ಮಠಮಾರಿತನ

ಮಠಮಾರಿತನ

ಧಾರ್ಮಿಕ ಮೂಲಭೂತವಾದವು ಭಾಷೆ, ಸಂಸ್ಕೃತಿ ಮುಂತಾದ ಜನಪ್ರಿಯ ಮಾದರಿಗಳ ಮೂಲಕ ಪ್ರಕಟಗೊಳ್ಳುತ್ತ ನಮ್ಮ ದೇಶದಲ್ಲಿ ಉಂಟು ಮಾಡುತ್ತಿರುವ ಅನಾಹುತಗಳ ನಡುವೆ ನಾವು ನಮ್ಮೊಳಗೆ ಕಳೆದು ಹೋಗದಂತೆ, ಸಮೂಹ ಸನ್ನಿಯಲ್ಲಿ ಸರ್ವನಾಶವಾದಂತೆ ಎಚ್ಚರವಹಿಸ ಬೇಕಾಗಿದೆ. ಸಮೂಹ ಸನ್ನಿ ಜಾಗದಲ್ಲಿ ಸಮೂಹ ಪ್ರಜ್ಞೆ ಚಿಗುರೊಡೆದು ಚಿರಂತನವಾಗಬೇಕಾಗಿದೆ.

ಧರ್ಮದ ಬಗ್ಗೆ ಮಾತನಾಡುವವರೆಲ್ಲ ಧಾರ್ಮಿಕರಲ್ಲ. ಧಾರ್ಮಿಕತೆಯುಳ್ಳವರೆಲ್ಲ ಸಾಂಸ್ಥಿಕ ಧರ್ಮದ ಅನುಯಾಯಿಗಳು ಆಗಿರಬೇಕಿಲ್ಲ. ನಮ್ಮ ಜನಸಾಮಾನ್ಯರನ್ನೇ ಗಮನಿಸಿ. ಅವರ ನಂಬಿಕೆಗಳು, ಆಚರಣೆಗಳು, ಪೂಜಿಸುವ ದೇವರುಗಳು ಯಾವ ಸಾಂಸ್ಥಿಕ ಧರ್ಮಕ್ಕೆ ಸೇರಿವೆ? ಯಾವ ಸಾಂಸ್ಥಿಕ ಧರ್ಮ ಇವರ ಧಾರ್ಮಿಕ ಶೈಲಿಯನ್ನು ಅಧಿಕೃತವೆಂದು ಸ್ವೀಕರಿಸಿದೆ? ಯಾವುದೇ ಸಾಂಸ್ಥಿಕ ಧರ್ಮದ ಶಾಸ್ತ್ರ ವಿಧಿಗಳ ಅರಿವಿಲ್ಲದೆ ತಮಗೆ ತಾವೇ ನಂಬಿಕೆ ನೆಲೆಯಲ್ಲಿ, ಭಯ-ಭಕ್ತಿಗಳ ಅಭೇದ ಅನುಭವದಲ್ಲಿ ಬದುಕುವ ಜನಸಾಮಾನ್ಯರು ಧಾರ್ಮಿಕರಾಗಿದ್ದಾರೆ. ಆದರೆ ಶಾಸ್ತ್ರ ವಿಧಿಗಳ ಬಾಯಿಪಾಠ ಒಪ್ಪಿಸುವ ಸಾಂಸ್ಥಿಕ ಧರ್ಮದ ಎಷ್ಟೋ ಜನ ವಕ್ತಾರರು ಧಾರ್ಮಿಕರಾಗಿರುವುದಿಲ್ಲ. ಯಾಕೆಂದರೆ ಅವರಿಗೆ ಧರ್ಮವನ್ನು ಒಂದು ಸಂಸ್ಥೆಯಾಗಿ ನೋಡುವ ದೃಷ್ಟಿ ಧೋರಣೆಗಳು ಮುಖ್ಯ. ಧರ್ಮದ ಜಡ ಶಾಸ್ತ್ರ ಶಿಸ್ತುಗಳು ಪರಮ ಶ್ರೇಷ್ಠ, ಸಂಸ್ಥೆಯಾಗುವ ಧರ್ಮ ಲಿಖಿತ ಮಾರ್ಗದರ್ಶನಗಳನ್ನು ಅವಲಂಬಿಸುತ್ತಾ ಅನುಭವಗಳನ್ನು ಗೌಣ ಮಾಡುತ್ತದೆ; ಯಾಂತ್ರಿಕವಾಗುತ್ತದೆ. ಆದರೆ ಧಾರ್ಮಿಕತೆ ಲಿಖಿತ ಮಾರ್ಗ ಮತ್ತು ದರ್ಶನಗಳ ಮೂಲಕ ಪ್ರಕಟವಾಗಬೇಕಾದ ಅನಿವಾರ್ಯತೆಯನ್ನು ಹೊಂದಿರುವುದಿಲ್ಲ. ಅದೊಂದು ಮನೋಧರ್ಮವಾಗಿರುತ್ತದೆ, ಅಲಿಖಿತ ಅನುಭವಗಳ ಒತ್ತಾಸೆಯಲ್ಲಿ ಹುಟ್ಟಿ ಬೆಳೆಯುತ್ತದೆ. ಒಟ್ಟಿನಲ್ಲಿ ನಾನಿಲ್ಲಿ ಹೇಳಬೇಕೆಂದಿರುವುದು ಇಷ್ಟೆ; ಸಾಂಸ್ಥಿಕ ಧರ್ಮ ಮತ್ತು ಧಾರ್ಮಿಕತೆ ಬೇರೆಯಾಗಲು ಸಾಧ್ಯ. ಆದರೆ ಇವತ್ತು ನಿರ್ದಿಷ್ಟ ಧರ್ಮಕ್ಕೆ ನಿಷ್ಠೆ ತೋರಿಸದೆ ಇರುವವರನ್ನು ಧಾರ್ಮಿಕರಂತೆ ಕಾಣುವ ವಾತಾವರಣವನ್ನು ಎಲ್ಲಾ ಧರ್ಮಗಳ ಮೂಲಭೂತ ವಾದಿಗಳು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲ ಧರ್ಮಗಳ ಆಶಯ ಒಂದೇ ಎಂದು ಸಾರುವ ಆದರ್ಶ ಈ ವಿಷಯದಲ್ಲಿ ಖಂಡಿತ ನಿಜವಾಗಿದೆ! ಜನರನ್ನು ಧಾರ್ಮಿಕರನ್ನಾಗಿಸುವ ಸಾಂಸ್ಥಿಕ ಧರ್ಮಗಳು ಮಾಡಬಹುದಾದ ಒಂದು ಉತ್ತಮ ಕೆಲಸವೆಂದರೆ ಜನರ ಪಾಡಿಗೆ ಜನರನ್ನು ಬಿಡುವುದು. ಆಗ ಆಸ್ತಿಕ ಜನರು ತಮಗಿಷ್ಟವಾದ ದೇವರಲ್ಲಿ ಭಕ್ತಿ ತೋರಿಸುತ್ತಾರೆ. ನಿಜವಾದ ಅರ್ಥದಲ್ಲಿ ಆಸ್ತಿಕರಾಗಿ ಪ್ರಯತ್ನ ಮಾಡುತ್ತಾರೆ. ಪರಿಣಾಮವಾಗಿ ಸಾಂಸ್ಥಿಕ ಧರ್ಮಗಳ ಆಸ್ತಿಗೆ ಸಂಚಕಾರ ತರುತ್ತಾರೆ. ಸಮಸ್ಯೆ ಇರುವುದು ಇಲ್ಲೇ. ದೇವರು, ಧರ್ಮ ಮತ್ತು ಭಕ್ತಿಗಳ ಹೆಸರಿನಲ್ಲಿ ಜನರನ್ನು ಸಂಘಟಿಸಿ ಧರ್ಮಕ್ಕೆ ಸಾಂಸ್ಥಿಕ ರೂಪ ಕೊಡದಿದ್ದರೆ ಜನರು ಆಸ್ತಿಕರಗುವುದಕ್ಕೆ ಅಡ್ಡಿಯಾಗುವುದಿಲ್ಲವಾದರೂ ಧರ್ಮಕ್ಕೆ ಆಸ್ತಿ ಲಭ್ಯವಾಗುವುದು ಕಡಿಮೆಯಾಗುತ್ತದೆ; ಭಕ್ತಿ ಎಂಬುದು ಬಯಲ ಬೆಂತರನಾಗುವುದು ತಪ್ಪುತ್ತದೆ. ಮೌನದಲ್ಲಿ ಖಾಸಗಿತನದಲ್ಲಿ ದೈವದೊಂದಿಗೆ ನಡೆಸಿದ ಸಂವಾದದ ಮೂಲಕ ಭಕ್ತಿ ಗಟ್ಟಿಗೊಳ್ಳುತ್ತದೆ. ಅಂದರೆ ಜನರ ನಂಬಿಕೆಯ ದೇವರು ಜನರಿಗೆ ಮಾತ್ರ ಸೇರುತ್ತಾನೆ. ಸಂಸ್ಥೆ ಆಸ್ತಿಯಾಗಿದ್ದು ಜನ ಮನಸ್ಸಿನ ಭಾವರೂಪನಾಗಿರುತ್ತಾನೆ. ಶಾಸ್ತ್ರವಿಧಿಗಳ ಪಾಶದಿಂದ ಪಾರಾಗಿ ನಂಬಿಕೆ ಮಾತ್ರವಾಗುವ ದೇವರು, ಧರ್ಮ ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗುವುದಿಲ್ಲವಾದ್ದರಿಂದ ಮಧ್ಯವರ್ತಿಗಳ ಪಡೆ ಬೆಳೆದ ದಾರಿ ತಪ್ಪಿಸುತ್ತದೆ. ಭಾವ ಸಂವಾದಿಯಾದ ಭಕ್ತಿಯನ್ನು ಬುದ್ಧಿ ರೂಪಕ್ಕೆ ಪರಿವರ್ತಿಸಿ ಬಿಡುತ್ತದೆ. ಮನುಷ್ಯ ಮತ್ತು ನಂಬಿಕೆ ದೈವದ ನಡುವೆ ಸಂಭವಿಸಬೇಕಾದ ಖಾಸಗಿ ಸಂಬಂಧವಾದ ಭಕ್ತಿ ಸಾಂಸ್ಥಿಕ ಧರ್ಮಗಳ ಸಾಧನವಾಗುತ್ತ ನಾಶ ಪಾಶಕ್ಕೆ ಬಲಿಯಾಗ ತೊಡಗುತ್ತದೆ. ಹೀಗಾಗಿ ಸಾಂಸ್ಥಿಕ ಧರ್ಮವು ನಾಸ್ತಿಕವಾದ ಕಷ್ಟ ಬುದ್ಧಿವಾದ ಹೂಡಿದ ವಕೀಲನಾಗುವುದಿಲ್ಲ; ಆಸ್ತಿಕವಾದಕ್ಕೆ ವಕಾಲತ್ತು ವಹಿಸುವ ವಕ್ತಾರನಾಗುತ್ತದೆ. ಆಸ್ತಿಕತೆಯ ಒಂದು ವಾದ ಮಾತ್ರವಾಗುವುದರಲ್ಲಿರುವ ಅಪಾಯವನ್ನು ಮರೆಯುತ್ತದೆ.

ಸಾಂಸ್ಥಿಕ ಧರ್ಮಗಳಲ್ಲಿ ವಾದ ಹೂಡುವ ಹಟವಿರುವುದನ್ನು ಗಮನಿಸಿ ಮೇಲಿನ ಮಾತುಗಳನ್ನು ಹೇಳುತ್ತೇನೆ. ಮತ್ತು ಸಾಂಸ್ಥಿಕ ಧರ್ಮಗಳಿಗೆ ಮಾತೇ ಮುಖ್ಯವಾಗುವ ಅಪಾಯದತ್ತ ಗಮನ ಸೆಳೆಯುತ್ತಿದ್ದೇನೆ. ದೈವ ಮತ್ತು ಭಕ್ತರ ಸಂಬಂಧಕ್ಕೆ ಮಾತಿಗಿಂತ ಮೌನ ಮುಖ್ಯ. ಬದುಕಿನ ಭಯಾತಂಕಗಳು ನಂಬಿಕೆಯಾಗಿ, ಭಕ್ತಿಯಾಗಿ ಮೌನದಲ್ಲಿ ಭದ್ರಗೊಳ್ಳುತ್ತ ಬದುಕಿನ ಭದ್ರತೆಗೆ ಒದಗಿದ ಉಪಾಯವಾಗಿ, ಜನಮಾನಸದ ಭಾಗವಾಗುವ ಅನುಭವವೇ ಬೇರೆ; ಮೆದುಳಲ್ಲಿ ಮಾತನಾಡುವ ಅರಿವು ಮಾತ್ರವಾಗುವುದೇ ಬೇರೆ, ಅನುಭವ ಮತ್ತು ಹರಿವುಗಳ ಒಳಸುಬಂಧದಲ್ಲಿ ಹಾಗೂ ಒಳತೋಟಿಯಲ್ಲಿ ಭಕ್ತಿ ಪ್ರಾಮಾಣ್ಯದ ನೆಲೆಗಳು ಬೆಳೆಯುತ್ತವೆ. ಅಥವಾ ಇರುವಂತೆಯೇ ಉಳಿಯುತ್ತವೆ.

ಸಾಂಸ್ಥಿಕ ಧರ್ಮವು ಒಳತೋಟಿ ಮತ್ತು ವೈರುಧ್ಯಗಳನ್ನು ಎದುರಿಸುವ ಎದೆಗಾರಿಕೆಯನ್ನು ತೋರುವುದಿಲ್ಲ. ತನ್ನೊಳಗೆ ತಾನು ನೋಡಿಕೊಳ್ಳುವ ಕಾಣ್ಕೆಗೆ ಮಾತ್ರ ವೈರುಧ್ಯ ಹಾಗೂ ಓಳತೋಟಿಗಳ ಅನುಭವವಾಗುತ್ತದೆ. ಸಾಂಸ್ಥಿಕ ಧರ್ಮದ ಸಿದ್ಧರೂಪಗಳ ಪ್ರತಿಪಾದಕ ಮಾತ್ರವಾಗುವುದರಿಂದ ಅಲ್ಲಿ ಆಂತರಂಗಿಕ ಮುಖಾಮುಖಿಗೆ ಅವಕಾಶವೇ ಇಲ್ಲ. ನಾನಿಲ್ಲಿ ತತ್ವ ಬದ್ಧತೆ ಮತ್ತು ಪ್ರತಿಪಾದನೆಯನ್ನು ಸಾರಾಸಗಟಾಗಿ ನಿರಾಕರಿಸುತ್ತಿಲ್ಲ. ಯಾವುದೇ ಧರ್ಮವಾಗಲಿ, ಪಕ್ಷವಾಗಲಿ, ತಾನು ನಂಬಿದ ಸಿದ್ದಾಂತವನ್ನು ಸೃಜನಶೀಲಗೊಳಿಸುತ್ತಾ ಸಾಗಬೇಕು. ಇದಕ್ಕೆ ಬದಲಾಗಿ ನಾನು ನಂಬದೆ ನಂಬಿಸುವ ಕೆಲಸವನ್ನು ಕೈಗೊಂಡರು, ದೇವರು ಮತ್ತು ಭಕ್ತಿಗಳು ಧರ್ಮದ ಉದ್ಯಮಗಳಾಗುವ ಅಪಾಯವೇ ಹೆಚ್ಚು. ಇಂದು ಆಗುತ್ತಿರುವುದು ಇದೇ.

ಸಾಂಸ್ಥಿಕ ಧರ್ಮಗಳು ಆಸ್ತಿಯ ಮೂಲಕ ಅಧಿಕಾರವನ್ನು ಗಳಿಸುತ್ತ, ಕಟ್ಟುಕತೆಗಳ ಮೂಲಕ ಜನರನ್ನು ಕಟ್ಟಿಹಾಕುತ್ತ, ಜಡ ಸಂಪ್ರದಾಯದ ಪ್ರತೀಕವಾಗಿ ಮಠಗಳನ್ನು ಹುಟ್ಟುಹಾಕುತ್ತವೆ. ಜಾತಿಗೊಬ್ಬ ಜಗದ್ಗುರು ಅವತರಿಸುವ ಇಂದಿನ ದಿನಗಳಲ್ಲಿ ಮಠಮಾನ್ಯ ಏಕಕಾಲಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ. ತಾವು ಹೇಳಿದ್ದೆ ಅಂತಿಮವೆಂಬ ಹಠಮಾರಿತನದಿಂದ ಸೃಜನಶೀಲತೆ ಮತ್ತು ಚಲನಶೀಲತೆಗಳನ್ನು ನಾಶ ಮಾಡುತ್ತಿವೆ. ಈ ಪ್ರವೃತ್ತಿಯನ್ನು ನಾನು ‘ಮಠಮಾರಿತನ’ ಎಂದು ಕರೆಯುತ್ತೇನೆ.

ಹಠಮಾರಿತನದ ಮೂಲಕ ಸಾಮಾನ್ಯರನ್ನು ಸಮೂಹಸನ್ನಿಗೆ ದೂಡುತ್ತಿರುವ ಪ್ರವೃತ್ತಿ ಒಂದು ಕಡೆಗಿದ್ದರೆ, ಸೃಜನಶೀಲ ಮನಸ್ಸುಗಳ ಭಿನ್ನನೆಲೆಯಲ್ಲಿ ಧಾರ್ಮಿಕವಾಗಿವೆ ಅಥವಾ ಧರ್ಮದ ದುರುಪಯೋಗವನ್ನು ಧಿಕ್ಕರಿಸುವ ಪ್ರತಿಭಟನಾ ದನಿಗಳಾಗಿವೆ.

ಧರ್ಮಗಳ ವಕ್ತಾರರು ತಮ್ಮ ಮತ್ತು ಧರ್ಮದ ಮಠಮಾರಿತನವನ್ನು ಮರೆಯುವುದಕ್ಕಾಗಿ ಭವ್ಯ ಪರಂಪರೆಯ ಮಾತನಾಡುತ್ತಾರೆ; ಅನೇಕ ಸಂತರನ್ನು, ಕವಿಗಳನ್ನು, ಕಾವ್ಯಗಳನ್ನು ಉದಾಹರಿಸಿ ವಿಜೃಂಭಿಸುತ್ತಾರೆ. ಆದರೆ ನಾನು ಗ್ರಹಿಸಿದಂತೆ ನಮ್ಮ ಸಂತರು ಮತ್ತು ಕವಿಗಳು ಧರ್ಮಾವಲಂಬಿಗಳಾಗಿದ್ದಾಗಲೂ ಸಾಂಸ್ಥಿಕ ನೆಲೆಯಲ್ಲಿ ಧರ್ಮವನ್ನು ಗ್ರಹಿಸಿಲ್ಲ. ಸಾಂಸ್ಥಿಕ ನೆಲೆಯಲ್ಲಿ ಧರ್ಮವನ್ನು ಗ್ರಹಿಸಿದವರು ನಿಜವಾದ ಸಂತರು ಆಗಿಲ್ಲ. ನಿಜವಾದ ಕವಿಗಳು ಆಗಿಲ್ಲ. ವಾರ್ತಾ ಪ್ರಚಾರ ಮತ್ತು ಪ್ರವಾಸೋದ್ಯಮ ಇಲಾಖೆಯ ನಿಷ್ಠಾವಂತ ಪ್ರಚಾರಾಧಿಕಾರಿ ಪಾತ್ರವನ್ನಷ್ಟೇ ನಿರ್ವಹಿಸಿದ್ದಾರೆ.

ಈಗ ನಮ್ಮ ಕನ್ನಡದ ಆಧುನಿಕಪೂರ್ವ ಕವಿಗಳನ್ನೇ ನೋಡೋಣ. ಕನ್ನಡ ಕವಿಗಳನ್ನು ಧಾರ್ಮಿಕ ನೆಲೆಯಲ್ಲಿ ಜೈನ, ವೀರಶೈವ, ವೈದಿಕ ಎಂದು ವಿಭಾಗಿಸುವ ವಿಧಾನವೂ ಇದೆ. ಆದರೆ ಈ ಧರ್ಮಾವಲಂಬಿಗಳಾದ ಕವಿಗಳು ಧರ್ಮದ ಸಾಂಸ್ಥಿಕ ವಕ್ತಾರರಾಗಲಿಲ್ಲ. ಆದ್ದರಿಂದಲೇ ಅವರ ಕವಿಗಳಾದರು. ಈ ಒಂದು ಮಾತಿನಲ್ಲಿ ಸಾಂಸ್ಥಿಕ ಧರ್ಮ ಮತ್ತು ಸಾಹಿತ್ಯಕ್ಕಿರುವ ವ್ಯತ್ಯಾಸವನ್ನು ನಾವು ಗುರುತಿಸಬಹುದು.

ಧರ್ಮಕ್ಕೆ ಜನರು ಹೇಗೆ ಬದುಕಬೇಕು ಎಂದು ‘ಹೇಳುವುದರಲ್ಲಿ’ ಆಸಕ್ತಿ. ಈ ಆಸಕ್ತಿ ಆದರ್ಶದಂತೆ ಕಾಣಿಸಿದರೆ ಮೂಲತಃ ಆದೇಶವಾಗಿರುತ್ತದೆ. ಆದರೆ ಸಾಹಿತ್ಯಕ್ಕೆ ಜನರು ಹೇಗೆ ಬದುಕುತ್ತಿದ್ದಾರೆ ಎಂದು ‘ಶೋಧಿಸುವುದರಲ್ಲಿ’ ಆಸಕ್ತಿ. ಈ ಆಸಕ್ತಿ, ಆದೇಶವಾಗುವುದಿಲ್ಲ; ಆಶಯವಾಗುತ್ತದೆ. ಆಧುನಿಕ ಪೂರ್ವ ಕನ್ನಡ ಕವಿಗಳು ಹೇಗೆ ಬದುಕಬೇಕೆಂದು ಅಪ್ಪಣೆ ಕೊಡಿಸುವ ಕೃತಿ ರಚನೆ ಮಾಡಲಿಲ್ಲ. ತಾವು ನಂಬಿದ ಧರ್ಮವನ್ನು ಬದುಕಿನ ಒರೆಗಲ್ಲಿಗಿಟ್ಟು ಧಾರ್ಮಿಕತೆಯ ತಿರುಳು ತೆಗೆದರು. ಮಾನವೀಯ ಸಂವಾದ-ಸ್ಪಂದನಗಳನ್ನು ನುಂಗಿ ನೀರು ಕುಡಿಯುವ ಮಠಮಾರಿತನಕ್ಕೆ ವಿರುದ್ಧವಾಗಿ ಮಾನವೀಯ ಸಂಬಂಧಗಳ ನೆಲೆಯಲ್ಲಿ ಧರ್ಮವನ್ನು ಕಂಡುಕೊಳ್ಳುವ ತುಡಿತ ತೋರಿದರು. ಆದ್ದರಿಂದ ಇವರಾರೂ ಧಾರ್ಮಿಕ ಮಠಗಳಾಗಲಿಲ್ಲ; ಧಾರ್ಮಿಕ ಮನಸ್ಸು ಮಾತ್ರವಾದರು. ಧರ್ಮದಾಚೆಗಿನ ಸತ್ಯಗಳನ್ನೂ ಕಂಡರು.

ಈ ದೃಷ್ಟಿಯಿಂದ ನೋಡಿದಾಗ ಜೈನ ಧರ್ಮದ ಪ್ರತಿನಿಧಿಗಳ ನೆಲೆ ನಿಲುವುಗಳಿಗೂ ಜೈನಧರ್ಮಾವಲಂಬಿಗಳಾದ ಪಂಪರನ್ನಾದಿ ಕವಿಗಳ ಕಾಣ್ಕೆಗೂ ವ್ಯತ್ಯಾಸವಿದೆ. ವೀರಶೈವ ಧರ್ಮದ ವಕ್ತಾರರಿಗೆ ವಚನಕಾರರ ಧಾರ್ಮಿಕ ಸೂಕ್ಷ್ಮಗಳಿಗೆ ಮತ್ತು ವೈದಿಕ ಧರ್ಮದ ಸೂತ್ರಗಳು ಕುಮಾರವ್ಯಾಸನಂತಹ ಕವಿ ದರ್ಶನಕ್ಕೂ ಅಂತರವಿದೆ. ಇದು ಸಾಧ್ಯವಾದದ್ದು ಹೇಗೆ ? ಈ ಕವಿಗಳಾರು ತಾವು ಹಿನ್ನೆಲೆಯಾಗಿ ಪಡೆದ ಧರ್ಮಗಳ ಮೂಲಕ ಮಠವಾದವರಲ್ಲ. ಚಲನಶೀಲ ಮನಸ್ಸಿನ ಮೂಲಕ ಬದುಕಿನ ಒಂದು ಅಂಗವಾಗಿ ಧರ್ಮವನ್ನು ಕಂಡವರು. ಬದುಕನ್ನು ಅರ್ಥೈಸಿಕೊಳ್ಳುವ ಮಾಧ್ಯಮಗಳಲ್ಲಿ ಒಂದೆಂದು ಧರ್ಮವನ್ನು ಭಾವಿಸಿದವರು. ಬದುಕಿನ ಮೂಲಕ ಧರ್ಮವನ್ನು ಗ್ರಹಿಸುವ ಈ ಕವಿಗಳಿಗೂ ಧರ್ಮದ ಮೂಲಕ ಬದುಕನ್ನು ಗ್ರಹಿಸಬೇಕೆಂದು ಹಠಮಾಡುವ ಮಠಮಾರಿಗಳಿಗೂ ಮೂಲದಲ್ಲೇ ವ್ಯತ್ಯಾಸವಿದೆ.

ಈ ದೇಶದಲ್ಲಿ ಎಲ್ಲರೂ ವಿಚಾರವಾದಿಗಳಾಗಬೇಕೆಂದು ನಿರೀಶ್ವರವಾದ ವೊಂದೇ ನೆಲೆಯೂರಬೇಕೆಂದೂ ಬಯಸುವುದು ಸದ್ಯಕ್ಕೆ ಅವಾಸ್ತವಿಕ ವೆನಿಸಬಹುದು. ಆದ್ದರಿಂದ ಸಾಂಸ್ಥಿಕ ಧರ್ಮದ ಹಠಮಾರಿತನವನ್ನು ಮೀರಿದ ಕವಿ ಮನಸ್ಸು ವ್ಯಾಪಿಸಲಿ ಎಂದು ಆಶಿಸೋಣ.


೨೨-೧-೧೯೯೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧ ವೈಭವ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೯

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys