Home / ಕಥೆ / ಸಣ್ಣ ಕಥೆ / ಚಿರಸಮಸ್ಯೆ

ಚಿರಸಮಸ್ಯೆ

ಕತ್ತಲ್ಗಡಲ ತಳದಲಿತ್ತು ಲೋಕ.

ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು.

ನೀರವ! ನಿಶ್ಚಲ!

ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ.

ಒಂದು ಮನೆ.

ಅದರ ಹೆಸರು “ಮಾಯಾಲಯ”. ಅದರಲೊಂದು ಕೊಠಡಿ. ಕೊಠಡಿಯ ನಡುವೆ ಬೆಳ್ಳಿಯ ಕಂಭ-ಕಂಭದ ಮೇಲೆ ಚಿನ್ನದ ಹಣತೆ. ಹಣತೆಯ ತುಂಬ ಚಂದನ ತೈಲ ತೈಲದಿ ತೇಲುತ ಹತ್ತಿಯ ಬತ್ತಿ. ಬತ್ತಿಯ ತುದಿಯಲಿ ಪುಟ್ಟದು ಜ್ವಾಲೆ!

ಕುಣಿಯುತಿತ್ತು! ಬಳುಕುತಿತ್ತು! ಬೆಳಬೆಳಗಿ ಕತ್ತಲನ್ನು ಮೂಲೆಗೊತ್ತಿ ನಲಿಯುತಿತ್ತು! ಹೆಮ್ಮೆಯಿಂದ ಮೆರೆಯುತಿತ್ತು! ಪರಿಮಳ ವನುಸಿರುತಿತ್ತು!-ಆ ಜ್ವಾಲೆ.

ಕಿಟಿಕಿಯ ಬಳಿ ಯಾರೊ ಬರುವ ಸುಳಿವು!

ಕುಣಿಕುಣಿದು ಬಲು ಬಳುಕಿ ಗರ್ವದಿಂ ಮೆರೆದು ನಲಿಯುತಲಿದ್ದ ಜ್ವಾಲೆ ಸ್ತಬ್ಧವಾಯ್ತು! ಆಸೆಯಿಂದ ಆಲಿಸಿತು. ಕಣ್ಣ ನೆಟ್ಟುನೋಡಿತು.

ಒಂದು ಪತಂಗ! ಬಣ್ಣ ಬಣ್ಣದ ಪತಂಗ!!!

ಕವಿಯ ಗಂಭೀರ ಗೂಢಹೃದಯದಿಂದ ಹೊಮ್ಮಿಬಂದ ಚೆಲುವು ಕವಿತೆಯಂತೆ, ನಿಶೆಯುದರದಿಂದ ಮೂಡಿ ಬಂತು-ಆ ಪತಂಗ.

ಚಿಮ್ಮಿ ನೆಗೆಯುತ, ತಿರುಗಿ ತೇಲುತ, ಕುಣಿದು ನಲಿಯುತ ಬಂತು-ಆ ಪತಂಗ.

ಜ್ವಾಲೆಯನು ನೋಡಿ ಅಚ್ಚರಿಯಲಿ ಮಿಂದಿತು. ಉಸಿರನೆಳೆದೆಳೆದು ಪರಿಮಳವ ಸೇವಿಸಿ ವಿಸ್ಮೃತಿಯಲಿ ಮುಳುಗಿತು! ಆಸೆಯಿಂದ ಹಿಗ್ಗಿ ಉಬ್ಬಿತು-ಆ ಪತಂಗ.

ಜ್ವಾಲೆಯ ಸುತ್ತ, ಏರಿ ಇಳಿದು ಸುತ್ತಿ ಸುತ್ತಿ ಹಾರತೊಡಗಿತು-ಆ ಪತಂಗ.

ಒಂದುಸಲ ಬಳುಕಿ,

“ಎನ್ನಾಸೆಯ ರನ್ನಾ, ಬಾ, ಬಾ!”
-ಎಂದಿತು ಮಾಯಾಜ್ವಾಲೆ.

“ನಿನ್ನ ಸೊಬಗಿದೇನು!….ಏನು ಪರಿಮಳ!! ಯಾರು ನೀನು?”
– ಎಂದು ಕೇಳಿತು ಪತಂಗ.

“ನಾನೊಂದು ಕುಸುಮ! ನೋಡು ನೋಡು, ನನ್ನ ಮೈಯ ಕಾಂತಿ! ಉಸಿರೆಳೆದು ನೋಡು ಎನ್ನುಸಿರ ಪರಿಮಳವ! ಬಾ, ಬಾ! ಸುಂದರಾ!”

“ಬಂದರೇನನೀಯುವೆ?”
ಬಳಿಗೆ ಸಾರದೆ ದೂರದಲೇ ಕುಣಿಕುಣಿದು ನಲಿಯುತಿತ್ತು-ಆ ಪತಂಗ.

“ಏನು ಬೇಕೊ ಅದನೆ ಕೊಡುವೆ! ಬಾರೊ ನಲ್ಲ!”
– ಎಂದು ಒಯ್ಯಾರದಿ ಬಳುಕಿ ಬಾಗಿ ಕರೆಯಿತು ಕನಕ ಜ್ವಾಲೆ.
“ಮಧುವುಂಟೆ ಹೇಳು?”
“ಅದಕೆ ನೂರ್‍ಮಡಿಯಾದುದಿದೆ! ಪ್ರಿಯಾ, ಬಾ!
ಮೈಗೆ ಮೈಗೊಟ್ಟು, ಬಾಯ್ಗೆ ತುಟಯಿಟ್ಟು ಬೆರೆತು ನೋಡು!! ನಿನ್ನೆದೆಯ ಪರಿಮಳದಿ ತುಂಬುವೆ!
ಸ್ವರ್‍ಗದ ಸವಿಯನೆರೆಯುವೆ!!
ಕಾದು ಕಾದು ಕಾಯ್ದ ಎನ್ನೊಡಲ ಕಾವ ಸವಿಯ ಬಾ!”
-ಎಂದು ಸಾರಿ ಕರೆದಳು ಜ್ವಾಲಾಕಾಮಿನಿ.
“ಕಾಯ್ದೆಯಾ?…………… ಯಾರಿಗಾಗಿ?”
“ನಿನಗಾಗಿ! ನಿನಗಾಗಿ!! ನನ್ನ ಸುಂದರಾ, ನಿನಗಾಗಿ! ಬಾ, ಬಾ! ಎನ್ನ ಕಣ್ಣಮಣಿ!- ಎನ್ನೆದೆಯ ಧಣಿ!!
-ಎಂದು ಕಿರಣದ ಬಲೆಯನೆಸೆದಳು ಮೋಸದ ಜ್ವಾಲೆ.
“ಆಹಾ?”

ಪತಂಗದೆದೆಯಲಿ ಬಿರುಗಾಳಿಯೆದ್ದಿತು!-ಕಾಮದ ಬಿರುಗಾಳಿ! ತಲೆ ತಿರುಗಿತು! ಮೈಮರೆಯಿತು!! ನೂರುಬಣ್ಣದ-ಕಣ್ಣು ಕಣ್ಣಿನ ಪತಂಗವು ಕುರುಡಾಯ್ತು!!
“ಬಾ!” ಎಂದಳು ಥಳಕಿನ ಜ್ವಾಲೆ.
“ಬಂದೇ!”
-ಎನ್ನುತ ಒಂದೇ ಸಲಕೆರಗಿತು ಪತಂಗ!
ಮರುಕ್ಷಣದಲೆ “ಹಾ!” ಎಂದು ಚೀರಿ ಭೂತಲದಲೊರಗಿತು!
“ಅಯ್ಯೋ! ಅಯ್ಯೋ!!” ಎನ್ನುತ ನರಳತೊಡಗಿತು.
ಸುಟ್ಟು ಹೋಯ್ತು ಬಾಯಿ-ಸೀದುಹೋಯ್ತು ರೆಕ್ಕೆ.
“ನೂರ್‍ಮಡಿ! ನೂರ್‍ಮಡಿ!! ಅಯ್ಯೋ! ಸಾವಿಗೆ ನೂರ್‍ಮಡಿ! ಏನು ಬೆಂಕಿ! ಎಂತಹ ಮುತ್ತು!!-ಕಾಲನ ಮುತ್ತು!”
-ಎಂದು ಬೆಂದ ಬಾಯಿನೊಂದು ನುಡಿಯಿತು.
ಮೇಲೆ ಜ್ವಾಲೆ,
“ಹಹ್ಹಾ!”
-ಎನ್ನುತ ಬಳುಕಿ ಬಳುಕಿ ತಲೆಯ ಚಿಮ್ಮಿ ಬಲಿಯ ಮರೆತು ನಲಿಯಿತು!
* * * *

ಮತ್ತೆ ಸದ್ದು!

ಮೊದಲಿನಂತೆ ಜ್ವಾಲೆ, ಕಿವಿಯ ಕೊಟ್ಟು ಕೇಳಿತು.
ಮತ್ತೊಂದು!……….. ಮರಿಪತಂಗ!!
ಮೊದಲಿನಂತೆ ಕಥೆ!

ಜ್ವಾಲೆ, ಮೋಹವೆರಚಿ ಬಿಂಕ ತೋರಿ, ಕೂಗಿ ಕರೆದು ಬಲೆಯ ಬೀಸಿತು.

ಎರಗುವುದರಲಿತ್ತು, ಬುದ್ಧಿಗೆಟ್ಟು ಮೈಮರೆತು ಕುರುಡಾದ ಮರಿ ಪತಂಗ!

“ಬೇಡ! ಬೇಡ!! ದೂರ ಸರೀ!…….ಸಾಯುವೇ!!”
– ಎಂದಿತು ಕೆಳಗೊರಗಿದ ಪತಂಗ- ಕಾಲನದವಡೆಯಿಂದ.
“ಬೇಡವೇಕೆ?”
-ಎಂದು ಕೇಳಿತು ಮರಿಪತಂಗ.
“ಅದು ಕುಸುಮವಲ್ಲ! ಅಲ್ಲಿ ಮಧುವಿನಿತಿಲ್ಲ!!”
“ಹಾಗಾದರೇನದು!”
“ಮೃತ್ಯು!-ಮೃತ್ಯು!! ನನ್ನ ಮಾತ ಕೇಳು!…….. ಹಿಂತಿರುಗಿ ಬಾಳು”.
“ಏನು ಮಾತು!…….. ಈ ಕಾಂತಿ!…….. ಈ ಪರಿಮಳ! ಇದೆಲ್ಲಿ; ಮೃತ್ಯುವೆಲ್ಲಿ!”
“ಬೇಡ! ಬೇಡ!!…… ಮೃತ್ಯು-ಸತ್ಯ!”
“ಇದು ಮೃತ್ಯುವಾದರೆ, ಎನಗಿರಲಿ ಮೃತ್ಯುವೆ!”
-ಎಂದಿತು ಮರಿ ಪತಂಗ.

ಇದ ಕೇಳಿ,
“ಬಾ ಬಾ! ಎನ್ನೆಡೆಯ ರಾಜಾ!”
– ಎಂದಿತು ಜ್ವಾಲೆ.
“ಇದೊ ಬಂದೆ!- ಎನ್ನೊಲವಿನ ರಾಣಿ!”
-ಎನ್ನುತ ಕಣ್ಮುಚ್ಚಿ, ಎದೆಬಿಚ್ಚಿ ಎರಗಿತು-ಮರಿಪತಂಗ.
“ಅಯ್ಯೋ, ತಿಳಿಗೇಡೀ!”
-ಎಂದು ಕೂಗಿತು ಬಿದ್ದ ಪತಂಗ.
ಮರುಕ್ಷಣದಲೆ “ಹಾ” ಎನ್ನುತ, ಬಾಯಿ ಬೆಂದು ರೆಕ್ಕೆ ಸುಟ್ಟು, ಗೋಳಿಡುತ ನೆಲಕುರುಳಿತು – ಮರಿಪತಂಗ.
“ಅಯ್ಯೋ! ನೋವು!……. ನೋವು! ತಾಳಲಾರೆ !! ಸಾವು!- ಸಾವು!”
-ಎನ್ನುತ ಹೊರಳಿತು ಮರಿಪತಂಗ.
“ಬೇಡವೆಂದು ಸಾರಿದೆನಲ್ಲೋ!”
-ಎಂದಿತು ಮೊದಲು ಬಿದ್ದ ಪತಂಗ.
“ಅಯ್ಯೋ! ಕೇಳದೆ ಕೆಟ್ಟೆನಲ್ಲಾ!”
-ಎಂದುಸುರಿತು ದಾರುಣದ ದನಿಯಿಂದ-ಮರಿಪತಂಗ.
ಇದನು ಕೇಳಿ,
“ಹಹ್ಹಾ!”
-ಎಂದು ಗಹಗಹಿಸುತ ಮೈ ಕುಲುಕಿತು ಜ್ವಾಲೆ!
ಅದೊ! ಮತ್ತೆ ಸದ್ದು!!…………….
*****

Tagged:

Leave a Reply

Your email address will not be published. Required fields are marked *

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...