ಅಲ್ಲೋಲಕಲ್ಲೋಲವಾದ ಸಾಗರದಲ್ಲು
ನಾನು ಸಾಗರಬಿದ್ದು ಸಾಗಬಲ್ಲೆ.
ಹಾಳು ಹಂಪೆಯ ಮಣ್ಣಿನಂಥ ಕಣ್‌ಗಳ ಕಂಡು,
ನನ್ನ ಚೈತನ್ಯವೂ ನಿಂತ ಕಲ್ಲೆ!

ಸಿಡಿಲ ಸೈರಿಸುವೆ, ಕಂಬನಿಯ ಸೈರಿಸಲಾರೆ,
ನಂಜುಂಡ ಶಿವ ನುಂಗದಂಥ ನಂಜು;
ಭವಭವಾಂತರದಲ್ಲಿ ತೊಳಲಾಡಿಸುತ್ತಿರುವ
ಆ ಭವಾನಿಗೆ ಹಿಡಿದ ಹಗಲಪಂಜು!

ಎಲೆ ಜೀವ, ನರಜನ್ಮವೊಂದೆಯಲ್ಲ;
ಹಲವು ಲೋಕಗಳುಂಟು, ಒಂದೆ ಇಲ್ಲ;
ಜೀವ ಪಾಂಥನಿಗಾಗಿ ದೇಹನೌಕೆ;
ಸಾವೆಂಬುದೊಂದಿರು, ಅಂಜಲೇಕೆ?
*****