ಭಾಷೆ ಮತ್ತು ಬದಲಾವಣೆ

ಭಾಷೆ ಮತ್ತು ಬದಲಾವಣೆ

ನಮ್ಮ ನ್ಯೆಸರ್ಗಿಕ ಭಾಷೆ ವಿದ್ಯಮಾನೀಯ (phenomenal) ಜಗತ್ತಿಗೆ ಸೇರಿದುದು. ವಿದ್ಯಮಾನೀಯ ಜಗತ್ತೆಂದರೆ ನಮಗೆ ಸಾಮಾನ್ಯವಾಗಿ ತೋರುವ, ಭಾಸವಾಗುವ ಹಾಗೂ ಅನುಭವಕ್ಕೆ ಬರುವ ವಿಷಯಗಳಿಂದ ರೂಪಿತವಾದುದು. ಉದಾಹರಣೆಗೆ, ನಮ್ಮ ಭಾಷೆಗಳು ಹುಟ್ಟುವಾಗ ಜಗತ್ತು ಭೂಕೇಂದ್ರಿತವಾಗಿತ್ತು; ಗೆಲೀಲಿಯೋನ ನಂತರ ಅದು ಸೂರ್ಯಕೇಂದ್ರಿತವಾಯಿತು. ಭೂಮಿಯ ಸುತ್ತಲೂ ಸೂರ್ಯ ಸುತ್ತುವುದಿಲ್ಲ. ಬದಲು ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತದೆ, ಹಾಗೂ ಭೂಮಿಗೆ ಎರಡು ತರದ ಚಲನೆಗಳಿವೆ, ಒಂದು ತನ್ನ ಸುತ್ತಲೂ, ಇನ್ನೊಂದು ಸೂರ್ಯನ ಸುತ್ತಲೂ ಎಂಬುದು ನಮ್ಮ ಈಗಿನ ಅರಿವು. ಅದೇ ರೀತಿ, ಚಂದ್ರನ ಕುರಿತಾದ ನಮ್ಮ ಕಲ್ಪನೆಯೂ ಬದಲಾಗಿದೆ; ಚಂದ್ರ ವರ್ಧಿಸುವುದೂ ಇಲ್ಲ, ಕ್ಷೀಣಿಸುವುದೂ ಇಲ್ಲ, ಆ ರೀತಿ ನಮಗೆ ಭಾಸವಾಗುತ್ತದೆ ಅಷ್ಟೆ; ಅಲ್ಲದೆ ಚಂದ್ರನಿಗೆ ತನ್ನದೇ ಆದ ಬೆಳಕೆನ್ನುವುದು ಇಲ್ಲ, ಬದಲಿಗೆ ಸೂರ್ಯನ ಬೆಳಕನ್ನು ಚಂದ್ರ ಪ್ರತಿಫಲಿಸುತ್ತದೆ. ತಾರೆಗಳನ್ನು ನಮ್ಮ ಭಾಷೆ ‘ಚಿಕ್ಕೆ’ಗಳೆಂದು ಕರೆಯುತ್ತದೆ. ಅವು ನಮ್ಮ ಕಣ್ಣಿಗೆ ತುಂಬಾ ಚಿಕ್ಕದಾಗಿ ಕಾಣಿಸುವುದರಿಂದ. ಆದರೆ ನಿಜಕ್ಕೂ ಅವು ಬೃಹದಾಕಾರದ ನಕ್ಷತ್ರಗಳೆಂದು ವಿಜ್ಞಾನ ಹೇಳುತ್ತದೆ. ಅವು ಭೂಮಿಯಿಂದ ಹಲವು ‘ಸಂವತ್ಸರ’ಗಳಷ್ಟು ದೂರವಿರುವ ಕಾರಣ ಚಿಕ್ಕದಾಗಿ ನಮಗೆ ಗೋಚರಿಸುತ್ತವೆ ಅಷ್ಪೆ. ಹಾಗೂ ತಾರೆಗಳೇನೂ ನಾವು ತಿಳಿದಿರುವಂತೆ ‘ಮಿನಗು’ವುದಿಲ್ಲ, ಅವುಗಳ ಕಿರಣಗಳು ವಾತಾವರಣದ ಮೂಲಕ ಹಾದುಬರುವಾಗ ‘ವಿಕರಣಕ್ರಿಯೆ’ಗೆ ಒಳಗಾಗುವುದರಿಂದ ಮಿನುಗುವ ಹಾಗೆ ನಮಗೆ ತೋರುತ್ತವೆ.

ಹೊಸ ಅರಿವು ಮೂಡಿದಂತೆ ನಮ್ಮ ಪರಂಪರಾಗತ ನಂಬಿಕೆಗಳು ಒಂದೊಂದಾಗಿ ಕುಸಿಯುತ್ತ ಬಂದಿವೆ. ಗ್ರಹಣವೆಂದರೆ ಸೂರ್ಯ ಮತ್ತು ಚಂದ್ರರನ್ನು ರಾಹು ಕೇತುಗಳೆಂಬ ರಾಕ್ಷಸರು ನಂಗುವುದಲ್ಲ, ಅದೊಂದು ಅಂತರಿಕ್ಷದ ಗ್ರಹ ಚಲನೆಗಳ ಸಹಜ ಪಕ್ರಿಯೆ ಎನ್ನುವುದು ವಿದ್ಯಾಭ್ಯಾಸ ಇರುವವರಿಗೆಲ್ಲ ಗೊತ್ತಿದೆ. ಅದೇ ರೀತಿ, ಹಗಲು ರಾತ್ರಿ, ಬೇಸಿಗೆ, ಮಳೆಗಾಲ, ಚಳಿಗಾಲ ಹಾಗೂ ಈ ಕಾಲಮಾನಗಳ ಆವರ್ತನೆ, ಮಿಂಚು ಗುಡುಗುಗಳ ವಿದ್ಯಮಾನ ಮುಂತಾದುವುಗಳ ಕುರಿತಾದ ನಮ್ಮ ಕಲ್ಪನೆಗಳನ್ನೂ ತಿದ್ದಿಕೊಂಡಿದ್ದೇವೆ. ವಾರ ತಿಥಿ ತಿಂಗಳು ವರ್ಷ ಮುಂತಾದ ಕಾಲಮಾನದ ಎಣಿಕೆಯ ವಿಧಾನವನ್ನು ನಾವೇ ಮಾಡಿಕೊಂಡದ್ದು ಎನ್ನುವುದು ಗೊತ್ತಾಗಿದೆ. ಅಗತ್ಯವೆನಿಸಿದಾಗ ನಮ್ಮ ಹಣಕಾಸಿನ ನಾಣ್ಯಗಳ ಪದ್ಧತಿಯನ್ನು, ದೂರ ಮತ್ತು ಕಾಲವನ್ನು ಅಳೆಯುವ ವಿಧಾನವನ್ನು ಬದಲಾಯಿಸಿಕೊಂಡಿದ್ದೇವೆ. ಯಾಕೆಂದರೆ ಇವು ನಾವು ಬದಲಿಸಬಹುದಾದಂಥ ಸಂಗತಿಗಳೇ. ಆದರೂ ಕೆಲವೊಂದು ಸಂಗತಿಗಳನ್ನು ಹಾಗೆಯೇ ಇಟ್ಟುಕೊಂಡೂ ಇದ್ದೇವೆ. ಉದಾಹರಣೆಗೆ, ಸೆಪ್ಟೆಂಬರ್ ತಿಂಗಳು ಗ್ರಿಗೋರಿಯನ್ ಪಂಚಾಂಗದ ಪಕಾರ ಒಂಬತ್ತನೆಯದು, ಒಕ್ಟೋಬರ್ ಹತ್ತನೆಯದು, ನವಂಬರ್ ಹನ್ನೊಂದನೆಯದು, ಹಾಗೂ ಡಿಸೆಂಬರ್ ಹನ್ನೆರಡನೆಯದು. ಇದೊಂದು ರೀತಿಯಲ್ಲಿ ವಿಚಿತ್ರ ನಾಮಧೇಯ; ಯಾಕೆಂದರೆ ಲ್ಯಾಟಿನ್ ಮೂಲದ ಸೆಪ್ಟ್, ಒಕ್ಟ್, ನವ್, ಮತ್ತು ಡಿಸ್ ಸೂಚಿಸುವುದು ಕ್ರಮವಾಗಿ ಏಳು, ಎಂಟು, ಒಂಬತ್ತು, ಮತ್ತು ಹತ್ತನೆಯ ಸಂಖ್ಯೆಗಳನ್ನು. (ಲ್ಯಾಟಿನ್ ಮತ್ತು ಸಂಸ್ಕೃತ ಒಂದೇ ಮೂಲದ ಭಾಷೆಗಳಾದ್ದರಿಂದ, ಇವು ಸಂಸ್ಕೃತದ ಸಪ್ತ, ಅಷ್ಪ, ನವ ಮತ್ತು ದಶ ಎಂಬ ಪದಗಳಿಗೆ ಸಂಬಂಧಿಸಿದವು.) ಒಂದು ಕಾಲದಲ್ಲಿ ಇವು ನಿಜಕ್ಕೂ ಏಳು, ಎಂಟು, ಒಂಭತ್ತು, ಮತ್ತು ಹತ್ತನೇ ತಿಂಗಳುಗಳನ್ನೇ ಸೂಚಿಸುತ್ತಿದ್ದುವು. ಆದರೆ ರೋಮನ್ ಇತಿಹಾಸದಲ್ಲಿ ಕಾಲಪುರುಷರಂತಿದ್ದ ಜೂಲಿಯಸ್ ಸೀಸರ್ ಮತ್ತು ಆಗಸ್ಟಸ್ ಸೀಸರರ ನಾಮಧೇಯಗಳನ್ನು ಎರಡು ತಿಂಗಳುಗಳ ಹೆಸರುಗಳಾಗಿ ನಡುವೆ ಸೇರಿಸಿಕೊಂಡುದರಿಂದ ಸೆಪ್ಟೆಂಬರ್ ಮುಂತಾದ ಪದಗಳ ಅರ್ಥಕ್ಕೂ ಅವು ಈಗ ಸೂಚಿಸುವ ತಿಂಗಳುಗಳ ಕ್ರಮಾಂಕಕ್ಕೂ ಸಂಬಂಧ ತಪ್ಪಿತು. ಮುಂದೆ ಮಧ್ಯಯುಗದಲ್ಲಿ ಪೋಪ್ ಗ್ರಿಗರಿಯ ನಿರ್ದೇಶನದಲ್ಲಿ ದಿನಗಣನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೂ ಈ ಹೆಸರುಗಳನ್ನು ಬದಲಿಸುವುದಕ್ಕೆ ಯಾರೂ ಮುಂದಾಗಲಿಲ್ಲ.

ನಮಗೆ ಮನುಕುಲದ ಆದಿಯ ಬಗ್ಗೆ ಹೇಗೆ ಖಚಿತವಾದ ಅರಿವಿಲ್ಲವೋ ಹಾಗೆಯೇ ಭಾಷೆಯ ಆದಿಯ ಬಗ್ಗೆ ಕೂಡಾ ಸರಿಯಾದ ಅರಿವಿಲ್ಲ. ರೂಪಕ ಶಕ್ತಿಯಿಂದ ಎಲ್ಲಾ ಭಾಷೆಗಳೂ ಆರಂಭವಾದುವು ಎಂಬುದಾಗಿ ವಾಲ್ಟೇರ್ ಹೇಳುತ್ತಾನೆ. ಇದೊಂದು ಊಹನೆ ಮಾತ್ರ. ಮನುಷ್ಯಕುಲ ಪ್ರಾಚೀನ, ಮಧ್ಯಮ, ಆಧುನಿಕ ಮುಂತಾದ ಹಲವು ಕಾಲಘಟ್ಟಗಳನ್ನು ಹಾದುಬಂದಾಗಲೆಲ್ಲಾ ಭಾಷೆ ಕೂಡಾ ಅದರ ಜತೆ ಹಾದುಬಂದಿದೆ; ಒಂದು ರೀತಿಯಲ್ಲಿ ಮನುಷ್ಯ ಚರಿತ್ರೆಯನ್ನು ರೂಪಿಸುವುದಕ್ಕೆ ನೆರವಾಗುತ್ತಲೇ ತಾನೂ ರೂಪುಗೊಳ್ಳುತ್ತ ಬಂದಿದೆ. ಎಂದರೆ, ಭಾಷೆ ನಾಗರಿಕತೆಯ ಒಂದು ಪ್ರಧಾನ ಅಂಗವಾಗಿದೆ. ಆದ್ದರಿಂದ ನಾಗರಿಕತೆ ಮತ್ತು ಸಂಸ್ಕೃತಿ ಬೆಳೆದಂತೆಲ್ಲಾ ಭಾಷೆಯೂ ‘ಬೆಳೆ’ಯುವುದು ಅನಿವಾರ್ಯವೇ. ಆದರೆ ಭಾಷೆ ‘ಬೆಳೆ’ಯುವುದೆಂದರೆ ಏನು? ಹೊಸ ಪದಸಂಪತ್ತನ್ನು, ಶೈಲಿ ಹಾಗೂ ವೈವಿಧ್ಯಗಳನ್ನು ಸೇರಿಸಿಕೊಳ್ಳುವುದು. ಇದೊಂದು ತರದ ಬದಲಾವಣೆಯೂ ಹೌದು. ನಮಗರಿವಿಲ್ಲದಂತೆ ಭಾಷೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದರೂ, ಈ ಬದಲಾವಣೆ ಸಮಾಜದ ಇತರ ಅಂಗಗಳಷ್ಟು ತೀವ್ರಗತಿಯದ್ದಲ್ಲ ಎನ್ನುವುದನ್ನು ಗಮನಿಸಬೇಕು; ಉದಾಹರಣೆಗೆ ನಮ್ಮ ವೇಷಭೂಷಣಗಳಲ್ಲಿ ನಡೆಯುವ ಬದಲಾವಣೆಯಷ್ಟು ತೀವ್ರವಾಗಿ ನಮ್ಮ ಭಾಷೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಇಂದು ನಮ್ಮ ಸಮಸ್ಯೆಯೆಂದರೆ, ನಮ್ಮ ವಿಜ್ಙಾನ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಗುಣಿತಗತಿಯಲ್ಲಿ (geometrical progression) ಬದಲಾವಣೆಗಳಾಗುತ್ತ ಇವೆ; ಆದರೆ ನಮ್ಮ ಸಾಮಾನ್ಯ ಸಂವಹನದ ಭಾಷೆ ಇದಕ್ಕೆ ಸರಿಸಮನಾದ ಗತಿಯಲ್ಲಿ ಬದಲಾಗುತ್ತ ಇಲ್ಲ. ಯಾಕೆಂದರೆ ಇತರ ಅಂಗಗಳಿಗೆ ಹೋಲಿಸಿದರೆ ಭಾಷೆ ಹೆಚ್ಚು ಸ್ಥಿತಿಸ್ಥಾಪಕ ಗುಣವುಳ್ಳದ್ದು (conservative).

ಭಾಷೆಯ ಈ ಸ್ಥಿತಿಸ್ಥಾಪಕತ್ವ ಒಳ್ಳೆಯದೇ? ಕೆಟ್ಟುದೇ? ಎಂದು ಕೇಳಿದರೆ ಇದಕ್ಕೆ ಉತ್ತರಿಸುವುದು ಕಷ್ಟವಾಗುತ್ತದೆ. ಇದಕ್ಕಿಂತಲೂ, ಭಾಷೆ ಯಾಕೆ ಸ್ಥಿತಿಸ್ಥಾಪಕ ಗುಣವನ್ನು ಪಡೆದಿದೆ? ಎಂದು ಕೇಳುವುದು ಬಹುಶಃ ಅರ್ಥಪೂರ್ಣವಾಗಬಹುದು. ಭಾಷೆಯ ದೈನಂದಿನ ಬದಲಾವಣೆ ಬಹಳ ಸೂಕ್ಷ್ಮವಾದುದು; ಒಂದು ವೇಳೆ ಅದು ದೊಡ್ಡ ಹೆಜ್ಜೆಯಲ್ಲಿ ನಡೆಯುತ್ತಿದ್ದರೆ ಸಂವಹನಕ್ಕೆ ಅಯೋಗ್ಯವೆನಿಸುತ್ತಿತ್ತು. ಯಾಕೆಂದರೆ ಭಾಷೆಯ ಬದಲಾವಣೆ ಸಂವಹನದ ಮೂಲಕವೇ ನಡೆಯಬೇಕಾದ್ದು. ನಮಗೆ ಬೇಕಾದಂತೆ ಭಾಷೆಯನ್ನು ಬಳಸಬಹುದಾದರೂ ಅದು ಸ್ವೀಕೃತವಾಗದಿದ್ದರೆ ಬಳಸಿ ಉಪಯೋಗವಿಲ್ಲ. ಹೀಗೆ, ಬದಲಾಯಿಸುವುದು ಸುಲಭ, ಆದರೆ ಸ್ವೀಕೃತವಾಗುವುದು ಕಷ್ಟ ಎಂಬ ಭಾಷೆಯ ಗುಣವನ್ನು ಆಧುನಿಕ ಭಾಷಾವಿಜ್ಞಾನದ ಹರಿಕಾರ ಸಸ್ಯೂರ್ ಸ್ವತಃ ಗುರುತಿಸುತ್ತಾನೆ. ಇದು ಯಾಕೆ ಹೀಗೆಂದರೆ ಭಾಷೆ ಪ್ರತಿಯೊಬ್ಬನ ಕೈಯಲ್ಲಿದ್ದೂ ಯಾರೊಬ್ಬನ ಕೈಯಲ್ಲೂ ಇಲ್ಲ ಎಂಬ ಕಾರಣವನ್ನೂ ಸಸ್ಯೂರ್ ನೀಡುತ್ತಾನೆ.

ಹಾಗಾದರೆ ಭಾಷೆ ಹೊಸ ಸಂಗತಿಗಳನ್ನು ಹೇಗೆ ಕೈಕಾರ್ಯ ಮಾಡುತ್ತದೆ? ಎಂದು ಕೇಳಬಹುದು. ಪ್ರಾಚೀನ, ಮಧ್ಯಮ, ಹಾಗೂ ಆಧುನಿಕ ಯುಗಗಳಲ್ಲಿ ಬದಲಾಗುತ್ತ ಬಂದಿರುವ ನಮ್ಮ ನಂಬಿಕೆಗಳಿಗೆ ತಕ್ಕಂತೆ ಭಾಷೆಯೂ ಬದಲಾಗಬೇಕಲ್ಲವೇ? ನಿಜ, ಆದರೆ ಈ ಬದಲಾವಣೆ ಒಂದು ರೀತಿಯ ‘ಹೊಂದಾಣಿಕೆ’ಯ ಮೂಲಕ ನಡೆಯುವುದನ್ನು ಭಾಷೆ ಬಯಸುತ್ತದೆ. ಭಾಷೆಯೆಂದರೇ ಅರ್ಥ ಮತ್ತು ಸಂಜ್ಞೆಯ ಹೊಂದಾಣಿಕೆ ಯಾದ್ದರಿಂದ ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಉದಾಹರಣೆಗೆ, ಸೆಪ್ಟೆಂಬರ್, ಒಕ್ಟೋಬರ್ ಮುಂತಾದ ಹೆಸರುಗಳನ್ನೇ ತೆಗೆದುಕೊಂಡರೆ, ಇವುಗಳನ್ನು ನಾವಿಂದು ಮೂಲ ಕ್ರಮಾಂಕವನ್ನು ಮೀರಿ ಬಳಸುವುದರಿಂದ ಸಂವಹನದಲ್ಲಿ ದೊಡ್ಡ ಗಂಡಾಂತರವೇನೂ ಆಗಿಲ್ಲ; ಆಗುತ್ತಿದ್ದರೆ ಬಹುಶಃ ಅವು ಚಲಾವಣೆಯಲ್ಲಿ ಇರುತ್ತಿರಲಿಲ್ಲ. ಕೆಲವು ಭಾಷಾಮೋಹಿಗಳನ್ನು ಬಿಟ್ಟರೆ ಸೆಪ್ಟೆಂಬರ್ ಹೆಸರಿನ ಏಳು ಎಂಬ ಅರ್ಥವಿದೆಯೆಂದು ಅದನ್ನು ಉಪಯೋಗಿಸುವ ಜನರಿಗೆ ಗೊತ್ತೂ ಇಲ್ಲ! ಭಾಷೆಯನ್ನು ನಮ್ಮ ದೈನಂದಿನದಲ್ಲಿ ಉಪಯೋಗಿಸುವಾಗ ನಾವು ಅದರ ಚರಿತ್ರೆಯ ಕುರಿತಾಗಲಿ ರೂಪಕತ್ವದ ಕುರಿತಾಗಲಿ ಯೋಚಿಸುವುದಿಲ್ಲ; ಬದಲು, ಸಮಕಾಲೀನತೆಯಲ್ಲಿ ಅದಕ್ಕೆ ಯಾವ ಸಂಜ್ಞಾಮೌಲ್ಯವಿದೆಯೆಂದು ಯೋಚಿಸುತ್ತೇವೆ. ಈ ಹಿನ್ನೆಲೆಯಲ್ಲಿ ಈಗ ಸೆಪ್ಟೆಂಬರ್‌ಗೆ ಒಂಬತ್ತನೇ ತಿಂಗಳು ಎಂಬ ಅರ್ಥ; ಇದನ್ನು ಉಪಯೋಗಿಸುವ ಎಲ್ಲರೂ ಈ ಅರ್ಥವನ್ನು ಸ್ಜೀಕರಿಸಿಕೊಂಡಿರುವ ಕಾರಣ ಇದರಲ್ಲಿ ಯಾವ ಗೊಂದಲಕ್ಕೂ ಕಾರಣವಿಲ್ಲ. ಅದೇ ರೀತಿಯಲ್ಲಿ, ಸೂರ್ಯ ಭೂಮಿಯ ಸುತ್ತ ತಿರುಗುವುದಿಲ್ಲ ಎಂದು ಗೊತ್ತಿದ್ದರೂ ‘ಸೂರ್ಯ ಮೂಡಿದ, ಮುಳುಗಿದ’ ಎಂಬಿತ್ಯಾದಿ ಮಾತನ್ನು ನಾವು ಆಡುತ್ತಲೇ ಇದ್ದೇವೆ. ಇದರ ಅರ್ಥ ನಾವು ಅಜ್ಞಾನಿಗಳೆಂದೇನೂ ಅಲ್ಲ, ನಾವಿನ್ನೂ ವಿದ್ಯಮಾನೀಯ ಜಗತ್ತಿನಲ್ಲೇ ವ್ಯವಹರಿಸುವವರು ಎಂದು.

ಕನ್ನಡದಲ್ಲಿ ಉಪಯೋಗವಾಗುತ್ತಿರುವ ಹಲವು ಪದಗಳ ಹಿಂದಣ ಅರ್ಥಗಳನ್ನು ನಾವಿಂದು ಮರೆತಿದ್ದೇವೆ. ಉದಾಹರಣೆಗೆ, ‘ಎಣ್ಣೆ’ ಎಂಬ ಪದ ‘ಎಳ್+ನೆಯ್’ ಎಂಬ ಸಮಾಸ ಪದದಿಂದ ಹುಟ್ಟಿದುದು: ಎಳ್ಳಿನ ತುಪ್ಪ ಎಂದು ಇದರ ಮೂಲಾರ್ಥ. ಬಹುಶಃ ಒಂದು ಕಾಲದಲ್ಲಿ ‘ಎಣ್ಣೆ’ಯನ್ನು ತೆಗೆಯುತ್ತಿದ್ದುದು ಎಳ್ಳಿನಿಂದ ಮಾತ್ರವೇ ಇದ್ದಿರಬಹುದು. ಸಂಸ್ಕೃತದ ‘ತೈಲ’ ಎಂಬ ಪದದಲ್ಲೂ ಇದನ್ನೇ ಕಾಣುತ್ತೇವೆ: ತಿಲದಿಂದ ತೆಗೆದದ್ದು ತೈಲ; ತಿಲವೆಂದರೆ ಎಳ್ಳು. ಕ್ರಮೇಣ ಇತರ ಕಾಳುಗಳಿಂದಲೂ ಈ ದ್ರವ್ಯವನ್ನು ತೆಗೆಯುವ ಕಾಲಕ್ಕೆ ಎಣ್ಣೆ ಹಾಗೂ ತೈಲ ಎಂಬ ಪದಗಳ ಅರ್ಥ ವಿಸ್ತೃತಗೊಂಡಿತು. ಆದರೆ ಇಂದು ಈ ಮೂಲಗಳನ್ನು ನಾವು ಮರೆತಿದ್ದೇವೆ. ಆದರಿಂದ ನಮ್ಮ ಉಪಯೋಗದಲ್ಲಿ ಯಾವ ಗೊಂದಲವೂ ಇಲ್ಲ. ಎಳ್ಳೆಣ್ಣೆ, ತೆಂಗಿನೆಣ್ಣೆ, ಹರಳೆಣ್ಣೆ ಮುಂತಾದವಲ್ಲಿ ನಾವು ‘ಎಣ್ಣೆ’ ಎಂಬ ಪದದ ಮೂಲಾರ್ಥವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ; ತೆಗೆದುಕೊಂಡರೆ ‘ಅನರ್ಥ’ವುಂಟಾಗುತ್ತದೆ. ಅರ್ಥವಿಸ್ತರಣೆಗೆ ವಿರುದ್ಧವಾದ ಅರ್ಥಸಂಕುಚಿತತೆಯೂ ಭಾಷಾಬದಲಾವಣೆಯ ಇನ್ನೊಂದು ವಿಧಾನ. ಈಚೆಗಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ನಮ್ಮ ದೇಶದಲ್ಲಿ ಟೀವಿ ಆರಂಭಗೊಂಡಾಗ ಅದಕ್ಕೆ ‘ದೂರದರ್ಶನ’ ಎಂದು ಹೆಸರಿಡಲಾಯಿತು; ಆ ಕಾಲದಲ್ಲಿ ‘ದೂರದರ್ಶನ’ ಎನ್ನುವ ಪದ ಇಂಗ್ಲಿಷ್‌ನ ಟೆಲಿವಿಶನ್ ಎಂಬ ಪದದ ಭಾಷಾಂತರವಾಗಿತ್ತು. ಆಗ ಪ್ರಚಲಿತವಿದ್ದುದು ಒಂದೇ ವಾಹಿನಿ (ಚಾನೆಲ್). ಆದರೆ ನಂತರದ ದಶಕಗಳಲ್ಲಿ ಅನೇಕ ಖಾಸಗಿ ವಾಹಿನಿಗಳು ಸುರುವಾದ್ದರಿಂದ ದೂರದರ್ಶನವೆನ್ನುವುದು ಸರಕಾರಿ ವಾಹಿನಿಯೆಂಬ ಸಂಕುಚಿತ ಅರ್ಥವನ್ನು ಪಡೆದುಕೊಂಡಿತು. ಸರಕಾರ ಕೂಡಾ ಹೆಚ್ಚೆಚ್ಚು ವಾಹಿನಿಗಳನ್ನು ಆರಂಭಿಸಿದ ಮೇಲೆ ದೂರದರ್ಶನ (ಡಿ.ಡಿ.) ಎನ್ನುವುದು ಸರಕಾರಿ ಹಿಡಿತದಲ್ಲಿರುವ ಟೀವಿ ಸಂಸ್ಥೆ ಎಂಬ ಅರ್ಥ ಪಡೆದಿದೆ.

ಸಮಾಜವೊಂದು ಬದಲಾದಾಗ ಸಾಮಾಜಿಕ ಮೌಲ್ಯಗಳೂ ಬದಲಾಗುತ್ತವೆ. ಭಾಷೆ ಅಂಥ ಬದಲಾವಣೆಗೆ ಹೊಂದಿಕೊಳ್ಳುವುದು ಅಷ್ಟೊಂದು ಸುಗಮವಲ್ಲ. ಶೇಕ್ಸ್‌ಪಿಯರನ ಕಾಲದಲ್ಲಿ ಇಂಗ್ಲಿಷ್‌ನಲ್ಲಿ you ‘ನೀವು’ ಮತ್ತು thou ‘ನೀನು’ ಎಂಬ ವ್ಯತ್ಕಾಸಗಳಿದ್ದುವು; ಮೊದಲನೆಯದು ಬಹುವಾಚಕವಾಗಿ ಇಲ್ಲವೇ ಬಹುಮಾನ ವಾಚಕವಾಗಿ ಬಳಕೆಯಾಗುತ್ತಿದ್ದ ಸರ್ವನಾಮ; ಎರಡನೆಯದು ಏಕವಾಚಕವಾಗಿ, ಬಹುಮಾನರಹಿತವಾಗಿ ಬಳಕೆಯಾಗುತ್ತಿದ್ದುದು. ಇದೊಂದು ಶ್ರೇಣೀಕೃತ ಸಮಾಜದ ಮೌಲ್ಯಕ್ಕೆ ಬದ್ಧವಾದ ವ್ಯತ್ಯಾಸ. ಶೇಕ್‌ಸ್ಪಿಯರನ ನಾಟಕಗಳಲ್ಲಿ ಈ ಎರಡೂ ಸರ್‍ವನಾಮಗಳ ಉಪಯೋಗವನ್ನು ಕಾಣುತ್ತೇವೆ. ಮುಂದೆ ಇಂಗ್ಲಿಷ್ ಈ ವ್ಯತ್ಯಾಸವನ್ನು ಬಿಟ್ಟು you ಎಂಬ ಸರ್ವನಾಮವನ್ನು ಸಾರ್ವತ್ರಿಕವಾಗಿ ಉಪಯೋಗಿಸಲು ಸುರುಮಾಡಿತು. ಆದರೆ ಮೊದಲೇ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ತಿರಸ್ಕರಿಸಿದ ಫ್ರೆಂಚ್ ಮಾತ್ರ ಇನ್ನೂ ಭಾಷೆಯಲ್ಲಿ ಈ ವ್ಯತ್ಯಾಸವನ್ನು ಇಟ್ಟುಕೊಂಡಿದೆ. ಇನ್ನು ಸ್ತ್ರೀವಾದಿಗಳು ಎಲ್ಲ ಭಾಷೆಗಳನ್ನೂ man-made ‘ಪುರುಷ- ನಿರ್ಮಿತ’ ಎಂದು ಟೀಕಿಸುತ್ತಾರೆ; ಯಾಕೆಂದರೆ ಯಾವುದೇ ಭಾಷೆಯನ್ನು ತೆಗೆದು ನೋಡಿದರೂ ಅದರಲ್ಲಿ ಕಾಲಾಂತರದಿಂದಲೂ ನಡೆದು ಬಂದಿರುವ ಸಾಮಾಜಿಕ ಲಿಂಗತಾರತಮ್ಯದ ‘ಕುರುಹು’ಗಳನ್ನು ಕಾಣಬಹುದಾಗಿದೆ.

ಇಂಥ ಅಸಮರ್ಪಕತೆಯನ್ನೆಲ್ಲ ಒಮ್ಮೆಲೇ ಝಾಡಿಸಿಬಿಟ್ಟು ವೈಜ್ಞಾನಿಕವೂ ವರ್ಗರಹಿತವೂ ಆದ ಭಾಷೆಯೊಂದನ್ನು ನಾವು ನಿರ್ಮಿಸಲು ಸಾಧ್ಯವಿಲ್ಲವೇ? ಕೆಲವೊಂದು ವಿಷಯಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು; ಆದರೆ ಭಾಷೆಯನ್ನು ತೀವ್ರವಾಗಿಯೂ ಆಮೂಲಾಗ್ರವಾಗಿಯೂ ಬದಲಾಯಿಸಿಬಿಡುವುದು ಅಸಾಧ್ಯ. ಹಾಗೆ ಮಾಡಿದರೆ ಮೋರಿಗೆ ನೀರಿನ ಜತೆ ಮಗುವನ್ನು ಚೆಲ್ಲಿದಂತಾಗುತ್ತದೆ! ಆದಷ್ಟೂ ಹೊಂದಿಸಿಕೊಂಡು ಹೋಗಬೇಕೆನ್ನುವುದೇ ಭಾಷೆ ನಮಗೆ ಕಲಿಸುವ ಮೊದಲ ಹಾಗೂ ಕೊನೆಯ ಪಾಠ. ಬದಲಾಗುವುದಕ್ಕೆ ಅದು ತಯಾರಿರುತ್ತದೆ, ಆದರೆ ತೀವ್ರಗತಿಯಲ್ಲಿ ಆಗಬೇಕೆಂದರೆ ತಲ್ಲಣಿಸುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮೋ ನಮೋ
Next post ನಿಮೀಲನ

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…