‘ತಂಬಾಕು’ ಭಾರತದ ವಾಣಿಜ್ಯ ಬೆಳೆಯಾಗಿದ್ದು, “ನಿಕೋಟಿಯಾನ್ ಟಿಬ್ಯಾತಮ್” ಎಂಬ ಸಸ್ಯವರ್ಗಕ್ಕೆ ಸೇರಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರ ಸೇವನೆ ಆರೋಗ್ಯಕ್ಕೆ ಹಾನಿಕರ, ಎಂದು ವೈದ್ಯಕೀಯವಾಗಿ ದೃಧೀಕರಿಸಿದೆಯಾದರೂ ಈ ವ್ಯಾಮೋಹದಿಂದ ಬಹಳಜನ ಹೊರಬರಲಾಗಿಲ್ಲ.

ತಂಬಾಕಿನಲ್ಲಿರುವ ‘ನಿಕೋಟಿನ್’ ಅಪಾಯಕಾರಿ ವಿಷವಾಗಿದ್ದು ಇದರ ಅರ್ಧ ಹನಿಯನ್ನು ಸೇವಿಸಿದರೆ ಮನುಷ್ಯನ ಪ್ರಾಣವೇ ಹೋಗಬಹುದು. ಈ ನಿಕೋಟಿನ್ ಜತೆಗೆ ಪರ್ಘರಾತ್, ಪೈರಿಡಿನ್, ಅವೋನಿಯಾ, ಆಲ್ಡಿಹೈಡ್, ಎಂಬ ವಿಷಕಾರಕ ವಸ್ತುಗಳು ಈ ತಂಬಾಕಿನಲ್ಲಿವೆ. ಇಂಥಹ ಅಪಾಯಕಾರಕ ತಂಬಾಕನ್ನು ನಮ್ಮ ವಿಜ್ಞಾನಿಗಳು ರೈತನಿಗೆ ಉಪಯುಕ್ತವಾಗುವಂತೆ ೧೯೮೨ರಲ್ಲಿ ಸಂಶೋಧಿಸಿದ್ದಾರೆ. ರೈತನು ಬೆಳೆಯುವ ಈ ಸೊಪ್ಪು, ರೈತನ ಬೆಳೆಗಳನ್ನು ಹಾಳುಗೆಡುವ ಕೀಟಗಳನಾಶಕ್ಕೆ ಬಳಸಲಾಗುತ್ತದೆ. ಮತ್ತು ಇದು ಜನಪ್ರಿಯ ಕೀಟನಾಶಕವೂ ಕೂಡ ಆಗಿದೆ. ಈ ಕೀಟನಾಶಕವು ಬಿಳಿ ನೊಣ, ಸಸ್ಯ ಹೇನು, ಥ್ರಿಪ್ಸ್ ಮತು ನುಸಿಪೀಡೆಗಳ ನಿಯಂತ್ರಣಕ್ಕೆ ಹಾಗೂ ಅವುಗಳ ನಾಶಕ್ಕೆ ತುಂಬ ಉಪಕಾರಿಯಾಗಿದೆ. ತಂಬಾಕಿನಲ್ಲಿರುವ ‘ನಿಕೋಟಿನ್’ ಕೀಟನಾಶಕವು ಕೀಟಗಳ ಶ್ವಾಸನಳಿಕೆ, ತ್ವಚೆ ಮತ್ತು ಆಹಾರದ ಮೂಲಕ ದೇಹವನ್ನು ಒಳಸೇರಿ ಅವುಗಳ ನರಮಂಡಲದ ಕಾರ್ಯಚಟುವಟಿಕೆಯಲಿ ಏರುಪೇರುಂಟಾಗಿ ಅವು ಸಾಯುವಂತೆ ಮಾಡುತ್ತದೆ.

ಕೀಟನಾಶಕವನ್ನು ತಯಾರಿಸುವ ವಿಧಾನ : ಈ ಕ್ರಿಮಿನಾಶಕವನ್ನು ರೈತರು ಮನೆಯಲ್ಲಿಯೇ ತಯಾರಿಸಬಹುದಾಗಿದೆ. ಮೊದಲು ೧೦ ಲೀಟರ್ ನೀರು, ಒಂದು ಕೆ.ಜಿ. ಯಷ್ಟಾದ ತಾಜಾ ತಂಬಾಕಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಈ ತಂಬಾಕಿನ ಎಲೆಗಳನ್ನು ಹತ್ತು ಲೀಟರ್ ನೀರನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನೀರಿನಲ್ಲಿ ಕುದಿಸಿ ಹದಗೊಂಡ ಎಲೆಗಳನ್ನು ಹಿಂಡಿ ಕಷಾಯ ತಯಾರಿಸಬೇಕು ಈ ಕಷಾಯಕ್ಕೆ ಪುನಹ ೧೦ ಲೀಟರ್ ನೀರನ್ನು ಸೇರಿಸಿ ಚನ್ನಾಗಿ ಕಲಕಬೇಕು. ಈ ಕಷಾಯವು ಚನ್ನಾಗಿ ಕೆಲಸ ಮಾಡಲು ಹಾಗೂ ಬೆಳಗಳ ಮೇಲೆ ಸರಿಯಾಗಿ ಹರಡಲು ಸಿಂಪಡಿಸುವ ಮುನ್ನ ಕಷಾಯಕ್ಕೆ ೧೦೦ ಗ್ರಾಂ ಸಾಬೂನಿನ (ಸೋಪಿನ ಪುಡಿ) ಪುಡಿಯನ್ನು ಸೇರಿಸಬೇಕು. ಇದು ಮಾರುಕಟ್ಟೆಯಲ್ಲಿ ಪುಡಿರೂಪದಲ್ಲಿ ಹಾಗೂ ದ್ರವ ರೂಪದಲಿ ದೊರೆಯುತ್ತದೆ. ‘ನಿಕೋಟಿನ್’ ಪುಡಿಯನ್ನು ಸಸ್ಯಗಳ ಮೇಲೆ ಸಿಂಪಡಿಸಿದಾಗ ಅದು ವಾತಾವರಣದಲ್ಲಿರುವ ತೇವಾಂಶದೊಡನೆ ಬೆರೆತು ‘ನಿಕೋಟಿನ್’ ಎಂಬ ವಿಷ ವಸ್ತುವನ್ನು ಬಿಡುಗಡೆ ಮಾಡಿ ಕೀಟಗಳು ನಾಶವಾಗುತ್ತವೆ. ದ್ರವರೂಪದ ತಂಬಾಕನ್ನು ಸಿಂಪಡಿಸುವಾಗ ಸುಣ್ಣ ಅಥವಾ ಸಾಬೂನಿನ ಪುಡಿಯನ್ನು ಮಿಶ್ರಮಾಡಿ ಚನ್ನಾಗಿ ಕಲಿಸಿ ಸಿಂಪಡಿಸಬೇಕು.
*****