“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲಿಯೇ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ ಆಹಾರ ವಾಗುತ್ತದೆ. ಈ ಸ್ಥಿತಿಯೇ ಸೀತಾಳ ಮನಸ್ಥಿತಿ ಕೂಡ. ಅನಿತಾ ದೇಸಾಯಿಯ Where shall we go this summer? ಕಾದಂಬರಿಯ ಕೇಂದ್ರ ಪಾತ್ರ ಸೀತಾ. ಒತ್ತಡದ ದಬ್ಬಾಳಿಕೆಯ ಬದುಕಿನಿಂದ ಆಕೆ ಪಲಾಯನ ಮಾಡ ಬಯಸುತ್ತಾಳೆ ಹದ್ದಿನಂತೆ. ಆದರೆ ಸಂಸಾರದ ಬಂಧನದಲ್ಲಿ ಸಿಲುಕಿರುವ ಅವಳಿಗೆ ಅದು ಅಷ್ಟು ಸುಲಭವಲ್ಲ. ಇದು ಸೀತಾಳಂತಹ ಹಲವು ಸ್ತ್ರೀಯರ ಮನಸ್ಥಿತಿ ಕೂಡ. ಆಕೆಯ ಆಂತರಿಕ ಸಂಘರ್ಷಕ್ಕೆ ಒಂದು ಉದಾಹರಣೆ.
ಮಹಿಳೆಯನ್ನು ಗಂಡ, ಮದುವೆ, ಮಕ್ಕಳು ಮತ್ತು ವೈಯಕ್ತಿಕ ಸಂಬಂಧಗಳ ಹೊರತಾಗಿಯೂ ಕಾಡುವ ಏಕಾಂಗಿತನದ ನೋವಿನ ಕಥೆ.
ಸೀತಾ ರಾಮನ್‌ನ ಪತ್ನಿ. ಅವರು ಆದರ್ಶ ಪತಿ ಪತ್ನಿಯರಲ್ಲ. ಅವರ ನಡುವಿನ ಮಾನಸಿಕ ಅಂತರ ಹೆಮ್ಮರದಷ್ಟು ಅಗಾಧ. ಸದಾ ವ್ಯಾವಹಾರಿಕ ಲೋಕದಲ್ಲಿ ಮುಳುಗಿರುವ ರಾಮನ್ ಆಕೆಯ ಸಂವೇದನಾತ್ಮಕ ಜಗತ್ತನ್ನು ಕಾಣಲಾರ. ಒಳ ತುಡಿತಗಳ ಅರಿಯಲಾರ ಆಕೆಯ ಬದುಕಿನ ಆಗು ಹೋಗುಗಳು, ಸ್ತ್ರೀಸಹಜ ತೀರ ಸಂವೇದನಾತ್ಮಕ ಭಾವನೆಗಳು, ರಾಮನ್‌ನಿಗೆ ಅರ್ಥವಾಗದ ಸಂಗತಿಗಳು. ಕೆಲವೊಮ್ಮೆ ಅರ್ಥವಾದರೂ ನಿಷ್ಕ್ರೀಯ ಪ್ರತಿಸ್ಪಂದನೆ. ಆಕೆಯ ಹಾಗೂ ರಾಮನ್‌ನ ಅಭಿರುಚಿಗಳು ಬೇರೆ ಬೇರೆ. ರಾಮನ್ನ ಕುಟುಂಬದೊಂದಿಗೆ ಆಕೆ ಹೊಂದಿಕೊಳ್ಳಲು ಸದಾ ತಿಣುಕಾಡುತ್ತಾಳೆ. ಅವರ ಸಹ ಮಾನವೀಯ ಬಂಧಗಳು ಅವಳಿಗೆ ಬೇಕಿಲ್ಲ. ಈ ಎಲ್ಲ ಕಾರಣಗಳಿಂದ ರಾಮನ್ ಒಂದು ಸಣ್ಣ ಪ್ಲಾಟಿಗೆ ತನ್ನ ಕುಟುಂಬದ ವಾಸ್ತವ್ಯ ಬದಲಾಯಿಸುತ್ತಾನೆ. ಆದರೆ ಅಲ್ಲಿಯೂ ಆಕೆ ಆತನ ಸೀಮಿತ ಬದುಕಿನ ರೀತಿಗೆ ಬೇಸರಗೊಳ್ಳುತ್ತಾಳೆ. ಐದನೇ ಮಗುವಿನ ನಿರೀಕ್ಷೆಯಲ್ಲಿದ್ದಾಗ ಆಕೆ ತನ್ನ ತಂದೆಯ ಮಾಂತ್ರಿಕ ಐಲ್ಯಾಂಡ್ ಮನೋರಿಗೆ ಹೋಗುವ ನಿರ್‍ಧಾರಕ್ಕೆ ಬರುತ್ತಾಳೆ. ಮುಂಬೈಯಲ್ಲಿಯ ಗಂಡನ ಮನೆಯ ಏಕತಾನತೆಯ ಬದುಕಿನಿಂದ ತನ್ನ ಕನಸಿನ ಮನೋರಿಯ ತಂದೆಯ ಮನೆಗೆ ಬಂದರೆ ಸ್ತ್ರೀಯ ಅರ್ಥವಿಲ್ಲದ ಹುಡುಕಾಟಕ್ಕೆ ಸಾಕ್ಷಿಯೆಂಬಂತೆ ಅಲ್ಲಿಯೂ ಅನುಭವಕ್ಕೆ ಬರುವ ಸಂಗತಿಗಳು ಆಕೆಗೆ ಇರಿಸುಮುರಿಸಾಗುತ್ತದೆ. ಆಕೆಗೆ ತನ್ನ ಬಾಲ್ಯದ ಮನೋರಿಯ ದರ್ಶನವಾಗುವುದಿಲ್ಲ. ಈಗ ಆಕೆ ಸ್ವತಂತ್ರೆ. ಆದರೆ ಸ್ವಾತಂತ್ರ್ಯ ಆಕೆಗೆ ಅನುಭವಿಸಲಾಗುವುದಿಲ್ಲ. ಏಕಾಂಗಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಅದಕ್ಕೆ ಪುನಃ ತನ್ನನ್ನು ಅದೇ ಮಾಸಿದ ಬಣ್ಣದ ರಾಮನ್‌ನ ಬದುಕಿನಲ್ಲಿ ಒಪ್ಪಿಸಿಕೊಳ್ಳುತ್ತಾಳೆ. ಬದುಕಿನೊಂದಿಗೆ ರಾಜಿಯಾಗುವುದಿಲ್ಲ ಎಂಬ ದಿಟ್ಟ ಪ್ರಯತ್ನ ಮಾಡುವ ಸೀತಾಗೆ ತನ್ನ ಪರಿಸ್ಥಿತಿ ಅರಿವಾಗುತ್ತಲೇ ಪಲಾಯನವಾದಿಯಾಗದೆ ಬದುಕಿನೊಂದಿಗೆ ರಾಜಿಯಾಗುತ್ತಾಳೆ. ಬದುಕು ಹೊಂದಾಣಿಕೆ. ಈ ಜಗತ್ತಿನಲ್ಲಿ ಜೀವಿಸಬೇಕೆಂದರೆ ರಾಜಿಯಾಗಲೇಬೇಕು. ಸೀತಾ ಬದುಕನ್ನು ಆಯ್ದುಕೊಳ್ಳುತ್ತಾಳೆ. ಸಹನೆಗೆ ಹೆಣ್ಣು ಎಂಬಂತೆ ಬದುಕಿಗೆ ಜೋತು ಬೀಳುತ್ತಾಳೆ.
ಭಾರತೀಯ ಸ್ತ್ರೀ ಮನಸ್ಸಿನ ಸುಂದರ ಪ್ರತಿಮೆಯಾಗಿ ಸೀತಾ ಕಂಡುಬಂದರೂ ಎಲ್ಲ ಸ್ತ್ರೀ ಸಮೂಹದ ಒಂದು ಮುಖದ ಪರಿಚಯ ಖಂಡಿತ ಈ ಪಾತ್ರ ಮಾಡಿದೆ ಎನಿಸದಿರದು. ಅನಾದಿಯಾಗಿ ಹೆಣ್ಣು ಸಹನೆ ತ್ಯಾಗಗಳ ವರ್‍ತುಲದಲ್ಲೇ ತಿಣಕಾಡುತ್ತ ತೇಕುತ್ತಾ ಕೆಲವೊಮ್ಮೆ ಅದಕ್ಕಾಗಿ ಬೀಗುತ್ತಾ ಮಗದೊಮ್ಮೆ ನೋಯುತ್ತ ಇರುವ ಹೆಣ್ಣಿನ ಜಗತ್ತು ಏಕ ಜಾಗತಿಕ ಹಂದರ ಗಟ್ಟಿಗೊಳ್ಳುತ್ತಿರುವ ಈ ಹಂತದಲ್ಲೂ ಮುಂದುವರೆಯುತ್ತಿದೆ ಎಂಬುದೇ ದೊಡ್ಡ ಸೋಜಿಗ. ಈ ಜಗತ್ತು ಹೆಣ್ಣು ಆಕೆಯ ಅನುಭವಲೋಕ ಎರಡನೆಯ ದರ್ಜೆಯದೆಂದೇ ಭಾವಿಸುತ್ತದೆ. ಗಂಡಿಗೆ ದುಡಿಮೆ ವ್ಯವಹಾರ ಹೊರ ಜಗತ್ತು ಎಷ್ಟು ಮುಖ್ಯವೋ ಹಾಗೆ ಹೆಣ್ಣಿಗೆ ಬದುಕು ಭಾವನೆ ಮುಖ್ಯ. ಹೆಣ್ಣಿನ ಮನೋವಿನ್ಯಾಸ ಗಂಡಿಗಿಂತ ಭಿನ್ನ. ತನ್ನ ಪ್ರತಿ ಹೆಜ್ಜೆಯಲ್ಲೂ ಗಂಡಿನ ಬೆಂಬಲ ಪುರಸ್ಕಾರ ಆಪೇಕ್ಷಿಸುವ ಅಪಕ್ವತೆಯನ್ನು ಜ್ಞಾನದ ಉತ್ತುಂಗವೇರಿದಾಗಲೂ ಬಿಡಲಾರಳು. ಸೀತಾಳಂತಹ ಸಾಮಾನ್ಯ ಸ್ತ್ರೀ ಸಹಜ ವಿಹ್ವಲತೆಯಿಂದ ಬಳಲುತ್ತಾಳೆ.
ಆದಾಗ್ಯೂ ಸ್ತ್ರೀ ನಿಲುವುಗಳು ಪ್ರಕೃತಿ ಪೂರಕವಾಗಿರುತ್ತವೆ. ಪ್ರಕೃತಿ ಹೇಗೆ ನಿತ್ಯ ಜೀವಂತಿಕೆಯೊಂದಿಗೆ ಸದಾ ಪುಟಿಯುವ ಹೊಸದನ್ನು ನಿರ್ಮಿಸುವ ಕಾರ್ಯದಲ್ಲಿ ವ್ಯಸ್ತಳೋ ಹಾಗೆ ಹೆಣ್ಣು ಕೂಡ ಹೊರತಲ್ಲ. ತನ್ನ ಕಾರ್ಯಪರಧಿಯ ವ್ಯಾಪ್ತಿಯಲ್ಲಿ ಪುರುಷನಿಗಿಂತ ಸಮರ್ಥವಾಗಿ ಸಹನೆಯಿಂದ ವರ್ತಿಸುವ ವಿಶಿಷ್ಟ ಕ್ರೀಯಾಶೀಲತೆ ಆಕೆಯದು. ಆತನೊಂದಿಗೆ ಬಯಸಿ ಬೆಸೆದು ಬಾಳುವ ಹಂಬಲ ಆಕೆಯದು. ಆದರೆ ಬಹುತೇಕ ಸಂದರ್ಭಗಳಲ್ಲಿ ಸ್ತ್ರೀಯಷ್ಟು ಭಾವನಾತ್ಮಕನಲ್ಲದ ಪುರುಷ ಆಕೆಯ ಮಾನಸಿಕ ವ್ಯಾಪಾರಗಳ ಅರಿಯದೇ ಸಂಘರ್ಷಗಳು ಎರ್‍ಪಡುವುದು. ಆಕೆಯ ವರ್ತನೆಗಳು ಕೆಲವೊಮ್ಮೆ ಆತನಿಗೆ ಇರುಸು ಮುರಿಸಾಗಬಹುದು. ಸಂಬಂಧಗಳಲ್ಲಿ ಬಿರುಕು ಉಂಟಾಗುವುದು. ಹಾಗಾಗದೆ ಬದುಕು ಸುರಳಿತ ಸಹಜವಾಗಬೇಕಾದಲ್ಲಿ ಹೊಂದಾಣಿಕೆ ಒಂದೇ ಮಾರ್ಗ. ಅದು ಶೇಕಡಾ ೭೫ರಷ್ಟು ಹೆಣ್ಣುಮಕ್ಕಳ ತ್ಯಾಗವೆಂದರೆ ತಪ್ಪಲ್ಲ.
“ಅಂತರಂಗದಲ್ಲಿ ಧರ್ಮವಿದ್ದರೆ ಚಾರಿತ್ಯದಲ್ಲಿ ಸೌಂದರ್ಯವಿರುತ್ತದೆ. ಚಾರಿತ್ಯದಲ್ಲಿ ಸೌಂದರ್ಯವಿದ್ದರೆ ಮನೆಯಲ್ಲಿ ಸಾಮರಸ್ಯವಿರುತ್ತದೆ, ಮನೆಯಲ್ಲಿ ಸಾಮರಸ್ಯವಿದ್ದರೆ ದೇಶದಲ್ಲಿ ವ್ಯವಸ್ಥೆಯಿರುತ್ತದೆ. ದೇಶದಲ್ಲಿ ವ್ಯವಸ್ಥೆಯಿದ್ದರೆ ಜಗತ್ತಿನಲ್ಲಿ ಶಾಂತಿಯಿರುತ್ತದೆ.” ಇದು ನಮ್ಮನ್ನಗಲಿದ ಶ್ರೇಷ್ಠ ಚೇತನ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಅವರ ನುಡಿಮುತ್ತು. ವಿಜ್ಞಾನಿಯಾಗಿದ್ದರೂ ಕೂಡ ವಿಶ್ವ ನೆಮ್ಮದಿಯ ಸಾರ ಸೂತ್ರವನ್ನು ಬರಿಯ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಮಹಾನ ಕಲೆಗಾರ ಅವರು. ಅವರಂದಂತೆ ಬದುಕೊಂದು ಕಲೆ, ಆ ಕಲೆಯ ನಿತ್ಯ ನೂತನ ಗೊಳಿಸಬೇಕಾದಲ್ಲಿ ಸ್ತ್ರೀ ಪುರುಷ ಸಮರಸತೆ ಸಹಬಾಳ್ವೆ, ಸಮನ್ವಯತೆ. ಇವೆಲ್ಲವೂ ಅನಿವಾರ್ಯ.
ಇನ್ನು ಸಾಹಿತ್ಯ ಕ್ಷೇತ್ರದ ವಿಚಾರಕ್ಕೆ ಬಂದರೆ ಸ್ತ್ರೀ ಕೇಂದ್ರಿತ ಸಾಹಿತ್ಯ ಈ ಕಾಲದ ಜರೂರತ್ ಮಹಿಳಾ ಸಾಹಿತ್ಯದ ಮೂಲ ತಂತು ಕೂಡ ಸ್ತ್ರೀತ್ವವನ್ನು ಪ್ರತಿಪಾದಿಸುತ್ತದೆ. ಕಾವ್ಯ ಜಗತ್ತಿನಲ್ಲಿ ಹೇರಳವಾದ ಸಾಧ್ಯತೆಗಳಿವೆ.
ವೈದೇಹಿಯವರು ಒಂದು ಆಪ್ತ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ
“ಹಾಡಿಗೆಲ್ಲಿದೆ ಕೊರತೆ ನಮಗೆ ನಾರಿಯರಿಗೆ,
ಬೀಸಿ ತೂಗಲು, ಪುಟ್ಟ ಕೂಸುಮರಿಯ ತೊದಲು
ನುಡಿಯೊಂದೆ ಸಾಲದೆ, ಕಡೆವಾಯ ನಗೆಯೊಂದೆ ಸಾಲದೇ
ಹಾಡು ಹೊಮ್ಮುವ ಸಣ್ಣ ಉದಾಹರಣೆಗೆ” ಜಾನಪದ ಸ್ತ್ರೀ ಸಮುದಾಯದ ಬದುಕಿನ ಅನುಭವಗಳೇ ಕಾವ್ಯ ಹುಟ್ಟಿಗೆ ಕಾರಣವಾದದ್ದನ್ನು ಅರಳು ನರಳುವಿಕೆಗಳೇ ಕಾವ್ಯದ ಹಂಬಲವನ್ನು ಉಕ್ಕಿಸಿದ್ದನ್ನು ಉತ್ಕೃಷ್ಟವಾಗಿ ನಿರೂಪಿಸುತ್ತಾರೆ.
ಅನಕ್ಷರಸ್ಥ ಮಹಿಳೆಯರು ರಚಿಸಿದ ಜಾನಪದ ಗರತಿಯ ಹಾಡುಗಳು ಜೀವನಾಮೃತದ ಕಣಜಗಳೆಂದೆ ಹೇಳಬೇಕು. ಹಾಗಾಗಿ ಸ್ತ್ರೀ ಬರಿಯ ಭೌತಿಕ ಸ್ವರೂಪ ಮಾತ್ರವಲ್ಲ ಅದೊಂದು ಭೌದ್ಧಿಕ ನಿಲುವು ಕೂಡ. ಸಮಾನ ವಯಸ್ಕ ಗಂಡು ಹೆಣ್ಣುಗಳಲ್ಲಿ ಹೆಣ್ಣಿನಲ್ಲಿ ೩ ರಿಂದ ೪ ವರ್‍ಷಗಳಷ್ಟು ಹೆಚ್ಚಿನ ಭೌದ್ಧಿಕ ಬೆಳವಣಿಗೆ ಇರುವುದು. ೧೫ರ ಹರೆಯದ ಪೋರಿ ೧೮ರ ಹುಡುಗನಷ್ಟೇ ಸಮರ್‍ಥವಾಗಿ ಯೋಚಿಸಬಲ್ಲಳು. ಹಾಗಾಗಿ ಆಕೆಯ ಶರೀರ ದುರ್‍ಬಲತೆಯನ್ನೇ ಮಾಪನವನ್ನಾಗಿಸಿಕೊಂಡು ಅಸಮರ್‍ಥತತೆಯ ಪಟ್ಟ ಕಟ್ಟದೇ ಆಕೆಯ ಅದ್ವಿತೀಯತೆಯನ್ನು ಅರಿಯಬೇಕಾದ ಅನಿವಾರ್‍ಯತೆ ಇದೆ.
*****