ಮೂಲ: ಜಯ ಗೋಸ್ವಾಮಿ
ಸ್ವಪ್ನಮೋಹಿತನಂತೆ ಸಾವನ್ನೂ ಬದಿಗಿಟ್ಟು
ನೀನು ನಿದ್ರಿಸುತ್ತಿರುವೆ
ನಿದ್ದೆ, ಎಚ್ಚರ, ಮತ್ತೆ ನಿದ್ದೆ ಎರಡೂ ನೆಲೆಗೆ
ಹೊರಳುತ್ತಲೇ ಇರುವೆ.
ನಾವು ಬಂದಿದ್ದೇವೆ ನಿನ್ನ ಕಾಣುವುದಕ್ಕೆ,
ನಿನ್ನ ಮಕ್ಕಳೊ ನಾವು
ಓ ಅರಸುಕುವರ, ಇದು ನಮ್ಮ ಭಾಗ್ಯ.
ನೀನು ಯುವಕನಲ್ಲ, ಇಲ್ಲಿ ಯುವಕರೆ ಇಲ್ಲ,
ಹೆಣ್ಣುಗಳ ತೋಳಲ್ಲಿ ತೋಳಿಟ್ಟು ಅವರೆಲ್ಲೂ
ಅಲೆಯುತ್ತಿದ್ದಾರೆ
ಮಳೆ ಸುರಿಯುವುದು ಸಂಜೆ ಬಾನೇ ಕಳಚಿದ ಹಾಗೆ,
ಯಾರೂ ಇಲ್ಲ ಇಲ್ಲಿ, ಪ್ರೀತಿಮಾತಾಡಲು
ಖಾಯಿಲೆ ಬಿದ್ದ ಕವಿಗೆ.
ಕಾಯಿಲೆಯೊ ಅಥವಾ ಸ್ವಪ್ನಮೋಹಿತನೊ?
ಮರುಳಾದಂತಿದೆ ಅವನು ಕನಸುಗಳಿಗೆ.
ಹಿರಿಯ ವ್ಯಕ್ತಿತ್ವವೊಂದು ಕನಸಿನುರಿಯಲ್ಲಿ ಬಿದ್ದು
ಸುಟ್ಟುಹೋಗುತ್ತಿದೆ,
ಆದರಿನ್ನೂ ನೀನು ಸ್ವಪ್ನಮಂತ್ರಗಳಲ್ಲಿ
ಅರ್ಥವೇನನ್ನೋ ಕಾಣುತ್ತಿರುವೆ.
ಎಲ್ಲ ವ್ಯಾಧಿಗಳನ್ನೂ ಪೃಥ್ವಿಯಾಚೆಗೆ ನಾವು ಗುಡಿಸಿಬಿಡುವಂತಾಗಲಿ,
ಎಲ್ಲ ವ್ಯಾಧಿಗಳೂ ಇಲ್ಲಿಂದ ತೊಲಗಲಿ.
ನಿಧಾನ ಮಳೆ ನಿಲ್ಲುವುದು, ಬರುತ್ತಾರೆ ಒಳಗೆ
ವರ್ಚಸ್ವೀ ತರುಣರು,
ಅಲ್ಲಿ ಕಾದಿದೆ ಅವರಿಗೊಂದು ಬೆರಗು;
ಆಗಷ್ಟೆ ಮುಗಿಸಿಟ್ಟ ಕವನ, ಬದಿಯಲ್ಲೇ
ಸಿಹಿತಿಂಡಿ ಪೊಟ್ಟಣ,
ಪಕ್ಕದಲ್ಲೇ ಒಂದು ಮುಗ್ಧ ಮಗುವಿನ ಹಾಗೆ
ನಿದ್ರಿಸುತ್ತಿದ್ದಾನೆ ವಿನಯ ಮಜುಂದಾರ.
*****
















