ಮಂಗಳಂ, ಮೈಸೂರಿನರಮನೆಗೆ ಮಂಗಳಂ.
ಜಯದ ಹೆಸರಿನ ಚಾಮರಾಜಂಗೆ ಮಂಗಳಂ.
ಮುಮ್ಮಡಿಯ, ನಾಲ್ಮಡಿಯ ದಿವ್ಯ ತೇಜಂಗಳಂ
ಒಮ್ಮುಡಿಯೊಳಾಂತೆಸೆವ ಧೀರಂಗೆ ಮಂಗಳಂ.
ತಂದೆತಾಯ್ ಪಯಿರಿಟ್ಟ ಪುಣ್ಯದ ಫಲಂಗಳೇ,
ಸೋದರನ ಸೌಭಾಗ್ಯದಮೃತ ಕಳಶಂಗಳೇ,
ಲಾವಣ್ಯ ಲಕ್ಷ್ಮಿಯರನಾಳ್ವ ಜಯಲಕ್ಷ್ಮಿಯರೆ,
ರಾಜರೊಲ್ಮೆಯ ಚೆಲ್ವಿ ನೊಡತಿಯರೆ, ಮಂಗಳಂ.
ನಿಮಗಿರಲಿ ನಲಿದಾಡಿ ನಿತ್ಯ ಶುಭಮಂಗಳಂ ;
ದೇವರೀಯಲಿ ಮೆಚ್ಚಿ ನಿತ್ಯೋತ್ಸವಂಗಳಂ.
ಮನೆ ಬೆಳಗಿ, ಸಿರಿ ಬೆಳಗಿ, ಮಕ್ಕಳೈಸಿರಿ ಬೆಳಗಿ,
ಭರತವರ್ಷದ ನುಡಿಯ ಸಾಲಿನಲ್ಲಿ ಮೇಲ್ ಬೆಳಗಿ,
ಸವಿಯುತಿರಿ ನಾಡೆಲ್ಲ ಹರಸುವ ಸುಖಂಗಳಂ.
ಮಂಗಳಂ : ಕನ್ನಡದ ದೊರೆತನಕೆ ಮಂಗಳಂ.
*****
೧೯೪೧