ಕಡೆದ ಕಡಲಿನ ಮೊದಲ ಫಲದಂತೆ, ಕಡೆಗೊಗೆವ
ಸೊದೆಗೆ ಹಿರಿಯಣ್ಣನಂದದೊಳು ಭಾರತದ ಜನ-
ದುದಧಿಯೊಳಗಿಂದು ಮೂಡುತಿದೆ ಹಾಲಾಹಲಂ,
ನಡೆದೆಲ್ಲ ಪಾಪಗಳ ಕೋಲಾಹಲಂ, ಕರ್ಮ
ದಾವಾನಲಂ; ನಿಷ್ಕೃತಿಯ ರೂಪಮಿದ ತಾಳಿ
ಬದುಕುವೆವೆ ಬದುಕುಂಟು, ಸಂಮೋದವುಂಟು, ಸಂ-
ಪದವುಂಟು; ತಾಳೆವೇ ಸತ್ತೆವಾವೀ ವಿಷವ
ಭಾವಿಪರದಾರು, ಸೈರಿಪರಾರು? ಮೊರೆಯಾರ್ಗೆ?
ಮೃತ್ಯುಂಜಯಾ ನಮ್ಮ ಧೃತಿಗೈತರೈ ಎಂದು,
ಮರುಳ್ಗಳೊಡೆಯನೆ ನಮ್ಮ ಸಹನೆಗಿಂಬಾಗೆಂದು,
ಗರವ ಕುಡಿದನೆ ನಮ್ಮ ಮೌನದೊಳು ನಿಲ್ಲೆಂದು,
ಸತ್ಯನೆ ಸದಾಶಿವನೆ ಕರುಣಿ, ಕರುಣಿಪುದೆಂದು-
ಅಣುಮಹತ್ತುಗಳಲ್ಲಿ ಪರಮ ಸಂಯಮವ ತೋರಿ
ಜಗವ ನಡೆಸುವ ಶಿವಕೆ ಮೊರೆಯಿಡುವ ಬಾರಿ ಬಾರಿ.
*****