ನೀರ ಮೇಲಿನ ಲೀಲೆ ನಮ್ಮದೀ ಜೀವನ
ಗಾಳಿ ನೂಕಿದ ತೀರ ಸೇರಿ ಪಯಣ ಪಾವನ

ಯಾರಿಗೂ ತಿಳಿಯದಂಥ
ನೂರುಗುಟ್ಟು ನೀರಲಿ
ಧೀರರಿಗೆ ಮಾತ್ರ ದೊರೆವ
ಮುತ್ತು ರತ್ನ ತಳದಲಿ
ದೂರದ ತಾರೆಯೇ ದೀಪ ನಮಗೆ ಇರುಳಲಿ

ತೀರವ ಬಿಟ್ಟ ಗಳಿಗೆ
ನೀರೇ ನಮ್ಮ ದೇವರು,
ದಡ ಸೇರಿದ ಮೇಲೆ ಮಾತ್ರ
ಅಪ್ಪ ಅಮ್ಮ ಮನೆ ಮಾರು,
ದಡದಲಿ ಕಾಯ್ವರು ಬೆದರುಗಣ್ಣ ಹೆಂಡಿರು.

ಮನೆ ಸೇರಿ ಮಲಗುವಾಸೆ
ಉರಿವುದೆಮ್ಮ ಎದೆಯಲಿ
ಕುಣಿಯುವ ಚಿಣ್ಣರನು
ಎತ್ತುವಾಸೆ ಹೆಗಲಲಿ
ಸಲಿಸಲಿ ಈ ಆಸೆಯ ಕರುಣಿ ದೈವ ನಿಜದಲಿ
*****