ನಿಮ್ಮ ಕುರಿತು ಅಭಿಪ್ರಾಯ

ನಿಮ್ಮ ಕುರಿತು ಅಭಿಪ್ರಾಯ

ಸಾಯಂಕಾಲ ಮದರಾಸಿನಿಂದ ಬಂದ ಮೈಲ್ ಬಂಡಿಯು ಕಾಸರಗೋಡು ನಿಲ್ದಾಣದಲ್ಲಿ ನಿಲ್ಲುತ್ತಲೇ ಅದನ್ನು ಹತ್ತಿದ ಕೆಲವು ಪ್ರಯಾಣಿಕರಲ್ಲಿ ಅಚುತನೂ ಒಬ್ಬ. ಅಚ್ಯುತನೆಂದರೆ – ಮಾತಿನ ಮಲ್ಲ. ಅವನಿಗೆ ಪರಿಚಿತರನ್ನು ಕಂಡರೆ ಮಾತ್ರ ಮಾತು ಬರುವುದಲ್ಲ – ಅಪರಿಚಿತರನ್ನು ಕಂಡರೂ ಆಷಾಢ ಮಾಸದ ಮಳೆಯಂತೆ ಎಡೆಬಿಡದೆ ಮಾತಾಡುವವನೇ! ಮಾತಾಡುವಾಗ, ಆ ಸಂಭಾಷಣೆಯಲ್ಲಿ ಬರುವ ವ್ಯಕ್ತಿಗಳನ್ನು ಟೀಕಿಸುವನು: ಬಾರದ ವ್ಯಕ್ತಿಗಳನ್ನು ತಾನೇ ತಂದು, ಅವರ ಜೀವನ, ನಡೆ, ನುಡಿ, ಪೋಷಾಕು ಎಲ್ಲವುಗಳ ಮೇಲೆ ಅಭಿಪ್ರಯ ಕೊಡುವನು.

ರೈಲು ಹತ್ತುತ್ತಲೇ ಅವನು ಹೋಗಿ ಕುಳಿತುದು ಒಬ್ಬ ಹಳೇ ಮನುಷ್ಯನ ಜತೆಯಲ್ಲಿ, ‘ಹಳೇ ಮನುಷ್ಯ’ನೆಂದರೆ – ಕ್ರಾಪ್ ಇಲ್ಲದ, ಆಧುನಿಕ ವಿಧದ ಪೋಷಾಕುಗಳಿಲ್ಲದ, ಕೇವಲ ‘ಶಟ್ ಕೋಟ’ನ್ನು ಹಾಕಿ, ಮುಂಡಾಸಿಟ್ಟು, ಅದರ ಎಡೆಯಿಂದ ನರೆತ ಕೂದಲನ್ನು ಪ್ರದರ್ಶಿಸುತ್ತಿರುವ ಹಳಬನೆಂದರ್‍ಥ.

“ತಾವು ಎಲ್ಲಿಂದ ಬಂದಿರಿ ಸ್ವಾಮಿ?” ಎಂದು ಮೊದಲು ಮಾಡಿದನು ಅಚ್ಯುತ.

ಹಳಬನು ಕೊಂಚ ಬಾಯಿ ಬಿರಿದು- “ಪೊದನೂರಿ ನಿಂದ!” ಎಂದನು.

“ಪೊದನೂರು!…. ನಾನು ಆ ಸ್ಟೇಷನನ್ನು ಒಮ್ಮೆ ದಾಟಿದ್ದೇನೆ!” ಎನ್ನುತ್ತ ಅಚ್ಯುತನು ತನ್ನ ಮಾತಿನ ಭಾಂಡಾಗಾರವನ್ನು ಅಡಿ ಮೇಲಾಗಿಯೇ ಹಿಡಿದು, ಅದರ ಬಾಯಿ ತೆರೆದನು. ಮಾತುಗಳು ಬಡಬಡನೆ ಉದುರಲಾರಂಭಿಸಿದುವು. ಮಾತನಾಡುತ್ತ, ಮಂಗಳೂರಿನ ಪಂಡಿತ ಶಿವಣ್ಣಯ್ಯನ ವಿಷಯವೂ ಬಂತು.

“ಪಂಡಿತ ಶಿವಣ್ಣಯ್ಯ! ಯಾರೋ ಒಬ್ಬ ಹಳಬ ಸ್ವಾಮಿ, ತಾನೊಬ್ಬ ವಿದ್ವಾನನೆಂದು ಗರ್‍ವ ಆ ಮುದಿ ಗೂಬೆಗೆ! ಚಿಕ್ಕ ಬಾಲಕರು ಬರೆದುದನ್ನೂ, ಬೆಳೆದ ಯೌವನಸ್ಥರು ಪ್ರಕಟಿಸಿದುದನ್ನೂ ದೂರುವುದೇ ಕೆಲಸ! ಪುಣ್ಯಾತ್ಮ ತಾನೊಂದೂ ಪಂಕ್ತಿ ಬರೆದುದಿಲ್ಲ. ನವಕವಿತೆಯೆಂದರೆ, ಬರೆದವರಿಗೇ ಅರ್ಥವಾಗದ, ನಿಷ್ಪ್ರಯೋಜಕವಾದ, ಸಂಗೀತ ವಿಹೀನವಾದ, ಛಂದೋಶಾಸ್ತ್ರದ ಕೊಲೆ ಮಾಡಿ ಅದರ ಬೂದಿಯ ಮೇಲೆ ಕಟ್ಟಲ್ಪಟ್ಟ ಮುರುಕು ಗುಡಿಸಲುಗಳಂತೆ! ಒಮ್ಮೆ ಅವನನ್ನೆ ಕೆಲವರು ಒಂದು ಲೇಖನಕ್ಕಾಗಿ ಒತ್ತಾಯ ಪಡಿಸಲು, – ಭಾಮಿನಿ ಷಟ್ಪದಿಯಲ್ಲಿ ಎರಡು ಪದ್ಯಗಳನ್ನು ಬರೆದುಕೊಟ್ಟನು; ಜತೆಯಲ್ಲಿ ಒಂದು ಕತೆಯನ್ನು ಕಳುಹಿಸಿ “ಇದು ಸಣ್ಣ ಕತೆಗೆ ಮಾದರಿ” ಎಂದನು. ಓದಿದವರೆಲ್ಲ ನೋಡಿ ನಕ್ಕುಬಿಟ್ಟರು ಸ್ವಾಮಿ! ವಿದ್ವಾನರಾದರೇನು, ಆತನಿಗೆ ಕೆಲವು ಶಬ್ದಗಳು ಹೆಚ್ಚಿಗೆ ಬರಬಹುದು – ಇತರ ಸಾಮಾನ್ಯ ಬರಹಗಾರರಿಗೆ ಕೆಲವು ಕಡಿಮೆ; ಆದರೆ, ಕೇವಲ ಶಬ್ದ ಭಾಂಡಾಗಾರವು ದೊಡ್ಡದೆಂದು ಚಲೋ ಕಲ್ಪನೆಗಳನ್ನು ತಮಗೆ ತಿಳಿದ ಭಾಷೆಯಲ್ಲಿ ಪ್ರಕಟಿಸುವ ತರುಣರನ್ನು ದೂರುವುದೇ? ಹಾಗೆ ದೂರುವವರು ತಾವೇ “ಮಾದರಿ”ಯೆಂದು ಬರೆದೂ ನಗೆಗೀಡಾಗುವುದೇ? ನನಗೆ ಆ ಶಿವಣ್ಣಯ್ಯ ದೊರೆತರೆ – ‘ನೀನಿನ್ನು ಕೇವಲ ವಿದ್ವಾನನೆಂಬ ಬಿರುದನ್ನು ಹಿಡಿದು ಕೊಂಡು ತಣ್ಣಗೆ ಮನೆಮೂಲೆಯಲ್ಲಿ ಪಂಪಭಾರತವನ್ನೋದಿ ಪುಣ್ಯಗಳಿಸಿಕೊಂಡಿರುವುದೊಳ್ಳಿತೆ’ಂದು ಹೇಳುತಿದ್ದೆ ಸ್ವಾಮಿ, ಆದರೆ, ಹೋಗಲಿ, ನಮಗೇನು?”

ಹಳಬನು ಇದನ್ನೆಲ್ಲ ಮಂದಸ್ಮಿತದಿಂದ ಕೇಳುತ್ತಲೇ ಇದ್ದನು, ಚಾ-ಚೂ ಎನ್ನಲಿಲ್ಲ. ರೈಲು ಬಂಡಿಯು ಮಂಗಳೂರು ನಿಲ್ದಾಣಕ್ಕೆ ಬಂದು ತಲಪಿತು. ಅಚ್ಯುತನು, ಆ ಹಳಬನೊಂದಿಗೆ ಕೆಳಗಿಳಿಯುತ್ತ, “ನಮಸ್ಕಾರ ಸ್ವಾಮಿ, ಹೋಗುತ್ತೇನೆ. ಇನ್ನೊಮ್ಮೆ ಎಲ್ಲಾದರೂ ನಾವು ಭೇಟಿಯಾಗಬಹುದು. ಬಂಡಿಯಲ್ಲಿ ನೀವಿದ್ದುದರಿಂದ ಸಮಯ ಕಳೆದು ಹೋದುದೇ ತಿಳಿಯಲಿಲ್ಲ. . . . . ನಮಸ್ಕಾರ . . . . ನಿಮ್ಮ ಹೆಸರು?”

ಹಳಬನು ನಗುತ್ತ “ನನ್ನ ಹೆಸರು . . . . . ಅಗತ್ಯ ವಿದೆಯೇ?” ಎಂದು ಕೇಳಿದನು.

“ಹೊಸ ಪರಿಚಯ – ಹೆಸರನ್ನು ತಿಳಿಯದುಂಟೇ”

ಹಳಬನು ತನ್ನ ಕಿಸೆಯಿಂದೊಂದು ಕಾಗದವನ್ನು ತೆಗೆದು, ಪೆನ್ಸಿಲಿನಿಂದ ಅದರ ಮೇಲೆ ತನ್ನ ಹೆಸರನ್ನು ಬರೆದು ಕೊಟ್ಟನು. ಅಚ್ಯುತನು ಓದಿದನು: –

“ಪಂಡಿತ ಶಿವಣ್ಣಯ್ಯ, ವಿದ್ವಾನ್.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀದಿಗಳು
Next post ಸಾಹಿತ್ಯದಿಂದ ಯಾರೇನು ಬಯಸುತ್ತಾರೆ?

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…