‘ಏಕಲವ್ಯ – ಗುರು ದ್ರೋಣರಿಗೆ ಗುರು ಕಾಣಿಕೆಯೆಂದು ಬಲಗೈ ಹೆಬ್ಬೆಟ್ಟನ್ನು ನೀಡಬಾರದಿತ್ತು ಕಂದಾಽ…’ ಎಂದು ಏಕಲವ್ಯನ ತಾಯಿ ಮಗನ ಕೈಗೆ ಬಟ್ಟೆ ಸುತ್ತಿ ಹಾರೈಕೆ ಮಾಡುತ್ತಾ ಕಣ್ಣೀರಿಟ್ಟಳು.

ಏಕಲವ್ಯನ ತಂದೆ- ‘ನೀ ಬೇಡ ಕುಲದಲ್ಲಿ ಹುಟ್ಟಿ ಎಲ್ಲರಿಗೂ ಬೇಡಾದೆ ಮಗು! ನಿನ್ನ ಬಿಲ್ಲು ವಿದ್ಯೆಗೆ ಶಬ್ದವೇದಿ ವಿದ್ಯೆಗೆ ಯಾವುದೋ ಆಳರಸರ ಕೈಯಲ್ಲಿ ಮೆರೆಯಬೇಕಾಗಿತ್ತು! ಆದರೆ ಈ ಜನರು ನಿನ್ನ ಶ್ರೇಯಸ್ಸು ಸಹಿಸಲಿಲ್ಲ. ನಿನ್ನ ಅವನತಿ ಕೋರಿದರು’ ಎಂದು ಕಣ್ಣೀರಿಟ್ಟ.

‘ನೀವ್ಯಾರು ಕಣ್ಣೀರು ಸುರಿಸದಿರಿ. ನನ್ನ ಹಣೆ ಬರಹಕೆ ಗುರು ದ್ರೋಣರೇನು ಮಾಡಿಯಾರು? ಇಲ್ಲಿ ಅರ್‍ಜುನ ನಿಮಿತ್ತ ಮಾತ್ರ ಎಲ್ಲ ನನ್ನ ವಿಧಿ ವಿಪರೀತ! ನನಗೆ ಒಳ್ಳೆಯದಾಗಲಿಲ್ಲವೆಂದು ನನ್ನ ಬೇಡ ಜಾತಿಯನ್ನು, ಅರ್‍ಜುನ, ಗುರುದ್ರೋಣರನ್ನು ಬೈದು ಫಲವೇನು ? ಜಾತಕ ಪಕ್ಷಿಯು ಮಳೆ ಬರುವಾಗ ಮಳೆ ಹನಿ ಬೀಳಲಿ ಎಂದು ಬಾಯಿ ತೆರೆದಿದ್ದರೂ ತೊಟ್ಟು ಹನಿ ಬೀಳದಿದ್ದರೆ ಮೋಡದ ದೋಷವೆನ್ನುವಿರೇನು? ಕರೀಲ ಮರದಲ್ಲಿ ಎಲೆಗಳಿಲ್ಲವೆಂದು ಮಾತ್ರಕ್ಕೆ ವಸಂತ ಋತುವನ್ನು ಅಳಿದರೇನು ಫಲ? ಗೂಬೆಗೆ ಹಗಲು ಹೊತ್ತಿನಲ್ಲಿ ದೃಷ್ಟಿ ಗೋಚರಿಸದಿದ್ದರೆ ಸೂರ್‍ಯದೇವನ ತಪ್ಪೇನಿದೆ? ನನ್ನ ಅದೃಷ್ಟ ಸರಿಯಾಗಿಲ್ಲವೆಂದ ಮೇಲೆ ಯಾರನ್ನು ಏನನ್ನು ದೂಷಿಸಿ ಪ್ರಯೋಜನವೇನು? ನನ್ನಲ್ಲಿರುವ ಬ್ರಹ್ಮವಿದ್ಯೆಯು ಕೋತಿ ವಿದ್ಯೆಯಾಗಿ ಹೋಯಿತು’ ಎಂದು ಏಕಲವ್ಯ ತನ್ನ ತಂದೆ ತಾಯಿ ಪರಿವಾರದವರನ್ನು ಸಂತೈಸಿದನಲ್ಲದೆ, ಧೈರ್‍ಯ ತುಂಬಿದನು.
*****