ಏನು ಪೇಳಿದನಮ್ಮ ನನ್ನಯ ಪ್ರಿಯನು
ಏನು ಸಂದೇಶವ ನೀ ತಂದೆ ಸಖಿಯೆ || ಪ ||

ಏತಕೆ ಬಾರನೋ ಪ್ರಾಣಪ್ರಿಯನಮ್ಮ
ಕಾತರಿಸಿದೆ ಜೀವಾ ತಾಳಲಾರೆನಮ್ಮ
ಯಾತನೆ ತಾಳೆನು ಮುಳ್ಳ ಮೇಲಿನ ಬಾಳು
ಆತನ ಮಾತೇನು ಪೇಳೆ ಸಖಿ || ೧ ||

ಕಣ್ಣಲಿ ಅವನದೆ ರೂಪವು ಕುಣಿದಿದೆ
ಚೆನ್ನಿಗ ಚೆಲುವಾ ಚೆನ್ನಾಗಿರುವನೆ
ಕಿವಿಯಲಿ ಅವನದೆ ದನಿ ಮಾರ್ದನಿಸಿದೆ
ಸವಿ ನೆನಪೊಂದೇ ಆಸರೆ ನನಗೆ || ೨ ||

ತೀರದ ವಿರಹದಿ ಹಗಲನು ಕಳೆವೆ
ತಾರೆಗಳೆಣಿಸುತ ಇರುಳನು ನೂಕುವೆ
ತೋರದೆ ಮೊಗವನು ಇನ್ನೇಕಿರುವನು
ಬಾರದೆ ನನ್ನೆಡೆ ಏತಕೆ ಕೊಲುವನು || ೩ ||
*****