ಆಗಸದ ಮುಡಿಯಲ್ಲಿ ಒಡೆದ ಚಿಗುರು
ಸೌರಭವ ಮೈತುಂಬಾ ಹೊದೆದು
ನಳಿನವಿರು ತನುತಳೆದು
ಬಾಗುತಿದೆ ನೆಲದೆಡೆಗೆ ತುಳುಕಿ ಹಸಿರು

ನಂಬಿಕೆಯ ಹುತ್ತಕ್ಕೆ ಎರೆದ ಹಾಲು
ಹುತ್ತದ ನಡುವೆ ಮಲ್ಲಿಗೆ ಗಿಡ ಚಿಗುರಿಸುತ್ತ
ಈದೀಗ ಹೂ ಅರಳಿ ನಗುವ ಬೃಂದಾವನ

ಅಚ್ಚು ಹಾಕಿದ ಚಿತ್ರದಂತೆ ಹೊಲದ
ಅಂಚಿಗೆ ಕಣ್ಣರೆಪ್ಪೆ ಬಡಿಯುತ್ತ
ಮೃದುವಾದ ಗರಿಕೆ ಹುಲ್ಲನಷ್ಟೇ
ನಿರುಕಿಸುತ್ತಿದೆ ಎಳೆಗರು
ಎಳೆಯ ಗೊರಸಿಗೆ ಮೆಲ್ಲಗೆ ಪುಲಕಗೊಳ್ಳುತ್ತ
ಹೊಲದ ತುಂಬಾ ಹಬ್ಬಿದ ಕುರುಚಲ ನಡುವೆ
ಮೆತ್ತಗಿನ ನುಣುಪು ಹುಲ್ಲು
ತಾನೇತಾನೇ ಮೂಡುತ್ತಿದೆ.

ಮಜ್ಜಿಗೆಯ ಕಡೆದಂತೆಲ್ಲಾ ಉಕ್ಕುವ
ಬಿಳಿಯ ಬುರುಗಿನ ನೊರೆ
ಎದ್ದ ಬೊಬ್ಬೆಗಳು
ಪಟಪಟನೇ ಒಡೆದು ಮತ್ತೆ
ಉಕ್ಕಿ ಅರಳಿ ಬೆಸೆದು ಗಟ್ಟಿಗೊಳ್ಳುವ
ಮಥಿಸಿದಷ್ಟು ಕಡೆಗೋಲಿನ ವೇಗ ಹೆಚ್ಚುತ್ತ
ಶುಭ್ರವಾಗುವ ಬೆಣ್ಣೆ
ಕೈಯಲ್ಲಿ ಕಡೆದಂತೆ ಜೀವನ
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)