ಕಂಪನಿ ಸವಾಲ್ : ಒಂದು ಓದು

ಕಂಪನಿ ಸವಾಲ್ : ಒಂದು ಓದು

ಸತೀಶ್ ಕುಲಕರ್ಣಿಯವರು ಚಳವಳಿಗಳಲ್ಲಿ ತೊಡಗಿ ಕೊಂಡವರು. ಸಿದ್ಧಾಂತ ಮತ್ತು ಸಂಸ್ಕೃತಿಯ ಉಳಿವಿಗಾಗಿ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಅವರದು. ತಾವು ನಂಬಿದ ತತ್ವಾದರ್ಶನಗಳನ್ನು ಬೀದಿನಾಟಕಗಳ ಮೂಲಕ ಹೇಳುವ ಪ್ರಯತ್ನಗಳನ್ನೂ ಅವರು ಮಾಡುತ್ತ ಬಂದಿದ್ದಾರೆ. ಈ ತಹತಹ, ಮನುಷ್ಯಪ್ರೇಮ ಜೀವನಶ್ರದ್ದೆಯೆಂದು ತಿಳಿಯೋಣ. ಕುವೆಂಪು ‘ಶ್ರೀ ರಾಮಾಯಣ ದರ್ಶನಂ’ದಲ್ಲಿ ‘ದುಃಖಿಗೆ ನೆರಂ ದುಃಖಿ’ ಎನ್ನುವ ಮಾತು ಬರುತ್ತದೆ. ಅದು ಬರಹಗಾರನೊಬ್ಬನ ಸಹಸ್ಪಂದನ ಭಾವವನ್ನು ಸೂಚಿಸುವ ಮಾತಿನಂತೆ ನನಗೆ ತೋರುತ್ತದೆ.

ಸತೀಶ ಕುಲಕರ್ಣಿಯವರ ಮೊದಲ ಸಂಕಲನ ‘ಒಡಲಾಳದ ಕಿಚ್ಚು’ ಬಂದಾಗ ಬಂಡಾಯದ ಏರುಕಾಲ. ‘ಖಡ್ಗವಾಗಲಿ ಕಾವ್ಯ’ ಎನ್ನುವ ಕೆಚ್ಚಿನಿಂದ ಬರೆಯುವ ಉಮೇದು ಆಗ. ಅಲ್ಲಿ ವಿಷಾದಯೋಗ ಅನುಭವಿಸಿ ಕಾಲ ಕ್ರಮೇಣ ಮತ್ತೆ ಗಾಂಧಿಗೆ ಒಲಿಯುವ ದಾರಿಯಲ್ಲಿ ‘ಗಾಂಧಿಗಿಡ’ ಸಂಕಲನ ಬಂದಿದೆ. ಖಡ್ಗವಿಲ್ಲದೆ ಸಾಧಿತವಾದ ಗಾಂಧೀಜಿಯವರ ತತ್ತ್ವಾದರ್ಶನಗಳನ್ನು ಸಮಾಧಾನದಿಂದ ನೋಡಬಲ್ಲ ಮನಃಸ್ಥಿತಿಯೊಂದು ಹುಟ್ಟುತ್ತಿದೆ ಎನ್ನುವುದರ ಸೂಚನೆ ಆದು. ಆದರೆ ವರ್ತಮಾನದ ಗತಿಯನ್ನು ನೋಡಿದರೆ, ಗಾಂಧಿಪ್ರಜ್ಞೆ ಜನಮಾನಸದಿಂದ ದೂರ ಸರಿಯುತ್ತಲಿದೆ. ಗಾಂಧಿಮಂತ್ರದ ಪಠಣವನ್ನು ಅಕ್ಕರೆಯಿಂದ ಮಾಡಿದರೂ, ಯಾಂತ್ರಿಕ ನಾಗರಿಕತೆಗೊಲಿದು ಕಂಪನಿಗಳ ಆರ್ಥಿಕ ಹೆಚ್ಚಳದ ಆಮಿಷಗಳಿಗೆ ಬಲಿಯಾಗಿರುವ ಜನಾಂಗಕ್ಕೆ ಗಾಂಧಿ ರುಚಿಸುತ್ತಿಲ್ಲ. ಸರಳತೆಯ ಬೆರಗು ಆಳಿದಿದೆ. ನವವಸಾಹತು ಶಾಹಿಯ ಆವರಣದಲ್ಲಿರುವ ಬದುಕಿನ ಸಂಕ್ರಮಣ ಘಟ್ಟವನ್ನು ಕವಿ ಮನಸ್ಸಿಗೆ ತಂದುಕೊಳ್ಳುತ್ತಾರೆ. ಅದರ ಪರಿಣಾಮವೇ ಅವರ ಇತ್ತೀಚಿನ ‘ಕಂಪನಿ ಸವಾಲ್’ ಕವನ ಸಂಕಲನ.

ಈಸ್ಟ್ ಇಂಡಿಯಾ ಕಂಪನಿಯು ಕಾಲವು ಮುಗಿಯಿತು ಎಂದು ೧೯೪೭ ರಲ್ಲಿ ದೇಶವು ನಿರಾಳಗೊಂಡ ಕಾಲ ಇದಲ್ಲ. ಈಸ್ಟ್ ಇಂಡಿಯಾ ಕಂಪನಿಯ ಜಾಗಕ್ಕೆ ಹತ್ತು ಹಲವು ಕಂಪನಿಗಳು ಅವತರಿಸಿವೆ. ಆ ಕಂಪನಿಗಳ ರಾಜ್ಯಭಾರವು ಆರಂಭವಾಗಿದೆ. ದೂರದಿಂದಲೇ ತಮ್ಮ ಅದೃಶ್ಯಹಸ್ತಗಳಿಂದ ನಿಯಂತ್ರಣ ಸಾಧಿಸುವ ಕಂಪನಿಗಳು ತುಂಬ ನಾಜೂಕಿನ ತಂತ್ರಗಾರಿಕೆ ರೂಪಿಸಿಕೊಂಡಿವೆ.

ವಸಾಹತುಶಾಹಿಯ ಕಾಲದಲ್ಲಿ ಹುಟ್ಟಿಕೊಂಡ ಸ್ವಾತಂತ್ರ್ಯ ಚಳವಳಿಯ ಅನೇಕ ಪ್ರತಿಭಟನೆಯ ಮಾರ್ಗಗಳನ್ನು ತೆರೆಯಿತಲ್ಲದೆ, ಜನಾಂಧೋಲನವಾಗಿಯು ಮಾರ್ಪಟ್ಟು, ವಸಾಹತುಶಾಹಿಯ ಆಳ್ವಿಕೆಯಲ್ಲಿ ವಿಸ್ಮೃತಿಗೊಂಡಿದ್ದ ಅರಿವನ್ನು ಜಾಗೃತಗೊಳಿಸಿತು. ಇಂದು ವಸಾಹತುಶಾಹಿಯ ಕಾಲವನ್ನು ದಾಟಿ ನವವಸಾಹತುಶಾಹಿಯ ಕಾಲವನ್ನು ಮುಟ್ಟಿರುವ ಸಂದರ್ಭದಲ್ಲಿ ಪ್ರತಿಭಟನೆಯ ದಾರಿಗಳು ಕಂಗಾಲಾಗಿವೆ. ಪ್ರತಿಭಟನೆಯ ಸೊಲ್ಲು ಕಂಪನಿಗಳಿಗೆ ಮುಟ್ಟದಾಗಿದೆ, ಕಾರ್ಯಸಾಧನೆಯ ತಂತ್ರಗಳಿಂದ ನಮ್ಮ ಅಂತಃ ಸತ್ವದವನ್ನು ಅಲ್ಲಾಡಿಸಿ ಬಲಗೊಳ್ಳುತ್ತಿರುವ ಶಕ್ತಿಯನ್ನು ಎದುರಿಸುವ ಮಾರ್ಗಗಳು ಯಾವುವು?- ‘ಚಾವಿ ಬೇಡ/ಚಕ್ರ ಬೇಡ/ಎಲ್ಲ ಗುಪ್ತ ವ್ಯವಹಾರ’-ಎಂದು ಕಂಪನಿಗಳ ಬಗ್ಗೆ ಬರೆಯುವ ಸತೀಶ ಕುಲಕರ್ಣೀಯವರೂ ಕಂಪನಿ ಸವಾಲಿಗೆ ಹೈರಾಣಾಗಿರುವ ಚೇತನವೇ.

ಚಳವಳಿಗಳಿಲ್ಲದ ಕಾಲ ಇದು. ಅಂದೋಲನಗಳೂ ಶಕ್ತಿಶಾಲಿಯಾಗುತ್ತಿಲ್ಲವೆಂಬ ಆತಂಕದ ಸಂದರ್ಭದಲ್ಲೇ. ಹಿಂಸೆಯ ಭಯಾನಕ ಸ್ವರೂಪವು ಸಾರ್ವಜನಿಕ ಬದುಕಿನಲ್ಲಿ ಕಾಣಿಸಿಕೊಂಡು, ಸಮುದಾಯದ ಬದುಕನ್ನೇ ಅಲ್ಲಾಡಿಸುತ್ತಿದೆ. ಹಿಂಸೆಯನ್ನು ಆನುಷಂಗಿಕವಾಗಿ ಪರಿಭಾವಿಸುವ ರೀತಿ ಆತಂಕ ಹುಟ್ಟಿಸುತ್ತಿದೆ. ಜನಪರ ಚಳವಳಿಗಳಲ್ಲಿ ಕೆಲವು ಜೀವಂತ ಇದ್ದರೂ, ಹಿಂಸೆಗೆ ಪ್ರತಿರೋಧ ಶಕ್ತಿಯಾಗಿ ನಿಂತಿಲ್ಲ. ಹಿಂಸೆಯ ನೆಲೆಗಳು ಇನ್ನಷ್ಟು ಬಲವಾಗುತ್ತ, ಅದೊಂದು ಹಿಂಪುಟಿತ ಶಕ್ತಿ (rebound force)ನೀಡುತ್ತಿವೆ. ಸಮುದಾಯದ ಪ್ರಜ್ಞೆಯಲ್ಲಿ ಸಂವೇದನೆಗಳು ಇಲ್ಲವಾಗುತ್ತ, ಸಹಸ್ಪಂದನದ ಭಾವವು ಮರೆಯಾಗುತ್ತಿದೆ. ಕಂಪನಿಗಳ ಆಗಮನದಿಂದ ಉಂಟಾದ ಪಲ್ಲಟಗಳಲ್ಲಿ ಆರ್ಥಿಕ ಹೆಚ್ಚಳವು ಸಾರ್ವಜನಿಕ ಜೀವನದಲ್ಲಿ ಸ್ಥಿತ್ಯಂತರಗಳನ್ನು ಉಂಟು ಮಾಡಿರುವಂತೆ, ಜೀವನ ಮೌಲ್ಯಗಳಲ್ಲಿಯು ಬದಲಾದಣೆಗಳನು ತಂದಿದೆ. ಇವೆಲ್ಲವೂ ಹಿಂಸೆಯ ಪರೋಕ್ಷ ನೆಲೆಗಳೇ ಆಗಿವೆ. ‘ಕಂಪನಿ ಸವಾಲ್’ ಸಂಕಲನದ ಹಲವು ಕವಿತೆಗಳು ಈ ಮೂಲಭೂತ ಚರ್ಚೆಗೆ ದಾರಿ ಮಾಡಿಕೊಡುತ್ತವೆ.

ಕಾಲದ ಪ್ರಶ್ನೆಯನ್ನು ಎತ್ತಿಕೊಳ್ಳುವ ಸತೀಶರಿಗೆ ಸಂಕ್ರಮಣದ ಕಾಲವು ಬಾಧಿಸುತ್ತದೆ. ‘ತೊಟ್ಟಿಕ್ಕುವ ಕಾಲ’, ‘ಹಿಂದೆ ಸರಿದು ಮುಂದೆ ಹರಿವ ಕಾಲ’, ನವವಸಾಹತುಶಾಹಿಯ ಆವರಣದ ಕಾಲ ಇದಾಗಿದೆ. ಕಂಪನಿಯ ಮಾಯಾಜಾಲಕ್ಕೆ ಮರುಳಾದ ಸುಶಿಕ್ಷಿತ ಇಂಗ್ಲಿಷ್ ಬಲ್ಲ ವರ್ಗವೊಂದು ಇಲ್ಲಿ ಸೃಷ್ಟಿಯಾಗಿದೆ.

ಕಂಪನಿ ಮೋಹದ ಬಗ್ಗೆ ಆತಂಕ ವ್ಯಕ್ತಪಡಿಸುವ ಗುಂಪಿನ ದನಿಯು ಕ್ಷೀಣವಾಗಿದೆ. ಪಶ್ಚಿಮಮುಖಿ ಧೋರಣೆಗಳನ್ನು ಖಂಡಿಸುವವರು. ಸಿನಿಕರಂತೆಯೂ, ಬೊಗಳೆ ದಾಸರಂತೆಯೂ ಇನ್ನೊಂದು ಗುಂಪಿಗೆ ಕಾಣತೊಡಗಿದ್ದಾರೆ. ಮಾಯೆ ಮೆಟ್ಟಿದ ಜನರ ಅಮೆರಿಕಾ ವಲಸೆ ಬಗ್ಗೆ ಕವಿ ಹೇಳುತ್ತಾರೆ.
ಒಬ್ಬ ಇನ್ನೊಬ್ಬ ಮಗದೊಬ್ಬ
ಅಮರಿಕೊಳ್ಳಲು ಹೊರಟಿದ್ದಾರೆ ಅಮೇರಿಕೆ

ಈ ವಿಸ್ಮೃತಿಯ ನಡೆ, ಸಂಕ್ರಮಣದ ಕಾಲ ಎಲ್ಲವನ್ನೂ ಸೂಚಿಸುತ್ತ ಸತೀಶರು ಪ್ರಶ್ನಾರ್ಥಕ ನೆಲೆಯಲ್ಲಿ ಆವನ್ನು ನಿಲ್ಲಿಸುತ್ತಾರೆ. ಕವಿಯಾದವನು ಇಂಥ ಸಂದರ್ಭದಲ್ಲಿ ಏನು ಮಾಡಬಹುದು? ಇದು ಅವರನ್ನು ಬಾಧಿಸುವ ಪ್ರಶ್ನೆ.

ಈ ಸಂಕಲನವು ಎತ್ತುವ ಇನ್ನೊಂದು ಪ್ರಶ್ನೆ ಹಿಂಸೆಯದು. ಆಧುನಿಕ ಕಾಲದ ಹಿಂಸೆಯು ಸಂಕೀರ್ಣಕಥನ ರೂಪದ್ದಾಗಿದೆ. ಸಾಮುದಾಯಿಕ ನೆಲೆಯಲ್ಲಿ ಆವಿರ್ಭವಿಸುತ್ತಿರುವ ಅಕಾರಣ ಹಿಂಸೆಯ ಬಾಧೆಯು ಸರಳ ಕ್ರಮಗಳಿಂದ ಅನಾವರಣಗೊಳ್ಳುವಂಥಲ್ಲ. ಒಂದು ಕಡೆ ಸಮೂಹ ಮಾಧ್ಯಮಗಳು ಹಿಂಸೆಯನ್ನು ಕೇಂದ್ರೀಕರಿಸಿ ಚಿತ್ರಿಸುವ/ಬರೆಯುವ ಕಥಾನಕಗಳು ಉಂಟುಮಾಡುವ ಪರಿಣಾಮಗಳು ಸಹಸ್ಪಂದನದ ಆಶಯಕ್ಕಿಂತ ರಂಜನೆಗೆ ದಾರಿ ಮಾಡಿಕೊಡುತ್ತಿವೆ ಮತ್ತು ಹಿಂಸೆಯನ್ನು ಆನಂದಿಸುವ ವಿಕೃತಿಯ ಬೆಳವಣಿಗೆಗೂ ಕಾರಣವಾಗುತ್ತಿವೆ. ಇನ್ನೊಂದು ಕಡೆ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಪ್ರಕಟವಾಗುವ ಹಿಂಸೆ ಡಾಳಾಗಿ ತೋರುತ್ತ ಆಧುನಿಕ ಹಿಂಸೆಯ ಬೇರುಗಳು ಶಕ್ತಿಕೇಂದ್ರಗಳಲ್ಲಿವೆ ಎನ್ನುವ ಸೂಚನೆ ನೀಡುತ್ತಿವೆ. ಈಗಾಗಲೇ ಪ್ರಸ್ತಾಪಿಸಿದಂತೆ ಯಾಂತ್ರಿಕ ನಾಗರಿಕತೆಯ ಪರಿಣಾಮಗಳಲ್ಲಿ ಹಿಂಸೆ ಆತ್ಯಂತಿಕವೂ, ಅನಿವಾರ್ಯವೂ ಆಗಿಬಿಟ್ಟಿದೆ. ಹಿಂಸೆ ಎನ್ನುವುದು ರಂಜನೆಯ ಕ್ರಿಯೆಯಾಗಿ ಮಾರ್ಪಟ್ಟು ಪರಿಣಾಮ ಸಹಸ್ಪಂದನ ಭಾವವು ಉದ್ದೀಪನಗೊಳ್ಳುತ್ತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಸತೀಶಕುಲಕರ್ಣಿಯವರ ಕವನಗಳಲ್ಲಿ ಹಿಂಸೆಯ ಪರಿಣಾಮಗಳ ಅಂಶಗಳನ್ನು ನೋಡಬೇಕು. ಹಿಂಸೆಯ ವೈನೋದಿಕಗುಣ, ಹಿಂಸೆಯ ಮೇಲಾಟ-ಇವು ಬಾಧಿಸುವಂಥವು. ಸತೀಶರಲ್ಲಿ ತಾರ್ಕಿಕ ಅಂಶಗಳೇ ಮೇಲಾಗಿವೆ. ಹಿಂಸೆಯನ್ನು ಮಂಡಿಸುವುದರಲ್ಲಿ ಸಹಸ್ಪಂದನದ ಆಶಯ ಇದೆ. ಆದರೆ ಹಿಂಸೆಯ ನೆಲೆ ತಾತ್ವಿಕ ರೂಪದಲ್ಲಿ ಬರುವುದಿಲ್ಲ. ‘ಬೇಟೆ’ ಕವನದಲ್ಲಿ ಬೆಕ್ಕೊಂದು ವಿಲವಿಲ ಒದ್ದಾಡುವ ಇಣಚಿ’ಯನ್ನು ಬಾಯಲ್ಲಿ ಕಚ್ಚಿ ಹಿಡಿದಿದೆ.

ಅವರ ಮನಸ್ಸು ಕೇಳುತ್ತದೆ. ಯಾವುದು ಗೆಲ್ಲಬೇಕು?- ಬೆಕ್ಕೋ, ಇಣಚಿಯೋ ಎಂದು. ಬೆಕ್ಕಿನ ಸೋಲು ಅವರ ಹೃದಯ ನಿರೀಕ್ಷಿಸುವ ಸುಗತಿ. ಅದಕ್ಕೇ ‘ದಮನ ಗೆಲ್ಲುವುದೇ’ ಎಂದು ಆತಂಕಗೊಂಡ ಅವರು ‘ಕವಿತೆ ನಿಲ್ಲಿಸುವೆ ನಾನಿಲ್ಲಿಗೆ’ ಎನ್ನುತ್ತಾರೆ. ಕವಿನ್ಯಾಯ ಸಲ್ಲುವುದು ದುರ್ಬಲರಿಗೆ, ಶೋಷಿತರಿಗೆ ಎನ್ನುವುದು ಸತ್ಯ. ಆದರೆ ಅದಕ್ಕೂ ಮೀರಿ ವಾಸ್ತವದಲ್ಲಿ ಈ ನ್ಯಾಯ ಸಿಗುವ ಬಗ್ಗೆ ಅನುಮಾನ, ಆತಂಕಗಳಿವೆ.

‘ಯುದ್ಧ ಶುರು ಆತೇನು’ ಎಂದು ಪ್ರಾರುಭವಾಗುವ ಕವಿತೆ ಯುದ್ಧದ ರಂಜನೆಗೆ ಕಾದು ಕೂತವರನ್ನು ವ್ಯಂಗ್ಯದಿಂದ ನೋಡುತ್ತದೆ. ಸಿನಿಮಾ ಟಿಕೆಟ್ ತೆಗೆದುಕೊಂಡು ಆತುರಾತುರವಾಗಿ ಒಳಗೆ ನುಗ್ಗುವವರು. ‘ಸಿನಿಮಾ ಶುರು ಆಯ್ತಾ?’ ಎಂದು ಕಾತುರದಿಂದ ಕೇಳುವಂತೆ ಇದೆ ಅವರ ಪ್ರಶ್ನೆ. ‘ಬಡಬಗ್ಗರ ಅಗ್ಗದ ಜೀವಂತಗೋರಿಗಳ ಮೇಲೆ/ಜಗತ್ತಿನ ಈ ಬಯಕೆ ಸವಾರಿ ಮಾಡುತ್ತಿದೆ’. ಯುದ್ದದ ವರ್ಣನೆ ಮುಗಿಯುವಂಥದ್ದಲ್ಲ. ಕೊನೆಗೆ ಕವಿ ಷರಾ ಬರೆಯುತ್ತಾರೆ-‘ಯುದ್ದ ಒಂದು ಮಂತ್ರ/ ಒಂದು ಕುತಂತ್ರ’ ಎಂದು. ‘ಯಂತ್ರ’ ಮತ್ತು ‘ಕುತಂತ್ರ’ ಪ್ರಾಸ ಪದಗಳಷ್ಟೇ ಅಲ್ಲ. ಯಂತ್ರದ ರೂಕ್ಷತೆ. ನಿರ್ದಾಕ್ಷಿಣ್ಯ ರೀತಿ ಕುತಂತ್ರದೊಂದಿಗೆ ಮಿಳಿತವಾಗುವ ದ್ವನಿಯಿದೆ ಅಲ್ಲಿ. ಪಂಜಾಬಿನ ಹುಡುಗಿ ಜ್ಯೋತಿಬಾಲ ‘ಮೈ ಖುಶ್ ಹ್ಞೂ’ ಎನ್ನುತ್ತಾಳಾದರೂ, ಭಯಾನಕ ವಾಸ್ತವಕ್ಕೆ ಕರೆದೊಯುತ್ತಾಳೆ. ಇಲ್ಲೆಲ್ಲ ಹಿಂಸೆಯ ಚಿತ್ರಣವನ್ನು ಕವಿ ಕೊಡುತ್ತಾರೆ. ಆದರೆ ಕಾವ್ಯಾತ್ಮಕ ನೆಲೆಯಲ್ಲಿ ಒಳ್ಳೆಯ ಕವನ ಎನ್ನಿಸುವುದು- ‘ಮಹಾಭಾರತದ ಆ ಹಕ್ಕಿ’-ಕವಿತೆ. ಹಿಂಸೆಯ ತಾತ್ವಿಕ ರೂಪ ತೋರುತ್ತ ಅಕಾರಣ ಹಿಂಸೆಯನ್ನು ಪ್ರಶ್ನಿಸುವ ಕವಿತೆ ಅದು. ದ್ರೋಣಾಚಾರ್ಯರು ತಮ್ಮ ಶಿಷ್ಯರಿಗೆ ಗುರಿ ಕಲಿಸಲೆಂದು ಹಕ್ಕಿಯ ಕೊರಳಿಗೆ ಗುರಿಯಿಡಲು ಹೇಳುತ್ತಾರೆ. ಅರ್ಜುನ ಹಕ್ಕಿಯ ಕೊರಳಿಗೆ ಗುರಿಯಿಡುತ್ತಾನೆ. ಇಡೀ ಸನ್ನಿವೇಶವು ವೀರ್ಯ, ಶೌರ್ಯ ಬೋಧಿಯಾಗುವಂತದ್ದು. ಇದರ ಹಿನ್ನೆಲೆಯಲ್ಲಿ ನೋಡಿದಾಗ ಹಿಂಸೆ ಅನುಷಂಗಿಕ ಎನ್ನಿಸುವಂಥದ್ದು. ಆದರೆ ಕವಿ ಹಿಂಸೆಯನ್ನು ಗ್ರಹಿಸುತ್ತಾರೆ. ಅಕಾರಣ ಹಿಂಸೆ, ಜೀವಹಾನಿಯನ್ನು ಆ ಸನ್ನಿವೇಶ ಕಾಣುತ್ತದೆ. ಪ್ರಾಣಕ್ಕೆ ದೃಷ್ಟಿಯಿಟ್ಟು ಕುಳಿತ ಅರ್ಜುನ, ಅವನ ಬಾಣದ ಅರಿವಿರದೆ ಕುಳಿತ ಹಕ್ಕಿ -‘ಮರಣಮಹಾಯಾಗ’ಕ್ಕೆ ಮುನ್ನುಡಿಯಂತೆ ಕಾಣುತ್ತದೆ.

ಆತ್ಮಬಲದ ಉಕ್ಕು ಧಿಮಾಕಿನೆದುರು
ಅಮಾಯಕ, ಅನನ್ಯ ಸಹಜ ನಜರು

ತೇಜಸ್ವಿಯವರ ‘ಕರ್ವಾಲೋ’ ಕಾದಂಬರಿಯಲ್ಲಿನ ಪ್ರಸಂಗವೊಂದು ಇಲ್ಲಿ ನೆನಪಾಗುತ್ತದೆ. ಬಿರ್ಯಾನಿ ಕರಿಯಪ್ಪ ಕೊಕ್ಕಾನಕ್ಕಿಯನ್ನು ಹಿಡಿಯಲು ಹೋದಾಗ ಕರ್ವಾಲೋ ಪ್ರತಿಕ್ರಿಯೆ ಹೀಗಿದೆ : ‘ಹೆಣ್ಣು ಹಕ್ಕಿ ಗೂಡಿನಲ್ಲಿ ಮರಿಗಳೊಂದಿಗೆ ಗಂಡುಹಕ್ಕಿ ತರುವ ಆಹಾರಕ್ಕಾಗಿ ಕಾಯುತ್ತಾ ಇರುತ್ತದೆ. ಅಕಸ್ಮಾತ್ ಗಂಡುಹಕ್ಕಿ ಸತ್ತರೆ, ಹೆಣ್ಣುಹಕ್ಕಿಯೂ ಆಹಾರವಿಲ್ಲದೆ ಅಲ್ಲೇ ಸೊರಗಿ, ತನ್ನ ಮರಿಗಳೊಂದಿಗೆ ಪ್ರಾಣ ಕಳೆದುಕೊಳ್ಳುತ್ತದೆ. ಇದೆಲ್ಲಾ ಮನಸ್ಸಿಗೆ ಬಂದು ಒಮ್ಮೆಲ್ಲೇ ಕೂಗಿದೆ’ -ಎಂದು. ಆಗ ನಿರೂಪಕ ತನ್ನೊಳಗೆ ಅಂದುಕೊಳ್ಳುತ್ತಾನೆ: “ಹೆಂಡಿರು ಮಕ್ಕಳನ್ನೆಲ್ಲ ಮನೆಯಲ್ಲಿ ಬಿಟ್ಟು ಗೊತ್ತುಗುರಿಯಿಲ್ಲದಂತೆ ಅರಣ್ಯವಾಸಿಗಳಾಗಿದ್ದ ನಮಗೆ ಕರ್ವಾಲೋರ ಚರ್ಯೆಯಲ್ಲಿ ಯಾವುದೋ ಮಾನವೀಯತೆ ಮಿನುಗುತ್ತಿದ್ದುದು ಕಂಡಿತು” (ಪು. ೧೫೪/೧೫೫, ಕರ್ವಾಲೋ) ಇಡೀ ಸನ್ನಿವೇಶವು ಸಹಸ್ಪಂದನಕ್ಕೆ ರೂಪಕದಂತಿದೆ. ಹಿಂಸೆಯ ಚರಮಮಾರ್ಗಳಿಗಿಂತ ಬದಲಿ ಮಾರ್ಗಗಳ ಬಗೆಗೆ ಆಸಕ್ತಿ ವಹಿಸುವ ಸತೀಶರಲ್ಲೂ ಈ ಮಾನವೀಯ ಸಹಸ್ಪಂದನ ಮಾದರಿಯ ಅಂಶ ಇದೆ.

ಹಿಂಸೆಯ ತಾರ್ಕಿಕ ಬಿಕ್ಕಟ್ಟುಗಳನ್ನು ದಾಟುವ ಕ್ರಿಯೆ ಕಠಿಣವೋ ಸರಳವೋ ತಿಳಿಯದ ಸಂದಿಗ್ಧತೆ ಗಾಂಧಿಮಾರ್ಗಳನ್ನು ಸೂಚಿಸುತ್ತವೆಯೇನೋ ಅನ್ನಿಸುತ್ತದೆ. ಶಕ್ತಿಯ ವಿಕಾರವನ್ನು ನಿರಪೇಕ್ಷತೆಯಿಂದ ಗೆಲ್ಲುವುದು ಗಾಂಧಿಯ ಮಾರ್ಗ. ಉಪವಾಸ ಅಹಿಂಸೆಗಳೆಂಬ ಸಾತ್ವಿಕ ಅಸ್ತ್ರಗಳು ಇದಕ್ಕೆ ಒದಗಿದಂಥವು. ಮುಖ್ಯವಾಗಿ ಇವು ಗಾಂಧಿಯವರಿಗೆ ದೊರೆತಿದ್ದು ಸಹಜ ದೇಸಿಯ ಮೂಲಗಳಿಂದ ಮಾನವೀಯತೆಯ ತಾಯಿಬೇರು ನೆಲದ ಸತ್ವದಲ್ಲಿದೆ ಎಂದು ಕವಿ ಕೂಡ ನಂಬಿದಂತಿದೆ. ಆಧುನಿಕತೆಯು ಸೃಷ್ಟಿಸುವ ಹಿಂಸೆ, ಯಾಂತ್ರಿಕ ಸವಾಲುಗಳು ಪೂರ್ವಾನ್ವೇಷಣೆಯ ಪರಿಕ್ರಮಗಳಿಂದ ಸಾಧ್ಯವಾಗಬಹುದು ಎನ್ನುವ ಆಶಯ ಇಲ್ಲಿ ವ್ಯಕ್ತವಾಗುತ್ತದೆ.

ಎಲ್ಲಿಯೋ ದೂರದಲ್ಲಿ
ದಿಕ್ಕು ಬಿರಿದರಳಿ
ಕೆಂಗಚ್ಛ ಬಿಚ್ಚುತ್ತಿದೆ
ದೂರದ ಆ ತೀರದ
ಪಶ್ಚಿಮದ
ಮದ ಇಳಿದು
ಪೂರ್ವಾಪರ ಕಾಣುತಿದೆ.

‘ಖಡ್ಗವಾಗಲಿ ಕಾವ್ಯ’ ಎನ್ನುವ ಘೋಷಣೆಯಿಂದ ಸ್ಪೂರ್ತಿಗೊಂಡು ಬರೆದ ಸತೀಶಕುಲಕರ್ಣಿಯವರು ಖಡ್ಗಕ್ಕೆ ಹೇಸಿ, ಹಿಂಸೆಯನ್ನು ಕಾವ್ಯಾತ್ಮಕ ನೆಲೆಯಲ್ಲಿಯೂ ನಿರಾಕರಿಸುವ ಹಂತ ತಲುಪಿದ್ದಾರೆ. ಪೂರ್ವಾಪರ ಅವರಿಗೀಗ ಗುರಿಯಾಗುತ್ತಿದೆ. ಅವರ ಚಲನೆ ಧನಾತ್ಮಕ ಎನ್ನಿಸಿದರೂ ಅವರು ತಮ್ಮ ಸಂಕಲನದಲ್ಲಿ ಎತ್ತಿಕೊಂಡ ಸಂದಿಗ್ದ ವಿಷಯಗಳು ಪೂರ್ವಾಪರವೆಂಬ ಉಟೋಪಿಯಾದಲ್ಲಿ ವಿರಮಿಸಲು ಆತುರವಾಗಿದ್ದಂತೆ ಕಾಣುತ್ತದೆ. ಸ್ಮೃತಿಯಲ್ಲಿ ಅಡಗಿರುವ ಪೂರ್ವಾಪರವು ವಾಸ್ತವದಲ್ಲಿ ಬರುವಾಗ ಮುಕ್ಕಾಗದೇ ಬರುವುದು ಸಾಧ್ಯವೇ ಎಂಬುದನ್ನು ಅವರು ಕೇಳಿಕೊಳ್ಳಬೇಕು. ‘ಒಮ್ಮೆ ದಾಟಿದ ನದಿಯ ಮತ್ತೊಮ್ಮೆ ದಾಟಲಾರೆ’ ಎನ್ನುವ ಬುದ್ದನ ಮಾತು ನೆನೆಯುವುದಾದರೆ ಇತಿಹಾಸದ ಗತಿ ಬದಲಾಗುವ ಸತತ ಹಂತಗಳಲ್ಲಿ ಇರುತ್ತದೆ. ದೇಸಿಯ ನೆಲೆಗಳ ಕಡೆ ಕವಿ ಆಶಾದಾಯಕವಾಗಿ ನೋಡಿದರೂ, ಈ ಶೋಧವು ಎಚ್ಚರಿಕೆಯಿಂದಲೇ ಆಗಬೇಕಾಗಿದೆ. ಅಲ್ಲದೆ ಪೂರ್ವ ಮತ್ತು ಪಶ್ಚಿಮಗಳೆಂಬುದನ್ನು ದ್ವಂದ್ವಾತ್ಮಕವಾಗಿ ನಿಲ್ಲಿಸುವಾಗ ಪೂರ್ವದ ಗ್ರಹಿಕೆ ಪೂರ್ವಾಗ್ರಹದಿಂದ ಕೂಡಿದ್ದರೆ ತಾರ್ಕಿಕ ಅಂತ್ಯವೂ ಸಾಧುವಲ್ಲ ಎನ್ನುವುದನ್ನು ಗಮನಿಸಬೇಕು. ಹೋರಾಟದ ಅಂತಸತ್ತ್ವಳಿರುವುದು ದ್ವಂದಾತ್ಮಕ ನೆಲೆಗಳಲ್ಲಿ ಎನ್ನುವುದನ್ನು ಮರೆಯದಿರೋಣ. ಆದರೆ ಹೋರಾಟವು ಕಾವ್ಯದ ನೆಲೆಯಲ್ಲಿ ವೈರುಧ್ಯಗಳನ್ನು ಹೊಮ್ಮಸಿ, ದ್ವನ್ಯಾರ್ಥಗಳನ್ನು ವಿಸ್ತರಿಸುವ ಸಾಧ್ಯಗಳನ್ನೊಳಗೊಂಡಾಗ ಹೆಚ್ಚು ಅರ್ಥಪೂರ್ಣವಾಗುತ್ತದೆ. ಅಲ್ಲಿಯವರೆಗೂ

ಕನಸುಗಾರರು ಬರಲಿ,
ನಾವು ಸೋತ ಆಟವನ್ನು
ಗೆದ್ದು ತರಲಿ ಅವರು
(ನಮ್ಮಿಬ್ಬರ ಹಾಡು)
ಎನ್ನುವಂತಹ ಸಾಲುಗಳು ಆಶಯಗಳಾಗಿ ಮಾತ್ರ ಉಳಿಯುತ್ತವೆ.
(ಪುಸ್ತಕ ಲೋಕ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನಯ ಪ್ರೀತಿಯನು
Next post ನೀನು

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

cheap jordans|wholesale air max|wholesale jordans|wholesale jewelry|wholesale jerseys