ಈ ಗುಬ್ಬಿಯೂ ಹಾಗೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ?
ಟೊಂಗೆಗಳ ಕಂಡರೆ ಸಾಕು
ಜೋಕಾಲಿ ಹಾಕುತ್ತಾಳೆ
ಈ ಗುಬ್ಬಿಯೂ ಹಾಗೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ.

ಜಿಟಿ ಜಿಟಿ ಮಳೆಯಲ್ಲಿ
ಕುಣಿದು ಕುಪ್ಪಳಿಸಿ,
ಪುಕ್ಕಗಳ ನೀರು ಕೊಡವಿ
ಬಿಂಕದ ಕೊಕ್ಕನ್ನು
ಟೊಂಗೆಗಳಿಗೆ ತಿಕ್ಕುತ್ತಾಳೆ
ಈ ಗುಬ್ಬಿಯೂ ಹಾಗೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ.

ಪಳಕದ ಪುಕ್ಕಗಳನ್ನು
ಕೊಡವಿ ಖುಷಿ ಪಡುತ್ತಾಳೆ
ನೀರು ಚಿಮುಕಿಸುತ್ತಾ
ಸಂಭ್ರಮ ಪಡುತ್ತಾಳೆ
ಈ ಗುಬ್ಬಿಯೂ ಹಾಗೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ.

ಚಿಂವ್ ಚಿಂವ್ ಎಂದು ಕೂಗಿ
ತನ್ನ ಬಳಗವನೇ ಸೇರಿಸುತ್ತಾಳೆ
ಕಾರೆ ಬೋರೆಗಳ ತಿನ್ನುತ್ತಾ
ಕಾಡಿನ ಗೆಳತಿಯಾಗುತ್ತಾಳೆ.
ಈ ಗುಬ್ಬಿಯೂ ಹಾಗೆಯೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ.

ಕೊರಳು ಕೊಂಕಿಸಿದ ಹಕ್ಕಿ
ಕೊಕ್ಕಿನಲ್ಲಿ ಹುಲ್ಲು ಗರಿಕೆ
ಗೂಡು ಕಟ್ಟುತ್ತದೆ ಕ್ಲಿಷ್ಟ
ಈ ಗುಬ್ಬಿಯೂ ಹಾಗೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ.

ಗುಬ್ಬಿ ಹಾರಿ ಹೋಯಿತು
ದೂರದ ಗಿಡದ ಟೊಂಗೆಗೆ
ಈಗವಳ ಕಿಲಕಿಲವಿಲ್ಲ.
ಮನೆ ಖಾಲಿ ಖಾಲಿಯಾಗಿದೆ
ಅವಳು ಜೀಕಿದ ಜೋಕಾಲಿ
ಬಿಕೋ ಎನ್ನುತ್ತಿದೆ
ಈ ಗುಬ್ಬಿಯೂ ಹಾಗೆಯೇ
ನನ್ನ ಮಗಳಂತೆಯೇ
ಎಷ್ಟೊಂದು ಹೋಲುತ್ತದೆ?
*****