ನ್ಯಾಯಾಂಗ -ಒಂದು ನೋಟ

‘ಕಾನೂನು ತಳವಿಲ್ಲದೆ ಮಹಾಪಾತಾಳ’
-John Arbuthnot

ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ಇತರೆ ಮಾತಿರಲಿ ಈ ಭೂಮಿಯೊಂದರಲ್ಲೆ ಕೋಟ್ಯಾನು ಕೋಟಿ ಜೀವರಾಶಿಗಳಿವೆ. ಇತರ ಪ್ರಾಣಿಗಳಂತೆ ಮನುಷ್ಯ ಕೂಡ ತನ್ನ ಮನುಕುಲದ ಜೀವಿತಕ್ಕೆ ಅನವರತ ಹೋರಾಡುತ್ತಿದ್ದಾನೆ.

ಸೃಷ್ಟಿಗೆ ತನ್ನದೇ ಆದ ‘ನಿಯಮ’ ಇದೆ. ಅದು ಆ ನಿಯಮಕ್ಕೆ ಬದ್ಧ . ಅದರದು ಸೂತ್ರಬದ್ಧ ಜೋಡಣೆ ಹಾಗೆಯೇ ಇತರ ಜೀವಿಗಳಂತೆ ಮಾನವ ಶರೀರ ಕೂಡ. ಇಲ್ಲಿ ಬಂಧ, ಸೃಷ್ಟಿಯೊಂದಿಗೆ ಸಂಬಂಧ ಈ ಎರಡೂ ಇದೆ.

ಕಾನೂನು ಮನುಷ್ಯ ನಿರ್ಮಿತವಾದದ್ದು. ಮನುಷ್ಯ ನಿರ್ಮಿತ ಕಾನೂನು ಹಾಗೂ ಸೃಷ್ಟಿಯ ನಿಯಮ ಇವುಗಳ ಸ್ಪಷ್ಟವಾದ ಮತ್ತು ಪ್ರತ್ಯೇಕವಾದ ನಿಲುವು ಮತ್ತು ವ್ಯಾಪ್ತಿಯನ್ನು ಅರಿವು ಮಾಡಿಕೊಳ್ಳಬೇಕು.

ಕಾನೂನು ಯಾರಿಂದ ಯಾರಿಗೆ ಏತಕ್ಕಾಗಿ ರಚಿಸಲ್ಪಟ್ಟಿದೆ? ಇವರ ಒಲವು ನಿಲುವುಗಳೇನು? ಇದರ ವ್ಯಾಪ್ತಿ ಎಷ್ಟರದು? ಮಾನವ ನಿರ್ಮಿತ ಕಾನೂನಿಗೂ, ನಿಸರ್ಗದ ನಿಯಮಗಳಿಗೂ ಏನಾದರೂ ಸಂಬಂಧ ಇದೆಯೇ? ಯಾವುದಕ್ಕೆ ಯಾವುದು ಮೂಲ? ಯಾವುದಕ್ಕೆ ಯಾವುದು ಮೇಲು? ಇತ್ಯಾದಿ ಪ್ರಶ್ನೆಗಳು ಈ ವಿಷಯವನ್ನು ಕುರಿತು ಆಲೋಚಿಸುವಾಗ ಎದುರಾಗುತ್ತವೆ.

ಜಗತ್ತಿನ ಇತರ ಜೀವಿಗಳಿಗೆ ಹೋಲಿಸಿದರೆ ಮನುಷ್ಯ ಬಹುಸ್ವಾರ್ಥಿ. ಅವನ ಸ್ವಾರ್ಥಕ್ಕೆ ಇತಿಮಿತಿ ಇಲ್ಲ. ಸೃಷ್ಟಿಯ ಇತರೆ ಜೀವಗಳೊಂದಿಗೆ ಹೋಲಿಸಿದಾಗ ಮನುಷ್ಯನಿಗೆ ತನ್ನ ಕುಲದಲ್ಲಿ ತನಗೇ ನಂಬಿಕೆ ಇರದವನು. ಹಾಗಾಗಿ ತನ್ನ ರಕ್ಷಣೆಗೆಂದು ಕಾನೂನಿನ ಬಲೆಯನ್ನು ಹೆಣೆದು ಅದರೊಳಗೆ ಬಂದಿಯಾದ. ಅದಕ್ಕೆ ಸೃಷ್ಟಿಯ ಮತ್ತಾವ ಜೀವಿಗಳೂ ಈ ಮನುಷ್ಯ ಕಾನೂನಿನ ಬಂಧಿಗಳಲ್ಲ. ಅವರೆ ಬಲಿಯಾಗುತ್ತಿವೆ.

ಮಾನವ ತನ್ನ ಸೌಖ್ಯಕ್ಕಾಗಿ, ಸುಖಕ್ಕಾಗಿ, ಶಾಂತಿಗಾಗಿ, ನೆವಶ್ಚಿದಿಗಾಗಿ ಸೃಷ್ಟಿಸಿಕೊಂಡ ಕಾನೂನಿನ ಚೌಕಟ್ಟಿನೊಳಗೆ ಹಾಗೆ ಸೃಷ್ಟಿಸಿಕೊಳ್ಳದ ಮಿಕ್ಕ ಜೀವಿಗಳಿಗಿಂತ ಉತ್ತಮವಾಗಿದ್ದಾನೆಯೇ ಒಳಹೊಕ್ಕು ನೋಡಿದರೆ ಸಿಗುವ ಉತ್ತರ ಸೊನ್ನೆ ಬಂದರೆ ಆಶ್ಚರ್ಯಪಡಬೇಕಾಗಿಲ್ಲ.

‘ಇಂದಿನ ಮನುಷ್ಯನೆಂದರೆ ಮನುಷ್ಯನೆ ನಿರ್ಮಿಸಿಕೊಂಡ ಮನುಷ್ಯ’ ಎಂದು ಬಿ. ಎಫ್. ಸ್ಕಿನ್ನರ್‌ ತನ್ನ ‘Beyond freedom and dignity’ ಕೃತಿಯಲ್ಲಿ ಹೇಳುತ್ತಾರೆ. ಈ ಮನುಷ್ಯನಿಂದ ನಿರ್ಮಾಣಗೊಂಡ ಮನುಷ್ಯನಿಂದ ರಚಿತವಾದದ್ದು ಕಾನೂನು. ಈ ಕಾನೂನಿನ ಕೇಂದ್ರವ್ಯಕ್ತಿ ಶಕ್ತಿ ಎಲ್ಲವೂ ಮನುಷ್ಯನೇ. ಮನುಷ್ಯ ಮನುಷ್ಯನ ನಡುವಿನ ವ್ಯವಹಾರದ ಸುಗಮತೆಗಾಗಿ ಈ ಕಾನೂನುಗಳನ್ನು ರಚಿಸಿಕೊಳ್ಳಲಾಗಿದೆ. ಇದರಲ್ಲಿ ಎರಡು ಮುಖ; ಒಂದು ವ್ಯವಹಾರಕ್ಕೆ ಸಂಬಂಧಪಟ್ಟದ್ದು (civil law) ಮತ್ತೊಂದು ದಂಡನೆಗೆ ಸಂಬಂಧ ಪಟ್ಟಿದ್ದು (Criminal law)

ನಮ್ಮ ಸಂವಿಧಾನದ ಮೂರು ಮುಖ್ಯ ಅಂಗಗಳೆಂದರೆ ಶಾಸಕಾ೦ಗ (The Legislature), ಕಾರ್ಯಂಗ (The Executive) ಹಾಗೂ ನ್ಯಾಯಾಂಗ (The judiciary). ಯಾವುದೇ ಸ್ಪತ೦ತ್ರ ಸರ್ಕಾರ ಮಾಡುವ ಶಾಸನಗಳನ್ನು ಅಥವಾ ಕಾನೂನುಗಳನ್ನು ಸ೦ವಿಧಾನ ಬದ್ಧವಾಗಿ ಅನ್ವಯಿಸಿ ವ್ಯಾಖ್ಯಾನಿಸುವ ಹೊಣೆ ಈ ನ್ಯಾಯಾಂಗದ್ದು. ಸರ್ವತ೦ತ್ರ ಸ್ವತಂತ್ರವಾದ ನ್ಯಾಯಾ೦ಗ ಪ್ರಜಾಪ್ರಭುತ್ವ ಸರ್ಕಾರಕ್ಕೆ ಅನಿವಾರ್ಯ. ಇದು ಶಾಸಕಾಂಗ  ಕಾರ್ಯಾಂಗಗಳು ಪ್ರಜೆಗಳ ಮೇಲೆ ಮಾಡುವ ಭ್ರಷ್ಟ ಅತಿರೇಕಗಳನ್ನು, ಅನ್ಯಾಯಗಳನ್ನು ತಡೆದು ನ್ಯಾಯದ ನೆಲೆಗಟ್ಟನ್ನು ರೂಪಿಸಿಕೊಡುತ್ತದೆ.

ಈ ನ್ಯಾಯಂಗಪದ್ಧತಿ ನಮಗೆ ಬ್ರಿಟಿಷರಿಂದ ಬಂದದ್ದು. ಪ್ರಸ್ತುತ ಅದು ನಮ್ಮ ದೇಶದ ಜೀವನದ ರೀತಿ ನೀತಿಗಳಿಗೆ ಸರಿಯಾಗಿ ಹೊ೦ದುತ್ತದೆಯೋ ಇಲ್ಲವೋ, ಇದರಿಂದ ಜನ ಸಾಮಾನ್ಯನಿಗೆ ನ್ಯಾಯ ದೊರಕುತ್ತದೆಯೋ ಇಲ್ಲವೋ, ಅದು ಚರ್ಚಾಸ್ಪದ ವಿಷಯ. ಆದರೆ ಈ ಪದ್ಧತಿಯನ್ನು ನಾವಿಂದು ಅನುಸರಿಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿದ್ದೇವೆ. ಹೀಗಾಗಿ ದೇಶದ ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯಗಳನ್ನು ನ್ಯಾಯಕ್ಕಾಗಿ ಉಪಯೋಗಿಸಿಕೊಳ್ಳುವುದು ಕಡಿಮೆಯಾಗಿ ಕಾನೂನಿನ ದುರ್ಲಾಭ ಪಡೆಯುವ ಪಡೆಯೇ ಮೇಲುಗೈ ಪಡೆಯುತ್ತಿದೆ.

ಇದು ಅ೦ತಃಸಾಕ್ಷಿಯನ್ನು ಕೊಲ್ಲುವ ಯುಗ. ನಿಸರ್ಗದತ್ತವಾದ ಮನುಷ್ಯನ ಅಂತಃಸಾಕ್ಷಿ ಅಡಗಿ ಸ್ವಾರ್ಥದ ಪಿಡುಗಿಗೆ ಎಲ್ಲರೂ ತುತ್ತಾಗಿ ತತ್ತರಿಸುತ್ತಿದ್ದೇವೆ. ಪ್ರಕೃತಿಯ ಪ್ರತಿರೂಪವಾಗಿ ಅರಳಿ ಅಳವಡಿಸಿಕೊಳ್ಳಬೇಕಾದ ನ್ಯಾಯದ, ತ್ಯಾಗದ ದೃಷ್ಟಿ ಕಿಂಚಿತ್ತಾದರೂ ಇಲ್ಲ. ಹಿಂದಿನ ನಮ್ಮ ನ್ಯಾಯ ನೀಡುತ್ತಿದ್ದ ಪಂಚಾಯಿತಿ ಕಟ್ಟೆಗಳು ಇಲ್ಲವಾಗಿ ಇ೦ದು ಶೀಘ್ರನ್ಯಾಯ ಹಾಗೂ ಅದರಿಂದ ಲಭಿಸುತ್ತಿದ್ದ ಪ್ರೀತಿಯ ಬೆಸುಗೆ ಅಮಾವಾಸ್ಯೆಯಲ್ಲಿ ಅರಸುವ ಚಂದ್ರನಂತಾಗಿದೆ. ಹಿ೦ದಿನ ಪ೦ಚಾಯಿತಿಗಳಲ್ಲಿ ಘಟನೆಯಾದ ದಿನ ಆ ರಾತ್ರಿಯ ಗ್ರಾಮದ ಹಿರಿಯರು ಪಂಚಾಯ್ತಿ ಕಟ್ಟೆಯಲ್ಲಿ ಸೇರಿ ದೂರು ಕೊಟ್ಟವನನ್ನು ಹಾಗೂ ಆರೋಪಿಯನ್ನು ಕರೆಸಿ ಎಲ್ಲರ ಸಮ್ಮುಖದಲ್ಲಿ ನ್ಯಾಯ ವಿತರಣೆ ಮಾಡುತ್ತಿದ್ದರು. ಬೆಳಗಾಗುವುದರೊಳಗೆ ಇದ್ದ ವೈಮನಸ್ಸನ್ನು ಹಿರಿಯ ಪ೦ಚರು ಪ್ರೀತಿ ವಾತ್ಸಲ್ಯಗಳಿಂದ ತಿದ್ದಿ ಸರಿಪಡಿಸಿ ತಪ್ಪಿತಸ್ಥನನ್ನು ತಮ್ಮ ಒಡಹುಟ್ಟಿದವನ೦ತೆ ಆತ್ಮೀಯವಾಗಿ ಆಲಂಗಿಸಿಕೊಂಡು ಇನ್ನು ಮುಂದೆ ಒಳ್ಳೆಯವರಾಗಿ ಸರಿದಾರಿಯಲ್ಲಿ ಹೋಗುವಂತೆ ಹಿತವಚನಗಳನ್ನು ಹೇಳುತ್ತಿದ್ದರು. ಅಲ್ಲಿ ಅವರು ಹಾಕುತ್ತಿದ್ದ ದ೦ಡ ಅಪರಾಧಿಯಾದವನು ಸಮಾಜದಿಂದ ದೂರವಾಗದೆ ಒಂದಿಗೆ ಬೆರೆತುಕೊಳ್ಳುವ ಪ್ರೀತಿಯ ಕಾಣಿಕೆಯ ಸ್ವರೂಪದ್ದಾಗಿತ್ತು. ದಂಡದ ಹಣವನ್ನು ಊರಿನ ಸಮಸ್ತರ ಹಿತಕ್ಕೆ ಬಳಸಲಾಗುತ್ತಿತ್ತು. ಆದರೆ ಇಂದು ನ್ಯಾಯದ ಕಟ್ಟೆಯನ್ನು ಬಿಟ್ಟು ನ್ಯಾಯಾಲಯದ ಮೆಟ್ಟಲನ್ನು ಹತ್ತಿ ವರ್ಷಗಟ್ಟಲೆ ಅಲೆದು ಪರಸ್ಪರ ದ್ವೇಷಾಸೂಯೆಗಳನ್ನು ಬೆಳೆಸಿಕೊಂಡು ಮನೆಮನೆಗಳು ರಣರ೦ಗಗಳಾಗುತ್ತಿವೆ. ಇದರ ದುರ್ಲಾಛ ಆರಕ್ಷಕರಿಗೆ, ರಾಜಕೀಯ ಪುಡಾರಿಗಳಿಗೆ, ವಕೀಲರಿಗೆ ಇತ್ಯಾದಿ. ಹೀಗಾಗಿ ನ್ಯಾಯ ಬೇಡಿ ಬಂದ ಕೈಗಳಿಗೆ ವಾಸ್ತವವಾಗಿ ನ್ಯಾಯಕ್ಕಿಂತ ಹೆಚ್ಚಾಗಿ ದಕ್ಕುತ್ತಿರುವುದು ದ್ವೇಷದ ಬೇಡಿ. ಅದರಿಂದ ಇಡೀ ಸಮಾಜವೇ ಅಪ್ರತ್ಯಕ್ಷವಾಗಿ ಬಂಧಿಯಾಗುತ್ತಿದೆ.

ನ್ಯಾಯಾಲಯಗಳಲ್ಲಿ ನ್ಯಾಯ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕಾರಣ ಹಾಗೂ ಅನೇಕ ವೇಳೆ ನ್ಯಾಯಾಲಯ- ಗಳಲ್ಲಿ ನ್ಯಾಯ ಅನ್ಯಾಯವಾಗಿ-ಅನ್ಯಾಯ ನ್ಯಾಯವಾಗುತ್ತಿರುವುದರಿ೦ದ ಜನ ಜೀವನದ ಸೌಖ್ಯದ ಸೇತುವಾದ ‘ಸತ್ಯ’ ಸಾವನ್ನಪ್ಪುತ್ತಿದೆ. ಇದರಿಂದ ತಾಳ್ಮೆಗೆಟ್ಟ ಮನಸ್ಸುಗಳು ರೋಸಿ ಕ್ರೌರ್ಯಕ್ಕೆ ತೊಡಗಿಸಿಕೊಳ್ಳುತ್ತಿವೆ. ವಿಳಂಬ ನ್ಯಾಯದಿಂದಾಗಿ ದುಷ್ಟಶಕ್ತಿಗಳು ತಲೆ ಎತ್ತಲು ಕಾರಣವಾಗುತ್ತಿದೆ.

“ಮಹಾಶಯನೇ, ನೀನು ನನ್ನನ್ನು ನಾಶಮಾಡಲು ತೊಡಗಿದ್ದೀಯೆ, ಕಾನೂನುಕ್ರಮ ದೀರ್ಘಕಾಲ ತೆಗೆದುಕೊಳ್ಳು- ವುದರಿ೦ದ ನಾನು ನಿನ್ನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಿಲ್ಲ. ನಾನೇ ನಿನ್ನನ್ನು ನಾಶ ಮಾಡುತ್ತೇನೆ” ಎಂದು Cornelius vanderbilt ಹೇಳಲು ಪ್ರೇರಣೆ ಯಾವುದು? ಒಳಿತನ್ನು ಉಂಟುಮಾಡಬೇಕಾದ ಕಾನೂನು, ನ್ಯಾಯಾಲಯಗಳು ಸೇಡಿನ ಕಿಡಿ ಸಿಡಿಯಲು ಹೇಗೆ ಕಾರಣವಾಗುತ್ತವೆ ಎಂಬುದನ್ನು ನಾವು ಎಚ್ಚರಿಕೆಯಿಂದ
ಗಮನಿಸಬೇಕಾಗಿದೆ. ಹಾಗೆ ಚಿಂತಿಸಿ ಅಗತ್ಯವಾಗಿ ಆಗಬೇಕಾದುದನ್ನು ಶಾಸಕಾಂಗ ಚಿಂತಿಸಿ ಹೊಸ ಹೊಸ ವಿಧಾನಗಳನ್ನು ರೂಪಿಸಬೇಕಾಗಿದೆ.

ಇಡೀ ದೇಶದ ಜನಜೀವನದಲ್ಲಿ ವ೦ಚನೆ, ಮೋಸ ಉಸಿರಿನಷ್ಟು ಸಹಜವಾಗಿ ಹೊಂದಿಕೊಂಡಿದೆ. ತುರ್ತು ಪರಿಸ್ಥಿತಿಯಲ್ಲಿ ನ್ಯಾಯಾಂಗ ನಡೆದುಕೊಂಡ ರೀತಿ ನೀತಿಗಳು ನ್ಯಾಯಾಂಗದ ಬಗ್ಗೆ ಎಲ್ಲರಲ್ಲೂ ಸ೦ಶಯವನ್ನು ಸೃಷ್ಟಿಸಿತು. ಇದರಿ೦ದಾಗಿ ನ್ಯಾಯಾಂಗದ ಬಗ್ಗೆ. ಜನರಲ್ಲಿ ಭಯ ಬಿತ್ತಿಕೊ೦ಡಿತು. ಬಹಳಷ್ಟು ಸ೦ದರ್ಭಗಳಲ್ಲಿ ನ್ಯಾಯಾಧೀಶ ಮತ್ತು ಆರೋಪಿಗಳು ಕುಳಿತುಕೊಳ್ಳುವ ಸ್ಥಾನದಲ್ಲಷ್ಟೇ ವ್ಯತ್ಯಾಸವಿದ್ದು ಇಬ್ಬರ ನಡುವೆ ಮತ್ತಾವ ಮೂಲಭೂತ ವ್ಯತ್ಯಾಸಗಳೂ ಇರದ ಸ್ಥಿತಿ ಪ್ರಾಪ್ತವಾಗುತ್ತಿದೆ. ನ್ಯಾಯ ನುಡಿವ ನಾಲಿಗೆಗಳು ಅನೇಕ ಒಳಕಾರಣಗಳಿಂದಾಗಿ ನ೦ದಿ ಬ೦ಧಿಯಾಗಿವೆ.

ಈ ಅನ್ಯಾಯ ಇಂದಿನದು ಎ೦ದು ಭಾವಿಸಿದರೆ ತಪ್ಪಾದೀತು. ಅದು ತಮ್ಮ ಸ೦ಸ್ಕೃತಿಯ ನರನಾಡಿಗಳಲ್ಲಿ ಬಿತ್ತಿ ಬೆಳೆದ ಹೀನಗುಣ. ಇಂದಿನ ನ್ಯಾಯವೂ ಹಿ೦ದಿನ ಹೀನ ಸಂಸ್ಕೃತಿಯ ಹಳಸಲನ್ನೆ ಬಳಸಿ ನಿಂತಿದೆ. ನಮ್ಮ ಸಂಸ್ಕೃತಿಯ ಅಡಿಗಲ್ಲುಗಳಲ್ಲಿ ಪ್ರಧಾನವಾದದ್ದು ಎನ್ನುವ ‘ಮನುಸ್ಮೃತಿ’ಯಲ್ಲಿ ಒ೦ದೆ ಅಪರಾಧಕ್ಕೆ ನೀಡುವ ಶಿಕ್ಷೆ ಹೇಗೆ ಬಗೆ ಬಗೆಯ ಜನರಿಗೆ ಬೇರೆ ಬೇರೆಯಾಗಿತ್ತು ಎನ್ನುವುದಕ್ಕೆ ಒ೦ದು ಉದಾಹರಣೆ ನೋಡಬಹುದು:-

“ಶೂದ್ರನು ರಕ್ಷಗೆ ಒಳಪಟ್ಟ ಅಥವಾ ಅನಾಥ ಬ್ರಾಹ್ಮಣ ಸ್ತ್ರೀಯನ್ನು ಪ್ರೀತಿಸಿದರೆ ಅಂಗಹೀನತೆಯ ದಂಡಕ್ಕೆ ಅರ್ಹ”. (೩೭೪)

“ವೈಶ್ಯನು ಬ್ರಾಹ್ಮಣ ಸ್ತ್ರೀಯನ್ನು ದೂಷಿಸಿದರೆ ಒಂದು ವರ್ಷ ಬ೦ಧನದಲ್ಲಿಟ್ಟು ಬಳಿಕ ಅವನ ಸರ್ವ ಸೊತ್ತನ್ನು ರಾಜನು ವಶವಡಿಸಿಕೊಳ್ಳಬೇಕು. ಕ್ಷತ್ರಿಯನು ಬ್ರಾಹ್ಮಣಿಯನ್ನು ದೂಷಿಸಿದರೆ ಅವನ ತಲೆಯನ್ನು ಕತ್ತೆ ಮೂತ್ರದಿ೦ದ ನೆನೆಯಿಸಿ ಬೋಳಿಸಬೇಕು. (೩೭೫)

“ರಕ್ಷಿತ ಬ್ರಾಹ್ಮಣಿಯು ನಿರಾಕರಿಸುವಾಗ ಬಲಾತ್ಕರಿಸಿ ಬ್ರಾಹ್ಮಣನು ಸ೦ಭೋಗಿಸಿದರೆ ಸಾವಿರ ಪಣದ೦ಡವು.” (೩೭೮)

“ಬ್ರಾಹ್ಮಣನನ್ನು ತಲೆ ಬೋಳಿಸಿಬಿಡುವುದು ಲಜ್ಞಕಾರಕವಾಗಿ ಮರಣದಂಡನೆಗೆ ಸಮಾನ. ಇತರರಿಗೆ ಮರಣದ೦ಡನೆಯು.” (೩೭೮)

ಯಾವತಪ್ಪಿಗೂ ಬ್ರಾಹ್ಮಣನಿಗೆ ಮರಣದಂಡನೆ ಇಲ್ಲ. ಅವನನ್ನು ಧನಸಹಿತವಾಗಿ ದೇಹವನ್ನು ಪೀಡಿಸದೆ ಓಡಿಸಿಬಿಡುವುದು ಪರಮಾವದಿ ದಂಡವು.” (380) ” 1

ಇಲ್ಲಿ ಶೂದ್ರನ ಪ್ರೀತಿಗೆ, ವೈಶ್ಯನ ಮತ್ತು ಕ್ಷತ್ರಿಯನ ದೂಷಣೆಗೆ ಹಾಗೂ ಬ್ರಾಹ್ಮಣನ ಬಲತ್ಕಾರದ ಸಂಭೋಗಕ್ಕೆ ಇರುವ ವ್ಯತ್ಯಾಸ ಹಾಗೂ ಶಿಕ್ಷೆಯ ವೈಪರೀತ್ಯಗಳನ್ನು ಗಮನಿಸಿ. ಯಾರಿಗೆ ಯಾವುದಾಗಬೇಕಿತ್ತು? ಮನುಷ್ಯ ಮನುಷ್ಯರ ನಡುವೆ ಸಹಜವಾಗಿ ಮೂಡಿ ಗರಿಗೆದರಬೇಕಾದ ಪ್ರೀತಿವಿಶ್ವಾಸಗಳು ಹೇಗೆ ಮುರುಟಿ ಬಿರುಕು ಬಿಟ್ಟು ಬತ್ತಿ ಹೋಗಿವೆ  ಎ೦ದು ನೆನದರೆ ಮೈ ಜುಂ ಎನ್ನುತ್ತದೆ. ಇದು ನಮ್ಮ ಧರ್ಮ, ನ್ಯಾಯ , ಸಂಸ್ಕೃತಿ ನಿ೦ತು ನಡೆದು ಬಂದ ನೆಲೆಗಟ್ಟು. ಅದು ಇ೦ದಿಗೂ ಸೂಕ್ಷ್ಮವಾಗಿ ತಾನು ಕ್ರಿಯಾತ್ಮಕವಾಗಿ ಇದೆ. ವಿದ್ಯೆ ನಾಯಕತ್ವ ಮತ್ತು ಪ್ರೀತಿಗಳಲ್ಲಿ ಕೆಳವರ್ಗದವರು (ಶೂದ್ರರು) ಮೆಲ್ವರ್ಗದ (ದ್ವಿಜರು) ವರೊಂದಿಗೆ ಸಮಾನರಾಗ ಹೊರಟಾಗ ಅದು ಅಪರಾಧ ಎಂದು ವ್ಯಾಖ್ಯಾನಿಸುವ ಮೇಲ್ವರ್ಗದ ನ್ಯಾಯಾಧೀಶರನ್ನು ನಾವು ನಮ್ಮದೇಶದಲ್ಲಿ ಕಾಣುತ್ತೇವೆ.2 (ಅಲ್ಲದೆ ಬ್ರಾಹ್ಮಣನೊಬ್ಬ ತಪ್ಪುಮಾಡಿ ನ್ಯಾಯಾಲಯಕ್ಕೆ ಪೋಲಿಸರು ಹಿಡಿದು ತ೦ದಾಗ ನ್ಯಾಯಾಲಯದಲ್ಲಿದ್ದ ಬ್ರಾಹ್ಮಣ ನ್ಯಾಯಾಧೀಶ “ಉತ್ತಮರಾಗಿ ನೀವು ಹೀಗೆ ಮಾಡಬಹುದಾ?” ಎ೦ದು ಕೇಳಿದ್ದನ್ನು ನ್ಯಾಯಾಲಯದಲ್ಲಿ ನಾನು ನನ್ನ ಕಿವಿಯಾರ ಕೇಳಿದ್ದೇನೆ.) ಹೀಗೆ ಅಸಮಾನತೆಯನ್ನು ಬಿತ್ತಿ ಬೆಳೆಸುವ ಮನುಸ್ಮೃತಿ ಎನ್ನುವ ಧರ್ಮಗ್ರ೦ಥವನ್ನು ನಮ್ಮ ಸಂವಿಧಾನ ಶಿಲ್ಪಿಯಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸುಡುವ ಕೆಲಸದಲ್ಲಿ ಮೊದಲಿಗರಾದರು.
ನ್ಯಾಯದ ಹೆಸರಿನಲ್ಲಿ ಶ್ರೀ ಸಾಮಾನ್ಯರ ಶೋಷಣೆ ಅಂದಿನಿಂದ ಇ೦ದಿನವರೆಗೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ. ರಾಬರ್ಟ್ ಎಫ್ ಕೆನಡಿ ೧೯೬೪ ರಲ್ಲಿ “ಶ್ರೀಸಾಮಾನ್ಯನಿಗೆ ಕಾನೂನಿನ ತಾ೦ತ್ರಿಕತೆ ಒಗಟಿನ ಸರಳಾಗಿದೆ. ಶ್ರೀಸಾಮಾನ್ಯ ಕಾನೂನನ್ನು ತನ್ನ ಶತ್ರುವಿನಂತೆ ಕಾಣುತ್ತಾನೆ. ಕಾರಣ, ಅವನಿಗೆ ಕಾನೂನು ಕೊಡುವ ಬದಲು ಇದ್ದದ್ದನ್ನೂ ಅವನಿಂದ ಕಸಿದುಕೊಳ್ಳುತ್ತದೆ” ಎಂದಿದ್ದಾನೆ. ಆದ್ದರಿ೦ದಲೇ ಇಂದಿಗೂ ಶ್ರೀಸಾಮಾನ್ಯರಿಗೆ ನ್ಯಾಯಾಲಯಗಳು ದೊಡ್ಡ ಕಾರಾಗೃಹಗಳಾಗಿ, ನ್ಯಾಯಾಧೀಶರು ಕೊಲ್ಲುವ ಕಟುಕರಾಗಿ, ವಕೀಲರು ನುಂಗುವ ಪೆಡ೦ಭೂತಗಳಾಗಿ, ಪೋಲೀಸರು ಪೈಶಾಚಿಕರಾಗಿ ನಾನಾ ಸ್ವರೂಪಗಳಲ್ಲಿ ಕಾಣಿಸುತ್ತಾರೆ. ಇದಕ್ಕೆ ಯಾರು ಹೊಣೆ? ಯಾರನ್ನು ಅಪರಾಧಿಯನ್ನಾಗಿಸುವುದು?

ಇತರ ಜೀವಿಗಳಿಗೆ ಹೋಲಿಸಿದರೆ ಮನುಷ್ಯ ಜೀವಿ ಅತ್ಯಂತ ಹೇಡಿ. ಅವನು ತನ್ನ ಬದುಕಿನಲ್ಲಿ ಬಚ್ಚಿಟ್ಟುಕೊಳ್ಳದೆ, ಮೊಗವಾಡ ಹಾಕಿಕೊಳ್ಳದೆ, ಬದುಕಲು ಸಾಧ್ಯವೇ ಇಲ್ಲ. ಸೃಷ್ಟಿಯ ಮತ್ತಾವ ಪ್ರಾಣಿಗಳೂ ಹಾಗಿಲ್ಲ. ಅವು ಪ್ರಕೃತಿಯೊಂದಿಗೆ ಹೊ೦ದಿಕೊಂಡು ಸಹಜವಾಗಿ ಬದುಕುತ್ತವೆ. ಜರ್ಮನಿಯ ಶ್ರೇಷ್ಟ ತತ್ವಜ್ಞಾನಿಯಾದ ಇಮ್ಯಾನುಯಲ್ ಕಾಂಟ್ ‘ಮೊಗವಾಡ ಮನುಷ್ಯನ ಬದುಕಿಗೆ ಅನಿವಾರ್ಯ ಅಂಗವಾಗಿದೆ’ ಎಂದಿದ್ದಾನೆ. ಆ ಅನಿವಾರ್ಯತೆಗೆ ಕಾರಣ ನಮ್ಮ ಭಯವೆ? ಅಜ್ಞಾನವೆ? ಸ್ವಾರ್ಥವೆ? ಸ್ವವಂಚನೆಯೆ? ಮನುಷ್ಯ ನಿಜವಾಗುವುದು ಎಷ್ಟು ಕಷ್ಟ?

ನಮ್ಮ ಸಾಮಾಜಿಕ ಬದುಕು ಎಷ್ಟು ಸೂಕ್ಷ್ಮವಾಗಿ ಬಂಧಿಯಾಗಿದೆ ಎನ್ನುವುದಕ್ಕೆ ಆಲ್ಬರ್ಟ್‌ ಕಾಮುವಿನ ‘ಅನ್ಯ'(The outsider) ಕಾದ೦ಬರಿಯ ಉದಾಹರಣೆ ನೋಡಬಹುದು.

“ತ೦ದೆಯನ್ನು ಕಳೆದುಕೊ೦ಡ ಕಾದ೦ಬರಿಯ ನಾಯಕ ‘ಅನ್ಯ’ ತನ್ನ ತಾಯಿಯನ್ನು ಹಳ್ಳಿಯಲ್ಲಿ ಬಿಟ್ಟು ನಗರದಲ್ಲಿ ಕೆಲಸಕ್ಕೆ ಇರುತ್ತಾನೆ. ಒ೦ದು ದಿನ ತಾಯಿ ಸತ್ತ ಸುದ್ದಿ ಬರುತ್ತದೆ. ಊರಿಗೆ ಹೋಗುತ್ತಾನೆ. ಶವಪೆಟ್ಟಿಗೆಯಲ್ಲಿ ಇಟ್ಟಿದ್ದ ತಾಯಿಹೆಣ ನೋಡುತ್ತಾನೆ. ಸಿಗರೇಟ್ ಸೇದುತ್ತಾನೆ. ಅಂತ್ಯಕ್ರಿಯೆ ಮುಗಿಸಿ ಮರಳಿ ನಗರಕ್ಕೆ ಬ೦ದು ಕ್ಲಬ್ಬಿನಲ್ಲಿ ತನ್ನ
ಪ್ರೇಯಸಿಯೊಂದಿಗೆ ಎ೦ದಿನಂತೆ ಕುಡಿದು ನೃತ್ಯ ಮಾಡುತ್ತಾನೆ. ಒ೦ದು ಸ೦ಜೆ ಸಮುದ್ರ ತೀರಕ್ಕೆ ವಾಯುವಿಹಾರ- ಕ್ಕೆಂದು ಒಬ್ಬನೇ ಹೋಗಿದ್ದಾಗ ಅಲ್ಲಿ ಒ೦ದು ಕೊಲೆಯಾಗುತ್ತದೆ. ಕೊಲೆಗಡುಕರು ತಪ್ಪಿಸಿಕೊಳ್ಳುತ್ತಾರೆ. ಯಾರೋ ಮಾಡಿದ ಕೊಲೆಗೆ ಪೊಲೀಸಿನವರು ‘ಅನ್ಯ’ನನ್ನು ಬ೦ಧಿಸುತ್ತಾರೆ. ನ್ಯಾಯಾಲಯದಲ್ಲಿ, ಧರ್ಮಗುರುವಿನ ಎದುರು
ವಿಚಾರಣೆಯಾಗುತ್ತದೆ. ಎಲ್ಲರೂ ಇವನೇ ಅಪರಾಧಿ ಎ೦ದು ತೀರ್ಮಾನಿಸುತ್ತಾರೆ. ಅವರು ಹಾಗೆ ತೀರ್ಮಾನಕ್ಕೆ ಬರಲು ಕೊಟ್ಟ ಕಾರಣ ಇವನು ಕಟುಕ, ಏಕೆ೦ದರೆ ತಾಯಿ ಸತ್ತದಿನ ತೊಟ್ಟು ಕಣ್ಣೀರು ಹಾಕಲಿಲ್ಲ. ಬದಲಿಗೆ ಶವನೋಡಿ ಸಿಗರೇಟು ಹಚ್ಚಿದ, ಸಂಜೆ ಕುಡಿದು ಕ್ಲಬ್ಬಿನಲ್ಲಿ ಪ್ರೇಯಸಿಯೊಂದಿಗೆ ನರ್ತನ ಮಾಡಿದ. ಇಂಥ ಕಟುಕನಲ್ಲದೆ ಮತ್ತಾರು ಕೊಲೆ ಮಾಡಲು ಸಾಧ್ಯ? ಎ೦ದು.”

ನೋಡಿ, ಸಾವಿನ ಬಗ್ಗೆ ನೀವು ನಿಲಿ೯ಪ್ತತೆಯನ್ನು ಸಾಧಿಸಿದ್ದರೆ ಜನಕ್ಕಾಗಿ, ಸಮಾಜದ ತೋರಿಕೆಗಾಗಿಯಾದರೂ ನೀವು ಅಳಬೇಕು. ಅಳಲು ಸಾಧ್ಯವಾಗದಿದ್ದರೆ ಅಳುವ ನಾಟಕವನ್ನಾದರೂ ಆಡಬೇಕು.ಇಲ್ಲವಾದರೆ ಅಪರಾಧಿಯಾಗುವ ಅಪಾಯಕ್ಕೆ ಗುರಿಯಾಗಬೇಕಾಗುತ್ತದೆ.

ಮೊಗವಾಡದ ಬದುಕು ಅನಿವಾರ್ಯವಾಗಿ ಮನುಷ್ಯಹೇಡಿಯಾಗುತ್ತಾ ಅತ್ಯಂತ ಹೀನ ಕೃತ್ಯಗಳಿಗೆ ತೊಡಗಿಸಿ-ಕೊಳ್ಳುತ್ತಿದ್ದಾನೆ. ಶೋಷಣೆ ಮಾಡುತ್ತಾ ಶೋಷಣೆಗೆ ಒಳಗಾಗುವುದು ಅವನ ಉಸಿರಾಗುತ್ತಿದೆ. ಊರಿಗೆಊರೇ ಬೆತ್ತಲಾಗಿದ್ದಾಗ ಬಟ್ಟೆ ಹಾಕಿಕೊಂಡವನನ್ನು ಕಂಡು ನಗುತ್ತಾರೆ ಎಂದು ಎಲ್ಲಾ ಬೆತ್ತಲಾಗುವ ಅರ್ಥಾತ್ ಭ್ರಷ್ಟರಾಗುತ್ತ ಪಾಶವೀ ಬದುಕಿನತ್ತ ಪಾದಾರ್ಪಣೆ ಮಾಡುತ್ತಿದ್ದೇವೆ. ಹಾಗೆ ಮಾಡುತ್ತಲೇ ಮೇಲೆ ಮೇಲೆ ಅದಕ್ಕೆ ವೈಜ್ಞಾನಿಕ ಹೊಳಪನ್ನು ಕೊಡುತ್ತಿದ್ದೇವೆ. ಹೀಗಾಗಿ ಜೀವನದ ಗತಿ “Might is right” “ಬಲವಿದ್ದವನಿಗೆ ನೆಲ” ಎನ್ನುವ
ಕಾಡು ಜನರ ಸ್ಥಿತಿಯಾಗಿದೆ.

ಹೀಗಾಗಿ ಈ ದೇಶದಲ್ಲಿ ಪ್ರಾಮಾಣಿಕತೆಯ ಸ್ಥಾನವನ್ನು ಅಪ್ರಾಮಾಣಿಕತೆ ಆವರಿಸಿಕೊಂಡು ಅನ್ಯಾಯವನ್ನೇ ನ್ಯಾಯವೆ೦ದು ಭ್ರಮಿಸಿ ಅದನ್ನೆ ಆಲಂಗಿಸಿ ಆಕ್ರಂದಿಸುವ ಹುಚ್ಚರ ಆಲಯದಲ್ಲಿ ಮಾನವೀಯತೆ ಮುರುಟಿ ಹೋಗುತ್ತಿದೆ. ಬಲಿಷ್ಟರ ಅನ್ಯಾಯಕ್ಕೆ ಬೆ೦ಗಾವಲಾಗಿರುವ ಪೋಲೀಸರ ಲಾಟಿ ಬಡವರ ಬೆನ್ನಹಿಂದೆ ಸದಾ ಕ್ರಿಯಾತ್ಮಕವಾಗಿ ಕ್ರೌರ್ಯದ ಹೆಡೆ ಎತ್ತುತ್ತಿರುವುದನ್ನು ಕ೦ಡರೆ ಯಾರಿಗಾದರೂ ಆಶ್ಚರ್ಯ, ಸ೦ಕಟ, ಒಮ್ಮೆಗೇ ಆಗುತ್ತದೆ.

ಒಟ್ಟಿನಲ್ಲಿ ಮಾನವ ಸಮಾಜ ವೈವಿಧ್ಯತೆಯ, ಕ್ರಿಯಾತ್ಮಕ ಚಾಲನೆಯುಳ್ಳ ಸಮಾಜ. ಅಲ್ಲಿ ಈ ಎಲ್ಲ ಗೊ೦ದಲಗಳ ನಡುವೆಯೂ ನಾವು ಬದುಕುತ್ತಿದ್ದೇವೆ. ಅಂತಹ ಸಮಾಜಕ್ಕೆ ಸಮರ್ಥರಾದ, ಸ್ವತಂತ್ರ ಮನೋಧರ್ಮವುಳ್ಳ, ಸ್ಪರ್ಧಾಸ್ಪೂರ್ಥಿಯ ನ್ಯಾಯವಾದಿಗಳು, ನ್ಯಾಯಾಧೀಶರು ಅನಿವಾರ್ಯ ಅಗತ್ಯವಾಗಿದ್ದಾರೆ.

ಹೀಗಾಗಿ ಮಾನವತೆ ಅರಸುತ್ತಿರುವುಮ ಸ್ವಾರ್ಥಕ್ಕಾಗಿ ಕೊಳ್ಳೆ ಹೊಡೆವ, ತಿರುಚುವ, ಬಿಳಿಯನ್ನು
ಕರಿ ಮಾಡುವ, ಕರಿಯನ್ನು ಬಿಳಿ ಮಾಡುವ ಕರಿ ಕೋಟುಗಳನ್ನಲ್ಲ. ಬದಲಿಗೆ ಅಂತಹ ಸಮಾಜದ
ಸ೦ದರ್ಭಗಳ ಸವಾಲಿಗೆ ಎದೆಯೊಡ್ಡಿ ಎಂಥ ಸ೦ದರ್ಭದಲ್ಲೂ ನ್ಯಾಯಕ್ಕಾಗಿ ನಿಲ್ಲಬಲ್ಲ ನಿಜ
ನಾಲಿಗೆಯ ನ್ಯಾಯ ಶಿಲ್ಪಿಗಳನ್ನು.
– ೧೯೮೨

1.ಮನನುಸ್ಮೃತಿ, ಅನುವಾದಕರು, ಚಕ್ರಕೋಡಿ ಈಶ್ವರ ಶಾಸ್ತ್ರಿ. ಅಧ್ಯಾಯ 8 ಶ್ಲೋಕ 374, 375, 378,
379 ಮತ್ತು 380. ಪುಟ 361, 362. 363. ಪ್ರಕಟಣೆ: ಸಮಾಜ ಪುಸ್ತಕಾಲಯ ಧಾರವಾಡ ದ್ವಿತೀಯ
ಮುದ್ರಣ 1967, ಒತ್ತು ನನ್ನದು.
2.Dr.Rammanohar Lohia:Notes and Comments Vol 1
First published 1972, page 346.
Ref. The High-caste Judge and Murder.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಲೂಗೆಡ್ಡೆ(ಬಟಾಟೆ)ಯಿಂದ ಎಥನಾಲ್ ತಯಾರಿಕೆ
Next post ಅವಶ್ಯಕತೆ ಮತ್ತು ಕಾನೂನು

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys