ಗೀಜಗನ ಗೂಡೊಳಗೆ

ಗೀಜಗನ ಗೂಡೊಳಗೆ

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,
ಮನೆಯ ಪಕ್ಕದ ಮುಳ್ಳು ಕಂಠಿಗಿಡದ ಎತ್ತರದ ಕೊಂಬೆಯಲ್ಲಿ ಗೀಜಗವೊಂದು ಗೂಡು ಕಟ್ಟಲಾರಂಭಿಸಿದೆ. ಮೊದಲಿಗೆ ಎಲ್ಲಿಂದಲೋ ಒಂದಿಷ್ಟು ಹುಲ್ಲು, ನಾರು ತಂದು ಹಾಕಿಕೊಳ್ಳುತ್ತದೆ. ನಿಧಾನಕ್ಕೆ ಗೂಡು ನಿರ್ಮಾಣಗೊಳ್ಳಲಾರಂಭಿಸುತ್ತದೆ.

ಗೀಜಗಕ್ಕೆ “ಇಂಜಿನೀಯರ್ ಹಕ್ಕಿ” ಎಂದೂ ಹೆಸರಿದೆಯಂತೆ. ನಿಜಕ್ಕೂ ಒಂದೊಂದು ಹುಲ್ಲು ಎಳಸನ್ನೂ ಸೂಕ್ಷ್ಮವಾಗಿ ಹೆಣೆಯುವ ಅದರ ಕಲೆಗಾರಿಕೆಗೆ ಗೀಜಗವೇ ಸಾಟಿ. ಚಾಪೆ ಹೆಣೆದಂತೆ ಒತ್ತೊತ್ತಾಗಿ ಪದರಗಳಮ್ನ ಹೆಣೆದು ಗೋಡೆಗಳನ್ನು ಸೃಷ್ಟಿಸಿ ಗಿಡಕ್ಕೆ ತೂಗುಬಿದ್ದಂತೆ ಗೂಡು ತಯಾರಾಗುತ್ತದೆ. ಗೂಡಿನ ಕೆಳಭಾಗದಲ್ಲಿ ಒಳಹೋಗಲೆಂದು ಪುಟ್ಟ ಪ್ರವೇಶದ್ವಾರ. ಉದ್ದಕ್ಕೆ ಕೊಳವೆಯಾಕಾರಕ್ಕೆ ಮೂಡಿದ ಆ ಪ್ರವೇಶದ್ವಾರದಿಂದ ಗೂಡಿನೊಳಗೆ ಒಂದೂ ಗುಟ್ಟು ಹೊರಬರುವಂತಿಲ್ಲ! ಗೂಡು ಕಟ್ಟಿದ ಮಾರನೇ ದಿನವೆಲ್ಲಾ ಗೀಜಗ ತನ್ನ ಕೊಕ್ಕಿನಿಂದ ಎಲ್ಲಿಂದಲೋ ಹಸಿಮಣ್ಣು ತಂದು ಗೂಡಿನೊಳಗೆ ಹೋಗುತ್ತಿತ್ತು. ಮಣ್ಣು ಏಕಿರಬಹುದು? ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಮುಸ್ಸಂಜೆ ಹೊತ್ತಿನಲ್ಲಿ ಒಂದೆರಡು ಮಿಂಚು ಹುಳುಗಳನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೀಜಗ ಗೂಡು ಹೊಕ್ಕಿದ್ದು ಕಂಡಿತು. ಇದೂ ಯಾತಕ್ಕೆಂದು ತಿಳಿಯಲಿಲ್ಲ. ಅದರ ಆಹಾರವಿರಬಹುದೇನೋ ಎಂದುಕೊಂಡರೂ, ಅದರ ಆಹಾರವಾಗಿದ್ದರೆ ಸಿಕ್ಕಲ್ಲೇ ತಿಂದು
ಮುಗಿಸಿಬಿಡುತ್ತಿತ್ತು. ಮಾನವರಂತೆ ಮನೆಗೆ ತಂದು ಪರಿಷ್ಕರಿಸಿ ತಿನ್ನಬೇಕೆಂದೇನಿಲ್ಲವಲ್ಲಾ ಎಂದೂ ಅನ್ನಿಸಿತು.

ಮಾರನೆಯ ದಿನ ಬೆಳಗಾಗುವುದರಲ್ಲಿ ಒಂದಿದ್ದ ಗೀಜಗ ಎರಡಾಗಿವೆ. ಇನ್ನೊಂದು ಗೀಜಗ ಹೆಣ್ಣಿರಬಹುದೆಂದು ಊಹಿಸಿದೆ. ಸ್ವಲ್ಪದಿನಗಳವರೆಗೂ ಹೆಣ್ಣು ಗೀಜಗ ಗೂಡಿನಿಂದ ಹೊರಗೇ ಬರಲಿಲ್ಲ. ಗಂಡು ಗೀಜಗವೇ ಹೆಣ್ಣಿಗೂ ಆಹಾರ ತಂದುಕೊಡುತ್ತಿತ್ತೇನೋ?  ಬಹುಶಃ ಹೆಣ್ಣು ಗೀಜಗ ಮೊಟ್ಟೆ ಇಟ್ಟಿರಬಹುದೇ? ಊಹೆ ನಿಜವಾಗಿತ್ತು. ಒಂದು ಬೆಳಗ್ಗೆ ಗೂಡಿನಿಂದ ಮರಿ ಗೀಜಗಗಳ ಕಿಚಿಪಿಚಿ ಕೇಳಲಾರಂಭಿಸಿತ್ತು. ಗಂಡು ಹೆಣ್ಣು ಗೀಜಗಗಳೆರಡು ಎಲ್ಲಿಗೆಲ್ಲಿಗೋ ಹಾರಿ ಹೋಗಿ ಆಹಾರ ತಂದು ಮರಿ ಗೀಜಗಗಳಿಗೆ ತುತ್ತುಣಿಸುವ ದೃಶ್ಯ ಮನೋಹರವಾಗಿತ್ತು. ತಿಂದಷ್ಟು ಆಹಾರಕ್ಕಾಗಿ ಅರಚುವ ಅವುಗಳ ಹೊಟ್ಟೆ ಬಾಕತನ ಆಶ್ಚರ್ಯ ತರಿಸುತ್ತಿತ್ತು.

ಕೆಲ ದಿನಗಳ ನಂತರ, ಸಂಸಾರ ಸಮೇತ ಗೀಜಗ ಅದೆಲ್ಲಿಗೆ ಹಾರಿ ಹೋಯ್ತೋ! ಮತ್ತೆ ಹಿಂದಿರುಗಬಹುದೆಂದು ಕೆಲ ದಿನ ಕಾಯ್ದು ಕೊನೆಗೊಮ್ಮೆ ಗೀಜಗನ ಗೂಡಿನ ಒಳಗನ್ನು ನೋಡುವ ಕುತೂಹಲದಿಂದ ಗೂಡು ಕಿತ್ತು ತಂದು ಒಳಗೆಲ್ಲಾ ಪರೀಕ್ಷಿಸಿದರೆ ಗೂಡಿನ ಒಳಭಾಗದಲ್ಲಿ ಮೆತ್ತಿದ್ದ ಹಸಿಮಣ್ಣು ಒಣಗಿ ನಿಂತಿದೆ. ಜೊತೆಗೆ ಆ ಮಣ್ಣಿನ ಮೇಲೆ ಮೆತ್ತಿಕೊಂಡು ಸತ್ತ ಮಿಂಚಿನ ಹುಳುಗಳು! ಅಬ್ಬಾ ಗೀಜಗನ ಜಾಣ್ಮೆಯೇ! ತನ್ನ ಮನೆಗೆ ಬೆಳಕು ಮಾಡಿಕೊಳ್ಳಲು ದಿನವೂ ಒಂದೊಂದು ಜೀವಂತ ಮಿಂಚು ಹುಳ ತಂದು ಅಂಟಿಸಿ ಅದು ಸತ್ತರೆ ಇನ್ನೊಂದು ಅಂಟಿಸಿಕೊಳ್ಳುವ ಈ ಜಾಣ್ಮೆ ಗೀಜಗಕ್ಕೆ ಯಾರು ಕಲಿಸಿದರು? ಅಪಾರ ಜೀವರಾಶಿಯ ಆಗರವಾಗಿರುವ ಈ ಸೃಷ್ಟಿಯಲ್ಲಿ ಯಾವ ಜೀವಿಗೆ ಯಾವ ಜಾಣ್ಮೆಯಿದೆಯೋ ತಿಳಿದುಕೊಳ್ಳುವ ಕುತೂಹಲ, ವ್ಯವಧಾನ, ಸಮಯ ನಮಗಿರಬೇಕಲ್ಲವೇ ಸಖೀ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಬಳ
Next post ಬಿಂದು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys