ಕರಣವಲಯದಿ ನಿಂತು ವಿಷಯವೈವಾಹಿಕದಿ
ಪಡೆವ ಸೊಗಗಳನೊಲ್ಲದೆಯೆ ಮುಂದೆ ಸರಿದು
ಮೈಜರೆದು ಮನಜರೆದು ಬುದ್ದಿ ತರ್ಕವ ಜರೆದು
ಅದನೊಲ್ಲದಿದನೊಲ್ಲದಾವುದನೊ ತಿರಿದು
ಊರಿಗೊಂದಿರುಳಂತೆ ನೆಲದಿ ನೆಲೆಯಿಲ್ಲದೆಯೆ
ತಿರಿವ ತಿರುಕರ ಕಣಸೆ, ನಿನಗೆ ನೆಲೆ ಇಲ್ಲೆ?
ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ
ಏರುತಿಹ ಸತ್ವವೇ, ನಿನಗೆ ಬಿಡುವಿಲ್ಲೆ?
ಮುಂದೈದು ಕರಣಗಳ ಮೊನೆ ಹೊಳೆವ ಗೋಪುರದ ಗುಡಿಯೇ,
ಹಿಂದೊಂದೆ ಮನದ ಮೊನೆ ಮೆರೆವ ಮುಡಿಯ ಕಳಸದೆಡೆಯೇ!
*****