ಅಲ್ಲೆಲ್ಲೊ ಸುತ್ತಿ ಗಂಟುಕಟ್ಟಿ
ಮೂಲೆಗೆಸೆದಿದ್ದೆ
ಆಗಂಟಿನೊಳಗಿತ್ತು
ಒಂದಿಷ್ಟು ನೆನ್ನೆಗಳೂ
ಲಜ್ಜೆಬಿಟ್ಟು ಗಂಡ್ಹುಡುಗಿಯಾಗಿದ್ದ
ಮಂಗನಾಗಿ ಮರಕೋತಿಯಾಡಿದ್ದ
ಹೆತ್ತವರ ಕಣ್‌ಸನ್ನೆಗಂಜದ
ಮೋರೆ ತಿರುವಿನಕ್ಕ,

ನಾಳೆಗಳ ನೆನೆಯದ
ಒಂದಿಷ್ಟು ತವಕಿಸದ
ಸವಿಗನಸುಗಳ
ಬೆನ್ನೇರಿ ಹೊರಟಿದ್ದ
ನೆನ್ನೆಗಳನ್ನೆಲ್ಲ ಗಂಟುಕಟ್ಟಿ
ಎಸೆದಿದ್ದೆ
ಇಂದೇಕೋ ನೆನಪಾಗಿ
ಹುಡುಕಿದೆ ಹುಡುಕಿದೆ
ಆಮೂಲೆ ಈ ಮೂಲೆ
ಅಲ್ಲಿ ಇಲ್ಲಿ

ಧೂಳು ಜಾಡಿಸಿ ಕೊಡವಿ
ಶುಭ್ರವಾದಷ್ಟೆ ಫಲ
ಸಿಗಲೇ ಇಲ್ಲಾ ನೆನ್ನೆಗಳ
ಇಡಿಗಂಟು

ನಾಳೆಗಳ ನೆನಪಾಗಿ
ನೆನ್ನೆಗಳ ಮರೆಯದೆ
ಇಂದೆಲ್ಲ ನರಳಿದೆ
ಮೈಮನಸು

ಸಿಗಲಾರದೆ ನನ್ನ ಗಂಟು
ಯಾರು ಹೊತ್ತೊಯ್ದರು ನನ್ನ ನಿಧಿಯಾ
ನನ್ನದು, ನನ್ನದೇ ಆದ ನೆನ್ನೆಗಳು
ರೆಕ್ಕೆ ಬಂದು ಹಾರಿದವೇನೇ
ಬಾನಿಗೆ

ಇಂದಿಗಂಜಿ, ನಾಳೆಗಂಜಿ
ನಾನೇ ತಿಪ್ಪೆಗೆಸೆದನೇ ನನಗರಿವಿಲ್ಲದೆ
*****