(ಮೊದಲು ಮಾತು)
ನಾನು. ೧೯೨೭ ರಲ್ಲಿ ಕಂಡ ಒಂದು ಕಣಸನ್ನು ಅವಲಂಬಿಸಿದ ದೃಶ್ಯಾತ್ಮಕ ಕವನವಿದು. ಕಣಸೂ ಅದರಿಂದ ಸೂಚ್ಯವಾದ ಭಾವವೂ ನನ್ನ ಅನೇಕ ಚಿಕ್ಕ ಕವಿತೆಗಳಲ್ಲಿ ಸುಳಿಯುತ್ತಿದ್ದವು. ೧೯೩೨ ರಲ್ಲಿ ಅವಕ್ಕೆ ‘ಪತನ’ದ ರೂಪವನ್ನು ಕೊಟ್ಟೆನು. `ಒರ್ವ ಸುರನ ವಾಣಿ’, ಹಾಗು ‘ಒ೦ದು ಅಶರೀರ ವಾಣಿ’ಯು ಹೇಳುವ ಮಾತುಗಳು ನಾನು ನಿರೂಪಿಸ ಬೇಕಾಗಿದ್ದ ಭಾವನೆಯಿಂವ ಸೂಚ್ಯವಾದ ತತ್ವಗಳಾಗಿ ಒಳಸೇರಿ ದೃಶ್ಯದ ಸಮಗ್ರತೆಯನ್ನು ಕಾಯ್ದಿವೆ. ಋಷಿಯ ಮಾತುಗಳಲ್ಲಿ ಎಷ್ಟೋ ಭಾಗವು ಬಂದಿದ್ದೂ ಆ ಭಾವನೆಗೆ ಪುಟಕೊಡಲೆಂದು ಉಳಿದ ಸನ್ನಿವೇಶವನ್ನೆಲ್ಲ ಕಣಸಿನಲ್ಲಿದ್ದಂತೆ ಚಿತ್ರಿಸಿದೆ. ಆದರೆ ಋಷಿಯ ತಾಣದಲ್ಲಿ ಪಾಮರನಾದ ನನ್ನನ್ನು ಸೇರಿಸಬೇಕು ಮಾತ್ರ!
ಇಲ್ಲಿಯ ಮೂಲ ಭಾವನೆ ಹೀಗೆ: ಮಾನವನು ಸಮಗ್ರವಾದ ಸೌಂದರ್ಯವನ್ನಾಗಲಿ-ತನ್ನ ಆನಂದದ ನೆಲೆಯನ್ನಾಗಲಿ ಕಾಣುವದು ಅಷ್ಟೊಂದು ಬಿಗಿಯಲ್ಲ. ಆದರೆ ಆ ಸೌಂದರ್ಯದ ಇಲ್ಲವೆ ನೆಲೆಯ ಅನುಭವವು ಅವನಿಗೆ ದೊರೆಯಬೇಕಾದರೆ ಅವನಲ್ಲಿದ್ದ ಮಾನವೀಯ ದುರ್ಬಲತೆಯೆಲ್ಲ ತೊಲಗಬೇಕು. ‘We are all lost children of the stars’ (ನಾವೆಲ್ಲರೂ ಚಿಕ್ಕೆಗಳ ಮಕ್ಕಳು; ದಾರಿ ತಪ್ಪಿಸಿಕೊಂಡು ಅಲೆಯುತ್ತಿದ್ದೇವೆ) ಎಂದು ಎ. ಇ.ಹೇಳಿದ್ದಾಕೆ. ‘ಮಾನವನೆಂದರೆ ಪತನಹೊಂದಿದ ದೇವದೂತ’ ಎ೦ಬ ಕಲ್ಪನೆಯೂ ಸರ್ವಶ್ರುತವಿದೆ. ಮಾನವನು ಜನ್ಮತಃ ಧ್ಯೇಯವಾದಿಯೇನೋ ನಿಜ. ಧ್ಯೇಯವನ್ನು ಅವನು ಕಣ್ಣಾರೆ ನೋಡಬಹುದು. ಅದನ್ನು ತನ್ನ ಜೀವನದಲ್ಲಿ ನುರಿಸಲು ಮಿತಿಮೀರಿ ಸಾಹಸವಪಡಬಹುದು. ಆದರೆ ‘ಸಾಹಸಕೆ ನೆರವಿಲ್ಲ. ಗೆಲುವೆಲ್ಲಿ!’ ಎಂಬುವಂತೆ, ದೈವಿಕ ಕರುಣೆಯು ಅವನ ದುರ್ಬಲತೆಯನ್ನು ಮಾಯವಾಗಿಸುವ ತನಕ ಮಾನವನು ಕಾಯಬೇಕಾಗುವದು.
ಇಂಥ ಒಂದು ಭಾವನೆಯನ್ನು ವ್ಯಕ್ತಗೊಳಿಸುವಾಗ ಕವನವು ‘ವಿಚಾರಿತ-ರಮಣೀಯ’ವಾಗುವದು ಅಗತ್ಯವಾಗಿದೆ; ವಿಚಾರಪರಿಪ್ಲುತವಾಗಿದೆಯೆಂದೂ ಕೆಲವರಿಗೆನಿಸಬಹುದು. ನಾನು ಇಷ್ಟು ಮಾತ್ರ ಹೇಳ ಬಲ್ಲೆ; ಇಲ್ಲಿರುವದು ಕೇವಲ ವಿಚಾರವಲ್ಲ; ನನ್ನ ಹೃದಯವನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಒಂದು ಪ್ರತೀಕ, ಭಾವನೆ; ನನ್ನ ಆನಂದ – ವಿಷಾದಗಳನ್ನುಂಡು ಪುಷ್ಟವಾದ ರಸ.
ಗೆಳೆಯರ ಮಾತುಗಳ ಮೇರೆಗೆ ಕವನವನ್ನು ಅಲ್ಲಲ್ಲಿ ತುಸು ತಿದ್ದಿದ್ದೇನೆ.
ಈ ದೃಶ್ಯವನ್ನೋದಿ ‘ತಲೆಶೂಲಿ’ಯೆದ್ದಿತೆಂದು ‘ಪ್ರೇಮ’ದಲ್ಲಿ ಒಬ್ಬ ವಿಮರ್ಶಕರು ಬರೆದಿದ್ದಾರೆ. ಎಂತಹ ದಪ್ಪಾದ ಕನ್ನಡಕಗಳನ್ನು ಹಚ್ಚಿ ಕೊಂಡರೂ ಈ ರುದ್ರದೃಶ್ಯವು ನಮಗೆ ಗೋಚರವಾಗಲೊಲ್ಲದು. ಮುಗಿಲು ನಾಡಿನ ಮೇಲಿನ ಮುಗಿಲಿಗೆ ಹಾರಬೇಕೆಂದು ಹವಣಿಸಿದರೆ ನಮ್ಮ ಅಧಃಪತನವಾಗುವದೆಂದು ಅಂಜಿ ಆ ಹವ್ಯಾಸವನ್ನು ಬಿಟ್ಟೆವು ಎಂದು `ಕರ್ನಾಟಕ ವೈಭವ’ದಲ್ಲಿಯ ವಿಮರ್ಶಕರು ಬರೆದುಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಈ ವಿಮರ್ಶಕರ ದೇಹಮನಃಸ್ಥಿತಿಯ ಪರಿಣಾಮವೊ ಹಾಗು ಕವನದಲ್ಲಿಯ ದೋಷಗಳ ಪರಿಣಾಮವೋ ನೋಡಬೇಕಾದಂಥ ವಿಷಯ.
ಸರಳ ರಗಳೆಯು–ವಿಶೇಷತಃ ‘ಪತನ’ದಲ್ಲಿಯ ಸರಳ ರಗಳೆಯು-ಯಾಂತ್ರಿಕವಾಗಿದೆಯೆಂದು ‘ಜಯಕರ್ನಾಟಕ’ ದಲ್ಲಿಯ ಒಬ್ಬ ವಿಮರ್ಶಕರು ಆಕ್ಷೇಪಿಸಿದರು. ಎಲ್ಲ ಭಾಷೆಯು-ಗದ್ಯವೂ ಕೂಡ-ಯಾಂತ್ರಿಕವೆಂಬುದನ್ನು ನಾನು ಅವರಿಗೆ ತೋರಿಸಬಲ್ಲೆ. ಯಂತ್ರದಲ್ಲಿ ಮಂತ್ರವನ್ನು ಊದುವದೇ ಕಲೋಪಾಸಕನ ಕಾರ್ಯವಾಗಿದೆ. ‘ಪತನ’ದಲ್ಲಿ-ಯಾವ ಸರಳ ರಗಳೆಯಲ್ಲಿಯೂ ಕೂಡ-ಈ ಮಂತ್ರ, ಈ ಶಬ್ದ-ಛಂದಗಳ ಸಂಗೀತವಿದೆಯೋ ಇಲ್ಲವೋ ಎಂಬುದೇ ನಿಜವಾದ ಪ್ರಶ್ನೆ. ಮಂತ್ರವನ್ನು ಕೇಳುವ ಇಚ್ಛೆಯಿದ್ದರೆ ಯಾವ ರಸಿಕನಾದರೂ ಒಂದು ಯಾಂತ್ರಿಕ ಯೋಜನೆಯನ್ನು ಸ್ವೀಕರಿಸಲೇಬೇಕು. ಸರಳ ರಗಳೆಯು ಅಂಥದೊಂದು ಯೋಜನೆ.
ಪುಣೆ
೧೦-೧೧-೩೪ ವಿನಾಯಕ
ಪತನ
(ಒಂದು ದೃಶ್ಯಾತ್ಮಕ ಕವನ)
[ಮುಗಿಲ ಮೇಲೆ, ನಮ್ಮ ಕಣ್ಣು ಕಾಣುವ ತಾರೆಗಳ ವೈಭವದಾಚೆಗೆ ಒಂದು ದೊಡ್ಡ ಬಯಲು. ನಮಗೆ ಮೇಲೆ ಕಾಣುವ ಈ ಮುಗಿಲು ಆ ಬಯಲಿನ ಭೂತಲವೆನ್ನಬಹುದು. ಅಲ್ಲಿ ಎರಡು ಭವ್ಯವಾದ ಕೊತ್ತಳಗಳ ನಡುವೆ ಒಂದು ಮಹಾದ್ವಾರವಿದೆ. ಕೊನೆಯೇ ಇಲ್ಲದಾಗಿರುವ ಕೊತ್ತಳಗಳೂ, ದ್ವಾರವೂ ಮೇಲೆ ಮೇಲೆ ವಿರಾಜಿಸುವವು. ಈ ಮಹಾದ್ವಾರದ ಎದುರಿಗಿರುವ
ವಿಶಾಲವಾದ ಬಯಲು ಪ್ರವೇಶದಲ್ಲಿ ದ್ವಾರದಿಂದ ತುಸು ದೂರಕ್ಕೆ ಒರ್ವ ತವಸಿಯು ಕುಳಿತಿದ್ದಾನೆ. ಯೋಗಿಯ ಭುಜಗಳಲ್ಲಿ ರೆಕ್ಕೆಗಳಿರುವದು ಕಂಡು ಬರುವದು. ಅವನ ಮೋರೆಯ ಮೇಲಿನ ಕಳೆಯು ವಿಲಕ್ಷಣವಾದುದು. ಹರೆಯನ್ನೂ ಜರೆಯನ್ನೂ ಅರಿಯದಿರುವ ಆತ್ಮನ ಪ್ರಶಾಂತ ಪ್ರಸನ್ನತೆಯು ಅವನ ಮುಖದಲ್ಲಿ ಬೆಳಗುತ್ತಿರುವದು. ಕಾಲ ದ್ವಾಪರಿಯುಗವಾಗಿರಬಹುದು. ಸಮಯ,- ಮುಂಜಾವಲ್ಲ ಸಂಜೆಯೂ ಅಲ್ಲ, ಹಗಲಲ್ಲ ರಾತ್ರಿಯೂ ಅಲ್ಲ. ಭೂಲೋಕದ ಜ್ಯೋತಿಗಳಾದ ರವಿ, ಚಂದ್ರ, ತಾರೆಗಳು ನಭೋಮಂಡಲದ ಕೆಳಗೆ ಸುಳಿಯುತ್ತಿರುವಾಗ ಕಾಲವಿಭಾಗವು ಸ್ವರ್ಗಲೋಕದಲ್ಲಿ ಹೇಗೆ ಬರಬೇಕು? ಹೀಗೆ ಮುಗಿಲುನಾಡಿನ ಮೇಲಿನ ಮುಗಿಲಿನಲ್ಲಿ ಒಂದು ಅಖಂಡವಾದ ಶಾಂತಿಯು ಮಾತ್ರ ನೆಲೆಸಿರುವದು, ಬೆಳಕು ಕತ್ತಲೆಯೆಂಬ ಭೇದವೇ ಅಲ್ಲಿರುವದಿಲ್ಲ. ಇದನ್ನೆಲ್ಲ ನೋಡಿದಾಗ “There midnight’s all a glimmer and noon a purple glow” ಎಂಬ ಉದ್ಗಾರವು ಮಾತ್ರ ಏಳುವದು.]
ತವಸಿ:
ಇಂದ್ರನಮರಾವತಿಯೆ! ನಿನ್ನ ಕಂಡುದು ದಿಟವು.
ದಿಗ್ಭ್ರಾಂತನಂತೆ ಮಾನವ ಕೋಟಿಯೊಳು ಜನಿಸಿ
ಭೂಮಂಡಲವ ತಿರುಗಿ ತೊಳಲಿದೆನು. ಸೌಂದರ್ಯ-
ವೇ ಪರಮ ದೈವತವು ಎಂದೆಣಿಸಿ ಸಾಸಿರದ
ಬೆಲೆ ಬಾಳ್ವ ಕಾಲದಲಿ ಚೆಲುವ ತೂಗುತ ನಿಂತೆ.
ಇಳೆಯ ಮಳೆಗಾಲಗಳ ವಿಂಂಚುಗಾರಿಕೆಯಂತೆ
ಚೆಲುವಿಕೆಯ ಕೈವಾಡವೆಂದರಿತು ಮುಂದೊಂದು
ಸಾಸಿರದ ಕಾಲವನು ತಾರೆಗಳ ಶಾಂತಿಯನು-
ತಾರೆಗಳ ನಾಡಿನೊಳು ನೆಲೆಸಿರುವ ಕಾಂತಿಯನು-
ಪಡೆಯಲೆಂದೆಳೆಸಿದೆನು. ಇಂದ್ರಿಯದ ಜೀವನವು
ನಂದಿತ್ತು ಕಾಳ್ಗಿಚ್ಚಿನಂದದಲಿ. ತಾಳ್ಮೆಯದು
ರೋಮ ರೋಮಗಳಲ್ಲಿ ನಿಮಿರ್ದಿತ್ತು. ಮಾನಸವು
ಮಾನಾರ್ಣವವ ಕೂಡಿ ನಿಂದಿತ್ತು. ಅಸುವೊಂದೆ
ಪರಮ ಹರ್ಷವ ಬೇಡಿ ಪಳಗಿತ್ತು. ಆನಂದವದು
ಮೌನದಾಚೆಯ ಕ್ಷೀರಸಾಗರವು. ಮತ್ತೊಂದು
ಸಾಸಿರದ ಕಾಲವನು ಉಗ್ರ ತಪನದಿ ಕಳೆದೆ.
ವಿಶ್ವಗಳನಾಳುವ ಸನಾತನರ-ಅನಿಮಿಷರ-
ಲೀಲೆಯಿಂದಿದರ ತಿರುಳನು ತಿಳಿವುದೆಂದೆಣಿಸಿ
ಸುರನಿಕಾಯದ ತನೂರುಹಗಳೆನಗಿರಲೆಂದು
ಬಯಸಿದೆನು. ನಿನ್ನೆ ಮಾಗಿದುದೆನ್ನ ಬಯಕೆಯದು.
ಪಕ್ಕಗಳ ಮೇಲೆತ್ತಿ, ಭೂಮಿಯಾಯತಿಯೆಲ್ಲ
ಒಂದು ಕ್ಷಣದಾಭಾಸವಿರೆ, ವಾಯುವೀಥಿಯಲಿ
ಮುಂಬರಿದು ದಿಙ್ಮಂಡಲವು ದಿನದ ಕನಸಾಗೆ
ಚಂದ್ರನನು ಬಲಗೊಂಡು ರವಿಯ ಕಣ್ಣನು ಕುಕ್ಕಿ
ತಾರೆಗಳನೆಡಗೊಂಡು ಮುಗಿಲ ಮೇಲಿಳಿದಿಹೆನು!
ಯಾವ ಬೇವಸವಿಲ್ಲವೀ ಬಟ್ಟ ಬಯಲಿನಲಿ.
ಕ್ಷುಧೆಯಿಲ್ಲ; ಹೀನ ಮಾನವರ ದುಮ-ದುಮವಿಲ್ಲ;
ಕಾಲದಾಳಿಕೆಯಿಲ್ಲ. ಅಮರಾವತಿಯ ಕಂಡೆ;
ಕೊನೆಯ ಕಾಣದೆ ಮೆರೆವ ಕೊತ್ತಳದ ಕೋಟೆಯಿದು
ಅನಿಮಿಷರ ಬಾಳುವೆಯ ನೊಳಗೊಂಡು ನಿಂತಿಹುದು.
ಭೂದೇವಿಯೆಸಗುತಿಹ ದಿನದಿನದ ಹೆಚ್ಚಳದ
ಮೂಲವಿಲ್ಲಿರುತಿಹುದು, ಹಿಗ್ಗಿನ ನಿವಾಸವಿದು.
ಇಂದ್ರನಲ್ಲಿಗೆ ಹೋಗಿ ಅವನ ಸಾಸಿರ ಕಣ್ಗ-
ಳೆದುರೆನ್ನ ಮರ್ತ್ಯುದೇಹವನೊಡ್ಡಿ ಹೊಂಬಸಿರ
ನನು ಕಂಡು ಅವನಲ್ಲಿ ವೇದನೆಯನುಸಿರುವೆನು.
ಅಮರತೆಯ, ಆನಂದದಮೃತವನು ಪಡೆಯುವೆನು.
(ಸುತ್ತು ನೋಡಿ)
ತೇಜವದು ಈ ಲೋಕದಿರವೆಂದು ತೋರುವದು.
ಕಣಕಣದಿ ಸೂಸುವದು. ಭೂಮಿಯಲಿ ಮೆರೆದೆನ್ನ
ಶಾಂತಿಯುತ ಮಾನಸವ ನಸುವೆ ಕಳೆಗುಂದಿಪುದು.
ತೆರೆದ ದ್ವಾರವ ಸೇರಿ ಮುಂದೆ ಸಾಗುವ ಮುನ್ನ
ಇಲ್ಲಿ ತುಸು ರಮಿಸುವೆನು.
(ತುಸು ಹೊತ್ತಿನ ಮೇಲೆ)
ತಾಳು, ತಾಳೆಲೆ ಮನವೆ!
ವಜ್ರಧಾರಿಯ ನೋಡಲಣಿಗೊಳಿಸುವಾರ್ಪುಳ್ಳ
ನಿನಗೇಕಧೀರತೆಯು? ನನ್ನ ಮಾನವ ಕೋಟಿ
ಜೀವಜೀವೇಶನೊಳು ಕದನವೆಸಗುವದೇನು?
ಹರ್ಷಸ್ಪಂದನ ಕಾಲವೀಗ ಬಂದೊದಗಿಹುದು.
[ಅಷ್ಟರಲ್ಲಿ ಕೋಲ್ಮಿಂಚಿನಂತಹ ಒಂದು ಬೆಳಕು ಕೋಟೆಯೊಳಗಿಂದ ಬಯಲಿನ ಮೇಲಿರುವ ಮುಗಿಲಿನಲ್ಲಿ ಸಾವಕಾಶವಾಗಿ ತೇಲಿ ಬರುವದು.]
ಸ್ವರ್ಗಲೋಕದ ಮಿಂಚು! ಇದು ಏನು? ಮಿಂಚಲ್ಲ.
ಅಳಿಯದಿದೆ. ನನಗಾಗಿ ಬ೦ದ ಸಂದೇಶವಿದು.
ಗಗನದಲಿ ಸ್ವಂಚ್ಭಂದವಾಗಿ ವಿಹರಿಪ ಹಕ್ಕಿ-
ಯಂತಲೆವ ಅಮರತೆಯ ಬಾಳಿಗಿಹ ನೀಳ್ಬೆಳಕೆ!
ಬೆಸನವೇನದು ಹೇಳು. ನಿತ್ಯಚರನಿಹೆಯೇನು?
ಇಲ್ಲದಿರೆ ಮನದ ಸತ್ಯವನು ಕಡೆಗಾಣಿಸಲು
ಎದುರು ಬಂದಿಹೆಯೇನು? ಓ ಬೆಳಕೆ! ಓ ಬೆಳಕೆ!
(ಇಷ್ಟರಲ್ಲಿ ರೆಕ್ಕೆಯುಳ್ಳ ಕುದುರೆಗಳನ್ನೇರಿದ ಅನಿಮಿಷರು ಕೋಟೆಯ ಮೇಲಿನಿಂದ ಕ್ರಮವಾಗಿ ಬಂದು ಗಗನದಲ್ಲಿ ಸಂಚರಿಸಹತ್ತುವರು. ಕುದುರೆಗಳ ವರ್ಣವು ನೀಲಮಯವಾದುದು; ದೇವತೆಗಳೂ ಸಹ ಸಾದುಗಪ್ಪಾಗಿರುವರು.)
ಬೆಳಕಿನಡಿಯಲಿ ಬೆಳಕು! ಓ ವಿಶ್ವಪುರುಷರಿರಾ!
ತೇಜಮಯ, ಶಾಂತಿಮಯ, ಆನಂದಮಯವಾದ
ಆಕಾಶದಲಿ ಕ್ರೀಡಿಸುತಿಹ ದೇವತೆಗಳಿರಾ!
ಅಳಿವುಳಿವುಗಳ ತೆರೆಯನೋಸರಿಸಿ ದೇಹದೀ
ಪರಿಯನೆಲ್ಲವ ತೊರೆದು ಹಗಲು-ಕತ್ತಲೆಯೆಂಬ
ಭಾವನೆಯ ಸಿಂಪುಗಳನೊಡೆದ ಮೌಕ್ತಿಕಗಳಿರಾ!
ವಂದನೆಗಳಿವು ನಿಮಗೆ.
[ಕುಳಿತಲ್ಲಿ ಕೈ ಮುಗಿಯುವನು]
ಬರಿಯ ಪಾಮರ ನಾನು.
ಆದರೀ ನನ್ನ ಮಾನವ ಜನ್ಮವೆಸಗಿರುವ
ಕೀಳು ಗೆಯ್ಮೆಯನಿಲ್ಲದಾಗಿಸಲು ಸಾಸಿರದ
ಕಾಲಗಳನತಿ ಯುಗ್ರ ತಪನದಲಿ ಕಳೆದಿಹೆನು;
ಕಟ್ಟಳಲ ಕಟ್ಟರಸು, ಸಂತಸದ ಸಯ್ದಾರೆ
ಯನು ಪಡೆಯಲೆಳಸುವೆನು. ಕಾರಣಿಕ ರತ್ನಗಳೆ!
ಕರುಣಿಪುದು. ಬೆಳ್ಮಾಡಬೇಡಿ ಮನದಾಸೆಯನು.
ಒರ್ವ ಸುರನ ವಾಣಿ
ಅಮರಾವತಿಯ ಸಾರುವಂಥ ಸೈಪನು ಪಡೆದೆ.
ಅಮರನಾಗುವ ಬಗೆಯ ನೀನೆ ಕಾಣ್ವುದು, ತವಸಿ!
ತವಸಿ
ಇಲ್ಲಿ ತೀರಿತು ನನ್ನ ತಾಪಸನ ಪುಣ್ಯವದು.
ಸಹಿಸೆನಿಲ್ಲಿಹ ಓಜತೇಜಗಳ, ಆಢ್ಯತೆಯ.
ಮನವನ್ನು ತೀವಿದುದು ಕ್ರಂದನವು; ಹುಮ್ಮಸವು
ಜೊಂಪಿಸಿತು, ಹೃದಯವದು ಕಂಪಿಸಿತು. ಅನಿಮಿಷರೆ!
ಅತಿಶಯದ ಮಾತಲ್ಲ, ಮಲ್ಲಿಗೆಯ ಮುಡಿದಂತೆ
ಸಾಜವಾಗಿಹ ಕಾರ್ಯವದು ನಿಮಗೆ. ಕರುಣಿಸಿರಿ.
ಇಂದು ನೀವೆನ್ನ ಬಿನ್ನಹಕೆ ವಶವಾಗದಿರೆ
ಒಂದು ಜೀವದ ಜ್ವಾಲೆ ವಿಶ್ವವನು ಜ್ವಲಿಸುವದು;
ಲೋಕಗಳು ಅಡಗುವವು; ಮಾನವ್ಯದೇಳಿಗೆಯು
ಅಭಿಮಾನಿಯಾದೆನ್ನ ಬಳ್ಳಿಯಂದದಿ ಸುತ್ತಿ
ಇನ್ನೊರ್ವ ಸಾಹಸನಿಯು ಮುಂಬರಿದು ಬರುವನಕ
ನನ್ನೊಡನೆ, ನನ್ನೊಡನೆ ಪತನವನ್ನೈದುವದು.
ನಿಮ್ಮ ಹಿರಿಯಾನಂದದಮೃತಕಲಶವದೆಲ್ಲಿ?
ನಿಮ್ಮ ಪರಿಪೂರ್ಣತೆಯು ದೊರೆವ ಸುಮವನವೆಲ್ಲಿ?
ನೋಯಿಸುವ ಹೃದ್ಬಂಧಗಳು, ನೀವು ತಡೆದಿರಲು,
ಮರುಕ್ಷಣವೆ ನನ್ನ ನಿಲ್ಲಿಂದ ಮರೆಮಾಡುವವು.
ಕರುಣಾಳುಗಳು ನೀವು ನನ್ನನುಳಿಸದೆ ಇರಲು
ದೇವೇ೦ದ್ರನಿಂದ್ರಪದವಿಗೆ ಭಂಗವಹುದಲ್ತೆ?
[ತವಸಿಯು ಕೈಮುಗಿಯುವನು. ಆಕಾಶದಲ್ಲಿದ ಬೆಳಕು ಮೆಲ್ಲನೆ ಮತ್ತೆ ತೇಲಲು ಪ್ರಾರಂಭವಾಗುವದು. ಮುಗಿಲಿನಲ್ಲಿ ಸ್ವಚ್ಛಂದವಾಗಿ ಕೋಟೆಯೆಡೆಗೆ ಹರಡಿಕೊಂಡಿದ್ದ ಅಶ್ವಾರೂಢರಾದ ದೇವತೆಗಳು ಕ್ರಮವಾಗಿ ಕೋಟೆಯಿಂದ ಮುಂದೆ ತವಸಿಯು ಕುಳಿತ ಬೈಲಿನ ಭಾಗದ ಮೇಲೆ ಹಾಯ್ದು ಹೋಗಲೆಸಗುವರು. ಹೀಗೆ ಒರ್ವರ ಹಿಂದೊರ್ವರು ಸಾವಕಾಶವಾಗಿ ಹೋಗುತ್ತಿರುವಾಗ ಆ ಬೆಳಕು ಪ್ರತಿಯೊರ್ವ ದೇವತೆಯ ಹಿಂದಿನಿಂದ ಬಂದು ಹಿಂಭಾಗದಲ್ಲಿ ನಿಂತು ಬಲ್ಲ ದೇವತೆಗಳ ಹೃದಯವನ್ನು ನಿಚ್ಚಳವಾಗಿ ತೋರುವದು; ಅದರ ಹೃದಯದೊಳಗಿನ ಸೂಕ್ಷ್ಮ ಚಲನವಲನೆಗಳೆಲ್ಲ ಸ್ಪಷ್ಟವಾಗಿ ಕಾಣುವಂತೆ ಮಾಡುವದು. ಅದಲ್ಲದೆ ಕನ್ನಡಿಯೊಳಗಿಂದ ಕಂಡುಬರುವ ಛಾಯಾಚಿತ್ರದಂತೆ-ಸುರರ ಹೃದಯವು ಎಷ್ಟು ತಿಳಿಯಾಗಿ, ನಿರ್ಮಲವಾಗಿರುವದೆಂಬುದನ್ನು ತೋರಿಸಲೇನೋ ಎಂಬಂತೆ-ಸುರರ ಹೃದಯದೊಳಗಿಂದಾಚೆಗೆ ಮೊದಲಿದ್ದ ಹಾಗೆ ಬೆಳಕು ಕಂಡುಬರುವದು. ಬೆಳಕಿನ ತೀವ್ರವಾದ ವರ್ಚಸ್ಸು ಹಾಗು ತವಸಿಯ ಮೇಲ್ನೋಟ,-ಇವುಗಳ ನಡುವೆ ಸುರರು ಕ್ರಮವಾಗಿ ಸಾಗಿರುವರೆನ್ನಬಹುದು. ಈ ಅದ್ಭುತವನ್ನು ನೋಡಲು ತವಸಿಯು ಮುಖವನ್ನು ಮೇಲೆತ್ತುವನು]
ಒಂದು ಅಶರೀರವಾಣಿ
ಇದು ನನ್ನ ಬೆಳಕಿಹುದು. ಒರೆದು ನೋಡುವ ಬೆಳಕು,
ಆ ಮೇಲೆ ತನುಮನವನೆಲ್ಲ ತುಂಬುವ ಬೆಳಕು.
ಈ ಬೆಳಕಿನಲಿಯುಗಮ, ಆದಿ, ಲಯ, ಕೊನೆಯಿಹುದು.
ಬಾಹ್ಯಸೌಂದರ್ಯವನು ಮೋಹಿಸುತ್ತ-ದೈವಿಕತೆ-
ಪೂರ್ಣತೆಯ ತಿಳಿಯದಿಹ ಧವ್ಯಭಾವನೆಯೊಂದು
ಈ ಬೆಳಕಿನೆದುರು ಬರೆ ಬೀಳುತಿಹ ಛಾಯೆಯನು
ಲೋಕವೆಂದೆನುತಿಹರು. ಮೋಹಿಸುತ ಕಳೆಯೇರಿ-
ದೊಂದು ಜೀವವು ಬೆಳಕಿನೆದುರು ಗೋಚರವಾಗೆ
ಅರ್ಥ ಪಡಿನೆಳಲರ್ಧನೆಳಲಾಗಿ ಮಾನವನ
ಬಾಳ್ಮೆಯೆಂಬಭಿನಾಮವಾಂತಿಹುದು. ನೆರೆ ನೋಡು!
ಸುರರ ಹೃದಯಗಳೆಲ್ಲ ಈ ನನ್ನ ಬೆಳಕಿಗಿಹ
ದರ್ಪಣಗಳಂತಿಹವು. ದೋಷವಿನಿತಿನಿತಿಲ್ಲ.
ಮಾಜದಲೆ ಕುಂದದಲೆ ಬೆಳ್ಳ ಬೆಳಕಿಗೆ ದಾರಿ-
ಯಾಗಿರುವ ಎದೆಯಹುದು ಪೂರ್ಣತೆಯ ತವರುಮನೆ.
ಬೆಳಕನನುರೂಪಿಸುವ ಕನ್ನಡಿಯು ತನಗಿರುವ
ರೂಹನಾದರು ಕಾಯ್ದುಕೊಂಡಿಹುದು. ಅರ್ಪಣದ
ಜೀವನವ ಸಾಧಿಸಿದ ಪರಿವಿಡಿಯನೀಕ್ಷಿಪುದು
ಸುರರ ಹೃದಯದ ಸೂಕ್ಷ್ಮ ಸೃಷ್ಟಿಯಲಿ. ಇದು ನಿನ್ನ
ಮನದಿ ಬಿಂಬಿಸುವನಕ ದೇವತೇಜವದರಿದು.
ಬ್ರಹ್ಮತೇಜಕೆ ನಿನ್ನ ಬಾಳು ಸೊತ್ತಾಗಿಹುದು.
[ಬೆಳಕು ನಿರ್ಜರರ ಹೃದಯವನ್ನು ಉದ್ದೀಪಿಸುವದು ಸಾಗುತ್ತಲೇ ಇರುವದು. ಈ ಪ್ರಖರವಾದ ತೇಜಸ್ಸನ್ನು ತಾಳಲಾರದೆ ತವಸಿಯು ಮೋರೆಯನ್ನು ಕೆಳಗೆ ಮಾಡುವನು. ಭಯಂಕರವಾದ ವ್ಯಥೆಯೊಂದು ಅವನನ್ನು ನೋಯಿಸುವದು ಮೋರೆಯ ಮೇಲಿಂದ ಕಂಡುಬರುವದು.]
ತವಸಿ:
ಅರಿದರಿದು! ಓ ಬೆಳಕೆ! ಧಗಧಗಿಪ ಸತ್ಯವೆ!
ನಿನ್ನ ತೇಜವು ಸಾಕು. ನೋಟ ಕಮರಲು ಬಹುದು,
ಕಂಗಳಿವು ಕುರುಡಾಗಬಹುದು. ನಿಲ್ಲಲೀ ದೃಶ್ಯ,
ಈ ದೃಷ್ಟಿಯದ್ಭುತವು! ಮನದಲುದ್ಭವಿಸಿರುವ
ಬೇಗೆಯಿಂದೀ ಕ್ಷಣದಿ ಜೀವ ಬೇಳ್ದಿರಬಹುದು,
ಭಸ್ಮವಾಗಿರಬಹುದು! ಏಲೆಲೆ ದೈವದ ಕೃತಿಯೆ!
ಅಡಗಿಸೀ ಭೀಷಣಾಕೃತಿಯನ್ನು! ಮಾನವನು
ತೂಗುತಿಹ ತುಲೆಯ ಸಾಧನೆಯಾದ ಈ ಮತಿಯು
ದಿಕ್ಕೆಟ್ಟು, ದಿಗ್ಭ್ರಮಿಸಿ ಧಾವಿಸುತಿಲಿಂಬಹುದು,
ಗಾಸಿಯಾಗಿರಬಹುದು! ಅಮರಾವತಿಯ ಕಂಡೆ!
ಅಮರವಾಗಿಹ ನೋವನುಣುವ ಬಗೆಯನು ಕಂಡೆ!
ಕೊನೆಯಿಲ್ಲದಾಳವಿಲ್ಲದ ಶೋಕವನು ಕಂಡೆ!
ವಿಶ್ವಯತ್ನವದಿಂತು ವಿಫಲವಾಗಿರಲಿನ್ನು
ಯಾವ ಹಾದಿಯೊ ಕಾಣೆ! ಬೇಳ್ದಿಹೆನು! ಬೀಳುವೆನು!
ಇನ್ನಾವ ಗತಿಯೆನಗೆ! ಇನ್ನಾರು ಗತಿಯೆನಗೆ!
[ಕೆಳಗೆ ಬಿದ್ದು ಹೊರಳಾಡುವನು. ಹೀಗೆ ಬಿದ್ದಿರುವಾಗ ಮತ್ತೆ ಮೇಲೆ ಸಾಗಿರುವ ಉದ್ದೀಪಿತ ನಿರ್ಜರರ ನೋಟವು ಕಣ್ಣಿಗೆ ಬೀಳುವದು.]
(ಎದ್ದು ಕುಳಿತು)
ಮಾನವೀಯತೆಯನಣಕಿಸುವ ಪೂರ್ಣತೆ! ಎಲೆಲೆ!
ನ್ಯಾಯನಿಷ್ಠುರವಾದ ಸ್ವರ್ಣಲತೆ! ನೀಳ್ಬೆಳಕೆ!
ಶಾಂತವಾಗಿರು ಇನ್ನು ನದ್ಮಯುಗವರಳ್ವನಕ!
ಸ್ವರ್ಲೋಕದಾಳ್ವಾರರಾದ ದೇವತೆಗಳಿರ!
ಭೂಲೋಕದವನೆನ್ನ ಬೀಳ್ಕೊಡಿರಿ! ತೆರಳುವೆನು.
ಉನ್ನತೋನ್ನತವಾದ ಪರ್ವತಶೃಂಗಗಳ
ಮೇಲ್ನಿಂತು ನಾ ತಪಿಸುತಿರುವಾಗ ಕಾಣುತಿಹ
ಭೂಮಂಡಲದ ವಿಶಾಂತೆಯು ಭೀಕರವಾಗಿ
ಬೆಳಕು ಮಳೆ ಬರುವನಕ ಸಾಸಿರದ ಸಾಸಿರವು
ಸಮೆಯಬೇಕೆಂದಿತ್ತು. ನನ್ನ ಜೀವನವಹುದು
ಸಾಗರದ ಸಾವಿರಲೆಗಳ ಮೇಲೆ ಚೆಲ್ಲಿರುವ
ವಲ್ಲರಿಯು, ಸಾಹಸಕೆ ನೆರವಿಲ್ಲ. ಗೆಲುವೆಲ್ಲಿ?
ಅಹಹ! ಇಲ್ಲಿಯ ವಾಯು ತೇಜವನು ಬೀಸುವದು.
ಇಲ್ಲಿ ಕಾಣ್ವದು ಕಣ್ಣು ಸಹಿಸಲಾರದ ಬೆಳಕು!
ಇಲ್ಲಿಯುಸಿರೆನೆ ಅಗ್ನಿಗಿಹ ಕಳೆಯು, ಮತ್ತಿಲ್ಲಿ .
ನೆಲವು ನಿಗಿ ನಿಗಿ ಕೆಂಡ! ಸುರಲೋಕವಿದು ಸುರರ
ಹೃದಯದಂದದಿ ಬೆಳಕಿಗಿರುವ ದರ್ಪಣವತ್ತಿ?
ತಡೆಯಲಾರೆನು. ಅಯ್ಯೊ! ಮೈಗರೆಯುವಂತಾಯ್ತು.
ಬಾಳುವೆನು. ಅದಕಾಗಿ ಬೀಳುವೆನು. ಬೀಳುವೆನು.
[ಮೂರ್ಛಿತನಾದ ತವಸಿಯು ಸಾವಕಾಶವಾಗಿ ಆಕಾಶದಿಂದ ನೆಲಕ್ಕೆ ಬೀಳುವನು.]
*****
ಎಪ್ರಿಲ್ ೧೯೩೨
















