ಕನ್ನಡಕ್ಕಾಗಿ ಕಂಠ ಕಟ್ಟಿದರು

ಕನ್ನಡಕ್ಕಾಗಿ ಕಂಠ ಕಟ್ಟಿದರು

ಕರ್ನಾಟಕದಲ್ಲಿ ಬಿಟ್ಟಿ ಸಿಕ್ಕಿರುವ ವ್ಯಕ್ತಿಯೆಂದರೆ ಕನ್ನಡಿಗ, ಈತ ವ್ಯಕ್ತಿಯಿರಬಹುದು, ಸಮೂಹವೂ ಆಗಿರಬಹುದು, ಶಕ್ತಿಯೂ ಆಗಿರಬಹುದು ಅಥವಾ ಏನು ಆಗಬೇಕೆಂಬ ಗೊಂದಲದಲ್ಲಿರಬಹುದು. ಹೀಗಾಗಿ ಈತ ಎಲ್ಲಿ ಯಾವ ರೂಪದಲ್ಲಿದ್ದಾನೆಂದು ಕಂಡುಕೊಳ್ಳುವುದು ಕನ್ನಡದ ಒಂದು ಮುಖ್ಯ ಸಂಶೋಧನೆಯಾದೀತು! ಆದರೆ ಇಷ್ಟಂತೂ ನಿಜ; ಈತ ಸರ್ವಾಂತರ್ಯಾಮಿ; ಕಾಲಾತೀತ ಕನ್ನಡಿಗ. ದೇವರಿದ್ದಾನೋ ಇಲ್ಲವೋ ಈತನಂತ ದೇವರಂತೆಯೇ ಕಾಣಿಸುವುದಿಲ್ಲ; ಕಂಡೆ ಭ್ರಮ ಹಿಡಿಸಿ ಕಂಡ ಕಂಡವರ ಬಾಯಲ್ಲಿ ವಿಜೃಂಭಿಸಿ ತನ್ನ ಪಾಡಿಗೆ ತಾನು ಎಲ್ಲೋ ಒಂದು ಕಡೆ ನಕ್ಕ ನಗೆಯಾಗುತ್ತಾನೆ; ಹಕ್ಕಿ ಹಾರಾಟವಾಗುತ್ತಾನೆ; ಚುಕ್ಕಿ ಚೆಲುವಾಗುತ್ತಾನೆ. ಮಾತಿನ ಹಿಂದೆ ಮೌನವಾಗಿ, ಆಕಾರದ ಹಿಂದಿನ ನಿರಾಕಾರವಾಗಿ, ಸಂಭವಗಳಿಗೆಲ್ಲ ಸಾಕ್ಷಿಯಾಗಿ ನೋಡುತ್ತಲೇ ಇದ್ದಾನೆ. ಈತನ ಬಗ್ಗೆ ನಡೆಯುವ ಚರ್ಚೆ, ಬಿಗಿಯುವ ಭಾಷಣ, ಕೊಡುವ ಆಶ್ವಾಸನೆಗಳು ಸರಮಾಲೆಯಲ್ಲಿ ಸೆರೆ ಸಿಕ್ಕಿದಂತೆ ಒದ್ದಾಡುತ್ತಾನೆ. ಮತ್ತೆ ಮತ್ತೆ ಮಾನಹಾನಿ ಮಾಡಿಸಿಕೊಳ್ಳಲು ಇಚ್ಚಿಸದೆ, ವಿಷಾದದ ಹೊಗೆಯಲ್ಲಿ ಹುಸಿ ನಗೆ ಚಿಮ್ಮಿಸುತ್ತ, ಸಂಕಟದಲ್ಲಿ ಹುಸಿ ಸಂಭ್ರಮ ತೋರುತ್ತ, ರಾಜ್ಯೋತ್ಸವದಿಂದ ರಾಜ್ಯೋತ್ಸವಕ್ಕೆ ದಾಟುವಾಗ ಸೆರೆಮನೆಗಳು ಬದಲಾದಂತೆ ಭಾವಿಸುತ್ತ ಅಂತೂ ಬದುಕಿದ್ದಾನೆ. ನಿಜ ಹೇಳಬೇಕೆಂದರೆ ನಮ್ಮ ಶ್ರೀಮಾನ್ ಕನ್ನಡಿಗರಿಗೆ ಅನ್ಯ ಭಾಷಿಕರ ಬಗ್ಗೆ ದ್ವೇಷವಿಲ್ಲ. ಸ್ವಂತ ಭಾಷಿಕರ ಬಗ್ಗೆ ನಂಬಿಕೆಯೂ ಇಲ್ಲ. ಆದರೆ ತನ್ನ ಹೆಸರನ್ನು ಅನ್ಯ ಭಾಷಿಕರಿಗೆ ವಿರುದ್ಧವಾಗಿ ಬಳಸುವುದೇ ಬಂಡವಾಳವಾಗುತ್ತಿರುವುದನ್ನು ಕಂಡು ಕಳವಳಪಟ್ಟು ತನ್ನನ್ನು ತಾನು ನೋಡಿಕೊಳ್ಳುತ್ತಾನೆ. ತನ್ನ ಶರೀರದ ಕೃಶವಾಗಿದೆ; ಆದರೆ ಕ್ಷಯರೋಗವಿಲ್ಲ; ಮುಖ ಸಪ್ಪಯಾಗಿದೆ; ಆದರೆ ಸಕ್ಕರೆ ರೋಗ ವೇನು ಇಲ್ಲ. ಕಾಲುಗಳು ನೋಯುತ್ತಿವೆ; ಹೆಳವನಾಗಿಲ್ಲ. ಶತಶತಮಾನದ ಸೂತ್ರದಲ್ಲಿ ಸೊರಗಿ ಸುಣ್ಣವಾದ ಸಂಕಟ ಮಾತ್ರ ಕೊರೆಯುತ್ತಿದೆ; ಈತನ ಹೆಸರಿನಲ್ಲಿ ನಿರಂತರವಾಗಿ ಕೊರೆಯಲಾಗುತ್ತಿದೆ.

ಕನ್ನಡಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವವರಿರುವಂತೆ, ಕೇವಲ ಕಂಠ ಕಟ್ಟಿದ ಕಟ್ಟಾಳುಗಳೂ ಇದ್ದಾರೆ. ಜನಸಂಖ್ಯೆ ನಾಲ್ಕು ಕೋಟಿ ದಾಟಿದ್ದರೂ ಇನ್ನೂ ‘ಮುಕ್ಕೋಟಿ ಕನ್ನಡಿಗರು’ ಎಂದು ಬಾಯಿಪಾಠ ಒಪ್ಪಿಸುತ್ತ ನೀರಿಲ್ಲದ ನದಿಗೆ ಅಣೆಕಟ್ಟು ನಿರ್ಮಿಸಲು ನಾಯಕರು ಹೆಚ್ಚುತ್ತಿದ್ದಾರೆ. ಕನ್ನಡ ಪ್ರಜ್ಞೆಯ ಬದಲು ಕನ್ನಡದ ಪೂಜೆ ಹೆಚ್ಚಾಗುತ್ತಿದ್ದು ಕನ್ನಡಿಗನೇ ಹೆದರಿ ಕಂಡೂ ಕಾಣದದಂತಾಗಿದ್ದಾನೆ. ಕನ್ನಡದ ಪೂಜಾರಿಗಳಿಂದ ಕನ್ನಡಿಗನನ್ನು ಕಾಪಾಡಬೇಕಾದ ಹೊಣೆ ಪ್ರಜ್ಞಾವಂತರ ಮೇಲಿದೆ. ಯಾಕೆಂದರೆ ನಿಜವಾದ ಕನ್ನಡಿಗ ಶ್ರೀಸಾಮಾನ್ಯನಾಗಿದ್ದು ಆತ ಪೂಜೆಗಳನ್ನು ಬಯಸುವವನೂ ಅಲ್ಲ; ಪೂಜಾರಿಗಳ ಗೊಡವೆಯೂ ಬೇಕಿಲ್ಲ. ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗುವ ಸಹಜ ಕನ್ನಡದಲ್ಲಿ ಮಾತ್ರ ಆತನಿಗೆ ಆಸಕ್ತಿ; ಅದೂ ಆರ್ಭಟದಲ್ಲಿ ಅಭಿವ್ಯಕ್ತಗೊಳ್ಳದೆ ಅಂತರ್ಗತ ನೆಲೆಯಾಗಿರುವ ಆಸಕ್ತಿ. ಇಂಥ ಕನ್ನಡಿಗನ ಅಭಿಮಾನವನ್ನು ಪ್ರಶ್ನಿಸುವುದೇ ಪ್ರತಿ ನಿತ್ಯದ ಕಾಯಕ ಮಾಡಿಕೊಂಡ ಕೆಲ ಕನ್ನಡ ಕಲಿಗಳು ಕನ್ನಡಿಗನಿಗೂ ವಂಚನೆ ಮಾಡುತ್ತಾನೆ; ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾರೆ. ‘ಕನ್ನಡಿಗರು ನಿರಭಿಮಾನಿಗಳು’ ಎಂದು ವೇದಿಕೆಗಳ ಮೇಲೆ ಘೋಷಿಸುತ್ತ ತಮ್ಮನ್ನು ತಾವು ಪೋಷಿಸಿಕೊಳ್ಳುತ್ತಾರೆ. ಪ್ರತಿ ಭಾಷಣದಲ್ಲಿ ನಿರಭಿಮಾನಿ ಎನ್ನಿಸಿಕೊಳ್ಳುತ್ತಲೇ ಬಂದ ಕನ್ನಡಿಗ ತಾನೂ ಅದನ್ನು ನಂಬ ತೊಡಗಿದ್ದಾನೆ. ಎಷ್ಟು ಸಾರಿ ಹೇಳಿದ ಮೇಲೆ ತಾನು ನಿರಭಿಮಾನಿ ಇರಬಹುದೆಂದು ಭಾವಿಸಿ ‘ಕನ್ನಡಿಗ ನಿರಭಿಮಾನಿ’ ಎಂದು ತಾನೂ ಹೇಳಿ ಹೊರಟಿದ್ದಾನೆ. ಅಂದರೆ ಪ್ರತಿ ಕನ್ನಡಿಗನನ್ನೂ ನಿರಭಿಮಾನಿಯನ್ನುತ್ತಲೇ ನಿರಭಿಮಾನಿಗಳನ್ನೆಲ್ಲ ನಾಯಕರನ್ನಾಗಿ ಮಾಡುತ್ತಿರುವ ಕನ್ನಡದ ಕೆಲವು ಕಟ್ಟಾಳುಗಳು ಕನ್ನಡಿಗನೇ ಇಲ್ಲದಂತೆ ಮಾಡಿಬಿಟ್ಟರೆ ಏನು ಗತಿ ಎನಿಸುತ್ತದೆ. ಯಾಕೆಂದರೆ ಕನ್ನಡಿಗನ ಬದಲು ಕನ್ನಡದ ಪೂಜಾರಿಗಳೂ-ಕನ್ನಡದ ಕಂಠಾಳುಗಳೂ ಬೀದಿಬೀದಿಯಲ್ಲಿ ಬಾಯಾಗಿ, ಬಾಯಿ ಬಂಡವಾಳವಾಗಿ ಇಡೀ ಕರ್ನಾಟಕವೇ ಕನ್ನಡ ಪೂಜಾರಿಗಳ ಒಕ್ಕಲಾಗಿ, ವಿಜೃಂಭಿಸತೊಡಗಿದರೆ ನಿಜವಾದ ಕನ್ನಡಿಗ ಕಲ್ಲಾಗಿ ಬಿಡುತ್ತಾನೆ! ನಾಯಕ ಮತ್ತು ನಿರಭಿಮಾನಿಗಳು ಸಮಾನ ಪದಗಳಲ್ಲಿ ಬಿಡುತ್ತವೆ!

ಮುಖ್ಯ ಸಂಗತಿಯೆಂದರೆ-ಕನ್ನಡಿಗನನ್ನು ನಿರಭಿಮಾನಿ ಎಂದು ಕರೆಯುವವರು ನಾವು ನಿಜಕ್ಕೂ ಅಭಿಮಾನಿಗಳೇ ಎಂದು ಕೇಳಿಕೊಳ್ಳಬೇಕು; ಕನ್ನಡದ ಸಮಸ್ಯೆಯನ್ನು ಸಾಮಾಜಿಕ ಹೋರಾಟವನ್ನಾಗಿ ಪರಿವರ್ತಿಸಲು ಸಾಧ್ಯವಾಗದೆ ಕೇವಲ ಅನ್ಯ ನೆಲೆಗಳಲ್ಲಿ ಕಾರಣ ಹುಡುಕುತ್ತಾ ಹೊತ್ತು ಕಳೆಯುವ ಪ್ರವೃತ್ತಿಯನ್ನು ಸಾರ್ವತ್ರೀಕರಿಸುವುದು ಕನ್ನಡದ ನಿಜವಾದ ಕಾಳಜಿಯೇ ಎಂಬುದನ್ನು ತಮಗೆ ತಾವೇ ಪ್ರಶ್ನಿಸಿಕೊಳ್ಳಬೇಕು. ಕನ್ನಡದ ವಿಷಯ ಬಂದಾಗ ಯಾರೂ ಸುಲಭವಾಗಿ ಭಿನ್ನಮತವನ್ನು ಪ್ರಕಟಿಸುವುದಿಲ್ಲವೆಂಬ ಭಾವನೆಯನ್ನು ಬಂಡವಾಳ ಮಾಡಿಕೊಂಡು ಕನ್ನಡಪ್ರಜ್ಞೆಗೆ ಅನ್ಯಾಯ ಮಾಡುವುದು ತಪ್ಪಬೇಕು.

ತನ್ನ ಬದುಕನ್ನು ಅಲುಗಾಡಿಸುವ ವಿಷಯಗಳಲ್ಲಿ ಮಾತ್ರ ಆಸಕ್ತಿ ವಹಿಸುವುದು ಜನಸಾಮಾನ್ಯನ ಮನೋಧರ್ಮವಾಗಿದೆ. ಕನ್ನಡವನ್ನು ಅನ್ಯರ ಮೇಲೆ ಹಾಯುವ ಅಸ್ತ್ರವಾಗಿ ಬಳಸದೆ, ಕರ್ನಾಟಕದ ಹಾಗೂ ಕನ್ನಡಿಗ ಬದುಕನ್ನು ಕಂಡುಕೊಳ್ಳಲು ಮಾಧ್ಯಮವಾಗಿ ಬಳಸತೊಡಗಿದರೆ ಕನ್ನಡಿಗನಿಗೆ ತನಗೆ ತಾನೇ ಆಸಕ್ತಿ ಅರಳುತ್ತದೆ. ಈಗ ಕೆಲವು ಸಂದರ್ಭಗಳಲ್ಲಾದರೂ ಕನ್ನಡಿಗನ ಬದುಕನ್ನು ಒಳಗೊಳ್ಳುವಂತೆ ಕನ್ನಡ ವಿಚಾರಗಳು ಹೊರಬರುತ್ತಿರುವುದು ಸ್ವತಃ ಕನ್ನಡಿಗನಿಗೆ ಸಮಾಧಾನದ ಸಂಗತಿಯಾಗಿದೆ.

ನಾವು ಒಂದು ಮಾತನ್ನು ಚೆನ್ನಾಗಿ ನೆನಪಿಡಬೇಕು; ಪ್ರತಿ ಕನ್ನಡಿಗನೂ ಮಹಾತ್ಮ ಗಾಂಧಿಯಾಗಬೇಕಿಲ್ಲ ; ಆಗಬೇಕಿಲ್ಲ ಎನ್ನುವುದಕ್ಕಿಂತ ಆಗಲಾರ ಎನ್ನುವುದೇ ಸರಿಯಾದೀತು. ಅಂದರೆ ಪ್ರತಿಯೊಬ್ಬರೂ ಆದರ್ಶದಲ್ಲಿ ಅವತರಿಸಬೇಕೆಂದು ಕನ್ನಡ ನಾಯಕರು ನಿರೀಕ್ಷಿಸಬಾರದು. ಇಂಗ್ಲೀಷ್ ಮಾಧ್ಯಮದ ‘ಭ್ರಮೆ’ಗೆ ಇಡೀ ಸಮಾಜವೇ ಸಿಕ್ಕಿರುವಾಗ ಕನ್ನಡಿಗ ಮಾತ್ರ ಅದಕ್ಕೆ ಹೊರತಾಗಬೇಕೆಂದು ಬಯಸುವುದು, ಅದು ಸಾಧ್ಯವಾಗದೆ ಇದ್ದಾಗ ನಿರಭಿಮಾನಿ ಎಂದು ದೂಷಿಸುವುದು ಕನ್ನಡಿಗರಿಗೆ ಮಾಡಿದ ಅವಮಾನ ಎಂದೇ ನಾನು ಭಾವಿಸುತ್ತೇನೆ. ಆಯ್ಕೆಗೆ ಅವಕಾಶವಿಲ್ಲದಂತೆ ಪ್ರಾಥಮಿಕ ಶಿಕ್ಷಣ ಮಾಧ್ಯಮದಲ್ಲಿ ಏಕರೂಪತೆಯನ್ನು ಅಳವಡಿಸುವುದು ಮಾತ್ರವೇ ಇದಕ್ಕೆ ಪರಿಹಾರ. ಸುಪ್ರೀಂಕೋರ್ಟ್ ತೀರ್ಪು ಮಾತೃಭಾಷಾ ಮಾಧ್ಯಮಕ್ಕೆ ಪೂರ್ಣ ಪೂರಕವಾಗಿರುವುದರಿಂದ ಬೇರೆ ಮಾತಿಗೂ ಅವಕಾಶವಾಗುವುದಿಲ್ಲ. ವಾಸ್ತವದ ನೆಲೆಯಲ್ಲಿ ಕನ್ನಡಿಗನ ಅಂತಃಸ್ಥಿತಿಯನ್ನು ಆಲೋಚಿಸದೆ ಅಭಿಮಾನದ ಪ್ರಶ್ನೆಗೆ ಉತ್ತರ ಹುಡುಕುವುದು ಅವೈಚಾರಿಕವಾಗುತ್ತದೆ. ಕನ್ನಡಿಗರಿಗಿಂತ ಕನ್ನಡದ ಪೂಜಾರಿಗಳು ಈ ಅವೈಚಾರಿಕ ನೆಲೆಯಿಂದ ಹೊರಬರಬೇಕಾಗಿದೆಯೆಂದು ನಾನು ಭಾವಿಸುತ್ತೇನೆ. ಯಾಕೆಂದರೆ ತಂತಮ್ಮ ಮಿತಿಗಳನ್ನು ದೌರ್ಬಲ್ಯಗಳನ್ನು ಕನ್ನಡಿಗರ ಮೇಲೆ ಹಾಕಿ ಆರ್ಭಟಿಸುವವರು ಪ್ರಜ್ಞಾಹೀನ ಪೂಜಾರಿಗಳು ಮಾತ್ರವೆಂದು ನನ್ನ ಖಚಿತ ನಂಬಿಕೆ. ಗೋಕಾಕ್ ಸಮಿತಿ ರಚನೆಯಾದ ಸಂದರ್ಭದಲ್ಲಿ ನನ್ನಂಥ ಅನೇಕರು ಮಾತೃಭಾಷೆಗಳೆಲ್ಲ ಪ್ರಥಮ ಭಾಷೆಗಳಾಗಿರಬೇಕೆಂದೂ ‘ಮೃತಭಾಷೆ’ಗೆ ಪ್ರಥಮ ಭಾಷೆಯ ಸ್ಥಾನ ಸಲ್ಲದೆಂದೂ ವಾದಿಸುತಿದ್ದಾಗ, ಕನ್ನಡ ಮಾಧ್ಯಮಕ್ಕಾಗೇ ಕಂಠ ಕಟ್ಟಿ ನಿಂತ ಕೆಲವರು-ಅದರಲ್ಲೂ ಕೆಲ ಹಿರಿಯರು-ಸಂಸ್ಕೃತದ ಬಗ್ಗೆ ವಿರೋಧಿಸಿದ ‘ಅಪವಾದ’ದಿಂದ ಪಾರಾಗಲು ಉಪಾಯವಾಗಿ ಎಲ್ಲಾ ಮಾತೃಭಾಷೆಗಳ ಪರ ಮಾತನಾಡುವ ತತ್ವ ಬದ್ಧತೆಯ ‘ಅಪರಾಧ’ ಮಾಡಲಿಲ್ಲ. ಸಂಸ್ಕೃತವೂ ಸೇರಿದಂತೆ ಎಲ್ಲ ಭಾಷೆಗಳ ವಿಶೇಷ ಕಲಿಕೆಗೆ ಅವಕಾಶ ಕಲ್ಪಿಸುವುದನ್ನು ಯಾವತ್ತೂ ವಿರೋಧಿಸದೆ, ಜನಭಾಷೆಗಳಾದ ಮಾತೃಭಾಷೆಗಳಿಗೆ ಮೊದಲ ಆದ್ಯತೆ ಎಂದು ಹೇಳಿದ ‘ಅಪರಾಧಿ’ ಗಳೆಂದು ನನ್ನಂಥವರನ್ನ ಗುರುತಿಸಲಾಯಿತು. ಆದರೆ ಕನ್ನಡವೂ ಸೇರಿದಂತೆ ಎಲ್ಲ ಮಾತೃಭಾಷೆಗಳಿಗೆ ಸೂಕ್ತ ಪ್ರಾತಿನಿಧ್ಯವಿರಬೇಕೆಂಬ ತತ್ವಕ್ಕೆ ಇಂದು ಮನ್ನಣೆ ಸಿಗುತ್ತಿದೆ. ಅಂದಿನ ‘ಅಪರಾಧಿ’ಗಳಾದ ನಮಗೆ ಇದಕ್ಕಿಂತ ಆನಂದ ಇನ್ನೇನಿದೆ! ಇನ್ನು ಕೆಲವರಿದ್ದಾರೆ. ಇಂಗ್ಲಿಷನ್ನು ವಿರೋಧಿಸುವಾಗ ವಿಜೃಂಭಿಸುತ್ತಾರೆ. ಹಿಂದಿ ಹೇರಿಕೆಯ ವಿಷಯಕ್ಕೆ ಬಂದರೆ ಹಿಂದೆ ಮುಂದೆ ನೋಡುತ್ತಾರೆ. ಕನ್ನಡಕ್ಕೆ ಕಂಠ ಕಟ್ಟಿದ ಇಂಥ ಕೆಲವರಿಗೆ ಸಂಸ್ಕೃತವಾಗಲಿ, ಹಿಂದಿಯಾಗಲಿ, ಒಟ್ಟಿನಲ್ಲಿ ‘ದೇವನಾಗರಿ ಲಿಪಿ’ಯನ್ನು ಕಂಡರೆ ದೇವರನ್ನು ಕಂಡಷ್ಟು ಭಕ್ತಿ; ನಾಗರಹಾವನ್ನು ಕಂಡಷ್ಟು ಭಯ, ಇಂಥವರ ಭಯ-ಭಕ್ತಿಗಳ ನಡುವೆ ಪಾಪದ ಕನ್ನಡಿಗ ಮಾತ್ರ ನಿರಭಿಮಾನಿಯ ಪಟ್ಟ ಕಟ್ಟಿಸಿಕೊಳ್ಳುವುದು ಎಂಥ ವಿಪರ್ಯಾಸ!

ಇನ್ನೊಂದು ವಿಪರ್ಯಾಸದ ಕಡೆಗೂ ಗಮನ ಸೆಳೆಯಬೇಕು. ಕನ್ನಡದಲ್ಲಿ ಪ್ರಾರ್ಥನೆ ಮಾಡುವ ವಿಷಯ ಬಂದಾಗ ಕ್ರೈಸ್ತರ ಚರ್ಚುಗಳನ್ನು ಮಾತ್ರವೇ ಯಾಕೆ ಗುರಿ ಮಾಡಬೇಕು? ಕನ್ನಡಿಗರಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳ ದೇವಾಲಯದಲ್ಲಿ ಸಂಸ್ಕೃತ ಶ್ಲೋಕಗಳು ಯಾಕೆ ಬೇಕು? ಏಸುಕ್ರಿಸ್ತನಿಗೆ ಮಾತ್ರ ಕನ್ನಡ, ಶ್ರೀರಾಮ, ರಾಘವೇಂದ್ರ ಮುಂತಾದವರು ಸಂಸ್ಕೃತ, ಇದು ಯಾವ ಸೀಮೆಯ ನ್ಯಾಯ? ಭಕ್ತಿಯನ್ನು ಭಾಷೆಯಲ್ಲಿ ಅಳೆಯುವುದು ಎಂಥ ಮಾನದಂಡ? ಇನ್ನೊಂದು ಪ್ರಶ್ನೆಯನ್ನೂ ಕೇಳಬೇಕೆನಿಸುತ್ತದೆ-ಕನ್ನಡಕ್ಕೆ ಕಂಠಕಟ್ಟದ ಎಷ್ಟು ಜನ ಕನ್ನಡವನ್ನು ಒಂದು ಸಾಮಾಜಿಕ ಸಮಸ್ಯೆಯನ್ನಾಗಿ ನೋಡುತ್ತಿದ್ದಾರೆ? ಎಷ್ಟು ಜನ ನಾಯಕರಿಗೆ ಕನ್ನಡವನ್ನು ಮತೀಯಗೊಳಿಸು ಬಾರದೆಂಬ ಎಚ್ಚರವಿದೆ? ಯಾವುದೇ ಭಾಷೆಯ ಪ್ರಶ್ನೆ ಕೇವಲ ನುಡಿಗೆ ಸಂಬಂಧಿಸಿದ್ದಲ್ಲ; ಆಯಾ ಭಾಷೆಯನ್ನಾಡುವ ಜನರ ಬದುಕಿನ ಪ್ರಶ್ನೆಯನ್ನಾಗಿ ನೋಡುವುದಲ್ಲದೆ, ಶತಶತಮಾನದಿಂದ ಬೆಳೆದು ಬಂದ ಸಾಮಾಜಿಕ ವ್ಯವಸ್ಥೆಯ ನಡುವೆ ನುಡಿಯ ಪ್ರಶ್ನೆಯನ್ನು ಪರಿಶೀಲಿಸುವುದೂ ಅಗತ್ಯವಾಗುತ್ತದೆ. ಕನ್ನಡ ಮಾತೃಭಾಷೆಯಾದವರು, ಕನ್ನಡ ಮಾತನಾಡುವ ವಾಸಿಗರು ಎಲ್ಲರೂ ಕನ್ನಡಿಗರು ಎಂಬ ಮೊದಲ ತಿಳುವಳಿಕೆಯು ಸಾಧುವಾದುದೆಂಬ ಬಗ್ಗೆ ಎರಡು ಮಾತಿಲ್ಲ; ಆದರೆ ಇದೇ ಸಂದರ್ಭದಲ್ಲಿ ಕನ್ನಡಿಗರಲ್ಲಿ ಇರುವ ಸಾಮಾಜಿಕ ಆರ್ಥಿಕ ಅಂತರಗಳನ್ನು ಅಂತರ್ಗತ ಮಾಡಿಕೊಂಡು ಕನ್ನಡ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಒಟ್ಟಾರೆ ಕನ್ನಡಾಭಿಮಾನ ಎನ್ನುವುದು ಮುಖ್ಯವಾದಂತೆ, ಸಂದರ್ಭ ಬಂದಾಗ ಬಡ ಕನ್ನಡಿಗ ಮತ್ತು ಬಂಡವಾಳಶಾಹಿ ಕನ್ನಡಿಗನ ನಡುವೆ ಆಯ್ಕೆ ಪ್ರಶ್ನೆ ಆಗತ್ಯ. ಕನ್ನಡಿಗರು ಎಂಬ ಒಂದೇ ಕಾರಣಕ್ಕೆ, ಬಡ ಕನ್ನಡಿಗನ ಬೆನ್ನು ಮೂಳೆ ಮುರಿಯುವ ಬಂಡವಾಳಶಾಹಿಯನ್ನು, ಜಾತಿಯ ಕಾರಣಕ್ಕೆ ದಮನಶೀಲವಾಗಿ ವರ್ತಿಸುವ ಎಲ್ಲ ಜಾತಿಗಳ ಪುರೋಹಿತಶಾಹಿಯನ್ನು ಪ್ರತಿಭಟಿಸದೆ ಇದ್ದರೆ ಅಂಥ ಕನ್ನಡಾಭಿಮಾನ ಅರ್ಥ ಕಳೆದುಕೊಳ್ಳುತ್ತದೆ. ಕನ್ನಡ ಹೋರಾಟದ ಪ್ರತಿ ಹಂತದಲ್ಲಿ ಈ ಪ್ರಶ್ನೆ ದವವಾಗದಿರಬಹುದಾದರೂ ಕನ್ನಡಾಭಿಮಾನ ಕೇವಲ ಕಂಠವಾಗುವ ಅಪಾಯವಿದ್ದೇ ಇದೇ. ಅನ್ಯರ ಉಪದೇಶಕ್ಕೆ ಹುಟ್ಟಿದ ಆದರ್ಶವಾಗುವ ಅಭಿಮಾನ ಅರ್ಥಹೀನವೆಂಬುದನ್ನು ಅರಿತುಕೊಂಡು ಕನ್ನಡಾಭಿಮಾನಕ್ಕೆ ಸಾಮಾಜಿಕ ಪ್ರಜ್ಞೆಯ ಆಯಾಮವನ್ನು ಅಂತರ್ಗತ ಮಾಡಿಕೊಂಡಾಗ ಆರೋಗ್ಯಕರ ಮನೋಧರ್ಮ ಬೆಳೆಯುತ್ತದೆ. ಇದೇ ರೀತಿ ಕನ್ನಡಕ್ಕೆ ಕಂಠ ಕಟ್ಟಿದ ಅನೇಕ ಕಂಠಗಳು ಕೋಮು ಸಮಸ್ಯೆಯ ವಿಷಯ ಬಂದಾಗ ಸ್ವಯಂ ಸೊಂಟ ಮುರಿದುಕೊಂಡು ದನಿಯನ್ನು ಹೊರಡಿಸುವುದಿಲ್ಲ; ಇಲ್ಲವೇ ಬಹುಸಂಖ್ಯಾತರ ಹೆಸರಿನಲ್ಲಿ ಕೋಮುವಾದದ ನೆಲೆ ತಲುಪಿ ಕನ್ನಡ ಮಾತನ್ನು ಮತೀಯವಾಗಿಸುತ್ತವೆ.

ಬಹುಸಂಖ್ಯಾತರ ಪ್ರಶ್ನೆ ಬಂದಾಗ ಒಂದು ಮಾತನ್ನು ಸ್ಪಷ್ಟಪಡಿಸ ಬಯಸುತ್ತೇನೆ. ಕನ್ನಡಾಭಿಮಾನ, ಕನ್ನಡಪ್ರಜ್ಞೆ ಎನ್ನುವುದು ಬಹುಸಂಖ್ಯಾತರ ಬಲದಲ್ಲಿ ಬೆಳೆಯಬೇಕಾದ ಪರಿಕಲ್ಪನೆಯಲ್ಲ. ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರನ್ನು ಒಳಗೊಂಡ ಪ್ರಜಾಸತ್ತಾತ್ಮಕ ಪ್ರಜ್ಞೆಯನ್ನಾಗಿಯೇ ಕನ್ನಡ ಪ್ರಜ್ಞೆಯನ್ನು ಬೆಳೆಸಬೇಕು. ಜನಭಾಷೆಗಳ ವಿಷಯ ಬಂದಾಗ ಬಹುಸಂಖ್ಯಾತರಾಗಲಿ, ಅಲ್ಪಸಂಖ್ಯಾತರಾಗಲಿ ಪರಸ್ಪರ ವಿರುದ್ಧ ನೆಲೆಯಲ್ಲಿ ನಿಲ್ಲುವ ಅಗತ್ಯವಿಲ್ಲ. ಅವರವರ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳುತ್ತಲೇ ಕನ್ನಡಿಗರಾಗುವ ಪ್ರಜ್ಞೆಯನ್ನು ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಬೆಳೆಸಿಕೊಳ್ಳದಿದ್ದರೆ ಮಾನಸಿಕ ಆತ್ಮಹತ್ಯೆಯಲ್ಲಷ್ಟೇ ಆನಂದ ಪಡಬೇಕಾಗುತ್ತದೆ. ಉದ್ದೇಶಿತ ವಿರೋಧಾಭಾಸಗಳನ್ನು ಮೀರಿದ ವಿವೇಕವನ್ನು ಎಲ್ಲರೂ ಒಳಗೊಳ್ಳಬೇಕಾಗಿದೆ. ಈ ಮೂಲಕ ಬದುಕನ್ನೇ ಭಾಷೆಯಾಗಿಸಿಕೊಂಡಿರುವ ನಿಜ ಕನ್ನಡಿಗನಿಗೆ ಗೌರವ ನೀಡಬೇಕಾಗಿದೆ. ಕನ್ನಡಕ್ಕಾಗಿ ಕಂಠ ಕಟ್ಟಿದವರು ಬದುಕಿಗಾಗಿ ಹೊಟ್ಟೆ ಕಟ್ಟಿದವರ ಜೊತೆ ಗುರುತಿಸಿಕೊಂಡಾಗ ಪ್ರಬುದ್ಧ ಪ್ರಜ್ಞೆ ತಾನಾಗಿ ಮೂಡುತ್ತದೆ.
*****
೧೦-೦೪-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೈಯಲ್ಲಿ ಕಡೆದಂತೆ ಜೀವನ
Next post ಬೆರಳು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…