ಗೋಕಾಕ್ ವರದಿ – ೨

ಗೋಕಾಕ್ ವರದಿ – ೨

ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ಕೈಬಿಡಬೇಕು ಮತ್ತು ಕನ್ನಡ ಭಾಷೆಯನ್ನು ಕನ್ನಡೇತರರು ಕಡ್ಡಾಯವಾಗಿ ಅಭ್ಯಾಸಮಾಡುವಂತೆ ವ್ಯವಸ್ಥೆಮಾಡಬೇಕೆಂಬ ಒತ್ತಾಯವನ್ನು ಸರ್ಕಾರ ಪರಿಶೀಲಿಸಿ ೧೯೭೯ ಅಕ್ಟೋಬರ್ ದಿನಾಂಕ ರಲ್ಲಿ ಒಂದು ಸರ್ಕಾರಿ ಆಜ್ಞೆ ಹೊರಡಿಸಿತು. ಆ ಆಜ್ಞೆಯಂತೆ ಸಂಸ್ಕೃತ ಪ್ರಥಮಭಾಷೆಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡು ತೃತೀಯ ಭಾಷೆಯ ಸ್ಥಾನ ಪಡೆಯಿತು.
ಸರ್ಕಾರದ ಈ ಆಜ್ಞೆ ಮತ್ತೆ ಸಾರ್ವಜನಿಕ ಕ್ಷೇತ್ರದಲ್ಲಿ ವಾದವಿವಾದಗಳಿಗೆ ಎಡೆಗೊಟ್ಟು ಸಾಕಷ್ಟು ಧೂಳೆಬ್ಬಿಸಿತು. ವಿವಾದ ಉಚ್ಛ ನ್ಯಾಯಾಲಯದ ಮುಂದೆಯೂ ಹೋಯಿತು. ಸಂಸ್ಕೃತದ ಪರ ಮತ್ತು ವಿರೋಧವಾಗಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತಪಟ್ಟಿದೆ. ರಾಜ್ಯದ ಎರಡೂ ಶಾಸನಸಭೆಗಳಲ್ಲಿ ಈ ವಿಷಯವಾಗಿ ಚರ್ಚೆ ನಡೆದು ಸರ್ಕಾರ ಈ ಸಮಸ್ಯೆಯನ್ನು ತಜ್ಞರ ಸಮಿತಿಗೆ ವಹಿಸಿ ಸಮಿತಿಯ ಸಲಹೆಯಂತೆ ನಿರ್ಣಯ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿ ಅದರಂತೆ ಸರ್ಕಾರಿ ಆಜ್ಞೆಯಂತೆ ಸಮಿತಿ ರಚನೆಯಾಯಿತು.

ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು
೧ ಡಾ || ವಿ. ಕೃ. ಗೋಕಾಕರು ಅಧ್ಯಕ್ಷರು
೨ ಶ್ರೀ ಜಿ. ನಾರಾಯಣ ಸದಸ್ಯರು
೩ ಶ್ರೀ ಎಸ್. ಕೆ. ರಾಮಚಂದ್ರರಾಯರು ಸದಸ್ಯರು
೪ ಶ್ರೀ ತ. ಸು. ಶಾಮರಾಯರು ಸದಸ್ಯರು
೫ ಡಾ|| ಕೆ. ಕೃಷ್ಣಮೂರ್ತಿ ಸದಸ್ಯರು
೬ ಡಾ|| ಎಚ್. ಪಿ. ಮಲ್ಲೇದೇವರು ಸದಸ್ಯರು
೭ ಶ್ರೀ ಸಾ. ಮಂಚಯ್ಯ ಸದಸ್ಯ-ಕಾರ್ಯದರ್ಶಿ

ಸಮಿತಿಗೆ ಪರಿಶೀಲನೆಗಾಗಿ ವಹಿಸಿದ ವಿಷಯಗಳು:
ಸಂಸ್ಕೃತ ಶಾಲಾ ಪಠ್ಯವಸ್ತುವಿನಲ್ಲಿ ಅಭ್ಯಾಸದ ವಿಷಯವಾಗಿ ಉಳಿಯಬೇಕೆ?
ಉಳಿಯಬೇಕಾದರೆ ಕನ್ನಡಕ್ಕೆ ಪರ್ಯಾಯವಾಗದೆ ಉಳಿಸುವುದು ಹೇಗೆ?
ತ್ರಿಭಾಷಾಸೂತ್ರದಂತೆ ಕನ್ನಡ ಕಡ್ಡಾಯ ಮಾಡಿ ಉಳಿದೆರಡು ಭಾಷೆಗಳ ಆಯ್ಕೆಯ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೆ ಬಿಡುವುದು ಸೂಕ್ತವೆ?

ಸಮಿತಿಯನ್ನು ರಚಿಸಿದ ಸರ್ಕಾರಿ ಆಜ್ಞೆಯಂತೆ ಸಮಿತಿ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು.
ಸಮಿತಿಯ ಪ್ರಥಮಸಭೆ ಅಧ್ಯಕ್ಷರಾದ ಡಾ: ವಿ. ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿಯ ಕೋಣೆಯಲ್ಲಿ ದಿನಾಂಕ ರಲ್ಲಿ ನಡೆಯಿತು. ಅಂದು ಪ್ರಮುಖವಾಗಿ ಚರ್ಚೆಯಾದ ವಿಷಯ ಸಮಿತಿ ಅನುಸರಿಸಬೇಕಾದ ಕಾರ್ಯವಿಧಾನ ಸಮಸ್ಯೆಯ ಗಂಭೀರತೆಯ ಅರಿವಿದ್ದ ಅಧ್ಯಕ್ಷರು ಮತ್ತು ಸದಸ್ಯರು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಿಗಿರುವ ಸ್ಥಾನಮಾನಗಳು-ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಗಳ ಮತ್ತು ಅಲ್ಪಸಂಖ್ಯಾತರ ಭಾಷೆಗಳ ಸ್ಥಾನ-ಇತರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ದೊರೆತಿರುವ ಸೌಲಭ್ಯಗಳು-ಭಾಷ ಅಲ್ಪಸಂಖ್ಯಾತರಿಗೆ ರಾಜ್ಯಾಂಗದತ್ತವಾಗಿರುವ ಸೌಲಭ್ಯಗಳು ಕನ್ನಡವನ್ನು ಆಡಳಿತಭಾಷೆಯೆಂದು ಘೋಷಿಸಿದ ಸರ್ಕಾರದ ನಿಲುವು-ಕರ್ನಾಟಕದಲ್ಲಿ ಆಡಳಿತಗಾರರ, ಶಿಕ್ಷಣ ತಜ್ಞರ, ಶಿಕ್ಷಕರ, ಸಾಹಿತಿಗಳ, ಸಂಘ ಸಂಸ್ಥೆಗಳ-ಅಲ್ಪಸಂಖ್ಯಾತರ ಪ್ರತಿಕ್ರಿಯೆ-ಶ್ರೀಸಾಮಾನ್ಯರ ಅಭಿಪ್ರಾಯ-ಇವುಗಳನ್ನು ಅರಿತು, ಅವುಗಳನ್ನು ತುಲನಮಾಡಿ ನಿರ್ಣಯ ತೆಗೆದುಕೊಳ್ಳಬೇಕೆಂದು ನಿರ್ಧರಿಸಿತು. ಅದರಂತೆ ಮೈಸೂರು, ಮಂಗಳೂರು, ಬೆಂಗಳೂರು, ಧಾರವಾಡ ಮತ್ತು ಬೆಳಗಾಂವಿಗಳಲ್ಲಿ ಸಂದರ್ಶನ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಯಿತು. ಬಿಜಾಪುರದಲ್ಲಿ ಸಂದರ್ಶನಕ್ಕೆ ಪರಿಸ್ಥಿತಿ ಅನುಕೂಲವಾಗಿಲ್ಲದುದರಿಂದ ಅಲ್ಲಿಂದ ಮುಂದಿನ ಪ್ರವಾಸವನ್ನು ರದ್ದುಪಡಿಸಿ ಅಲ್ಲಿಯವರೆಗೆ ಸಂಗ್ರಹಿಸಿದ್ದ ಅಭಿಪ್ರಾಯಗಳ ಆಧಾರದ ಮೇಲೆ ಶೈಕ್ಷಣಿಕ ತತ್ವವನ್ನೆ ಪ್ರಧಾನವಾಗಿಟ್ಟುಕೊಂಡು ಸಮಿತಿ ವರದಿಯನ್ನು ತಯಾರಿಸಿದೆ. ಅಧ್ಯಕ್ಷರು ವರದಿಯ “ಮೊದಲ ಮಾತು” ಎಂಬಲ್ಲಿ ಸಮಿತಿಯ ಧೋರಣದ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದಿನ ಭಾಷಾ ಶಿಕ್ಷಣ ಸಮಸ್ಯೆ: ಭಾಷೆಗಳು ಹಾಗೂ ಭಾಷಾ ಶಿಕ್ಷಣತತ್ವಗಳು

(೧) ಸಮಸ್ಯೆಯ ರೂಪುರೇಖೆ :
ಭಾಷೆಗಳನ್ನು ಕಲಿಸುವುದರ ಉದ್ದೇಶವೇನು? ರಾಜ್ಯದ ಲಕ್ಷೋಪಲಕ್ಷ ವಿದ್ಯಾರ್ಥಿಗಳಿಗೆ ನೈಜ ಜ್ಞಾನವನ್ನು ಸಾಧ್ಯವಿದ್ದಷ್ಟು ಸುಲಭವಾಗಿ ಒದಗಿಸಿಕೊಡುವ ಕ್ರಮ ಇದ್ದರೆ ಅದು ಯಾವುದು? ಕರ್ನಾಟಕ ರಾಜ್ಯದಲ್ಲಿ ಈಗಿನ ಹಾಗೂ ಮುಂಬರುವ ಪೀಳಿಗೆಗೆ ಜ್ಞಾನಾರ್ಜನೆಯ ಏರ್ಪಾಟೇನು? ಭಾಷಾಭ್ಯಾಸ ಉಳಿದ ವಿಷಯಗಳ ವ್ಯಾಸಂಗದೊಡನೆ ಹೇಗೆ ಹವಣಾಗಿ ಹೊಂದಿಕೊಂಡೀತು? ನಮ್ಮ ರಾಷ್ಟ್ರದ ಹಾಗೂ ರಾಜ್ಯದ ಇಂದಿನ ಪರಿಸ್ಥಿತಿಯಲ್ಲಿ ಈ ಪಠ್ಯ ಕ್ರಮಕ್ಕೆ ಯಾವ ಗುರಿಗಳಿರಬೇಕು? ಮಾಧ್ಯಮಿಕ ಶಿಕ್ಷಣದ ಹಂತವನ್ನು ಲಕ್ಷ್ಯದಲ್ಲಿಟ್ಟು ಇವೇ ಮೊದಲಾದ ಪ್ರಶ್ನೆಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ. ರಾಜ್ಯದ ಮಕ್ಕಳನ್ನು ಕಣ್ಣೆದುರಿಗಿರಿಸಿಕೊಂಡು ಈ ಕ್ರಮವನ್ನು ನಾವು ರೂಪಿಸಬೇಕಾಗುವುದು. ಕೆಲವರು ಸಿರಿವಂತರ ಮಕ್ಕಳು ಹುಟ್ಟಿದ ಹಲವಾರು ತಿಂಗಳುಗಳಲ್ಲಿಯೇ ‘ಪಪಾ’ ‘ಮಮಾ’ ಎಂದು ಬಾಯ್ತೆರೆಯಬಹುದು. ಒಂದು ಕಠಿಣ ಪರಂಪರೆಯ ಪರಿಸರದಲ್ಲಿ ಬೆಳೆದ ಮಕ್ಕಳ ಅಭ್ಯಾಸ ಸಂಸ್ಕೃತ ಶಬ್ದಗಳಿಂದ ಪ್ರ್ರರಂಬಹವಾಗಬಹುದು. ಆದರೆ ಭಾಷೆಯ ತಳಹದಿಯ ಮೇಲೆ ರಚಿಸಿದ ರಾಜ್ಯದಲ್ಲಿಯ ಬಹುಸಂಖ್ಯಾತರ ಮಕ್ಕಳು ತಮ್ಮ ಮಾತೃಭಾಷೆಯ (ಎಂದರೆ ಮಾತೃಭಾಷೆ ಎಂದೇ ರಾಜ್ಯ ಭಾಷೆಯಾಗಿರುವ ಭಾಷೆಯ ಶಬ್ದಗಳನ್ನು ಕಲಿತು ಮಾತನಾಡುತ್ತವೆ. ಆ ರಾಜ್ಯದಲ್ಲಿಯ ಅಲ್ಪಸಂಖ್ಯಾತರ ಮಾತೃಭಾಷೆಗಳಲ್ಲಿ ಬಾಯ್ದೆರೆದು ಮಕ್ಕಳು ಅವನ್ನು ಕಲಿತು, ತಮ್ಮ ಸುತ್ತಣ ಪರಿಸರದಲ್ಲಿ ಸಹಜವಾಗಿ ವ್ಯಾಪಿಸಿರುವ ರಾಜ್ಯಭಾಷೆಯನ್ನೂ ಅನಾಯಾಸವಾಗಿ ಕಲಿಯುತ್ತವೆ.

ಇವೆರಡನ್ನೂ ಮೀರಿ ಉಚ್ಛ ಶಿಕ್ಷಣಕ್ಕಾಗಿ ಹಾಗೂ ಉದ್ಯೋಗಕ್ಕೋಸ್ಕರ ಮಕ್ಕಳು ಬೇರೆ ಭಾಷೆಗಳನ್ನು ಕಲಿತುಕೊಳ್ಳಬೇಕಾದೀತು. ಯಾವ ದಿಕ್ಕನ್ನು ಹಿಡಿದು ಅವರು ಮುಂದುವರಿಯುವರೆಂಬುದರ ಮೇಲೆ ಈ ಬೇರೆ ಭಾಷೆ ಇಲ್ಲವೆ ಭಾಷೆಗಳ ನಿರ್ಣಯವಾಗಬಹುದು. ಅಧಿಕೃತ ಅಂತರರಾಜ್ಯ ಸಂಪರ್ಕ ಭಾಷೆಯಾದ ಹಿಂದಿ ಸಹಸಂಪರ್ಕ ಭಾಷೆ ಹಾಗೂ ಆಧುನಿಕ ಪ್ರಪಂಚ ವಿಜ್ಞಾನದ ಭಾಷೆ ಮತ್ತು ಅಂತರ್ ರಾಷ್ಟ್ರೀಯ ಸಂಪರ್ಕ ಭಾಷೆಯಾದ ಇಂಗ್ಲಿಷು, ನೆಲೆಸಬೇಕೆಂದು ಅಪೇಕ್ಷಿಸಿರುವ ನೆರೆಹೊರೆಯ ರಾಜ್ಯ ಇಲ್ಲವೆ ಭಾರತದ ಯಾವದೊಂದು ರಾಜ್ಯದಲ್ಲಿಯ ಭಾಷೆ. ಉದ್ಯೋಗದ ದೃಷ್ಟಿಯಿಂದ ಅತ್ಯಂತ ಸೀಮಿತವಾದ ಅಂದರೆ ಪ್ರಾಚೀನ ಸಂಸ್ಕೃತಿ ಸಾಹಿತ್ಯಗಳ ಅಭ್ಯಾಸದ ದೃಷ್ಟಿಯಿಂದ ಅಮೂಲ್ಯವಾದ ಸಂಸ್ಕೃತ, ಫ್ರೆಂಚ್ ಇಲ್ಲವೆ ಜರ್ಮನ್‌ದಂತಹ ವಿದೇಶೀಯ ಭಾಷೆ-ಹೀಗೆ ಅನೇಕ ಭಾಷೆಗಳಲ್ಲಿ ಒಂದನ್ನು ಆಯ್ದುಕೊಳ್ಳಲು ವಿದ್ಯಾರ್ಥಿಯು ಇಚ್ಛಿಸಬಹುದು. ಆತನಿಗೆ ತನ್ನ ಮಾತೃ ಭಾಷೆಯ ಅಭ್ಯಾಸವನ್ನು ಮುಂದುವರೆಸುವ ಲವಲವಿಕೆಯೂ ಇರಬಹುದು.
ಇಂದಿನ ಶಿಕ್ಷಣ ಪರಿಸ್ಥಿತಿಯ ಬೆಳಕಿನಲ್ಲಿ ಈ ಭಾಷೆಗಳನ್ನು ಒಂದಕ್ಕೊಂದು ಹೋಲಿಸಿ ತೂಗಿ ನೋಡುವುದು ಪ್ರಯೋಜನಕರವಾದೀತು. ಹೀಗೆ ಮಾಡುವುದರಿಂದ ಇಂದಿನ ವಿದ್ಯಾರ್ಥಿಗಳ ಶಿಕ್ಷಣದ ದೃಷ್ಟಿಯಿಂದ ಈ ಭಾಷೆಗಳ ಹೆಚ್ಚು-ಕಡಿಮೆ ಇಲ್ಲವೆ ತರತಮ ಮಹತ್ವದ ಅರಿವಾದೀತು.

(೨) ಪ್ರಾದೇಶಿಕ ಭಾಷೆ (ರಾಜ್ಯಭಾಷೆ) :
ಭಾಷಾ ತತ್ವದ ಮೇಲೆ ಭಾರತ ದೇಶವನ್ನು ರಾಜ್ಯಗಳನ್ನಾಗಿ ಆಡಳಿತದ ಸಲುವಾಗಿ ವಿಂಗಡಿಸಲಾಗಿದೆ. ಒಂದು ಭಾಷೆಯನ್ನಾಡುವ ಜನ ಏಕಮೇವವಾದ ರಾಜ್ಯದ ಆಡಳಿತಕ್ಕೆ ಒಳಪಟ್ಟಾಗ ಆಡಳಿತ ಸುಗಮ ಹಾಗೂ ಪ್ರಗತಿಪರವಾಗಿ ಅದರಲ್ಲಿ ತುಂಬ ಹೊಂದಾಣಿಕೆಯಿರುತ್ತದೆಂಬುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ಹೊಂದಾಣಿಕೆಯನ್ನು ಇನ್ನಿಷ್ಟು ಪ್ರಬಲವಾಗಿಸಲು ಆ ಜನದ ಒಂದೇ ಆಡಳಿತದಲ್ಲಿ ಅಂತರ್ಗತವಾಗಿರುವ ಸಂಸ್ಕೃತಿ, ಸಾಹಿತ್ಯ ಹಾಗೂ ಇತಿಹಾಸಗಳು ಬಹಳ ಸಹಾಯಕವಾಗುತ್ತವೆ. ಹಿಂದಿನ ಪ್ರಾದೇಶಿಕ ವಿಭಾಗಗಳಿಗೆ ಒಂದು ಸುಸ್ಪಷ್ಟ ರೂಪವಿರಲಿಲ್ಲ. ಇಂದಿನ ಭಾಷಾ ರಾಜ್ಯಗಳಿಗೆ ಒಂದು ವ್ಯಕ್ತಿತ್ವವಿದೆ.

ಈ ಜನದೊಡನೆ ಉಳಿದ ಭಾಶೆಗಳನ್ನು ಮಾತನಾಡುವ ಭಾರತೀಯರು ಬಾಳುತ್ತಾರೆ. ಬಾಳಬೇಕಾಕಾಗುತ್ತದೆ. ತಮ್ಮ ತಮ್ಮ ಭಾಷಾ ರಾಜ್ಯಗಳಲ್ಲಿ ಪ್ರಭುತ್ವವನ್ನು ಹೊಂದಿದ ಭಾಷೆಗಳು ಇಲ್ಲಿ ಅಲ್ಪಸಂಖ್ಯಾತವಾಗುತ್ತವೆ. ಒಂದು ರಾಜ್ಯದಲ್ಲಿ ಅಲ್ಪಸಂಖ್ಯಾತ ಭಾಷೆಗಳನ್ನು ಮಾತನಾಡುವ ಜನರ ಮಾರ್ಗದರ್ಶನಕ್ಕಾಗಿ ಕೆಲವು ನಿಯಮಗಳಿವೆ. ಉದಾಹರಣಾರ್ಥ-ವಿದ್ಯಾರ್ಥಿಗಳು ಇಂಥಾ ಒಂದು ಭಾಷೆಯನ್ನು ಮಾತನಾಡುವವರಿದ್ದರೆ ಅವರಿಗೆ ಅಗತ್ಯವಾದ ಶಿಕ್ಷಣ ಸೌಲಭ್ಯಗಳನ್ನು ಅವರ ಮಾತೃಭಾಷೆಯಲ್ಲಿ ರಾಜ್ಯ ಸರ್ಕಾರ ಒದಗಿಸಬೇಕು. ೧೯೬೯ ಜುಲೈ ತಿಂಗಳು ದಿನಾಂಕ ಏಳರ ಸರಕಾರದ ಆದೇಶದಂತೆ ಪ್ರತಿ ತರಗತಿಯಲ್ಲಿ ಭಾಷಾ ಅಲ್ಪಸಂಖ್ಯಾತರ ಮಕ್ಕಳು ೧೦ ಮಂದಿ ಇದ್ದು ಒಂದರಿಂದ ನಾಲ್ಕನೆ ತರಗತಿಯವರೆಗಿನ ಒಟ್ಟು ಮಕ್ಕಳ ಸಂಖ್ಯೆ ೩೦ ಇದ್ದರೆ ಅವರ ಮಾತೃಭಾಷೆಯ ಮೂಲ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. ಈ ಅನುಕೂಲ ಇದೇ ನಿಬಂಧನೆಯ ಮೇಲೆ ೫, ೬ ಮತ್ತು ೭ನೇ ತರಗತಿಯ ಮಕ್ಕಳಿಗೂ ದೊರಕಬೇಕು.

ಮೇಲಿನ ಸರ್ಕಾರಿ ಆಜ್ಞೆಯಂತೆ ಪ್ರೌಢಶಾಲೆಗಳಲ್ಲಿಯೂ ಭಾಷಾ ಅಲ್ಪ ಸಂಖ್ಯಾತರ ಮಕ್ಕಳ ಸಂಖ್ಯೆ ಪ್ರತಿ ತರಗತಿಯಲ್ಲಿ ೧೫ ಇದ್ದು ಮೂರೂ ತರಗತಿಗಳಿಂದ ಒಟ್ಟು ೪೫ ವಿದ್ಯಾರ್ಥಿಗಳಿದ್ದರೆ ಅವರಿಗೆ ಅವರ ಮಾತೃಭಾಷಾ ಮಾಧ್ಯಮದ ಮೂಲಕ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು.

ಆದರೆ ಈ ಅಲ್ಪಸಂಖ್ಯಾತರು ತಾವು ನೆಲೆಸಿದ ರಾಜ್ಯದ ಜನರೊಡನೆ ಒಂದಾಗಬೇಕಲ್ಲ? ಇದಕ್ಕಾಗಿಯೂ ನಿಯಮಗಳಿವೆ. ಪ್ರಾಥಮಿಕ ಮೂರನೆಯ ಇಯತ್ತೆಯಿಂದ ಪ್ರಾರಂಭಿಸಿ ೭ನೇ ಇಯತ್ತೆಯವರೆಗೆ ಅಲ್ಪಸಂಖ್ಯಾತರ ಶಾಲೆಯಲ್ಲಿ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು. ಇದಾದ ಮೇಲೆ ಹೈಸ್ಕೂಲಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಯು ರಾಜ್ಯಭಾಷೆಯನ್ನು ತನ್ನ ಮಾಧ್ಯಮವನ್ನಾಗಿ ಸ್ವೀಕರಿಸುವುದಲ್ಲದೆ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಕಲಿಯುತ್ತ ಎಸ್. ಎಸ್. ಎಲ್. ಸಿ. ಮುಗಿಸಿ ರಾಜ್ಯದ ವಾಣಿಜ್ಯ-ಉದ್ಯೋಗ ಸೇವಾವಕಾಶಗಳಲ್ಲಿ ಪ್ರಯೋಜನ ಪಡೆಯಬಹುದು.

ಅಲ್ಪಸಂಖ್ಯಾತರು ಈ ತತ್ವಗಳನ್ನು ಪಾಲಿಸದೆ ದ್ವೀಪದಂತೆ ಕನ್ನಡ ಜಲಾಶಯದಲ್ಲಿ ಇರಲು ಬಯಸಿದಾಗ ವಿರಸವೇಳುತ್ತದೆ : ಇದರಿಂದ ರಾಜ್ಯದ ಸಹಜೀವನದ ಹಾಗೂ ಭಾವೈಕ್ಯತೆಯ ಬಲವು ಕುಗ್ಗುತ್ತದೆ. ರಾಷ್ಟ್ರದ ದೃಷ್ಟಿಯಿಂದ ಏಕತೆಯನ್ನು ಹೆಚ್ಚು ಸುಗಮವಾಗಿ ಸಾಧಿಸಲೆಂದೇ ಭಾರತದಲ್ಲಿ ಭಾಷಾ ರಾಜ್ಯಗಳ ನಿರ್ಮಾಣವಾಗಿದೆ. ತಮ್ಮದೇ ಆದ ಭಾಷೆ, ಸಂಸ್ಕೃತಿಯ ಪರಂಪರೆ, ಇತಿಹಾಸದ ಅನನ್ಯತೆ-ಹೀಗೆ ಪ್ರತಿಯೊಂದು ಭಾಷಾ ರಾಜ್ಯವೂ ತನ್ನದೇ ಆದ ವ್ಯಕ್ತಿತ್ವವನ್ನು ಪಡೆದಿದೆ. ಇಂತಹ ಅನೇಕ ವ್ಯಕ್ತಿತ್ವಗಳು, ವಿವಿಧ ರಾಗಗಳು ಮೇಳನ ಸಂಗೀತದಲ್ಲಿ ಮಿಲಿತವಾಗುವಂತೆ ಭಾರತೀಯ ರಾಷ್ಟ್ರ ಪುರುಷನ ವ್ಯಕ್ತಿತ್ವದಲ್ಲಿ ಒಂದು ಸಮೃದ್ಧ ಏಕತೆಯನ್ನು ಪಡೆಯುತ್ತವೆ. ಆ ವ್ಯಕ್ತಿತ್ವವು ಅನನ್ಯವಾಗದೆ ರಾಷ್ಟ್ರದ ಏಕತೆಯೂ ಸಮೃದ್ಧವಾಗಲಾರದು. ಈ ಸಮೃದ್ಧಿಯಲ್ಲಿಯೇ ಭಾಷಾರಾಜ್ಯಗಳ ಶ್ರೇಯಸ್ಸು ಹಾಗೂ ಸಫಲತೆ ಇದೆ. ಪ್ರಾಂತೀಯತೆಯ ಹೆಸರಿನಲ್ಲಿ ನಾವು ರಾಷ್ಟ್ರೀಯತೆಯನ್ನು ಸಂಕುಚಿತಗೊಳಿಸಬಾರದು. ಅದೇ ರೀತಿಯಲ್ಲಿ ಭಾಷಾ ರಾಜ್ಯದ ವ್ಯಕ್ತಿತ್ವವನ್ನೊಡೆದು ರಾಷ್ಟ್ರೀಯತೆಯ ಕಲ್ಪನೆಗೆ ಒಂದು ಕೃತ್ರಿಮ ವಿಶಾಲತೆಯನ್ನು ತಂದೊಡ್ಡುವನೆಂದು ತಿಳಿಯಬಾರದು. ಈ ದಿಕ್ಕಿನಲ್ಲಿ ಕನ್ನಡಿಗರು ತಾವು ಹೋದಲ್ಲೆಲ್ಲ ತಮ್ಮ ಹಕ್ಕುಗಳನ್ನು ಸಹ ಇದುವರೆಗೆ ಚೆನ್ನಾಗಿ ಸಾಧಿಸಿಲ್ಲ. ಕರ್ನಾತಕದಲ್ಲಿ ಬಂದು ನೆಲೆಸಿದ ಕೆಲವು ಅಲ್ಪಸಂಖ್ಯಾತರು ಇದಕ್ಕೆ ತೀರ ವಿರುದ್ಧವಾಗಿ ಇನ್ನೂ ತಾವು ತಮ್ಮ ಭಾಷಾರಾಜ್ಯದಲ್ಲಿಯೇ ಇರುವಂತೆ ವ್ಯವಹರಿಸುತ್ತಾರೆ. ಇದು ಉಭಯತ್ರರಿಗೂ ಕ್ಷೇಮಕರವಲ್ಲ.

ರಾಜ್ಯದಲ್ಲಿ ನೆಲೆಸಿದ ಎಲ್ಲ ಜನಕ್ಕೆ ರಾಜ್ಯಭಾಷೆಯು ಕಡ್ಡಾಯದ ಭಾಷೆಯಾಗಿ ಪಠ್ಯಕ್ರಮದಲ್ಲಿರುವುದು ಯುಕ್ತವೂ, ನ್ಯಾಯವೂ ಆಗಿದೆ. ಆಡಳಿತದ ಭಾಷೆ, ಸಾರ್ವಜನಿಕ ಸೇವಾ ಆಯೋಗದ ಭಾಷೆ, ಉಚ್ಛಶಿಕ್ಷಣದ ಮಾಧ್ಯಮ-ಹೀಗೆ ಕರ್ನಾಟಕದಲ್ಲಿ ನಾಳೆಗಿಂತ ಇಂದೇ ಕನ್ನಡವಾಗಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ನೆಲೆಸಿದವರು-ಅವರು ಎಲ್ಲಿಂದಲೇ ಬಂದಿರಲಿ-ಕನ್ನಡಿಗರಾಗುವುದು ಅವರ ಹಿತದೃಷ್ಟಿಯಿಂದಲೇ ಅವಶ್ಯವಾಗಿದೆ. ಆಸ್ತಿಪಾಸ್ತಿ, ಮನೆಮಠ, ಉದ್ಯೋಗ, ನೌಕರಿ-ಇವೆಲ್ಲ ವಿಷಯದಲ್ಲೂ ಅವರು ಕನ್ನಡವನ್ನು ಬಳಸಬೇಕಾಗುತ್ತದೆ. ಹತ್ತುವರ್ಷಗಳಿಗಿಂತ ಹೆಚ್ಚುಕಾಲ ರಾಜ್ಯದಲ್ಲಿ ನೆಲೆಸಿದವರು ಕನ್ನಡಿಗರೆಂದೇ ಅರ್ಥ. ಅವರ ಭವಿಷ್ಯವೂ ಕನ್ನಡಿಗರ ಭವಿಷ್ಯವೇ ಆಗುತ್ತದೆ. ಇಂಥವರ ಮಕ್ಕಳುಮರಿ ಕನ್ನಡವನ್ನು ಕಡ್ಡಾಯವಾಗಿ ಪ್ರಾಥಮಿಕ-ಮಾಧ್ಯಮಿಕ ಹಂತಗಳಲ್ಲಿ ಕಲಿಯುವುದರಿಂದ ಮಾತ್ರ ಅವರ ಸಮಸ್ಯೆಗೆ ಯೋಗ್ಯಪರಿಹಾರ ದೊರೆಯುತ್ತದೆ. ಕೇಂದ್ರ ಸರ್ಕಾರ ದೇಶದ ಬೇರೆಬೇರೆ ಭಾಗಗಳಲ್ಲಿ ತನ್ನ ನೌಕರಿರಾಗಿ ಕೇಂದ್ರೀಯ ವಿದ್ಯಾಶಾಲೆಗಳನ್ನು ತೆರೆದಿದೆ. ಇಂಥವರಲ್ಲಿ ಅಲ್ಲಲ್ಲಿ ಒಬ್ಬರಿಬ್ಬರು ಆ ಶಾಲೆಗಳಲ್ಲಿ ಪ್ರವೇಶದೊರೆಯದೆ ಉಳಿದರೆ ಅವರು ತಕ್ಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಕರ್ನಾಟಕದಲ್ಲಿಯೇ ನೆಲೆಸಿದ ವರ್ತಕರೂ, ಉದ್ಯೋಗಸ್ಥರೂ ಕನ್ನಡಿಗರಾಗಿಯೇ ಮುಂದುವರಿಯುತ್ತಾರೆ. ಉಳಿದವರು-ಅಂದರೆ ತಾತ್ಪೂರ್ವಿಕವಾಗಿ ಬಂದವರು-ತಾತ್ಪೂರ್ವಿಕ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಒಟ್ಟಾರೆ ಈ ವಿಷಯದಲ್ಲಿ ನಾವು ಅನುಸರಿಸಬೇಕಾದ ಧೋರಣವಿಷ್ಟು: ನಡು ನಡುವೆ ಎತ್ತರದ ಗೋಡೆಗಳೆದ್ದು ದೇಶದ ಏಕತೆಗೆ ಭಂಗ ತಂದಿರಬಾರದು, ಅದರ ಜೊತೆಗೆ ಒಂದಿಲ್ಲೊಂದು ನೆವದಿಂದ ಒಂದು ರಾಜ್ಯದಭದ್ರತೆಗೆ ಘಾತುಕವಾಗುವ ಧೋರಣೆಗಳಾಗಲಿ, ವರ್ಗಗಳಾಗಲಿ ತಲೆಯೆತ್ತಿರಬಾರದು.

ಕನ್ನಡವು ಆಡಳಿತ ಭಾಷೆಯಾಗಿದೆ. ಅದು ಏಕೈಕ ರಾಜ್ಯಭಾಷೆಯಾಗುವ ದಿನ ಕರ್ನಾಟಕದಲ್ಲಿ ಸಮೀಪಿಸಿದೆ. ಸಾರ್ವಜನಿಕ ಸೇವಾ ಆಯೋಗ (ಪಬ್ಲಿಕ್ ಸರ್ವಿಸ್ ಕಮಿಷನ್)ದಲ್ಲಿ ಇದರ ಅರಿವು ಇನ್ನೂ ಮೂಡಿ ಅದರ ಪಾಲನೆಯಾಗಬೇಕಾಗಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಮಾಧ್ಯಮದ ಅವಶ್ಯಕತೆಯೂ ಪ್ರಯೋಜನವೂ ವಿದ್ಯಾರ್ಥಿಗಳಿಗೂ ಅವರ ಪಾಲಕರಿಗೂ ಮನದಟ್ಟಾಗಬೇಕಾಗಿದೆ. ಇಂಗ್ಲಿಷಿನ ಭಾಷಾನೈಪುಣ್ಯವನ್ನು ಅದನ್ನೊಂದು ಭಾಷೆಯೆಂದಭ್ಯಸಿಸಿ ಪಡೆಯಬೇಕು. ಬರೀ ಮಾಧ್ಯಮವಾಗಿ ಉಳಿಸಿಕೊಂಡರೆ ಶಿಕ್ಷಣಕ್ಕೆ ಧಕ್ಕೆ ಬಂದು ಇಂಗ್ಲಿಷಿನ ಜ್ಞಾನ ಸೊನ್ನೆಯಾಗುತ್ತದೆಂಬ ದಾರುಣ ಸತ್ಯವನ್ನು ಅವರು ಕಂಡುಕೊಳ್ಳಬೇಕಾಗಿದೆ. ಮಾಧ್ಯಮಿಕ ಶಿಕ್ಷಣದ ಹಂತದಲ್ಲಿ ಮಾತ್ರ ಕನ್ನಡ ಮಾಧ್ಯಮವಾಗಿದೆ.
ರಾಜ್ಯ ಭಾಷೆಗೆ ರಾಜ್ಯದಲ್ಲಿ ಪ್ರಭುತ್ವವನ್ನು ಕಲ್ಪಿಸಿ ಒಂದು ರಾಜ್ಯದ ವ್ಯಕ್ತಿತ್ವವನ್ನು ಪೋಷಿಸಿದಂತೆ ದೇಶಕ್ಕೆ ಹಿಂದಿಯನ್ನು ಅಂತರ್ ರಾಜ್ಯ ಸಂಪರ್ಕಭಾಷೆಯನ್ನಾಗಿ ಮಾಡಿ ಮತ್ತು ಇಂಗ್ಲಿಷನ್ನು ಸಹ ಸಂಪರ್ಕಭಾಷೆಯನ್ನಾಗಿ ಮಾಡಿ ಕೇಂದ್ರ ಸರ್ಕಾರವು ದೇಶದ ಏಕಮೇವತೆಯನ್ನು ರಕ್ಷಿಸುವ ಪ್ರಯತ್ನದಲ್ಲಿದೆ.

ಕರ್ನಾಟಕ ರಾಜ್ಯ ನಿರ್ಮಾಣವಾಗಿ ಇಪ್ಪತ್ತನಾಲ್ಕು ವರ್ಷಗಳಾಗಿ ಹೋಗಿವೆ. ಉಳಿದ ಭಾಷಾ ರಾಜ್ಯಗಳು ಪ್ರಗತಿಯ ಪಥದಲ್ಲಿ ಮುಂದುವರಿಯುತ್ತಿವೆ. ಆದರೆ ದುರ್ದೈವದಿಂದ ಕರ್ನಾಟಕವು ಮಾತ್ರ ಇನ್ನೂ ತನ್ನನ್ನೇ ತಾನು ರೂಪಿಸಿಕೊಳ್ಳುವುದಿರಲಿ, ಅರಿತುಕೊಂಡಿಲ್ಲ ಸಹ. ಆ ಸ್ವಯಂನಿಯಂತ್ರಣದ ದಿನಗಳಿಗಾಗಿ ನಾವಿನ್ನೂ ಕಾಯಬೇಕಾಗಿದೆ.

(೩) ಅಲ್ಪಸಂಖ್ಯಾತರ ಭಾಷೆಗಳು
ಒಂದು ರಾಜ್ಯದಲ್ಲಿಯ ಅಲ್ಪಸಂಖ್ಯಾತರ ಮಾತೃಭಾಷೆಗಳೂ ಬೆಳೆಯುವ ಭಾಷೆಗಳಾಗಿವೆ. ಅವು ದೇಶದ ಒಂದಿಲ್ಲೊಂದು ರಾಜ್ಯದಲ್ಲಿ ವಾಡಿಕೆಯಾಗಿ ಆಡಳಿತದ ಭಾಷೆ ಹಾಗೂ ಶಿಕ್ಷಣದ ಮಾಧ್ಯಮಗಳಾಗಿವೆ. ಬಹುತೇಕ ಎಲ್ಲಾ ಅರ್ವಾಚೀನ ಭಾಷೆಗಳಲ್ಲಿ ಪ್ರಾಚೀನ ಹಾಗೂ ಅರ್ವಾಚೀನ ನಾಗರೀಕತೆಯ ಉಜ್ವಲ ಸಾಹಿತ್ಯವಿದೆ. ಚಿಕ್ಕಮಕ್ಕಳ ಶಿಕ್ಷಣವು ಮಾತೃಭಾಷೆಯಲ್ಲಿ ಪ್ರಾರಂಭವಾಗಬೇಕೆಂಬುದು ಇಂದಿಗೆ ಸರ್ವಮಾನ್ಯ ತತ್ವವಾಗಿದೆ. ಹುಟ್ಟಿದಾರಭ್ಯ ಆ ಭಾಷೆಯ ವಾತಾವರಣದಲ್ಲಿ ಮಗು ಬೆಳೆಯುತ್ತದೆ. ಆ ಮಗುವಿನ ಜ್ಞಾನ ಬೆಳೆಯಬೇಕಾದರೆ ಮಾತೃ ಭಾಷೆಯ ದ್ವಾರಾ ಅದು ಸಹಜವಾಗಿ ಬೆಳೆಯಬಲ್ಲದು. ಮೇಲಿನ ವರ್ಗದ ಮಕ್ಕಳು ಇಂಗ್ಲಿಷು ಮಾಧ್ಯಮವಿದ್ದ ಶಾಲೆಗಳಿಗೆ ಹೋಗುವುದನ್ನು ನಾವು ನೋಡುತ್ತೇವೆ. ಇಂಗ್ಲಿಷ್ ಮಗುವಿನ ಮಾತೃಭಾಷೆಯಾಗಿದ್ದರೆ ಇದು ಸಹಜ; ಇಲ್ಲದಿದ್ದರೆ ಶಿಕ್ಷಣವೇ ಕೃತಕವಾಗಿ ಆ ಮಗುವಿನ ಸಂಸ್ಕೃತಿಯಲ್ಲಿ ಇರಬೇಕಾದ ಕೆಲವಂಶಗಳು ಇಲ್ಲವಾಗುತ್ತವೆ. ರಾಜ್ಯದಿಂದ ರಾಜ್ಯಕ್ಕೆ ವರ್ಗವಾಗುವ ಇಲ್ಲವೆ ಸ್ಥಳಾಂತರಿಸುವ ಅಧಿಕಾರಿಗಳಿಗೆ ಇಲ್ಲವೆ ವರ್ತಕರಿಗೆ ಇದು ಅನಿವಾರ್ಯವಾಗಬಹುದು. ಆದರೆ ರಾಜ್ಯಭಾಷೆಯ ಮಾಧ್ಯಮವಿದ್ದ ಶಾಲೆಗಳಲ್ಲಿಯ ಶಿಕ್ಷಣ ಕ್ರಮವನ್ನೇ ಉಚ್ಛಮಟ್ಟಕ್ಕೇರಿಸುವುದು ರಾಜ್ಯ ನಿವಾಸಿಗಳ ಹಿತದ ದೃಷ್ಟಿಯಿಂದ ಈ ಸಮಸ್ಯೆಗೆ ಪರಿಹಾರವಾಗಿದೆ. ಆಗ ರಾಜ್ಯದ ಮಕ್ಕಳಿಗೆ ನೈಜಶಿಕ್ಷಣ ದೊರೆಯುತ್ತದೆ.

ಸಾಮಾನ್ಯವಾಗಿ ನಮ್ಮ ದೇಶದ ಪ್ರತಿಯೊಂದು ರಾಜ್ಯದಲ್ಲಿ ಅಲ್ಪಸಂಖ್ಯಾತ ಜನಗಳಿಗಾಗಿ ಕೆಲವೊಂದು ನಿಯಮಗಳನ್ನು ಅನುಸರಿಸಿ ಪ್ರಾಥಮಿಕ ಹಂತದಲ್ಲಿ ಒಂದರಿಂದ ನಾಲ್ಕನೆ ತರಗತಿಗಳಲ್ಲಿ ಪ್ರತಿ ತರಗತಿಯಲ್ಲೂ ೧೦ ವಿದ್ಯಾರ್ಥಿಗಳಿದ್ದು ನಾಲ್ಕೂ ತರಗತಿಗಳಿಂದ ಒಟ್ಟು ೩೦ ವಿದ್ಯಾರ್ಥಿಗಳಿದ್ದರೆ ಆಯಾ ಜನಗಳ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಒದಗಿಸುವ ಶಾಲೆಗಳಿವೆ. ಆದರೆ ರಾಷ್ಟ್ರದಲ್ಲಿ ಪ್ರಚಲಿತವಿರುವ ಯೋಜನೆಯ ಪ್ರಕಾರ ರಾಜ್ಯ ಭಾಷೆಯನ್ನು ಇಂತಹ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಕಲಿಸುವ ವ್ಯವಸ್ಥೆ ಎಲ್ಲ ಕಡೆಗೆ ಜಾರಿಯಲ್ಲಿಲ್ಲವೆಂಬುದು ವಿಷಾದಕರ. ಉದಾಹರಣೆಗೆ ಕರ್ನಾಟಕದಲ್ಲಿರುವ ಉರ್ದು ಪ್ರಾಥಮಿಕ ಶಾಲೆಗಳಲ್ಲಿ ಹಲವಾರೆಡೆಗೆ ಕನ್ನಡವನ್ನು ಕಲಿಸುವ ವ್ಯವಸ್ಥೆಯೇ ಇಲ್ಲವೆಂದು ಒರ್ವ ಉರ್ದು ಶಾಲಾ ಸಂಸ್ಥೆಯ ಸಂಚಾಲಕರು ಸಾಕ್ಷಿ ಇತ್ತರು. ಇದು ವಿಷಾದಕರ ಈ ಪರಿಸ್ಥಿತಿಯನ್ನು ಬೇಗನೆ ಹೋಗಲಾಡಿಸುವುದು ಅವಶ್ಯವಾಗಿದೆ.

ಅಲ್ಪಸಂಖ್ಯಾತ ಜನಗಳ ಭಾಷೆಯನ್ನಾಡುವ ಮಗು ತನ್ನ ಮಾಧ್ಯಮಿಕ ಹಾಗೂ ಉಚ್ಚಶಿಕ್ಷಣವನ್ನು ತಾನಿದ್ದ ರಾಜ್ಯದಲ್ಲಿಯೇ ಪಡೆಯಬೇಕಾಗುತ್ತದೆ. ತಾನು ಹೋದಲ್ಲೆಲ್ಲ ಕಿವಿಗೆ ಬೀಳುತ್ತಿರುವ ಪ್ರಾದೇಶಿಕ ಭಾಷೆಯನ್ನು ಆ ಮಗುವಿನ ದ್ವಿತೀಯ ಭಾಷೆಯಾಗಿ ಈ ಹಂತದಲ್ಲಿ ಅಭ್ಯಸಿಸಿದರೆ ಮುಂದೆ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ತನ್ನ ಮಾಧ್ಯಮಿಕ ಶಿಕ್ಷಣವನ್ನು ಮುಂದುವರಿಸಬಹುದು. ಪ್ರಾದೇಶಿಕ ಭಾಷೆಯ ಈ ವಿಶೇಷ ಜ್ಞಾನ ಅತ್ಯಗತ್ಯವಾಗಿದೆ ಏಕೆಂದರೆ ಅದು ರಾಜ್ಯಭಾಷೆ. ಆಡಳಿತದ ಭಾಷೆ ಹಾಗೂ ರಾಜ್ಯದಲ್ಲಿಯ ವ್ಯವಹಾರದ ಭಾಷೆಯಾಗಿದೆ. ಪ್ರಾಥಮಿಕ ಹಂತದಲ್ಲಿ ಅದನ್ನು ದ್ವಿತೀಯ ಭಾಷೆಯಾಗಿ ಕಲಿತರೆ ಮುಂದೆ ಅದನ್ನು ಶಿಕ್ಷಣ ಮಾಧ್ಯಮವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಅಲ್ಪಸಂಖ್ಯಾತರ ಮಾತೃಭಾಷೆಗಳನ್ನೂ ಹಾಗೂ ಮಾಧ್ಯಮಿಕ ಹಂತದ ಶಿಕ್ಷಣ ಮಾಧ್ಯಮವನ್ನೂ ಕುರಿತು ಸರ್ಕಾರವು ಒಂದು ನಿರ್ದಿಷ್ಟ ಧೋರಣೆಯನ್ನು ಜಾಹೀರುಪಡಿಸುವುದು ಅಗತ್ಯವಾಗಿದೆ. ಈ ವಿಷಯದಲ್ಲಿ ಕೆಳಗಣ ಅಭಿಪ್ರಾಯಗಳನ್ನು ಸಮಿತಿಯು ವ್ಯಕ್ತಗೊಳಿಸಬಯಸುತ್ತದೆ.

(ಅ) ಅಲ್ಪಸಂಖ್ಯಾತರ ಮಾತೃಭಾಷೆಗಳು ಮಾಧ್ಯಮವಾಗಿದ್ದ ಪ್ರಾಥಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಯನ್ನು ದ್ವಿತೀಯ ಭಾಷೆಯಾಗಿ (೩ ರಿಂದ ೭ ನೆಯ ವರ್ಗಗಳಲ್ಲಿ) ಕಲಿಸುವುದು ಸರ್ವಮಾನ್ಯ ತತ್ವವಿದೆ. ಇದನ್ನು ಇಂತಹ ಎಲ್ಲ ಶಾಲೆಗಳಲ್ಲಿಯೂ ಕೂಡಲೆ ಜಾರಿಯಲ್ಲಿ ತರಬೇಕು.

(ಆ) ಕರ್ನಾಟಕ ರಾಜ್ಯದ ಧೋರಣೆ ಈ ವಿಷಯದಲ್ಲಿ ತುಂಬ ಉದಾರವಾಗಿದೆ. ಔದಾರ್ಯವು ಒಳ್ಳೆಯ ಗುಣವೇ. ಅದೆ ಈ ಗುಣದಲ್ಲಿ ಅನೇಕಸಲ ಅಜ್ಞಾನವು ಬೆರೆತಿರುತ್ತದೆ. ಒಮ್ಮೊಮ್ಮೆ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಗ್ರಾಂಟ್ ಅಂತೂ ಹೋಗಲಿ, ಪ್ರತ್ಯಕ್ಷ ಪರಿಪಾಠದಲ್ಲಿ ಮನ್ನಣೆ ಸಹ ದೊರೆತಿಲ್ಲವೆಂದು ಅಲ್ಲಿನ ಅಲ್ಪಸಂಖ್ಯಾತರಾದ ಕನ್ನಡಿಗರು ಪತ್ರಿಕೆಗಳಲ್ಲಿ ಬರೆಯುತ್ತಿರುತ್ತಾರೆ. ಆದರೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಿಗೆ ಮಾಧ್ಯಮಿಕ ಹಂತದಲ್ಲಿಯೂ ಅವರ ಭಾಷೆ ಮಾಧ್ಯಮವಾದ ಮಾಧ್ಯಮಿಕ ಶಾಲೆಗಳನ್ನು ತನ್ನ ವೆಚ್ಚದಿಂದ ಕೆಲವೆಡೆ ನಡೆಸುತ್ತಿರುವುದೂ ಉಂಟು. ಈ ತರಹದ ಔದಾರ್ಯ ಅನಿಷ್ಟವೆಂದು ಬೇರೆ ಹೇಳಬೇಕಾಗಿಲ್ಲ.

(ಇ) ಕನ್ನಡ ಜನತೆಯ ಮಕ್ಕಳಿಗೇ ಇನ್ನೂ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಸ್ಥಾಪಿಸದೆ ಇರುವಾಗ ಅಲ್ಪಸಂಖ್ಯಾತರಿಗಾಗಿ ಅವರ ಭಾಷಾ ಮಾಧ್ಯಮದ ಹೈಸ್ಕೂಲುಗಳನ್ನು ಸ್ಥಾಪಿಸುವುದು ಎಂತಹ ಔದಾರ್ಯ. ಆಧುನಿಕ ಭಾರತೀಯ ಭಾಷೆಯೊಂದನ್ನು ಮಾಧ್ಯಮವೆಂದು ಬಳಸಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಅಲ್ಪಸಂಖ್ಯಾತರ ವರ್ಗವೊಂದು ಮುಂದು ಬಂದರೆ ಅವರ ಭಾಷೆ ರಾಜ್ಯ ಭಾಷೆಯಾದ ರಾಜ್ಯದಲ್ಲಿ ಕನ್ನಡಕ್ಕಾಗಿ ಈ ಅವಕಾಶವನ್ನು ಆ ಸರ್ಕಾರ ಕಲ್ಪಿಸಿಕೊಟ್ಟಿದ್ದರೆ ನಾವೂ ಅವಶ್ಯವಾಗಿ ಕರ್ನಾಟಕದಲ್ಲಿ ಹಾಗೆ ಮಾಡಬಹುದು. ಸ್ಥಿತಿ ಇದಕ್ಕೆ ವಿಪರೀತವಾಗಿದ್ದರೆ ನಾವೂ ಬಿಗಿಯಾಗಿ ಇರಬೇಕು. ಕನ್ನಡ ಜನತೆಯ ಶೈಕ್ಷಣಿಕ ಕೊರತೆಗಳು ದೂರಾಗುವವರೆಗೆ ಕರ್ನಾಟಕ ಸರ್ಕಾರ ಈ ಸೌಲಭ್ಯವನ್ನು ಕೊಡಲೇ ಬಾರದು.

ಆದರೆ ಉಳಿದ ರಾಜ್ಯ ಭಾಷೆಗಳೂ ಕನ್ನಡದಂತೆ ವಿಕಸನ ಪೂರ್ಣ ಭಾಷೆಗಳು. ಕರ್ನಾಟಕದಲ್ಲಿಲ್ಲದಿದ್ದರೂ ತಮ್ಮ ತಮ್ಮ ರಾಜ್ಯಗಳಲ್ಲಿ ಅವು ರಾಜ್ಯ ಭಾಷೆಗಳಾಗಿವೆ. ತಮಿಳು ಹಾಗೂ ಕನ್ನಡದಷ್ಟು ಪ್ರಾಚೀನವಲ್ಲದಿದ್ದರೂ ಈ ಉಳಿದ ಭಾಷೆಗಳಲ್ಲಿಯ ಸಾಹಿತ್ಯೇತಿಹಾಸ ಸಾವಿರ ವರ್ಷಗಳ ಆಚೀಚೆಗೆ ಹೋಗುತ್ತದೆ. ವಿವಿಧ ಕಾರಣಗಳ ಮೂಲಕ ಬೇರೆ ಬೇರೆ ರಾಜ್ಯಗಳಿಗೆ ಉದ್ಯೋಗಕ್ಕಾಗಿ ಹಲವು ಕನ್ನಡಿಗರು ಹೋಗುವ ಪ್ರಸಂಗ ಉಂಟಾಗಬಹುದು. ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಭಾಷೆಯಾದ ಭಾಷೆಯೇ ಅಲ್ಲಿ ರಾಜ್ಯ ಭಾಷೆಯಾಗಿರಬಹುದು. ಅದನ್ನು ವಿವರವಾಗಿ ಅಭ್ಯಸಿಸುವುದರಿಂದ ಅದು ಮಾತೃ ಭಾಷೆಯಾಗಿದ್ದ ಅಲ್ಪಸಂಖ್ಯಾತರಿಗೂ ಹಲವಾರು ಕನ್ನಡಿಗರಿಗೂ ಅನುಕೂಲವಾಗಬಹುದು. ಹೀಗಾಗಿ ನಿರ್ದಿಷ್ಟ ಸಂಖ್ಯೆಯಲ್ಲಿ ಮಕ್ಕಳು ಕಲಿಯಬೇಕೆನಿಸಿದ ಆಧುನಿಕ ಭಾರತೀಯ ಭಾಷೆಯ ಅಭ್ಯಾಸಕ್ಕಾಗಿ ನಮ್ಮ ಹೈಸ್ಕೂಲುಗಳಲ್ಲಿ ವ್ಯವಸ್ಥೆ ಇರಬೇಕು. ೩೦ ವಿದ್ಯಾರ್ಥಿಗಳು ಒಂದು ಹೈಸ್ಕೂಲಿನಲ್ಲಿ ತಮ್ಮ ಮಾತೃ ಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರೆ ಅದು ಅವರಿಗೆ ಈಗಿನಂತೆ ಸಾಧ್ಯವಾಗಬೇಕು. ಈ ಸೌಲಭ್ಯವನ್ನು ಒದಗಿಸುವುದಕ್ಕೆ ಮುಂಚಿತವಾಗಿ ಆ ಭಾಷೆಯ ರಾಜ್ಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೂ ಅಂಥ ಸೌಲಭ್ಯ ದೊರೆತಿರುವುದೇ ಎಂದು ನಾವು ತಿಳಿಯಬೇಕು.

ಸಾಹಿತ್ಯಗಳ ತುಲನಾತ್ಮಕ ಅಭ್ಯಾಸ ಮಾಡಬೇಕೆಂದವರಿಗೆ ಮಾಧ್ಯಮಿಕ ಹಂತದಿಂದ ಆಯಾ ಸಾಹಿತ್ಯಗಳ ಹಾಗೂ ಭಾಷೆಗಳ ಅಭ್ಯಾಸವನ್ನು ಪ್ರಾರಂಭಿಸುವುದು ಒಳ್ಳೆಯದು. ಆಗ ಉಚ್ಛ ಶಿಕ್ಷಣದಲ್ಲಿ ಇದು ಕಠಿಣವಾಗಿ ಪರ್ಣಮಿಸುವುದಿಲ್ಲ. ತೆಲುಗು, ತಮಿಳು, ಮರಾಠಿ, ಮಲಯಾಳಂ, ಉರ್ದು ಮೊದಲಾದ ಭಾಷೆಗಳನ್ನು ಈ ದೃಷ್ಟಿಯಿಂದ ಕಾಣುವುದು ಅವಶ್ಯವಿದೆ. ಉರ್ದುವಿನಲ್ಲಿ ಹಾಗೆ ನೋಡಿದರೆ ಕಲ್ಬುರ್ಗಿಯೇ ಸಾಹಿತ್ಯದ ಉಗಮ ಸ್ಥಾನ. ಪ್ರಾರಂಭದ ಉರ್ದು ಸಾಹಿತ್ಯದಲ್ಲಿ (ದಖನಿ ಉರ್ದು) ಕನ್ನಡ ಹಾಗೂ ತೆಲುಗು ಶಬ್ದಗಳೂ ಕನ್ನಡ ಆಂಧ್ರ ರಾಜ್ಯಗಳ ವರ್ಣನೆಗಳೂ ಹೇರಳವಾಗಿವೆ. ಇವೆಲ್ಲ ಇನ್ನೂ ಕನ್ನಡಕ್ಕೆ ಬರಬೇಕಾಗಿದೆ. ಉಳಿದ ಭಾಷೆಗಳನ್ನು ಕುರಿತು ಕೆಲಸ ನಡೆದಿದೆಯಾದರೂ ಮಾಡುವುದು ಬೇಕಾದಷ್ಟಿದೆ. ಈ ಕ್ಷೇತ್ರದಲ್ಲಿ ದುಡಿಯಬಯಸುವವರು ತಮ್ಮ ಆಯ್ಕೆಯ ಭಾಷೆಯನ್ನು ಮಾಧ್ಯಮಿಕ ಹಂತದಿಂದಲೇ ಅಭ್ಯಸಿಸಬೇಕಾಗುವುದು.

ರಾಜ್ಯದ ಗಡಿನಾಡಿನ ಅಂಚಿನಲ್ಲಿದ್ದುಕೊಂಡು ಎರಡು ಭಾಷಾ ರಾಜ್ಯಗಳ ನಡುವೆ ವಾದವಿವಾದಕ್ಕೆ ಆಸ್ಪದ ಕೊಟ್ಟ ಚಿಕ್ಕ ಚಿಕ್ಕ ಪ್ರದೇಶಗಳೂ ಇವೆ. ಇದರ ಬಗ್ಗೆ ಇನ್ನೂ ವಾದವಿವಾದ ನಡೆಯುತ್ತಿದೆ. ಇಲ್ಲಿಯ ಭಾಷಾ ಶಿಕ್ಷಣದ ಬಗ್ಗೆ ಸರ್ಕಾರ ಒಂದು ಧೋರಣವನ್ನು ಸ್ವೀಕರಿಸಿ ಅದರಂತೆ ನಡೆದುಕೊಂಡು ಬಂದಿದೆ.

(೪) ಅಂತರ್ ರಾಜ್ಯ ಸಂಪರ್ಕ ಭಾಷೆಗಳು
ದೇಶದ ಏಕತೆಯನ್ನೂ ರಾಷ್ಟ್ರಾದ್ಯಂತದ ವ್ಯವಹಾರವನ್ನು ಸುಗಮವಾಗಿಸಲೆಂದೂ ಕೇಂದ್ರ ಸರ್ಕಾರವು ಎರಡು ಭಾಷೆಗಳನ್ನು ಹೆಸರಿಸಿದೆ. ಒಂದು, ಅಧಿಕೃತ ಸಂಪರ್ಕ ಭಾಷೆಯಾದ ಹಿಂದೀ, ಇನ್ನೊಂದು ಸಹ ಸಂಪರ್ಕಭಾಷೆಯಾದ ಇಂಗ್ಲಿಷು. ಈ ಸಹಸಂಪರ್ಕಭಾಷೆ ಅಂತರ್ ರಾಷ್ಟ್ರೀಯ ಸಂಪರ್ಕಭಾಷೆಯೂ ಆಗಿದೆಯಲ್ಲದೆ ಪ್ರಪಂಚ ಉಚ್ಛ ವಿಜ್ಞಾನದ ಮಾಧ್ಯಮವೂ ಆಗಿದೆ. ಬೇಕಾದರೆ ಇವುಗಳಲ್ಲಿ ಒಂದನ್ನು ವಿದ್ಯಾರ್ಥಿಯು ಅಭ್ಯಸಿಸಬಹುದು. ಇವುಗಳಿಗಿಂತ ಇನ್ನೊಂದು ಆಧುನಿಕ ಭಾರತೀಯ, ಇಲ್ಲವೆ ಅರ್ವಾಚೀನ ಪಾಶ್ಚಾತ್ಯ ಭಾಷೆಯ ಅಭ್ಯಾಸ ಅಗತ್ಯವೆನಿಸಿದರೆ ಹಾಗೆ ಮಾಡಬಹುದು.

ಈ ಸಂಪರ್ಕಭಾಷೆಗಳ ಸ್ವರೂಪ ಹಾಗೂ ಪ್ರಯೋಜನವನ್ನು ಸರಿಯಾಗಿ ತಿಳಿದುಕೊಳ್ಳಲು ಇಲ್ಲಿ ಕೆಲವು ಮಾತುಗಳನ್ನು ಹೇಳುವುದು ಅಗತ್ಯವಾಗಬಹುದು. ನಮಗೀಗಿದ್ದ ಕೇದ್ರಾಧಿಕೃತ ಭಾಷೆಗಳು ಎರಡು: ಇಂಗ್ಲಿಷು ಹಾಗೂ ಹಿಂದೀ. ದಕ್ಷಿಣ ಭಾರತ ಒಪ್ಪುವ ತನಕ ಈ ಸೂತ್ರ ಮುಂದುವರಿಯಬೇಕೆಂದು ಗೊತ್ತಾಗಿದೆ. ಹಿಂದೀ ಮಾತೃಭಾಷೆಯಾದವರನ್ನು ಈ ಸಮಸ್ಯೆ ಎದುರಿಸುವುದಿಲ್ಲ. ಅವರು ಹಿಂದಿಯನ್ನೂ ಹಾಗೂ ಇಂಗ್ಲಿಷನ್ನೂ ಪ್ರಾಥಮಿಕ ಹಂತದಿಂದ ಸಹ ಹಾಗೆ ಮನಸ್ಸು ಮಾಡಿದಲ್ಲಿ ಸ್ವೀಕರಿಸಬಹುದು. ಸಾಮಾನ್ಯವಾಗಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಭಾರತದ ಐಕ್ಯದ ದೃಷ್ಟಿಯಿಂದ ಅವರು ಕಲಿಯಬೇಕೆಂಬ ನಿರೀಕ್ಷೆಯಿದೆ. ಆದರೆ ಇದು ವ್ಯಾವಹಾರಿಕವಾಗಿ ಫಲಿಸುತ್ತಿಲ್ಲ. ಸಂಸ್ಕೃತ ಇಲ್ಲವೆ ಉರ್ದು ಅವರಿಗೆ ಇನ್ನೊಂದು ಭಾಷೆಯಾಗುತ್ತದೆ. ಏಕೆಂದರೆ ಸಂಸ್ಕೃತವು ಗೌಡೀಯ ಭಾಷೆಗಳ, ಅಂತೆಯೇ ಹಿಂದಿಯ-ತಾಯಿ. ಉರ್ದುವಿನ ಶಬ್ದಕೋಶ ಎಷ್ಟೋಮಟ್ಟಿಗೆ ಹಿಂದಿಗಿಂತ ಬೇರೆಯಾಗಿದೆಯೆಂಬುದು ನಿಜ. ಆದರೆ ಎರಡೂ ಭಾಷೆಗಳ ಮೈಕಟ್ಟು ವ್ಯಾಕರಣಗಳು ಒಂದಕ್ಕೊಂದು ಸಮೀಪವಾಗಿವೆ.

ನಮ್ಮ ದೇಶದಲ್ಲಿ ಭಾಷಾಶಿಕ್ಷಣದ ಅನುಷ್ಠಾನದಲ್ಲಿ ಕೇಂದ್ರ ಸರ್ಕರ ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡಿದೆ. ಕೇಂದ್ರದ ಸಾಹಿತ್ಯ ಅಕಾಡಮಿಯು ಭಾರತದಲ್ಲಿ ೨೨ ಭಾಷೆಗಳಿಗೆ ಸಾಹಿತ್ಯಸಂಪನ್ನವೆಂದು ಮನ್ನಣೆ ಇತ್ತಿದೆ. ಒಟ್ಟಾರೆ ಭಾರತದಲ್ಲಿ ಭಾಷೆ, ಉಪಭಾಷೆ-ಬರಿ ಬಳಕೆ ಮಾತಿನ ಭಾಷೆಗಳು ಸೇರಿ ಸುಮಾರು ೧೮೦ ಇವೆಯೆಂದು ತಜ್ಞರು ಹೇಳುತ್ತಾರೆ. ಇಂಥ ಭಾಷಾ ವೈವಿಧ್ಯವಿರುವಾಗ ಈ ದೇಶದಲ್ಲಿ ಸಾಧ್ಯವಿದ್ದಷ್ಟು ಭಾಷೆಗಳನ್ನು ಪರಿಸ್ಥಿತಿ ಸಂದರ್ಭ ಒಲವುಗಳ ಪ್ರಕಾರ ತಿಳಿದುಕೊಳ್ಳುವುದು ಸ್ಪೃಹಣೀಯವೇ ಸರಿ.

ಆದರೆ ಎರಡು ಅಧಿಕೃತ ಅಂತರ ರಾಜ್ಯ ಸಂಪರ್ಕಭಾಷೆಗಳು ಇರುವವರೆಗಂತೂ ಅವುಗಳಲ್ಲಿ ಒಂದನ್ನು ಆಯ್ದುಕೊಂಡು ಅಭ್ಯಸಿಸುವ ಹಕ್ಕೂ ಇದೆ. ಹೀಗಾಗಿ ಕನ್ನಡವನ್ನುಳಿದು ಇನ್ನೊಂದು ಭಾಷೆಯನ್ನು ವ್ಯಾಸಂಗಕ್ಕೆ ಆಯ್ದುಕೊಳ್ಳುವಾಗ ವಿದ್ಯಾರ್ಜನೆಯ ಪ್ರಯೋಜನದ ಹಾಗೂ ವ್ಯಕ್ತಿ ವ್ಯಕ್ತಿಯ ಅಭಿರುಚಿ-ಅವಶ್ಯಕತೆ-ಪರಿಸ್ಥಿತಿಗಳ ದೃಷ್ಟಿಯಿಂದ ನಾವು ಪರಿಶೀಲಿಸಬೇಕಾಗುತ್ತದೆ. ಒರ್ವ ವಿದ್ಯಾರ್ಥಿಗೆ ಭಾರತದ ಉತ್ತರ ಭಾಗದಲ್ಲಿಯೇ ಉದ್ಯೋಗವನ್ನು ಆರಿಸುವ ಸಂದರ್ಭ ಬಂದರೆ ಪಠ್ಯಭಾಷೆಯಾಗಿ ಆತ ಹಿಂದೀಯನ್ನು ಆಯ್ದುಕೊಳ್ಳಬೇಕಾಗಬಹುದು. ಆಂಥದೇ ಕಾರಣಕ್ಕಾಗಿ ಇನ್ನೊಬ್ಬ ವಿದ್ಯಾರಥಿಯು ತೆಲುಗು, ತಮಿಳು, ಮಲೆಯಾಳಂ, ಮರಾಠಿ ಇಲ್ಲವೆ ಗುಜರಾತಿ ಕಲಿಯಬೇಕಾಗಬಹುದು. ಈ ಭಾಶೆಗಳಲ್ಲಿ ಒಂದನ್ನು ಸಾಹಿತ್ಯಕ ಇಲ್ಲವೆ ಸಾಂಸ್ಕೃತಿಕ ಕಾರಣಗಳಿಗಾಗಿಯೂ ವಿದ್ಯಾರ್ಥಿಗಳು ಕಲಿಯಬಯಸಬಹುದು.

ಬರೀ ಕೇಂದ್ರದ ಒಂದು ಅಧಿಕೃತಭಾಶೆಯಾಗಿದೆಯೆಂದು ಹಿಂದೀಗೆ ಮಹತ್ವ ಬಂದಿಲ್ಲ. ಅದರ ಮಹತ್ವ ದಿನದಿನಕ್ಕೆ ಬೆಳೆಯುತ್ತಲಿದೆ. ಅದು ಅಧಿಕೃತ ಭಾಷೆಯಾದ ದಿನದಿಂದ ಕೇಂದ್ರ ಸರ್ಕಾರ ಕೋಟ್ಯಾವಧಿ ರೂಪಾಯಿಗಳನ್ನು ಅದರ ಬೆಳವಣಿಗೆಗಾಗಿ ಖರ್ಚು ಮಾಡುತ್ತಾ ಬಂದಿದೆ. ಒಂದು ವಿಶೇಷ ಶಾಖೆಯೇ ಕೇಂದ್ರದ ಕಚೇರಿಯಲ್ಲಿ ಏರ್ಪಟ್ಟು ಕೃತ್ರಿಮವೇ ಆಗಲಿ, ಹಿಂದೀಯಲ್ಲಿಯ ವೈಜ್ಞಾನಿಕ ಶಬ್ದಕೋಶವು ವಿವಿಧ ಆಧುನಿಕತಮ ವಿಜ್ಞಾನಗಳನ್ನು ಒಳಗೊಂಡಿದೆ. ಆಗ್ರಾದಲ್ಲಿ ಒಂದು ಕೇಂದ್ರೀಯ ಹಿಂದೀ ಸಂಸ್ಥೆ ಈ ಎಲ್ಲ ಸಂಬಂಧಿತ ವಿಷಯಗಳಿಗಾಗಿ ಸ್ಥಾಪಿತವಾಗಿದೆ. ದೇಶದ ಅನೇಕಾನೇಕ ವಿಶ್ವವಿದ್ಯಾನಿಲಯಗಳಲ್ಲಿ ಹಿಂದೀ ಇಲಾಖೆ ಇದೆ. ಪಿ.ಎಚ್.ಡಿ (ಸ್ನಾತಕೋತ್ತರ) ಸಂಶೋಧನೆ ನಡೆಯುತ್ತಿದೆ. ಜ್ಞಾನಪೀಠ ಮೊದಲಾದ ಸಂಸ್ಥೆಗಳ ಪ್ರಕಾಶನಗಳು ಸಕಲ ಭಾರತೀಯ ಸಾಹಿತ್ಯಗಳನ್ನು ಹಿಂದೀಯಲ್ಲಿ ದೊರೆಯುವಂತೆ ಮಾಡಿವೆ. ಹೀಗೆ ಸಾಹಿತ್ಯಕವಾಗಿಯೂ, ವೈಜ್ಞಾನಿಕವಾಗಿಯೂ ಹಿಂದೀಗೆ ಉಳಿದ ಭಾಷೆಗಳಿಗಿಂತ ಉಜ್ವಲತರ ಭವಿಷ್ಯವಿದೆ. ಅದನ್ನು ಮಾತನಾಡುವವರ ಸಂಖ್ಯೆಯೂ ಬಹಳ ಹೆಚ್ಚಾಗಿದೆ. ಅಧಿಕೃತವೆಂಬ ಗೌರವವೂ ಅದಕ್ಕೆ ಸಲ್ಲುತ್ತದೆ. ಹೀಗೆ ವಿದ್ಯಾರ್ಥಿಗಳಿಂದ ಆಯ್ಕೆಯಲ್ಲಿ ಹಿಂದೀಗೆ ಮಹತ್ವದ ಸ್ಥಾನ ಪ್ರಾಪ್ತವಾಗಿದೆ.

(೫) ಇಂಗ್ಲಿಷಿನ ಸ್ವರೂಪ-ಸಾಧ್ಯತೆಗಳು.
ಪೂರ್ವದ ಯಾವ ಭಾಷೆಯೂ ಇನ್ನೂ ಇಂಗ್ಲಿಷಿನಂತೆ ಆಧುನಿಕ ಜ್ಞಾನಭಂಡಾರದ ಸಕಲ ಸಂಪತ್ತಿಗೆ ಬೀಗದ ಕೈ ಆಗಿಲ್ಲ. ಜಪಾನೀ ಭಾಷೆ ಮಾತ್ರ ಆ ಸ್ಥಾನಮಾನವನ್ನು ಸಮೀಪಿಸುತ್ತಿರಬಹುದು. ಇಂಗ್ಲಿಷ್‌ನಿಂದ ಭಾಷಾಂತರವಾಗಿ ನಮ್ಮ ಭಾಷೆಗಳಲ್ಲಿ ಹಲವಾರು ಆಧುನಿಕ ಜ್ಞಾನಕ್ಷೇತ್ರಗಳು ಬೆಳಕು ಕಂಡಿವೆ. ಕ್ರಮೇಣ ‘ಕೊಡು-ಕೊಳ್ಳುವ’ ವ್ಯವಹಾರ ಹೆಚ್ಚುತ್ತಾ ಹೋಗುವುದು. ಒಂದು ದಿನ ನಮ್ಮ ದೇಶದ ಕ್ಷಿಪಣಿಗಳಲ್ಲಿಯೇ ನಾವು ಚಂದ್ರಲೋಕಕ್ಕೆ ಯಾತ್ರೆಗೆಯ್ಯಬಹುದು. ವಿಜ್ಞಾನವು ಇನ್ನೂ ಗೂಢವೆಂದು ತಿಳಿದ ಲೋಕಗಳ ರಹಸ್ಯವನ್ನು ನಮ್ಮ ವಿಜ್ಞಾನಿಗಳು ನಮ್ಮ ಭಾಷೆಗಳಲ್ಲಿಯೇ ಅಭಿವ್ಯಕ್ತಿಸಬಹುದು. ಆಗ ಜಗತ್ತಿನ ಉಳಿದ ಭಾಷೆಗಳಿಗೆ ಈ ವಿಷಯ ನಮ್ಮ ಭಾಷೆಗಳಿಂದಲೇ ತರ್ಜುಮೆಯಾಗಿ ಹೋಗಬೇಕಾಗಬಹುದು. ಉಳಿದ ಜ್ಞಾನಕ್ಷೇತ್ರಗಳಿಗೂ ಈ ಮಾತು ಅನ್ವಯಿಸುತ್ತದೆ. ಇದು ಸಂಭವಿಸಿದಾಗ ನಮ್ಮ ಭಾಷೆಗಳು ಪ್ರೌಢವಾಗುತ್ತವೆ, ಅವೇ ಭಾಷೆಗಳಾಗುತ್ತವೆ.

ಇಂಗ್ಲಿಷು ಕೇಂದ್ರಾಧಿಕೃತ ಭಾಷೆಯಾಗಿ ಅನಿರ್ದಿಷ್ಟವಾಗಿ ಮುಂದುವರಿಯಬೇಕು. ಅದು ವಿಶ್ವವಿದ್ಯಾನಿಲಯಗಳ ಮಾಧ್ಯಮವಾಗಿ ಮುಂದುವರಿಯಬೇಕೆಂದು ಯಾರೂ ಹೇಳಲಾರರು. ನಿಜವಾಗಿ ಈಗಿಂದೀಗ ಇಂಗ್ಲಿಷಿನಿಂದ ರಾಜ್ಯಭಾಷೆಗೆ ಮಾಧ್ಯಮ ಪಲ್ಲಟಗೊಳ್ಳುವುದು ಶಿಕ್ಷಣದ ಹಿತದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಏಕೆಂದರೆ ಇಂಗ್ಲಿಷಿನಲ್ಲಿ ದೋಷರಹಿತವಾಗಿ ಬರೆಯುವವರು ಇಂದು ಬಹಳವಾದರೆ ಶೇಕಡ ೫ ವಿದ್ಯಾರ್ಥಿಗಳೆಂದು ಹೇಳಬಹುದು.
ಹೊರಗಿನಿಂದ ಬಂದವರಿಗಾಗಿ ಒಂದೋ ಎರಡೋ ಕಾಲೇಜುಗಳನ್ನು ಮೀಸಲಾಗಿಟ್ಟು ವಿಶ್ವವಿದ್ಯಾನಿಲಯಗಳ ಮಾಧ್ಯಮವು ರಾಜ್ಯದಲ್ಲಿ ಎಂದೋ ಕನ್ನಡವಾಗಬೇಕಾಗಿತ್ತು. ಅಷ್ಟೊಂದಾಗಿ ಕನ್ನಡ ಇಂದು ಬೆಳೆದಿದೆಯಲ್ಲದೆ ಇನ್ನೂ ಅವಕಾಶವಿದ್ದರೆ ಪ್ರಾಧ್ಯಾಪಕರು ಕಲಿಸಿದಂತೆಲ್ಲ ಅದರ ಬಳಕೆ ಹೆಚ್ಚಾಗಿ ಹೆಚ್ಚು ಸಹಜವಾದ, ಸಮಂಜಸವಾದ ಅಭಿವ್ಯಕ್ತಿಗೆ ದಾರಿಯಾಗುತ್ತದೆ. ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸುವುದು ಹಾಗೂ ಅದನ್ನು ಮಾಧ್ಯಮವಾಗಿ ಬಳಸುವುದೂ ಭಿನ್ನಭಿನ್ನ ವಿಷಯಗಳಾಗಿವೆ.

ಸ್ವಾತಂತ್ರ್ಯೋತ್ತರ ಕರ್ನಾಟಕದಲ್ಲಿ ಇಂಗ್ಲಿಷು-ಮಾಧ್ಯಮ ಶಾಲೆಗಳು ಅತಿಯಾಗಿ ಬೆಳೆದದ್ದು ಒಂದು ವಿಶಿಷ್ಟ ಲಕ್ಷಣವಾಗಿದೆ. ತಮ್ಮ ಮಕ್ಕಳು ಇಂಗ್ಲಿಷು ಚೆನ್ನಾಗಿ ಕಲಿಯಬೇಕೆಂಬ ಸದಿಚ್ಛೆಯಿಂದ ನಾಗರೀಕರು ಈ ಪ್ರಾದುರ್ಭಾವವನ್ನು ಸ್ವಾಗತಿಸಿದ್ದಾರೆ. ಆದರೆ ಇದು ಅಜ್ಞಾನದ ಫಲವೆಂದು ನಾವು ಹೇಳದಿರಲಾರೆವು. ಅಂತರ ಪ್ರಾಂತೀಯ ಅಗತ್ಯಗಳಿದ್ದಲ್ಲಿ ಇದು ಅನಿರ್ವಾಹಪಕ್ಷದ ಮಾತಾಗಬಹುದು. ಆದರೆ ಇಂಗ್ಲಿಷನ್ನು ಪ್ರಾಥಮಿಕ ಹಂತದಿಂದ ಮಾಧ್ಯಮವನ್ನಾಗಿ ಮಾಡಿದರೆ ಇಂಗ್ಲಿಷು ಭಾಷೆ ಮಕ್ಕಳಿಗೆ ಚೆನ್ನಾಗಿ ಬರುವುದೆಂದು ತಿಳಿಯುವುದು ಕೇವಲ ಭ್ರಮೆ. ಇಂದು ಕಾಲೇಜುಗಳಲ್ಲಿ ಇಂಗ್ಲಿಷು ಮಾಧ್ಯಮವಿದೆ. ಆದರೆ ಇಂದಿನ ಅನೇಕಾನೇಕ ಪದವೀಧರರಿಗೆ ಇಂಗ್ಲಿಷಿನಲ್ಲಿ ದೋಷರಹಿತವಾಗಿ ಒಂದು ವಾಕ್ಯವನ್ನೂ ಸಹ ಬರೆಯುವುದಾಗುವುದಿಲ್ಲವೆಂದು ಸಾರ್ವಜನಿಕ ಆರೋಪಣೆ ಇದೆ. ಕಾರಣವಿಷ್ಟೆ-ಒಂದು ಭಾಷೆಯಾಗಿ ಮಾತ್ರ (ಮಾಧ್ಯಮವಲ್ಲ) ಇಂಗ್ಲಿಷನ್ನು ಕಲಿಸಬೇಕು. ಕಲಿಸುವಾಗ ಕಲಿಸಿದಷ್ಟು ಇಂಗ್ಲಿಷು ಶುದ್ಧವಾಗಿರುವಂತೆ ಶಿಕ್ಷಕ, ಪಠ್ಯಪುಸ್ತಕ, ಕಲಿಸುವ ಪದ್ಧತಿ ಎಲ್ಲೆಡೆ ಬದಲಾವಣೆಯಾಗಿದೆಯೆಂದು ಖಾತ್ರಿ ಮಾಡಿಕೊಳ್ಳಬೇಕು. ಅಲ್ಲದೆ ಇಂದಿನ ಬದಲಾದ ವಾತಾವರಣದಲ್ಲಿ ಮೊದಲಿನಂತೆ ಇಂಗ್ಲಿಷು ಕಲಿಸುವುದು ಸಾಧ್ಯವಿಲ್ಲ: ನಮ್ಮ ವಿಷಯವನ್ನು ಆಳವಾಗಿ ತಿಳಿದುಕೊಳ್ಳಲು ಓದಬೇಕಾದ ವಾಙ್ಮಯದ ಅರ್ಥಗ್ರಹಣಕ್ಕಾಗಿ(ಕಾಂಪ್ರಹೆನ್ಷನ್) ಅದು ಇದೆಯೆಂಬುದನ್ನು ತಿಳಿದು ಅದನ್ನೇ ನಮ್ಮ ಇಂಗ್ಲಿಷು ಪಠ್ಯಕ್ರಮದ ಮುಖ್ಯ ಗುರಿಯನ್ನಾಗಿ ಮಾಡಬೇಕು. ಬಳಕೆ ಮಾತಿನ ಇಂಗ್ಲಿಷು (ಸ್ಪೋಕನ್ ಇಂಗ್ಲಿಷು) ಬರವಣಿಗೆಯ ಇಂಗ್ಲಿಷು (ರಿಟನ್ ಇಂಗ್ಲಿಷ್)-ಇವುಗಳಿಗಾಗಿ ಬೇರೆ ಸರ್ಟಿಫಿಕೇಟ್ ಅಭ್ಯಾಸ ಕ್ರಮಗಳನ್ನು ಏರ್ಪಡಿಸಬೇಕು.

ಇಂಗ್ಲಿಷಿನ ಮಹತ್ವವೇನು? ಇಂದಿಗೆ ಇಂಗ್ಲಿಷು ಇಡೀ ಜಗತ್ತಿನ ಭಾಷೆಯಾಗಿದೆ, ಇಂಗ್ಲಿಷ್ ಬಲ್ಲವ ಲೋಕವನ್ನೆಲ್ಲ ಸಂಚರಿಸಿ ಬರಬಲ್ಲ, ಪರದೇಶಗಳೊಡನೆ ಸಲೀಸಾಗಿ ತನ್ನ ವ್ಯವಹಾರ ಸಾಗಿಸಬಲ್ಲ. ಜಗತ್ತಿನ ವಾಙ್ಮಯವೆಲ್ಲ-ವಿಜ್ಞಾನ ಸಂಶೋಧನೆಗಳೆಲ್ಲ-ಇಂಗ್ಲಿಷ್‌ನಲ್ಲಿ ಉಪಲಬ್ಧವಾಗಿವೆ. ಇಂಗ್ಲಿಷಿನಲ್ಲಿ ಪತ್ರಿಕಾಸಾಹಿತ್ಯವನ್ನೋದಿ ದಿನದಿನಕ್ಕೆ ತನ್ನ ವಿಶಿಷ್ಟ ಕ್ಷೇತ್ರದಲ್ಲಿ ಅದು ಉದ್ಯಮವಿರಲಿ, ವಾಣಿಜ್ಯವಿರಲಿ, ವಿಜ್ಞಾನವಿರಲಿ, ಸಾಹಿತ್ಯವಿರಲಿ-ಏನು ನಡೆದಿದೆಯೆಂಬುದನ್ನು ವ್ಯಕ್ತಿ ತಿಳಿದುಕೊಳ್ಳಬಹುದು. ಒಮ್ಮೊಮ್ಮೆ ರಷ್ಯನ್, ಜರ್ಮನ್-ಫ್ರೆಂಚ್ ಭಾಷೆಗಳ ಜ್ಞಾನವಿದ್ದರೆ ಚೆನ್ನಾಗಿತ್ತೆಂದು ಅನಿಸುವುದುಂಟು. ಆದರೆ ನೂರಕ್ಕೆ ನೂರರಷ್ಟಲ್ಲದಿದ್ದರೂ ನೂರಕ್ಕೆ ಎಂಭತ್ತರಷ್ಟಾದರೂ ಪೂರ್ಣ ಹಾಗೂ ಆಧುನಿಕ ಜ್ಞಾನವನ್ನು ಸಂಪಾದಿಸಬಲ್ಲೆನೆಂಬ ಭರವಸೆ ಇಂಗ್ಲಿಷು ಬಲ್ಲವನಿಗೆ ಇರುತ್ತದೆ.

ಎರಡನೆಯದಾಗಿ, ನಮ್ಮ ದೇಶದಲ್ಲಿಯೇ ಇಂಗ್ಲಿಷಿಲ್ಲದೆ ಇಲ್ಲಿಯ ಉದ್ಯಮ-ವ್ಯವಹಾರ ಕ್ಷೇತ್ರಗಳಲ್ಲಿ ಪ್ರವೇಶ ದುರ್ಗಮ ಬಹುತೇಕ ಅಸಾಧ್ಯವೆಂದು ಹೇಳಬಹುದು. ಅಂತರರಾಜ್ಯ ಜೀವನ ಇಂಗ್ಲಿಷಿಲ್ಲದೆ ಕಠಿಣವಾಗುತ್ತದೆ. ಬೆಂಗಳೂರಿನಲ್ಲಿಯೇ ಇಂಗ್ಲಿಷು ಬಾರದಿದ್ದರೆ ಅನೇಕ ಉದ್ಯೋಗವೃತ್ತಗಳಲ್ಲಿ ಪ್ರವೇಶ ದೊರೆಯುವುದಿಲ್ಲ.

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಹ ಇಂಗ್ಲಿಷಿನ ವಿಕೃತರೂಪ ಉಳಿದುಕೊಂಡಿದೆ. ಅದು ಎಂಥ ಇಂಗ್ಲಿಷೆಂಬುದನ್ನು ನಾವು ಕೇಳುವುದು ಬೇಡ.

ಮೂರನೆಯದಾಗಿ, ಇಂಗ್ಲಿಷು ಎರಡು ಕೇಂದ್ರಾಧಿಕೃತ ಭಾಷೆಗಳಲ್ಲಿ ಒಂದಾಗಿದೆ. ವಿಶೇಷತಃ ದಕ್ಷಿಣ ಹಿಂದೂಸ್ಥಾನದಲ್ಲಿ ಸಂಪರ್ಕಭಾಷೆಯೆಂದು ಇದು ಪ್ರಚಲಿತವಾಗಿದೆ. ಕೇಂದ್ರಸರ್ಕಾರದ ಸೇವಾಶಾಖೆಗಳಲ್ಲಿ ಒಂದನ್ನು ಸೇರಲಿಚ್ಛಿಸುವವರಿಗೆ ಇಂಗ್ಲಿಷು ಬಾರದಿದ್ದರೆ ನಡೆಯುವುದಿಲ್ಲ. ಕೇಂದ್ರಸರ್ಕಾರ ಸ್ಥಾಪಿಸಿದ ಸ್ವಾಯತ್ತತೆಯುಳ್ಳ ಸಂಸ್ಥೆಗಳಲ್ಲಿಯೂ, ಕಾರ್ಖಾನೆಗಳಲ್ಲಿಯೂ ಇಂಗ್ಲಿಷೇ. ದಕ್ಷಿಣ ಹಿಂದೂಸ್ಥಾನದಲ್ಲಿ ಇಂಗ್ಲಿಷೇ ವ್ಯವಹಾರದ-ಪತ್ರವ್ಯವಹಾರದ ಭಾಷೆಯಾಗಿದೆ. ಉತ್ತರದಲ್ಲಿ ಹಿಂದಿಗೂ ಆಸ್ಪದವಿದೆ.

‘ದಕ್ಷಿಣ’ ಎಂದು ಹೇಳಿದಾಗ ‘ಪೂರ್ವ’ ಹಿಂದೂಸ್ಥಾನದ ಕೆಲವು ಭಾಗಗಳಿಗೂ-ಬಂಗಾಳ, ಒರಿಸ್ಸಾ, ಅಸ್ಸಾಂ ರಾಜ್ಯಗಳಿಗಾದರೂ-ಈ ಮಾತು ಅನ್ವಯಿಸುತ್ತದೆಂದು ತಿಳಿಯಬಹುದು. ಪಶ್ಚಿಮ ಹಿಂದೂಸ್ಥಾನ್ (ಗುಜರಾತ್, ಮಹಾರಾಷ್ಟ್ರ) ಹಿಂದೀಗೆ ಸಮೀಪವಿರುವ ಭಾಷೆಗಳನ್ನು ಹೊಂದಿರುವುದರಿಂದ ಅಲ್ಲಿ ಹಿಂದಿಯೂ ಆಗಬಹುದು, ಇಂಗ್ಲಿಷೂ ಆಗಬಹುದು. ಅದು ವೈಯುಕ್ತಿಕ ಅಭಿರುಚಿಯನ್ನು ಅವಲಂಬಿಸಿರುತ್ತದೆ. ಆದರೆ ದಕ್ಷಿಣ ಹಿಂದೂಸ್ಥಾನದ ಭಾಷೆಗಳ ಲಿಂಗ-ವ್ಯಾಕರಣ ಇಂಗ್ಲಿಷಿನಂತೆಯೇ ಇದೆ, ಹಿಂದೀಯಂತಲ್ಲ. ಉದಾಹರಣಾರ್ಥ ಇಂಗ್ಲಿಷಿನಲ್ಲಿಯೂ ದ್ರಾವಿಡಭಾಷೆಗಳಲ್ಲಿಯೂ ಪ್ರತಿಯೊಂದು ಶಬ್ದಕ್ಕೆ ಅದರ ಲಿಂಗವಿರುವುದಿಲ್ಲ. (ಃಈ) ಇದು ಪುರುಷರಿಗೆ, (ಷೀ) ಎಂಬುದು ಮಹಿಳೆಯರಿಗೆ ಹಾಗೂ (ಇಟ್) ಎಂಬುದು ನಿರ್ಜೀವ ವಸ್ತುಗಳಿಗೆಂದು ಸಾಮಾನ್ಯವಾಗಿ ಉಪಯೋಗಿಸಲ್ಪಡುತ್ತದೆ.

ಮಧ್ಯ ಹಿಂದೂಸ್ಥಾನದಲ್ಲಿ ಹಿಂದಿಯೇ ಮುಖ್ಯವಾಗಿದೆ. ರಾಜಾಸ್ತಾನಿಯು ಮೈಥಿಲಿಯಂತೆ ಬೇರೆ ಭಾಷೆಯೆಂದು ಗಣನೆಯಾಗಿದ್ದರೂ ಇವೆಲ್ಲಾ ಹಿಂದಿಯ ಉಪಭಾಷೆಗಳೇ ಆಗಿವೆ.

‘ಏನೇ ಇರಲಿ, ಹಲವಾರು ಮಹತ್ವದ ಕಾರಣಗಳಿಗೋಸ್ಕರ, ವಿಶೇಷತಃ ಜಾಗತಿಕ ಭಾಷೆ ಹಾಗೂ ಜಾಗತಿಕ ಜ್ಞಾನ-ವಿಜ್ಞಾನದ ಮಾಧ್ಯಮವೆಂದು ಇಂಗ್ಲಿಷು ಪ್ರಮುಖ ಭಾಷೆಯಾಗಿದೆ. ವಿದ್ಯಾರ್ಥಿಗಳು ಇಂಗ್ಲಿಷನ್ನು ಕಲಿಯಲಿಚ್ಛಿಸುವುದು ಸಹಜವಾಗಿದೆ. ಆದರೆ ಅದರ ಅಭ್ಯಾಸವನ್ನು ಶಾಕೋಪಶಾಖೆಯಾಗಿ ಮಾಡಿ ಅರ್ಥಗ್ರಹಣ, ಬಳಕೆಮಾತಿನ ಇಂಗ್ಲಿಷು ಬರವಣಿಗೆಯ ಇಂಗ್ಲಿಷು ಎಂದು ಅದನ್ನು ಭಾಗಶಃ ಅಭ್ಯಸಿಸುವ ಮಾರ್ಗವನ್ನು ಅನುಸರಿಸಬೇಕು. ಮಾಧ್ಯಮಿಕ ಶಾಲೆಗಳಲ್ಲಿ ಅರ್ಥಗ್ರಹಣಕ್ಕಾಗಿ ಮಾತ್ರ ಇಂಗ್ಲಿಷನ್ನು ಚೆನ್ನಾಗಿ ಕಲಿಯಬಹುದು.

(೬) ಸಂಸ್ಕೃತದ ಸ್ಥಾನ
ಸಂಸ್ಕೃತದ ಉಲ್ಲೇಖ ಇನ್ನೂವರೆಗೆ ಈ ವರದಿಯಲ್ಲಿ ಆಗಿಲ್ಲ. ಸಂಸ್ಕೃತದ ಸ್ಥಾನ ಮಾಧ್ಯಮಿಕ ಪಠ್ಯಕ್ರಮದಲ್ಲಿ ವಿವಾದಾಸ್ಪದ ವಿಷಯವಾಗಿದ್ದರಿಂದ ಈ ಸಮಿತಿಯು ಅಸ್ತಿತ್ವದಲ್ಲಿ ಬಂದಿದೆ. ಇಲ್ಲಿಯವರೆಗೆ ಸಿದ್ಧಗೊಳಿಸಿದ ಹಿನ್ನೆಲೆಯಲ್ಲಿ ನಾವು ಸಂಸ್ಕೃತದ ಸ್ಥಾನವನ್ನು ಕುರಿತು ವಿಶ್ಲೇಷಿಸಬಹುದು.

ಸಂಸ್ಕೃತವು ಎಲ್ಲ ಭಾರತೀಯರಿಗೂ ಅಭಿಮಾನಾಸ್ಪದವಿರಬೇಕಾದ ಭಾಷೆ. ತಿರುಗ್ವೇದವು ವಿಶ್ವವಾಙ್ಮಯದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ರೂಪಗೊಂಡಿರುವ ಹಾಗೂ ಉಳಿದು ಬಂದಿರುವ ಕಾವ್ಯಸಂಗ್ರಹವಾಗಿದೆ. ಸಂಸ್ಕೃತದ ಪ್ರಾಚೀನತೆಯು ಕನಿಷ್ಠ ಪಕ್ಷಕ್ಕೆ ೫೦೦೦ ವರ್ಷಗಳನ್ನು ಮೀರಿದೆ. ಈ ಅವಧಿಯಲ್ಲೆಲ್ಲ-ನಡು ನಡುವೆ ಬಹು ದೊಡ್ಡ ಆತಂಕಗಳೂ ಬಂದರೂ-ಸಂಸ್ಕೃತವು ಸಾಹಿತ್ಯಭಾಷೆಯಾಗಿ ಮುಂದುವರೆಯಿತು. ಗ್ರಾಂಥಿಕಭಾಷೆಗೂ ಬಳಕೆಮಾತಿಗೂ ಭೇದ ಬಹಳವಾದಾಗ ವ್ಯಾವಹಾರಿಕ ಭಾಷೆಗಳು (ಪಾಲಿ, ಅರ್ಧ ಮಾಗಧಿ) ಬುದ್ಧ ಹಾಗೂ ಮಹಾವೀರರ ಕಾಲದಲ್ಲಿ ಧಾರ್ಮಿಕ ಸಾಹಿತ್ಯದ ಭಾಷೆಗಳಾದುವು. ಕ್ರಮೇಣ ಸಂಸ್ಕೃತ ಜನ್ಯ ಪ್ರಾಕೃತಗಳಿಂದ ಹಿಂದೀ, ಬಂಗಾಲಿ, ಮೊದಲಾದ ಭಾಷೆಗಳು ತಲೆಯೆತ್ತಿ ತಾವೇ ಸಾಹಿತ್ಯದ ವಾಹಕಗಳಾದುವು. ಆದರೆ ಭಾರತದ ತುಂಬೆಲ್ಲ ಸಾಹಿತ್ಯಕ್ಕೂ ಪಂಡಿತರ ಸಭೆಗಳಿಗೂ, ಶಾಸನಗಳಿಗೂ ಸರ್ವಸಾಮಾನ್ಯಭಾಷೆಯಾಗಿ ಅನೇಕಾನೇಕ ಶತಮಾನಗಳವರೆಗೆ ಸಂಸ್ಕೃತವು ನಡೆದುಕೊಂಡು ಬಂದಿತು. ಫಾರ್ಸಿ ಹಾಗೂ ಮುಂದೆ ಇಂಗ್ಲಿಷು ಮತ್ತು ಪ್ರಾದೇಶಿಕ ಭಾಷೆಗಳು ಅದರ ಸ್ಥಾನವನ್ನು ಆಕ್ರಮಿಸಿದಂತೆ ಸಂಸ್ಕೃತವು ವಿಶೇಷತಃ ಧಾರ್ಮಿಕ ಹಾಗೂ ಶಾಸ್ತ್ರೀಯ ಸಾಹಿತ್ಯದ (ಅಲಂಕಾರ ಶಾಸ್ತ್ರ, ಆಯುರ್ವೇದ, ವ್ಯಾಕರಣ, ದರ್ಶನ, ಇತ್ಯಾದಿ) ಭಾಷೆಯಾಗಿ ಹಾಗೂ ಪಂಡಿತರ ಸಭೆಗಳ ಮಾಧ್ಯಮವಾಗಿ ಉಳಿದುಕೊಂಡಿತು.

ಸಂಸ್ಕೃತವು ಒಂದು ಗ್ರಾಂಥಿಕಸ್ತರಕ್ಕೆ ಒಂದು ಆ ಸ್ತರದ ಶೈಲಿ, ಅಲಂಕಾರ, ವ್ಯಾಕರಣ ಮುಂತಾದ ಲಕ್ಷಣಗಳು ಇನ್ನೂ ಹಾಗೆಯೇ ಉಳಿದುಕೊಂಡಿರುವಾಗ, ಪ್ರಾಕೃತ ಹಾಗೂ ಮುಂದೆ ಪ್ರಾದೇಶಿಕ ಭಾಷೆಗಳು ಜನತೆಯ ಸಾಹಿತ್ಯದ ಭಾಷೆಗಳಾಗುತ್ತಾ ಬೆಳೆದುವು. ಆಗ ಒಂದು ಸ್ಥಿರ, ಮಾರ್ಗೀಯ, ಗ್ರಾಂಥಿಕ ಇಲ್ಲವೆ ಕ್ಲಾಸಿಕಲ್ ಮಾದರಿಯಲ್ಲಿ ಹಾಗೆಯೇ ಉಳಿದುಕೊಂಡಿದ್ದ ಗ್ರಾಂಥಿಕ ಸಂಸ್ಕೃತವು ಅಳಿಯಲೂ ಇಲ್ಲ, ಬೆಳೆಯಲೂ ಇಲ್ಲ, ಅದು ಪರಿವರ್ತನಾತೀತವಾಯಿತು.

ಇದೇ ಗ್ರಾಂಥಿಕ ರೂಪದಲ್ಲಿಯೇ ಅದು ಪಂಡಿತರ ಬಳಕೆಯ ಮಾತೂ ಆಯಿತು. ಸಂಸ್ಕೃತದ ಈ ‘ಸ್ಥಿರ’ ಭಾಷಾ ರೂಪವೇ ‘ಮೃತ’ ವೆಂದಿರುವ ಭಾಷೆಯಲ್ಲಿಯ ಜೀವಂತ ಅಂಶವೆಂದು ಎತ್ತಿ ತೋರಿಸಬಹುದು. ಅಲ್ಲದೆ ‘ಜೀವಂತ’ ಭಾಷೆಗಳಲ್ಲಿಯೂ ‘ಮೃತ’ ಅಂಶಗಳಿರುತ್ತವೆಂಬುದನ್ನು ನಾವು ಮರೆಯುವಹಾಗಿಲ್ಲ. ಇಂಗ್ಲಿಷ್‌ನಲ್ಲಿ ಬಳಸುವ ಅನೇಕ ಶಬ್ದಗಳಿಗೆ ಹಾಗೂ ಔಷಧದ ಹೆಸರುಗಳಿಗೆ ಎಂ.ಬಿ.ಬಿ.ಎಸ್ ಡಾಕ್ಟರರ ಭಾಷೆಯಲ್ಲಿ ಮಾತ್ರ ‘ಅಸ್ತಿತ್ವ’ವಿದೆ. ಉಳಿದವರಿಗೆ ಆ ಶಬ್ದಗಳ ಅರ್ಥ ಸುಲಭವಾಗಿ ಆಗುವುದಿಲ್ಲ. ಇದೇ ರೀತಿಯಾಗಿ ಪ್ರತಿಯೊಂದು ವೈಜ್ಞಾನಿಕ ಕ್ಷೇತ್ರದಲ್ಲಿಯೂ ಅದರ ಪಾರಿಭಾಷಿಕ ಶಬ್ದಗಳಿವೆ. ಪ್ರಾಚೀನ ಹಾಗೂ ಅರ್ವಾಚೀನ ಭಾಷೆಗಳನ್ನು ‘ಮೃತ’ ಹಾಗೂ ‘ಜೀವಂತ’ ಎಂದು ವರ್ಣಿಸುವುದು ಸಾಧುವಾಗಲಾರದು. ಏಕೆಂದರೆ, ಮೇಲೆ ಚರ್ಚಿಸಿದಂತೆ ಪ್ರಾಚೀನ ಭಾಷೆಗಳಲ್ಲಿ ‘ಜೀವಂತ’ ಅಂಶಗಳೂ ಹಾಗೂ ಅರ್ವಾಚೀನ ಭಾಷೆಗಳಲ್ಲಿ ‘ಮೃತ’ ಅಂಶಗಳೂ ದೊರೆಯುವುದುಂಟು.

ಆದರೆ ಅರ್ವಾಚೀನ ಭಾಷೆಗಳಂತೆ ಒಂದು ‘ಸ್ಥಿರ’ ಭಾಷೆಯು ಸೃಜನಶೀಲತೆಯನ್ನು ಹೊಂದಿದೆಯೆಂದು ಹೇಳಲು ಬರುವುದಿಲ್ಲ. ಅವುಗಳಂತೆ ಅದು ಎದೆ ಹಾಲಿನ ಭಾಷೆಯಾಗುವುದಿಲ್ಲ. ಪ್ರತಿಯೊರ್ವ ತಾಯಿ ಮಗುವಿಗೆ ಆ ಭಾಷೆಯಲ್ಲಿ ಗುಟುಕು ಕೊಡುತ್ತಿಲ್ಲ. ಪೀಳಿಗೆಯಿಂದ ಪೀಳಿಗೆಗೆ ಅದು ಬೆಳೆದು ಮಾರ್ಪಟ್ಟು, ಅದರ ವ್ಯಾಕರಣದಲ್ಲಿ-ವಾಕ್ಯರಚನೆಯಲ್ಲಿ ಸಹ ಗೊತ್ತಿಲ್ಲದೆ-ಬದಲಾವಣೆಗಳಾಗಿ ಚತುರ್ವೇದ ಸಂಹಿತೆಗಳ ಸಂಸ್ಕೃತ ಔಪನಿಷದ ಸಂಸ್ಕೃತವಾದಂತೆ, ಔಪನಿಷದ ಸಂಸ್ಕೃತ ಪೌರಾಣಿಕ ಸಂಸ್ಕೃತವಾದಂತೆ. ನಮಗೆ ಗೊತ್ತಿದ್ದ ‘ಸ್ಥಿರ’, ಮಾರ್ಗೀಯ ಸಂಸ್ಕೃತ ವಿಕಸನ ಪೂರ್ಣವಾಗುತ್ತಿಲ್ಲ. ಇಂಗ್ಲಿಷಿನ ಪ್ರಭಾವದ ಮೂಲಕ ಅಲ್ಲಲ್ಲಿ ಅಂತಹದು ಅನುಕರಣಗಳು ಕಂಡರೂ ಅವು ಕೃತ್ರಿಮ ಭಾಷಾರೂಪದಲ್ಲಿ ಮಾತ್ರ ಕಂಡು ಬರುವ ವಿಕಾಸ. ಹುಡುಗರು ಗೋಲಿಗುಂಡನ್ನಾಡುವಾಗ, ಜನ ಓಣಿಯಲ್ಲಿ ಜಗಳ ಮಾಡುವಾಗ, ಗಂಡ-ಹೆಂಡಿರು ಒಬ್ಬರಿಗೊಬ್ಬರು ಬಯ್ದಾಡುವಾಗ, ಮಗು ಒಂದೇ ಮೂಲೆಯಲ್ಲಿ ಕುಳಿತುಕೊಂಡು ತನ್ನಷ್ಟಕೆ ತಾನೆ ಮಾತನಾಡುತ್ತಿರುವಾಗ, ದನಗಾಹಿ ಹೆಸರುಗೊಂಡು-ಒಮ್ಮೊಮ್ಮೆ ವಿಶಿಷ್ಟ ಆಲಂಕಾರಿಕ ಹೆಸರುಗಳನ್ನು ಕೊಟ್ಟು ತನ್ನ ದನವನ್ನು ಕರೆದು ಒಟ್ಟುಗೂಡಿಸುವಾಗ-ಹೀಗೆ ಇನ್ನೂ ಅನೇಕ ವಿಧದಲ್ಲಿ ಸಹಜವಾಗಿ ಹುಟ್ಟಿಕೊಳ್ಳುವ ಭಾಷೆ ಮಾರ್ಗೀಯ ಸಂಸ್ಕೃತವಲ್ಲ. ಹಿಂದೆ ಆ ಮಾತೃ ಪದವಿಯನ್ನು ಅನುಭವಿಸಿ ಸಂಸ್ಕೃತವು ಪ್ರಾಕೃತ ಹಾಗೂ ಉತ್ತರದ ಪ್ರಾದೇಶಿಕ ಭಾಷೆಗಳ ತಾಯಿಯಾಯಿತು. ದ್ರಾವಿಡ ಭಾಷೆಗಳ ಸಾಕುತಾಯಿಯಾಯಿತು. ಸಂಸ್ಕೃತದ ಒಂದು ಮಾರ್ಗೀಯ ರೂಪಕ್ಕೆ ಒದಗಿದ ಸ್ಥೈರ್ಯ ಮತ್ತೆ ಅಂಥ ಮಾತೃತ್ವವನ್ನು ಗಳಿಸಬಹುದು. ಆದರೆ ಅದಕ್ಕಾಗಿ ಅತ್ಯಂತ ಅಪರೂಪವಾದ ಪರಿಸ್ಥಿತಿಯ ವೈಚಿತ್ರ್ಯ ಅಸ್ತಿತ್ವದಲ್ಲಿ ಬರಬೇಕಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನೆ ಆಗುವ ನಾಳೆಗಳು
Next post ಬಾಗಿಲ ತೆರೆದು

ಸಣ್ಣ ಕತೆ

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…