ಅಕ್ಷರ ಮೋಹ

ಅಕ್ಷರ ಮೋಹ

ಕೆಲವು ವರ್ಷಗಳ ಹಿಂದೆ ನಾನು “ಅಕ್ಷರ ಲೋಕದ ಅಂಚಿನಲ್ಲಿ” ಎಂಬ ಶೀರ್ಷಿಕೆಯ ಕೆಳಗೆ ಅಕ್ಷರ ಲೋಕದ ಜತೆಗಿನ ನನ್ನ ಸಂಬಂಧವನ್ನು ಲೇಖನರೂಪದಲ್ಲಿ ದಾಖಲಿಸಲು ಪ್ರಯತ್ನಿಸಿದ್ದೆ. ಅದೊಂದು ರೀತಿಯಲ್ಲಿ ನನ್ನ ಜೀವನ ಚರಿತ್ರೆಯೂ ಆಗಿತ್ತು. ಸುಮಾರು ಹತ್ತೋ ಹನ್ನೊಂದೋ ಲೇಖನಗಳನ್ನು ಬರೆದಮೇಲೆ ಯಾವುದೋ ಕಾರಣಕ್ಕೆ ಮುಂದೆ ಬರೆಯಲಾಗಲಿಲ್ಲ. ಏನಿದ್ದರೂ, ಈ ಲೇಖನ ಮಾಲೆಯನ್ನು ನಾನು ಕನ್ನಡದ ‘ಅ’ ಅಕ್ಷರದ ಸೌಂದರ್ಯ ವರ್ಣನೆಯಿಂದ ಆರಂಭಿಸಿದ ನೆನಪು. ‘ಅ’ ಅಕ್ಷರವೇ ನಾನು ಕಲಿತ ಮೊದಲನೆ ಸಂಜ್ಞೆ ಕನ್ನಡ ಕಲಿಯುವ ಎಲ್ಲಾ ಮಕ್ಕಳೂ ಮೊದಲಿಗೆ ‘ಅ’ವನ್ನೇ ಬಹುಶಃ ಕಲಿಯುತ್ತಾರೆ. ಅಂದುಕೊಂಡಿದ್ದೇನೆ. ಅದರ ದುಂಡುತನಕ್ಕೆ ನಾನು ಮಾರುಹೋಗಿದ್ದೆ. ಹಾಗೆ ನೋಡಿದರೆ ಕನ್ನಡದ ಹೆಚ್ಚಿನ ಅಕ್ಷರಗಳೂ ದುಂಡುಮಲ್ಲಿಗೆಯಂತೆ ದುಂಡಗೇ! ಈ ಪ್ರತಿಯೊಂದು ಅಕ್ಷರಕ್ಕೂ ಒಂದೊಂದು ವ್ಯಕ್ತಿತ್ವವಿದೆ. ‘ಅ’ಕಾರವೆಂದರೆ ಅದೊಂದು ಕನ್ನಡ ಸುಂದರಿಯ ಮುಖಾರವಿಂದ! ಕಕಾರ ಒಂದು ಕಟ್ಟಿರುವೆಯಂತಿದ್ದರೆ, ಋ ಮತ್ತು ಭೂಗಳು ಚೇಳಿನ ಆಕಾರದಲ್ಲಿ ಕಾಣಿಸುತ್ತವೆ. ಯಾವುದೇ ಬರಹದಲ್ಲಿ ಉಪಯೋಗವಾಗದೆ ಇದ್ದರೂ, ಅದನ್ನೂ ಆ ಕಾಲದಲ್ಲಿ ನಾವು ಕಲಿಯುತ್ತಿದ್ದೆವು. ಅದೆಲ್ಲ ಒಂದು ಹೊರೆಯೆಂದು ನಮಗೆ ಅನಿಸಿದ್ದೇ ಇಲ್ಲ. ಈಗಲಾದರೆ, ಕನ್ನಡ ಬರಹದಲ್ಲಿ ಬಳಕೆಯಿರುವ ಋ ಕೂಡಾ ಅಗತ್ಯವಿಲ್ಲ ಎಂದು ಕೆಲವರು ಅಂದಾಗ ಈ ಮಾತನ್ನು ವಿರೋಧಿಸಿದವರಲ್ಲಿ ನಾನೂ ಒಬ್ಬ.

ಕನ್ನಡ ವರ್‍ಣಮಾಲೆಯನ್ನು ಗಮನಿಸಿದರೆ, ಸ್ವರಾಕ್ಷರಗಳ ಜತೆಯಲ್ಲಿ ಅಂ, ಅಃ ಎಂಬೆರಡು ಅಕ್ಷರಗಳೂ ಕೊನೆಯಲ್ಲಿ ಸೇರಿವೆ. ಇವು ನಿಜಕ್ಕೂ ಸ್ವರಾಕ್ಷರಗಳಲ್ಲ; ಆದರೆ ಇವಕ್ಕೆ ಬೇರೆಲ್ಲೂ ಜಾಗ ಇಲ್ಲದ ಕಾರಣ, ನೀವು ಇಲ್ಲಿರಿ ಎಂದು ನಮ್ಮ ಹಿಂದಿನವರು ಸ್ವರಗಳ ಜತೆ ಅವಕ್ಕೆ ಜಾಗ ಮಾಡಿಕೊಟ್ಟಹಾಗಿದೆ. ಆಮೇಲೆ ಊಟಕ್ಕೆ ಪಂಕ್ತಿ ಹಾಕಿದ ಹಾಗೆ ಇಪ್ತತ್ತೈದು ವರ್ಗೀಯ ವ್ಯಂಜನಗಳು ಬರುತ್ತವೆ. ಇವನ್ನಾದರೆ, ಕ ಖ ಗ ಘ ಙ ಮುಂತಾಗಿ ರಾಗವಾಗಿ ಹಾಡಿಕೊಂಡು ಕಲಿತುಕೊಳ್ಳಬಹುದು. ಆದರೆ, ಆಮೇಲೆ ಬರುವ ಅವರ್ಗೀಯಗಳು ಅಷ್ಟು ಸುಲಭವಲ್ಲ. ಆರಂಭದ ಯರಲವ ಸರಿ. ಅವಕ್ಕೊಂದು ರಿದಂ ಇದೆ. ಆದರೆ ಶ ಷ ಸ ತಲುಪಿದಾಗ ಅವು ನಿಜಕ್ಕೂ ಹಾಗೋ ಅಥವಾ ಸ ಶ ಷ ಎಂದೋ ಅಥವಾ ಇನ್ನೊಂದು ರೀತಿಯಲ್ಲೋ ಎಂದು ನೆನಪುಮಾಡಲು ಗೊಂದಲವಾಗುತ್ತದೆ. ಹಾಗೂ ಶ ಮತ್ತು ಷ ಗಳ ನಡುವಣ ಧ್ವನಿ ವ್ಯತ್ಯಾಸ ಫಕ್ಕನೆ ಗೊತ್ತಾಗುವುದಿಲ್ಲ. ಬರೆಯುವಲ್ಲಾದರೆ, ಶಿವನಿಗೆ ಮುರುಟು ಶ ಎಂದೂ, ಆತ ಕುಡಿದ ವಿಷಕ್ಕೆ ಪಟ್ಟಿ ಷ ಎಂದೂ ಹೇಳುತ್ತೇವೆ. ಈ ಹೆಸರುಗಳಾದರೂ ಎಷ್ಟು ಸ್ವಾರಸ್ಯಕರವಾಗಿವೆ! ಶ ನಿಜಕ್ಕೂ ಮುರುಟಿದಂತೆ ಕಾಣಿಸುತ್ತದೆ-ಶಂಖದ ಹಾಗೆ. ಶ ಅಕ್ಷರವನ್ನೇ ಹೋಲುವ ಶಂಖಪುಷ್ಪ ಎಂಬ ಒಂದೂ ಹೂ ಕೂಡಾ ಇದೆ. ಆದರೆ ಪಟ್ಟೆ ಷ ಇದನ್ನು ಬರೆಯುವಲ್ಲಿ ಮೊದಲು ಪ್ರಕಾರ ಬರೆದು ಆಮೇಲೆ ಅದಕ್ಕೊಂದು ಪಟ್ಟಿ (ಬರೆ) ಹಾಕುವುದರಿಂದ (ಪಟ್ಟೆ ಹುಲಿಯನ್ನು ನೆನೆದುಕೊಳ್ಳಿ) ಅದು ಪಟ್ಟೆ ಷ. ಅಕಾರದಷ್ಟೇ ಸುಂದರವಾಗಿ ನನಗೆ ಕಾಣಿಸುವುದು ಳ. ಇದೊಂದು ಕೊಳದಲ್ಲಿ ಶುಭ್ರವಾಗಿದ್ದಂತೆ ಅನಿಸುತ್ತದೆ.

ಹೆಸರುಗಳ ವಿಷಯಕ್ಕೆ ಬಂದರೆ, ಫ, ಧ, ಢ ಮುಂತಾದ ಮಹಾಪ್ರಾಣಗಳಲ್ಲಿ ಕೆಳಗೊಂದು ಸಣ್ಣ ಬರೆ ಎಳೆಯುತ್ತೇವಲ್ಲ; ಕೆಲವರದಕ್ಕೆ ಹೊಟ್ಟೆ ಸೀಳುವುದು ಎಂದರೆ, ಇನ್ನು ಕೆಲವರು ಕುಂಡೆ ಸೀಳುವುದು ಎನ್ನುತ್ತಾರೆ. ಇಬ್ಭಾಗವಾಗಿ ದಂಡಗೆ ಕುಂಡೆಯಂತೆ ಕಾಣಿಸುವ ಅಕ್ಷರಗಳಿಗೆ ಮಾತ್ರವೇ ಈ ಸೀಳು ಹಾಕುವುದರಿಂದ ಕುಂಡೆ ಸೀಳುವುದಕ್ಕೇ ಹೆಚ್ಚು ಪ್ರತಿಮಾಶಕ್ತಿಯಿರುವುದು. ಆದರೆ ಕುಂಡೆ ಎಂದು ಸಾರ್ವಜನಿಕವಾಗಿ ಹೇಳಲಾರದವರು ಹೊಟ್ಟೆ ಸೀಳುತ್ತಾರೆ! ಹೀಗೆಯೇ ವಟ್ರಸುಳಿ, ಕೊಂಬು, ತಲೆಕೊಟ್ಬು ಮುಂತಾದ ಇತರ ಹೆಸರುಗಳೂ ವರ್ಣಮಯವಾಗಿವೆ.

ಈ ಅವರ್ಗೀಯ ವ್ಯಂಜನಗಳ ಕೊನೆಯಲ್ಲಿ ಕ್ಷ ಮತ್ತು ಜ್ಞಗಳನ್ನು ಸೇರಿಸಿಕೊಂಡಿದ್ದಾರೆ (ಕ್ಷದ ನಂತರ ಕೆಲವರು ತ್ರ ಕೂಡಾ ಸೇರಿಸುತ್ತಾರೆ.) ಕ್ಷ ಮತ್ತು ಜ್ಞ ನಿಜಕ್ಕೂ ಏಕಾಕ್ಷರಗಳಲ್ಲ, ಸಂಯುಕ್ತಾಕ್ಷರಗಳು. ಆದರೂ ಅವನ್ನು ಯಾಕೆ ಅಕ್ಷರಮಾಲೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದು ಯೋಚಿಸಿದರೆ ನಮಗೊಂದು ಸೂಕ್ಷ್ಮ ಹೊಳೆಯುತ್ತದೆ: ಷ ಮತ್ತು ಞ ಒತ್ತಕ್ಷರಗಳಾಗಿ ಬರುವುದು ಈ ಕ್ರಮವಾಗಿ ಕ ಮತ್ತು ಜ ವ್ಯಂಜನಗಳಲ್ಲಿ ಮಾತ್ರವೇ. (ಞ ತನ್ನದೇ ಅಕ್ಷರದ ಒತ್ತಕ್ಷರವಾಗಿ ಕೂಡಾ ಬರಬಹುದು-ಮುಖ್ಯವಾಗಿ ಕಿಞ್ಞಣ್ಣ, ಕುಞ್ಞ, ಕುಞ್ಞಣ್ಣ ಮುಂತಾದ ತುಳು ಮತ್ತು ಹವ್ಯಕ ಮೂಲದ ಹೆಸರುಗಳಲ್ಲಿ.) ಆದ್ದರಿಂದ ಇವನ್ನು ಅಕ್ಷರಮಾಲೆಯಲ್ಲೇ ಕಲಿತುಬಿಟ್ಟರೆ, ಆ ಮೇಲೆ ರಗಳೆಯಿಲ್ಲ!

ಇನ್ನು ನೇರವಾಗಿ ಓತ್ತಕ್ಷರಗಳಿಗೆ ಬಂದರೆ, ಮೇಲ್ನೋಟಕ್ಕೆ ಇದೊಂದು ಗೊಂದಲಮಯ ಪ್ರದೇಶವಾಗಿ ಕಾಣಿಸುತ್ತದೆ. ಆದರೂ ಹ್ಯಾಮ್ಲೆಟ್ ಹೇಳುವಂತೆ, ಈ ಗೊಂದಲದಲ್ಲೂ ಒಂದು ಸೂತ್ರವಿದೆ. ಇಲ್ಲಿ ಮುಖ್ಯವಾಗಿ ಮೂರು ವಿಧಾನಗಳನ್ನು ಕಾಣುತ್ತೇವೆ:
೧. ಮೂಲ ವ್ಯಂಜನಗಳ ಚಿಕ್ಕ ರೂಪ: ಖ, ಟ ಮುಂತಾದವುಗಳ ಒತ್ತಕ್ಷರಗಳು ಈ ರೀತಿಯವು;
೨. ವ್ಯಂಜನಗಳ ಅರ್ಧರೂಪ-ಇಲ್ಲಿ ತಲೆಕೊಟ್ಟು ಮಾಯವಾಗುತ್ತದೆ; ಕ, ಪ ಮುಂತಾದುವು;
೩. ವ್ಯಂಜನಗಳ ರೂಪಕ್ಕೂ ಅವುಗಳ ಒತ್ತಕ್ಷರಗಳಿಗೂ ಹೋಲಿಕೆ ತಿಳಿಯದಿರುವುದು: ಯ, ಋ ಮುಂತಾದುವು. ಹಾಗೂ ಈ ಒತ್ತಕ್ಷರಗಳನ್ನು ಪ್ರಧಾನ ಅಕ್ಷರಗಳ ಬಲ ಕೆಳಗಡೆ ಬರೆಯುವ ಸಂಪ್ರದಾಯ ಕೆಲವರಿಗೆ ಕಿರಿ ಕಿರಿ ಉಂಟುಮಾಡಿರುವ ಹಾಗೆ ಅನಿಸುತ್ತದೆ.

ಟೈಪ್ರೈಟರ್ ಬಂದಾಗ, ಕನ್ನಡ ಅಕ್ಷರಗಳನ್ನು ಈ ತಂತ್ರಜ್ಞಾನಕ್ಕೆ ಹೇಗೆ ಅಳವಡಿಸಿಕೊಳ್ಳುವುದು ಎನ್ನುವ ಸಮಸ್ಯೆ ಎದ್ದಿತು. ಬಿ.ಎಂ. ಶ್ರೀ.ಯವರು ತುಂಬ ಮೂಲಭೂತವಾದ ಮಾರ್ಪಾಟುಗಳನ್ನು ಸಲಹೆ ಮಾಡಿದರು (ಕನ್ನಡ ಎಂಬುದನ್ನು ಕನ್‍ನಡ ಎಂದು ಬರೆಯಬಹುದು ಇತ್ಯಾದಿಯಾಗಿ). ಈ ಸಲಹೆ ನಿಜಕ್ಕೂ ತಮಿಳು ಮೂಲವಾದ್ದು: ಯಾಕೆಂದರೆ, ತಮಿಳಿನಲ್ಲಿ ಒತ್ತಕ್ಷರಗಳನ್ನು ಪ್ರಧಾನ ಅಕ್ಷರದ ನಂತರ ಅದೇ ಪಂಕ್ತಿಯಲ್ಲಿ ಸೇರಿಸಿ ಬರೆಯುತ್ತಾರೆ. ಅಥವಾ ಈ ಚಿಂತನೆಯ ಹಿಂದೆ ಇಂಗ್ಲಿಷ್ ಮಾದರಿ ಇದ್ದಿರಲೂಬಹುದು. ಆದರೆ ಹೀಗೆ ಮಾಡಿದರೆ ಕನ್ನಡದ ಗುರುತೇ ಅಳಿಸಿಹೋಗುತ್ತದೆ. ಈಗ ಟೈಪ್ರೈಟರ್ ಮಾತ್ರವಲ್ಲ, ಕಂಪ್ಯೂಟರುಗಳು ಕೂಡಾ ಕನ್ನಡ ಅಕ್ಷರಗಳನ್ನು ಇದ್ದ ಹಾಗೇ ಅಳವಡಿಸಿಕೊಳ್ಳಲು ಸಮರ್ಥವಾಗಿರುವುದು ನಮ್ಮ ಸೌಭಾಗ್ಯ. ನಿಜ, ಕನ್ನಡದ ಆರಂಭದ ವಿದ್ಯಾರ್ಥಿಗಳಿಗೆ ಈ ಒತ್ತಕ್ಷರಗಳನ್ನು ಕರಗತಮಾಡಿಕೊಳ್ಳುವುದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆದರೆ ಕ್ರಮೇಣ ಅವರು ಕಲಿತುಕೊಳ್ಳುತ್ತಾರೆ ಎನ್ನುವುದನ್ನು ನನ್ನ ಅಮೇರಿಕದ ಅನುಭವದಿಂದ ತಿಳಿದುಕೊಂಡಿದ್ದೇನೆ.

ಒತ್ತಕ್ಷರಗಳಿಗೆ ಸಂಬಂಧಿಸಿದಂತೆ ಇನ್ನೊಂದು ವಿಚಾರ ಕೂಡಾ ಉಲ್ಲೇಖನೀಯ: ಅರ್ಕಾವೊತ್ತು ಮತ್ತು ಬಿಂದು ಕನ್ನಡಕ್ಕೆ ವಿಶಿಷ್ಟವಾದುವು. ಬರಹದಲ್ಲಿ ಇವೆರಡೂ ಬಹಳಷ್ಟು ಕಾರ್ಯ ನಿರ್ವಹಿಸುತ್ತವೆ. ಅರ್ಕಾವೊತ್ತು ಇತರ ಒತ್ತಕ್ಷರಗಳಂತೆ ಅಡಿಗೆ ನಿಲ್ಲದೆ ಉಚ್ಚಾರಣೆಯಲ್ಲಿ ಸಂಯುಕ್ತಾಕ್ಷರದ ಮೊದಲ ಅಕ್ಷರವಾಗಿದ್ದೂ ಬರಹದಲ್ಲಿ ತನ್ನ ಜತೆಯದರ ಆಚೆ ಹೋಗಿ ಸಾಲಿನಲ್ಲಿ ನಿಂತುಕೊಳ್ಳುತ್ತದೆ! ಉದಾಹರಣೆಗೆ, ಸೂರ್ಯ, ಧೈರ್ಯ ಇತ್ಯಾದಿ. ಇವನ್ನು ಬೇಕಾದರೆ ಸೂರ್‍ಯ, ಧೈರ್‍ಯ ಎಂದು ಬರೆಯಬಹುದಾದರೂ, ಅರ್ಕಾವೊತ್ತು ಪದದ ಭಾಗವೇ ಆಗಿದ್ದಾಗ ಹೀಗೆ ಬರೆಯುವ ಸಂಪ್ರದಾಯವಿಲ್ಲ. ಆದರೆ, ಪದಗಳು ಮೊಟಕುಗೊಂಡಾಗ ಮತ್ತು ಆಡುಮಾತನ್ನು ದಾಖಲಿಸುವಾಗ ಆ ತರ ಬರೆಯುವ ರೂಢಿಯಿದೆ. ಉದಾಹರಣೆಗೆ: ಯಾರ್‍ಯಾರು, ಮರ್‍ಯಾದೆ, ಇತ್ಯಾದಿ. ಇನ್ನು ಬಿಂದು ವಿಚಾರ. ಇದಾದರೆ ಎಲ್ಲಾ ಅನುನಾಸಿಕಗಳಿಗೆ, ಅವು ಇಮ್ಮಡಿಗೊಳ್ಳುವ ಸಂದರ್ಭವನ್ನು ಉಳಿದು, ಸಾರ್ವತ್ರಿಕವಾಗಿ ಬರುವ ಸಂಯುಕ್ತರೂಪ: ಅಂಕ, ಅಂಗ, ಮುಂತಾಗಿ; ಇಮ್ಮಡಿಯಾಗುವಲ್ಲಿ ಮಾತ್ರ ತಮ್ಮ, ಅಣ್ಣ ಎಂದು ಬರೆಯುತ್ತೇವೆ. ಕೆಲವರು ತಂಮ, ಅಂಣ ಎಂದೂ ಬರೆಯುವುದಿದೆ- ಯಾದರೂ, ಅವು ಶಿಷ್ಟ ರೂಪಗಳಲ್ಲ. ಬಿಂದು ಸಾಲಿನಲ್ಲೇ ಬರುತ್ತದೆ ಎನ್ನುವುದು ಗಮನಾರ್ಹ. ಅಂತೂ ಈ ಅರ್ಕಾವೊತ್ತು ಮತ್ತು ಬಿಂದು ಎರಡೂ ಕನ್ನಡದ ಒತ್ತಿನ ಹೊರೆಯನ್ನು ಬಹಳಷ್ಟು ಕಡಿಮೆ ಮಾಡಿವೆ ಎನ್ನುವುದರಲ್ಲಿ ಸಂಶಯವಿಲ್ಲ.

ಕನ್ನಡ ವರ್ಣಮಾಲೆಯನ್ನು ಕಲಿಸುವಿಕೆಗೆ ಸಂಬಂಧಿಸಿ ಅಮೆರಿಕದಲ್ಲಿ ನಾನು ಇನ್ನೂ ಒಂದು ಸಂಗತಿಯನ್ನು ಕಲಿತೆ. ಸಾಧಾರಣವಾಗಿ, ಅಕ್ಷರಗಳನ್ನು ಕಲಿಸುವಾಗ ಸಚಿತ್ರ ಪುಸ್ತಕಗಳನ್ನು ಬಳಸುವುದು ರೂಢಿ. ಅ ‘ಅಗಸ’ (ಅಗಸನ ಚಿತ) ಆ ‘ಆನೆ’ (ಆನೆಯ ಚಿತ್ರ) ಇತ್ಯಾದಿ. ಕನ್ನಡದ ಮಕ್ಕಳ ಸಂದರ್ಭದಲ್ಲಾದರೆ ಇದು ಸರಿ. ಆದರೆ, ಒಬ್ಬ ವಿದೇಶೀ ವಿದ್ಯಾರ್ಥಿಗೆ ಅಕಾರದಷ್ಟೇ ಹೊಸದು ಅಗಸ ಎಂಬ ಪದ ಕೂಡಾ. ಆದ್ದರಿಂದ ನಾನು ಅಮೇರಿಕನರಿಗೆ ಪರಿಚಯವಿರುವ ಹೆಸರುಗಳನ್ನೇ ತೆಗೆದುಕೊಂಡು ಅವನ್ನು ಕನ್ನಡದಲ್ಲಿ ಬರೆಯುವುದು ಹೇಗೆ ಎಂದು ಹೇಳಿಕೊಟ್ಟೆ. ಉದಾಹರಣೆಗೆ, ಅಮೇರಿಕ, ಇಂಡಿಯ, ಇಂಡಿಯಾನ, ಡಾಲಸ್, ಮಿಸಿಸಿಪಿ, ಅಯೋವ, ಎರಿನ್, ಮೇರಿ, ಮೇಗನ್, ಜಾನ್ ಮುಂತಾಗಿ. ಈ ಪದ್ಧತಿಯಿಂದ ಎಲ್ಲ ಅಕ್ಷರಗಳನ್ನೂ, ಅವುಗಳ ಒತ್ತಕ್ಷರ ಸಹಿತ, ಕಲಿಯಲಿಕ್ಕೆ ಬಹುಶಃ ಸಾಧ್ಯವಾಗದು. ಆದ್ದರಿಂದ ಇವುಗಳ ಜತೆಗೇ ಅಕಾರಾದಿಯಾಗಿ ವರ್ಣಮಾಲೆಯನ್ನೂ ನಾನು ಬೇರೆ ಬೇರೆ ವಿಧಗಳಲ್ಲಿ ಹೇಳಿಕೊಡುತ್ತಿದ್ದೆ. ಈ ಮಿಶ್ರಪದ್ಧತಿ ಪಲಪ್ರದವಾಗಿ ಕೆಲಸ ಮಾಡುತ್ತದೆ ಎನ್ನುವುದು ನನ್ನ ಅನುಭವ.

ಅಮೆರಿಕದ ನನ್ನ ಕನ್ನಡ ವಿದ್ಯಾರ್ಥಿಗಳಿಗೆ ‘ಬರಹ’ ಕಂಪ್ಯೂಟರ್ ತಂತ್ರಜ್ಞಾನವನ್ನೂ ಕಲಿಸಿದೆ. ವೈಯಕ್ತಿಕವಾಗಿ ನನಗೆ ‘ಬರಹ’ದ ಕೀಲಿಮಣೆ ಇನ್ಸ್‍ಕ್ರಿಪ್ಟ್‍ನಷ್ಟು ಸುಲಭವಲ್ಲ ಎನಿಸಿದರೂ, ಇಂಗ್ಲಿಷ್ ಮೂಲದವರಿಗೆ ಕನ್ನಡ ಅಕ್ಷರ ಕಲಿಯುವುದಕ್ಕೆ ಇದು ಹೇಳಿ ಮಾಡಿಸಿದಂತಿದೆ. ಯಾಕೆಂದರೆ, ಇಂಗ್ಲಿಷ್ ಅಕ್ಷರಮಾಲೆಯನ್ನು ಉಪಯೋಗಿಸಿಕೊಂಡೇ ಕನ್ನಡ ಬರೆಯುವ ತಂತ್ರಜ್ಞಾನ ಇದು; ಒಂದು ರೀತಿಯಿಂದ ಕನ್ನಡ ಅಕ್ಷರಗಳ ರಚನಾಕ್ರಮವೂ ಇದರಿಂದ ಸ್ವಲ್ಪಮಟ್ಟಿಗೆ ಗೊತ್ತಾಗುತ್ತದೆ. ಕಂಪ್ಯೂಟರ್ ಜ್ಞಾನವಿರುವ ಯಾರೂ ಅರ್ಧ ಘಂಟೆಯಲ್ಲಿ ಕಲಿಯಬಹುದಾದ ‘ಬರಹ’ವನ್ನು ಕರಗತಮಾಡಿಕೊಂಡ ನನ್ನ ಈ ಅಮೇರಿಕನ್ ವಿದ್ಯಾರ್ಥಿಗಳು ಇಂಗ್ಲಿಷ್ ಕೀಲಿಗಳನ್ನೊತ್ತಿದರೆ ಕನ್ನಡ ಅಕ್ಷರಗಳು ಮೂಡಿಬರುವುದನ್ನು ನೋಡಿ ‘ವಾವ್’ ಎಂದು ಖುಷಿ ಪಡುತ್ತಿದ್ದರು. ಮಾತ್ರವಲ್ಲ, ಮುಂದೆ ಮನೆಗೆಲಸ ಕೊಟ್ಟರೆ ಅವನ್ನು ಮಾಡಿ ಈಮೇಲ್ ಮೂಲಕ ನನಗೆ ಕಳಿಸುತ್ತಿದ್ದರು ಕೂಡ!

ಕೈಬರಹದಿಂದ ಸುರುಮಾಡಿ ನಾನು ಕಂಪ್ಯೂಟರ್ ಬರಹಕ್ಕೆ ಬಂದೆ. ನಿಜ, ಕಂಪ್ಯೂಟರ್ ನಮಗೆಲ್ಲ ಬೇಕು. ಆದರೆ ಕೈಬರಹ ಬಿಟ್ಟುಬಿಡೋಣವೇ? ನಾನು ಚಿಕ್ಕವನಿರುವಾಗ ಕೈ ತಿದ್ದುವುದು ಎಂಬುದೊಂದು ಪರಿಕಲ್ಪನೆಯಿತ್ತು. ಬರೆದು ಬರೆದು ಕೈತಿದ್ದುತ್ತದೆ ಎನ್ನುತ್ತಿದ್ದರು. ಆದರೆ ಬರೆಯದೇ ಇದ್ದರೆ? ಮನುಷ್ಯನ ಮುಂಗೈಯಲ್ಲಿರುವ ನರಗಳ ಸಂಖ್ಯೆ ಉಳಿದ ಭಾಗಗಳಲ್ಲಿರುವ ನರಗಳ ಸಂಖ್ಯೆಗಳ ಮೊತ್ತಕ್ಕೆ ಸರಿಸಮವಾಗಿರುತ್ತದೆ ಎಂದು ಹೇಳುತ್ತಾರೆ. ಮನುಷ್ಯನ ವಿಕಸನದಲ್ಲಿ ಕೈಗಳು ವಹಿಸಿದ ಪಾತ್ರ ಅಪ್ಪಿಷ್ಟಲ್ಲ; ಈಗಲೂ ಕೈಗಳೇ ಕೆಲಸ ಮಾಡುವುದು. ಹೀಗಿರುತ್ತ, ಅಕ್ಷರಗಳನ್ನು ಕೈಬರಹದ ಮೂಲಕ ಕಲಿಯುವುದೂ ಈ ನರಾಭಿವೃದ್ದಿಯ ದೃಷ್ಟಿಯಿಂದ ಮುಖ್ಯ. ಇದೊಂದು ಕಾರಣವಾದರೆ, ಬಳಪ ಅಥವಾ ಕಾಗದದ ಮೇಲಿನ ಅಕ್ಷರಗಳಿಗಿರುವ ‘ವಾಸ್ತವತೆ’ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಅಕ್ಷರಗಳಿಗೆ ಇರುವಂತಿಲ್ಲ. ಅವು ಮಿಂಚಿ ಕಾಣಿಸದಾಗುತ್ತವೆ; ಅವುಗಳ ಮುದ್ರಿತ ಪ್ರತಿಯನ್ನು ತೆಗೆದುಕೊಳ್ಳಬಹುದಾದರೂ, ಅವಕ್ಕೂ ಅವುಗಳನ್ನು ಬರೆದಾತನಿಗೂ ವೈಯಕ್ತಿಕ ಸಂಬಂಧವೇ ಇರುವುದಿಲ್ಲ. ಯಾರು ಕೀಲಿಯೊತ್ತಿದರೂ ಅವೇ ಅಕ್ಷರಗಳು ಬರುತ್ತವೆ. ಆದರೆ, ಕೈಬರಹದಲ್ಲಿ ಹಾಗಲ್ಲ. ಯಾವುದೇ ಅಕ್ಷರ ಬರೆಯಬೇಕಾದರೆ, ಆ ಅಕ್ಷರದ ವಿಶಿಷ್ಟ ತಿರುವುಗಳಲ್ಲಿ ನಮ್ಮ ಕೈ ಸಾಗಬೇಕು. ನಾವು ಬರೆದುದರಲ್ಲಿ ನಮ್ಮ ವೈಯಕ್ತಿಕ ಗುರುತು ಇರುತ್ತದೆ. ಆದ್ದರಿಂದ ಅದು-ಕೆಟ್ಟದಾಗಿರಲಿ ಒಳ್ಳೆಯದಾಗಿರಲಿ-ನಮ್ಮದೇ. ನಮ್ಮ ವಿದ್ಯಾರ್ಥಿಗಳಿಗೆ ಈ ಭಾವನೆ ಬರಬೇಕಾದರೆ, ಅವರಿಗೆ ಕೈಬರಹದ ಕೆಲಸ ಸಾಕಷ್ಟು ಕೊಡಬೇಕು.

ಹಿರಿಯರಾದ ನಾವು ಕೂಡಾ ಸಂವಹನ ಸಾಧ್ಯತೆಗಳು ಕ್ಷಿಪ್ರವೂ ಸುಲಭವೂ ಆದಂತೆ (ಟೆಲಿಫೋನ್, ಈಮೇಲ್), ಪತ್ರ ಬರೆಯುವ ಪರಿಪಾಠವನ್ನು ಕೈಬಿಡುತ್ತ ಬಂದಿದ್ದೇವೆ. ಪತ್ರಕ್ಕೋಸ್ಕರ ಕಾಯುವ ತಹತಹ, ಅದು ಬಂದಾಗ ಆಗುವ ಸಂತೋಷ ಇಲೆಕಟ್ರಾನಿಕ್ ಮಾಧ್ಯಮಗಳು ಗಳಿಸಿಕೊಡಲಾರವು. ಪತ್ರಗಳನ್ನು ನೀವು ಇಟ್ಟುಕೊಳ್ಳುತ್ತೀರಿ. ಎತ್ತಿಕೊಂಡು ಮತ್ತೆ ಮತ್ತೆ ಓದುತ್ತೀರಿ. ದೊಡ್ಡ ದೊಡ್ಡ ಲೇಖಕರ, ಕಲಾವಿದರ ಪತ್ರಗಳು ಅವರ ಮರಣಾನಂತರ ಪ್ರಕಟವಾಗುತ್ತವೆ. ಅವರ ಕೃತಿಗಳನ್ನು ಅಭ್ಯಾಸ ಮಾಡುವವರಿಗೆ ಇವು ಸಹಾಯಕವಾಗುತ್ತವೆ. ಆದರೆ ಈಮೇಲುಗಳನ್ನು ಇಟ್ಟುಕೊಳ್ಳುವವರು ಯಾರು? ಓದಿದ ತಕ್ಷಣ ಅವನ್ನು ಇಲ್ಲದೆ ಮಾಡುವ ಆತುರ. ಅಂಚೆಯವರ ಕೆಲಸವೂ ಕಡಿಮೆಯಾಗುತ್ತಿದ್ದಂತೆ, ಅವರಲ್ಲೂ ಆಲಸ್ಯ ಮೂಡುತ್ತಿರುವ ಹಾಗೆ ತೋರುತ್ತದೆ. ಅಪರೂಪಕ್ಕೆ ಬರೆದ ಪತ್ರಗಳೂ ಈಗ ವಿಳಾಸ ಸೇರುತ್ತವೆ ಎನ್ನುವ ಭರವಸೆಯಿಲ್ಲ. ಸರಕಾರ ಅಂಚೆಯಣ್ಣನನ್ನು ಕಾಂಡೋಮ್ ವಿತರಕನನ್ನಾಗಿ ಮಾಡಿ ಆತನ ಆತ್ಮಗೌರವಕ್ಕೆ ಧಕ್ಕೆಯೊದಗಿಸುವ ಹುನ್ನಾರದಲ್ಲಿದೆ. ಪತ್ರವ್ಯವಹಾರಗಳನ್ನು ಮತ್ತೆ ಕುದುರಿಸುವುದು ಸಾಧ್ಯವೇ?

ಕನ್ನಡದ ಮುತ್ತಿನಂಥ ಅಕ್ಷರಗಳನ್ನು ಕೆಲವರು ಅದೇ ರೀತಿ ಚೆಲುವಾಗಿ ಬರೆಯಬಲ್ಲರು. ನನಗೆ ತಿಳಿದಂತೆ, ಹಿರಿಯರಲ್ಲಿ ನಿರಂಜನರು ತುಂಬಾ ಚಂದವಾಗಿ ಬರೆಯುತ್ತಿದ್ದರು. ಇತ್ತೀಚಿನವರಲ್ಲಿ ಕಾದಂಬರಿಕಾರ ಕುಂ. ವೀ., ಕತೆಗಾರ ಎಂ. ಎಸ್. ಶ್ರೀರಾಮ್ ಬಹಳ ಸುಂದರವಾಗಿ ಕನ್ನಡ ಅಕ್ಷರ ಬರೆಯುತ್ತಾರೆ. ಈ ಬರೆಯುವ ಕಲೆ ಮರೆತುಹೋಗದಂತೆ, ಶಾಲೆ ಕಾಲೇಜುಗಳಲ್ಲಿ ಕನ್ನಡ ಅಕ್ಷರ ಲೇಖನಗಳ ಸರ್ಧೆ ಏರ್ಪಡಿಸಿದರೆ ಒಳ್ಳೆಯದು. ಆದರೆ ಕೆಲವರ ಮೋಡಿ ಅಕ್ಷರಗಳೂ ವಿಶಿಷ್ಟವಾಗಿರುತ್ತವೆ. ಗೋವಿಂದ ಪೈಯವರ ಕನ್ನಡ ಬರಹ ತೀರಾ ಪ್ರತ್ಯೇಕವಾಗಿತ್ತು. ನನಗೆ ನೆನಪಿರುವಂತೆ, ಅವರ ಕಕಾರ ಒಂದು ಶಿಲುಬೆಯಾಕಾರದ್ದು-ಎಂದರೆ, ಒಂದು ನೀಳ ಕೋಲಿನ ತುದಿಗೆ ಸಣ್ಣ ಇನ್ನೊಂದನ್ನು ಅಡ್ಡವಾಗಿಟ್ಟಂತೆ! ಸರಿಸುಮಾರು ನಕಾರವೂ ಹಾಗೆಯೇ! ಒತ್ತಕ್ಷರಗಳಂತೂ ಇನ್ನಷ್ಟು ವಿಚಿತ್ರವಾಗಿರುತ್ತಿದ್ದುವು. ಎಲ್ಲಾದರೂ ಅವರ ಕಾಗದ ಬಂದರೆ (ಯಾರೇ ಪತ್ರ ಬರೆದರೂ ಅವರಿಗೆ ತಮ್ಮ ವಿಶಿಷ್ಟವಾದ ನೇರಳೆ ಬಣ್ಣದ ಶಾಯಿಯಲ್ಲಿ ಕೂಡಲೇ ಉತ್ತರಿಸುವುದು ಅವರ ಪದ್ಧತಿ) ಎರಡು ಮೂರು ಜನ ಸೇರಿಯೇ ಅವರ ಬರಹದ ಒಗಟನ್ನು ಬಿಡಿಸಬೇಕು! ಇದು ಪೈಯವರ ವೈಶಿಷ್ಟ್ಯ. ಶಾಂತಿನಾಥ ದೇಸಾಯಿಯವರ ಕೈಬರಹ ಬಹಳ ಚಿಕ್ಕದೂ ಅಸ್ಪಷ್ಟವೂ ಆಗಿದ್ದು ಓದಲು ಕಷ್ಟವಾಗುತ್ತಿತ್ತು. ಅದಕ್ಕೆ ವಿರುದ್ಧವಾಗಿ ಚೆನ್ನಣ್ಣ ವಾಲೀಕಾರರದು ಸಾಮಾನ್ಯಕ್ಕಿಂತ ಎರಡು ಮೂರರಷ್ಟು ದೊಡ್ಡದು. ಒಂದು ಕಾದಂಬರಿ ಬರೆಯಬೇಕಾದರೆ ಅವರಿಗೆಷ್ಟು ಕಾಗದ ಬೇಕಾಗಬಹುದು ಎಂದು ಗಾಬರಿಯಾಗುತ್ತದೆ! ಕೈಬರಹ ವ್ಯಕ್ತಿಸ್ವಭಾವವನ್ನು ಹೇಳುತ್ತದೆ ಎನ್ನುವುದರಲ್ಲಿ ನನಗೆ ನಂಬಿಕೆಯಿಲ್ಲ. ಆದರೆ ಅದು ವ್ಯಕ್ತಿಗೆ ವಿಶಿಷ್ಟವಾಗಿರುತ್ತದೆ ಎನ್ನುವುದು ನಿಜ. ಅವರವರ ಸಹಿಯ ಹಾಗೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ಲೇಖಕರ ಕೈಬರಹಗಳ ಮಾದರಿಗಳನ್ನು ಪ್ರದರ್ಶಿಸಿದರೆ ಜನರಲ್ಲಿ ಅಕ್ಷರ ಮೋಹವನ್ನು ಹೆಚ್ಚಿಸಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಆಟವೋ ಕೃಷ್ಣ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೮

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…