-ದುರ್ಯೋಧನನ ಸಂಚಿನಂತೆ ಶಕುನಿಯಾಡಿದ ಕಪಟಜೂಜಿನಲ್ಲಿ ಸೋಲನುಭವಿಸಿ ರಾಜ್ಯ ಸಂಪತ್ತೆಲ್ಲವನ್ನೂ ಕಳೆದುಕೊಂಡ ಧರ್ಮಜನು, ಕಡೆಗೆ ತನ್ನ ತಮ್ಮಂದಿರನ್ನೂ, ಧರ್ಮಪತ್ನಿಯಾದ ದ್ರೌಪದಿಯನ್ನೂ ಸೋತು ಕೈಚೆಲ್ಲಿದನು. ಅಣ್ಣನ ಮೇಲಿನ ಗೌರವದಿಂದ ತಲೆಬಾಗಿದ ಭೀಮಾರ್ಜುನ, ನಕುಲ, ಸಹದೇವರು ತಲೆತಗ್ಗಿಸಿ ಕುಳಿತರು. ಕೌರವ ಪಾಳೆಯ ವಿಜಯೋತ್ಸವ ಆಚರಿಸಿತು. ಭೀಷ್ಮ ಮೊದಲಾದ ಹಿರಿಯರು ಆರ್ಯಧರ್ಮದ ಹೆಸರಿನಲ್ಲಿ ಮೌನಕ್ಕೆ ಶರಣಾದರು. ಅಂದು ಮಯಸಭೆಯಲ್ಲಾದ ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ದ್ರೌಪದಿಯನ್ನು ಸಭೆಯಲ್ಲಿ ಅಪಮಾನಿಸಲು ದುರ್ಯೋಧನ ತೀರ್ಮಾನಿಸಿದ-
ಶಕುನಿಯ ಬಲೆಯಲಿ ಬಿದ್ದ ಪಾಂಡವರು ಸೋತು ತಮ್ಮ ಸರ್ವಸ್ವವನು
ತಲೆಗಳ ತಗ್ಗಿಸಿ ಕುಳಿತೇ ಇದ್ದರು ಅರಿಯದೆ ಮುಂದಿನ ದಾರಿಯನು
ಧರ್ಮನು ತಮ್ಮಂದಿರನೂ ಸೋತನು ತನ್ನನ್ನೂ ಸೋತನು ಕೊನೆಗೆ
ಧರ್ಮಪತ್ನಿ ದ್ರೌಪದಿಯನು ಸಹಿತ ಸೋತುಬಿಟ್ಟನವ ಕೊನೆಕೊನೆಗೆ
ಸೋದರರೆಲ್ಲರು ದಿಕ್ಕುಗೆಟ್ಟವರು ಸುಮ್ಮನೆ ಇದ್ದರು ಮೌನದಲಿ
ಕಪಟದ್ಯೂತವನು ಅರಿಯಲಾಗದೆ ಸೋತರು ಹಗೆಗಳ ಎದುರಿನಲಿ
ದುರ್ಯೋಧನನಿಗೆ ಮಯಸಭೆಯಲ್ಲಿನ ಅಪಮಾನವು ನೆನಪಿಗೆ ಬರಲು
ಒಡನೆ ವಿದುರನನು ಕೂಗಿ ಕರೆದಿದ್ದ, ಅವನು ಹತ್ತಿರಕ್ಕೆ ಬಂದಿರಲು
‘ಪಂಚಪಾಂಡವರ ಪತ್ನಿ ನಮ್ಮವಳು ಕರೆದುಕೊಂಡು ಬಾ ಈ ಸಭೆಗೆ’
ಎಂದು ನುಡಿದಿರಲು ವಿದುರನು ಚಕಿತನು ನುಡಿದ ಒಡನೆ- “ಹುಚ್ಚ ನಿನಗೆ
ಕೃಷ್ಣೆ ನಿನ್ನ ತಮ್ಮಂದಿರ ಹೆಂಡತಿ ಅವಳ ಬಗೆಗೆ ಗೌರವವಿರಲಿ
ಸ್ತ್ರೀ ಅಪಮಾನ ವಿನಾಶಕೆ ನಾಂದಿಯು ಇದರ ಬಗ್ಗೆ ಎಚ್ಚರವಿರಲಿ”
ವಿದುರ ನುಡಿದ ಹಿತವಚನವು ರುಚಿಸದೆ ‘ಇವನು ಹೆದರಿದನು’ ಎನ್ನುತ್ತ
ಪ್ರಾತಿಕಾಮಿಕನ ಕರೆದು ಹೇಳಿದನು- “ಕರೆದು ತಾ ಹೋಗಿ ನೀನಿತ್ತ”
ಪ್ರಾತಿಕಾಮಿಕನು ರಾಜಸೇವಕನು ಮರುಮಾತಾಡದೆ ಹೊರಹೊರಟ
ಎಂಥ ಸಂಕಟವು ಬಂತೆನಗೆನ್ನುತ ಮುಂದೆ ಮುಂದೆ ಅಡಿ ಕಿತ್ತಿಟ್ಟ!
ಕಂಡು ಕೃಷ್ಣೆಯನು ನೊಂದು ಹೇಳಿದನು- “ತಾಯಿ ನಿನಗೆ ಇದು ದುರ್ದಿನವು
ದೊರೆಯು ನಿನ್ನನ್ನು ಸೋತು ಚೆಲ್ಲಿದನು ಜೂಜಿನಲ್ಲಿ ಇಂದಿನ ದಿನವು
ಗೆದ್ದುಕೊಂಡಿರುವ ವಿಷಯವೆಲ್ಲವನು ನಿನಗೆ ಹೇಳೆಂದು ತಿಳಿಸಿದರು
ದಾಸಿಯಾಗಿರುವ ನಿನ್ನನ್ನೀಗಲೇ ಕರೆತರಲೆನ್ನನು ಕಳಿಸಿದರು.
ಪ್ರಾತಿಕಾಮಿಕನ ಮಾತನು ಆಲಿಸಿ ದ್ರೌಪದಿ ನೆನೆದಳು ಕೆಡುಕನ್ನು
ಅವನ ಕುರಿತು ಹೀಗೆಂದು ಕೇಳಿದಳು- “ಹೇಳು ಅಲ್ಲಿ ನಡೆದದ್ದೇನು?”
ಪ್ರಾತಿಕಾಮಿಕನು ಹೇಳಿದನವಳಿಗೆ ಜೂಜಿನಲ್ಲಿ ನಡೆದದ್ದನ್ನು
ಕಪಟ, ವಂಚನೆಯ ಮೋಸದಾಟಗಳ ದ್ಯೂತದ ಎಲ್ಲಾ ವಿವರವನು
ರಾಜನ ಬದಲಿಗೆ ಶಕುನಿಯು ಜೂಜನು ಧರ್ಮಜನೊಂದಿಗೆ ಆಡಿದ್ದು
ಧರ್ಮನು ಒಂದೊಂದಾಗಿಯೆ ಎಲ್ಲಾ ವಡವೆ ವಸ್ತುಗಳ ಸೋತದ್ದು
ಬಳಿಕ ಭಾಡಾರ, ಸೈನ್ಯ, ರಾಜ್ಯಗಳ ಸರದಿಯಲ್ಲಿ ಕಳಕೊಂಡದ್ದು
ನಂತರ ತಮ್ಮಂದಿರ ಸೋತದ್ದು ತನ್ನನು ತಾನೇ ಒಡ್ಡಿದ್ದು
ತನ್ನನು ಕೂಡ ಸೋತುಕೊಂಡಾದ ಬಳಿಕ ಬರಿಗೈಲಿ ಕುಳಿತದ್ದು
ಕಡೆಯಲಿ ಪಾಂಡವಸ್ತ್ರೀಯನು ಪಂದ್ಯಕೆ ಒಡ್ಡಿ ಅವಳನೂ ಸೋತದ್ದು!
ಅಯ್ಯೋ! ಹೆಣ್ಣಿನ ಜನ್ಮವಿದೇತಕೆ ಸೊಕ್ಕಿದ ಗಂಡಿನ ಅಡಿಯಾಳು
ಅಯ್ಯೋ! ಹೆಣ್ಣನು ಜೂಜಿಗೆ ಒಡ್ಡಲು, ವಸ್ತುವಾದಳಿಂದೇನವಳು?
ಅಯ್ಯೋ! ನಾಚಿಕೆಯಿಲ್ಲದ ಗಂಡಿನ ಸೇಡಿನ ಕಿಚ್ಚಿಗೆ ಬಲಿಯವಳು!
ಅಯ್ಯೋ! ನಂಬಿದ ಮಂದಿಯು ಕೆಟ್ಟರೆ ಮೊರೆಯಿಡುವುದು ಯಾರಿಗೆ ಅವಳು?
ಆಲಿಸಿ ದ್ರೌಪದಿ ಜೂಜಿನ ವಿವರವ ತನ್ನಯ ಮನದೊಳಗೇ ನೊಂದು
ಮನದಲಿ ಮಂಥನ ನಡೆಸಿದ ನಂತರ ಹೇಳಿದನವಳಿಗೆ ಹೀಗೆಂದು-
“ಧರ್ಮಜ ತನ್ನನು ಮೊದಲಿಗೆ ಸೋತು ಅನಂತರ ನನ್ನನು ಸೋತಿರಲು
ಸೋತವ ನನ್ನನು ಸೋತದ್ದು ಹೇಗೆ? ಕೇಳಿಕೊಂಡು ಬಾ” ಎಂದಿರಲು
ಪ್ರಾತಿಕಾಮಿಕನು ಗಡಗಡ ನಡುಗುತ ಸಭೆಯಲಿ ಅದನೇ ತಿಳಿಸಿದನು
ಒಡನೆ ಕೆರಳಿ ದುರ್ಯೋಧನ ಭೂಪತಿ ದುಶ್ಯಾಸನನನು ಕಳಿಸಿದನು!
ಕೆರಳಿದ ದುಶ್ಯಾಸನ ನಡೆತಂದನು ರಾಜಬೀದಿಯಲಿ ರಭಸದೊಳು
ಸರಸರ ನಡೆಯುತ ಕೂಡಲೆ ತಲುಪಿದ ದ್ರೌಪದಿಯಿದ್ದೆಡೆ ನಿಮಿಷದೊಳು
ಬಂದವನೇ ಕೈಹಿಡಿದೆಳೆಯುತ್ತಲಿ ಸೆಳೆದು ನಡೆದ ದ್ರೌಪದಿಯನ್ನು
ಒಂಟಿಬಟ್ಟೆಯಲಿ ಇರುವೆನೆಂದರೂ ಕೇಳದೆ ಸೆಳೆದನು ಅವಳನ್ನು
ದ್ರೌಪದಿ ಶ್ರೀಮುಡಿ ಬಿಚ್ಚಿಕೊಂಡಿತ್ತು ಬಟ್ಟೆಯೆಲ್ಲ ಅಸ್ತವ್ಯಸ್ತ
ಮುಡಿಯ ಹಿಡಿದೆಳೆದೊಯ್ಯುತಲಿದ್ದನು ರಾಜಬೀದಿಯಲಿ ಅತ್ತಿತ್ತ!
ತುಂಬಿದ ಸಭೆಯಲಿ ಅಪಮಾನಿತ ಸತಿ ಅಸ್ತವ್ಯಸ್ತವಾದುಡುಗೆಯಲಿ
ತಲೆಗಳ ತಗ್ಗಿಸಿ ಪಾಂಡವರೈವರು ಕುಳಿತರು ಕೈ ಕೈ ಹಿಚುಕುತಲಿ
ಎಲ್ಲರಿಗಿಂತಲೂ ಹಿರಿಯನು ಭೀಷ್ಮನು ಕಣ್ಣುಮುಚ್ಚಿ ತಾ ಕುಳಿತಿದ್ದ
ಧರ್ಮವು ಯಾವುದು? ಎನ್ನುವ ಪ್ರಶ್ನೆಗೆ ಉತ್ತರ ದೊರಕದೆ ಮಿಡುಕಿದ್ದ
ದ್ರೋಣ, ವಿದುರ, ಕೃಪ, ಅಶ್ವತ್ಥಾಮರು ಸಂದಿಗ್ಧತೆಯಲಿ ಸಿಲುಕಿದರು
ಯಾವುದು ನ್ಯಾಯವು? ಯಾವುದನ್ಯಾಯ? ಎಂಬುದು ತೋಚದೆ ತಿಣುಕಿದರು!
ಸಭಿಕರೆಲ್ಲರೂ ದ್ರೌಪದಿಯೆಡೆಗೇ ಕಣ್ಣು ಮಿಟುಕಿಸದೆ ನೋಡಿದರು
ಮೂಡಿದ ಪ್ರಶ್ನೆಗೆ ಉತ್ತರ ದೊರಕದೆ ಮನದಲ್ಲಿಯೆ ಚಡಪಡಿಸಿದರು
ರಾಜಸೂಯವನು ಮಾಡಿದ ವೀರರ ಹೆಂಡತಿಯೆನ್ನುವ ಗೌರವವೋ
ಐವರೊಡನೆ ಸಂಸಾರವ ಮಾಡಿದ ಹೆಂಗಸೆಂಬ ಅವಹೇಳನವೋ
ಒಂದೂ ಅರಿಯದೆ ದ್ರೌಪದಿ ನೊಂದಳು ತನಗೆ ದಿಕ್ಕು ಇನ್ನಾರಿಲ್ಲಿ?
ಇಂದ್ರಪ್ರಸ್ಥದ ಅರಮನೆಯೊಡತಿಗೆ ಒದಗಿದ ದುರ್ಗತಿ ಏನಿಲ್ಲಿ?
ಪಾಪಿ ದುಶ್ಯಾಸನ ಎಳೆದುತಂದವನು ಸೆರಗು ಹಿಡಿದು ಎಳೆಯುತ್ತಿದ್ದ
ಅಬಲೆ, ಹೆಂಗಸನು ಅವಮಾನಿಸುತಲಿ ಅಟ್ಟಹಾಸ ಮೆರೆಯುತ್ತಿದ್ದ!
ಪಾಪಿ ಗಂಡಸರ ಕೆಲವು ಕಣ್ಣುಗಳು ಆಶೆಯಿಂದ ನೋಡುತ್ತಿರಲು
ಕೆರಳಿದ ಸಿಂಹಿಣಿಯಾಗುತ ದ್ರೌಪದಿ ದುರುದುರು ದಿಟ್ಟಿಸಿ ನೋಡಿದಳು
ಸೆಟೆದು ನಿಂತು ಭೀಷ್ಮನ ಕೇಳಿದ್ದಳು- “ಹೇಳು ಪಿತಾಮಹ ಈಗಿಲ್ಲಿ
ಹೆಣ್ಣನು ಜೂಜಿಗೆ ಒಡ್ಡಲುಬಹುದೆ? ಧರ್ಮವ ತಿಳಿದವ ಹೇಳಿಲ್ಲಿ
ತನ್ನನು ಸೋತವ ನನ್ನನು ಪಣಕ್ಕೆ ಒಡ್ಡಿದ್ದಂತಹ ಧರ್ಮವಿದು?
ಆರ್ಯಧರ್ಮವನ್ನು ಅರಿತಿರುವಂತಹ ಜ್ಞಾನಿಯೆ ಸರಿಯೆ ನಿನಗೆ ಇದು?”
ಭೀಷ್ಮನು ಹೇಳಿದ- “ಸ್ವತಂತ್ರನಲ್ಲದ ವ್ಯಕ್ತಿಗೆ ಅಂತಹ ಹಕ್ಕಿಲ್ಲ
ಆದರೂ ಮಡದಿ ಗಂಡಿನ ಅಧೀನ ಒಡ್ಡುವುದೇನೂ ತಪ್ಪಲ್ಲ
ಧರ್ಮಸ್ವರೂಪವು ಸೂಕ್ಷ್ಮವಾಗಿಹುದು ಅರಿತುಕೊಳ್ಳುವುದು ಬಲುಕಷ್ಟ
ನ್ಯಾಯವಿಲ್ಲಿ ಏನೆಂಬುದನರಿಯೆನು ನನಗೆ ಎಲ್ಲವೂ ಅಸ್ಪಷ್ಟ”
ಭೀಷ್ಮನು ಮೆಲ್ಲಗೆ ನುಣುಚಿಕೊಂಡಿರಲು ಧರ್ಮಸೂಕ್ಷ್ಮತೆಯ ಹೆಸರಲ್ಲಿ
ಬ್ರಹ್ಮಚಾರಿಯಾಗಿರುವವ ಅರಿವನೆ ಹೆಣ್ಣಿನ ಮನಸನು ಲೋಕದಲಿ?
ಧೃತರಾಷ್ಟ್ರನ ಸುತ ದುರ್ಯೋಧನನು ಕೂಡಲೆ ಕೋಪದಿ ಕೆರಳಿದನು
ದರ್ಪವ ತೋರುತ ಕುಳಿತಲ್ಲಿಂದಲೆ ಜೋರಿನ ಧ್ವನಿಯಲಿ ಗುಡುಗಿದನು-
“ಕೌರವರಿಗೆ ದಾಸಿಯು ನೀನಾದೆ, ಪ್ರಶ್ನೆಯ ಕೇಳುವ ಹಕ್ಕಿಲ್ಲ
ಧರ್ಮಭೀರು ಧರ್ಮಜನಿದನೆಲ್ಲವ ತಿಳಿಯದೆ ಇರುವವನೇನಲ್ಲ
ನಿನ್ನನಿಂದು ಈ ಜೂಜಿನಾಟದಲಿ ಗೆದ್ದುಕೊಂಡಿರುವೆ ತಿಳಿ ಮರುಳೆ
ದಾಸಿಯೆನ್ನದೆಲೆ ರಾಣಿಯೆನ್ನುವನು ಬಂದು ಕೂರೆನ್ನ ತೊಡೆ ಮೇಲೆ”
ದುರ್ಯೋಧನ ತೊಡೆಯನ್ನು ತೋರುತ್ತ ಬಾ ಎಂದವಳನ್ನು ಕರೆದಿದ್ದ
ಮಯಸಭೆಯಲ್ಲಿನ ಅಪಮಾನಕ್ಕೆ ಮುಖ್ಯ ಇದು ಎಂದು ಬಗೆದಿದ್ದ
ಸಭೆಯೇ ನಿಬ್ಬೆರಗಾಯಿತು ಕೌರವನಾಡಿದ ಇಂತಹ ನುಡಿಗಳಿಗೆ
ಹಿರಿಯರೆಲ್ಲರೂ ತಲೆ ತಗ್ಗಿಸಿದರು ಹಿತವಾಗದಿರಲು ಕಿವಿಗಳಿಗೆ!
ಅಪಮಾನದ ಉರಿಯಲಿ ಸುಡುತಿದ್ದ ಭೀಮ ಸಿಡಿದ ಗುಂಡಿನ ಹಾಗೆ
ರೋಷಾವೇಷದಿ ಕುದಿವ ಕೋಪದಲಿ ಪ್ರತಿಜ್ಞೆ ಮಾಡಿದನವ ಹೀಗೆ-
“ಎಲಾ! ದುಷ್ಟ ದುರ್ಯೋದನ ನೀನು, ತೊಡೆಯನು ತೋರಿಸುವೆಯೇನು?
ಧರ್ಮಕೆ ಕಟ್ಟುಬಿದ್ದಿರುವೆವು ಎಂಬುದನರಿಯದೆ ಮೆರೆಯುವೆಯಾ ನೀನು?
ನಿನ್ನ ತೊಡೆಯನ್ನು ಮುರಿದೇ ತೀರುವೆ ಮುಂದಿನ ದಿನದಲಿ ಇದು ಸತ್ಯ
ಆ ದಿನ ಬರಲೆಂದೆದುರು ನೋಡುವೆನು ಯಾರೂ ತಡೆಯರು ನಿನ್ನಂತ್ಯ
ನೀಚ ತಮ್ಮ ಈ ದುಶ್ಯಾಸನನನು ಕೊಂದು ಕುಡಿವೆ ಬಿಸಿರಕ್ತವನು
ಅದರಲಿ ಅದ್ದಿಯೆ ಕಟ್ಟುವೆ ಬಿಚ್ಚಿದ ದ್ರೌಪದಿಯ ಸಿರಿಮುಡಿಯನ್ನು
ನಕ್ಕ ನಿನ್ನ ತಮ್ಮಂದಿರನೆಲ್ಲರ ರುಂಡ ಮುಂಡ ಬೇರ್ಪಡಿಸುವೆನು
ನಿನ್ನೀ ಕಣ್ಣೆದುರಲ್ಲಿಯೆ ಆ ದಿನ ಮಾರಿಗೆ ಔತಣವಿಕ್ಕುವನು
ಹೆಣ್ಣಿನ ಗೋಳಿನ ಶಾಪದ ಬೆಂಕಿಯು ನಿಮ್ಮಗಳೆಲ್ಲರ ದಹಿಸುವುದು
ನಿಮ್ಮಯ ಪಾಪದ ಕೊಡಗಳು ತುಂಬಲಿ ಎಂದು ನನ್ನ ಮನ ಬಯಸುವುದು”
ಗುಡುಗಿದ ಭೀಮನು ಧರ್ಮನ ಕೇಳಿದ- “ಎಲವೋ ಗೊತ್ತಿದೆಯೇ ನಿನಗೆ
ಜೂಜಿನ ಮನೆಯಲಿ ಸೂಳೆಯರನ್ನೂ ಪಣಕ್ಕಿಡರು ನಿನ್ನಯ ಹಾಗೆ?
ಧರ್ಮಪತ್ನಿಯನು ಪಣಕ್ಕೆ ಒಡ್ಡಲು ನಿನಗೆಲ್ಲಿಯದೋ ಅಧಿಕಾರ?
ಜೂಜಾಡಿದ ಆ ಕೈಗಳ ಸುಡುವೆನು ನಿನ್ನಂಥವನಿಗೆ ಧಿಕ್ಕಾರ”
ಭೀಮನ ಕೋಪಾವೇಷವ ನೋಡಿದ ಅರ್ಜುನ ತಡೆದನು ಅವನನ್ನು
“ಅಣ್ಣನ ಮನವನು ನೋಯಿಸಬೇಡ, ಕೊಲ್ಲಬೇಡ ಸತ್ತವನನ್ನು
ಯುದ್ಧ, ಜೂಜುಗಳು ಕ್ಷತ್ರಿಯಧರ್ಮವು ಕರೆದರೆ ಹೋಗದೆ ಇರಬೇಕೆ?
ಅಣ್ಣನು ತಂದೆಗೆ ಸಮನಾಗಿರುವವ ಅವನಿಗೆ ಎದುರಾಡುವುದೇಕೆ?”
ಭೀಮನು ತಮ್ಮನ ಮಾತನ್ನಾಲಿಸಿ ಸುಮ್ಮನೆ ಕುಳಿತನು ಮೌನದಲಿ
ಸೂಜಿ ಬಿದ್ದರೂ ಕೇಳಿಸುವಂತಹ ನೀರವ ಆ ಕ್ಷಣ ಸಭೆಯಲ್ಲಿ!
ಐವರು ಪತಿಗಳು ಇದ್ದರೂ ಸತಿಯು ಅನಾಥಳಾದಳು ಸಭೆಯಲ್ಲಿ
ದೇವರ ನೆನೆಯದೆ ಮಾರ್ಗವೇ ಇಲ್ಲೆಂದೆನಿಸಿತ್ತವಳಿಗೆ ಮನದಲ್ಲಿ
ದುಶ್ಯಾಸನ ಸೆಳೆಯುತಲಿರೆ ಅಯ್ಯೋ! ಕಳಚುತ್ತಿದ್ದಿತು ತೊಟ್ಟುಡುಗೆ
ತೊಟ್ಟಿರುವಂತಹ ಉಡುಗೆಯು ಅಳಿದರೆ ಉಳಿವುದು ತನ್ನಯ ಹುಟ್ಟುಡುಗೆ
`ಮುರಾರಿ ಕಾಯೋ, ಅಬಲೆಯ ಮಾನಕೆ ರಕ್ಷಣೆವಸ್ತ್ರವ ನೀ ನೀಡು
ನಿನ್ನನು ನಂಬಿದ ಅನಾಥೆಯಿರುವೆನು ಕೈಬಿಡದೆನ್ನನು ಕಾಪಾಡು’
ಕೃಷ್ಣಾ! ಕೃಷ್ಣಾ! ಅಬಲೆಯ ಮಾನವ ಕಾಪಾಡಯ್ಯಾ ಎಲೆ ಬಂಧು
ಕೃಷ್ಣಾ! ನನ್ನಲಿ ಕರುಣೆಯ ತೋರಿ ದುಷ್ಟರ ದಮನಿಸು ನೀ ಬಂದು
ಕೃಷ್ಣಾ! ನಿನ್ನನು ನಂಬಿದ ಹೆಣ್ಣಿನ ಮಾನ ಪ್ರಾಣಗಳ ನೀ ಉಳಿಸು
ಕೃಷ್ಣಾ! ಕೃಷ್ಣಾ! ಅನಾಥರಕ್ಷಕ! ಎದುರಿಸಿ ನಿಲ್ಲುವ ಬಗೆ ತಿಳಿಸು!
—–
ದ್ರೌಪದಿಯ ಮೊರೆಯನ್ನು ಆಲಿಸಿದ ಶ್ರೀಕೃಷ್ಣ ಸೆಳೆಯುತ್ತಿರುವ ಸೀರೆ ಅಕ್ಷಯವಾಗಲಿ ಎಂದು ಹರಸಲು, ಸೀರೆ ಅಕ್ಷಯವಾಯಿತು. ದುಶ್ಯಾಸನನು ಆ ಸೀರೆಯನ್ನು ಸೆಳೆಯತೊಡಗಿದನು. ಸೆಳೆದಷ್ಟೂ ಆ ಸೀರೆ ಹೆಚ್ಚಾಗುತ್ತಲೇ ಇತ್ತು. ಅವನು ಸೆಳೆದೂ ಸೆಳೆದೂ ಮೈಯಲ್ಲಿ ಬೆವರು ಕಿತ್ತುಕೊಂಡು ಬಂದಿತು. ಅವನು ಆಯಾಸದಿಂದಲೂ ಅಪಮಾನದಿಂದಲೂ ಕುಗ್ಗಿಹೋದನು. ಸಭಾಮಧ್ಯದಲ್ಲಿ ಸೀರೆಯ ರಾಶಿ ಬೀಳತೊಡಗಿತು. ದುಶ್ಯಾಸನನು ದಾಹದಿಂದಲೂ ತೋಳುಗಳಲ್ಲಿನ ಶಕ್ತಿ ಕುಗ್ಗಿಹೋದದ್ದರಿಂದಲೂ ಅಲ್ಲಿಯೇ ಕುಸಿದುಬಿದ್ದನು. ಸಭಿಕರೆಲ್ಲ ಪಾಂಚಾಲಿಯ ಪಾತಿವ್ರತ್ಯವನ್ನು ಹೊಗಳತೊಡಗಿದರು. ಕೌರವರಿಗೆ ಅವಮಾನವಾದಂತಾಯಿತು. ಇದನ್ನೆಲ್ಲ ಕೇಳಿ ತಿಳಿದ ಧೃತರಾಷ್ಟ್ರನು ದ್ರೌಪದಿಯಲ್ಲಿ ತಮ್ಮ ಮಕ್ಕಳ ಪರವಾಗಿ ಕ್ಷಮೆ ಕೇಳಿ ಆಗಲಿದ್ದ ಅನಾಹುತವನ್ನು ತಪ್ಪಿಸಿದನು. ಅವನು ದ್ರೌಪದಿಯನ್ನು ಕುರಿತು, “ಅಮ್ಮಾ ಸಾಧ್ವಿ, ನಿನಗೆ ಏನು ವರ ಬೇಕೋ ಕೇಳಿಕೋ” ಎಂದನು. ದ್ರೌಪದಿಯು, “ಮಹಾರಾಜ! ನನ್ನ ಗಂಡಂದಿರನ್ನು ಸ್ವತಂತ್ರರನ್ನಾಗಿ ಮಾಡು” ಎಂದಳು, ದೃತರಾಷ್ಟ್ರನು, “ಹಾಗೆಯೇ ಆಗಲಿ ತಾಯಿ, ನಿನ್ನ ಗಂಡಂದಿರು ಇನ್ನು ಸರ್ವತಂತ್ರ ಸ್ವತಂತ್ರರು. ಇದು ರಾಜಾಜ್ಞೆ” ಎಂದನು. ಬಳಿಕ ಧೃತರಾಷ್ಟ್ರನು ಮತ್ತೊಂದು ವರವನ್ನು ಕೋರಿಕೊಳ್ಳುವಂತೆ ಅವಳಿಗೆ ಹೇಳಿದನು. ದ್ರೌಪದಿಯು, “ನನ್ನ ಗಂಡಂದಿರ ಸಾಮ್ರಾಜ್ಯವನ್ನು ಅವರಿಗೆ ಹಿಂದಿರುಗಿಸು” ಎಂದಳು. ಆದಕ್ಕೂ ರಾಜನು ಸಮ್ಮತಿಸಿ ಮತ್ತೊಂದು ವರವನ್ನು ಕೇಳು” ಎಂದನು. ಅವಳು, “ಮಹಾರಾಜ! ಕ್ಷತ್ರಿಯ ಕಣ್ಣಿಗೆ ಎರಡು ವರಗಳನ್ನು ಕೇಳಲು ಮಾತ್ರ ಹಕ್ಕಿದೆ. ಆದ್ದರಿಂದ ನಾನು ಕೇಳಲೂಬಾರದು. ನೀವು ನೀಡಲೂಬಾರದು” ಎಂದಳು. ಧೃತರಾಷ್ಟ್ರನು ಅವಳ ಜ್ಞಾನವನ್ನು, ಸಮಯಪ್ರಜ್ಞೆಯನ್ನು ಮೆಚ್ಚಿಕೊಂಡು, “ತಾಯಿ! ನಿನ್ನನ್ನು ಮೆಚ್ಚಿದೆ. ಇನ್ನು ನೀನು ನಿನ್ನ ಗಂಡಂದಿರೊಂದಿಗೆ ಹೊರಟುಬಿಡು, ಇಲ್ಲಿರುವುದು ಬೇಡ” ಎಂದು ಸಲಹೆ ನೀಡಿದನು. ದ್ರೌಪದಿಯು ಸ್ವಂತಂತ್ರರಾಗಿದ್ದ ತನ್ನ ಗಂಡಂದಿರನ್ನು ಕರೆದುಕೊಂಡು ಹೊರಟಳು. ಆದರೆ ಮಾರ್ಗಮಧ್ಯದಲ್ಲಿಯೇ ಧರ್ಮನಿಗೆ ಮತ್ತೆ ಜೂಜನ್ನಾಡಲು ಕರೆಬಂದದ್ದರಿಂದ ಅವನು ಮತ್ತೆ ಜೂಜಿಗೆ ಕುಳಿತು, ಮತ್ತೆ ಸೋತು, ಹನ್ನೆರಡು ವರ್ಷ ವನವಾಸನ್ನೂ ಒಂದು ವರ್ಷದ ಅಜ್ಞಾತವಾಸವನ್ನೂ ಪಡೆದುಕೊಂಡನು.
ಕೃಷ್ಣನ ನೆನಪು ಬಂದ ಒಡನೆಯೆ ಧೃತಿ ಗರಿಗೆದರಿತು ಅವಳಲ್ಲಿ
ಶಕ್ತಿದೇವತೆಯು ಚಾಮುಂಡಿಯಾದಳು ಬೆಂಕಿಯುಗುಳಿದಳು ಕಣ್ಣಲ್ಲಿ
ತುಂಬಿದ ಸಭೆಯಲಿ ಎಲ್ಲರ ದಿಟ್ಟಿಸಿ ಹೇಳತೊಡಗಿದಳು ಹೀಗೆಂದು-
“ಎಲವೋ ಕೌರವ ಹುಚ್ಚುನಾಯಿಗಳೆ, ಕೇಳಿರಿ ಎಲ್ಲರೂ ನೀವಿಂದು
ದುರಹಂಕಾರದ ಮದದಲಿ ಮೆರೆಯುತ ಧರ್ಮವನ್ನು ಕಡೆಗಣಿಸಿದಿರಿ
ಹಿರಿಯರು ಕಿರಿಯರು ಎಂಬುದು ನೋಡದೆ ನಿಮ್ಮಾಟವನೇ ಆಡಿದಿರಿ
ಮಿತಿಯನು ಮೀರುತ ನಡೆದಿರಿ ಸಭೆಯಲಿ ನ್ಯಾಯನೀತಿಗಳನೇ ಕೊಂದು
ಅಗ್ನಿಪೂಜಕನು ದ್ರುಪದನ ಮಗಳಿವಳೆಂಬುದ ಮರೆತಿರೆ ಇಲ್ಲಿಂದು?
ಒಡಹುಟ್ಟಿದ ನನ್ನಣ್ಣನು ಇರುವನು ದೃಷ್ಟದ್ಯುಮ್ನನು ಬಲು ಧೀರ
ದ್ವಾರಕೆಯಲಿ ಇನ್ನೊಬ್ಬನು ಇರುವನು ದೇವಕಿನಂದನ ಹಮ್ಮೀರ
ಅವನು ಬಂದನೋ ನಿಮ್ಮಗಳೆಲ್ಲರ ರುಂಡ ಮುಂಡ ಚೆಂಡಾಡುವನು
ದ್ವಾರಕೆಯಿಂದಲಿ ಸೇನೆಯ ತರುತಲಿ ಹಸ್ತಿನಪುರವನ್ನು ಮುತ್ತುವನು
ದಕ್ಷಿಣದಿಂದಲಿ ಪಾಂಚಾಲ ಸೈನ್ಯವು ಬರುವುದು ನನ್ನ ಸಹಾಯಕ್ಕೆ
ಮಗಳಪಮಾನಕೆ ಸೇಡು ತೀರಿಸಲು ಮಹಾಯುದ್ಧ ಮಾಡುವುದಕ್ಕೆ..”
ದ್ರುಪದನಂದನೆಯ ಮಾತನು ಕೇಳಿದ ಗಾಂಧಾರಿಯ ಎದೆ ನಡುಗಿತ್ತು
ಗಂಡನ ಕಿವಿಯಲಿ ಮೆಲ್ಲನೆ ಉಲಿದಳು- “ಯಾಕೆ ನಿನಗೆ ಇದು ಬೇಕಿತ್ತು?
ಕೂಡಲೆ ಮಧ್ಯೆ ಪ್ರವೇಶಿಸಿ ಈಗಲೇ ಕೃಷ್ಣೆಯ ಕೋಪವ ನೀಗಿಬಿಡು
ಇಲ್ಲದೆಹೋದರೆ ವಿನಾಶ ಖಂಡಿತ ರಾಜ್ಯದ ಉಳಿವಿಗೆ ಗಮನಕೊಡು”
ಬೆಚ್ಚಿದ ಕುರುಡನು ಕೂಡಲೆ ತನ್ನಯ ಮೆಚ್ಚಿನ ದಾಸಿಯ ಕೈ ಹಿಡಿದು
ನಡೆದು ಬಂದು ದ್ರೌಪದಿಯ ಎದುರಿನಲಿ ನಿಂತು ಹೇಳಿದನು ಹೀಗೆಂದು-
“ಅಮ್ಮಾ ಸಾದ್ವಿಯೇ, ನನ್ನೀ ಮಕ್ಕಳು ಮಾಡಿದಪಚಾರ ಕ್ಷಮಿಸಿಬಿಡು
ಹೆಣ್ಣಿನ ಶಾಪವು ಸುಮ್ಮನೆ ಹೋಗದು ಶಾಂತಳಾಗಿ ನೀ ಮರೆತುಬಿಡು
ನಿನ್ನ ಪತಿಯರನು ಸ್ವತಂತ್ರಗೊಳಿಸುವೆ ನಿಮ್ಮ ರಾಜ್ಯವೂ ನಿಮಗೇನೇ
ಕೆಟ್ಟ ಘಳಿಗೆಯಲಿ ಏನೋ ನಡೆಯಿತು ಮರೆತುಬಿಡೆಲ್ಲವ ನನ್ನಾಣೆ
ಹೊರಡಿರಿ ಇಂದ್ರಪ್ರಸ್ಥಕೆ ಇಂದೇ, ಪಯಣವ ಬೆಳೆಸಿರಿ ಈ ಹೊತ್ತು
ಸಂತಸದಿಂದಲಿ ಜೀವನ ಸವೆಸಿರಿ ಮತ್ತೆ ಬಾರದಿರಿ ಯಾವೊತ್ತೂ”
ಹರಸಿ ಕಳುಹಿದನು ಪತಿಗಳ ಸಮೇತ ದ್ರುಪದಕುಮಾರಿಯ ಆಗಲ್ಲಿ
ರಾಜಾಜ್ಞೆಯನವ ಜಾರಿಗೊಳಿಸಿದನು ತುಂಬಿದ ಅಂದಿನ ಸಭೆಯಲ್ಲಿ!
ತಂದೆಯ ಈ ಪರಿ ನುಡಿಗಳ ಕೇಳಿ, ಚಕಿತನಾದ ದುರ್ಯೋಧನನು
ದಿಕ್ಕೇ ತೋಚದೆ ತಬ್ಬಿಬ್ಬಾಗುತ ಮನದಲ್ಲಿಯೆ ಚಡಪಡಿಸಿದನು
ಕೋಪಗೊಂಡವನು ಹೊರಗಡೆ ಹೊರಟನು ತಂದೆಯ ಕೃತ್ಯಕೆ ಹೇಸುತ್ತ
ಕರ್ಣ, ದುಶ್ಯಾಸನ, ಶಕುನಿಯರೆಲ್ಲಾ ಹೋದರವನ ಹಿಂಬಾಲಿಸುತ
ಹೋಗುತ ಹೋಗುತ ಕೆಣಕುತ ಅಂದರು ಹೆಣ್ಣಿನಿಂದ ಬದುಕಿದರೆಂದು
ಸ್ವಾಭಿಮಾನವನು ತುಳಿಯುತ ನುಡಿದರು ಇಂತಹ ಬದುಕು ಅದೇಕೆಂದು
ಭೀಷ್ಮ, ದ್ರೋಣ, ಕೃಪ, ವಿದುರಾದಿಗಳು ನಿಟ್ಟುಸಿರಿಟ್ಟರು ಆ ಕ್ಷಣವು
ಕುಂತೀಪುತ್ರರ ಹರಸಿ ಕಳುಹಿದರು ಕೋರಿ ಅವರ ಬಾಳಿಗೆ ಶುಭವು!
*****