ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ
ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ
ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ
ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ
ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣೆ
ಓದುಗರು ಬಯಸುತ್ತಾರೆ ಕಲ್ಪನೆಯ ಕವಣೆ
ಆಹ! ಬಯಸುತ್ತಾರೆ ಕೆಲವು ಲೇಖಕರು ಬರಿ ಕೀರ್ತಿ
ಇನ್ನು ಕೆಲವರು ಮುಗ್ಧ ಹೆಣ್ಣುಗಳಿಂದ ಸ್ಫೂರ್ತಿ
ಅಡಿಗರು ಬಯಸುತ್ತಾರೆ ಇಂದಿರಾ ಗಾಂಧಿಯ ವಿನಾಶ
ಹಾಗೂ ಶ್ರೀರಾಮಚಂದ್ರನಾಳಿದ ಸನಾತನ ದೇಶ
ಓದಲು ಬಾರದ ಹಳ್ಳಿಗರು ಬಯಸುತ್ತಾರೆ ಕಾಲಕಾಲಕ್ಕೆ ಮಳೆ
ಬಿತ್ತಿದ ಗದ್ದೆಗಳಲ್ಲಿ ತಿಂದು ಮುಗಿಯದಷ್ಟು ಬೆಳೆ

ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ?
ವೈಣಿಕರು ಬಯಸುತ್ತಾರೆ ಅಪರೂಪದ ರಾಗಗಳನ್ನು ವೈದ್ಯರು
ಬಯಸುತ್ತಾರೆ ಸಾಂಕ್ರಾಮಿಕ ರೋಗಗಳನ್ನು ದಾಮರು ಹಾಕುವವರು
ಬಯಸುತ್ತಾರೆ ದಟ್ಟ ನೆರಳಿನ ಮರಗಳನ್ನು ತಪಸ್ಸಿಗೆ ಕೂತ
ಭಕ್ತರು ಬಯಸುತ್ತಾರೆ ಕೋರಿದ ವರಗಳನ್ನು ಕೃಷಿಕರು
ಬಯಸುತ್ತಾರೆ ಫಲವತ್ತಾದ ಮಣ್ಣುಗಳನ್ನು ಅರೇಬಿಯದ ಶೇಖರು
ಬಯಸುತ್ತಾರೆ ಪ್ರತಿದಿನವೂ ಹೊಸ ಹೆಣ್ಣುಗಳನ್ನು ಕಾಸರಗೋಡಿನ
ಕನ್ನಡಿಗರು ಬಯಸುತ್ತಾರೆ ಕರ್ನಾಟಕದೊಂದಿಗೆ ಸೇರಿಕೆಯನ್ನು
ವ್ಯಾಪಾರಿಗಳು ಬಯಸುತ್ತಾರೆ ಸಕಲವಸ್ತುಗಳಿಗೂ ಬೆಲೆಯೇರಿಕೆಯನ್ನು
ಆಜನ್ಮ ಬ್ರಹ್ಮಚಾರಿಗಳು ಬಯಸುತ್ತಾರೆ ವೀರ್ಯನಿಗ್ರಹವನ್ನು
ಚೋರರು ಬಯಸುತ್ತಾರೆ ಕಂಚಿಕಾಮಾಕ್ಷಿಯ ವಿಗ್ರಹವನ್ನು
ಬಯಸುತ್ತಾರೆ! ಬಯಸುತ್ತಾರೆ! ಬಯಸದೆ ಇರುತ್ತಾರೆಯೆ ?

ಸರಕಾರ ಬಯಸುತ್ತದೆ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)