ಬಂಡಾಯ ಸಂವೇದನೆ : ಚರಿತ್ರೆಯ ನಡಿಗೆ

ಬಂಡಾಯ ಸಂವೇದನೆ : ಚರಿತ್ರೆಯ ನಡಿಗೆ

ಒತ್ತಾಸೆ : ದಿನಾಂಕ ೨೩, ೨೪ ನವೆಂಬರ್ ೨೦೦೨ರಂದು ಮಹಲಿಂಗಪುರದಲ್ಲಿ ನಡೆದ ೧೩ನೇ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದ ಗೋಷ್ಠಿಯೊಂದರ ಆಶಯ ಮಾತುಗಳು/ಲೇಖನ

ಬಂಡಾಯ ಇವತ್ತಿಗೂ ಜೀವಂತ. ಇದು ಅವತ್ತು ಇತ್ತು, ಇವತ್ತು ಇಲ್ಲ ಎಂದು ಹೇಳುವವರು ಬಂಡಾಯವನ್ನು ಅವತ್ತಿನ ಮಾದರಿಯಲ್ಲಿಯೇ ಗ್ರಹಿಸುತ್ತಾ, ಅದರ ಚಲನಶೀಲತೆಯನ್ನು ನಿರಾಕರಿಸುತ್ತಾರೆ. ಅವರು ವರ್ತಮಾನದಲ್ಲಿ ಪಾದಗಳನ್ನಿಟ್ಟು, ಭೂತದಲ್ಲಿ ತಲೆಯನ್ನು ಹೊಕ್ಕಿಸಿದ ಸಾಂಸ್ಕೃತಿಕ ಮೂಲಭೂತವಾದಿಗಳಾಗಿ ಕಾಣುತ್ತಾರೆ. ಅವರನ್ನು Cultural Orientalistsಗಳಿಗೆ ಸಂವಾದಿಗಳಾಗಿ ಗುರುತಿಸಲು ಸಾಧ್ಯವಿದೆ.

ಬಂಡಾಯದ ಸಂವೇದನೆ ಯಾವತ್ತಿಗೂ ಜೀವಂತ. ಇದನ್ನು ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಆಡುತ್ತಿದ್ದೇನೆ. ಇಲ್ಲಿ ಎರಡು ಧಾರೆಗಳಿವೆ. ಇಂದು ‘ಅಕ್ಷರ’ರೂಪದ ಶಿಷ್ಟ ಸಾಹಿತ್ಯ. ಇನ್ನೊಂದು ‘ಮಾತು’ ರೂಪದ ಜನಪದ ಸಾಹಿತ್ಯ. ನಮ್ಮ ಚರಿತ್ರೆಯಲ್ಲಿ ಅಕ್ಷರ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಕಾಣುವ ಮನುಷ್ಯ ಬದುಕೇ ಬೇರೆ. ಅಂತೆಯೇ ಮಾತು ಮಾತ್ರವಾದ ಅಭಿವ್ಯಕ್ತಿಯನ್ನು ರೂಢಿಸಿಕೊಂಡ ಸಂಸ್ಕೃತಿ ಮತ್ತುಪರಂಪರೆಯಲ್ಲಿ ಕಾಣುವ ಮನುಷ್ಯ ಬದುಕೇ ಬೇರೆ. ಒಂದರಲ್ಲಿ ಬುದ್ಧಿಯ ಬಲದಿಂದ ಬದುಕು ನಡೆಯುತ್ತಿದ್ದರೆ, ಇನ್ನೊಂದರಲ್ಲಿ ಬೆವರಿನ ಬಲದಿಂದ ಬದುಕು ನಡೆಯುತ್ತಿರುತ್ತದೆ. ಮೂಲಭೂತವಾಗಿ ಬುದ್ಧಿ, ಬೆವರುಗಳೆರಡೂ ಸಮಾನ ಮಹತ್ವದವೇ. ಆದರೆ ಬುದ್ಧಿಯನ್ನು ಆಡುತ್ತಾ ಬಂದ ವ್ಯಕ್ತಿ, ತಾನಾಡಿದ್ದನ್ನೇ ಮಂತ್ರವನ್ನಾಗಿಸುತ್ತಾ ಸಮಾಜದ ಮೇಲ್‌ಸ್ತರಕ್ಕೆ ಏರಿದರೆ; ಆ ತಂತ್ರಕ್ಕೆ ಕಣ್‌ಕಣ್ ಬಿಟ್ಟ ಬೆವರಿನ ವ್ಯಕ್ತಿ ಬಾಗುತ್ತಾ, ಸಮಾಜದ ಕೆಳಸ್ತರಕ್ಕೆ ಇಳಿದ. ಇಂತಹ ಶ್ರೇಣೀಕೃತ ವ್ಯವಸ್ಥೆಯ ಪೋಷಕ ಶಕ್ತಿಯಾಗಿ ಅಕ್ಷರವು ಪಕ್ಷಪಾತಿ ಧೋರಣೆಯನ್ನು ತಳೆದದ್ದು ಒಂದು ವ್ಯಂಗ್ಯ. ಅದರಂತೆಯೇ ಮೌಖಿಕ ಪರಂಪರೆಯಾದ ಮಾತು ಸಹ ಅಕ್ಷರಕ್ಕೆ ಪೂರಕವಾಗಿ ನಿಂತದ್ದು ದೊಡ್ಡ ದುರಂತ. ಆದ್ದರಿಂದಲೇ ಯಥಾಸ್ಥಿತಿವಾದವನ್ನು ಪೋಷಿಸುವ ಅಕ್ಷರ ಸಾಹಿತ್ಯ ಮತ್ತು ಜನ ಸಂಸ್ಕೃತಿ ಹಾಗೂ ಅದರ ಪ್ರಭಾವ ವಲಯದಲ್ಲಿ ನಡೆಯುತ್ತಾ ತಾನೂ ಅದರಂತಾಗುವ ಆದರ್ಶವನ್ನು ಹೊತ್ತ ಮಾತು ಮೂಲದ ಜನಪದ ಸಾಹಿತ್ಯ ಮತ್ತು ಸಂಸ್ಕೃತಿಗಳ ನಡುವೆ ಮೂಲಭೂತ ಕಂದಕಗಳು ಉಳಿಯುವುದು ಸಾಧ್ಯವಾಗಲಿಲ್ಲ. ಆದ್ದರಿಂದ ಅಲ್ಲಿ ಸ್ತ್ರೀ ಕಣ್ಣೀರನ್ನು ಹರಿಸಿದರೆ ಇಲ್ಲಿಯೂ ಹರಿಸುವುದು ಸಹಜವಾಗುತ್ತದೆ. ಇದೇ ನಿಟ್ಟಿನಲ್ಲಿ ಅಲ್ಲಿಯ ದಲಿತ ಇಲ್ಲಿಯ ದಲಿತನಿಗಿಂತ ಭಿನ್ನನಾಗಲಿಲ್ಲ.

ಹೀಗೆ ಕನ್ನಡ ಪರಂಪರೆಯನ್ನು ಕಟ್ಟಿಕೊಳ್ಳಲು ಸಹಾಯಕವಾಗಿರುವ ಎರಡೂ ಧಾರೆಗಳಲ್ಲಿ ಮೌಲ್ಯ ಪ್ರಜ್ಞೆ ಒಂದೇ ಆಗಿರುವುದರಿಂದ, ಎರಡೂ ಕೂಡಿಯೇ ಪುರುಷ ಪ್ರಧಾನ ಮತ್ತು ಅವುಗಳ ಪರವಾದ ವ್ಯವಸ್ಥೆಯನ್ನು ಪೋಷಿಸುತ್ತಾ ಬಂದಿವೆ. ಇದು ಸ್ತ್ರೀ ಸಂವೇದಿ ನೆಲೆಯಲ್ಲಿ ಆಡಿದ ಮಾತು. ಇನ್ನು ವರ್ಗ ಸಂವೇದಿ ನೆಲೆಯಲ್ಲಿ ಮಾತನಾಡುವುದಾದರೆ, ಎರಡೂ ಧಾರೆಗಳಲ್ಲಿ ವ್ಯಕ್ತವಾಗಿರುವ ಆಶಯಗಳು ಪ್ರಧಾನವಾಗಿ ಮೇಲ್ವರ್ಗದ ಪರವಾದುವೇ. ಹೀಗೆ ಅಕ್ಷರ ಮತ್ತು ಮೌಖಿಕ ಪರಂಪರೆಯಲ್ಲಿ ದಾಖಲಾಗುತ್ತಾ ಬಂದ ಜನ ಸಂವೇದನೆಗಳಲ್ಲಿ ಬಂಡಾಯದ ಧ್ವನಿ ಅತ್ಯಂತ ಕ್ಷೀಣ. ಇದರರ್ಥ ಶೋಷಣೆಗೆ ಒಳಗಾಗುತ್ತಾ ಬಂದ ಈ ವರ್ಗಗಳು ಬಂಡಾಯವನ್ನು, ತಮ್ಮ ಉಸಿರನ್ನು ಒಂದಿಷ್ಟು ಬಿಸಿಯನ್ನಾಗಿ ಮಾಡಿಕೊಂಡಿರಲಿಲ್ಲವೆ? ಎಂಬುದು. ಅದಕ್ಕೆ ಉತ್ತರವೆಂದರೆ, ಅವರ ಬಂಡಾಯವು ಮೌನ ಸ್ವರೂಪದ್ದು. ಆ ಮೌನವು ಮಾತಾಗುವ ಅಥವ ಅಕ್ಷರವಾಗುವ ಸನ್ನಿವೇಶ ಅಂದು ಇರಲಿಲ್ಲವಾದ್ದರಿಂದ ಅದರ ಸ್ವರೂಪವು ಮೌನದ್ದೇ ಆಗಿತ್ತು. ಇದು ಸಾವಿರಾರು ವರ್ಷಗಳ ಕನ್ನಡ ಅಥವ ಭಾರತೀಯ ಪರಂಪರೆಯದ್ದು.

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಪರಂಪರೆಯಲ್ಲಿ ಅಂತಹ ಮೌನ ರೂಪದ ಬಂಡಾಯ ಮಾತಾದದ್ದು ಮೊದಲಿಗೆ ಶರಣ ಯುಗದಲ್ಲಿ. ಸ್ತ್ರೀ ಸಂವೇದನೆಯ ನೆಲೆಯಲ್ಲಿ ಅಕ್ಕಮಹಾದೇವಿ ಇದಕ್ಕೆ ಮೊದಲಿಗಳಾಗುತ್ತಾಳೆ. ಇವಳ ಸಾಲಿನಲ್ಲಿ ಸಂಕವ್ವೆ, ಕಾಳವ್ವೆ ಮೊದಲಾದ ಜನವರ್ಗಗಳಿಂದ ಬಂದ ಮಹಿಳೆಯರು ಮಾತಾಡುತ್ತಾರೆ. ಇವರು ಶರಣರ ಗೌರವಕ್ಕೆ ಮಾತ್ರ ಪಾತ್ರರಾಗುತ್ತಾರೆಯೇ ಹೊರತು ಸ್ತ್ರೀಯನ್ನು ಒಳಗೊಂಡ ಒಟ್ಟು ಸಮಾಜಕ್ಕೆ ಒಪ್ಪಿತರಾದರೆಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಮಾದಾರ ಚೆನ್ನಯ್ಯ, ಹರಳಯ್ಯ ಮೊದಲಾದ ದಲಿತರು,ಅಂಬಿಗರ ಚೌಡಯ್ಯ, ಅಲ್ಲಮ ಮೊದಲಾದ ಕೆಳವರ್ಗದವರೂ ಮಾತನಾಡುತ್ತಾರೆ. ಬಸವಣ್ಣನ ಮಾತುಗಳಂತೂ ಪ್ರಸಿದ್ಧ.

ಹೀಗೆ ವಿವಿಧ ಜನಾಂಗ ಮೂಲಗಳಿಂದ ಹೊರಟ ಧ್ವನಿಗಳು ಸಮಾಜದ ತೀವ್ರ ಬದಲಾವಣೆಗೆ ಹಾತೊರೆದದ್ದು ಬಂಡಾಯದ ಪರಿಕಲ್ಪನೆಯ ಚರಿತ್ರೆಯಲ್ಲಿ ಮೊದಲ ಅಧ್ಯಾಯವಾಗುತ್ತದೆ.

ಇದಿಷ್ಟನ್ನು ಇಲ್ಲಿ ಹೇಳಲು ಕಾರಣವೆಂದರೆ, ಒಟ್ಟು ನಮ್ಮ ಪರಂಪರೆಯ ಉದ್ದಕ್ಕೂ ಮೌನದಲ್ಲಿ ಬುಸುಗುಟ್ಟುತ್ತಿದ್ದ ಬಂಡಾಯವು ಮೊಟ್ಟಮೊದಲಿಗೆ ಅಕ್ಷರ ರೂಪದಲ್ಲಿ ಸ್ಫೋಟವಾದದ್ದು ಹನ್ನೆರಡನೆಯ ಶತಮಾನದಲ್ಲಿ ಮಾತ್ರ ಎಂದು ಹೇಳಲು. ಇದನ್ನು ಹೊರತುಪಡಿಸಿದರೆ ಆ ಘಟ್ಟ ಮತ್ತೊಂದು ವಿನ್ಯಾಸದಲ್ಲಿ ಮೈತಳೆದದ್ದು ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ. ಅದು ಇಂದಿಗೂ ಮುಂದುವರೆದಿದೆ.

ಈ ನಡುವಿನ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಪ್ರತಿಭಟನೆಯ ನೆಲೆಗಳು ಇರುವುದಾದರೂ ಅವು ತೀವ್ರ ಸಾಮಾಜಿಕ-ರಾಜಕೀಯ ಪ್ರಜ್ಞೆಯಿಂದ ಹೊರಟು, ವ್ಯವಸ್ಥೆಯ ಸಮಗ್ರ ಬದಲಾವಣೆಗೆ ಹಾತೊರೆಯುವುದಿಲ್ಲ. ಅಲ್ಲಿ ಅವು ಮನುಷ್ಯಪರ ಧೋರಣೆಯಾದ ಕೆಲವು ನೆಲೆಗಳಾಗಿ ಮಾತ್ರ ಗೋಚರವಾಗುತ್ತವೆ. ಆದ್ದರಿಂದಲೇ ಅಂತಹ ಸಾಹಿತ್ಯವು ಸುಖಲೋಲುಪರ ಪರವಾಗಿ ಮತ್ತು ಅವರ ನಡುವೆ ಕಣ್‌ಕೋರೈಸಿ ಉಳಿದು ಬರಲು ಸಾಧ್ಯವಾಗುತ್ತದೆ.

ಹೀಗೆ ಹೊಟ್ಟೆ ತುಂಬಿದವರು ಬರೆದ ಸಾಹಿತ್ಯ ಹೊಟ್ಟೆ ತುಂಬಿದವರನ್ನು ತಣಿಸಿತೇ ಹೊರತು ಹೊಟ್ಟೆ ತುಂಬದವರನ್ನು ತಣಿಸಲು ಸಾಧ್ಯವಾಗಲಿಲ್ಲ. ಇದನ್ನು ಪಂಪ ಮೊದಲಾದ ಬಹುತೇಕ ಕವಿಗಳಿಗೆ ಅನ್ವಯಿಸಬಹುದಾಗಿದೆ. ಅಲ್ಲಿ ಜನಪರವಾದ ಕೆಲವು ನೆಲೆಗಳು ಮೂಡಿದರೂ ಅವು ಮನುಷ್ಯ ಸಹಜನಾದವನಿಗೆ ಇರುವ ಅಂತಃಕರಣದ ಸಾಕ್ಷಿಗಳೇ ಹೊರತು ಒಟ್ಟು ಸಮಾಜದ ಸಮಗ್ರ ಬದಲಾವಣೆಯನ್ನು ಅಪೇಕ್ಷಿಸುವ ಆರೋಗ್ಯಕರ ಮತ್ತು ಸಾಮಾಜಿಕ ದೃಷ್ಟಿಯದ್ದಲ್ಲ. ಇಲ್ಲಿ ಬಹುಜನ ಸಮುದಾಯಕ್ಕೆ ದೂರವಾದ ಸಂವೇದನೆಗಳಿವೆ.

ಹೀಗೆ ವಚನಕಾರರನ್ನು ಹೊರತುಪಡಿಸಿದಂತೆ ಮತ್ತು ಕೊಂಚ ಪ್ರಗತಿಶೀಲರನ್ನು ಹೊರತುಪಡಿಸಿ ಹೇಳುವುದಾದರೆ ಕಳೆದ ಶತಮಾನದ ಎಪ್ಪತ್ತರ ದಶಕದವರೆಗಿನ ಕನ್ನಡ ಸಾಹಿತ್ಯ ಬ್ರಾಹ್ಮಣಮಯವಾದದ್ದೇ. ಅದನ್ನು ಓದಿದ ಶೂದ್ರರು ಸಹ ಮಾನಸಿಕವಾಗಿ ಬ್ರಾಹ್ಮಣರಾಗತೊಡಗಲು ಯತ್ನಿಸಿದರೇ ಹೊರತು ಅದಕ್ಕಿಂತ ತೀರಾ ಭಿನ್ನವೇನೂ ಆಗಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ವಿದ್ಯಾವರ್ಧಕ ಸಂಘ, ಮಠಗಳು -ಹೀಗೆ ಹಲವು ಸಂಸ್ಥೆಗಳು ಪಾರಂಪರಿಕ ಕನ್ನಡ ಸಾಹಿತ್ಯದ ಧೋರಣೆಯನ್ನು ಹೊಂದಿದ್ದವೇ ಹೊರತು ಕ್ರಾಂತಿಕಾರೀ ಗುಣವನ್ನು ಹೊಂದಿರಲಿಲ್ಲ. ಆದ್ದರಿಂದಲೇ ೭೦ರ ದಶಕದ ಬಂಡಾಯ ಸಾಹಿತ್ಯ ಮತ್ತು ಸಂಘಟನೆಯು ಏಕಕಾಲಕ್ಕೆ ಈ ಬ್ರಾಹ್ಮಣೀಕೃತ ಸಂಘ ಮತ್ತು ಸಾಹಿತ್ಯಕ್ಕೆ ಭಿನ್ನವಾಗಿ ಆಲೋಚಿಸಿ, ಅವುಗಳಿಗೆ ಪರ್ಯಾಯವಾಗುವ ಸಾಂಸ್ಕೃತಿಕ ಶೋಧಕ್ಕೆ ತೊಡಗಿದ್ದು. ಇದು ಐತಿಹಾಸಿಕ ಬೆಳವಣಿಗೆ. ಇಲ್ಲಿ ಸಮಾಜದ ಎಲ್ಲಾ ವರ್ಗಗಳಿಂದ ಕವಿ-ಸಾಹಿತಿಗಳು, ಕಲಾವಿದರು ಎದ್ದು ಬಂದರು. ಕನ್ನಡ ಪರಂಪರೆ ಅದುವರೆಗೆ ಕಾಣದಿದ್ದ ಕಲಾಭಿವ್ಯಕ್ತಿ ಇಲ್ಲಿ ವ್ಯಕ್ತವಾಯಿತು. ಈ ಮೂಲಕ ಕೆಳವರ್ಗದ ಜನರಿಗೆ ಆತ್ಮವಿಶ್ವಾಸ ಕುದುರಿದ್ದಲ್ಲದೆ, ದೇಶದ ಆಗು-ಹೋಗುಗಳಲ್ಲಿ ತಮಗೂ ಹಕ್ಕುಂಟು ಎಂಬ ಪ್ರಜ್ಞೆಯನ್ನು ಚಳುವಳಿಗಳ ಮೂಲಕ ಹೊಮ್ಮಿಸಿದರು. ಈ ನೆಲೆಯಲ್ಲಿ ಸಾಹಿತ್ಯ ಮತ್ತು ಚಳವಳಿ ಒಟ್ಟೊಟ್ಟಿಗೆ ನಡೆದದ್ದಲ್ಲದೇ, ಅಲ್ಲಿ ಪುಟಿದೆದ್ದ ಚಿಂತನೆಗೆ ಸೈದ್ಧಾಂತಿಕತೆಯ ಸ್ಪರ್ಶವೂ ಪ್ರಾಪ್ತವಾಯಿತು. ಆದ್ದರಿಂದ ಇದು ನಂಬಿಕೆಗರ್ಹ ಸಾಹಿತ್ಯವಾಯಿತು. ಸಾಹಿತಿಗಳು ಸಹ ಆರಂಭದಲ್ಲಿ ಹಾಗೆಯೇ ಕಂಡರು. ಅವರಲ್ಲಿ ಅನೇಕರು ಸಿದ್ಧಾಂತ ಮತ್ತು ನಡೆಗಳಲ್ಲಿ ಬಿರುಕನ್ನು ಪ್ರಕಟಿಸಿದ್ದರಿಂದ ಈ ಇಮೇಜ್ ಕೆಲವೇ ವರ್ಷಗಳಲ್ಲಿ ವಿಘಟನೆಗೆ ಒಳಗಾಯಿತು. ಅಂತಹ ಕೃತ್ಯದಲ್ಲಿ ದಲಿತ, ರೈತ ಮತ್ತು ಕನ್ನಡ ಚಳವಳಿಗಳ ಬಲದಲ್ಲಿ ಮೂಡಿದ ರಾಮಕೃಷ್ಣ ಹೆಗಡೆ ಸರ್ಕಾರ ದೈತ್ಯ ಹೆಜ್ಜೆಯನ್ನಿಟ್ಟಿತು. ಚಳವಳಿಗಳ ವಕ್ತಾರರು ಕ್ಷಿಪ್ರ ಕಾಲದಲ್ಲಿಯೇ ಸಿಂಹಾಸನಕ್ಕೆ ಹಾತೊರೆದದ್ದರಿಂದ ಅದೇ ವಲಯದ ಅನೇಕರು ಚಳುವಳಿಯನ್ನು ಹಿಂದು ಮಾಡಿ, ತಮ್ಮನ್ನು ಮುಂದಕ್ಕೆ ಒಡ್ಡಿಕೊಂಡರು. ಹೀಗೆ ಬಂಡಾಯಗಾರರ ಅನೇಕ ಮಿತಿಗಳ ನಡುವೆಯೇ ಬಂಡಾಯ ಸಾಹಿತ್ಯ ಏರುಗತಿಯಲ್ಲಿಯೇ ನಡೆಯಿತೆಂಬುದು ವಾಸ್ತವವಾಗಿದೆ.

ಬಂಡಾಯ ಸಾಹಿತ್ಯವು ತನ್ನ ಸಮಕಾಲೀನ ಸಂದರ್ಭದ ಚಾರಿತ್ರಿಕ ಒತ್ತಡದಲ್ಲಿ ಮೂಡಿದರೂ ಅದಕ್ಕೆ ಪರಂಪರೆಯ ಪ್ರಜ್ಞೆ ಇತ್ತು;ನವೋದಯದವರಿಗಿದ್ದ ಪೂಜಾ ಮನೋಭಾವವಿರಲಿಲ್ಲ. ಇದನ್ನು ಸಾಧ್ಯವಾಗಿಸಿದ್ದು ಮುಖ್ಯವಾಗಿ ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮತ್ತು ಮಾರ್ಕ್ಸ್‌ವಾದಿ ಸಿದ್ಧಾಂತಗಳು. ಇಂತಹ ಮೂಲದಿಂದ ಹೊರಟ ಸಾಹಿತ್ಯ ಸಹಜವಾಗಿಯೇ ಬಹುಜನ ಸಮುದಾಯವನ್ನು ಬಡಿದೆಬ್ಬಿಸಲು ಶಕ್ತವಾಯಿತು. ಇದು ಬಂಡಾಯ ಸಾಹಿತ್ಯಕ್ಕಿರುವ ಮುಖ್ಯ ಸಾಮಾಜಿಕ ಗರಿಮೆ.

ಯಾವುದೇ ಸಂಸ್ಕೃತಿಗೆ ಸವಾಲುಗಳು ಜೀವಂತವಾಗಿರುತ್ತವೆ. ಇದು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ವ. ಈ ಹಿನ್ನೆಲೆಯಲ್ಲಿ ಭಾರತಕ್ಕೂ ಸವಾಲುಗಳಿವೆ ಎಂಬುದು ಸರಳ ಮಾತು. ಕಾರಣ, ಮುಂದುವರೆದ ದೇಶಗಳ ಸಮಕಾಲದಲ್ಲಿ ಇರುವ ಭಾರತದ ಹಿಂದುಳಿದಿರುವಿಕೆಗೆ ಕೇವಲ ವರ್ತಮಾನವಲ್ಲ; ಅದರ ತಾಯಿಯಾದ ಭೂತಕಾಲದಲ್ಲಿಯೂ ಉತ್ತರಗಳಿವೆ. ಅವುಗಳನ್ನು ಶೋಧಿಸಿಕೊಂಡಾಗ ಮಾತ್ರ ಚರಿತ್ರೆಯನ್ನು ಸಮರ್ಪಕವಾಗಿ ಕಟ್ಟಲು ಸಾಧ್ಯವಾಗುವುದು. ಈ ತಾತ್ವಿಕ ನೆಲೆಯಲ್ಲಿ ೭೦-೮೦ರ ದಶಕದ ಸವಾಲುಗಳು ಆನಂತರದಲ್ಲಿ ಕ್ಷೀಣವಾಗದೆ, ಅವುಗಳೊಂದಿಗೆ ಜಾಗತೀಕರಣ, ರಾಜಕೀಯ-ಶಿಕ್ಷಣದ ಕೋಮು ವಾದೀಕರಣದತಹ ವ್ಯಾಪಕ ಸವಾಲುಗಳು ಸಹ ತಲೆದೋರಿದ್ದನ್ನು ಗುರುತಿಸಿಕೊಳ್ಳಬೇಕು.

ಇದರರ್ಥ ಬಂಡಾಯದ ಸವಾಲುಗಳು ಹಿಂದೆಂದಿಗಿಂತ ಇಂದು ವ್ಯಾಪಕವಾಗಿವೆ ಎಂಬುದು. ಅಂದು ಶತ್ರು ನಮ್ಮ ಒಳಗಿನವನಾಗಿದ್ದನು. ಇಂದು ಹೊರಗಿನವನು ಆಗಿದ್ದಾನೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಂತಹ ಶತ್ರುಗಳು ನೇರವಾಗಿ ಕಾಣುತ್ತಿದ್ದರು. ಇಂದು ಅವರ ಜಾಗದಲ್ಲಿ ಬೇರುಬಿಡುತ್ತಿರುವ ಅಸಂಖ್ಯ ‘ಬ್ರಿಟಿಷ’ರು ಅಪ್ರತ್ಯಕ್ಷವಾಗಿ ನಮ್ಮನ್ನು ಆಳತೊಡಗಿದ್ದಾರೆ. ದೇಶದೊಳಗೆ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿವೆ. ಅಂದು ಬಾಬ್ರಿ ಮಸೀದಿ ಉರುಳಿದ್ದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಗೋದ್ರಾಗೆ ಬೆಂಕಿಯೂ ಬಿದ್ದಿದೆ. ಇದಕ್ಕೆ ತುಪ್ಪವನ್ನು ಸುರಿಯುವ ರೂಪದಲ್ಲಿ ಶಿಕ್ಷಣದ ಕೇಸರೀಕರಣವೂ ನಡೆದಿದೆ. ತಮಿಳುನಾಡಿನಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆಯಾಗಿದೆ. ಇದು ಒಂದೆಡೆಯಾದರೆ, ದೇಶ ಮತ್ತು ವಿವಿಧ ರಾಜ್ಯಗಳಲ್ಲಿ ಈ ಶಕ್ತಿಗಳೇ ನೇರವಾಗಿ ರಾಜ್ಯಭಾರ ಮಾಡುತ್ತಿರುವುದು ಮತ್ತೊಂದೆಡೆಯಾಗಿದೆ.

ಹೀಗೆ ದೇಶದ ಸ್ಥಿತಿ ವಿಚ್ಫಿದ್ರಕಾರಕವಾಗಿದ್ದು ಭವಿಷ್ಯವನ್ನು ಶಂಕಿಸುವಂತಾಗಿದೆ. ಇದಕ್ಕೆ ಪೋಷಕವಾಗಿ ವಿಘಟಿತ ಜನಪರ ಚಳುವಳಿಗಳೂ ಇವೆ. ಇಂತಹ ಸನ್ನಿವೇಶದಲ್ಲಿಯೂ ಬಂಡಾಯದ ಸಂವೇದನೆಯು ಹೊಸ ತಲೆಮಾರಿನ ಅನೇಕ ಕವಿ, ಬರಹಗಾರರಿಂದ ಮೂಡುತ್ತಿರುವುದು ಆಶಾಸೂಚಿಯಾಗಿದೆ. ದಲಿತ, ಮುಸ್ಲಿಂ, ಸ್ತ್ರೀ ಮೊದಲಾದ ಎಲ್ಲಾ ಶೋಷಿತ ಸಮುದಾಯಗಳಿಂದ ಈ ಸಾಹಿತ್ಯ ಪರಂಪರೆಗೆ ಹೊಸ ವಿಸ್ತರಣೆಗಳೊದಗುತ್ತಿವೆ. ಸಮಕಾಲೀನ ಜಗತ್ತಿಗೆ ತೀವ್ರ ಮುಖಾಮುಖಿಗೊಳ್ಳುತ್ತಿರುವ ಬಂಡಾಯದ ಈ ವಿವಿಧ ಸಂವೇದನೆಗಳು ಚಿಂತನೆ ಮತ್ತು ಚಳುವಳಿಗಳನ್ನು ಪೂರಕಗೊಳಿಸುವತ್ತ ತುಡಿಯುತ್ತಿವೆ. ಈ ನಿಟ್ಟಿನಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ಪುನಃಚೇತನಗೊಂಡು ಕಳೆದ ಹಲವು ತಿಂಗಳುಗಳಿಂದ ಸಂಘಟಿತ ನೆಲೆಯಲ್ಲಿ ಕ್ರಿಯಾರೂಪಗೊಂಡಿರುವ ಬಂಡಾಯ ಸಂಘಟನೆಯು ತನ್ನ ೧೩ನೇ ರಾಜ್ಯ ಸಮ್ಮೇಳನಕ್ಕೂ ಸಜ್ಜಾಗಿರುವುದು ತನ್ನ ಸಾಂಸ್ಕೃತಿಕ ಜವಾಬ್ದಾರಿ ಹೊತ್ತ ಚರಿತ್ರೆಯ ನಡಿಗೆಯಾಗಿದೆ.
*****
ಅನಿಕೇತನ, ಜನವರಿ-ಮಾರ್ಚ್ ೨೦೦೩

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಮನೆಯ ಒಸಗೆ
Next post ಸಾಲ ಸರ್ಪ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys