ಗಾಂಧಿಗೆ ಗಂಟು ಬಿದ್ದವರು

ಗಾಂಧಿಗೆ ಗಂಟು ಬಿದ್ದವರು

ಗಾಂಧೀಜಿಯವರ ಬಗ್ಗೆ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿಯವರು ಕಟುವಾಗಿ ಟೀಕಿಸಿ ದಲಿತ ವಿರೋಧಿಯೆಂದು ಹಣೆಪಟ್ಟಿ ಅಂಟಿಸಿದ್ದನ್ನು ಅನುಸರಿಸಿ ಇತ್ತೀಚೆಗೆ ವಿವಾದವುಂಟಾಗಿದೆ. ಕಾನ್ಸೀರಾಂ ಅವರು ಸಹಜವಾಗಿಯೇ ಮಾಯಾವತಿಯವರನ್ನು ಬೆಂಬಲಿಸಿದ್ದಾರೆ; ಗಾಂಧೀಜಿ ಅವರನ್ನು ‘ಮನುವಿಗೆ ಸಮಾನ’ ಎಂದು ಮತ್ತೊಮ್ಮೆ ಟೀಕಿಸಿದ್ದಾರೆ. ಯಾವುದೇ ವ್ಯಕ್ತಿ ಟೀಕಾತೀತನಲ್ಲ. ಆದರೆ ‘ಟೀಕೆಗಾಗಿ ಟೀಕೆ’ಯೆಂಬ ಸೂತ್ರದಲ್ಲಿ ಸೆರೆಸಿಕ್ಕಿ ಸಾಣೆಕಲ್ಲಿಗೆ ನಾಲಗೆ ಕೊಟ್ಟು ಹರಿತ ಮಾಡಿಕೊಳ್ಳುವ ಹುನ್ನಾರವೂ ಬೇಕಿಲ್ಲ. ಇಷ್ಟಕ್ಕೂ ಗಾಂಧಿಯವರನ್ನು ಟೀಕಿಸುವ ಮೊದಲಿಗರ ಸಾಲಿನಲ್ಲಿ ಮಾಯಾವತಿ ಮತ್ತು ಕಾನ್ಸಿರಾಂ ಅವರಿಗೆ ಸ್ಥಾನವಿಲ್ಲ. ಇದಕ್ಕಾಗಿ ಅವರಿಗೆ ನಿರಾಶೆ ಆಗಿಲ್ಲವೆಂದು ನಂಬುತ್ತೇನೆ.

ಗಾಂಧಿಯವರು ಬದುಕಿದ್ದಾಗಲೇ ಭಿನ್ನಾಭಿಪ್ರಾಯಗಳನ್ನು ಎದುರಿಸಿದ್ದರು; ತಮಗೆ ಸರಿಕಂಡ ನಿಲುವನ್ನು ತಳೆದಿದ್ದರು. ಅದೇ ರೀತಿ ಗಾಂಧಿಯವರ ಅಭಿಪ್ರಾಯಗಳನ್ನು ಒಪ್ಪದವರು ವ್ಯಕ್ತಿ ಭಂಜಕ ಪ್ರವೃತ್ತಿಗೆ ಬದಲಾಗಿ ಭಿನ್ನ ನೆಲೆಯ ಅಭಿಪ್ರಾಯಗಳ ಪ್ರತಿಪಾದನೆ ಮಾಡಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದರು. ಯಾವ ವ್ಯಕ್ತಿಯೂ ಪ್ರಶ್ನಾತೀತ ಪಟ್ಟ ಹತ್ತಬಾರದೆಂಬ ಅರಿವು ಗಾಂಧಿಯವರು ಬದುಕಿದ್ದ ಕಾಲದಲ್ಲೇ ಪ್ರಕಟವಾಗಿದೆ. ಆದರೆ ಮಾಯಾವತಿ ಮತ್ತು ತುಕಾರಾಂ ಅವರ ಟೀಕೆಯಲ್ಲಿ ನಿರಾಕರಣೆಯ ನಲೆಯಿದೆ. ಗಾಂಧೀಜಿಯವರು ಅಂಬೇಡ್ಕರ್ ಅವರಂತೆ ದಲಿತಪರ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿಲ್ಲವೆಂಬುದೂ ಕೆಲವೊಮ್ಮೆ ಎರೋಧಾಭಾಸದ ಹೇಳಿಕೆಗಳನ್ನು ನೀಡಿದ್ದೂ ನಿಜ. ಈ ಕಾರಣ ಮಾತ್ರದಿಂದ ಗಾಂಧೀಜಿ ದಲಿತರ ವಿರುದ್ಧ ನೆಲೆಯಲ್ಲಿದ್ದರೆಂದು ನಿರ್ಣಯಕ್ಕೆ ಬರಲಾಗದು. ಅಸ್ಪೃಶ್ಯತೆಯನ್ನು ಸಮರ್ಥಿಸಿ, ದಲಿತರ ಬದುಕುವ ಹಕ್ಕನ್ನು ನಿರಾಕರಿಸಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಕಟಗೊಳ್ಳುವವರು ದಲಿತ ವಿರೋಧಿಯಾಗುತ್ತಾರೆ. ಆದರೆ ಗಾಂಧೀಜಿಯವರು ತಮ್ಮೆಲ್ಲಾ ಸಾಮಾಜಿಕ ಮಿತಿಗಳೊಳಗೂ ಈ ರೀತಿಯಲ್ಲಿ ಪ್ರಕಟಗೊಳ್ಳಲಿಲ್ಲ. ಅಸ್ಪೃಶ್ಯತೆಯನ್ನು ಕಟುವಾಗಿ ಟೀಕಿಸುವ ಅವರ ವರ್ಣಾಶ್ರಮ ಧರ್ಮಕ್ಕೆ ತಮ್ಮದೇ ವ್ಯಾಖ್ಯಾನ ಕೊಡುತ್ತ ಮದುವಾಗುವ ವಿರೋಧಾಭಾಸವಿದ್ದರೂ ಅವರನ್ನು ಸಾರಾಸಗಟಾಗಿ ದಲಿತ ವಿರೋಧಿಯೆಂದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗದು. ಆದರೆ ಅಂಬೇಡ್ಕರ್ ಅವರಿಗೆ ಇದ್ದ ದಲಿತಪರ ಪ್ರಖರತೆ ಗಾಂಧಿಯವರಿಗೆ ಇರಲಿಲ್ಲ. ಇಬ್ಬರ ಮಾರ್ಗಗಳು ಬೇರೆ ಆಗಿದ್ದುದು ಅದಕ್ಕೆ ಒಂದು ಕಾರಣ. ಅಂಬೇಡ್ಕರ್ ಅವರಿಗೆ ವಿದೇಶಿ ಬ್ರಿಟಿಷರಿಗಿಂತ ಸ್ವದೇಶಿ ಸಾಮಾಜಿಕ ಶೋಷಕರ ಬಗ್ಗೆ ಸಹಜವಾಗಿಯೇ ಸಿಟ್ಟು ಹೆಚ್ಚಾಗಿತ್ತು. ಗಾಂಧಿಯವರಿಗೆ ಸ್ವದೇಶಿ ಶೋಷಕರಿಗಿಂತ ವಿದೇಶಿ ಬ್ರಿಟಿಷರ ವಿರುದ್ಧ ಹೋರಾಟ ಕಟ್ಟುವುದು ಮುಖ್ಯವಾಗಿತ್ತು. ಸ್ವದೇಶದಲ್ಲಿರುವ ಸಾಮಾಜಿಕ – ಆರ್ಥಿಕ ಅಸಮಾನತೆಯನ್ನು ಗಾಂಧಿಯವರು ಗುರುತಿಸಿದ್ದಾರೆ; ಚಿಂತನೆ ನಡೆಸಿದ್ದಾರೆ; ಕ್ರಿಯಾಶೀಲರಾಗಿದ್ದರು. ಆದರೆ ಅವರ ಕೇಂದ್ರ ಪ್ರಜ್ಞೆಯಲ್ಲಿ ದೇಶದ ಸ್ವಾತಂತ್ರ್ಯ ಪ್ರಧಾನವಾಗಿತ್ತು. ಹೀಗಾಗಿ ಅವರು ಬ್ರಿಟಿಷರೊಂದಿಗೆ ಸಂಘರ್ಷಕ್ಕೆ ಇಳಿದಷ್ಟೇ ಪ್ರಖರವಾಗಿ ಸ್ವದೇಶಿ ಶೋಷಕರ ಜೊತೆ ಸಂಘರ್ಷಕ್ಕೆ ಇಳಿಯುತ್ತಿರಲಿಲ್ಲ. ಅಸ್ಪೃಶ್ಯತೆ ನೇರ ಅನುಭವದಿಂದ ರೂಪುಗೊಂಡ ಅಂಬೇಡ್ಕರ್ ಅವರಿಗೆ ಬ್ರಿಟಿಷರಿಗಿಂತ ಸ್ವದೇಶಿ ಸಾಮಾಜಿಕ ಪಟ್ಟಭದ್ರರೊಂದಿಗೆ ಸಂಘರ್ಷಕ್ಕಿಳಿಯುವುದು ಮುಖ್ಯವಾಗಿತ್ತು. ಸಂತ ಮನೋಧರ್ಮದ ಗಾಂಧೀಜಿಯವರದು ಪ್ರಧಾನವಾಗಿ ಸಾಮರಸ್ಯದ ವ್ಯಕ್ತಿತ್ವವಾದರೆ, ಅಂಬೇಡ್ಕರ್ ಅವರು ಸಂಘರ್ಷದ ವ್ಯಕ್ತಿತ್ವ; ತಮ್ಮ ಅಭಿಪ್ರಾಯ ಒಪ್ಪದ ವ್ಯಕ್ತಿ ಗಾಂಧಿ ಆಗಿರಲಿ, ಅಥವಾ ಯಾರೇ ಆಗಿರಲಿ ಅಂಬೇಡ್ಕರ್ ಅವರಿಗೆ ಆಕ್ರೋಶ ಹೆಚ್ಚು. ಗಾಂಧೀ ಎದುರಿಸುತ್ತಿದ್ದ ಸಮಸ್ಯೆಗಳು ವಿಭಿನ್ನವಾಗಿದ್ದವು. ಹಿಂದೂ-ಮುಸ್ಲಿಮರ ನಡುವೆ ನಡೆಯುತ್ತಿದ್ದ ಗಲಭೆಗಳು, ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಿಂದ ರೂಪು ಗೊಳ್ಳುತ್ತಿದ್ದ ವಿಭಜಕ, ಮನೋಧರ್ಮದ ಹುನ್ನಾರಗಳು, ಬ್ರಿಟಿಷರನ್ನು ಅಹಿಂಸಾತ್ಮಕವಾಗಿ ಎದುರಿಸಬೇಕೆಂಬ ಛಲ, ಸಾಮರಸ್ಯವನ್ನು ಕಾಪಾಡಿ ಕೊಳ್ಳುವ ಸಂತ ಮನಸ್ಕ ಅಪೇಕ್ಷೆ. ಈ ಎಲ್ಲ ಸವಾಲುಗಳು ಜೊತೆಗೆ ಅಸ್ಪೃಶ್ಯತೆಯನ್ನು ಒಂದು ಸಮಸ್ಯೆಯಾಗಿ ನೋಡುವುದು ಗಾಂಧೀ ಚಿಂತನೆಯ ಒಟ್ಟು ಸ್ವರೂಪ. ಗಾಂಧಿ ಚಿಂತನೆಯಲ್ಲಿ ಸಾಮಾಜಿಕ ಸಾಮರಸ್ಯದ ನೆಲೆಯಿದೆ; ಅಂಬೇಡ್ಕರ್ ಚಿಂತನೆಯಲ್ಲಿ ಸಾಮಾಜಿಕ ಸಂಘರ್ಷದ ನೆಲೆಯಿದೆ, ಎರಡು ವಿಭಿನ್ನ ಮನೋಧರ್ಮಗಳನ್ನು ನಾವು ಭಿನ್ನಾಭಿಪ್ರಾಯದ ನೆಲೆಯಲ್ಲಿ ನೋಡಬಹುದೇ ಹೊರತು ಒಬ್ಬರನ್ನು ನಾಯಕರನ್ನಾಗಿ ಇನ್ನೊಬ್ಬರನ್ನು ಖಳನಾಯಕನಾಗಿಯೂ ನೋಡಬೇಕಿಲ್ಲ. ಅಂಬೇಡ್ಕರ್ ಅವರ ದಲಿತ ಹೋರಾಟದ ಎದುರು ಗಾಂಧಿಯವರ ಮಿತಿಗಳು, ಗಾಂಧಿಯವರ ಬ್ರಿಟಿಷ್ ವಿರೋಧಿ ಹೋರಾಟದ ಎದುರು ಅಂಬೇಡ್ಕರ ಮಿತಿಗಳು ಮನವರಿಕೆಯಾಗುತ್ತವೆ. ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಇಬ್ಬರನ್ನೂ ಇಟ್ಟು ವಿಶ್ಲೇಷಿಸುವುದು ಆರೋಗ್ಯಕರ ವಿಧಾನ. ಆಗಲೂ ದಲಿತರಿಗೆ ಗಾಂಧಿ ಅವರಿಗಿಂತ ಅಂಬೇಡ್ಕರ್ ಹೆಚ್ಚು ಹತ್ತಿರವಾದರೆ ಅದಕ್ಕೆ ಯಾರೂ ಆಕ್ಷೇಪಿಸಬೇಕಾಗಿಲ್ಲ. ಆದರೆ ಅಂಬೇಡ್ಕರ್ ಹತ್ತಿರವಾಗುತ್ತಿದ್ದಂತೆ ಗಾಂಧಿ ದಲಿತ ವಿರೋಧಿ ಪಟ್ಟ ಕಟ್ಟುವುದು ತರವಲ್ಲ: ಈ ಸಮತೋಲನವನ್ನು ಕಾಪಾಡಿಕೊಳ್ಳುವುದು ದಲಿತ ಹೋರಾಟದ ದೃಷ್ಟಿಯಿಂದಲೂ ಮುಖ್ಯವಾದುದು.

ಮತ್ತೊಂದು ಮಾತು : ವಿರೋಧಿಯೊಬ್ಬನನ್ನು ಹುಟ್ಟುಹಾಕಿ ಹೋರಾಟಕ್ಕೆ ತೀವ್ರತೆ ತರುವ ತಂತ್ರಗಳು ಕೆಲವರಿಗೆ ಸಹಜವಾಗಿಯೇ ಸಿದ್ಧಿಸಿದೆ. ಕನ್ನಡಿಗರಿಗೆ ಅನ್ಯಭಾಷಿಕರನ್ನೂ, ಹಿಂದುಗಳಿಗೆ ಮುಸ್ಲಿಮರನ್ನು ತೋರಿಸಿ ತೀವ್ರತೆ ತರುವ ಪ್ರಯತ್ನಗಳಂತೆ ದಲಿತರಿಗೆ ಗಾಂಧಿಯನ್ನು ತೋರಿಸಿ ತೀವ್ರತೆ ತರುವ ಅಗತ್ಯವಿಲ್ಲ. ಯಾವುದೇ ಹೋರಾಟಗಳು ಹುಸಿ ವಿರೋಧಿ ನೆಲೆಗಳಿಂದ ತೀವ್ರತೆಯನ್ನು ತಂದುಕೊಳ್ಳಬಾರದು. ಹೀಗೆಂದಕೂಡಲೇ ಮಾಯಾವತಿ ಮತ್ತು ಕಾನ್ಸಿರಾಂ ಅವರು ಗಾಂಧಿಯವರನ್ನು ತಂತ್ರದ ಕಾರಣಕ್ಕಾಗಿ ಟೀಕಿಸುತ್ತಿದ್ದಾರೆಂದು ನಾನು ಹೇಳುತ್ತಿಲ್ಲ. ಅದು ಅವರ ಪ್ರಾಮಾಣಿಕ ಅಭಿಪ್ರಾಯ ಇರಬಹುದು. ಆದರೆ ಇದು ಚಿಂತನ ಶೀಲತೆಯ ದಿಕ್ಕೂ ತಪ್ಪಿಸುವ ಅಪಾಯವನ್ನು ಹೊಂದಿದೆಯೆಂಬುದು ನನ್ನ ಅಭಿಪ್ರಾಯ. ಅಧಿಕಾರ ಹಿಡಿದು ದಲಿತರಿಗೆ ಸಮಾನತೆಯ ಅನುಭವ ಕೊಡಲು ಕಟಿಬದ್ಧರಾದ ಕಾನ್ಸೀರಾಂ ಅವರ ಪಕ್ಷದ ದೃಷ್ಟಿಯಿಂದಲೂ ಇಂಥ ಚಾಟಿಚಮತ್ಕಾರದ ಹೇಳಿಕೆಗಳು ಅನುಚಿತವಾಗುತ್ತವೆ. ಹಿಂದೂ ಮೂಲಭೂತವಾದಿಗಳನ್ನು ಹಿಂದಕ್ಕೆ ತಳ್ಳಿ ಅಧಿಕಾರಕ್ಕೆ ಬಂದ ಎಸ್.ಎಸ್.ಪಿ – ಬಿ.ಎಸ್.ಪಿ. ಒಕ್ಕೂಟಕ್ಕೆ ಇಂಥ ಹೇಳಿಕೆಗಳಿಂದಾಗಿ ಅಪಾಯವನ್ನು ‘ಅಧಿಕಾರ ಬಯಸುವ ಪಕ್ಷದ ನಾಯಕರು’ ಯೋಚಿಸಬೇಕಿತ್ತು. ಇಂಥ ಅಸಂಬದ್ಧ ಅವಕಾಶಗಳಿಗಾಗಿ ಕಾಯುತ್ತಿರುವ ಕುರ್‍ಚಿಕಣ್ಣುಗಳು ಉತ್ತರಪ್ರದೇಶ ವಿಧಾನ ಮಂಡಲದಲ್ಲಿ ಮಾರ್ಚ್ ೧೭ ರಂದು ಸಹಜವಾಗಿಯೇ ಗದ್ದಲ ಎಬ್ಬಿಸಿದವು. ಕಾಂಗ್ರೆಸ್ ಪಕ್ಷ ಅದೇ ದಿನ ಗಾಂಧಿ ಪ್ರತಿಮೆ ಎದುರು ಸಾಂಕೇತಿಕ ಉಪವಾಸ ಸತ್ಯಾಗ್ರಹ ಮಾಡಿತು. ವಿಧಾನಸಭೆಯಲ್ಲಿ ಕಾಂಗ್ರೆಸ್ ಜೊತೆಗೂಡಿದ ಬಿ.ಜೆ.ಪಿ.ಗಳು “ರಾಷ್ಟ್ರ ಪಿತನಿಗೆ ಆದ ಅವಮಾನ”ಕ್ಕಾಗಿ ಪ್ರತಿಭಟಿಸಿದವು. ಇದೇ ಬಿ.ಜೆ.ಪಿ.ಯ ಆತ್ಮೀಯವಾಗಿರುವ ಹಿಂದೂ ಮೂಲಭೂತವಾದಿ ಸಂಘಟನೆಯವರು ‘ಗಾಂಧೀಜಿಯವರಿಗೆ ರಾಷ್ಟ್ರಪಿತ ಅಲ್ಲ’ ಎಂದು ವಾದಿಸಿದ್ದೂ ಉಂಟು. ಆದರೆ ಸರ್ಕಾರದ ವಿರುದ್ಧ ಅಧಿಕಾರ ಕೇಂದ್ರಿತ ರಾಜಕೀಯ ನಡೆಸುವಾಗ ಗಾಂಧೀಜಿ ಅವರು ರಾಷ್ಟ್ರಪಿತರೆನ್ನಿಸಿಕೊಂಡರೂ ಇಂಥವರಿಗೆ ಚಿಂತೆಯಿಲ್ಲವೆಂದು ಕಾಣುತ್ತದೆ. ಹಿಂದೂ ಮೂಲಭೂತವಾದಿ ಸ್ವಯಂಸೇವಾ ಸಂಘಟನೆಗಳ ಅಭಿಪ್ರಾಯಕ್ಕೂ ರಾಜಕೀಯ ಪಕ್ಷವಾದ ತನ್ನ ಅಭಿಪ್ರಾಯಕ್ಕೂ ಸಂಬಂಧ ಇಲ್ಲವೆಂದು ಬಿ.ಜೆ.ಪಿ.ಯವರು ಹೇಳಬಹುದು. ಒಟ್ಟಿನಲ್ಲಿ ತಾನೇ ವಿರೋಧಿಸುವ ಬಿ.ಜೆ.ಪಿ.ಗೆ ಒಂದು ಅಸ್ತ್ರವನ್ನು ನೀಡುವ ಬಿ.ಎಸ್.ಪಿ.ಯ ಅಭಿಪ್ರಾಯ ನಾನು ನಂಬಿದ ಅಧಿಕಾರ ರಾಜಕಾರಣದ ದೃಷ್ಟಿಯಿಂದ ಅನಪೇಕ್ಷಿತವಾಗುತ್ತದೆ. ಉತ್ತರಪ್ರದೇಶ ವಿಧಾನ ಮಂಡಲವನ್ನು ನಿಭಾಯಿಸಲು ಮತ್ತು ಸರ್ಕಾರವನ್ನು ಉಳಿಸಿಕೊಳ್ಳಲು ಮುಲಾಯಂ ಸಿಂಗ್ ಸಂಕಷ್ಟ ಪಡುತ್ತಲೇ ಇರಬೇಕೆಂದು ಬಯಸಿದಂತಾಗುತ್ತದೆ. ಕಡೆಗೆ ವಿಧಾನಮಂಡಲದಲ್ಲಿ ಬಿ.ಎಸ್.ಪಿ.ಯ ಸಚಿವ ರಾಮ್ ಲಖನ್ ಅವರು “ನಾವು ಮಹಾತ್ಮಾಗಾಂಧಿ ಯವರನ್ನು ಗೌರವಿಸುತ್ತೇವೆ. ಆದರೆ ಅವರ ಸಿದ್ಧಾಂತಗಳ ಹಿಂಬಾಲಕರಲ್ಲ. ಮಾಯಾವತಿಯವರು ಪತ್ರಿಕೆಗಳಲ್ಲಿ ಪ್ರಕಟಗೊಂಡ ರೀತಿಯಲ್ಲಿ ಹೇಳಿಲ್ಲ” ಎಂದು ಸ್ಪಷ್ಟನೆ ನೀಡಿದಾಗ ಎಲ್ಲರಿಗಿಂತ ಹೆಚ್ಚಾಗಿ ಮುಲಾಯಂ ಸಿಂಗ್ ನಿಟ್ಟುಸಿರು ಬಿಟ್ಟಿರಬೇಕು.

ಬಿ.ಎಸ್.ಪಿ. ನಾಯಕರು ಮಾತ್ರವೇ ಗಾಂಧಿಗೆ ಗಂಟುಬಿದ್ದು ಸಲ್ಲದ ಹಣೆಪಟ್ಟಿ ಅಂಟಿಸುತ್ತಿದ್ದಾರೆಂದು ಭಾವಿಸಬೇಕಾಗಿಲ್ಲ. ಗೋಡ್ಸೆಯ ಸೋದರ ಗಾಂಧಿಯವರನ್ನು ದೇಶದ್ರೋಹಿ ಎಂದು ಕರೆದಿದ್ದಾನೆ. ಬಿಜೆಪಿ ಆತ್ಮಗಳು ‘ಗಾಂಧಿ ರಾಷ್ಟ್ರಪಿತನಲ್ಲ’ ಎಂದಿವೆ. ವಿಶೇಷವೆಂದರೆ ಕಾಂಗೈನ ಕೇಂದ್ರ ಸರ್ಕಾರ ಗಾಂಧಿ ವಿರೋಧಿ ನಿಲುವಿನಲ್ಲಿ ಸಾಕ್ಷಾತ್ಕಾರ ಗೊಳ್ಳುತ್ತಿದೆ. ಪ್ರಧಾನಿ ಪಿ. ವಿ. ನರಸಿಂಹ ರಾವ್ ನೇತೃತ್ವದ ಆರ್ಥಿಕ ನೀತಿಯು ವಿದೇಶಿ ಬಂಡವಾಳ ಗಾರರಿಗೆ ಅನಿವಾಸಿ ಭಾರತೀಯರಿಗೆ ಅಪ್ಯಾಯಮಾನವಾಗುವಂತೆ ರೂಪುಗೊಂಡಿದ್ದು ನಮ್ಮ ದೇಶದ ಸಾಮಾಜಿಕ ಆರ್ಥಿಕ ಅಸಮಾನತೆಯನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ರೈತರು, ಕಾರ್ಮಿಕರು, ಕೂಲಿಗಾರರು – ಹೀಗೆ ಬಡವರ ನೆಲೆಯಿಂದ ಚಿಂತನೆ ನಡೆಸುತ್ತಿಲ್ಲ. ಸ್ವದೇಶಿ ಚಳುವಳಿಯ ಮುಂದಾಳುವಾಗಿದ್ದ ಗಾಂಧೀಯವರ ವಿಚಾರಧಾರೆಯನ್ನಾಗಲಿ, ಗರೀಬಿ ಹಟಾವೋ ಮೂಲಕ ಮಿಂಚಿದ ಇಂದಿರಾ ಗಾಂಧಿಯವರ ರಾಜಕೀಯ ನೆಲೆಯನ್ನಾಗಲಿ ಹತ್ತಿರಕ್ಕೂ ಬಿಟ್ಟು ಕೊಳ್ಳದ ಪಿ.ವಿ.ಎನ್. ಸರ್ಕಾರ ಏಕಕಾಲಕ್ಕೆ ಇಬ್ಬರು ಗಾಂಧಿಗೆ ಕೈಕೊಟ್ಟಿದೆ.

ಬಿ.ಎಸ್.ಪಿ., ಬಿ.ಜೆ.ಪಿ., ಆರೆಸ್ಸೆಸ್ – ಮುಂತಾದ ಪಕ್ಷ ಹಾಗೂ ಸಂಘಟನೆಗಳು ನೇರವಾಗಿ ಅಭಿಪ್ರಾಯ ವ್ಯಕ್ತಪಡಿಸುವ ‘ಉಪಕಾರ’ ವನ್ನಾದರೂ ಮಾಡುತ್ತಿವೆ. ಗೌರವ ಕೊಡುವುದನ್ನು ಯಾಂತ್ರಿಕವಾಗಿಸಿ ಕೊಂಡಿರುವ ಮೌನಸನ್ನಾಹಗಳ ಪಿ.ವಿ.ಎನ್. ಸರ್ಕಾರವು ಮಹಾತ್ಮ ಗಾಂಧಿ, ಇಂದಿರಾಗಾಂಧೀ, ರಾಜೀವಗಾಂಧೀ – ಹೀಗೆ ಎಲ್ಲ ಗಾಂಧಿಗಳನ್ನೂ ಒಂದೇ ತಟ್ಟೆಯಲ್ಲಿಟ್ಟು ತೂಗಿ, ಬಾಯಿಗೆ ಬಟ್ಟೆ ತುರುಕಿ, ಪಾರ್ಲಿಮೆಂಟ್ ಭವನದ ಭಾವಚಿತ್ರಗಳಲ್ಲಿ ಬಂಧಿಸಿಟ್ಟಿರುವುದು ಎಂಥ ವ್ಯಂಗ್ಯ!
*****
೧೭-೪-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವ ಕಲ್ಯಾಣ
Next post ಬಾ ಬಾರೆಲೆ ಕೋಗಿಲೆ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…