Home / ಕಥೆ / ಸಣ್ಣ ಕಥೆ / ಹೈದರಲ್ಲಿಯೂ ಹರಿಸಿಂಗನೂ

ಹೈದರಲ್ಲಿಯೂ ಹರಿಸಿಂಗನೂ

ಮೈಸೂರಿನ ಸೈನ್ಯದಲ್ಲಿ ದಳವಾಯಿಗಳ ಕಾಲದಲ್ಲಿ ಇವರಿಬ್ಬರೂ ಶೂರರೆಂದು ಹೆಸರುಪಡೆದಿದ್ದವರು. ಹರಿಸಿಂಗನನ್ನು ದಳವಾಯಿ ದೇವರಾಜಯ್ಯನು ಕೆಲಸದಲ್ಲಿ ಸೇರಿಸಿಕೊಂಡು ಸನ್ಮಾನಿಸುತ್ತಲಿದ್ದನು; ಕರಾಚೂರಿ ನಂಜರಾಜಯ್ಯನು ಹೈದರನನ್ನು ಕೆಲಸಕ್ಕೆ ಸೇರಿಸಿ ದೊಡ್ಡವನನ್ನಾಗಿಮಾಡಿದನು. ಹೈದರನು ಶೂರನೂ ಚತುರನೂ ಆಗಿದ್ದರೂ ನಡೆನುಡಿಗಳಲ್ಲಿ ಗಾಂಭೀರ್ಯವಿಲ್ಲದೆ ಇದ್ದನು. ಇದನ್ನು ಕಂಡು ಹರಿಸಿಂಗನ ಆತನ ಕಡೆಯವರೂ ಹೈದರನನ್ನು ಹಾಸ್ಯಮಾಡುತ್ತಿದ್ದರು; ಮತ್ತು ನೈಚ್ಯಾನು ಸಂಧಾನದಿಂದಲೇ ದೊಡ್ಡ ಪದವಿಗೇರಿದನೆಂದು ಹೇಳುತ್ತ, ಸಮಯ ಬಂದಂತೆ ಹೈದರನಿಗೆ ಹೆಚ್ಚು ಹೆಚ್ಚು ಅಧಿಕಾರವನ್ನು ಕೂಡುವದು ಯುಕ್ತವಲ್ಲವೆಂದು ದೇವರಾಜಯ್ಯನಿಗೆ ಹೇಳುತ್ತಿದ್ದರು. ಹೈದರನಿಗೂ ಹರಿಸಿಂಗನನ್ನು ಕಂಡರೆ ಆಗುತ್ತಿರಲಿಲ್ಲ. ಹರಿಸಿಂಗನು ರಾಜಪುತ್ರನಾಗಿದ್ದನು; ರಾಜಪುತ್ರ, ಜಾತಿಯ ಗುಣಗಳು ಆತನಿಗೆ ಸಹಜವಾಗಿದ್ದುವು; ಆ ಗುಣಗಳು ಹೈದರನಲ್ಲಿರಲಿಲ್ಲ. ಆದ್ದರಿಂದ ಹೈದರನಿಗೆ ಆತನಲ್ಲಿ ದ್ವೇಷವಾಗಿತ್ತು, ಹರಿಸಿಂಗನು ಹೈದರನನ್ನು ತನ್ನ ಸಮಾನನಂತೆಕಂಡು ಮರ್ಯಾದೆ ಮಾಡುತ್ತಿರಲಿಲ್ಲ; ಎದುರುನಲ್ಲಿ ಕಂಡಾಗ “ಏನು ನಾಯಕರೇ” ಎಂಬ ಮಾತುಗಳೆಷ್ಟೋ ಅಷ್ಟೇ ಹರಿಸಿಂಗನ ಬಾಯಿಯಿಂದ ಹೊರಡುತ್ತಿದ್ದುದು.

ಕರಾಚೂರಿ ನಂಜರಾಜಯ್ಯನು ತಿರುಚನಾಪಳ್ಳಿಯ ಪ್ರಾಂತ್ಯದಲ್ಲಿ ಇಂಗ್ಲೀಷರ ಮತ್ತು ಫ್ರೆಂಚರ ವ್ಯಾಜ್ಯದಲ್ಲಿ ಹೊಕ್ಕು ತನ್ನ ಕೈತೋರಬೇಕೆಂದು ಹವಣಿಸುತ್ತಿದ್ದಾಗ ಇವರಿಬ್ಬರಿಗೂ ವಿಷಮ ಕಾಲವೊಂದು ಒದಗಿತು. ಒಂದು ಸಂದರ್ಭದಲ್ಲಿ ಇಂಗ್ಲೀಷರದಳವೊಂದು ಮರಗಳ ಗುಂಪಿನ ಮರೆಯಲ್ಲಿ ಸಂಚರಿಸುತಿತ್ತು. ಆಗ ಅವರಮೇಲೆನುಗ್ಗಿ ಹೊಡೆದೋಡಿಸಬೇಕೇ ಬೇಡವೇ ಎಂಬ ವಿಚಾರವು ಹೊಂಚುತ್ತಿದ್ದ ಹರಿಸಿಂಗನ ಮನಸ್ಸಿನಲ್ಲಿಯೂ ಹೈದರನ ಮನಸ್ಸಿ ನಲ್ಲಿಯೈ ಏಕಕಾಲದಲ್ಲಿ ತೋರಿತು. ಇಬ್ಬರೂ ಈರೀತಿಯಲ್ಲಿ ಫಲಾಫಲಗಳನ್ನು ಗುಣಿಸುತ್ತ ಒಬ್ಬರನ್ನೊಬ್ಬರು ಹೊಂಚಿನೋಡುತ್ತಿದ್ದ ವೇಳೆಯಲ್ಲಿ ಹೈದರನಕಡೆ ಮೀರಲ್ಲಿರಸಾ ಎಂಬಾತನ ಕುದುರೆಯು ಲವಲವಿಕೆ ಹೆಚ್ಚಾಗಿ ತುಂಟಾಟಕ್ಕೆ ಮೊದಲುಮಾಡಿತು; ಅದಕ್ಕೆ ಆತನೆರಡೇಟನ್ನು ಕೊಡಲು ಅದಕ್ಕಿನ್ನೂ ರೇಗಿ ಆತನನ್ನು ಹೊತ್ತುಕೊಂಡು ಇಂಗ್ಲೀಷಸೈನವಿದ್ದೆಡೆಗೆ ದೌಡಾಯಿಸಿತು. ಇದನ್ನು ನೋಡಿದ ಹರಿಸಿಂಗನು! ಓಹೋ! ಹೈದರನ ಅಧಿಕಾರಿಯು ಶತ್ರುಗಳಮೇಲೆ ಹೊರಟಿದ್ದಾನೆ; ಅವನ ಸೈನ್ಯವೂ ಇನ್ನೊಂದೆರಡು ಕ್ಷಣದಲ್ಲಿಯೇ ಅತನಹಿಂದೆ ಹೊರಡುವುದು. ಶತ್ರುಗಳನ್ನು ಹೊಡೆದೋಡಿಸಿದ ಹೆಸರು ನಮಗೆ ತಪ್ಪಿಹೋಗುವುದು. ಆದ್ದರಿಂದ ನಾನು ಸುಮ್ಮನಿರಬಾರದು” ಎಂದುಕೊಂಡು ತನ್ನ ಸೈನಿಕರಿಗೆ ಆಜ್ಞೆ ಕೊಟ್ಟು ತನ್ನ ದಳವನ್ನು ಇಂಗ್ಲೀಷರಮೇಲೆ ಬಿಟ್ಟನು. ಎಲ್ಲ ಕಡೆಯಲ್ಲ ತನ್ನ ಸೈನಿಕರನ್ನು ಹಂಚಿಕೊಟ್ಟು, ಇಂಗ್ಲೀಷರು ತಮ್ಮ ಫಿರಂಗಿ ಬಂದೂಕುಗಳನ್ನು ಹಾರಿಸುವುದಕ್ಕೆ ಮೊದಲೇ ಅವರ ಪಲ್ಟನುಗಳನ್ನು ಕತ್ತರಿಸಿಬಿಟ್ಟನು. ಇತ್ತ ಹೈದರನು ಮೊದಲು ತುಂಟ ಕುದುರೆಯೋಡಿದುದನ್ನೂ ತರುವಾಯ ಹರಿಸಿಂಗು ಉರುಬಿಕೊಂಡು ಹೊರಟುದನ್ನೂ ಕಂಡು ಹಿಂದೆಯೇ ಬಂದು ಇಂಗ್ಲೀಷರ ಫಿರಂಗಿಗಳನ್ನು ಆಕ್ರಮಿಸಿಕೊಂಡನು. ಇಂಗ್ಲೀಷರ ಪಲ್ಟನುಗಳನ್ನೊಡಿಸಿದಮೇಲೆ ಹರಿಸಿಂಗನು ಆದುದನ್ನು ತಿಳಿದವನಾಗಿ ಕಡೆಗೆ ಇಂಗ್ಲೀಷರ ಫಿರಂಗಿಗಳನ್ನಾದರೂ ಸಾಗಿಸಿಕೊಂಡು ಹೋಗೋಣವೆಂದು ಫಿರಂಗಿಗಳಕಡೆ ನೋಡಿದರೆ ಅಲ್ಲಿ ಹೈದರನು ಬಂದು ಆಗಲೇ ಅವುಗಳನ್ನಾಕ್ರಮಿಸಿದ್ದನು. ಇದ್ದ ಫಿರಂಗಿಗಳು ನಾಲ್ಕು; ಹರಿಸಿಂಗನು ಅವುಗಳು ತನಗೆ ಸೇರಿದ್ದೆಂದು ಹೇಳಲು ಹೈದರನು ಬಿಟ್ಟುಕಡಲೊಪ್ಪಲಿಲ್ಲ. ಕಡೆಗೆ ಹರಿಸಿಂಗನು ಒಂದು ಫಿರಂಗಿಯನ್ನು ತೆಗೆಸಿಕೊಂಡು ತೃಪ್ತನಾಗಬೇಕಾಯಿತು. ಹೊಡೆದಾಡಿದವನು ಹರಿಸಿಂಗ್; ಆತನಿಗೇ ನ್ಯಾಯವಾಗಿ ಅವುಗಳು ಸೇರಬೇಕಾಗಿದ್ದವು. ಆದರೆ ಹೈದರನು ಬಿಟ್ಟು ಕೊಡಲಿಲ್ಲ; ಕೊಳ್ಳೆಯನ್ನು ಸಾಧಿಸುವುದರಲ್ಲಿ ಹೈದರನು ಅಸಮಾನನಾಗಿದ್ದನು. ಹರಿಸಿಂಗನ ಕಡೆಯವರು ಗಟ್ಟಿಯಾಗಿಯೇ “ಹೈದರಲ್ಲಿ ಕ್ಷುದ್ರವನ್ನು ಹೊಸದಾಗಿ ಕಾಣಬೇಕೆ? ಪ್ರಾಣಕೊಟ್ಟು ಶತ್ರುಗಳನ್ನು ಹೊಡೆದವರು ನಾವು; ನಮ್ಮ ಹಿಂದೆ ಬಂದು ಊಟಮಾಡುವುದಕ್ಕೆ ಪ್ರವೀಣರು ಇವರು” ಎಂದು ದೂಷಿಸಿದರು.

ಈ ಸಂಗತಿಯು ನಡೆದಂದಿನಿಂದ ಹೈದರನಿಗೆ ಹರಿಸಿಂಗನನ್ನು ಏನಾದರೂ ಮಾಡಿ ದೂರಸಾಗಿಸುವದೋ ಕೊಲ್ಲಿಸುವುದೋ ಅಂತೂ ಹೇಗಾದರೂ ಮಾಯಮಾಡಬೇಕೆಂಬ ಉದ್ದೇಶವು ಮನಸ್ಸಿನಲ್ಲಿ ನಾಟಿತು. ಹರಿಸಿಂಗನು ಶೂರನಾಗಿದ್ದನೇ ಹೊರತು ಪಿತೂರಿಗಳ ಬೆಲೆಯನ್ನು ಹೆಣೆಯುವುದರಲ್ಲಿ ಹಸುಳೆಯಂತಿದ್ದನು. ಹೈದರನಾದರೋ ಆ ಕೆಲಸದಲ್ಲಿ ನಿಸ್ಸೀಮ ಪಾಂಡಿತ್ಯವನ್ನು ಪಡೆದಿದ್ದನು. ಹರಿಸಿಂಗನನ್ನು ಮಾಯಮಾಡಲು ಹೊಂಚುತ್ತಿದ್ದ ಹೈದರನಿಗೆ ಸಮಯವೂ ಸ್ವಲ್ಪ ಕಾಲದಲ್ಲಿಯೇ ಕೈಗೂಡಿತು.

ತಿರುಚನಾಪಳ್ಳಿಯ ಪ್ರಾಂತ್ಯದಲ್ಲಿ ಕರಾಚೂರಿ ನಂಜರಾಜಯ್ಯನು ಏನನ್ನೂ ಸಾಧಿಸದೆ ರಾಜಧಾನಿಗೆ ಹಿಂತಿರುಗಿಬಂದು ಅಣ್ಣನ ಮಾತನ್ನು ಕೇಳದೆ ಚಿಕ್ಕರಾಜಒಡೆಯರಿಗೆ ಆಸ್ಥಾನದಲ್ಲಿಯೇ ಅವಮಾನಮಾಡಿಸಿದನಷ್ಟೆ. ಆ ಸಮಯದಲ್ಲಿ ದಳವಾಯಿ ದೇವರಾಜಯ್ಯನು ಸತ್ಯಮಂಗಲದಲ್ಲಿ ನೆಲೆಸಿದನು; ಆದರೆ ಹೈದರನು ಖಂಡೇರಾಯನೆಂಬ ಆಪ್ತನಮೂಲಕ ಆತನನ್ನು ರಾಜಧಾನಿಗೆ ಬರಮಾಡಿಸಿ ಸೋದರರಿಗೆ ರಾಜಿಮಾಡಿಸಿದನು. ಮಲೆಯಾಳ ಪ್ರಾಂತ್ಯದಲ್ಲಿ ಮೈಸೂರಿಗೆ ಹಣ ಬರಬೇಕಾಗಿತ್ತು; ಅದನ್ನು ವಸೂಲುಮಾಡಿಕೊಂಡುಬರಲು ಹರಿಸಿಂಗನು ನಿಯಮಿತವಾಗಿ ಹೊರಟನು; ಅಲ್ಲಿಗೆ ಹೋದಮೇಲೆ ಹಣದ ವಸೂಲಿದು ಕಷ್ಟವಾಗಿತ್ತು; ಅಂತಹ ವೇಳೆಯಲ್ಲಿ ತನ್ನ ಧಣಿ ದಳವಾಯಿ ದೇವರಾಜಯ್ಯನು ಮೃತಪಟ್ಟ ಸಮಾಚಾರವು ತಿಳಿಯಬಂದಿತು. ಆಗ ಹರಿಸಿಂಗನು ವಿಳಂಬ ಮಾಡದೆ ರಾಜಧಾನಿಗೆ ಹೊರಡಬೇಕೆಂದು ಮಲೆಯಾಳದಿಂದ ಹೊರಟು ಮುಂಗಾರು ಮಳೆಯು ಹೊಡೆತವನ್ನು ಲಕ್ಷಿಸದೆ ಪ್ರಯಾಣ ಮಾಡಿ ಕೊಯಿಮತ್ತೂರು ಪ್ರಾಂತ್ಯವನ್ನು ತಲಪಿದನು. ಅಲ್ಲಿ ರಾಜಧಾನಿಯಲ್ಲಿ ನಡೆದುದನ್ನು ವಿವರವಾಗಿ ಕೇಳಿ ವ್ಯಸ್ತನಾಗಿ ರಾಜಧಾನಿಗೆ ಹೊರಟು ಹೈದರನ ವಶನಾಗುವುದಕ್ಕಿಂತ ಬೇರೆಲ್ಲಿಯಾದರೂ ಹೋಗಬೇಕೆಂದು ಚಿಂತಿಸಿ, ತಂಜಾವೂರು ರಾಜರ ಬಳಿ ಸೇರಲು ಯೋಚಿಸುತ್ತ, ಹರಿಸಿಂಗನು ವಿಶ್ರಾಂತಿಗೆಂದು ಪ್ರಕಟವಾಗಿ ಹೇಳಿ ಅವಿನಾಶಿಯೆಂಬ ಸ್ಥಳದಲ್ಲಿ ಶಿಬಿರ ಮಾಡಿದನು. ಧೀರನಾಗಿದ್ದ ಹರಿಸಿಂಗನು ಅಲ್ಲಿ ಮೋಸ ನಡೆಯುವುದೆಂದು ನೆನಸಲಿಲ್ಲ.

ಅವಿನಾಶಿಯಲ್ಲಿ ಹರಿಸಿಂಗನು ತಂಗಿದ್ದ ಸುದ್ದಿಯನ್ನು ಕೇಳಿದೊಡನೆಯೇ ಹೈದರನು ತಾನು ಕಾದಿದ್ದ ಸಮಯ ಬಂತೆಂದೆ, ಅಂದುಕೊಂಡನು. ದಿಂಡುಗಲ್ಲು ಪ್ರಾಂತ್ಯಕ್ಕೆ ಸೈನ್ಯದೊಂದು ಭಾಗವನ್ನು ಹಿಂದಕ್ಕೆ ಕಳುಹಿಸುವುದಾಗಿ ಪ್ರಕಟವಾಗಿ ಹೇಳಿಸಿ, ಆ ಸೈನ್ಯದ ನಾಯಕನಾಗಿದ್ದ ಮೊಖದುಂ ಸಾಹೇಬನಿಗೆ ಏಕಾಂತದಲ್ಲಿ ತನ್ನ ಇಷ್ಟವನ್ನು ಸೂಚಿಸಿದರು. ಮೊಖದುಂ ಸಾಹೇಬನು ಅದೇ ಪ್ರಕಾರ ೧,೦೦೦ ರಾವತರು ಮತ್ತು ೨,೦೦೦ ಪದಾತಿಗಳೊಡನೆ ಹೊರಟು, ಸ್ವಲ್ಪ ದೂರ ಕಳೆದ ಮೇಲೆ ಅವಿನಾಶಿಯಕಡೆ ತಿರುಗಿ ಮಧ್ಯರಾತ್ರಿಯ ವೇಳೆಗೆ ಹರಿಸಿಂಗನ ಸಿಬಿರಕ್ಕೆ ಬಂದನು. ಹರಿಸಿಂಗನು ಮೋಸವಾದೀತೆಂಬ ಚಿಂತೆಯಿಲ್ಲದೆ ಮಲಗಿ ನಿದ್ರಿಸುತ್ತಿದ್ದನು; ಆತನ ಭಟರೂ ನಿದ್ದೆ ಮಾಡುತ್ತಿದ್ದರು. ಅಂತಹ ಸಮಯದಲ್ಲಿ ಮೊಖದುಂ ಸಾಹೇಬನು ಸದ್ದಿಲ್ಲದೆ ತನ್ನ ಭಟರೊಡನೆ ಒಳನುಗ್ಗಿ ನಿದ್ರಿಸುತ್ತಿದ್ದವರನ್ನು ಹಾಗೆಯೇ ಕೊಲೆಮಾಡಿಸಿದನು. ಎಚ್ಚರಗೊಂಡು ಪ್ರಾಣವನ್ನುಳಿಸಿಕೊಂಡು ಓಡಿಹೋದವರು ಅತ್ಯಲ್ಪ ಮುಂದಿ; ಹರಿಸಿಂಗನೂ ಆತನ ಸೈನಿಕರಲ್ಲಿ ಬಹು ಭಾಗದವರೂ ಈ ಕಾಳರಾತ್ರಿಯ ಕೊಲೆಗೆ ಸಿಕ್ಕಿ ಮೃತರಾದರು. ಹೈದರನ ಪ್ರತಿ ಕಕ್ಷಿಯು ಈ ರೀತಿಯಲ್ಲಿ ಮಾಯವಾದನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...