ಬಣ್ಣಗೆಟ್ಟ ಇರುಳುಗಳ ನಡುನಡುವೆ
ಹೊರಳಿ ನರಳಿವೆ ವಿರಹದುರಿಯ
ದಳ್ಳುರಿ, ಎಲ್ಲಿ? ಎಲ್ಲಿ?
ಹೋದವೆಲ್ಲಿ ಮುಗಿಲ ಪಡೆ?
ಸುರಿಸದೆ ಒಂದಿಷ್ಟು ತಣ್ಣನೆ ಹನಿಗಳ
ಬಾಯಾರಿವೆ, ತೊನೆಯುವ ಬಯಕೆ
ಆಸೆಗಳ ಚೆಲ್ಲಾಟದಲಿ ಮೂಕಸಂಕಟ
ಯಾರಿಗೆ ಬೇಕಾಗಿತ್ತು ನೂರು ಹೆಣ್ಣುಗಳ
ನಡುವಿನ ರಾಣಿ ಪಟ್ಟ
ಅನುದಿನವೂ ನವತಾರುಣ್ಯವ
ಮೀಸಲು ಮುರಿವ ಮೃಷ್ಟಾನ್ನದ
ನಡುವೆ ಉಂಡೆಸೆದ ಬಾಳೆಲೆಯ
ನೆನಪೇ ಬರಿ ಕನಸು
ಅರಮನೆ ವಾಸ ಸೆರೆಯಾಳಿನಂತೆ
ಕಣ್ಕಟ್ಟು ಬಿಗಿದು ಬಯಲೊಳಗೆ
ಓಡುವಾಟ ಮುಗ್ಗರಿಕೆ
ಕಾಣದ ಹಾದಿ ಮುಳ್ಳಿನಬೇಲಿ
ಕಾಲ್ತೊಡಕು, ಬೊಗಸೆ ತುಂಬ ನೆತ್ತರು
ಸಿರ್‍ರನೆದ್ದು ಹಿಂಡುವ ಬಿರುಗಾಳಿ
ಸುಳಿಸುತ್ತಿ ಹಿಂಡುವ
ಕಬಂದ ಬಾಹುಗಳ ಸೆಣಸಾಟದಲಿ
ಬಳಲಿಕೆ, ಹೊರಬರಲಾರದ ಬಿಕ್ಕು
ದಿಕ್ಕು ತಪ್ಪಿದ ಮೋಡಗಳ ಹಿಂಡು
ತಂಪೆರೆಯಲಿಲ್ಲ ಕೊನೆಗೂ
ಬೇಗುದಿ ತಾಪ ನಿಟ್ಟುಸಿರು
ಲೆಕ್ಕವಿಡದ ಬಿಸಿಯುಸಿರು
ರಾಚಿದೆ ಗಪ್ಪನೆ ಕತ್ತಲೆ ಬೆಂಕಿಗೆ
ಸುಟ್ಟು ಕರಕಾದ ಭಾವಗಳ
ಬೂದಿ ಬಂಗಾರದ ಕರಂಡಿಕೆಯೊಳಗೆ
*****