ವೀರಪ್ಪನ್ ಈಗ ರಾಷ್ಟ್ರ ಪ್ರಸಿದ್ಧಿ ಪಡೆದ ಕಾಡುಗಳ್ಳ, ಕಾಡುಗಳ ನಡುವೆ ಊರುಗಳು ಹುಟ್ಟಿ ಸಂಸ್ಕೃತಿಯ ಸ್ಥಿತ್ಯಂತರ ಸಂಭವಿಸುತ್ತ ಬಂದಂತೆ ಕಾಡು ನಿಗೂಢವೂ ದುರ್ಗಮವೂ ಆದ ಒಂದು ಕಷ್ಟ ಕೇಂದ್ರವಾಯಿತು. ಹಾಗೆ ನೋಡಿದರೆ ನಮ್ಮ ಸಂಸ್ಕೃತಿಯ ಮೊದಲ ಮಾದರಿ ‘ಕಾಡು’. ಇಲ್ಲಿದ್ದ ಸಸ್ಯರಾಶಿಯಾಗಲಿ, ಬೆಟ್ಟಗುಡ್ಡಗಳಾಗಲಿ ಪಟ್ಟಭದ್ರರ ಪಾಳೇಪಟ್ಟುಗಳಾಗಿಲ್ಲದ ಸನ್ನಿವೇಶದಲ್ಲಿ ಸಮಾನತೆಯ ಆಧಾರದಲ್ಲಿ ಬದುಕು ಪ್ರಾರಂಭವಾದದ್ದು ಈ ಕಾಡಿನಲ್ಲಿ, ಮೇಲುಕೀಳುಗಳ ಕಲ್ಪನೆಯಿಲ್ಲದೆ ಖಾಸಗಿ ಆಸ್ತಿ ಮಾಲಿಕತ್ವವನ್ನು ಊಹಿಸಿಕೊಳ್ಳಲಾಗದ ಸಹಜ ಸಮತಾವಾದಿ ನೆಲೆಯ ಕಾಡು, ಮುಂದೆ ಮನುಷ್ಯರಿಂದ ಬೇರ್ಪಟ್ಟು ಊರಿಗೆ ಎದುರುಬದರಾಯಿತು. ಊರು ಒಲ್ಲದ ಒಕ್ಕಲು ಕಾಡಿನಲ್ಲಿ ಹಾವಾಗಿ, ಹೂವಾಗಿ, ಆನೆಯಾಗಿ ವಿವಿಧ ರೂಪಗಳಲ್ಲಿ ವಿಜೃಂಭಿಸತೊಡಗಿತು. ಊರಿನ ಗಾಳಿಯ ಲಯ ಕಾಡಿನಲ್ಲಿ ಕಿಚ್ಚಾಯಿತು; ಊರಿನ ಮಾತು ಕಾಡಿಗೆ ಮಚ್ಚಾಯಿತು. ಕಾಡಿನ ಸಂಕೇತ ಸದೃಶ್ಯ ಸಸ್ಯಗಳು ಮಾತ್ರ ಊರಲ್ಲಿ ಒಕ್ಕಲುತನ ಮಾಡತೊಡಗಿದವು. ವಯ್ಯಾರದಿಂದ ನಗತೊಡಗಿದವು. ಕತ್ತಲಲ್ಲಿ ಕದ್ದು ಹಿತ್ತಲಲ್ಲಿ ಬೆಳೆದವು. ಹೊಲದ ನಡುವೆ ಬುಡಬೇರುಗಳನ್ನು ಬಿಟ್ಟು ಸಾಕ್ಷಿಪ್ರಜ್ಞೆ ಯಾದವು. ಒಟ್ಟಿನಲ್ಲಿ ಊರು ಊರೇ ಆಯ್ತು; ಕಾಡು ಕಾಡೇ ಕಾಯಿತು. ಸಂಸ್ಕೃತಿಯ ಸ್ಥಿತ್ಯಂತರದಲ್ಲಿ ಸಂಭವಿಸಿದ ಪ್ರಮುಖ ವರ್ಗೀಕರಣಕ್ಕೆ ಉತ್ತಮ ಉದಾಹರಣೆಯಾಗಿ ನಿಂತ ಕಾಡು ಮತ್ತು ಊರುಗಳ ಒಡಲಲ್ಲಿ ಹುಟ್ಟಿದ ಸದ್ದು-ಸಂವೇದನೆಗಳೇ ಬೇರೆಯಾದವು. ನನ್ನ ಸ್ವಾಭಾವಿಕ ಬೆಳವಣಿಗೆಯಲ್ಲಿ, ಕಾಡು ‘ಮದ’ಗೊಳ್ಳುತ್ತಿದ್ದರೆ ಊರು ‘ಹದ’ ಗೊಳ್ಳತೊಡಗಿತು. ಆರಾಮವಾಗಿ ಹರಟುವ ಊರಲ್ಲಿ, ಒರಟುತನವೇ ಕಾಡೆನಿಸಿಕೊಂಡಿತು. ಕಾಡುತನ ಮತ್ತು ಒರಟುತನವನ್ನು ಸಮೀಕರಿಸುತ್ತ, ಮೀರುತ್ತ ಹೋಗುವ ಊರಲ್ಲಿ ಹೊಂದಿಕೆಯಾಗದ ವೀರಪ್ಪನ್‌ಗಳು ದೈಹಿಕವಾಗಿ ಕಾಡು ಹೊಕ್ಕರು, ಆದರೆ ಮಾನಸಿಕವಾಗಿ ಊರಲ್ಲಿ ಉಳಿದರು.

ಆದರೆ ಕಾಡು ಸೇರಿ ಕಳ್ಳನಾದ ಮೂರ್ತ ವೀರಪ್ಪನ್ ಮಾತ್ರ ಊರಿನವರ ಬೇಟೆಗೆ ಗುರಿಯಾದ; ಊರಿನೊಳಗೆ ಕಂಡೂ ಕಾಣದಂತೆ ಅಂತರ್ಗತವಾದ ಅಮೂರ್ತ ವೀರಪ್ಪನ್ ಒಳಗೇ ಬೆಳೆಯುವ ಬೆಲೆವೆಣ್ಣಾದ; ಆಕರ್ಷಿಸುತ್ತ, ಆವರಿಸುತ್ತ, ಶೀಘ್ರ ಫಲ ಕೊಡುವ ಪೂಜಾರಿಯಾದ; ಪುಢಾರಿಯಾದ; ತನ್ನ ಮೂರ್ತ ರೂಪದೊಂದಿಗೆ ಕದ್ದು ಮುಚ್ಚಿ ಮಾತಾಡಿ, ಸರಸ ಸಲ್ಲಾಪ ನಡೆಸಿದ, ಕುತ್ತಿಗೆಗೆ ಬರುವ ವೇಳೆಗೆ ಕೊಳವೆಗಳನ್ನು ಹೊರ ತೆಗೆದು ಪೊಲೀಸರ ಕೈಗೆ ಕೊಟ್ಟ; ಅಮೂರ್ತ ವೀರಪ್ಪನ್‌ಗಳನ್ನು ಅನಾವರಣ ಗೊಳಿಸಿಬಿಡುವ ಆತಂಕದಲ್ಲಿ ಮೂರ್ತ ವೀರಪ್ಪನ್ ಮೇಲೆ ಸಮರ ಸಾರಿದ. ಮೂರ್ತ ಮತ್ತು ಅಮೂರ್ತ ವೀರಪ್ಪನ್‌ಗಳ ಹಾವಳಿಯಲ್ಲಿ ‘ಕರ್ತವ್ಯದ ಕರೆ’ಗೆ ಮುಂದಾದ ‘ಕೋವಿ ಮಾನವರು’ ಕಾಲನ ಕರೆಗೆ ಓಗೊಟ್ಟರು.

ಕಾಡಿನ ಕತ್ತಲಲ್ಲೂ ಕೆಂಪಾಗಿ ಕಾಣುವ ನೆತ್ತರ ಕಲೆಗಳೊಂದಿಗೆ ಮಾತಾಡುತ್ತ ಹೋದಂತೆ, ಈ ಮೂರ್ತ ಮತ್ತು ಅಮೂರ್ತ ವೀರಪ್ಪನ್‌ಗಳ ಕಥೆ, ಹದ್ದಾಗಿ ಹಾರುವ ವ್ಯಥೆಯಾಗಿ ಅಪ್ಪಳಿಸುತ್ತದೆ. ವ್ಯಥೆಯಲ್ಲಿ ಉರಿಯಾಗಿ ಉಕ್ಕುವ ವಿವರಗಳಲ್ಲಿ ಪುರಾಣ ಅನಾವರಣಗೊಳ್ಳುತ್ತದೆ; ಚರಿತ್ರೆ ಚಿತ್ರ ಬಿಡಿಸುತ್ತದೆ; ಐತಿಹ್ಯಗಳು ಔಚಿತ್ಯ ಪಡೆಯುತ್ತವೆ. ಲೋಕದ ಹುಟ್ಟಿನ ಸುತ್ತ ಕಟ್ಟಿದ ವಿಜ್ಞಾನದ ಕಟ್ಟು ಬಿಚ್ಚಿಕೊಳ್ಳುತ್ತ ಹೋದಂತೆ ವೀರಪ್ಪನ್ ಒಂದು ಇತಿಹಾಸವೇ ಆಗಿಬಿಡುತ್ತಾನೆ. ಮೂರ್ತ-ಅಮೂರ್ತಗಳ ಪಗಡೆಯಾಟದ ಪುರಾಣವಾಗುತ್ತಾನೆ. ಕಾಡುಗಳ್ಳನಾದ ವಾಸ್ತವಕ್ಕೆ ಐತಿಹ್ಯಗಳ ಉದಾಹರಣೆಯನ್ನೇ ಒದಗಿಸುತ್ತಾನೆ.

ಅಂದರೆ, ‘ವೀರಪ್ಪನ್’ ಹುಟ್ಟು ಇಂದು ನಿನ್ನೆಯದಲ್ಲ. ನಿಗೂಢಗಳ ನಡುವೆ ಸಿಡಿಯುತ್ತ ಭಯಗೊಳಿಸುತ್ತ ಬಂದ ಈತ ಈಗ ಕಾಡುಗಳ್ಳನಾಗಿದ್ದಾನೆ; ಆನೆಯ ದಂತಕ್ಕೆ ಕತ್ತಿಹಾಕಿ ದಂತಕತೆಯಾಗಿದ್ದಾನೆ. ಆದರೆ ತನ್ನ ಬೇರುಗಳನ್ನು ಭೂಮಿಯ ಹುಟ್ಟಿನಲ್ಲೇ ಅಡಗಿಸಿ ಗುಟುಗುತ್ತ ಬಂದಿದ್ದಾನೆ.

ಆಗ, ಭೂಮಿಯ ಮೇಲೆ ಮಲಗಿದ್ದ ಬಂಡೆಗಳಿಗೆ ಬಿಸಿಲಾಗಿ ಕಾಡಿದ; ಸುರಿಯುವ ಮಳೆಯಲ್ಲಿ ಸಿಡಿಲಾಗಿ ಸ್ಫೋಟಿಸಿದ; ಬೀಸುವ ತಂಗಾಳಿಗೆ ಬಿರುಗಾಳಿಯಾದ; ಬೆಳೆದ ಬಿದಿರುಮೆಳೆಗೆ ಕಿಚ್ಚಾಗಿ ಚುಚ್ಚಿದ. ತುಂಬಿದ ನೀರಲ್ಲಿ ಸುಳಿಯಾದ; ಹುಟ್ಟಿಗೆ ಸಾವಾಗಿ, ವಿವಾಹಕ್ಕೆ ವೈಧವ್ಯವಾಗಿ, ಯೌವನಕ್ಕೆ ವೃದ್ಧಾಪ್ಯವಾಗಿ, ಕಣ್ಣು ಕುರುಡಾಗಿ, ಕಿವಿಗೆ ಕಿವುಡಾಗಿ ಕಾಡಿಸುತ್ತಲೇ ಇರುವ ಈತ ಯಾವತ್ತು ತಾನೆ ಇರಲಿಲ್ಲ? ಎಲ್ಲಿ ತಾನೆ ಇರಲಿಲ್ಲ?

ಭೂಮಿಯೊಂದಿಗೆ ಬೆಳೆದು ಬಂದ ವಿವಿಧ ರೂಪಗಳಲ್ಲಿ ಇಂದಿನ ಕಾಡುಗಳ್ಳ ದಂತಚೋರ ವೀರಪ್ಪನ್ ಸಹ ಒಬ್ಬನಾಗಿರುವುದರಿಂದ ಆತ ಕಂಸನಂತೆ ಕತೆಯಾಗುತ್ತಿದ್ದಾನೆ; ಭಸ್ಮಾಸುರನಂತೆ ಬಲವಾಗುತ್ತಿದ್ದಾನೆ, ಜರಾಸಂದನಂತೆ ಜೀವ ಪಡೆಯುತ್ತಾನೆ. ಕಂಸನಿಗಾಗಲಿ, ಭಸ್ಮಾಸುರನಿಗಾಗಲಿ, ಜರಾಸಂದನಿಗಾಗಲಿ ವಿಶಿಷ್ಟ ಶಕ್ತಿ ಲಭ್ಯವಾದದ್ದು ದೇವಾನುದೇವತೆಗಳ ಅನುಗ್ರಹದಿಂದ ತಾನೆ? ವೀರಪ್ಪನ್‌ಗಳು ಬೆಳೆಯುವುದು, ಬಲಗೊಳ್ಳುವುದು ಅನುಗ್ರಹದಿಂದ; ಅನುಗ್ರಹಿಸುತ್ತಾ ಬಂದವರಿಗೇ ದುರಾಗ್ರಹ ತೋರುವ ತಾಕತ್ತು, ಬಂದಾಗ ವೀರಪ್ಪನ್‌ಗಳು ವಿರೋಧಿಗಳಾಗುತ್ತಾರೆ; ಪ್ರತಿಮಾರೂಪದ ಪುರಾಣ ಪಾತ್ರಗಳಿಗಿಂತ ಎದುರಿಗೆ ಸವಾಲಾಗಿ ವಾಸ್ತವವಾಗಿ ನಿಲ್ಲುವ ಇಂಥವರು ಒಬ್ಬ ಕೃಷ್ಣ ಒಬ್ಬಳು ಮೋಹಿನಿ ಮತ್ತು ಭೀಮನಿಂದ ಸಾವಪ್ಪುವವರಲ್ಲ; ಸಾವಪ್ಪುವುದಿರಲಿ ಕಣ್ಣೆದುರು ನಿಲ್ಲುವವರಲ್ಲ. ಜರಾಸಂಧನಾಗಿದ್ದರೂ ಭೀಮನಂತೆ, ಭಸ್ಮಾಸುರನಾಗಿದ್ದರೂ ಮೋಹಿನಿಯಂತೆ, ಕಂಸನಾಗಿದ್ದರೂ ಕೃಷ್ಣನಂತೆ ಕಾಣುವ ಕಣ್ಕಟ್ಟು ಕಲಿತ ಇವರು ಪ್ರಶ್ನೆಯಾಗಿ ಉಳಿಯುವುದರಲ್ಲಿ ನಿಸ್ಸೀಮರು. ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದವರ ನೆತ್ತರಲ್ಲೇ ಚಿತ್ತಾರ ಬರೆದು ಕಳುಹಿಸುವ ಕ್ರೂರಿಗಳು.

ಕ್ರೌರ್ಯದ ಮಾತು ಬಂದಾಗ ಅಮೂರ್ತ ವೀರಪ್ಪನ್‌ಗಳ ಪಾತ್ರವೂ ಅಸಾಧಾರಣವಾದದ್ದು. ಮೂರ್ತ ವೀರಪ್ಪನ್‌ಗಳು ನೆತ್ತರಲಿ ಚಿತ್ತಾರ ಬಿಡಿಸಿ ನಗುವವರು ; ಅಮೂರ್ತ ವೀರಪ್ಪನ್‌ಗಳು, ಚಿತ್ರದಲ್ಲೇ ಹುತ್ತ ಕಟ್ಟಿಕೊಂಡ ಸರ್ಪ ಶೂರರು! ಕಂಡವರ ಕಣ್ಣು ಚೆನ್ನಾಗಿದ್ದರೆ (ಹುಣ್ಣಾಗುವಂತೆ ಮಾಡುವವರೆಗೆ ಇವರು ನಿದ್ದೆ ಮಾಡುವುದಿಲ್ಲ. ಕಿವಿ ಚನ್ನಾಗಿದ್ದರೆ) ಹುತ್ತದ ಕೋವಿಗೆ ಬಲಿ ಮಾಡದೆ ಮರಳುವುದಿಲ್ಲ. ಅನ್ಯರ ಅಭ್ಯುದಯಕ್ಕೆ ನರಳುವುದನ್ನು ನಿಲ್ಲಿಸುವುದಿಲ್ಲ. ಇಂಥ ವೀರಪ್ಪನ್‌ಗಳು ಕಾಣಿಸಿಕೊಳ್ಳದ ಸ್ಥಳಗಳಿಲ್ಲ; ಆವರಿಸಿಕೊಳ್ಳದ ವಸ್ತುಗಳಿಲ್ಲ. ಕಂಡಕಂಡ ಕಡೆಯಲ್ಲಿ ಹಾವಾಗುತ್ತಾರೆ. ಆದರೆ ಹೂವಂತೆ ನಟಿಸುತ್ತಾರೆ, ಹದ್ದಾಗಿ ಬಡಿಯುತ್ತಾರೆ; ಆದರೆ ಮುದ್ದು ಮುಖದ ರಕ್ಷಣೆ ಪಡೆಯುತ್ತಾರೆ. ಇಷ್ಟೇ ಅಲ್ಲದೆ ಅಕ್ಷರ ಹಾದರ ಮಾಡುತ್ತಾರೆ ವಿಧಾನಸೌಧದಲ್ಲಿ ವಿಜೃಂಭಿಸುತ್ತಾರೆ. ಪಾರ್ಲಿಮೆಂಟಿನಲ್ಲಿ ಪಟ್ಟ ಹತ್ತುತ್ತಾರೆ. ಏಕಕಾಲಕ್ಕೆ ದೂರ-ದರ್ಶನವೂ ಆಕಾಶವಾಣಿಯೂ ಆಗಿ ಅಲಂಕರಿಸುತ್ತಾರೆ.

ಇನ್ನೊಂದು ವೀರಪ್ಪನ್ ವರ್ಗವಿದೆ. ಸುಳ್ಳನ್ನು ಸುಂದರವಾಗಿ ಹೇಳುತ್ತ ಸತ್ಯವೆಂಬ ಭ್ರಮೆ ಮೂಡಿಸುವುದು ಮತ್ತು ಚಾಡಿಯ ರಾಡಿಯನ್ನೇ ಕೋಡಿ ಹರಿಸುವುದು ಈ ವರ್ಗದ ಅಭ್ಯಾಸ. ಸತ್ಯಕ್ಕೆ ಸುಳ್ಳಿನ ಸಮಾಧಿ ಕಟ್ಟುವ, ಸಂತೋಷಕ್ಕೆ ಸಾವು ತರುವ ಅವರು ‘ಪರಹಿಂಸಾ ಪ್ರಸನ್ನ ವದನ ವೀರರು’. ಪರರಿಗೆ ಮಾನಸಿಕ ಹಿಂಸೆ ಕೊಟ್ಟು ತಾವು ಪ್ರಸನ್ನವದನರಾಗಿ ವೀರರಂತೆ ಓಡಾಡುವ ಇವರು ಮಾಡುವ ಮಾನಹಾನಿ ಕಾಡುಗಳ್ಳ ವೀರಪ್ಪನ್ ಮಾಡಲು ಜೀವಹಾನಿಯಷ್ಟೇ ಗಂಭೀರವಾದುದು. ಬೇರೆಯವರ ಹೆಸರು ಹಸಿರಾಗುತ್ತಿರುವುದನ್ನು ಕಂಡಕೂಡಲೇ ರಾತ್ರಿಯೆಲ್ಲ ನಿದ್ರೆಗೆಟ್ಟು ಸೂರ್ಯೋದಯದೊಂದಿಗೆ ಸುಳ್ಳು ಹರಡುತ್ತ ಹೋಗುವ ಇಂಥವರಿಗೆ ಅಸಹನೆಯೇ ಸ್ಥಾಯೀಗುಣ. ತಮ್ಮ ಸುತ್ತ ಸ್ನೇಹಿತರು ಹೆಚ್ಚಾಗಿ ಇಲ್ಲದಿದ್ದರೆ, ಯಾರ ಜೊತೆಯೂ ಸ್ನೇಹ ಬಳಗ ಇರಬಾರದು; ತಮಗಿಂತ ಹೆಚ್ಚಾಗಿ ಬೇರೆ ಯಾರನ್ನೂ ಮೆಚ್ಚಬಾರದು; ತನಗಿಂತ ಒಳ್ಳೆಯ ಕೆಲಸ ಮಾಡಬಾರದು: ಇಂಥ ‘ಅಪರಾಧ’ಗಳನ್ನು ಮಾಡಿದ್ದೇ ಆದರೆ ಅವರಿಗೆ ಮಾನಸಿಕ ಹಿಂಸೆಯ ‘ಜೀವಾವಧಿ ಶಿಕ್ಷೆ’ಯೇ ಗತಿ. ಕಾಡುಗಳ್ಳ ವೀರಪ್ಪನ್ ನೇರ ‘ಮರಣದಂಡನೆ’ಯನ್ನು ವಿಧಿಸಿದರೆ, ಇಂಥವರು ‘ಜೀವಾವಧಿ ಶಿಕ್ಷೆ’ ವಿಧಿಸಲು ಇಚ್ಚಿಸುತ್ತಾರೆ. ಏಕೆಂದರೆ ತಮ್ಮ ಜೀವಾವಧಿಯುದ್ದಕ್ಕೂ ನೋಡುತ್ತ ಪ್ರಸನ್ನ ಗೊಳ್ಳಬೇಕಲ್ಲ! ಇನ್ನೊಂದು ವ್ಯತ್ಯಾಸವನ್ನೂ ಇಲ್ಲಿ ಗಮನಿಸಬೇಕು; ಕಾಡುಗಳ್ಳ ವೀರಪ್ಪನ್ ನಮ್ಮ-ನಿಮ್ಮ ಎದುರಿಗೆ ಇರುತ್ತಾನೆ; ಇವರು ಬೆನ್ನ ಹಿಂದೆ ಇರುತ್ತಾರೆ.

ಹೀಗೆ, ವೀರಪ್ಪನ್ ಮುಂದೆ ಮತ್ತು ಹಿಂದೆ ಇರುವುದಷ್ಟೇ ಅಲ್ಲ, ಅಕ್ಕಪಕ್ಕಗಳಲ್ಲೂ ಇರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮೊಳಗೆ ಅಮೂರ್ತವಾಗಿ ಇರಬಹುದು. ಹಾಗೆ ನೋಡಿದರೆ ಬೆನ್ನ ಹಿಂದಿನ ವೀರಪ್ಪನ್ ಗಳೆಲ್ಲ ಒಂದು ರೀತಿಯಲ್ಲಿ ಅಮೂರ್ತವೇ ಆಗಿರುತ್ತಾರೆ. ನಮ್ಮೊಳಗಿನ ವೀರಪ್ಪನ್, ನಮ್ಮನ್ನು ನಮ್ಮ ಮುಂದೆ ಅಥವಾ ಬೆನ್ನ ಹಿಂದೆ ಮೂರ್ತೀ ಕರಿಸುವ ಒಳ ಪ್ರಯತ್ನವನ್ನು ಮಾಡುತ್ತಿರುತ್ತಾನೆ.

ನಮ್ಮ ಮುಂದೆ ನಿಲ್ಲುವ ವೀರಪ್ಪನ್ ಭೌತಿಕ ವಸ್ತುಗಳನ್ನು ಕದಿಯುತ್ತಾನೆ. ಭೌತಿಕ ಹಲ್ಲೆ ನಡೆಸುತ್ತಾನೆ; ಕೊಲ್ಲುತ್ತಾನೆ; ಈತನಿಗೆ ವ್ಯಕ್ತಿಗಳು ಗುರಿಯಾದರೆ ಬೆನ್ನ ಹಿಂದಿನ ವೀರಪ್ಪನ್‌ಗಳಿಗೆ ವ್ಯಕ್ತಿತ್ವಗಳು ಗುರಿಯಾಗುತ್ತವೆ. ನಮ್ಮೊಳಗಿನ ವೀರಪ್ಪನ್ ನಮ್ಮ ಒಳ ವ್ಯಕ್ತಿತ್ವದ ಆತ್ಮಹತ್ಯಾ ಪ್ರೇರಕನಾಗಲು ಪ್ರಯತ್ನಿಸುತ್ತಾನೆ. ನಾವು ಇದಕ್ಕೆ ಬಲಿಯಾದ ಮೂರ್ತ ಅಥವಾ ಅಮೂರ್ತ ವೀರಪ್ಪನ್‌ಗಳ ಯಾವುದಾದರೂ ಒಂದು ವರ್ಗಕ್ಕೆ ಸೇರಿ ಬಿಡುತ್ತೇವೆ. ‘ವೀರಪ್ಪನ್ ಪ್ರಜ್ಞೆ’ಯ ಪ್ರಾಬಲ್ಯ ಎಷ್ಟು ಅಪಾಯಕಾರಿಯೆಂಬುದು ಇದರಿಂದ ಗೊತ್ತಾಗುತ್ತದೆ. ನಾವು, ಒಮ್ಮೆ ವೀರಪ್ಪನ್ ಪ್ರಜ್ಞೆಯ ಪಾಲುದಾರರಾಗಿ ಬಿಟ್ಟರೆ ಸಾಕು, ಆತ್ಮರತಿಯ ಅಪಾಯವೂ ಇರುತ್ತದೆ. ತಾವು ಹೇಳಿದ್ದೇ ಪರಮ ಸತ್ಯ; ತಾವು ಕಂಡಿದ್ದೇ ಅಂತಿಮ ನೋಟ; ತಮ್ಮ ಮಾತೆಂದರೆ ಸುಗ್ರೀವಾಜ್ಞೆ, ತಮ್ಮ ಜಾತಿಯೇ ಜೀವರಾಶಿಗಳಲ್ಲೆಲ್ಲ ಶ್ರೇಷ್ಠ. ತನ್ನ ಶ್ರೇಷ್ಠತೆಯ ಸಿಂಹಾಸನದ ಮುಂದೆ ಮಂಡಿಯೂರಿದ ಮಂದಿಗೆ ಮಾತ್ರ ಮಾನ್ಯತೆ. ಇಂಥ ಆತ್ಮರತಿಯ ಅತಿರೇಕಗಳು ಮಾತನ್ನು ಮಲಿನ ಗೊಳಿಸುತ್ತವೆ. ಮನಸಲ್ಲಿ ಕೊಳಕು ತುಂಬುತ್ತವೆ. ತಾನಿಲ್ಲದೆ ತನುವು ಇಲ್ಲ, ಮನವು ಇಲ್ಲ, ಜನವು ಇಲ್ಲ ಎಂಬ ಭ್ರಮೆಯಲ್ಲಿ ಬೀಗುತ್ತದೆ. ಆದರೆ ಜನರು ತಮ್ಮದೇ ನಿರ್ಣಯಗಳಿಗೆ ಬರಲು ಇತಿಹಾಸದುದ್ದಕ್ಕೂ ಹೋರಾಟ ಮಾಡುತ್ತ ಬಂದಿದ್ದಾರೆ. ಇಷ್ಟಾದರೂ ಮೂರ್ತ ವೀರಪ್ಪನ್‌ನಂತೆ ಅಮೂರ್ತ ವೀರಪ್ಪನ್‌ಗಳು ಯಾವಾಗ ಯಾವ ರೂಪದಲ್ಲಿ ‘ಕಾಡು’ತ್ತಾರೆಂದು ಖಚಿತಪಡಿಸಿಕೊಳ್ಳಲಾಗದಂತೆ ಅದೃಶ್ಯ ಕತ್ತಿ ಝಳಪಿಸುತ್ತಾರೆ. ಸೀದಾ ಕರುಳಿಗೆ ಕೈ ಹಾಕುತ್ತಾರೆ.

ಕಾಡುಗಳ್ಳ ವೀರಪ್ಪನ್‌ಗೂ ಕರುಳುಗಳ್ಳ ವೀರಪ್ಪನ್‌ಗಳಿಗೂ ಒಂದು ವ್ಯತ್ಯಾಸವಿದೆ. ಕಾಡುಗಳ್ಳ ತನ್ನ ಕ್ರೌರ್ಯವನ್ನು ಮುಚ್ಚಿಡುವ ಬಡಬಗ್ಗರ ಕರುಳು ಗೆಲ್ಲಲು ಪ್ರಯತ್ನಿಸುತ್ತ ಕರುಣಾಮಯಿಯ ಮುಖವಾಡ ಪಡೆಯುತ್ತಾನೆ. ಹಣಕಾಸು ಹಂಚಿ ಹೀರೋ ಆಗಲು ಪ್ರಯತ್ನಿಸುತ್ತಾನೆ. ಬಂದೂಕಿನಿಂದ ಬಾಯಿಮುಚ್ಚಿಸುತ್ತಾನೆ. ನಮ್ಮ ದೇಶದ ಬಡತನ ಎಂಥ ಸ್ಥಿತಿಗೆ ನಮ್ಮನ್ನು ತಳ್ಳಿದೆಯೆಂದರೆ ಕಾಡುಗಳ್ಳ ವೀರಪ್ಪನ್ ಎಲ್ಲಿದ್ದಾನೆಂಬ ಸುಳಿವು ನೀಡದೆ ಗುಟ್ಟಿನ ಬೆಟ್ಟ ನಿರ್ಮಿಸುವ ಬಡಬಗ್ಗರ ತಂಡವೇ ಇದೆ. ನಮ್ಮ ಬಡತನ, ಕಾಡುಗಳ್ಳನ ಕೊಡುಗೈತನ ಮತ್ತು ಅದೇ ಕೈಯಲ್ಲಿರುವ ಬಂದೂಕ-ಇವುಗಳಿಗೆ ಅಕ್ಕರೆಯಿಂದಲೊ ಆತಂಕದಿಂದಲೊ ತಮ್ಮ ಕರುಳನ್ನು ಗೆಲ್ಲುವ ಅವಕಾಶವನ್ನು ಆತನಿಗೆ ಒದಗಿಸುವುದು ಎಂಥ ವಿಪರ್ಯಾಸ. ಹೀಗಾಗಿ ಮೂರ್ತಸ್ಥಿತಿಯಲ್ಲಿ ಕಾಡುಗಳ್ಳನಾದ ವೀರಪ್ಪನ್ ಅಮೂರ್ತ ಸ್ಥಿತಿಯಲ್ಲಿ ಕರುಳುಗಳ್ಳನೂ ಆಗುತ್ತಾನೆ.

ಆದರೆ ನಮ್ಮ-ನಿಮ್ಮೊಳಗಿನ ವೀರಪ್ಪನ್‌ಗೆ ‘ಕರುಳುಗಳ್ಳ’ನಾಗುವುದು ಮಾತ್ರ ಸಾಧ್ಯ. ಅನ್ಯರ ಮಾನಗಳ್ಳನಾಗುತ್ತ ತನ್ನ ಕರುಳನ್ನು ತಾನೇ ಕಳ್ಳತನ ಮಾಡಿಕೊಳ್ಳುವ ವಿಪರ್ಯಾಸ ಈತನದಾಗಿದೆ.

ಭೂಮಿ ಹುಟ್ಟಿದಾಗಿನಿಂದ ಮೂರ್ತಾಮೂರ್ತಗಳ ನೆಲೆಯಲ್ಲಿ ಬೆಳೆಯುತ್ತಾ ಬಂದ ವೀರಪ್ಪನ್ ಎಲ್ಲಿದ್ದಾನೆಂದು ಹುಡುಕುತ್ತ ನೀವು ಕಂಡಿರಾ ನೀವು ಕಂಡಿರಾ ಎಂದು ಕೇಳುವ ಇಂದು ಸ್ಥಿತಿಯಲ್ಲಿ ಕಡೇ ಪಕ್ಷ ಕಾಡುಗಳ್ಳ ವೀರಪ್ಪನ್ ನಮ್ಮ ಕೈಗೆ ಸಿಕ್ಕುತ್ತಾನೆಯೆ? ಅಥವಾ ಮತ್ತಷ್ಟು ನಿಗೂಢವಾಗುತ್ತ ತಾನೂ ಅಮೂರ್ತವಾಗಿ ಬಿಡುತ್ತಾನೆಯೆ? ಇಷ್ಟಂತೂ ನಿಜ : ನಮ್ಮೊಳಗಿನ ಕರುಳುಗಳ್ಳ ವೀರಪ್ಪನ್ ವಿರುದ್ಧ ಒಳ ಹೋರಾಟ ಕಟ್ಟುವುದು ನಮ್ಮ ಕೈಯಲ್ಲಿದೆ. ಈ ಎಚ್ಚರವಾದರೂ ನಮ್ಮಲ್ಲಿ ಉಳಿಯಲಿ: ಕಾಡುಗಳ್ಳ ವೀರಪ್ಪನ್ ಬೇಗ ಸಿಗಲಿ.
*****
೨೬-೬-೧೯೯೪