Home / ಕಥೆ / ಸಣ್ಣ ಕಥೆ / ದುರ್ಗಾವತಿ

ದುರ್ಗಾವತಿ

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿಯ ಯುದ್ಧವನ್ನು ಪೂರೈಸಿದಳು. ಆಗರ್ಭ ಶ್ರೀಮಂತೆಯಾದ ಜನಕನಂದನೆಯು ಪತಿವಿಯೋಗಕ್ಕಿಂತಲೂ ಅರಣ್ಯವಾಸವೇ ಮಧುರವೆಂದು ಭಾವಿಸಿ, ೧೪ ವರ್ಷಗಳ ವರೆಗೆ ಗಟ್ಟಬೆಟ್ಟಗಳಲ್ಲಿ ಅಲೆದಳು. ಭಾರತ ಇತಿಹಾಸ ಕಾಲದಲ್ಲಿಯೂ ಸಂಯೋಗಿತಾ, ಪದ್ಮನಿ, ಕರ್ಮದೇವಿ ಮೊದಲಾದ ಅಸಂಖ್ಯಾತ ರಜಪುತ್ರ ವೀರರಮಣಿಯರು ಧರ್ಮಾಂಧರಾದ ಮುಸಲ್ಮಾನರನ್ನು ಯುದ್ಧದಲ್ಲಿ ಪ್ರತಿಭಟಿಸಿ, ತಮ್ಮ ಪತಿಗಳ ಆಪತ್ತುವಿಪತ್ತುಗಳನ್ನು ಪರಿಹರಿಸುವುದಕ್ಕೆ ರಣರಂಗದಲ್ಲಿ ರಕ್ತವನ್ನು ಬಳಸಿದರು. ಆದರೂ ಪಾಶ್ಚಾತ್ಯ ನಾಗರಿಕೆಯನ್ನು ಹೊಂದಿ, ಸರ್ವವಿಷಯಗಳಲ್ಲೂ ಪಾಶ್ಚಾತ್ಯರೇ ನಮಗೆ ಬುದ್ದಿ ಕಲಿಸುವರೆಂದು ನಂಬುವವರು ಈ ಪುರಾಣಗಳು ಕಲ್ಪಿತ ಕಥೆಗಳೆಂದೂ, ಈ ಪುರಾಣ ಪ್ರಸಿದ್ಧ ಸ್ತ್ರೀಯರು ಕವಿ ಸೃಷ್ಟಿಗಳೆಂದೂ ಅಲ್ಲಗಳೆವರು. ಅಷ್ಟೇಕೆ? ಸ್ಪಷ್ಟಾಕ್ಷರಗಳಿಂದ ಅಂಕಿತವಾದ ಜೀಜಾಬಾಯಿ, ಅಹಲ್ಯಾಬಾಯಿ ಮೊದಲಾದ ಭಾರತಯುವತಿಯರ ಪ್ರಭಾವವು ಚರಿತ್ರಕಾರನ ಅತಿಶಯೋಕ್ತಿ ಎಂದು ಇವರು ಅನುಮಾನಿಸುವರು. ಜನರ ಕಟ್ಟುಕಥೆಗಳನ್ನಾಗಲೀ, ಕವಿಯ ಬಣ್ಣಮಾತುಗಳನ್ನಾಲೀ ನಂಬಬೇಕೆಂದು ನಾವು ಪ್ರತಿಪಾದಿಸುವುದಿಲ್ಲ. ಪುರಾಣೋಕ್ತವಾದ ವಿಷಯಗಳು ಸಟೆಯಾದರೂ ಸತ್ಯವಾದರೂ ದೋಷವಿಲ್ಲ. ಆದರೆ ಪುರಾಣ ಕಥನಗಳು ಸುಳ್ಳೆಂದು ಮೊದಲಿಂದ ಹಿಡಿದು ಹೋಗಿ ಇದರಿಂದ ಭಾರತ ಇತಿಹಾಸದ ಸ್ಥಿತಿಗತಿಯನ್ನೂ ಪ್ರಮಾಣಿಸುವದು ಯೋಗ್ಯವಲ್ಲ. ಪಾತಿವ್ರತ್ಯ, ಧರ್ಮಪರಾಯಣತೆ, ರಣೋತ್ಸಾಹ ಮೊದಲಾದ ಗುಣಗಳು ಪುರಾಣ ಕಾಲದಲ್ಲಿ ಇಲ್ಲದೆ ಇರುತ್ತಿದ್ದರೆ, ಅವುಗಳು ಇತಿಹಾಸಕಾಲದಲ್ಲಿ ಉಜ್ವಲವಾಗಿ ಪ್ರತಿಬಿಂಬಿಸುತಿದ್ದಿಲ್ಲ. ಭಾರತ ಭೂಮಿಯ ಮುಸಲ್ಮಾನರ ಕಠೋರ ಶಾಸನದಿಂದ ತಲ್ಲಣಿಸುತ್ತಿದ್ದಾಗ, ಈ ಗುಣಗಳು ಇನ್ನೂ ಪ್ರಭಾವಮಯವಾಗಿ ಬೆಳಗಿದುವು.

ಪ್ರತಾಪಶಾಲಿಯಾದ ಅಕ್ಟರನು ದೆಹಲಿಯ ಸಿಂಹಾಸನರೂಢನಾಗಿದ್ದನು. ಮೊಘಲ್ ಸಾಮ್ರಾಜ್ಯದ ಅರ್ಧಚಂದ್ರಾಂಕಿತವಾದ ಧ್ವಜವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ, ಸಿಂಧೂ ನದಿಯಿಂದ ಬಂಗಾಲದವರೆಗೂ ನೆರಳು ಹಾಕುತ್ತಿತ್ತು. ಪೂರ್ವದ ಅಪಘಾನ್‌ ರಾಜರು ಬದ್ಧಹಸ್ತರಾಗಿ ದಿಲ್ಲೀಶ್ವರನಿಗೆ ಕೈಮುಗಿದರು. ರಾಜಪುತ್ರರಲ್ಲಿ ಅನೇಕರು ಅವನ ದೋರ್ದಂಡ ಪ್ರತಾಪವನ್ನು ಸಹಿಸಲಾರದೆ, ಅವನ ಗದ್ದುಗೆಯ ನೆರಳಲ್ಲಿ ಮರೆ ಹೊಕ್ಕರು. ಅವರ ಅನೇಕ ದುರ್ಗಗಳು ಮೊಘಲರ ವಿಹಾರಸ್ಥಾನಗಳಾದವು. ಪರಂತು ಗಢಾಮಂಡಲದ ರಾಣಿಯು ತನ್ನ ಕೊರಳನ್ನು ಅಕ್ಬರನ ಪಾಶಕ್ಕೆ ಒಡ್ಡಲಿಲ್ಲ. ಚತುರೋಪಾಯ ಸಂಪನ್ನನಾದ ಅಕ್ಬರನು ಗಢಾಮಂಡಲದ ರಾಣಿಯಾದ ದುರ್ಗಾವತಿ ತನ್ನ ಅನಚರಿಯಾಗುವಂತೆ, ಹಲವು ಉಪಾಯಗಳನ್ನು ಮಾಡಿದನು. ತೇಜಸ್ವಿನಿಯಾದ ದುರ್ಗಾವತಿಯ ವೀರಸಾಹಸದಿಂದ, ಅವೆಲ್ಲವೂ ಬಯಲಾಗಿ ಹೋದುವು.

ದುರ್ಗಾವತಿಯು ಮಧ್ಯಹಿಂದೂಸ್ಥಾನದ ಮಹೋಬ್ಬಾ ಸಂಸ್ಥಾನದ ರಾಜನಾದ ಚಂದೇಲನ ಮಗಳು. ದುರ್ಗದ ಅಧಿದೇವತೆಯ ನಾಮಾಂಕಿತದಿಂದ ಅವಳಿಗೆ ದುರ್ಗಾವತಿ ಎಂದು ಹೆಸರಿಟ್ಟರು. ಕನ್ನಿಕೆಯ ಬುದ್ಧಿ ಸಂಪನ್ನತೆಯನ್ನೂ ಸೌಂದರ್ಯವನ್ನೂ ನೋಡಿ ಆನಂದಪಡುತ್ತಲಿದ್ದ ಚಂದೇಲನು, ತನ್ನ ವಂಶಕ್ಕೆ ಅನುರೂಪನಾದ ಕುಲೀನ ರಾಜಪುತ್ರ ರಾಜನಿಗೆ ಅವಳನ್ನು ಕೊಡಬೇಕೆಂದು ಮನಸ್ಸು ಮಾಡಿದ್ದನು. ದುರ್ಗಾವತಿಯು ಗಢಾಮಂಡಲದ ಗೌಡರಾಜನಾದ ದಳಪತಿಶಹನ ಸಾಹಸಕ್ಕೂ ಪರಾಕ್ರಮಕ್ಕೂ ಮುಗ್ಧಳಾಗಿ ತನ್ನ ತಂದೆಗೆ ತಿಳಿಯದಂತೆ ಆ ವೀರನನ್ನು ಹೃದಯದಲ್ಲಿ ವರಿಸಿದ್ದಳು. ದಳಪತಿಶವನು ಮಹಾಯೋಧನು; ರಾಜಕಾರ್ಯ ದುರಂಧರನು. ರಾಜಪುತ್ರರಮಣಿಯರ ಮಾನರಕ್ಷಕನು. ದುರ್ಗಾವತಿಯು ಅಂತರಂಗದಲ್ಲಿ ತನ್ನ ಪ್ರಣಯ ಚಿನ್ನವಾದ ಹೊನ್ನಿನ ತೆಂಗಾಯಿಯನ್ನು ದಳಪತಿಶಹನಿಗೆ ಕಳುಹಿಸಿದಳು. ದಳಪತಿ ಶಹನು ಕನ್ನಿಕೆಯ ಪ್ರೇಮ ಪುರಸ್ಕಾರವನ್ನು ಅತ್ಯಂತ ಶ್ರದ್ಧೆಯಿಂದ ಸ್ವೀಕರಿಸಿದನು. ಕ್ರಮೇಣ ದುರ್ಗಾವತಿಯ ಆಶೆಯು ಹೊರಬಿದ್ದಿತು. ದುರ್ಗಾವತಿಯ ತಂದೆಯು ಈ ಸಂಬಂಧವನ್ನು ಒಪ್ಪಲಿಲ್ಲ. ದಳಪತಿ ಶಹನು ಸಾಮಾನ್ಯ ರಾಜಪುತ್ರನೆಂದೂ, ಅವನ ರಾಜ್ಯವು ಬಲು ಚಿಕ್ಕದೆಂದೂ, ಅವನು ಅಳಿಯನಾದರೆ ತನ್ನ ಕುಲಗೌರವವು ಕಳಂಕಿತ ವಾಗುವುದೆಂದೂ ಭಾವಿಸಿ, ಒಂದು ಉಪಾಯವನ್ನು ಮಾಡಿದನು. ದಳಪತಿಶಹನು ಅರ್ಧಲಕ್ಷ ಸೈನ್ಯದೊಡನೆ ಸ್ವಯಂವರಕ್ಕೆ ಬರಬೇಕೆಂದು ಹೇಳಿ ಚಂದೇಲನು ಕಳುಹಿಸಿದನು. ಅಷ್ಟು ಸೈನ್ಯವನ್ನು ತನ್ನ ಚಿಕ್ಕ ಮಂಡಲದಲ್ಲಿ ಸಾಮಾನ್ಯ ರಾಜನಾದ ದಳಪತಿಶಹನು ಜತೆಗೊಳಿಸಲಾರನೆಂದು ಚಂದೇಲನು ಬಗೆದನು. ವೀರಭೂಮಿಯು ತುರುಕರ ಪಾಲಾದರೂ, ವೀರತ್ವವು ಈ ಭಾರತ ಭೂಮಿಯಿಂದ ಇನ್ನೂ ನಿರ್ನಾಮವಾಗಿರಲಿಲ್ಲ ಎಂದು ಚಂದೇಲನು ತಿಳಿದಿರಲಿಲ್ಲ. ಪ್ರಸಿದ್ಧ ವೀರನಿದ್ದರೆ, ರಾಜಪುತ್ರರು ಉತ್ಸಾಹಿತರಾಗಿ ಅವನ ಪತಾಕೆಯ ಕೆಳಗೆ ಇನ್ನೂ ಒಟ್ಟು ಗೂಡುತ್ತಿದ್ದರೆಂದು ಚಂದೇಲನ ಮನಸ್ಸಿಗೆ ಹತ್ತಲಿಲ್ಲ. ಲಕ್ಷಾರ್ಧಸೈನ್ಯವನ್ನು ಮೋಹಿಸಲಾರದೆ ದಳಪತಿಶಹನು ತಾನೇ ಹಿಂದೆಗೆವನೆಂದು ಚಂದೇಲನು ನಂಬಿದನು.

ಸ್ವಯಂವರದ ದಿನವು ಪ್ರಾಪ್ತವಾಯಿತು. ದುರ್ಗಾವತಿಯು ಸೌಂದರ್ಯ ಕೀರ್ತಿಯನ್ನು ಕೇಳಿ ಮೋಹಿತರಾದ ರಾಜಪುತ್ರರೆಲ್ಲರೂ ಮಂಟಪದಲ್ಲಿ ಬಂದು ನೆರೆದರು. ಆ ರಾಜಪುತ್ರರ ಮಂಡಲದಲ್ಲಿ ಗಢಾಮಂಡಲದ ನಾಯಕನು ಮಾತ್ರ ಇರಲಿಲ್ಲ. ಕನ್ನಿಕೆಯಾದ ದುರ್ಗಾವತಿಯು ಕೈಯಲ್ಲಿ ಪುಷ್ಪಮಾಲಿಕೆಯನ್ನು ಹಿಡಿದುಕೊಂಡು, ಸ್ವಯಂವರ ಮಂಟಪದಲ್ಲಿ ಮೆಲ್ಲನೆ ಕಾಲಿಟ್ಟಳು; ಮುಹೂರ್ತ ಮಾತ್ರ ನಿಂತುಕೊಂಡು, ತನ್ನ ಕಣ್ಣಿನ ಮಿಂಚನ್ನು ಸಭಾಮಂಡಲದಲ್ಲಿ ಬೀರಿದಳು. ಕೂಡಲೇ ಅವನತಮಸ್ತಕಳಾಗಿ ಪ್ರತಿಮೆಯಂತೆ ನಿಂತುಬಿಟ್ಟಳು. ದಳಪತಿ ಶಹನ ಉಜ್ವಲ ಮುಖವು ಅಲ್ಲಿ ತೋರಲಿಲ್ಲ. “ಆಸಿಸುವಂತಹನನ್ನು ಆಯ್ದುಕೊಳ್ಳು” ಎಂದು ಮುದಿ ಹೃದಯನಾದ ತಂದೆಯು ಅಪ್ಪಣೆ ಕೊಟ್ಟನು. ದುರ್ಗಾವತಿಯು ನಿರುತ್ತರಳಾದಳು. ತಿಳಿಯದಂತೆ ಜಗುಳಿಬಿದ್ದ ಅಶ್ರುದಳವು ಹೂಮಾಲೆಯಲ್ಲಿ ಹಿಮಬಿಂದುವಿನಂತೆ ನಿಮಿಷಮಾತ್ರವಿದ್ದು ತೊಲಗಿ, ಕರ್ಕಶವಾದ ಭೂಮಿಗೆ ಬಿದ್ದು ಆರಿಹೋಯಿತು. ಸ್ವಯಂವರ ಮಂಗಲ ಮುಹೂರ್ತವು ತಪ್ಪಿಹೋಗುವುದೆಂದು ಚಂದೇಲನು ದುರ್ಗಾವತಿಯನ್ನು ತವಕಿಸಿದಳು. ಅವಳ ಮುಕುಳಿತವಾದ ಮನಸ್ಸಿನಲ್ಲಿ ಆ ಮಾತು ಇಳಿಯಲಿಲ್ಲ. ಅವಳು ಅಧೋವದನಳಾಗಿ ಕಣ್ಣೆತ್ತದೆ ಮುಂದೆ ಮುಂದೆ ಹೆಜ್ಜೆಯನ್ನಿಟ್ಟಳು. ಅವಳ ಹೃದಯ ಕಮಲವನ್ನು ವಿಕಸಿಸುವ ಬಾಲಸೂರ್ಯನು ಇನ್ನೂ ಪೂರ್ವ ಶಿಖರವನ್ನು ಹತ್ತಿರಲಿಲ್ಲ. ದಳಪತಿ ಶಹನು ಸೈನ್ಯವನ್ನು ಸೇರಿಸಿ, ದುರ್ಗದ ಹಿಂದುಗಡೆಯಲ್ಲಿ ನಿಲ್ಲಿಸಿ, ವಿವಾಹಮಂಟಪವನ್ನು ಅಲಂಕರಿಸುವುದಕ್ಕೆ ಕಾಲವಿಳಬಂವಾಯಿತು. ಕನ್ನೆಯ ಈ ಅವಸ್ಥೆಯನ್ನು ನೋಡಿ ಆಮಂತ್ರಿತ ರಾಜಪುತ್ರರೆಲ್ಲರೂ ಆಶ್ಚರ್ಯಗೊಂಡರು. ಕೈಕಟ್ಟಿದಂತಾದ ಕನ್ನೆಯು ಏನು ಮಾಡಬೇಕೆಂಬುದು ಮುಂದುಗಾಣದೆ, ನೆಟ್ಟನೆ ಮಂಟಪದ ಬಹಿರ್ದ್ವಾರಕ್ಕೆ ಸರಿಯಾಗಿ ನಡೆದಳು. ಎರಡೂ ಕಡೆಗಳಲ್ಲಿ ಕುಳಿತುಕೊಂಡ ಅತಿಥಿಗಳೆಲ್ಲ ಕೊರಳುಗಳನ್ನು ನೀಡುತ್ತ ಹೊರಬಾಗಿಲಿನ ಕಡೆಗೆ ತಮ್ಮ ದೃಷ್ಟಿಯನ್ನು ಚಾಚಿದರು. ರಾಜಾಂಗಣದಲ್ಲಿ ಆನೆಯನ್ನು ಹತ್ತಿ ಒಬ್ಬ ಯೋಧನು ಬರುತ್ತಿದ್ದನು. ಅವರು ನೋಡುವಷ್ಟರಲ್ಲಿ ಯೋಧನು ಆನೆಯಿಂದ ಇಳಿದು ಮಂಟಪವನ್ನು ಪ್ರವೇಶಿಸಲಿಕ್ಕಿದ್ದನು. ದೂರದಿಂದ ಹಾರಿಬರುವ ಗಂಡು ಕಪೋತವನ್ನು ವಿರಹಿಣಿಯಾದ ಹೆಣ್ಣು ಕಪೋತವು ದೃಷ್ಟಿಸಿ, ಗರಿಗಳನ್ನು ಬಿಚ್ಚಿ, ಹಾರಿ ಹೋಗಿ ಅದರ ಬಳಿಸಂದು ಅದರ ರೆಕ್ಕೆಗಳಲ್ಲಿ ಒಗ್ಗೂಡುವಂತೆ, ತನ್ನ ಪ್ರಾಣವಲ್ಲಭನಾದ ದಳಪತಿಶಹನು ಸ್ವಯಂವರ ಮಂಟಪದಲ್ಲಿ ಪದಾರ್ಪಣ ಮಾಡುತ್ತಲೇ ಪುಳಕಿತಳಾದ ದುರ್ಗಾವತಿಯು ಓಡಿಹೋಗಿ ಕುಸುಮ ಮಾಲೆಯನ್ನು ಅವನ ಕಂಠದಲ್ಲಿ ಇಟ್ಟು, ಅವನ ವಾಮಭಾಗವನ್ನು ಅವಲಂಬಿಸಿ ನಿಂತುಬಿಟ್ಟಳು. ಭಗ್ನಮನೋರಥನಾದ ಚಂದೇಲನು ತನ್ನ ಮಗಳ ನಡತೆಯನ್ನು ನೋಡಿ ಅವಾಕ್ಕಾದನು. ಮನಃಪೂರ್ವಕವಾಗಿ ಮಗಳನ್ನು ಅಳಿಯನಿಗೆ ಕೊಡುವುದಕ್ಕೆ ಅವನು ಸಮ್ಮತಿಸಲಿಲ್ಲ. ದುರ್ಗಾವತಿಯನ್ನು ಅಳಿಯನ ಕೈಗೆ ಖಡ್ಗಧಾರಾಪೂರ್ವಕವಾಗಿ ಕೊಡಬೇಕೆಂದು ನಿಶ್ಚಯಿಸಿದನು. ಕೂಡಲೇ ಇತ್ತಂಡಗಳ ಸೇನೆಗಳು ಸನ್ನದ್ಧವಾಗಿ ಬಂದುವು: ಸ್ವಯಂವರ ಭೂಮಿಯು ಸಮರಭೂಮಿ ಯಾಯಿತು; ಅಳಿಯನಿಗೂ ಮಾವನಿಗೂ ಕಾಳಗವಾಯಿತು. ಚಂದೇಲನು ಸೋತು ಹೋದನು. ವಿಜಯಿಯಾದ ದಳಪತಿಶಹನು ರಮಣೀ ರತ್ನವನ್ನು ಹಾರಿಸಿಕೊಂಡು
ಹೋದನು.

ಆದರೆ ದುರ್ಗಾವತಿಯ ಸಹವಾಸಕಾಲವನ್ನು ಚಿರಕಾಲ ಅನುಭವಿಸುವುದನ್ನು ದಳಪತಿಶಹನ ಹಣೆಯಲ್ಲಿ ವಿಧಾತನು ಬರೆದಿರಲಿಲ್ಲ. ದುರ್ಗಾವತಿಯಲ್ಲಿ ಪುತ್ರೋತ್ಸವವಾದ ಸ್ವಲ್ಪ ಕಾಲದಲ್ಲಿಯೇ ದಳಪತಿಶಹನು ಕಾಲವಶನಾದನು. ಗಢಾಮಂಡಲದ ಮೇಲೆ ಸ್ವಲ್ಪ ಕಾಲದವರೆಗೆ ಅಂಧಕಾರವು ಆಚ್ಛಾದಿತವಾಯಿತು. ಗಢಾಮಂಡಲಕ್ಕೆ ಉಂಟಾದ ಈ ದುರ್ಗತಿಯನ್ನು ನೋಡಿ ಅಕ್ಬರನು ಸಮಯವನ್ನು ಎದುರ್ನೋಡುತ್ತಿದ್ದನು. ದುರ್ಗಾವತಿಯು ತನಗೆ ಒದಗಿದ ಕಷ್ಟಸಂಕಷ್ಟಗಳನ್ನು ಮರೆತುಬಿಟ್ಟಳು. ದುಃಖ ಸೂಚಕವಾದ ವಸನಗಳನ್ನು ತೆಗೆದಿಟ್ಟಳು. ಪ್ರಜಾಪರಿಪಾಲನದಲ್ಲಿಯೂ ಸಂಸ್ಥಾನಾಭಿವೃದ್ಧಿಯಲ್ಲಿಯೂ, ಬಾಲಕನ ಅಭ್ಯಾದಯದಲ್ಲಿಯೂ ತನ್ನ ಮನಸ್ಸನ್ನು ಊರಿದಳು. ಬಾಲಕನಾದ ವೀರ ನರೇಂದ್ರನು ಪ್ರಾಯಕ್ಕೆ ಬರುವವರೆಗೆ ಅಸಾಧಾರಣ ಸ್ತ್ರೀಯಾದ ದುರ್ಗಾವತಿಯು ರಾಜಕಾರ್ಯ ಸೂತ್ರಗಳನ್ನು ತನ್ನ ಕೈಯಲ್ಲೇ ಹಿಡಿದುಕೊಂಡಳು. ಅವಳ ಆಳಿಕೆಯಲ್ಲಿ ಮಾರ್ಗಗಳು ಸಂಸ್ಥಾನವನ್ನು ಸೀಳಿಹೋದುವು. ಅಲ್ಲಲ್ಲಿ ಪ್ರಯಾಣಸ್ಥರಿಗೆ ಅನುಕೂಲವಾದ ವಾಪಿಗಳೂ ಪ್ರಪಶಾಲೆಗಳೂ ತಲೆದೋರಿದುವು. ಕೆರೆಕಾಲುವೆಗಳು ವ್ಯವಸಾಯಕ್ಕೆ ಸಹಾಯವಾಗಿ ಹರಿದುಹೋದುವು. ರಾಜ್ಯದ ಕಂದಾಯವು ಇಮ್ಮಡಿಯಾಯಿತು. ಗಢಾಮಂಡಲವು ಉನ್ನತಿಗೆ ಏರಿತು. ಪ್ರಜೆಗಳಿಗೆ ತಾಯಿಯಂತಿದ್ದ ದುರ್ಗಾವತಿಯ ಆಳಿಕೆಯಲ್ಲಿ ಸುಖವಂತ ಜನರೆಲ್ಲರು ತಮ್ಮ ಅಧಿಪತಿಯ ಅಕಾಲಿಕ ಮರಣ ದುಃಖವನ್ನು ಕ್ರಮೇಣ ಮರೆತುಬಿಟ್ಟರು.

ಅವಿಚ್ಛಿನ್ನವಾದ ಸುಖವು ಐಹಿಕ ಮನುಷ್ಯನ ಪಾಲಿಗೆ ಬರುವುದಿಲ್ಲ. ದುರ್ಗಾವತಿಯ ರಾಜ್ಯರಕ್ಷಣ ಸುಖವನ್ನು ಅನುಭವಿಸುವ ಅದೃಷ್ಟವು ಪ್ರಜೆಗಳಿಗೆ ಇದ್ದಿಲ್ಲ. ಅವಳ ದೇಶೋನ್ನತಿಯ ಸಮಾಚಾರವನ್ನು ಕೇಳಿ ಅಸೂಯೆಗೊಂಡವರು ಅನೇಕರು ಇದ್ದರು. ಇಂತಹವರಲ್ಲಿ ಅಸೋಫ್‌ ಖಾನನು ಒಬ್ಬನು. ಅಸೋಫ್‌ ಖಾನನು ಗಢಾಮಂಡಲದ ಬಳಿಯಲ್ಲಿರುವ ಮಾಳವದೇಶದ ಸಬೇದಾರನಾಗಿದ್ದನು. ಸ್ತ್ರೀಪಾಲಿತವಾದ ಸಂಸ್ಥಾನವನ್ನು ಆಕ್ರಮಿಸುವುದಕ್ಕಾಗಿ ಇದೇ ಅವಕಾಶವೆಂದು ಅವನು ರಾಜಾಧಿರಾಜನಾದ ಅಕ್ಬರನಿಗೆ ಬರೆದು ಕಳುಹಿಸಿದನು. ಅಕ್ಬರನು ಪರರಾಷ್ಟ್ರ ಆಕಾಂಕ್ಷಿತನಾಗಿದ್ದನು. ಶತ್ರಗಳಲ್ಲಿ ಕೂಡ ಸದ್ಗುಣವನ್ನು ಪರಿಗ್ರಹಿಸಿ ಸನ್ಮಾನಿಸುತ್ತಿದ್ದನು. ಅಬಲೆಯಾದ ದುರ್ಗಾವತಿಯನ್ನೂ ಬಾಲಕನಾದ ವೀರ ನರೇಂದ್ರನನ್ನು ನೋಯಿಸುವುದು ಅಕ್ಬಟರನ ಮನಸ್ಸಿಗೆ ಒಪ್ಪಿಗೆ ಯಾಗಲಿಲ್ಲ. ಆದರೆ ಗಢಾಮಂಡಲವು ರಕ್ತಪಾತವಿಲ್ಲದೆ ತನಗೆ ಶರಣು ಬರಬೇಕೆಂದು ತನ್ನ ಅಂತರ್ಯದಲ್ಲಿ ಆಶಿಸುತ್ತಿದ್ದನು. ಅಸೋಫಖಾನನು ಪುನಃ ಪುನಃ ಈ ವಿಷಯವನ್ನು ಅಕ್ಬರನ ಕಿವಿಗೆ ಒತ್ತಿಒತ್ತಿ ಕೊನೆಗೆ ಗಢಾಮಂಡಲದ ಮೇಲೆ ದಳವನ್ನು ನಡೆಯಿಸಬಹುದೆಂದು ಅವನು ಅಪ್ಪಣೆಯನ್ನು ಪಡೆದನು. ಅಸೋಫ್‌ಖಾನನು ಅಸಂಖ್ಯಾತ ಸೇನೆಯೊಡನೆ ಪುರದ್ವಾರದಲ್ಲಿ ಬಂದಿಳಿದನು. ನಗರದಲ್ಲಿ ಕೋಲಾಹಲವು ಎದ್ದಿತು. ಕೂಡಲೇ ದುರ್ಗಾವತಿಯು ಅರಮನೆಯನ್ನು ಬಿಟ್ಟು ಕೆಳಕ್ಕೆ ಬಂದಳು. ಸಂಸ್ಥಾನದ ಮುಖ್ಯಾಧಿಕಾರಿಗಳನ್ನು ಕರೆಯಿಸಿ ದುರ್ಗಾವತಿಯು ಹೀಗೆಂದಳು:- “ನೀವು ಬುದ್ಧಿಸಂಪನ್ನರು; ರಣಪುಣ್ಯಶೀಲರು, ನಾನು ಎಷ್ಟಾದರೂ ಹೆಂಗಸು; ಅರಮನೆಯನ್ನು ಬಿಟ್ಟವಳಲ್ಲ. ನಮ್ಮೆಲ್ಲರಿಗೆ ಬಂದೊದಗಿದ ಆಪತ್ತು ದುಸ್ಸಹವಾಗಿದೆ. ನಿರಪರಾಧಿಗಳಾದ ನಮ್ಮನ್ನು ಕೊಂದು, ನಮ್ಮ ಸದ್ಧರ್ಮವನ್ನು ಹಾಳುಮಾಡಿ, ನಮ್ಮ ರಾಜ್ಯವನ್ನು ಆಕ್ರಮಿಸ ಬೇಕೆಂಬ ಈ ಆಸೋಫಖಾನನ ನಡತೆಯು ನಿಮಗೆ ಯುಕ್ತತೋರುವುದೇ? ಇದಕ್ಕಿಂತಲೂ ದುಃಖಕರವಾದ ಸಂಗತಿಯುಂಟೇ? ಮನಸ್ವಿಯಾಗಿ ರಾಜಪುತ್ರರನ್ನು ಈ ತೆರನಾಗಿ ಪೀಡಿಸುವುದೆಂದರೆ ನಮ್ಮಲ್ಲಿ ಸಹನಾಶಕ್ತಿಯಲ್ಲದೆ ಪೌರುಷವೇ ಇಲ್ಲದಂತಾಯಿತಲ್ಲಾ! ನಾವು ಹೆಣ್ಣುಕುರಿಗಳಂತೆ ಸುಮ್ಮನಿದ್ದರೆ ಪಲಾಯನಮಾಡುವ ಕತ್ತೆಕಿರುಬನ ಮೇಲೆ ಬೀಳಲು ಮುಂದೆ ಹೆಜ್ಜೆಯನ್ನಿಡುವುದು. ನಿಮ್ಮ ಈ ದೇಶವು ಶತ್ರುಗಳ ಪಾಲಾಗುವುದು. ನಿಮ್ಮ ಮಕ್ಕಳು ಮರಿಗಳು ಅವರ ದಾಸರಾಗುವರು. ನಿಮ್ಮ ಹೆಂಡತಿಯರು ಅವರ ಮನೆಯ ತೊತ್ತುಗಳಾಗುವರು. ಇದಕ್ಕಿಂತಲೂ ಹೀನವಾದ ಅಧೋಗತಿಯುಂಟೆ? ಯಾರು ನಮ್ಮ ಸನಾತನ ಧರ್ಮದ ವಿಗ್ರಗಳನ್ನು ಪದಹತಿಯಿಂದ ಚೂರ್ಣ ಮಾಡುವರೋ, ಯಾರು ನಮ್ಮ ಬೆನ್ನ ಮೇಲೆ ಕುಳಿತುಕೊಂಡು ನಿರಂಕುಶವಾಗಿ ಇಲ್ಲಿ ಆಳುವರೋ, ಯಾರು ನಮ್ಮ ಕಳತ್ರಪುತ್ರಿಯರ ಪಾತಿವ್ರತ್ಯವನ್ನು ಸೂರೆಗೊಳ್ಳುವರೋ ಅವರು ನಮ್ಮ ಪುರದ್ವಾರದ ಬಳಿಯಲ್ಲಿ ಇಳಿದಿರುವರಂತೆ. ಭಾರತ ಭೂಮಿಯಲ್ಲಿ ಇನ್ನೂ ವೀರತ್ವವು ಇದ್ದರೆ ಅದು ಈಗ ಚಿಗುರಲಿ! ಭಾಪ್ಪಾರಾಯನ ಪವಿತ್ರ ರಕ್ತವು ನಿಮ್ಮ ಧಮನಿಯಲ್ಲಿ ಹರಿಯುವುದು ನಿಜವಾದರೆ, ಕತ್ತೆಕಿರುಬಗಳು ತಡೆಗಟ್ಟಿದ್ದ ಈ ಅನಾಥ ಗೋವನ್ನು ರಕ್ಷಿಸಿರಿ! ಯಾವತರದ ಹತ್ಯಕ್ಕೂ ಅವರು ಹೇಸುವವರಲ್ಲ. ಆದರೆ ಅವರು ನನ್ನ ಯಥಾರ್ಥ ಸ್ಥಿತಿಯನ್ನು ಕಂಡುಹಿಡಿಯಲಿಲ್ಲ. ಈ ಗೋವೇ ಅವರಿಗೆ ವ್ಯಾಘ್ರಯಾಗಿ ಪರಿಣಮಿಸುವುದೆಂದು ತಿಳಿದುಕೊಳ್ಳಿರಿ! ದುರ್ಗಾ! ನಮ್ಮೆಲ್ಲರಿಗೆ ಸಹಾಯಕಳಾಗು! ದುರ್ಗಾ! ನಮ್ಮ ಶತ್ರುಗಳನ್ನು ಹಾರಿಸಿಬಿಡುವುದಕ್ಕೆ ನಮ್ಮ ಹೃದಯದಲ್ಲಿ ಉತ್ಕಟ ಶಕ್ತಿಯನ್ನು ತುಂಬಿಸು!”

ದುರ್ಗಾವತಿಯ ಈ ಉತ್ತೇಜಕ ವಾಕ್ಕುಗಳನ್ನು ಕೇಳಿ ನಗರದ ರಾಜಪುತ್ರರೆಲ್ಲರು ರಕ್ತವರ್ಣವಸನವನ್ನು ಉಟ್ಟುಕೊಂಡು ಯುದ್ಧಕ್ಕೆ ಸಿದ್ಧರಾಗಿ ಬಂದರು. ಎಂಟುಸಾವಿರ ಸವಾರರೂ ಎಂಟುಸಾವಿರ ಸೈನಿಕರೂ ಸ್ವದೇಶವನ್ನು ರಕ್ಷಿಸುವುದಕ್ಕೆ ಮುಂದಾದರು. ಈ ಸೈನ್ಯಕ್ಕೆ ದುರ್ಗಾವತಿ ತಾನೇ ಅಗ್ರೇಸರಳಾದಳು. ಲೋಹ ಕವಚವನ್ನು ತೊಟ್ಟುಕೊಂಡು, ಶಸ್ತ್ರಧಾರಿಣಿಯಾಗಿ, ದುರ್ಗಾವತಿಯು ಕುದುರೆಯನ್ನು ಹತ್ತಿ, ಸೈನ್ಯವನ್ನು ನಡೆಯಿಸಿದಳು. ಯುದ್ಧವು ಪ್ರಾರಂಭವಾಯಿತು. ದುರ್ಗಾವತಿಯು ಪ್ರಾಣದ ಮೇಲೆ ಆಶೆಯನ್ನಿಡದೆ, ಶತ್ರುಸೈನ್ಯವನ್ನು ಭೇದಿಸಿಕೊಂಡು ಹೋದಳು. ಅವಳ ಭಲ್ಲೆಯ ಪೆಟ್ಟಿಗೆ ಶತ್ರುಗಳು ಚೂರ್ಣರಾಗಿ ಹೋದರು. ಹಿಂದಿರುಗುವಾಗ ದುರ್ಗಾವತಿಯು ಶತ್ರುವಿನ ವ್ಯೂಹದಲ್ಲಿ ಸಿಕ್ಕಿಬಿದ್ದಳು. ಅವಳ ಭುಜದಿಂದ ರಕ್ತಪ್ರವಾಹವು ಹರಿಯುತ್ತಿತ್ತು. ಅವಳನ್ನು ರಕ್ಷಿಸುವುದಕ್ಕೆ ರಾಜಪುತ್ರರು ತಂಡತಂಡವಾಗಿ ಹೋಗಿ ರಣರಂಗದಲ್ಲಿ ಮಲಗಿದರು. ಕೊನೆಗೆ ರಣಮತ್ತೆಯಾದ ಸಾಕ್ಷಾತ್ “ದುರ್ಗಾವತಿ”ಯನ್ನು ರಾಜಪುತ್ರರ ಪಾಳಯಕ್ಕೆ ಸುರಕ್ಷಿತವಾಗಿ ತಂದರು. ದೂರದಿಂದ ಇದನ್ನೆಲ್ಲ ನೋಡುತ್ತಿದ್ದ ಅಸೋಫಖಾನನು ಆಶ್ಚರ್ಯದಿಂದ ಭ್ರಾಂತಿಗೊಂಡನು. ಹತಾಶನಾದ ಅಸೋಫ್‌ ಖಾನನು ಅಳಿದುಳಿದ ಸೇನೆಯನ್ನು ಕೂಡಿಸಿ ಅಪಮಾನವನ್ನೂ ಜೀವವನೂ ಕಟ್ಟಿಕೊಂಡು, ಮಾಳವ ದೇಶಕ್ಕೆ ಜಾರಿಬಿಟ್ಟನು.

ನೀಚನಾದ ಅಸೋಫಖಾನನು ಈ ಅಪಜಯದಿಂದಲೂ ಅಪಮಾನದಿಂದಲೂ ಇನ್ನೂ ಕೆರಳಿದಂತಾದನು. ಗಢಾಮಂಡಲವನ್ನು ಭೂಸಮ ಮಾಡಬೇಕೆಂದು ಅವು ೧೮ ತಿಂಗಳುಗಳ ಮೇಲೇ ಮಹಾಸೈನ್ಯವನ್ನು ಜೋಡಿಸಿಕೊಂಡು ಬಂದನು. ಆದರೂ ಗಢಾಮಂಡಲಕ್ಕೆ ರಕ್ಷಕರು ಇಲ್ಲದೆ ಇರಲಿಲ್ಲ. ಈ ಸಲವೂ ಅಸೋಫ್‌ ಖಾನನು ಅಪಜಯವನ್ನು ತಾಳಲಾರದೆ ಓಡಿಹೋದನು. ಯುದ್ಧದ ಮುಖಾಂತರವಾಗಿ ತನ್ನ ಮನೋರಥವು ಸಿದ್ಧಿಸದೆ ಇದ್ದುದರಿಂದ ಅಧಮಾಧಮನಾದ ಅಸೋಫಖಾನನು ಕಪಟೋಪಾಯಗಳನ್ನು ಮಾಡುವುದಕ್ಕೆ ಕೈಚಾಚಿದನು. ದುರ್ಗಾವತಿಯ ರಾಜ್ಯಾಧಿಕಾರದಲ್ಲಿ ಪ್ರಮುಖರಾದ ಸರದಾರರಲ್ಲಿ ಭೇದವುಂಟಾಗುವಂತೆಯೂ, ಅವಳ ಆಪ್ತರು ಅವಳಿಂದ ಸಡಲಿಹೋಗುವಂತೆಯೂ ಗೂಢಚಾರರಿಂದ ಒಳಸಂಚು ನಡೆಯಿಸಿದನು. ಈ ಕುಹಕದಿಂದ ರಾಜ್ಯದಲ್ಲಿ ಅನೇಕ ಅನಿಷ್ಟಗಳು ಮೊಳೆತುವು. ದುರ್ಗಾವತಿಯು ಈಗ ಯಥಾರ್ಥವಾಗಿ ಅಬಲೆಯಾದಳು. ಆದರೂ ತನ್ನ ದೇಹದಲ್ಲಿ ಪ್ರಾಣವಾಯುವು ಸಂಚರಿಸುವವರೆಗೆ ಮೊಘಲರು ತನ್ನ ರಾಜ್ಯದಲ್ಲಿ ಕಾಲಿಡದ ಹಾಗೆ ಮಾಡುವೆನೆಂದು ವೀರರಾಜ್ಞಿಯೂ ಶಪಥ ಕಟ್ಟಿದಳು. ಅಷ್ಟರಲ್ಲಿ ಅಸೋಫಖಾನನು ಮೂರನೆಯ ಸಲ ದಂಡಿನೊಡನೆ ಬಂದನು. ದುರ್ಗಾವತಿಯು ಇದ್ದಷ್ಟು ಸೇನೆಯನ್ನು ಒತ್ತರಿಸಿಕೊಂಡು ಮುಂದರಿಸಿದಳು. ಆ ಕಾಲದಲ್ಲಿ ಅವಳ ಹದಿನಾಲ್ಕು ವರ್ಷದ ವಯಸ್ಸಿನ ಬಾಲಕನು ಆಯಧಪಾಣಿಯಾಗಿ ರಣಸನ್ನದ್ಧನಾದನು. ಯುದ್ಧವು ಘೋರವಾಗಿ ನಡೆಯಿತು. ವೀರೇಂದ್ರನು ಉನ್ಮತ್ತನಂತೆ ಶತ್ರಗಳ ಮೇಲೆ ಬಿದ್ದು ಕಾಳಗ ಮಾಡಿದನು. ಕೊನೆಗೆ ಗಾಯಗೊಂಡು ಖಡ್ಗಹಸ್ತನಾಗಿ ರಣಗಂದಲ್ಲಿ ಮಲಗಿದನು; ಮಲಗಿದವನು ಮತ್ತೇಳಲಿಲ್ಲ. ಮರಿಯನ್ನು ಕಳೆದ ವ್ಯಾಘ್ರಿಯಂತೆ ದುರ್ಗಾವತಿ ಆವೇಶಗೊಂಡು ಶತ್ರುಗಳ ಮೇಲೆ ಬೀಳಲುಹೊರಟಳು, “ಮರಣಕರವಾದ ಏಟನ್ನು ಹೊಂದಿದ ಬಾಲಕನನ್ನು ಕರೆದುಕೊಂಡು ಸ್ವಾಮಿನಿ ಶಿಬಿರಕ್ಕೆ ತೆರಳಬಾರದೆ? ನಮ್ಮಂತಹ ವೀರರಿರಲು ಯುದ್ಧದ ಗೊಡವೆ ತಮಗೇಕೆ?” ಎಂದು ರಣರಂಗದಲ್ಲಿ ಸ್ವಾಮಿಭಕ್ತನಾದ ರಾಜಪುತ್ರನೊಬ್ಬನು ಕೇಳಿದನು. ಅದಕ್ಕೆ ದುರ್ಗಾವತಿಯು ಗಂಭೀರ ಸ್ವರದಿಂದ “ನಾನು ಹಿಂತಿರುಗುವೆನೆಂಬ ಸುದ್ದಿ ತಿಳಿದರೆ, ಸೈನ್ಯವೆಲ್ಲವೂ ಹಿಮ್ಮೆಟ್ಟುವುದು. ವೀರಕುಮಾರನು ರಣರಂಗದಲ್ಲಿ ಮಡಿದು ಕ್ಷತ್ರಿಯ ಸ್ವರ್ಗವನ್ನು ಏರಿದನೆಂದರೆ ನನಗೆ ಸಂತೋಷವಲ್ಲವೇ? ಯುದ್ಧ ತೀರಿ ದೊಡನೆಯೇ ನನ್ನ ಪ್ರಿಯ ಪುತ್ರನನ್ನು ಪರಲೋಕದಲ್ಲಿ ನಾನು ಸೇರಬೇಕೆಂದಿರುವೆನು” ಎಂದು ಹೇಳಿದಳು. ದುರ್ಗಾವತಿ! ನೀನು ಧನ್ಯ ನೀನು ಯುದ್ಧದಲ್ಲಿ ಸೋತರೂ ಇನ್ನು ಗೆದ್ದೆ! ಶತ್ರಗಳ ಪರಂಪರೆಯ ಸಾಲುಗಳಿಂದ ದುರ್ಗಾವತಿಯ ಸೇನೆ ಪುಡಿಪುಡಿಯಾಯಿತು. ಒಂದು ಬಾಣವು ಅವಳ ಕಣ್ಣನ್ನು ಚುಚ್ಚಿತು. ಮತ್ತೊಂದು ಬಾಣವು ಅವಳ ಎದೆಯನ್ನು ನಾಟಿತು. ಬಾಣಗಳನ್ನು ಕಿತ್ತು ತೆಗೆದರೂ ಅವಳು ರಕ್ತಸ್ರಾವದಿಂದ ಮೂರ್ಛೆಹೋಗಿ ವಾಹನದ ಮೇಲೆ ಒರಗಿದಳು. ಅವಳು ಕುಳಿತಿದ್ದ ಆನೆಯನ್ನು ಯೋಧನೊಬ್ಬನು ಶಿಬಿರಕ್ಕೆ ಹಿಂತಿರುಗಿಸಲಿಕ್ಕೆ ಪ್ರಯತ್ನಿಸಿದನು. ಕೂಡಲೇ ಧೀರ ಯುವತಿಯು ಮೂರ್ಛೆ ತಿಳಿದು ಎದ್ದು, ಮುಗುಳಗು ನಗಾಡಿದಳು. “ನನ್ನನ್ನು ಬದುಕಿಸಲು ಎಣಿಸುವೆಯಾ? ನನ್ನನ್ನು ಶಿಬಿರಕ್ಕೆ ಒಯ್ದರೆ, ನನಗೆ ಮುಂದಿನ ಮರಣವನ್ನು ತಪ್ಪಿಸಬಹುದೇ? ಅದರ ಬದಲಾಗಿ ಕೈಯಲ್ಲಿದ್ದ ಶಸ್ತ್ರದಿಂದ ನನ್ನ ಪ್ರಾಣವನ್ನು ದೇಹದಿಂದ ಉಗಿದುಬಿಡು” ಎಂದು ಅಸ್ಪುಟಸ್ವರದಿಂದ ಹೇಳಿದಳು. ಇಂತಹ ಜನನಿಯನ್ನು ಕೊಲ್ಲಲು ಯಾರು ತಾನೆ ಕೈಮಾಡುವರು? ಸುತ್ತಲಿರುವವರೆಲ್ಲರೂ ಮರುಗಿದರು. ಕೂಡಲೇ ದುರ್ಗಾವತಿಯು ನಗುತ್ತಾ ತನ್ನ ಖಡ್ಗಕ್ಕೆ ತನ್ನ ಉದರವನ್ನು ಒರೆಯಾಗಿ ಮಾಡಿಬಿಟ್ಟಳು.

ಯುದ್ಧವು ಸಮಾಪ್ತವಾಯಿತು. ರಾಜ್ಯವು ಅಸೋಫಖಾನನ ವಶವಾಯಿತು. ಆದರೆ ಕ್ಷಾತ್ರಧರ್ಮ ಪರಾಯಣೆಯಾದ ಆ ವೀರಶಿರೋಮಣಿಯ ಪವಿತ್ರ ದೇಹವು ಶತ್ರುಗಳ ಕೂಡಲೇ ಅಪವಿತ್ರ ಹಸ್ತದಿಂದ ಮಲಿನವಾಗಲಿಲ್ಲ. ಅನುಚರರಲ್ಲಿ ಕೆಲವರು ಅಗ್ನಿಕುಂಡವನ್ನು ಬೆಳಗಿಸಿ, ಶಾಸ್ತ್ರೋಕ್ತ ವಿಧಿಯಿಂದ ದುರ್ಗಾವತಿಯ ಸಂಸ್ಕಾರಗಳನ್ನು ನಡೆಯಿಸಿದರು.

ದುರ್ಗಾವತಿಯು ಈ ನಶ್ವರ ಶರೀರವನ್ನು ಬಿಟ್ಟು ಅವಿನಶ್ವರ ಕೀರ್ತಿಯನ್ನು ಪಡೆದಳು. ಈ ವೀರ ಯುವತಿಯನ್ನು ಕುರಿತು ಕರ್ನೇಲ್ ನ್ಲೀಮನ್ ಎಂಬ ಆಂಗ್ಲೆಯನು ಹೀಗೆ ಬರೆದಿರುವನು. “ರಣಶೂರ ದುರ್ಗಾವತಿಯ ಸ್ಮಾರಕವು ಅದೇ ಪರ್ವತ ಪ್ರದೇಶ ಮಧ್ಯದಲ್ಲಿ ಕಟ್ಟಲ್ಪಟ್ಟಿದೆ. ಅಲ್ಲಿ ಎರಡು ಪಾಷಾಣ ಸ್ತಂಭಗಳು ನೆಟ್ಟಗೆ ನಿಲ್ಲಿಸಿದ್ದು, ಅವುಗಳು ಆ ಯುದ್ಧಭೂಮಿಯ ಪ್ರೇಕ್ಷಕರ ಮನಸ್ಸಿನಲ್ಲಿ ಮೂರ್ತಿವಂತವಾದ ದೃಶ್ಯವನ್ನು ಉತ್ಪನ್ನಮಾಡುವುವು. ಈ ಗಿರಿಶಿಖರದಲ್ಲಿ ರಾತ್ರಿ ಸಮಯದಲ್ಲಿ ಅತಿ ಭಯಂಕರವಾದ ರಣಘೋಷವು ಆಗುತ್ತದೆಂದು ಹೇಳುವರು. ಈ ನಿರ್ಜನವಾದ ಮತ್ತು ರಮಣೀಯವಾದ ಪ್ರದೇಶ ಮಧ್ಯದಲ್ಲಿ ಹೋಗುವ ಪ್ರವಾಸಿ ಜನರು ಅತ್ಯಾನಂದದಿಂದ ಈ ಸ್ಥಳದಲ್ಲಿ ನೆಡೆಯುವರು. ಈ ರಾಣಿಯ ಸಮಾಧಿಯ ದರ್ಶನವನ್ನು ಪ್ರೇಮಪೂರ್ವಕವಾಗಿ ಸ್ವೀಕರಿಸುವರು; ಅವಳ ಪರಾಕ್ರಮ ಗುಣಗಳಿಂದ ಬೆರಗಾಗಿ ಸ್ವಾನಂದ ಚಿತ್ತದಿಂದ ಅವಳನ್ನು ಪೂಜಿಸುವರು. ಈ ಪ್ರದೇಶ ಮಧ್ಯದಲ್ಲಿ ಹೊಳೆಹೊಳೆವ ಕಂಚಿನ ತುಂಡುಗಳು ಹೇರಳವಾಗಿ ಸಿಕ್ಕುತ್ತವೆ. ಅವನ್ನು ತೆಗೆದುಕೊಂಡು ಆ ಜನರು ಅಲ್ಲಿ ಸಮರ್ಪಿಸುವರು. ತಮ್ಮ ಪ್ರಜಾಭಕ್ತಿಗನುಸಾರವಾಗಿ ನಾನು ಅದನ್ನು ನೋಡುತ್ತಲೇ ಮಹಾರಾಣಿ ದುರ್ಗಾವತಿಯ ದಿವ್ಯಗುಣದ ಅಭಿನಂದನಾರ್ಥವಾಗಿ ಒಂದು ತುಂಡನ್ನು ಅರ್ಪಣ ಮಾಡಿದೆನು.” ಅಲೌಕಿಕ ಸೌಂದರ್ಯವನ್ನು ಯಾರುತಾನೇ ಪೂಜಿಸದೆ ಇರುವರು?
*****

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...