ಮುಟ್ಟುವುದೆಂದರೆ ಮುಟ್ಟದಿರುವುದು
ಮುಟ್ಟದಿರುವುದೆಂದರೂ ಮುಟ್ಟುವುದು
ಕಣ್ಣಾಗಿ ಕಾದು ಕೂತ
ಮೈಮರೆವಿನ ಎಚ್ಚರದಲಿ
ಎವೆಗಳೊಂದಾಗುವ ಚಡಪಡಿಕೆ
ಮುಟ್ಟಿತಾಗುವ ಮೈಮರೆವು.
ಒಂದಾಗಿಯೂ ಬೇರಾದ
ಎರಡಾಗಿಯೂ ಒಂದಾದ ಕಣ್ಣೆವೆ
ಮೈ ಮರೆವಿನಲ್ಲೂ
ಮೊಗ್ಗುಗಳರಳಿ ಪಸರಿಸಿದ ಗಂಧ
ಒಳಗೇ ಒಳಗಾಗುವ
ಕಾಯದಚ್ಚರಿಗೆ ಕೈ ಮುಗಿದು
ಒಂದು ಇನ್ನೊಂದರೊಳಗಿದ್ದು
ತುಂಬಿಕೊಳುವ ಅಲೆ ಅಲಲೆ
ವಾಚಾಳಿ ಮನಸು
ದಿಟ್ಟಿ ತೆರೆದಿಟ್ಟೇ ನಿದ್ದೆಗಿಳಿಯುತ್ತದೆ
ರೆಪ್ಪೆಯಲುಗುವಿಕೆಗೂ ರೋಮಾಂಚನ.
ನಿಶೆಯೊತ್ತಾಯದ ಕಾಣ್ಬಾರಕ್ಕೂ
ತೂಕಡಿಸದ ಮನಸು
ಮೈಯೆಲ್ಲಾ ಕಣ್ಣಾದ
ಹೊರ ಎಚ್ಚರದಲ್ಲೂ
ಒಳಗಿನ ಮೈಮರೆವು
ಮುಟ್ಟುವುದೆಂದರೆ ಒಂದು ಎಚ್ಚರ
ಮೈಮರೆವುದೆಂದರೂ ಇನ್ನೊಂದು ಎಚ್ಚರ.
ನಿಮೀಲನಕ್ಕೆ ಒಳಗಿನೆಚ್ಚರ
ಹೊರಗಿನ ಮೈಮರೆವು!
*****