಗು ಗೊಟ್ಟವುಗಳನ್ನೂ ಬೆರಕೆ ಹಾಕುತ್ತಿದ್ದ. ತಿಂಗಳಿಗೆರಡು – ಮೂರು ಸಲವಾದರೂ ನಾಟಕಗೃಹಕ್ಕೋ ಸಿನಮಾ ಮಂದಿರಕ್ಕೂ ಅವಳನ್ನು ಕರೆದುಕೊಂಡು ಹೋಗುವುದಿತ್ತು. ಆದರೆ ಇಂತಹ ವಿನೋದ ಗೃಹಗಳಲ್ಲಿ ಸೇರುವ ಸಿರಿವಂತರ ಸಿಂಗಾರಗಳನ್ನು ಕಂಡು ರಾಮಿಯು ಒಮ್ಮೊಮ್ಮೆ ಬೆಪ್ಪಾಗಿ ಅವರನ್ನೇ ದಿಟ್ಟಿಸುತ್ತ, ನಿಟ್ಟಿಸಿರುಗರೆಯುತ್ತ ಬಗೆ ಬಂದಂತೆ ಯೋಚಿಸುತ್ತ, ಕುಳಿತುಬಿಡುತ್ತಿದ್ದಳು. ಒಮ್ಮೊಮ್ಮೆ ಅಲ್ಲಿ ನೆರೆದಿದ್ದ ಸ್ತ್ರೀ ಲೋಕವು ತನ್ನನ್ನೆ ತಿರುತಿರುಗಿ ನೋಡಿ ಬೆರಗುಗೊಳ್ಳುತ್ತಿದೆ ಎಂದು ಅವಳಿಗೆ ಬೋಧೆಯಾದರೆ, ತಾನಿನ್ನೂ ಚೆಲುವಿನ ರಾಣಿಯಾಗಿಯೇ ಇರುವೆನೆಂದು ಹಿರಿಹಿಗ್ಗುತ್ತಿದ್ದಳು. ಅವಳ ಅಂದಿನ ಆನಂದಕ್ಕೆ ಹಿಂದು ಮಂದಿರುತ್ತಿದ್ದಿಲ್ಲ.
* * * *

ಚಂದ್ರಪುರದ ಮುನ್ಸೀಫರಲ್ಲಿ ಮದುವೆಯ ಗದ್ದಲವೆದ್ದಿದೆ. ಆ ಮುನ್ನಿಫರಿಗಿರುವದು ಒಂದೇ ಒಂದು ಮಗಳು ಇದೀಗ ಆ ಮಗಳ ಮದುವೆ. ಅವಳನ್ನು ಧಾರೆಯೆರೆದು ಕೊಡುವುದು ರಂಗಪುರದ ಜಡ್ಜರ ಮಗನಿಗೆ, ಅವನೀಗ ತಾನೆ ಐ. ಸಿ. ಯಸ್. ಪರೀಕ್ಷೆಗೊಟ್ಟು ಇಂಗ್ಲಾಂಡಿನಿಂದ ಮರಳಿರುವನು. ಅವನು ಅಲ್ಲಿಂದೊಬ್ಬಳು ಬಿಳಿಗುವರಿಯ ಕರಹಿಡಿದು ಕರೆತಾರದೆ, ತನ್ನವರಿಗೆಲ್ಲ ಕರಕರೆಗೊಳಿಸದೆ, ಊರು ಸೇರಿದುದು ನಮ್ಮ ಮುನ್ಸಿಫಪುತ್ರಿಯ ಪುಣ್ಯವೆಂದು ಕೆಲವರನ್ನುತ್ತಿದ್ದರು. ‘ಇಂದಿಲ್ಲದಿದ್ದರೆ ಮುಂದಾದರೂ ಎಂದಾದರೊಂದು ದಿನ ಗೌರಾಂಗಿಯೊಬ್ಬಳು ಅವನ ಅಲ್ಲಿಯ ಅರಸಿಯೆಂದು ಇಲ್ಲಿಗೂ ಅರಸುತ್ತ ಬಂದು ಐ. ಸೀ. ಯಸ್. (ಈ ಸೀ ಯೆಸ್! ಹೌದು! ಹುಡುಕಿ ಹಿಡಿದೆ!) ಎನ್ನುತ್ತ ಕಿರಿಚಿ, ತನ್ನ ಅರಸಿತನವನ್ನು ಮೆರೆಸಿ, ಅವನ ಮೋರೆಗೆ ಮಸಿಯೆರಚಿ, ಈ ಮದುವೆಯ ಗದ್ದಲಕ್ಕಿಂತಲೂ ಮಿಗಿಲಾದ ಸುದ್ದಿಯ ಗದ್ದಲವನ್ನು ಎಬ್ಬಿಸದಿದ್ದರೆ!’ ಎಂಬ ಮುನ್ಮೂತಿನ ಗುಜುಗುಜೂ ಇತ್ತು. ಅಂತೂ ಪ್ರಕೃತದ ಗದ್ದಲವು ಮದುವೆಯದೇ, ಮುನ್ಸೀಫರ ಮನೆಯ ಮದುವೆಯೆಂದ ಮೇಲೆ ಅದನ್ನು ಬಣ್ಣಿಸತೊಡಗಿದರೆ ಅದೇ ಒಂದು ಪುರಾಣದುದ್ದವಾಗಿ ವಾಚಕರೋಚಕವಾಗಬಹುದು, ಅದುಕಾರಣ ಚುಟುಕಿಂದ ದಿಗ್ಧರ್ಶನ ಮಾತ್ರ – ಲಕ್ಕಯ್ಯನ ಚಪ್ಪರ, ಮುಕ್ಕಯ್ಯನ ಮಂಟಪ, ಚಂದಯ್ಯನ ವಾಲಗ; ಮುಕ್ಕಣ್ಣನ ತಿಂಡಿ, ಸುಬ್ಬಣ್ಣನ ಅಡಿಗೆ, ಶೇಷಣ್ಣನ ಹೋಳಿಗೆ ‘ವಿಮಾನ್ ಎಂಡ್ ಕೋ’ ರವರು ಕಾರುಗಳಿಗೆ, ‘ಸೂರ್ಯ ಎಂಡ್ ಕೋ’ ರವರು ದೀಪಗಳಿಗೆ, ಇನ್ನು ಬಾಣ ಬಿರುಸುಗಳ ಜಳಕಕ್ಕೆ ‘ದಿ ಶೂಟಿಂಗ್ ಸ್ಟಾರ್ ಎಂಡ್ ಕೋ’ ರವರು! ಎಂದ ಮಾತ್ರಕ್ಕೆ ಆ ಜಿಲ್ಲೆಯವರಿರಲಿ, ಹೊರಗಿನವರೂ ಈ ವಿವಾಹದ ವೈಭವದ ಬಗೆಯನ್ನು ತನ್ನ ಬಗೆಯ ಹಲಗೆಯಲ್ಲಿ ಚಿತ್ರಿಸಿಕೊಳ್ಳಬಹುದು. ಈ ಲಗ್ನ ಕಾರ್ಯನಿರ್ವಾಹಕ ಮಂಡಳಿಯು ಸ್ವಯಂಪ್ರೇರಿತವಾಗಿಯೇ ನಿರ್ಮಿತವಾದುದು, ‘ಸೇವಕನಿಂದೇನಾದರೂ ಆಗಬೇಕೆಂದಿದ್ದರೆ ಅಪ್ಪಣೆಯಾಗಲಿ!’ ಎಂದು ದೊಡ್ಡ ದೊಡ್ಡವರ ಬಾಯಿಯಿಂದಲೂ ಬಾಯಿಯುಪಚಾರಕ್ಕಾಗಿಯಾದರೂ ಮುತ್ತಿನಂತಹ ಮಾತುಗಳು ಉದುರುತ್ತಿದ್ದುವು . ‘ಆಗಬೇಕಾದುದೇನೂ ಇಲ್ಲ, ತಾವೆಲ್ಲ ಬಂದು ಚಂದಗಾಣಿಸಿ ಗೊಟ್ಟರೆ ಸರಿ, ಎಂದು ಬಾಯಿಯುಪಚಾರಕ್ಕಾಗಿಯೆ ‘ಖಾವಂದ’ರೆಂದರೂ ‘ಅಮ್ಮನವರು’ (ಮುನ್ಸೀಫರ ಪತ್ನಿ) ಜನನೋಡಿ, ಪತಿಯ ಕಣ್ಣು ನೋಡಿ, ಏನಾದರೊಂದು ಆಡಿಬಿಡುತ್ತಿದ್ದರು. ಅದು ನಿರಾಯಾಸವಾಗಿ ನೆರವೇರಿಯೆ ಹೋಗುತ್ತಿತ್ತು.

ಚಂದ್ರಪುರದ ಅರುವತ್ತನಾಲ್ಕು ವಕೀಲರಲ್ಲಿ ಮೂರೂ ಮುಕ್ಕಾಲುವೀಸ ಈ ಮದುವೆ ಮುಗಿಯುವ ತನಕ ಬೇಕುಬೇಕೆಂದಾದರೂ ಕಕ್ಷಿಗಾರರಿಗೆ ತಡವಾಗಿಯೆ ಕಾಣಿಸಿಕೊಳ್ಳುತ್ತಿದ್ದರು, ‘ನೋಡಿ, ನಮ್ಮ ಮುನ್ಸೀಫರಲ್ಲಿ ಭಾರೀ ಗೌಜಿಯ ಮದುವೆಯೆದ್ದಿದೆ, ಅಲ್ಲಿ ನಾನಿಲ್ಲದೆ ಯಾವುದೂ ನಡೆಯುವುದಿಲ್ಲ; ಮುನ್ಸಿಫರು ಏಳಲಿಕ್ಕೆ ಬಿಡುವುದಿಲ್ಲ ನನ್ನನ್ನು ತನ್ಮಧ್ಯೆ ಮರ್ಯಾದೆಗಾಗಿ ಒಂದು ಹೊರೆಯ ಶಾಸ್ತ್ರವಾಗಬೇಕಾಗಿದೆ’ ಎಂದಿಷ್ಟಾದರೂ ವಕೀಲರ ಬಾಯಿಯಿಂದ ಬಾರದೆ ಹೋದರೆ ಕಕ್ಷಿಗಾರರು ಕೂಡಲೆ ತೀರ್ಪು ಬರೆದೇ ಬಿಡುತ್ತಿದ್ದರು. ಈ ವಕೀಲರ ಕಕ್ಷಿಯಲ್ಲಿ ಮುನ್ಸೀಫರು ಇಲ್ಲ’ ಎಂದು! ವಕೀಲರಿಗೆ ಇಷ್ಟು ಹೇಳುವುದರಿಂದ ಕಷ್ಟವೂ ಇಲ್ಲ; ನಷ್ಟವೂ ಇಲ್ಲ. ಬದಲಾಗಿ ಕಕ್ಷಿಗಾರರ ದೃಷ್ಟಿಯಲ್ಲಿ ಅವರ ಇಷ್ಟ ಸಿದ್ಧಿಗೊಳಿಸಲಾಪ ಪ್ರತಿಷ್ಠೆಯುಳ್ಳ ಭಾರೀಷ್ಟರ್ (ಭಾರಿ ಇಷ್ಟರು – ಮುನ್ಸಿಫರಿಗೆ) ಎಂದಾಗಿ ಹೋಗುತ್ತಿದ್ದರು. ಹಾಗಾಗುವುದು ಯಾರಿಗೆ ಬೇಡವೆನಿಸೀತು? ಮಾತ್ರವಲ್ಲ, ಹಿಂದಿನಿಂದಲೇ ಬರುತಿತ್ತು ಹೊರೆಗಳ ಸಾಲೇ ಸಾಲು! ಇನ್ನು ಮೂರು ತಿಂಗಳೊಳಗೆ ಚಂದ್ರಪುರಿಯ ಸುತ್ತು ವಳಯದ ಹಳ್ಳಿಪಳ್ಳಿಗಳಲ್ಲಿ ಕೆಂದಾಳಿಯ ಮಾತಿರಲಿ, ಕರಿದಾಳಿ ಸೀಯಾಳವಾಗಲಿ ಬಾಳೆಯ ಗೊನೆಯಾಗಲಿ ತದಿತರ ಫಲವಸ್ತುಗಳಾಗಲಿ ನೋಡಸಿಕ್ಕಿದರೆ ಅಲ್ಲಿ ಕೋರ್ಟಿನ ಮೆಟ್ಟಲೇರುವ ಧನಿಯು ಇಲ್ಲವೆಂದು ಅದೇ ನೇರಾಗಿ ಸಾರುತ್ತಿತ್ತು.

ಇನ್ನು ಕೋರ್ಟಿನ ನೌಕರರು ಮಣಿದು ಕುಣಿದು ಸೇವೆಯೊಪ್ಪಿಸುವುದು ದೊಡ್ಡ ವಿಷಯವೆ? ಅದರಲ್ಲಿಯೂ ರಾಮರಾಯನು ‘ಖಾವಂದ’ರಿಗೆ ಸ್ವಜಾತಿಯವನು, ಸ್ವಜಾತಿಯ ನೌಕರರು ಇಂತಹ ಸಮಯದಲ್ಲಿ ಸೊಂಟ ಗಟ್ಟದಿದ್ದರೆ! ರಾಮರಾಯನೆಂತೂ ‘ಅಮ್ಮನವರ’ ‘ಖಾಸಾ’ ಬಂಟ! ಇತರ ಸಮಯದಲ್ಲಿಯೂ ‘ಅಮ್ಮ ನವರ’ ಚಿಕ್ಕ ಪುಟ್ಟ ಕೆಲಸಗಳಿಗೆಲ್ಲ ಪೇಟೆಗೋಡಿ ಚೀಟಿನೋಡಿ ನುಡಿಹಿಡಿದು ಮಾಡಿಕೊಡುವ ‘ರಾಮು’ (ಅಮ್ಮನವರು ಪೋಷಕ ದೃಷ್ಟಿಯಲ್ಲಿಯೂ ವಯೋದೃಷ್ಟಿಯಲ್ಲಿಯೂ ರಾಮರಾಯನಿಗೆ ಮಾತುಃ ಶ್ರೀಸಮಾನರಾಗಿ ರುವುದರಿಂದ) ಈಗಂತೂ ಒಳಗೂ ಹೊರಗೂ ಎಲ್ಲೆಲ್ಲಿಯೂ ಬೇಕೇಬೇಕು. ‘ಅಮ್ಮನವರು’ ನಿಜವಾಗಿಯೂ ಅಮ್ಮನವರೇ (A fairly old dame!). ಕೋಮಲಕಾಯವಾಗಲಿ ಹೊಳಪಿನ ಹೊಸ ಪ್ರಾಯವಾಗಲಿ ಆವರಲ್ಲಿ ತೋರದು, ಆದರೂ ಹಾಗೆಂದರೆ ಅವರು ಒಪ್ಪುವ ಹಾಗಿದ್ದಿಲ್ಲ. ಅದುಕಾರಣ ಅವರು ಹಿರಿಹೆಂಗಳ ಸೇರುಗೆಯಲ್ಲಿ ಬೆರೆಯುತ್ತಿದ್ದಿಲ್ಲ. ಅವರ ಹಿಂದೆ ಮುಂದೆ ಸುಳಿಯುವುದಕ್ಕೆ ಬೇಕಾದುದು ಚೆಲುವಿನ ಚಲ್ಲೆಯರೇ. ಆದುದರಿಂದ ಅಮ್ಮನವರ ಅಪ್ಪಣೆಯಾಯಿತು – ‘ರಾಮು’ ಲಗ್ನದ ದಿನ ನಿನ್ನ ಹೆಂಡತಿಯು ನನ್ನ ಬಳಿಯಲ್ಲಿಯೇ ಇರಬೇಕು, ಎಲ್ಲಿಯಾದರೂ ಬಿಟ್ಟು ಬಂದೀಯೆ!’ ಇದನ್ನು ಕೇಳಿ ರಾಮರಾಯನಿಗೆ ಉಸಿರುಗಟ್ಟಿದಂತಾಯಿತು. ಅಮ್ಮನವರಿಗೆ ಅದು ತಿಳಿಯದೆ ಹೋಗಲಿಲ್ಲ. ಕೂಡಲೆ ಅವರು ‘ಖಾವಂದ’ ರನ್ನು ಉದ್ದೇಶಿಸಿ, ‘ನೋಡಿದಿರಾ? ರಾಮೂಗೆ ನನ್ನ ಹೇಳಿಕೆ ಸಾಕಾಗಿಲ್ಲವೋ ಏನೊ! ನಮ್ಮ ಮಹಿಳಾ ಸಭೆಯಲ್ಲಿ ಅಡ್ಡಾಡುವುದಕ್ಕೆ ಅಂತಹ ಚದುರೆಯರೇ ಬೇಕು. ಮೊನ್ನೆ ಕಾರಿನಲ್ಲಿ ಜವಳಿ ಸೇಟರ ಅಂಗಡಿಗೆ ಹೋಗುತ್ತಿದ್ದಾಗ ರಾಮೂನ ಬಿಡಾರ ತೋರಿಸಿದ ಶ್ಯಾಮು, ಒಳಗೆ ಇಣಿಕವಷ್ಟರಲ್ಲಿ ಬಾಗಿಲ ಬಳಿಗೆ ಬರುತ್ತಿದ್ದಳು ಇವನ ಹೆಂಡತಿ, ಎಷ್ಟು ಲಕ್ಷಣವಾಗಿದ್ದಾಳೆ! ಸುಳಿಬಾಳೆಯ ಒಲವು! ಎಳೆ ಕಳಿಲೆಯ ಹೊಳವು!’ ಎಂದರು . ರಾಮುಗೆ ಮತ್ತೊಮ್ಮೆ ಉಸಿರುಗಟ್ಟಿದಂತಾಗಿ ಮೋರೆ ಕೆಂಪೇರಿತು . ಅಷ್ಟರಲ್ಲಿ, ’ಡಿಡ್ ಯೌ ಹಿಯರ್, ರಾಮರಾವ್’ (ರಾಮರಾವ್, ಕೇಳಿದಿಯಾ?) ಎಂದು ಖಾವಂದರ ಮಾತೂ ಸೇರಿ ಬರಲು ಗಡಿಬಿಡಿಯಿಂದ ಸ್ವರಸರಿಗೈಯುತ್ತ ‘ಹೂಂ’ ಎನ್ನಲೇ ಬೇಕಾಯಿತು ರಾಮರಾಯ
* * * *

ಇಳಿಹೊತ್ತು. ಇನ್ನೂ ಒಂದೆರಡು ತಾಸು ಇರಬಹುದು, ರಾಮರಾಯನು ಕೋರ್ಟಿನಲ್ಲಿಯೋ ಖಾವಂದರ ಮನೆಯಲ್ಲಿಯೋ ಇನ್ನೆಲ್ಲಿಯೋ ಇದ್ದನು. ಹೊರಬಾಗಿಲೋರೆಮಾಡಿ ರಾಮಿಯು ಅಡುಗೆಗೆ ಒಲೆ ಹೊತ್ತಿಸುತ್ತಿದ್ದಳು. ಅಷ್ಟರಲ್ಲೊಂದು ಮೋಟರ್ ಕಾರ್ ಕೊಂಬು ಊದಿತು; ಬಂದು ನಿಂತಿತ್ತು, ತನ್ನ ಬಿಡಾರಕ್ಕೆ ಕಾರ್ ಬರುವುದೆಂಬ ಹಂಬಲಾದರೂ ರಾಮಿಗಿತ್ತೆ? ಅವಳು ಮತ್ತೂ ಮತ್ತೂ ಬೆಂಕಿ ಹತ್ತಿಲೊಪ್ಪದ ಹಸಿ ಕಟ್ಟಿಗೆಗೆ ಉಸ್ಸೆಂದು ಊದುತ್ತಿದ್ದಳು. ಆದರೆ ಯಾರೋ ಬಾಗಿಲು ತೆರೆದು ಕೊಂಡು ಒಳಗೆ ಬಂದಂತಾಯಿತು. ನೆಟ್ಟಗೆ ಅಡಿಗೆಯ ಕೋಣೆಗೇ ಬರುವಂತಿತ್ತು. ರಾಮಿಯು ಚಟ್ಟನೆದ್ದು ಬರುವಷ್ಟರಲ್ಲಿ ಅಲ್ಲಿಗೇ ಬಂದು ಬಿಟ್ಟಿದ್ದರು ಮುನ್ಸೀಫರ ಪತ್ನಿ ‘ಅಮ್ಮನವರು’! ದೊಡ್ಡವರು ಬಡವರು ಎಂದರೆ ಹೀಗುಂಟು ನೋಡಿ! ಬಡವರಿಗೆ ದೊಡ್ಡವರ ಸಂದರ್ಶನವಾಗಬೇಕಾದರೆ ತಲೆಬಾಗಿಲ (ಗೇಟನ) ದಳಿಯೊಳಗಿಂದ ಚೀಟಿಯು ಮುಂದೆ ಸಾಗಬೇಕು. ಆ ಮೇಲೆ ಅಪ್ಪಣೆ ದೊರೆತರೆ ಮುಂದುವರಿದು ದ್ವಾರ ಮಂಟಪ (ಪೊರ್‍ಟಿಕೊ) ದ ಮೆಟ್ಟಲಲ್ಲಿ ನಿಂತು ಕಾಯಬೇಕು, ಕಾದು ನಿಲ್ಲಬೇಕು, ಎಂದಿಗೆ ತೆರೆಬಾಗಿಲ ಪರದೆಯು ಸರಿದು ಅಮ್ಮನವರು ನಡುವೆ ಪ್ರತ್ಯಕ್ಷವಾಗುವರೋ ಎಂದು ತೆರೆಗಣ್ಣಿಂದಲೆ ನೋಡುತ್ತಿರಬೇಕು ಬಾಗಿಲ ಕಡೆಗೆ! ಆದರೆ ದೊಡ್ಡವರು ಬಡವರ ಮೆಟ್ಟಿಲೇರುವುದೇ ಪರಮಾನುಗ್ರಹ! ಅವರ ಆಗಮನಕ್ಕೆ ಕಾಲಾಕಾಲವೆಂಬ ನಿರ್ಬಂಧವೇನೂ ಇಲ್ಲ. ಅವರು ಬಂದುದೇ ಸುಮುಹೂರ್ತ! ಅವರ ನಡೆಯೆ ಚಂದ, ನುಡಿಯೂ ಚಂದ! ಅವರು ಇಳಿದಷ್ಟು ಬಡವರ ಹೃದಯದಲ್ಲಿ ಏರುವರು ಈ ರಹಸ್ಯವನ್ನು ತಿಳಿದ ಹಲವು ಸಿರಿವಂತರು ತಮ್ಮ ಸಂದರ್ಶನದಿಂದ ಬಡವರ ಮನೆಯನ್ನು ಬೆಳಗಿತೊಳಗಿ ಅವರ ನೆನಸುಕನಸಿನ ಇನಿಸಿನ ತಿನಿಸಾಗಿ ಬಾಳುವರು. ನಮ್ಮ ಅಮ್ಮನವರಿಗೂ ಈ ಮರ್ಮವು ತಿಳಿದೇ ಇತ್ತು. ಆದುದರಿಂದಲೆ ಅವರು ನಟ್ಟಿಗೆ ಅಡಿಗೆಯ ಕೋಣೆಗೇ ಇಳಿದುಬಿಟ್ಟುದು. ಆದರೆ ರಾಮಿಗೆ ಮಂಕುಬಡಿದಂತಾಯಿತ್ತು; ಅವಳು ಕಂಗೆಟ್ಟು ಮುಂಗಾಣದಾದಳು. ಅವಳನ್ನು ಹಾಗೆ ಬೆರಗುಗೊಳಿಸಿ ಸಲುಗೆ ತೋರಿಸಿ ಸೆರಗಿನಲ್ಲಿ ಹಾಕಿಕೊಳ್ಳಬೇಕೆಂದೇ ಅಮ್ಮನವರ ಯತ್ನ. ಅದು ಕಾರಣ ಗೊಂದಲಗೊಂಡ ರಾಮಿಯನ್ನು ಕಂಡಾಕ್ಷಣವೆ ಅವಳ ಕೈ ಹಿಡಿದಾಯಿತು, ಬೆನ್ನು ತಟ್ಟಿಯಾಯಿತು, ಅವಳ ಕುತ್ತಿಗೆಯ ಮೇಲೆ ಇವರ ಸೊಂಡಿಲುಗೈ ಮಂಡಿಸಿಯೂ ಆಯಿತು! ಆಕೆಯ ಗಲ್ಲವನ್ನು ಹಿಡಿದೆತ್ತುತ್ತ ‘ಏನೆ, ಏಕಿಷ್ಟು ಗಲಿಬಿಲಿ? ಇಷ್ಟು ಸಂಕೋಚ? ನಾನೂ ನಿನ್ನಂತೆ ಹೆಂಗುಸಲ್ಲವೆ? ದೇವಲೋಕದಿಂದಿಳಿದು ಬಂದವಳೆಂದು ಬಗೆದೆಯಾ?’ ಎಂದರು. ಪುನಃ ಅವಳ ಬೆನ್ನ ಮೇಲೆ ಕೈಯಾಡಿಸಿದರು. ಅವಳ ಮನಸ್ಸಿನ ಕಳವಳವನ್ನು ನೋಡಿ ಅವಳನ್ನೇ ಒತ್ತಿ ಆತುಕೊಂಡು ಗೊಳ್ಳೆಂದು ನಕ್ಕುಬಿಟ್ಟರು! ರಾಮಿಯ ಮೋರೆಯು ಒಮ್ಮೆ ಕೆಂಪೇರಿತು; ಮತ್ತೊಮ್ಮೆ ಬಿಳಿಪಿಗಿಳಿಯಿತು. ಒಳಗೆ ಮೊಳೆತ ಭಾವನೆಗೆ ತಕ್ಕಂತೆ ಕೆಂಪು, ಬಿಳಿಪು, ನಸುಬಿಳಿಗೆಂಪು, ಹೀಗೆ ಏನೇನೋ ವರ್ಣವ್ಯತ್ಯಾಸವನ್ನು ಹೊಂದುತ್ತ ಚಂದಚಂದವಾಗುತ್ತಿತ್ತು ಆ ವದನಾರವಿಂದ. ಅವಳ ಕಣ್ಣುಗಳು ಅರೆದೆರೆದು ಸುಳಿಸುಳಿದು ಸಿಕ್ಕೆಡೆಗೆ ಮಿಂಚು ಬೆಳಗು ಬೀಸುತ್ತಿದ್ದುವು. ಆ ಅನಿರೀಕ್ಷಿತ ಕೂಟದಚ್ಚರಿಯಲ್ಲಿ, ಆ ಅರೆ ಬಟ್ಟೆಯ ನಾಚಿಕೆಯಲ್ಲಿ, ಆ ಅರ್ಧಮರ್ಧ ಮುಸುಕಿನ ಮರೆಯಿಂದ ತೋಳಗಿ ಬೆಳಗುವ ಆ ಹುಟ್ಟು ಚೆಲುವಿನ ಸೊಬಗಿನಲ್ಲಿ, ರಾಮಿಯು ಚಲುವಿನ ಕಣಿಯಂತಿದ್ದಳು. ಅವಳು ತನ್ನ ಬಳಿಯಿಂದ ಸರಿಯಲೆತ್ನಿಸುವುದನ್ನೂ ಅವಳ ದೃಷ್ಟಿ ಹರಿದ ಕಡೆಯನ್ನೂ ಕಂಡು ಅಮ್ಮನವರು, ‘ಚಾಪೆಗೀಪ ಏನೂ ಬೇಡ, ನೀನು ನನ್ನ ಬಳಿ ಹೀಗೆಯೆ ನಿಂತರೆ ಎಲ್ಲ ಬಂದಂತಯೆ. ಅದಿರಲಿ, ನಾನು ಬಂದುದೇಕೆಂದು ತಿಳಿದೆಯಾ? ನಮ್ಮಲ್ಲಿಯ ಮದುವೆಗೆ ನಿನಗೆ ಅಕ್ಷತೆ ಕೊಡುವುದಕ್ಕೆ, ಇಗೋ’ ಎಂದು ಮಡಿಲಿಂದ ಬೆಳ್ಳಿಯ ಬಳ್ಳಿಯ ಕಿರಿಕರಡಿಗೆಯೊಂದನ್ನು ಹೊರತೆಗೆದು ಬದಿಯ ಬೊಟ್ಟನ್ನೊತ್ತಲು ಚಟ್ಟನೆ ಚಿಗಿಯಿತು ಅದರ ಮುಚ್ಚಳ! ಒಳಗೆ ಕುಂಕುಮಾಂಕಿತ ಮಂಗಲಾಕ್ಷತೆ! ‘ಹಿಡಿಯೇ ಅಕ್ಷತೆಯನ್ನ’ ಎಂದು ಆಕೆಯ ಕೈಯೆಳೆದು ಮುಟ್ಟಿಸಿಯಾಯಿತು. ಮಗಳೆ, ಇನ್ನೂ ನಾಲ್ಕು ಕಡೆ ಹೋಗಲಿಕ್ಕಿದೆ, ಹೊತ್ತಾಯಿತು! ಎನ್ನುತ್ತ ಹೊರ ಬಾಗಿಲ ಕಡೆಗೆ ಸರಿದೇ ಬಿಟ್ಟರು ಇಷ್ಟೆಲ್ಲ ನಡೆದುದು ಎರಡೇ ಎರಡು ನಿಮಿಷದೊಳಗೆ! ರಾಮಿಯು ಈ ಅಚ್ಚರಿಯಿಂದ ಎಚ್ಚೆತ್ತು ಬಾಗಿಲ ಬಳಿಗೋಡಿ ಅರೆಮರೆಯಲ್ಲಿ ನಿಂತು, ‘ಆಹಾ! ಹೀಗೆಯೆ ಹೋಗುವ ಹಾಗಾಯಿತಲ್ಲ!’ ಎನ್ನುವಷ್ಟರಲ್ಲಿ ಅಮ್ಮನವರು ಕಾರಿನಲ್ಲಿ ಕುಳಿತಾಯಿತು, ಕೆಲಬಲದ ಮನೆಯ ಹೆಂಗಸರೂ ಮಕ್ಕಳೂ ತಮ್ಮ ತಮ್ಮ ಬಾಗಿಲ ಮರೆಯಲ್ಲಿ ಕಿಟಕಿಯ ಎಡೆಯಲ್ಲಿ ನೋಡುತ್ತಿದ್ದಂತೆ, ಅವರೆಲ್ಲ ಕೇಳುವಂತೆ, ಅಮ್ಮನವರು, ‘ಹೀಗೆಯೇ ಎಂದರೇನೆ? ನಾನು ಬಂದುದಕ್ಕೆ ಸನ್ಮಾನವೆ? ಅದಕ್ಕೆ ನೀನು ಮದುವೆಗೆ ಬಂದುದೇ ಗೊತ್ತು! ಎಲ್ಲಾದರೂ ಬಾರದೆ ಕುಳಿತೀಯೆ!’ ಎನ್ನುತ್ತ ದೊಡ್ಡವರ ಸಲುಗೆಯ ಪುಸಿ ಮುನಿಸಿನ ನೋಟವನ್ನು ರಾಮಿಗೆ ಬೀರಿ ಡ್ರೈವರ ಶ್ಯಾಮಗೆ ಹುಬ್ಬಿನಿಂದಪ್ಪಣೆಗೊಡಲು, ಊದಿತು ಕೊಂಬು, ಹೊರಟಿತು ಕಾರು!

ರಾಮಿಯು ಬಾಗಿಲಿಕ್ಕೆ ಅಡಿಗೆಯ ಕೋಣೆಗೆ ಹೋದಳು. ಅಲ್ಲಿಂದೀಚೆಗೆ ಬಂದಳು. ತಿರುಗಿ ಆಚೆಗೆ, ತಿರುಗಿ ಈಚೆಗೆ ಅವಳಿಗೇನು ಮಾಡುವುದೆಂದು ತಿಳಿಯಲಿಲ್ಲ. ಅಷ್ಟು ತಳಮಳವಾಗಿಹೋಗಿತ್ತು ಅವಳ ಮನಸ್ಸು. ನೆರೆಹೊರೆಯವರೆಲ್ಲರೂ ನೋಡಿ ಮಚ್ಚರದ ಕಿಚ್ಚನಿಂದುರಿದು ಹುಚ್ಚೇಳುವಂತೆ ಮುನ್ಸೀಫರ ಪತ್ನಿಯು ತನ್ನೊಡನೆ ಅಷ್ಟೊಂದು ಸಲುಗೆಯಿಂದ ಮಾತಾಡಿದುದು ತಲೆಯಲ್ಲೇ ಸುಳಿಯುತ್ತಿತ್ತು. ಅವಳ ಕಣ್ಣೆದುರಿಗೆ ಕಟ್ಟಿದಂತಿದ್ದವು – ಅಮ್ಮ ನವರ ಹಮ್ಮರಿಯದ ನುಡಿ, ಬಗೆಗೊಳ್ಳುವ ಸಲುಗೆ, ಭೀತಿಗಳೆವ ಮಾತಿನ ರೀತಿ! ಅವರ ಇದೊಂದೇ ಸಂದರ್ಶನದಿಂದ ತಾನು ಸ್ತ್ರೀಲೋಕದಲ್ಲಿ ಒಮ್ಮೆಗೇ ಎಷ್ಟು ಮೇಲಕ್ಕಡರಿಬಿಟ್ಟೆನೆಂದು ರಾಮಿಯು ಹಿಗ್ಗಿ ಹೋದಳು. ಅಷ್ಟರಲ್ಲಿ ‘ರಾಮಕ್ಕಾ’ ಎಂದು ಹೊರಬಾಗಿಲ ಬಳಿಯಿಂದ ಕೂಗಿದಳು ಮಾತಿನ ವೆಂಕಮ್ಮ, ರಾಮಿಯು ಬಾಗಿಲು ತೆರೆಯುವ ಮೊದಲೇ ಮೆಟ್ಟಿಲ ಮೇಲಿಂದಲೆ ಅವಳು ಮಾತು ತೊಡಗಿದಳು. ‘ಮದ್ವೀಪ್ರಸ್ಥ ಶುಭ ಶೋಭನದಾಗೆ ಅರಸಿನ ಕುಂಕುಮ, ಹೂವುಗೀವು, ಗಂಧಕಸ್ತೂರಿ, ತಾಂಬೂಲ ಕೊಡೋಕೆ, ಮಾನಮರ್ಯಾದೆ ಮಾಡೋಕೆ, ನಿನ್ನಂಥ ಹುಡುಗೇರು ಇದ್ದರೇನೇ ಚಪ್ಪರ ಬೆಳಗೀತು! ಎಲ್ಲೋರು ಹೆಂಗಳೇನು? ಯಾಕಾದಾರು ಮಾರೀಗೊಂಬೆಗಳು! ನಿನ್ನಂಥಾ ಪುತ್ಲಿಗೊಂಬೆ ಎಲ್ಲಿ ಸಿಕ್ಕೀತು? ಸುಮ್ಮಗೆ ಬಂದಾರೇನು ಮುನ್ಸೂಪ್ರ ಹೆಣ್ತಿ ಇಲ್ಲಿತನಕಾವು? ಇಲ್ಲಿ ಕಾರು ನಿಂತಮ್ಯಾಲೆ ಇನ್ನು ತಮ್ಮ ಮನೀಗೆ ಬಾರದಿರೋರೆ ಅಂತ ತಯಾರಮಾಡ್ಯಾರ ಆ ಕಂಕಮ್ಮ – ಬಣ್ಣದ ಚಾಪೆ ಹಾಸಿ, ಲೋಡುಗೀಡು ಇಟ್ಟು, ಬೆಳ್ಳಿ ಹರಿವಾಣದೊಳಗೆ ತಾಂಬೂಲ, ಇನ್ನು ತಿಂಡಿಗಿಂಡಿ! ಬೋಡ್ಡ್ ಪ್ರಜೇಂಟ್ರು ಧನಶೆಟ್ರ ಹೆಂಣ್ತಿ ಕಂಕಮ್ಮನ ಠೀವಿನ ಮುನ್ಸುಪ್ರ ಹೆಣ್ತಿಗೆ ಕಾಣ್ಸೋಣ ಅಂತ! ಆದ್ರೆ ಮುನ್ಸೂಪ್ರ ಹೆಂಣ್ತಿ ಆ ಕಡೆ ಮೊಗ ತಿರುಗಿಸಬೇಕೆ? ಸರಸರನೆ ಮುಂದೇ ಸರೀತು ಕಾರ್, ಆಗ ಆಯಿತು ಕಂಕಮ್ಮನ ಮೋರೆ – ಉಪ್ಪೀಲಿಟ್ಟ ಮಾವಿನ ಮಿಡಿ’! ಆ ಬೀದಿಯ ಮೊದಲಲ್ಲಿ ಮುನ್ಸೀಫರ ಮನೆಯ ಕಾರ್ ತಲೆದೋರಿದಾಗ ವೆಂಕಮ್ಮನಿದ್ದಳು ಕನಕಮ್ಮನ ಮನೆಯ ಜಗುಲಿಯಲ್ಲಿ. ಅನಂತರ ಅದು ಆ ಬೀದಿಯ ಕೊನೆಯಲ್ಲಿ ಕಣ್ಮರೆಯಾಗುವ ವರೆಗೂ ಅದರ ಮೇಲಿಟ್ಟ ಕಣ್ಣನ್ನು ಅವಳು ತೆಗೆಯಲಿಲ್ಲ. ಅದು ಕಾರಣ ಅದು ಮತ್ತೆಲ್ಲಿಯೂ ನಿಲ್ಲಲಿಲ್ಲವೆಂಬುದು ಅವಳಿಗೆ ನಿಶ್ಚಯ, ಆದರೂ ವೆಂಕಮ್ಮನು ಆ ಬೀದಿಯಲ್ಲಿ ದೊಡ್ಡವರೆಂಬ ದುಡ್ಡಿನ ಹೆಮ್ಮೆಯ ಏಳೆಂಟು ಹೆಮ್ಮಕ್ಕಳ ಮನೆಬಾಗಿಲಿಗೆ ಹೋಗಿ, ‘ಏನಮ್ಮಾ, ಮುನ್ಸೂಪರ ಹೆಂಣ್ತಿ ಅಕ್ಷತೆ ಕೊಡೋಕೆ ಬಂದರೇನು ನಿಮ್ಮಲ್ಲಿಗೆ? ಅವರ ಕಾರು ನಿಮ್ಮ ಮನೀಕಡಿಯಿಂದಲೇ ಕೆಳಗೆ ಹೋತು. ನಮ್ಮ ರಾಮೂ ಹೆಣ್ತಿಗೆ ಬಹಳ ಒತ್ತಿ ಹೇಳಿರೂ ಅಂದ ಮೇಲೆ ತಮ್ಮಂಥವರಿಗೆ ಅಕ್ಷತೆ ಕೊಡೋದು ಮಾತ್ರವೆ? ನಾಡದು ಕಾರೂನೂ ಕಳ್ಸ್ಯಾರು ನಿಮ್ನಾ ಕರೆದೊಯ್ಯೋಕೆ!’ ಎಂದು ತನ್ನ ಅಧಿಕಪ್ರಸಂಗದಿಂದ ಅವರನ್ನು ಮುಚ್ಚು ಮರೆಯಿಲ್ಲದೆ ಚುಚ್ಚುತ್ತ ನಡೆದಳು.

ಅಂದು ರಾತ್ರಿ ರಾಮರಾಯನು ಮನೆಗೆ ಬಂದಾಗ ತುಸು ತಡವಾಗಿತ್ತು. ಮದುವೆಯ ಮುಂದಿದ್ದುದು ಮರುದಿನವೊಂದೆ. ಅಕ್ಷತೆ ಕೊಡಲಿಕ್ಕೆ ಹೋಗಿದ್ದ ಅಮ್ಮನವರು ಹಿಂತಿರುಗಿ ಚಪ್ಪರದೊಳಗೆ ಕಾಲಿಟ್ಟವರೆ ಅಲ್ಲಿದ್ದ ರಾಮರಾಯನನ್ನು ಕಂಡು ರಾಮೂ, ನಿನ್ನ ಮನೆನುಗ್ಗಿ ಬಂದೆ!’ ಎಂದಿದ್ದರು . ‘ಶ್ಯಾಮುನ ಕೈಗೆ ಬೇನೆ ಬಡಿಯಲಿ’ ಎಂದು ತನ್ನೊಳಗೇ ಹೇಳಿದ್ದ ರಾಮರಾಯ. ಇನ್ನು ತಪ್ಪಿಸಿಕೊಳ್ಳಲಾಗುವುದಿಲ್ಲವೆಂದೂ ಆಗಲೆ ನಿಟ್ಟುಸಿರುಬಿಟ್ಟಿದ್ದ. ಗಂಡನಿಗೆ ಉಣಬಡಿಸುತ್ತ ರಾಮಿಯು ‘ಅಮ್ಮನವರ’ ಸಂದರ್ಶನದ ಪರಿಯನ್ನು ತನ್ನ ಟೀಕೆ ಟಿಪ್ಪಣಿಗಳೊಡನೆ ಹೇಳಿ ಮುಗಿಸಿದಳು. ರಾಮಿಗೆ ಊಟವೇ ಸೇರದು, ಇಬ್ಬರಿಗೂ ಯೋಚನೆ – ರಾಮಿ ಮದುವೆಗೆ ಹೋಗಬೇಕೋ ಬೇಡವೋ ಎಂಬುದು ವಿಷಯವಲ್ಲ; ಹೇಗೆ ಹೋಗುವುದು ಎಂಬುದೇ. ಉಡುವುದಕ್ಕೊಂದು ಸಜ್ಜಿನ ಸೀರೆ ತೊಡುವುದಕ್ಕೊಂದು ಅಚ್ಚುಗಟ್ಟಿನ ರವಕೆ, ಇವೆರಡಾದರೂ ಇರಬೇಡವೆ? ಸೀರೆ ರವಕೆಗಳನ್ನು ಎರವಾಗಿ ಕೇಳುವುದೆಂತು, ತರುವುದೆಂತು!

ರಾಮರಾಯನು ಸೇವಿಂಗ್ಸ್ ಬ್ಯಾಂಕಿನಲ್ಲಿ ತೆರೆದ ಲೆಕ್ಕವು ಸುಮಾರು ಆರವತ್ತೈದು ರೂಪಾಯಿಗೆ ಬಂದಿತ್ತು. ಬೆಳಗಾದರೆ ಅದು ಬರಿದಾಗದೆ ಗತ್ಯಂತರವಿಲ್ಲವೆಂದು ನಿರ್ಧಾರವಾಯಿತು. ಅದರಿಂದ ನಸು ಮೇಘವರ್ಣದ ಜರಿಯಂಚಿನ ಗಚ್ಚು ಸೆರಗಿನ ಕಾಶೀರೇಶ್ಮೆ ಶೀರೆಗಾಗಿ ತಕ್ಕಷ್ಟು ವಿನಿಯೋಗಿಸಿರಿ, ಉಳಿದುದರಿಂದ ಅದಕ್ಕೊಪ್ಪುವ ತೆರೆಕೊರಳಿನ (ಒಪೆನ್ ನೆಕ್) ರೇಶ್ಮೆಯ ರವಕೆ, ತರೆಕೊರಳ ಬಳಿಗೆ ಮಿರುಗುವ ಜರಿ, ಕೈಗೆ ಲೇಸ್! ಮತ್ತೇನಾದರೂ ಉಳಿದರೆ ನಡುವೆ ಹರಳ ಕಮಲಿನ ರೋಲ್ಡ್ ಗೋಲ್ಡ್ ಬ್ರೂಚ್, ಇಷ್ಟಿರಲಿ’ ಎಂದಳು ರಾಮಿ. ಮತ್ತು.. ಮತ್ತು.. ಕೋಪಿಸ ಬೇಡಿ…. ಇನ್ನೇನಾದರೂ ಉಳಿದರೆ, ಮಾದರಿಸೀಸೆಗಳಾದರೂ ಸಾಕು, ಒಂದಿಷ್ಟು ಹೆರೋಯಿಲ್, ಒಂದಿಷ್ಟು ಸೆಂಟ್ಸ್, ಒಂದಿಷ್ಟು ಪೌಡರ್! ಮತ್ತು…. ಮತ್ತು …. ವೆಸ್ಲಿನ್. ಹಾ! ಮರೆತೆ, ಸಾಧ್ಯವಿದ್ದರೆ, ಒಂದು ಚಲೋ ಸಿಲ್ಕ್ ಟವೆಲ್!’ ಎಂದು ಅಳುಕುತ್ತ ಅಳುಕುತ್ತ ಪತಿಯ ಮುಖವನ್ನ ನೋಡಿ ನೋಡಿ ಕೂಡಿಸಿದಳು. ‘ಸರಿ, ಆಯಿತೆ?’ ಎಂದನು ರಾಮರಾಯ. ‘ಆದಂತೆಯೆ, ಇನ್ನೇನು? ಕೈಗೆ ನನ್ನದೆ ನಾಲ್ಕು ಬಳೆಗಳಿವೆ, ಸಾಕು! ಕೊರಳಿಗೆ ಗೋಧಿಮಣಿ ಸರವಿದೆ, ಕೆಳಗೆ ತರೆಕೊರಳ ರವಕೆಯ ಜರಿ ಬರುತ್ತದೆ, ಸಾಕು! ಬೆರಳಿಗೆ ನಿಮ್ಮ ಉಂಗುರವಿದೆ; ಸಾಕು! ಕಣಗಾಲನ್ನಪ್ಪುಗೈಯುತ್ತ ಅಂಕುಡೊಂಕಾಗಿ ಬಿದ್ದೇಳುವ ಕಾಲಂದುಗೆ ಇದೆ, ಸಾಕು! ಸಾಕು! ಯಾವುದೂ ಹೆಚ್ಚಿಗಿದ್ದರೆ ಸಜ್ಜಾಗುವುದಿಲ್ಲ. ಆದರೆ ಈ ಕೆಂಪಿನ ಬೆಂಡೋಲೆಯ ಬದಲಾಗಿ ವಜ್ರದ ಕಮಲು ದೊರಕಿದ್ದರೆ, ಮೂಗಿಗೊಂದು ಚಿಕ್ಕ ವಜ್ರದ ಬೊಟ್ಟು ಇದ್ದಿದ್ದರೆ!… ‘ನೀನು ಚಲುವಿನ ರಾಣಿಯೇ ಆಗಿಬಿಡುವೆ! ಎಂದು ಮಾತು ಮುಗಿಸಿದನು ರಾಮರಾಯ. ‘ಹಾಗೆ ಬೇಕೆಂದಿದ್ದರೂ ಇದೇ ಬೀದಿಯ ತುದಿಯಲ್ಲಿ ತವರುಮನೆಯಲ್ಲಿ ಹೆತ್ತು ಮಲಗಿರುವಳು ನಿನ್ನ ಶಾಲೆಯ ಅಚ್ಚು ಮೆಚ್ಚಿನ ಗೆಳತಿ, ಮದ್ರಾಸಿನ ಡಾಕ್ಟರರ ಹೆಂಡತಿ, ಎನ್ನುತ್ತಿದ್ದೆಯಲ್ಲ! ಕೇಳಿದರೆ ಒಂದು ಗಳಿಗೆಯ ಮಾತಿಗೆ ಕೊಡಲೊಲ್ಲಳೇನು?’ ಎಂದು ರಾಮರಾಯನು ಸೂಚಿಸಲು ಕಮಲವರಳಿತು ರಾಮಿಯ ಮುಖದಲ್ಲಿ! ಅದಕ್ಕೆ ಮರುದಿನ ಕಳೆಯೇರಿತ್ತು, ಅದ ರಾಚೆಯ ದಿನ ಅದು ಕಳಕಳಿಸಿ ಕಂಡವರನ್ನೆಲ್ಲ ನಗಿಸಿತು.
* * * *

ಅರಳಿದ ಹೂವು ನಗುವುದು, ನಗಿಸುವುದು, ಘಮಘಮಿಸಿ ಸಮೀಪಿಸಿದವರನ್ನೆಲ್ಲ ಆನಂದಗೊಳಿಸುವುದು, ಆದರೆ ಹಾಗೆಯೆ ಅರಳಿಯೆ ಪರಿಮಳಿಸಿಯೆ ಆನಂದಬೀರಿಯೆ ಎಂದೆಂದೂ ಇರಲಾಗುವುದೆ? ಅದರದು ಗಳಿಗೆಯ ಬಾಳು. ಆ ಮೇಲೆ ಅದು ಸೊರಗಿ ಹೊರಳುವುದು ದೂಳಲ್ಲಿ! ರಾಮಿಯ ಆರಳಿದ ಮುಖದ ಪಾಡೂ ಹಾಗೆಯೇ ಆಗಿಹೋಯಿತು. ನೋಡಿರಿ, ಮೊನ್ನೆ ತಾನೆ ಮದುವೆಗೆ ಹೊರಡುವ ಸನ್ನಾಹದಲ್ಲಿ ಅರೆಬಿರಿದ ಅರಳಂತಿದ್ದ ಅವಳ ಮುಗುಳು ಮುಖದ ಸೊಬಗಾಗಲಿ, ನಿನ್ನೆ ಮದುವೆಯ ಚಪ್ಪರದಲ್ಲಿ ಅರಳರಳಿ ಎಲ್ಲರ ಮನಸ್ಸನ್ನೂ ಮರುಳುಗೊಳಿಸಿದ್ದ ಮಲ್ಲಿಗೆಯರಳಿನಂಥ ಆವಳ ಸಿರಿಮೋರೆಯ ಬೆಡಗಾಗಲಿ, ಇಂದು ಅರುಣೋದಯಕ್ಕೆ ಉಳಿದಿದೆಯೆ? ಬೆಳಗಾಗುತ್ತ ಬರುತ್ತಿದೆಯಷ್ಟೆ, ಅಷ್ಟರಲ್ಲಿ ರಾಮಿಯು ಹೊರಬಾಗಿಲ ಬಳಿಯಲ್ಲಿ ನಿಂತಿರುವಳು; ಮುಖವು ಬಾಡಿ ಮುದುಡಿ ಹೋಗಿದೆ! ಕೈಯ್ಯಲ್ಲಿದೆ ಕಿರಿಕರಡಿಗೆ. ಬೆಟ್ಟಂದ ಅದರ ಬೊಟ್ಟೊಂದನ್ನು ಆಗಾಗ ಒತ್ತುವಳು, ಚಟ್ಟನೆ ಮುಚ್ಚಳವು ಪುಟನೆಗೆವುದು. ಆಗ ಬೆಟ್ಟವೇ ಕಳಚಿಬಿದ್ದಂತಾಗುವುದು ಅವಳ ತಲೆಯ ಮೇಲೆ. ಕಾರಣ, ಅದರೊಳಗಿಂದ ಮಿಂಚು ಬೆಳಗನ್ನು ಹೊರಸೂಸುತ್ತಿದ್ದುದು ಒಂದೇ ಒಂದು ಕಮಲು ಡಾಕ್ಟರರ ಪತ್ನಿಯಿಂದ ಎರವಾಗಿ ತಂದಿದ್ದ ಎರಡು ಕವಲುಗಳಲ್ಲಿ ಈಗಿರುವುದು ಒಂದೇ ಒಂದು! ರಾಮಿಯು ನಿಂತಿದ್ದಂತೆ ಅವಳ ಹೃದಯವು ಮೊರೆಯಿಡುತ್ತಿತ್ತು – ‘ದೇವರೇ ಸಲಹು!’ ಎಂದು.

ನಿನ್ನೆ ಮದುವೆಯ ಚಪ್ಪರದಿಂದ ರಾಮರಾಮಿಯರು ತಮ್ಮ ಮನೆಗೆ ಹೊರಡುವಷ್ಟರಲ್ಲಿ ಕತ್ತಲಾಗಿತ್ತು. ಚಪ್ಪರವು ಬರಿದಾಗುತ್ತ ಬಂದಿತ್ತು. ಆದರೂ ಮುನ್ಸೀಫರ ಕಡೆಯಿಂದ ಮನೆಗೆ ಕೊಂಡುಬಿಡುವ ಕೊನೆಯ ಆತಿಥ್ಯ ಸತ್ಕಾರವಿನ್ನಾರಿಗಾದರೂ ಆಗಲಿಕ್ಕಿದೆಯೋ ಏನೋ ಎಂದು ಕಾದು ನಿಂತಿತ್ತು ‘ವಿಮಾನ್ ಎಂಡ್ ಕೋ’ ರವರ ಅಲಂಕರಿಸಿದ ಕಾರುಗಳಲ್ಲೊಂದು. ರಾಮರಾಮಿಯರು ಅದನ್ನೇರಿದರು. ರಾಮಿಗೆ ಅಂದಿನ ಆನಂದದ ಅಮಲು ಹದಮೀರಿ ತಲೆಗೇರಿತ್ತು. ‘ಹಿಂದಿನಾಸನದಲ್ಲಿ ನಾವು ಸತಿಪತಿಗಳು; ಮುಂದಿನದರಲ್ಲಿ ಡ್ರೈವರ್; ಪತಿಪತ್ನಿಯರು ಗಾಳಿಗಲೆದಾಡುವ ರೀತಿಯೇ ಇದು!’ ಎಂದು ರಾಮಿಯ ಮದವೇರಿದ ತಲೆಯಲ್ಲಿ ಮಿಂಚಿತು. ಆಗವಳು ಮೇಲೆ ನೋಡಿದಳು, ಆಚೆ ನೋಡಿದಳು, ಈಚೆ ನೋಡಿದಳು, ತಮ್ಮ ಸುತ್ತು ಮುತ್ತು ನೋಡಿದಳು – ಮಲ್ಲಿಗೆಯ ಮಾಲೆಗಳಿಂದೊಪ್ಪಿ ಘಮಘಮಿಸುವ ಕಾರು! ಮೇಲಿರುವನು ನಗುತ್ತ ಜಗವನ್ನೇ ನಗಿಸುವ ಚಂದಿರ! ಸುತ್ತಲೂ ಮಂದಮಂದವಾಗಿ ಬೀಸುವ ತಂಗಾಳಿ! ಮದುವೆಯ ಚಪ್ಪರದಲ್ಲಿ ಬೇಗೆ ಹಿಡಿದು ಬೆಂದು ಬೆವರಿಂದ ಮಿಂದ ರಾಮಿಯ ಮೈಗೆ ಬೀಸಿತು ತಂಪಾಗಿ ಇಂಪಾಗಿ ಆ ಕಂಪುಗೊಂಡ ಸಂಜೆಯ ತಂಗಾಳಿ! ಗಿಡಬಳ್ಳಿಗಳು ನಗುತ್ತಿವೆ, ಮನೆಮರಗಳು ನಗುತ್ತಿವೆ, ಎಲ್ಲವೂ ನಗುತ್ತಿವೆ ತೊಳಗಿ ಬೆಳಗುವ ಆ ಬೆಳ್ದಿಂಗಳಲ್ಲಿ! ಹೀಗೆ ಎಲ್ಲಿ ಕಣ್ಣೆಸೆದರೂ ಅಲ್ಲಿ ಆನಂದೋದ್ರೇಕಗೊಳಿಸುವ ಸನ್ನಿವೇಶಗಳೇ, ರಾಮಿಯು ಪೂರ್ಣ ಮತ್ತಳಾಗಿಯೇ ಹೋದಳು, ತಮ್ಮದೇ ಆ ಕಾರು ಎಂದು ಬಗೆದಳೋ ಏನೋ, ಅಂತೂ ಡ್ರೈವರಗೆ ಹೇಳಿಯೇ ಬಿಟ್ಟಳು – ಬೀದಿ ಬೀದಿ ಹಾದು ಹೋಗುವುದು ಬೇಡ ತುಸು ಸುತ್ತಾದರೂ ವ್ಯಥೆಯಿಲ್ಲ, ಗಾಳಿಗೋಪುರದ ಹಾದಿಯಿಂದ ಕಾರು ಹೋಗಲಿ!- ಎಂದು. ಸರಿ, ಕಾರು ಉರುಳಿತು; ಗಾಳಿಯು ತನ್ನಾಟವನ್ನು ತೊಡಗಿತು, ರಾಮಿಯ ಸೆರಗಿಂದೊಮ್ಮೆ ರಾಮ ರಾಯನ ಕೆನ್ನೆಗೊಂದೇಟು! ಮತ್ತೊಮ್ಮೆ ಅದರಿಂದಲೆ ಅವನ ಕೊರಳಿಗೆ ಮಾಲೆ! ಸೆರಗಿನ ಕರೆಯೆಳೆಗಳಿಂದ ರಾಮಿಯ ಕಮಲಕ್ಕೆ ಸಿಕ್ಕಿನ ಗಂಟು! ಅನಂತರ ಹಾಗೆಯೆ ರಾಮರಾಯನ ಕಿವಿಯೊಂಟಿಗೆ! ಇವರದನ್ನು ಬಿಡಿಸಿ ಕೊಂಡು ನಗುವಾಗ ತಾನೂ ಅವರೊಡನೆ ಹಹ ಹಾ! ಎನ್ನುವಂತೆ ರಾಮಿಯ ಸೆರಗನ್ನು ಹಿಡಿದು ಹಿಂದೆಳೆದು ಧ್ವನಿ ಹುಟ್ಟುವಂತೆ ಕೊಡಹುತಿತ್ತು ಆ ತುಂಟಗಾಳಿ! ರಾಮಿಯು ಅದಾವ ವಿಲಾಸ ವೈಭವದ ಸುಖಾನು ಭವಕ್ಕಾಗಿ ಅನುದಿನವೂ ಬಾಯಾರಿ ಹಾದೊರೆಯುತ್ತಿದ್ದಳೋ ಅದನ್ನಿಂದು ಮನದಣಿಯೆ ಕುಡಿದು ಮೈದಣಿಯೆ ಪಡೆದು ಮದವೇರಿ ತನ್ನೊಳಗಂದು ಕೊಂಡಳು. ಇಂದಿನ ದಿನ ನನ್ನದು! ಎಂದು.

ರಾಮರಾಮಿಯರು ಕಾರಿನಿಂದ ಇಳಿದು ಮನೆಹೊಕ್ಕರು. ರಾಮಿಯು ಆಡಿಗೆಯ ಕೋಣೆಗೆ ಹೋಗಿ ದೀಪ ಹಚ್ಚಿಕೊಂಡು ಈಚೆಯ ಕೋಣೆಗೆ ಬಂದಳು, ದೀಪಕ್ಕಾಗಿ ಕಾಯುತ್ತ ಅಲ್ಲಿ ನಿಂತಿದ್ದ ತನ್ನ ಪತಿಯನ್ನು ಕಂಡು,- “ಆರ್ಯಪುತ್ರಾ, ಏನಪ್ಪಣೆ?” ಎಂದು ರಂಗಭೂಮಿಯ ಭೂಮಿಕೆಯನ್ನು ವಹಿಸುವಷ್ಟರಲ್ಲಿಯೇ ಆತನು ಗಾಬರಿಗೊಂಡು ಚೀರಿಬಿಟ್ಟನು… ಅಯ್ಯೋ , ನಿನ್ನ ಕಮಲು ಎಲ್ಲಿ? ಎರವಿನ ಕಮಲು!’ ತಟ್ಟನೇ ಕಿವಿಗೆ ಹಾರಿದವು ರಾಮಿಯ ಕೈಗಳು, ಹೌದು, ಎಡಗಿವಿಯಲ್ಲಿ ಕಮಲು ಇರಲಿಲ್ಲ! ಆಗ ಅವರಿಬ್ಬರ ಮನಸ್ಸಿನಲ್ಲಿ ಒಮ್ಮೆಗೇ ಹೊಳೆಯಿತು. ಆ ಗಾಳಿಯ ಉಪಟಳದಿಂದ ಸೀರೆಯ ಕರೆಯು ಕಮಲಕ್ಕೆ ಸಿಲುಕಿಕೊಂಡುದು; ಅದನ್ನೆಳೆದು ಬಿಡಿಸಿದುದು; ಆಗ ಅದರ ತಿರುಪು ಸಡಿಲಾಗಿ ಮತ್ತೆಲ್ಲೋ ಅದು ಬಿದ್ದು ಹೋಗಿರಬಹುದೇ? ಅಲ್ಲಿಂದಲೆ ರಾಮರಾಯನು ನೆಟ್ಟಗೋಡಿದನು ವಿಮಾನ್ ಎಂಡ್ ಕೋರವರ ಗ್ಯಾರೇಜಿಗೆ, ಆ ಡ್ರ್‍ಐವರನನ್ನು ಕರೆದು – ನಾವು ಕುಳಿತ್ತಿದ್ದಲ್ಲಿ ಏನಾದರೂ ಬಿದ್ದಿತೇ?’ ಎಂದ. ‘ಗ್ಯಾರೇಜಿನೊಳಗೆ ಕಾರು ಉರುಳಿದರೆ ಸಾಕೆಂದಿದ್ದೆ ನಾನು ಸೋತುಸುಣ್ಣವಾಗಿ ಹೋಗಿ ರಟ್ಟೆಗಳರಡೂ ಸಿಡಿಯತೊಡಗಿವೆ. ನಾಳೆ ನೋಡಿ ಹೇಳಿದರೆ ಸಾಕೆಂದಿದ್ದರೆ ಹಾಗೆ, ಇಲ್ಲವಾದರೆ ಈಗಲೇ ಹೋಗಿ ನೋಡಿಕೊಂಡು ಬನ್ನಿ’ ಎಂದು ಡ್ರೈವರನು ಗ್ಯಾರೇಜಿನ ಬೀಗದ ಕೈಯನ್ನೂ ಮಿಂಚುಬೆಳಕನ್ನೂ ಕೊಟ್ಟನು.

ಅಲ್ಲೇನು ಸಿಕ್ಕಿತು? ರಾಮರಾಯನು ಮನೆಗೆ ಹಿಂತಿರುಗಿ ಬಂದು ಉಸ್ಸೆಂದು ನಿಟ್ಟಿಸಿರುಗರೆದು ತಲೆಗೆ ಕೈಗೊಟ್ಟು ಕುಳಿತುಬಿಟ್ಟನು. ಎಲ್ಲಾದರೂ ಹಾದಿಯಲ್ಲಿ ಬಿದ್ದಿರಬಹುದೆ? ಎಂಬೊಂದಾಶೆಯ ತಂತುವನ್ನು ನಿರಾಶೆಯಾಗಲೊಪ್ಪದ ಮನಸ್ಸು ಹೊಸೆಯಿತು. ತನ್ನ ಮನೆಯಿಂದ ಗಾಳಿಗೋಪುರದ ಮಾರ್ಗವಾಗಿ ಮುನ್ಸೀಫರ ಮನೆಯವರೆಗೆ, ಅಲ್ಲಿಂದ ಅದೇ ಹಾದಿಯಾಗಿ ಹಿಂದಕ್ಕೆ ಮನೆಗೆ ಹೀಗೆ ಎರಡು ಸಲ ಸುತ್ತಿದನು ರಾಮರಾಯ, ಅಷ್ಟರಲ್ಲಿ ಅರ್ಧರಾತ್ರಿ ಮೀರಿತು; ತಿಂಗಳು ಕಂತಿತು. ಇಬ್ಬರಿಗೂ ನಿದ್ದೆಯಿಲ್ಲದೆಯೇ ಬೆಳಕು ಹರಿಯಿತು. ಮುಂಜಾನೆ ಒಂದು ಸುತ್ತು ಹುಡುಕಿ ಬರುವೆನೆಂದು ರಾಮರಾಯನು ಹೋಗಿದ್ದನು. ಅದೊಂದು ಆಶಾತಂತುವನ್ನು ಹೊಸೆಯುತ್ತ “ದೇವರೇ ತೋರಿಸಿಕೊಡು!” ಎಂದು ಮೊರೆಯಿಡುತ್ತ ಬಾಗಿಲ ಬಳಿ ನಿಂತಿದ್ದಳು ರಾಮಿ.

ರಾಮರಾಯನು ದೂರದಲ್ಲಿ ಬರುವ ಪರಿಯನ್ನು ಕಂಡೇ ರಾಮಿಯ ಆ ಆಶಾಪಾಶವೂ ಹರಿದು ಚೂರಾಯಿತು. ಅವನು ಒಳಗೆ ಬಂದು ಉಸ್ಸೆಂದು ಕುಳಿತಾಗ ಅವಳ ಎದೆಯು ಬಿರಿದು ಬಿದ್ದಂತಾಯಿತ್ತು. ಇನ್ನೇನು ಗತಿ? ರಾಮರಾಯನು ಕರಡಿಗೆಯನ್ನು ಪರೀಕ್ಷಿಸಿದ ಅದರಲ್ಲಿ ಮದ್ರಾಸಿನದೊಂದು ಕಂಪೆನಿಯ ಹೆಸರು ಇತ್ತು. ಅಲ್ಲಿಯ ದಳ್ಳಾಳಿಯೊಬ್ಬನೂ ಆ ಸಮಯದಲ್ಲಿ ಚಂದ್ರಪುರದಲ್ಲಿ ಬಂದಿಳಿದಿದ್ದನು. ರಾಮರಾಯನು ಆತನನ್ನು ಕಂಡು ಉಳಿದಿದ್ದೊಂದು ಕಮಲನ್ನೂ ಕರಡಿಗೆಯನ್ನೂ ಅವನಿಗೆ ತೋರಿಸಿ ಅಂತಹದೇ ಮತ್ತೊಂದು ವಜ್ರದ ಕಮಲನ್ನು ತರಿಸಿಕೊಡಬೇಕೆಂದನು. ಎಲ್ಲವನ್ನೂ ರಹಸ್ಯವಾಗಿಟ್ಟು ತನ್ನ ಮಾನ ಕಾಪಾಡಿಕೊಡಬೇಕೆಂದೂ ಬಡವನನ್ನು ನಡೆಸಿಕೊಡಬೇಕೆಂದೂ ಅಂಗಲಾಚಿ ಬೇಡಿಕೊಂಡನು ರಾಮರಾಯ. ದಳ್ಳಾಳಿಯು ಬಹಳ ಸಹಾನುಭೂತಿ ತೋರಿಸಿದ, ಕನಿಕರಗೊಂಡು ಮಾತಾಡಿದ, ಮುಂಗಾಣಿಕೆಕೊಳ್ಳದೆಯೆ ತಂತಿಕೊಟ್ಟು ಮೂರೇದಿವಸದಲ್ಲಿ ತರಿಸಿ ಕೊಡುವೆನೆಂದ. ಹೆಚ್ಚೇನು? ತನ್ನ ದಳ್ಳಾಳಿತನದ ಲಾಭಾಂಶವನ್ನೂ ಬಿಟ್ಟು ಕೊಡಲು ಸಿದ್ದನಾದ! ಬೇರೆ ಯಾರೇ ಆಗಲಿ ಕಡಿಮೆಯೆಂದರೆ ನಾಲ್ಕು ನೂರು ರೂಪಾಯಿಗಳನ್ನು ಮೊದಲು ಮಡಗಬೇಕಿತ್ತು. ಆದರೆ ನೀವು ಬಡವರು, ನಿಮ್ಮ ಅವಸ್ಥೆ ಕೇಳಿ ಎದೆ ಕರಗಿ ನೀರಾಯಿತು. ಅದುಕಾರಣ ನಾಡದು ಮೂರುನೂರು ರೂಪಾಯಿಗಳನ್ನು – ಅದರ ಯಥಾರ್ಥ ಮೌಲ್ಯವನ್ನು ಮಾತ್ರ ತನ್ನಿರಿ’ ಎಂದನು ಆ ಪುಣ್ಯಾತ್ಮ ಮಹಾರಾಯ.

ಮೂರು ನೂರು ರೂಪಾಯಿಗಳು! ಮೂರು ದಿವಸದೊಳಗೆ! ಎಲಿಂದ ತಾವೇ ಬಂದಾವು? ರಾಮಿಯು ತನ್ನ ಮಂಗಳ ಸೂತ್ರದ ತಾಳಿಯೊಂದನ್ನಿಟ್ಟು ಕೊಂಡು ಉಳಿದ ತನ್ನ ಆಭರಣವನ್ನೆಲ್ಲಾ ರಾಮರಾಯನ ಕೈಯಲ್ಲಿ ಕೊಟ್ಟು ‘ಇವೆಲ್ಲ ಮಾರಿಹೋಗಲಿ, ನಮ್ಮ ಮಾನ ಉಳಿಯಲಿ!’ ಎಂದಳು. ಆದರೆ ಮತ್ತೂ ಬೇಕಾಯಿತು ಒಂದುನೂರ‌ಎಪ್ಪತ್ತೈದು ರೂಪಾಯಿ! ಕೊನೆಗೆ ಪರಸ್ಪರ ಸಹಾಯಕ ಸಂಘಕ್ಕೆ ಶರಣುಹೋಗುವೆನೆಂದು ನಿಶ್ಚೈಸಿ ಪ್ರಕೃತ ಅಲ್ಲಿ ಇಲ್ಲಿ ಇಷ್ಟಿಷ್ಟು ಕೈಕಡಮಾಡಿ ಮೂರನೆಯ ದಿನಕ್ಕೆ ಹಣದ ಗಂಟೂ ಆಯಿತು; ಒಂಟಿ ಕಮಲೂ ಜೋಡಾಯಿತು. ಅವುಗಳಲ್ಲಿ ಇದ್ದುದು ಯಾವುದು ಬಂದುದು ಯಾವುದು ಎಂದು ಹೇಳಲು ಬರುತ್ತಿದ್ದಿಲ್ಲ; ಅಷ್ಟು ಜೊತೆ ಸರಿಹೋಗುತ್ತಿದ್ದುವು ಅವು! ರಾಮಿಯು ಅವನ್ನು ಕೊಟ್ಟು ಬಂದಳು.

ಆದರೆ ಎರವಾಗಿ ಬಂದುದು ಸ್ಥಿರವಾಗಿದ್ದುವುಗಳನ್ನೂ ಮುಕ್ಕು ನೀರು ಕುಡಿದು ಹಾರಿಹೋಯಿತಲ್ಲ! ಆ ಮೂರು ನೂರು ರೂಪಾಯಿಗಳನ್ನು ಪುನಃ ಒಟ್ಟು ಗೂಡಿಸಬೇಕಾದರೆ ರಾಮರಾಮಿಯರು ಅರೆಹೊಟ್ಟೆಯುಂಡು ಕಿರಿಬಟ್ಟೆಯುಟ್ಟು ಬಡತನದ ಹಿಡಿತದಲ್ಲಿ ಮಿಡುಕಬೇಕಾಯಿತು. ಆ ಉದ್ದದ ಮೂರು ವರುಷಗಳ ಕಾಲ! ಅಂದಿನಿಂದ ಇಂದಿನವರೆಗೆ ರಾಮಿಯು ಮನೆಮೆಟ್ಟಲಿಳಿಯಲಿಲ್ಲ. ಮದ್ರಾಸಿನ ಡಾಕ್ಟರರ ಹೆಂಡತಿಯು ಮೂರನೆಯ ಸಲ ತವರು ಮನೆಗೆ ಬಂದರೂ ರಾಮಿಯು ಕಾಣಸಿಗಲಿಲ್ಲ. ಅದು ಕಾರಣ ಅವರಾಗಿಯೆ ಬಂದರು ರಾಮಿಯ ಮನೆಗೆ. ಅವರನ್ನು ಕಂಡೊಡನೆ ರಾಮಿಗೊಮ್ಮೆ ಮೈ ಜುಮ್ಮೆಂದಿತು! ಅಂದು ಮರೆಸಿದ್ದನ್ನು ಇಂದು ಮೊದಲಾಗಿ ತಾನಾಗಿ ಹೇಳಿಬಿಡುವುದೊಳ್ಳಿತೆಂದು ಅವಳಿಗನ್ನಿಸಿತು. ಹಿಂಜರಿಯುವ ಸ್ವರವನ್ನು ಮುಂದೆಳೆದೆಳೆದು ಹಿಂಬೀಳುವ ನಾಲಗೆಯನ್ನು ಮುಮ್ಮಾಡಿಮಾಡಿ ತೊಡಗಿದಳು,- ‘ಅಂದು… ನಾನು… ಎರವಾಗಿ ತಂದಿದ್ದ… ನಿಮ್ಮ… ವಜ್ರದ ಕಮಲು… ಎನ್ನುವಷ್ಟರಲ್ಲಿ ಆ ಗೆಳತಿಯು ಅವಳ ನುಡಿ ತಡೆದು, ‘ಹ್ಹ! ವಜ್ರದ ಕವಲುಗಳೆ ಅವು? ಕೆಮಿಕಲ್ ಡೈಮಂಡ್ಸ್!’ ಎಂದಳು. ರಾಮಿಯು ಆಶ್ಚರ್ಯಗೊಂಡು, ‘ಕೆಮಿಕಲ್ ಡೈಮಂಡ್ಸ್? ನಿಮ್ಮ ತಂದೆಯು ನಿಮಗೆ ವಜ್ರದ ಕಮಲುಗಳನ್ನು ಹಾಕಿದ್ದರಲ್ಲ?’ ಎಂದು ಕೇಳಲು, “ಹೌದು, ಆದರೆ ಕಾರು ಕೊಂಡುಕೊಳ್ಳಲಿಕ್ಕೆ ಹಣ ಕಡಿಮೆಯಾಯಿತು. ಅವುಗಳನ್ನು ಮಾರಲೇಬೇಕಾಯಿತು. ಆ ಕಾರಿನೊಡನೆ ನನ್ನ ಕಿವಿಗೆ ಬಂತು ಈ ‘ದೊಡ್ಡವರ ವಜ್ರ!’ ಇದೇ ಅಂದು ನಿನಗೆ ಎರವಾಗಿ ಕೊಟ್ಟಿದ್ದ ಮೂವತ್ತು ರೂಪಾಯಿಯ ಕಮಲಿನ ಜೊತೆ!’ ಎಂದು ಪ್ರತ್ಯುತ್ತರ ಬಂತು! ವಾಚಕ ಮಹಾಶಯ, ರಾಮಿಯ ಮನಸ್ಸಿನಲ್ಲಿ ಆಗ ಏನೇನು ತೋರಿರಬಹುದು! ನೀವೇ ಕಲ್ಪಿಸಿಕೊಳ್ಳಿರಿ; ನಮಗಂತೂ ಲೇಖನಿಯು ಮುಂದುವರಿಯಲು ಕೇಳುವುದಿಲ್ಲ. ಅವಳು ‘ದೊಡ್ಡವರ ವಜ್ರ! ಹ್ಹ, ದೊಡ್ಡವರ ವಜ್ರ!’ ಎನ್ನುತ್ತ ಪ್ರಯತ್ನದ ಕಿರುನಗೆಯಿಂದ ಬೇರೆ ಮಾತೆತ್ತಿದಳು. ಅದೂ ಮುಂದುವರಿಯದಾಯಿತು, ತನಗೇನೋ ಅಂದು ವಿಪರೀತ ತಲೆನೋವೆಂದು ಗೆಳತಿಯನ್ನು ಕಳುಹಿಕೊಟ್ಟು ಬಾಗಿಲಿಕ್ಕಿ ಬಂದು ನೆಲದ ಮೇಲೆ ಬಿದ್ದಂತೆ ಗೋಡೆಗೊರಗಿ ಕುಳಿತು ಬಿಟ್ಟಳು. ‘ದೊಡ್ಡವರ ವಜ್ರ! ದಳ್ಳಾಳಿಯ ಸುಳ್ಳು ವಜ್ರ! ನನ್ನನ್ನು ಗೋಳುಗುಡಿಸಿ ಬಾಳುಗೆಡಿಸಿದ ಆ ಹಾಳು ವಜ್ರ!’ ಎನ್ನುತ್ತ ರಾಮಿಯು ಗಳಗಳನೆ ಅತ್ತು ಬಿಟ್ಟಳು.
*****
[ಮೊಪಾಸಂತನ ಕಥಾವಸ್ತು (plot) ವನ್ನು ಆಧರಿಸಿ ಬರೆದುದು.]

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಗ್ಗ
Next post ನನ್ನ ಮನಸು ನಿನ್ನಲ್ಲಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…