ನೀನೀತರ ನೋಡುವಿಯೇ
ಇದರರ್‍ಥವ ಹೇಳುವಿಯೇ
ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಹಾಡಿಯಲದು ಬಿದ್ದಿತ್ತೋ
ಕೇದಿಗೆ ಬನದಲಿ ಅಡಗಿತ್ತೋ
ನದೀ ದಂಡೆಯಲಿ ಆಡುತಿತ್ತೋ
ಯಾರಿಗು ಕೇಳದೆ ಹಾಡುತಿತ್ತೋ
ಮಧುರ ಕಾನನವ ಕಾಡುತಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಎಷ್ಟೆಂತ ಹಿಡಿದಿತ್ತೋ
ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಕಬ್ಬಿನ ಹೂವಾಗಿ ಬೆಳೆದಿತ್ತೋ
ಕಾಮನ ಬಿಲ್ಲಾಗಿ ಕೂತಿತ್ತೋ
ಬೆಳದಿಂಗಳ ಜತೆ ಒಂದಾಗಿತ್ತೋ
ಅಂಗಳದಲ್ಲಿ ಸುತ್ತಾಡುತಿತ್ತೋ
ಅತ್ತಾರ ತಟ್ಟಿಯ ಆಚೆಗೆ ಇತ್ತೋ ಈಚೆಗೆ ಇತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಬಿಟ್ಟರೆ ಬಿಡದಿತ್ತೋ
ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಜಾತ್ರೆಯ ನೆಪದಲ್ಲಿ ಹೊರಟಿತ್ತೋ
ಅಂಗಡಿ ಅಂಗಡಿ ಅಲೆದಿತ್ತೋ
ಮುಂಗಟ್ಟ ಬೆಳಕಲಿ ಹೊಳೆದಿತ್ತೋ
ಬಳೆಯಾಗಿ ಘಣ ಘಣ ಘಣಿಸಿತ್ತೊ
ಕಾಲ್ಗೆಜ್ಜೆಯಾಗಿ ಘಲ್ಲೆಂದಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಸುಖದಲ್ಲಿ ಕಡಿದಿತ್ತೋ
ನೀ ನಿನ್ನಷ್ಟಕಿದ್ದಾಗ
ನಾ ನನ್ನಷ್ಟಕಿದ್ದಾಗ
ಒಲುಮೆಯೆಂಬುದಿದು ಎಲ್ಲಿತ್ತೋ
ಎದೆ ಡವಡವ ಎನುತಿತ್ತೋ
ಕಣ್ಣಿವೆ ರಪರಪ ಬಡಿಯುತಿತ್ತೋ
ನಾಲಿಗೆ ತಡವರಿಸುತಿತ್ತೋ
ಮೋಹದ ಕಿಚ್ಚು ಧಗ ಧಗಿಸುತಿತ್ತೋ
ಕೊಂಡಷ್ಟೂ ಮತ್ತೆ ಉರಿಯುತಲಿತ್ತೋ
ಇದು ಎಲ್ಲಿಂದ ಬಂದಿತ್ತೋ
ನಮ್ಮನು ಥಟ್ಟಂತ ಬಡಿದಿತ್ತೋ ಆಹಾ ಗುಟ್ಟಲಿ ಸುಡುತಿತ್ತೋ
*****