ಲೇಖಕ ಮತ್ತು ಓದುಗ

ಲೇಖಕ ಮತ್ತು ಓದುಗ

ಸಾಹಿತ್ಯ ಕೃತಿಯೊಂದಕ್ಕೆ ಸಂಬಂಧಿಸಿದಂತೆ ಲೇಖಕ ಮತ್ತು ಓದುಗನ ಸಂಬಂಧವೇನು? ಈ ಪ್ರಶ್ನೆಯ ಕುರಿತು ಈಚೆಗೆ ನಾನು ಕೆ. ಟಿ. ಗಟ್ಟಯವರ ‘ಸುಖಾಂತ’ ಎಂಬ ಕಾದಂಬರಿಯನ್ನು ಓದುವಾಗ ಸ್ವಲ್ಪ ಆಳವಾಗಿಯೇ ಚಿಂತಿಸಬೇಕಾಯಿತು. ಯಾಕೆಂದರೆ ಈ ಕಾದಂಬರಿ ಪ್ರಧಾನವಾಗಿ ಓದಿಗೆ ಸಂಬಂಧಿಸಿದುದು. ‘ಸುಖಾಂತ’ ಓದುಗರ ಸಹಾಯದಿಂದಲೇ ಬರೆಯುವ-ಎಂದರೆ, ಕಾದಂಬರಿಕಾರನೂ ಅದರ ಓದುಗರೂ ಒಟ್ಟಿಗೇ ಸೇರಿ ನಿರ್ಮಿಸುವ-ಕಾದಂಬರಿ ಎಂಬ ‘ಕವಿಸಮಯ’ವೊಂದನ್ನು ಗಟ್ಟಿಯವರು ಇಲ್ಲಿ ಮಾಡಿಕೊಳ್ಳುತ್ತಾರೆ. ಆದ್ದರಿಂದ ಆಗಾಗ ಓದುಗರ ಜತೆ ಮಾತಾಡುವ, ಕತೆ ಹೇಗೆ ಮುಂದರಿಯಬೇಕು ಎಂದು ವಿಚಾರಿಸುವ, ಹಾಗೂ ಓದುಗರಿಗೆ ಹಲವಾರು ಆಯ್ಕೆಗಳನ್ನು ನೀಡಿ ಇವುಗಳಲ್ಲಿ ಸರಿಯಾದ್ದು (‘ನಿಜವಾದ್ದು’) ಯಾವುದೆಂದು ಬರಹಕಾರನೇ ಸೂಚಿಸಿ ಆ ದಾರಿಯಲ್ಲಿ ಕತೆ ಸಾಗಿಸುವ ತಂತ್ರವೊಂದನ್ನು ಇಲ್ಲಿ ಕಾಣುತ್ತೇವೆ. ವಾಸ್ತವದಲ್ಲಿ ಲೇಖಕನಿಗೆ ಬೇರೆ ದಾರಿಯೂ ಇಲ್ಲ: ಯಾಕೆಂದರೆ, ಬರೆಯುತ್ತಿರುವಾಗಲೇ ಆತ ಓದುಗರ ಸಲಹೆಯನ್ನು ನಿಜವಾಗಿಯೂ ಕೇಳಿ ಬರೆಯುವುದು ಅಪ್ರಾಯೋಗಿಕವಾದ ಸಂಗತಿ. ಇಲ್ಲಿ ಗಟ್ಟಿಯವರ ಒಂದು ಉದ್ದೇಶ ಸಿನಿಮೀಯ ಕತೆಗಳಿಗೆ ಮಾರುಹೋಗಿ ಕತೆ ಕಾದಂಬರಿಗಳೆಂದರೆ ಅಂತೆಯೇ ರೋಚಕವಾಗಿರಬೇಕು ಎಂಬ ಸಿದ್ಧಕಲ್ಪನೆಗೆ ಅಡಿಯಾಳುಗಳಾಗಿರುವ ಒಂದು ವರ್ಗದ ಓದುಗರನ್ನು ಅವರ ಲೋಲುಪತೆಯಿಂದ ಎಚ್ಚರಿಸುವ ಹಾಗಿದೆ. ಆದರೆ ಹೀಗೆ ಪದೇ ಪದೇ ಓದುಗರನ್ನು ಎಚ್ಚರಿಸುತ್ತ ಮುಂದುವರಿಯುವ ‘ಸುಖಾಂತ’ ಅದಕ್ಕೆ ತಕ್ಕ ಬೆಲೆಯನ್ನೂ ತೆರಬೇಕಾಗುವ ಹಾಗೆ ಅನಿಸುತ್ತದೆ. ಯಾಕೆಂದರೆ ಓದುಗರು ಈ ರೀತಿ ಪ್ರಶ್ನೆಗೊಳಗಾಗುವುದಕ್ಕೆ ಇಷ್ಟಪಡುವುದಿಲ್ಲ. ಪ್ರಶ್ನೆಗೊಳಗಾಗುವುದು ಕಾಲ್ಪನಿಕ ಓದುಗರಲ್ಲದೆ ನಿಜವಾದ ಓದುಗರಲ್ಲ ಎಂಬುದರಿಂದ ಇದರ ಪರಿಣಾಮವೇನೂ ಕಡಿಮೆಯಾಗುವುದಿಲ್ಲ.

ಅದೇನಿದ್ದರೂ ಗಟ್ಟಿಯವರು ಈ ಕಾದಂಬರಿಯಲ್ಲಿ ಎತ್ತಿಕೊಂಡಿರುವ ಲೇಖಕ- ಮತ್ತು ಓದುಗರ ಸಂಬಂಧದ ಪ್ರಶ್ನೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಲೇಖಕರನ್ನೂ ಕಾಡುತ್ತ ಬಂದಿರುವುದೇ. ಕೆಲವರಾದರೂ ಅದನ್ನು ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸಿಯೂ ಇದ್ದಾರೆ. ಗಟ್ಟಿಯವರ ‘ಸುಖಾಂತ’ದ ಬೆನ್ನ ಹಿಂದೆಯೇ ನನಗೆ ಗಳಗನಾಥರ ‘ಸದ್ಗುರುಪರಭಾವ’ ಎಂಬ ಕೃತಿಯ ಆಯ್ದ ಭಾಗವೊಂದನ್ನು ಓದುವ ಅವಕಾಶ ಒದಗಿಬಂತು. (ಇದು ‘ತೋರಣ’ ಎ೦ಬ ಹೆಸರಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿದ ಗಳಗನಾಥ ಕಾದಂಬರಿ ಸಂಪುಟ ೬ರಲ್ಲಿ ಪ್ರಕಟವಾಗಿದೆ.) ಇದರಲ್ಲಿ ಒಂದೆಡೆ ಗಳಗನಾಥರು ತಮ್ಮ ಕಾದಂಬರಿಗಳ ಲೋಕಪ್ರಿಯತೆಗೆ ಕಾರಣಗಳನ್ನು ಕೊಡುತ್ತಾ ಇವುಗಳಲ್ಲಿ ಒಂದು ‘ನಾನು ವಾಚಕರಲ್ಲಿ ಏಕೀಭವಿಸಿ ಕಾದಂಬರಿಗಳನ್ನು ಬರೆದದ್ದು ಎನ್ನುತ್ತಾರೆ. ಮುಂದುವರಿದು, ‘…ನಾನು ವಾಚಕರಿಗಿಂತ ಶ್ರೇಷ್ಠನೆಂದಾಗಲಿ, ವಾಚಕರಿಗಿ೦ತ ಕನಷ್ಠನೆಂದಾಗಲಿ ತಿಳಿದು ಕಾದಂಬರಿಗಳನ್ನು ಬರೆದಿರುವುದಿಲ್ಲ. ಬರೆಯುವಾಗ ನಾನು ವಾಚಕನಾಗಿರುವೆನು. ಓದುವಾಗ ವಾಚಕರು ಗಳಗನಾಥ ರಾಗಿರುವರು. ಇದರಿಂದ ಗಳಗನಾಥನ ಮೆಚ್ಚಿಗೆಯೇ ವಾಚಕರ ಮೆಚ್ಚಿಗೆಯಾಗಿರುವದು. ಗಳಗನಾಥನು ಒಳ್ಳೆಯದೆಂದು ಬರೆದ ಕಾದಂಬರಿಯು ಗಳಗನಾಥನ ವಾಚಕರಿಗೆ ಎಂದೂ ಕೆಟ್ಟುದಾಗಿಯೇ ಇಲ್ಲ. ಇಷ್ಟು ಸ್ವಾವಲಂಬನದಿಂದ ನಾನು ಕಾದಂಬರಿಗಳನ್ನು ಬರೆದವನು. ನನ್ನ ಸ್ವಂತದ ಕಾದಂಬರಿಗಳಲ್ಲಂತು ನನ್ನ ಸ್ವಾವಲಂಬನವಿರುವುದು ಸ್ವಾಭಾವಿಕವು; ಆದರೆ ಎಂತಹ ಪ್ರಸಿದ್ಧ ಕಾದಂಬರಿಕಾರರ ಕಾದಂಬರಿಗಳಿದ್ದರೂ, ಅವು ನನ್ನ ಹೃದಯವನ್ನು ಅಲ್ಲಾಡಿಸದಿದ್ದರೆ ಅಂತಹವನ್ನು ನನ್ನ ಕನ್ನಡಿಗರ ಮುಂದೆ ನಾನು ಇಟ್ಟಿರುವುದೇ ಇಲ್ಲ!” ಎನ್ನುತ್ತಾರೆ. ಇದೇ ಧಾಟಿಯಲ್ಲಿ ಮುಂದರಿಯುತ್ತ, ‘ನಾನೂ ನನ್ನ ವಾಚಕರೂ ನನ್ನ ಕಾದಂಬರಿಗಳ ವಿಷಯದ ಮಮಕಾರದ ಸಂಬಂಧದಿಂದ ಏಕೀಭವಿಸಿ ಹೋಗಿರುವೆವು! ಕಾದಂಬರಿ ಬರೆಯುವಾಗ ವಾಚಕರ ಸ್ವರೂಪದ ಗಳಗನಾಥರೂ, ಕಾದಂಬರಿ ಓದುವಾಗ ಗಳಗನಾಥರ ಸ್ವರೂಪದ ವಾಚಕರೂ ಆಗಿ, ನಾವಿಬ್ಬರೂ ಕಾದಂಬರಿಗಳ ಸಾಮ್ರಾಜ್ಯದಲ್ಲಿ ನಲಿದಾಡಿರುವೆವು!’ ಎನ್ನುತ್ತ ಗಳಗನಾಥರು ಲೇಖಕ-ವಾಚಕರ ಏಕತಾಭಾವವನ್ನು ಒತ್ತಿ ಹೇಳುತ್ತಾರೆ.

ಸುಮಾರು ಇಂಥದೇ ಏಕತಾಭಾವವನ್ನು ‘ಸುಖಾಂತ’ದ ಆರಂಭದಲ್ಲೇ ಗುರುತಿಸುತ್ತಾರೆ. ‘…ನಿಜವಾಗಿ ಇದೊಂದು ಹೊಸ ಯತ್ನ. ಓದುಗನನ್ನೇ ನನ್ನ ಅಂತರಂಗದಲ್ಲಿ ತುಂಬಿಕೊಳ್ಳುವ ಯತ್ನ. ಇದು ಸಾಧ್ಯ ಎಂದುಕೊಂಡಿದ್ದೇನೆ, ಮತ್ತು ಓದುಗನ ಹೃದಯವೂ ವಿಶಾಲವಾಗಿದ್ದರೆ ಅವನ ಹೃದಯದಲ್ಲಿ ನನ್ನಿಂದ ತುಂಬಿಕೊಳ್ಳುವುದೂ ಸಾಧ್ಯ ಎಂದುಕೊಂಡಿದ್ದೇನೆ. ಮನುಷ್ಯ ತನ್ನ ಹೃದಯದಲ್ಲಿ ನೂರು ಆಸೆಗಳ, ನೂರು ನಿರಾಸೆಗಳ, ನಡೆದ ಕತೆಗಳ, ನಡೆಯದ ಕತೆಗಳ ಹೊರೆಯನ್ನು ಹೊತ್ತುಕೊಳ್ಳಬಲ್ಲ. ಒಬ್ಬ ಲೇಖಕನ ಮಾನಸರೂಪವನ್ನು ಇಟ್ಬುಕೊಳ್ಳೆಲಾರನೆ!’ ಎನ್ನುತ್ತಾರೆ. ಗಟ್ಟಿಯವರ ಈ ಕಾದಂಬರಿ ವಸ್ತೂಕರಿಸುವುದು (ಅರ್ಥಾತ್ ಕಥಾವಸ್ತುವಾಗಿಸುವುದು) ಇದನ್ನೇ. ಗಳಗನಾಥರ ಕಾದಂಬರಿಗಳಲ್ಲಾಗಲಿ ಗಟ್ಟಯವರದೇ ಇತರ ಕೃತಿಗಳಲ್ಲಾಗಲಿ ಇಂಥ ವಸ್ತೂಕರಣ ಇದೆಯೆಂದು ಅನಿಸುವುದಿಲ್ಲ. ಹೀಗೆ ವಸ್ತೂಕರಿಸುವುದರಿಂದಲೇ ‘ಸುಖಾಂತ’ದಲ್ಲಿ ಓದುಗ-ಲೇಖಕರ ನಮೂದಿತ ಉದ್ದೇಶಕ್ಕೆ ವಿರುದ್ಧವಾಗಿ ಬೇರೆಯಾಗಿಯೇ ಉಳಿಯುವುದು. ಇದು ‘ಬಂಗಾರದ ಬೆಟ್ಟವನ್ನು ನೆನೆಯಬೇಡ’ ಎಂದು ಹೇಳಿದಂತೆ. ಓದುಗರಿಗೆ ನೀವೇ ಈ ಕೃತಿಯ ಲೇಖಕರು ಎಂದು ಹೇಳುತ್ತಲೇ ಇದ್ದರೆ ಅವರು ಲೇಖಕರ ಜತೆ ಒಂದಾಗುವುದೇ ಇಲ್ಲ. ಆದ್ದರಿಂದ ಗಟ್ಟಿಯವರು ಹೀಗೆ ಹೇಳುವ ಒಳ ಉದ್ದೇಶವೇ ಈ ಭಿನ್ನತೆಯನ್ನು ಸಾಧಿಸುವುದಕ್ಕೆ ಎನ್ನಬಹುದೇನೋ. ಯಾಕೆಂದರೆ ಗಳಗನಾಥರ ಕಾಲವೇ ಬೇರೆ, ಗಟ್ಟಿಯವರ ಕಾಲವೇ ಬೇರೆ. ಗಳಗನಾಥರ ಕಾಲದ ಮುಗ್ಧತೆ ಗಟ್ಟಿಯವರ (ಎಂದರೆ, ನಮ್ಮ) ಕಾಲಕ್ಕೆ ಇಲ್ಲ. ಫ್ರೆಂಚ್ ಕವಿ ಬಾದಲೇರ್ ತನ್ನದೊಂದು ಪದ್ಯದ ಕೊನೆಯಲ್ಲಿ ಓದುಗನನ್ನು ನೇರವಾಗಿ ಬಯ್ದು ಮತ್ತೆ ಆತನನ್ನು ಸೋದರ ಎಂದೂ ಕರೆಯುತ್ತಾನೆ! ಲಂಕೇಶ್ ತಮ್ಮ ‘ದೇಶಭಕ್ತ ಸೂಳೇಮಗನ ಗದ್ಯಕಾವ್ಯ’ ಎಂಬ ಪದ್ಯದಲ್ಲಿ ಅನುಕರಿಸಿದ್ದು ಬಾದಲೇರನ ಮಾದರಿಯನ್ನೇ. ಅವರು ಬಾದಲೇರನ ‘ಪಾಪದ ಹೂಗಳ’ನ್ನು ಕನ್ನಡಕ್ಕೆ ಅನುವಾದ ಮಾಡಿದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲೇಖಕ ಮತ್ತು ಓದುಗರ ನಡುವಣ ಬಿರುಕು ಗಳಗನಾಥರ ಕಾಲದ್ದಲ್ಲ; ನಮ್ಮ ಕಾಲದ್ದು.

ಆದರೂ ಬರೆಯುವ ಕಾಲದಲ್ಲಿ ಲೇಖಕನ ಮನಸ್ಸಿನಲ್ಲಿ ಓದುಗರು ಇರುತ್ತಾರೆಯೇ, ಇರುವುದು ಸಾಧ್ಯವೇ ಎಂದು ವಿಚಾರಿಸಬಹುದು. ಬರೆಯುವ ಕಾಲದಲ್ಲಿ ಲೇಖಕ ನಿಜಕ್ಕೂ ತನ್ನ ಏಕಾಂತದಲ್ಲಿರುತ್ತಾನೆ; ಆದರೆ ಇದು ಶೆಲ್ಲಿ ಹೇಳುವಂಥ ‘ಪಾಪ್ಯುಲಸ್ ಸಾಲಿಟ್ಯೂಡ್’ ಅರ್ಥಾತ್ ಜನನಿಬಿಡ ಏಕಾಂತ. ಎಂದರೆ ಈ ಏಕಾಂತತೆಯಲ್ಲಿ ಲೇಖಕನ ಮನಸ್ಸೇನೂ ಖಾಲಿಯಾಗಿರುವುದಿಲ್ಲ, ಬದಲಿಗೆ ನೆನಪುಗಳಿಂದಲೂ, ಕಲ್ಪನೆಗಳಿಂದಲೂ, ವಿಚಾರಗಳಿಂದಲೂ ತುಂಬಿರುತ್ತದೆ. ಕತೆ ಹೆಚ್ಚಾಗಿ ತನಗೆ ಬೇಕಾದ್ದನ್ನು ಇವುಗಳಿಂದ ತೆಗೆದುಕೊಂಡು ಬೆಳೆಯುತ್ತದೆ; ಕೆಲವನ್ನು ತನ್ನ ದಾರಿಯಲ್ಲಿ ತಯಾರಿಸಿಕೊಳ್ಳುತ್ತದೆ. ಹೀಗೆಲ್ಲ ವ್ಯಾಖ್ಯಾನಿಸಬಹುದಾದರೂ ನಿಜಕ್ಕೂ ಇದೆಲ್ಲ ಹೇಗೆ ನಡೆಯುತ್ತದೆ ಎಂದು ಇದಮಿತ್ಥಂ ಆಗಿ ಹೇಳುವುದು ಯಾರಿಂದಲೂ ಸಾಧ್ಯವಿಲ್ಲ. ಇಂಥ ಸ್ಥಿತಿಯಲ್ಲಿ ಲೇಖಕನೇ ಓದುಗನೂ ಕೂಡಾ. ಅದೇ ರೀತಿ ಕೃತಿ ನಿರ್ಮಾಣವಾಗಿ ಅದನ್ನು ಓದುತ್ತಿರುವಾಗ ಓದುಗನೇ ಲೇಖಕನೂ ಆಗುತ್ತಾನೆ. ಇದು ಗಳಗನಾಥರು ಹೇಳುವ ಸತ್ಯ. ಇದರಲ್ಲಿ ಇನ್ನೊಂದು ಸಾಧ್ಯತೆಯಿದೆಯೆನಿಸುವುದಿಲ್ಲ. ಗಳಗನಾಥರು ಹೇಳುವಂತೆ, ತನ್ನ ಕೃತಿಯ ಗುಣಮಟ್ಟದ ಅಳತೆಗಾರ ಸ್ವತಃ ಲೇಖಕನೇ ಆಗಿರುತ್ತಾನೆ. ಎಂದರೆ, ಪ್ರತಿಯೊಬ್ಬರೂ ತಮ್ಮ ಶಕ್ತಿಗನುಸಾರ ಬರೆಯುತ್ತಾರೆ. ಪ್ರತಿಯೊಬ್ಬರೂ ತಮ್ಮಲ್ಲಿರುವ ಶ್ರೇಷ್ಠವಾದ್ದನ್ನೇ ಓದುಗರಿಗೆ ಕೊಡಬಯಸುತ್ತಾರೆ. ಗಳಗನಾಥರು ತಮ್ಮ ಲೇಖನದಲ್ಲಿ ಶಬರಿ ಮತ್ತು ಶ್ರೀರಾಮರ ಉದಾಹರಣೆಗಳನ್ನು ಕೊಡುತ್ತಾ, ಲೇಖಕನಾದ ತನ್ನನ್ನು ಶಬರಿಗೂ ಓದುಗನನ್ನು ಶ್ರೀರಾಮನಿಗೂ ಹೋಲಿಸುತ್ತಾರೆ. ಶಬರಿ ಶ್ರೀರಾಮನಿಗೆ ನೀಡಲೆಂದು ಬೋರೆ ಹಣ್ಣುಗಳನ್ನಾರಿಸುತ್ತ, ತಾನೇ ಕಚ್ಚಿನೋಡಿ ತನಗೆ ಕಹಿಯೆಂದು ಕಂಡದ್ದನ್ನು ಬಿಸಾಕುತ್ತಲೂ, ಕಂಡದ್ದನ್ನು ಆರಿಸುತ್ತಲೂ ಇದ್ದಳು. ಅವಳು ಹೀಗೆ ಆಯ್ದು ಕೊಟ್ಟುದನ್ನೇ ಶ್ರೀರಾಮ ಸೇವಿಸುವುದು. ಹೀಗೆ ಸ್ವತಃ ಲೇಖಕನಿಗೇ ತನ್ನದೇ ಮಾಪನದಲ್ಲಿ ಯಾವುದು ಉತ್ತಮ, ಯಾವುದು ಅಲ್ಲ ಎ೦ದು ಗೊತ್ತಿರುತ್ತದೆ ಎನ್ನುತ್ತಾರೆ ಗಳಗನಾಥರು. ಕೆಲವು ಸಲ ಯಾವುದೋ ಬಾಹ್ಯ ಒತ್ತಡಕ್ಕೆ ಮಣಿದು ತಾನು ಅಷ್ಟೊಂದು ಒಳ್ಳೆಯದೆಂದೆನಿಸದ ಕೃತಿಗಳನ್ನೂ ರಚಿಸಿರುತ್ತೇನೆ, ಹಾಗೂ ಓದುಗರು ಇಂಥವನ್ನು ಗಳಗನಾಥರು ಬರೆದುದು ಎಂಬುದಕ್ಕೆ ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬುದನ್ನು ಹೇಳುವುದಕ್ಕೂ ಅವರು ಮರೆಯುವುದಿಲ್ಲ. ಅವರ ಅಭಿಪ್ರಾಯದಲ್ಲಿ ಲೇಖಕನೊಬ್ಬನಿಂದ ಯಾವ ಮಟ್ಟದ ಕೃತಿಗಳನ್ನು ಓದುಗರು ಅಪೇಕ್ಷಿಸುತ್ತಾರೆ ಎನ್ನುವುದನ್ನೂ ಆಯಾ ಲೇಖಕನ ಕೃತಿಗಳೇ ನಿರ್ಧರಿಸುತ್ತವೆ. ಆದ್ದರಿಂದಲೇ ಒಬ್ಬ ಲೇಖಕನ ಯಾವ ಕೃತಿ ಯಾವುದಕ್ಕಿಂತ ಚೆನ್ನಾಗಿದೆ ಅಥವಾ ಆಗಿಲ್ಲ ಎಂಬ ವಿಮರ್ಶಾಪ್ರಜ್ಞೆ ಆತನ ಓದುಗರಲ್ಲಿ ಕಾಣಿಸುವುದು. ಹಾಗಿದ್ದರೂ ಒಳ್ಳೆಯ ಕೃತಿಗಳನ್ನೇ ಹೆಚ್ಚಾಗಿ ನೀಡುವ ಲೇಖಕರಿಂದ ಅವರು ಕೆಲವೊಮ್ಮೆ ಒಳ್ಳೆಯದಲ್ಲದ ಕೃತಿಗಳನ್ನು ಸ್ವೀಕರಿಸುವುದಕ್ಕೂ ತಯಾರಿರುತ್ತಾರೆ-ಇದು ತಮ್ಮ ಪ್ರೀತಿಯ ಲೇಖಕ ಬರೆದುದು ಎಂಬ ಕಾರಣಕ್ಕೆ! ಯಾಕೆಂದರೆ, ತಾವು ಈ ಲೇಖಕನೇ ತಮಗೆ ಹೇಳಿಕೊಟ್ಟ ಮಾಪನದಲ್ಲಿ ಈಗ ಅವನನ್ನು ಅಳೆಯುತ್ತಿದ್ದೇವೆ ಎನ್ನುವುದು ಅವರ ಮನಸ್ಸಿನಲ್ಲೆಲ್ಲೋ ಇರುತ್ತದೆ. ಓದುಗರಿಗೆ ತಮ್ಮ ಪ್ರಿಯ ಲೇಖಕರ ಕುರಿತಾಗಿ ಇರುವ ಆದರ ನಿಜಕ್ಕೂ ಅಪಾರವಾದುದು.

ಕವಿಗಳಾಗಲಿ ಕಾದಂಬರಿಕಾರರಾಗಲಿ ಹಲವು ಸಲ ಖಿನ್ನತೆಯಿಂದ ನರಳುವುದು ತಮ್ಮದೇ ಒಳಮನಸ್ಸಿನ ಗುಣಮಟ್ಟಕ್ಕೋ ನಿರೀಕ್ಷೆಗೋ ಸರಿಯಾಗಿ ತಾವು ಬರೆಯುತ್ತಿಲ್ಲ ಎನ್ನುವ ಕಾರಣಕ್ಕೆ. ಪ್ರತಿಯೊಬ್ಬ ಲೇಖಕನಿಗೂ ತಾನು ಅತಿ ಶ್ರೇಷ್ಠಮಟ್ಟದಲ್ಲಿ ಬರೆಯಬೇಕೆಂಬ ಆಕಾಂಕ್ಷೆಯಿರುತ್ತದೆ. ಆದರೆ ಅದು ಸಾಧ್ಯವಾಗದಿದ್ದಾಗ ಮುಂದೆ ಬರೆಯುವುದಕ್ಕೇ ಮನಸ್ಸಾಗದಿರಬಹುದು. ಇಂಥ ಆತ್ಮಪ್ರಜ್ಞೆಯಾದರೂ ಲೇಖಕನಿಗೆ ಅಗತ್ಯವೇ ಎಂಬ ಪ್ರಶ್ನೆಯೂ ಮುಖ್ಯವಾದುದು. ಯಾಕೆಂದರೆ ಕೃತಿನಿರ್ಮಾಣದ ಸಂದರ್ಭದಲ್ಲಿ ಆತ ಎಲ್ಲದರಿಂದಲೂ ಮುಕ್ತನಾಗಿರಬೇಕು-ಹಾಗಿದ್ದರೇ ಸೃಜನಶೀಲತೆಗೆ ಪೂರ್ತಿ ಕ್ರೀಡಾಂಗಣ ದೊರಕುವುದು. ಆದರೆ ಇದು ಒಂದು ಆದರ್ಶ ಮಾತ್ರ. ವಾಸ್ತವದಲ್ಲಿ ಇಂಥ ಸಂಪೂರ್ಣ ಸ್ವಾತಂತ್ಯ ಯಾರಿಗೂ ದಕ್ಕುವುದಿಲ್ಲ.

ಮಾತ್ರವಲ್ಲ, ವಾಸ್ತವ ಪ್ರಪಂಚದಲ್ಲಿ ಹಲವು ವೇಳೆ ಕೃತಿಕಾರನಿಗೂ ಓದುಗರಿಗೂ ಬಹಳ ಮಾನಸಿಕ ಅಂತರವಿರುವುದೂ ಸಾಧ್ಯ. ಆದ್ದರಿಂದಲೇ ಹಲವು ಸೃಜನಶೀಲ ರಚನೆಗಳು ಬರೆದು ಪ್ರಕಟವಾದೊಡನೆ ಪ್ರಸಿದ್ಧಿಗೆ ಬರದೆ ಇರುವುದು. ಸಾಹಿತ್ಯ ಜಗತ್ತಿನಲ್ಲಿ ಇದಕ್ಕೆ ಸಾಕಷ್ಟು ದೃಷ್ಟಾಂತಗಳಿವೆ. ಆಗಲೆಲ್ಲ ಇಂಥ ಕೃತಿಗಳನ್ನು ಓದುವುದಕ್ಕೆ ಜನರು ಪಕ್ವವಾಗಿಲ್ಲ ಎನ್ನುತ್ತೇವೆ. ಇದರ ಅರ್ಥ ಇಂಥ ಕೃತಿಗಳು ಅಪೇಕ್ಷಿಸುವ ಮನೋಧರ್ಮಕ್ಕೂ ಓದುಗರ ಸದ್ಯದ ಮನೋಧರ್ಮಕ್ಕೂ ಬಹಳ ಅಂತರವಿದೆ ಎಂದು. ಆದರೆ ಒಂದರ್ಥದಲ್ಲಿ ಈ ಅಂತರವೇ ಇಂಥ ಕೃತಿರಚನೆಗೂ ಕಾರಣವಲ್ಲವೇ ಎನ್ನುವ ಸೂಕ್ಷ್ಮವನ್ನೂ ನಾವು ಅರಿತುಕೊಳ್ಳಬೇಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೩
Next post ಕೋಳಿ

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…